ಪುನರ್ವಸತಿ, ಭೂ ಹಕ್ಕಿನ ಚಳವಳಿಗೆ ಮಲೆನಾಡು ಸಜ್ಜು
ಅ.21ರಿಂದ ಮುಳುಗಡೆ ಸಂತ್ರಸ್ತರಿಂದ ಅನಿರ್ದಿಷ್ಟಾವಧಿ ಧರಣಿ
ಶಿವಮೊಗ್ಗ: 1951ರಲ್ಲಿ ಆರಂಭವಾಗಿದ್ದ ಕಾಗೋಡು ರೈತ ಚಳವಳಿ ಸ್ವಾತಂತ್ರ್ಯದ ನಂತರ ಭೂ ಹಕ್ಕಿಗಾಗಿ ನಡೆದ ಮೊದಲ ರೈತ ಚಳವಳಿಯಾಗಿದೆ. ಈಗ ಅದೇ ಮಾದರಿಯ ಹೋರಾಟಕ್ಕೆ ಮಲೆನಾಡು ರೈತರು ಸಿದ್ಧರಾಗಿದ್ದು, ಭೂಮಿ ಹಕ್ಕಿಗಾಗಿ ಚಳವಳಿ ರೀತಿಯ ಹೋರಾಟಕ್ಕೆ ವೇದಿಕೆ ಸಿದ್ಧಗೊಂಡಿದೆ.
ಹೌದು, ಶಿವಮೊಗ್ಗ ಜಿಲ್ಲಾ ರೈತರ, ಮುಳುಗಡೆ ಸಂತ್ರಸ್ತರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ನೇತೃತ್ವದಲ್ಲಿ (ಜಿಲ್ಲೆಯ ಸಮಸ್ತ ರೈತರ ಪರ, ಭೂ ಹಕ್ಕು ವಂಚಿತರ ಪರ, ಮುಳುಗಡೆ ಸಂತ್ರಸ್ತರ ಪರ ಹೋರಾಟ ನಡೆಸುತ್ತಿರುವ ಎಲ್ಲ ಸಂಘಗಳು, ಸಂಘಟನೆಗಳು, ಅರಣ್ಯ ಹಕ್ಕು ಸಮಿತಿಗಳು ಸಂಯುಕ್ತವಾಗಿ ರಚಿಸಿರುವ ವೇದಿಕೆ) ಅಕ್ಟೋಬರ್ 21ರಿಂದ ಸಾಗರ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ. ಈಗಾಗಲೇ ವೇದಿಕೆ ನೇತೃತ್ವದಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿ, ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾಗುವಂತೆ ಮನವಿ ಮಾಡಲಾಗುತ್ತಿದೆ.
ರಾಜ್ಯದ ವಿದ್ಯುತ್ ಉತ್ಪಾದನೆಗಾಗಿ ಶರಾವತಿ, ಚಕ್ರಾ, ವಾರಾಹಿ ಮತ್ತಿತರ ಯೋಜನೆಗಳಿಗಾಗಿ ಸರ್ವ ತ್ಯಾಗ ಮಾಡಿದ ಸಂತ್ರಸ್ತರಿಗೂ, ಆ ಭಾಗದವರಿಗೂ ಇಂದಿಗೂ ಪುನರ್ವಸತಿ, ಭೂಹಕ್ಕು ಮತ್ತು ಯೋಜನಾ ಭರವಸೆಗಳನ್ನು ಈಡೇರಿಸದೆ ಎಲ್ಲ ಸರಕಾರಗಳು ನಿರಂತರ ವಂಚನೆ ಮಾಡಿವೆ ಎಂದು ಆರೋಪಿಸಿ ರೈತರು ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಅರಣ್ಯ ಮತ್ತು ಕಂದಾಯ ಇಲಾಖೆಯ ನಡುವಿನ ದಾಖಲೆಗಳ ಜಟಾಪಟಿಯಿಂದ ಮುಳುಗಡೆ ಸಂತ್ರಸ್ತರನ್ನು ಭೂ ವಂಚಿತರನ್ನಾಗಿ ಮಾಡಿ, ಕಾನೂನಿನ ಕುಣಿಕೆಯನ್ನು ಇನ್ನಷ್ಟು ಬಿಗಿ ಮಾಡಲಾಗಿದೆ. ಜೀವನೋಪಾಯಕ್ಕಾಗಿ ಸಾಗುವಳಿ ಮಾಡಿಕೊಂಡ ಭೂಮಿಯನ್ನು ನ್ಯಾಯಾಲಯದ ಕದ ತಟ್ಟಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ.
ಸರಕಾರಗಳಿಂದಲೇ ಅನ್ಯಾಯ: ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಮನೆಮಠ-ಹೊಲಗದ್ದೆಗಳನ್ನು ಕಳೆದುಕೊಂಡು ಆರು ದಶಕಗಳು ಕಳೆದರೂ ಇಂದಿಗೂ ಪುನರ್ವಸತಿಗಾಗಿ ಶರಾವತಿ, ಚಕ್ರಾ, ಸಾವೆಹಕ್ಲು, ತುಂಗಾಭದ್ರಾ ಮುಳುಗಡೆ ಸಂತ್ರಸ್ತರು ಪರಿತಪಿಸುತ್ತಿದ್ದಾರೆ. ಮುಳುಗಡೆಯಾಗುವ ಸಂದರ್ಭದಲ್ಲಿ ಯೋಜನಾ ನಿರಾಶ್ರಿತರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸದೆ ಅಂದಿನಿಂದ ಇಂದಿನವರೆಗೂ ಆಳಿದ ಸರಕಾರಗಳು ವಂಚಿಸಿಕೊಂಡೇ ಬಂದಿವೆ ಎಂದು ಸಂತ್ರಸ್ತರು ದೂರುತ್ತಿದ್ದಾರೆ.
ಮುಳುಗಡೆಯಾದ ಅರಣ್ಯ ವಿಸ್ತೀರ್ಣಕ್ಕೆ ಕಂದಾಯ ಭೂಮಿಗಳನ್ನೆಲ್ಲ ಮನಸೋಚ್ಛೆ ಅರಣ್ಯ ಇಲಾಖೆಗೆ ವರ್ಗಾಯಿಸಿಕೊಂಡು ಯಾವುದೇ ಭೂ ಮಂಜೂರಾತಿಗಳು ಲಭ್ಯವಾಗದಂತೆ ವ್ಯವಸ್ಥಿತವಾಗಿ ಮಾಡಲಾಗಿದೆ. ಭೂಸ್ವಾಧೀನ ಮತ್ತು ಪುನರ್ವಸತಿ ಜವಾಬ್ದಾರಿ ಹೊತ್ತಿದ್ದ ಕಾರ್ಯಪಡೆಗಳನ್ನು 1972ರಲ್ಲಿ ರದ್ದು ಮಾಡುವ ಮೂಲಕ ನಮ್ಮನ್ನು ಸೌಲಭ್ಯ ವಂಚಿತರನ್ನಾಗಿ ಮಾಡುವಲ್ಲಿ ಸರಕಾರಗಳು ಯಶಸ್ವಿಯಾಗಿದೆ ಎಂದು ಸಂತ್ರಸ್ತರು ಆರೋಪಿಸುತ್ತಿದ್ದಾರೆ.
1984ರಲ್ಲಿ ತಿದ್ದುಪಡಿಯಾದ ಭೂಸ್ವಾಧೀನ ಕಾಯ್ದೆಯಲ್ಲಿ ಶರಾವತಿ, ಚಕ್ರಾ, ಸಾವೆಹಕ್ಲು ಪ್ರಕರಣಗಳಿಗೆ ಪೂರ್ವಾನ್ವಯವೇ ಇಲ್ಲವಾಗಿದೆ. 1978ರ ಪೂರ್ವದ ಸಾಗುವಳಿ ಪ್ರದೇಶಗಳಿಗೆಲ್ಲಾ 1980ರ ಕೇಂದ್ರ ಕಾಯ್ದೆಯಲ್ಲಿ ವಿನಾಯಿತಿ ನೀಡಲಾಗಿದ್ದರೂ 1991ರವರೆಗೂ ಯಾರಿಗೂ ಹಕ್ಕು ನೀಡದೆ ನಂತರ ಏಕಪಕ್ಷೀಯವಾಗಿ ಅರಣ್ಯ ಇಲಾಖೆಯು ಮಾರ್ಗಸೂಚಿ ಹೊರಡಿಸಿ, ಯಾರಿಗೂ ಹಕ್ಕುಗಳು ದೊರಕದಂತೆ ಮಾಡಲಾಗಿದೆ. ಯೋಜನಾ ನಿರಾಶ್ರಿತರಿಗಿರುವ ಸೆ.4(8) ನ್ನು ಉಪಯೋಗಿಸಿಕೊಳ್ಳಲು ಕ್ರಮ ಕೈಗೊಳ್ಳದೆ ಅನ್ಯಾಯ ಎಸಗಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಸುಪ್ರೀಂ ಕೋರ್ಟ್ ಸಲ್ಲಿಸಿದ ಅಫಿಡವಿಟ್‌ನಲ್ಲೇ ದೋಷ: 2012ರಲ್ಲಿ ರಾಜ್ಯ ಸರಕಾರವು ಸುಪ್ರೀಂ ಕೋರ್ಟ್‌ಗೆ ಪರಿಸರವಾದಿಗಳ ಪ್ರಕರಣವೊಂದರಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಎಲ್ಲ ಅರಣ್ಯ ಒತ್ತುವರಿಗಳನ್ನು ಕಾಲಮಿತಿಯಲ್ಲಿ ತೆರವುಗೊಳಿಸುವುದಾಗಿ ಒಪ್ಪಿಕೊಂಡಿದೆ. ಅದೇ ಪ್ರಕರಣದಲ್ಲಿ ಅರಣ್ಯ ಇಲಾಖೆಯು ಸಲ್ಲಿಸಿದ್ದ ಅಂಕಿ-ಅಂಶಗಳಲ್ಲಿ ಅಧಿಸೂಚಿತ ಅರಣ್ಯ ಮಾತ್ರವಲ್ಲದೆ 4(1) ಅಧಿಸೂಚಿತ, ಸೆಟ್ಲೆಮೆಂಟ್ ಬಾಕಿ ಇರುವ ಮತ್ತು ಸೂಚಿತ ಅರಣ್ಯ ವಿಸ್ತೀರ್ಣಗಳನ್ನು ಅಫಿಡವಿಟ್ ನಲ್ಲಿ ಸೇರಿಸಿಕೊಂಡಿರುವ ಕಾರಣ ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳಿಗೆ ಇಂದು ತೆರವುಗೊಳಿಸಲು ನೋಟಿಸ್ ನೀಡಲಾಗುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಕಂದಾಯ ಇಲಾಖೆಯ ದಿವ್ಯ ನಿರ್ಲಕ್ಷ್ಯ, ಅರಣ್ಯ ಇಲಾಖೆಯ ಪಾರಮ್ಯತೆ ಮತ್ತು ಜನಪ್ರತಿನಿಧಿಗಳ ನಿಷ್ಕ್ರಿಯತೆಗಳು ಎಂದು ಜಿಲ್ಲಾ ಮುಳುಗಡೆ ಸಂತ್ರಸ್ತರು ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ಸಂಚಾಲಕ ವಿ.ಜಿ ಶ್ರೀಕರ್ ಅಭಿಪ್ರಾಯಿಸಿದರು.
ಸುಪ್ರೀಂಕೋರ್ಟ್‌ನಲ್ಲಿ ಪರಿಸರವಾದಿಗಳ ಎಲ್ಲ ಪ್ರಕರಣಗಳಲ್ಲಿ ಸರಕಾರ ಸಮರ್ಥವಾಗಿ ವಾದ ಮಂಡಿಸದೇ ಇರುವುದು ಮಲೆನಾಡಿನ ಮುಳುಗಡೆ ಸಂತ್ರಸ್ತರನ್ನು ಕಾನೂನಿನ ಕುಣಿಕೆಯಲ್ಲಿ ಬಂಧಿಯಾಗಿಸಲಾಗಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸಂಬಂಧಿಸಿದಂತೆ 1972ರಲ್ಲಿ ಸರಕಾರ ರಚಿಸಿದ ಕಾರ್ಯಪಡೆ (ಟಾಸ್ಕ್‌ಫೋರ್ಸ್ ಸಮಿತಿ)ಯನ್ನು ಹಿಂಪಡೆದಿದ್ದು ಮಲೆನಾಡಿನ ಮುಳುಗಡೆ ರೈತರಿಗೆ ಮಾಡಿದ ಐತಿಹಾಸಿಕ ಅನ್ಯಾಯ. ಶರಾವತಿಯಲ್ಲಿ ಮುಳುಗಡೆಯಾದ ಕುಟುಂಬಗಳ ಪಟ್ಟಿ ಲಭ್ಯವಿದೆ.ಸಂತ್ರಸ್ತರನ್ನು ಲಾರಿಯಲ್ಲಿ ಕರೆತಂದು ಕಾಡಿನಲ್ಲಿ ಬಿಟ್ಟು ಇಂದಿಗೂ ಭೂ ಹಕ್ಕು ನೀಡದೆ ಪರಿಹಾರವನ್ನು ನೀಡದೆ ಸರಕಾರಗಳು ಅನ್ಯಾಯ ಎಸಗಿವೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಕೊನೆಯ ಪ್ರಯತ್ನವಾಗಿ ಅಹೋರಾತ್ರಿ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.ಸರಕಾರವೇ ನಮ್ಮನ್ನು ಬೀದಿಗೆ ತಂದಿದ್ದು, ನಮ್ಮ ಬಳಿ ಸರಕಾರವೇ ಬಂದು ನ್ಯಾಯ ಒದಗಿಸುವವರೆಗೂ ಹೋರಾಟ ನಡೆಯಲಿದೆ.
-ವಿ.ಜಿ ಶ್ರೀಕರ್, ಶಿವಮೊಗ್ಗ ಜಿಲ್ಲಾ ಮುಳುಗಡೆ ಸಂತ್ರಸ್ತರು ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ಸಂಚಾಲಕ
ಮುಳುಗಡೆ ಸಂತ್ರಸ್ತರ ಒಡಲು ಹೊತ್ತಿ ಉರಿಯುತ್ತಿದೆ. ಇಂದಿಗೂ ಭೂ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಮಲೆನಾಡಿನ ಜನಪ್ರತಿನಿಧಿಗಳು ಸಂತ್ರಸ್ತರನ್ನು ಚುನಾವಣಾ ಸಮಯದಲ್ಲಿ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆಯೇ ಹೊರತು ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಉಲ್ಭಣಗೊಳ್ಳಲು ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಮೂರು ಪಕ್ಷಗಳೂ ಸಮಾನ ಪಾಲು ಹೊಂದಿವೆ. ರಾಜ್ಯ ಅರಣ್ಯ ಸಚಿವರಿಗೆ ಮಲೆನಾಡಿನ ಸಂಕಟದ ಬಗ್ಗೆ ಅರಿವಿಲ್ಲದೆ ದಿನಕ್ಕೊಂದು ಆದೇಶ ಹೊರಡಿಸುತ್ತಿದ್ದಾರೆ. ಸರಕಾರವೇ ರೈತರ ಬಳಿ ಬಂದು ಉತ್ತರ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ.
-ತಿ.ನಾ ಶ್ರೀನಿವಾಸ್, ಮಲೆನಾಡು ರೈತ ಹೋರಾಟ ಸಮಿತಿಯ ಶಿವಮೊಗ್ಗ ಜಿಲ್ಲಾಧ್ಯಕ್ಷ