ದಿಲ್ಲಿಯ ಪಾಠ

ಪಶ್ಚಿಮದಲ್ಲಿ ಟ್ರಂಪ್ ಮತ್ತು ಪೂರ್ವದಲ್ಲಿ ಮೋದಿ ಸರಕಾರಗಳಿದ್ದರೆ ಅಲ್ಲಿ ಕೆನಡಾ, ಗ್ರೀನ್‌ಲ್ಯಾಂಡ್, ಪನಾಮಾ ಹೀಗೆ ಟ್ರಂಪ್ ವಿಸ್ತಾರಗೊಂಡರೆ, ಭಾರತವೆಂಬ ಈ ದೇಶವನ್ನು ಆದಷ್ಟು ಬೇಗ ಹಿಂದೂಸ್ಥಾನವಾಗಿ ಮಾಡುವುದು ಹೆಚ್ಚು ಕಷ್ಟವಲ್ಲ. ಸ್ವಲ್ಪ ಹಿಂದಿನ ಚರಿತ್ರೆಯನ್ನು ಗಮನಿಸಿದರೆ ನಮ್ಮ ಈ ದೇಶವನ್ನು ಹಿಂದೂಸ್ಥಾನವೆಂದು ಉಲ್ಲೇಖಿಸಿದವರೇ ಹೆಚ್ಚು. ಹಿಂದಿ ಸಿನೆಮಾಗಳಲ್ಲಂತೂ ಮನೋಜ್ ಕುಮಾರ್‌ನನ್ನು ಹೊರತುಪಡಿಸಿದರೆ ಬಹುತೇಕ ಸಿನೆಮಾ ನಿರ್ಮಾಪಕರೂ, ಸಂಭಾಷಣಾ ಚತುರರೂ, ಗೀತಕಾರರೂ ಹಿಂದೂಸ್ಥಾನವೆಂದು ಬರೆದದ್ದೇ ಜಾಸ್ತಿ. ಕನ್ನಡ ಸಿನೆಮಾಗಳಲ್ಲೂ ಹಿಂದೂಸ್ಥಾನವೆಂದು ಈ ದೇಶವನ್ನು ಕರೆದು ಭಾರತವೆಂಬ ಪದವನ್ನು ಪದವಿಯಾಗಿ ನೀಡಿದ್ದನ್ನು ಕಾಣಬಹುದು: ‘‘ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು..’’ ಎಂದು ಹಾಡಿದ್ದು ಆಕಸ್ಮಿಕವೇನಲ್ಲ. ಹಿಂದೂ, ಹಿಂದೂ ಧರ್ಮ, ಹಿಂದುತ್ವ ಇವುಗಳ ನಡುವಣ ಗೆರೆ ಅಳಿಸಿಹೋಗಲು ಹೆಚ್ಚು ಸಮಯ ಬೇಕಿಲ್ಲ.
ಈ ದಿಕ್ಕಿನಲ್ಲಿ ದಿಲ್ಲಿಯ ಚುನಾವಣೆ ಒಂದು ದಿಕ್ಸೂಚಿ. ದಿಲ್ಲಿಯೆಂಬ ಸೀಮಿತ ರಾಜ್ಯದ 2025ರ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಕ್ಕಾಗಿ ಎಲ್ಲ ಪ್ರತಿಪಕ್ಷಗಳಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು. ಇದು ಬರಲಿರುವ ಇತರ ಚುನಾವಣೆಗಳಲ್ಲೂ ಪುನರಾವರ್ತನೆಯಾದರೆ ಸಂತೋಷ.
ಕೇವಲ 70 ಸ್ಥಾನಗಳಿರುವ ಮತ್ತು ಕೇಂದ್ರವೆಂಬ ಹಾವಿನ ಹೆಡೆಯಡಿ ಕುಳಿತ ಕಪ್ಪೆಯಂತಿರುವ ದಿಲ್ಲಿ ವೈಶಿಷ್ಟ್ಯಪೂರ್ಣವೇನಲ್ಲ. ಅದನ್ನಾಳುವವರು ದೇಶವನ್ನಾಳುತ್ತಾರೆಂದೇನಿಲ್ಲ. ನಾನೇ ಹಿಂದೆ ‘ದಿಳ್ಳೀಶ್ವರೋವಾ ಜಗದೀಶ್ವರೋವಾ’ ಎಂಬ ಕವಿವಾಣಿಯನ್ನು ಉಲ್ಲೇಖಿಸಿದ್ದೆ. ತನ್ನೆಲ್ಲ ಶಕ್ತಿಯೊಂದಿಗೂ ಬಿಜೆಪಿಯ ಕೇಂದ್ರ ಸರಕಾರಕ್ಕೆ ದಿಲ್ಲಿ ಅಧಿಕಾರ ಸಿಕ್ಕಾಗ ಮುಖ್ಯವಲ್ಲದಿದ್ದರೂ ಇತರರು ಅಧಿಕಾರಕ್ಕೆ ಬಂದರೆ ಹಲ್ಲಿನಲ್ಲಿ ಸಿಕ್ಕ ಕಸದಂತಾಗುತ್ತಿತ್ತು. ಅದೀಗ ಸರಿಯಾಗಿದೆ.
ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಈ ತತ್ವ ಇತರ ಪಕ್ಷಗಳಿಗೆ ಸಹಜವಾಗಿಲ್ಲ. ಭಾಜಪಕ್ಕೆ ಇದು ಮತ್ತಷ್ಟು ಎತ್ತರಕ್ಕೆ ಏರುವತ್ತ ಮತ್ತು ಕೇಂದ್ರೀಕೃತ ಭಾರತದ ನಿರ್ಮಾಣಕ್ಕೆ ಬುನಾದಿಯಿಡುವತ್ತ ಮತ್ತೊಂದು ಹೆಜ್ಜೆ. ದೇಶದ ಪ್ರಧಾನಿ ಮತ್ತು ಗೃಹಸಚಿವರು ಒಂದು ಕೇಂದ್ರಾಡಳಿತ ಪ್ರದೇಶದಷ್ಟು ಚಿಕ್ಕ ಭೌಗೋಳಿಕ ಮಿತಿಯ ಚುನಾವಣೆಯಲ್ಲಿ ಎಷ್ಟೊಂದು ಉತ್ಸಾಹಿತರಾಗಿ ಪಾಲ್ಗೊಂಡರೆಂದರೆ ಮುಂದೆ ಗ್ರಾಮಪಂಚಾಯತ್ ಚುನಾವಣೆಯಲ್ಲೂ ಅವರು ಭಾಗವಹಿಸಬಹುದೆಂದು ನಿರೀಕ್ಷಿಸಬಹುದು. ಈ ಕುರಿತ ಲೆಕ್ಕಾಚಾರ ಎಷ್ಟು ಮಹತ್ವವನ್ನು ಪಡೆದಿದೆಯೆಂಬುದಕ್ಕೆ ಅಲ್ಲಿನ ಮುಖ್ಯಮಂತ್ರಿ ಯಾರೆಂಬುದು ನಿರ್ಣಯವಾಗಬೇಕಾದರೆ ಪ್ರಧಾನಿ ತಮ್ಮ ಅಮೆರಿಕ ಪ್ರವಾಸವನ್ನು ಮುಗಿಸಿ ಬರಬೇಕಂತೆ. ಈ ಅವಧಿಯಲ್ಲಿ ರಾಹುಲ್ ಗಾಂಧಿ ಇಟಲಿ ಅಥವಾ ಯಾವುದಾದರೂ ವಿದೇಶಿ ಪ್ರವಾಸೀ ತಾಣಕ್ಕೆ ಭೇಟಿ ನೀಡಬಹುದು.
ದಿಲ್ಲಿ ಚುನಾವಣೆ ಎಲ್ಲರಿಗಿಂತ ಹೆಚ್ಚು ಮಹತ್ವದ್ದಾಗಿರಬೇಕಾದ್ದು ಆಪ್ ಪಕ್ಷಕ್ಕೆ ಅಥವಾ ಅದರ ಸರ್ವೋಚ್ಚ ನಾಯಕ ಅರವಿಂದ ಕೇಜ್ರೀವಾಲ್‌ರಿಗೆ. ಯಾವುದೇ ಬೆಲೆ ತೆತ್ತು ದಿಲ್ಲಿಯ ಅಧಿಕಾರವನ್ನು ಉಳಿಸಿಕೊಳ್ಳಬೇಕಾದ್ದು ಮತ್ತು ಭಾಜಪ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕಾದ್ದು ಅವರಿಗೆ ಮುಖ್ಯವಾಗಿರಬೇಕಿತ್ತು. ಆದರೆ ರಾಜಕೀಯ ಅಧಿಕಾರತಂತ್ರವು ಬದಲಿ ವ್ಯೆಹವನ್ನು ರಚಿಸಿತ್ತು. ಇದರ ಫಲವಾಗಿ ಕೇಜ್ರಿವಾಲ್ ಭಾಜಪದ ಗೋಡೆಯನ್ನು ಕುಟ್ಟಿ ಮುರಿಯುವ ತಂತ್ರವನ್ನು ಮರೆತು ತನ್ನ ಗೋಡೆಕಟ್ಟುವ ಯತ್ನಕ್ಕೆ ಮನಮಾಡಿದರು. ತನ್ನ ಬೆನ್ನ ಹಿಂದೆ ಭಾಜಪದ ಹೆಡೆಯಿರುವುದನ್ನು ಮರೆತು ತನ್ನೆದುರು ಹಾರುವ ನೊಣಕ್ಕೆ ನಾಲಿಗೆ ಚಾಚಿದರು.
ಕಳೆದ ಕೆಲವು ಕಾಲದಿಂದ ಭಾಜಪವು ಆಪ್ ಪಕ್ಷವನ್ನು ಹೆಡೆಮುರಿಕಟ್ಟುವ ತನ್ನ ಎಲ್ಲ ಕುತಂತ್ರಗಳನ್ನು ಮಾಡಿದೆ. ಕೇಜ್ರಿವಾಲ್ ಸೇರಿದಂತೆ ದಿಲ್ಲಿ ಸರಕಾರದ ಅನೇಕ ಸಚಿವರು, ಶಾಸಕರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಂಡದ್ದು ಮಾತ್ರವಲ್ಲ, ಜೈಲುಪಾಲಾದರು ಮತ್ತು ಜಾಮೀನಿನಲ್ಲಿ ಹೊರಬಂದರು. ಜೈಲೆನ್ನುವುದು ಸಜ್ಜನರಿಗೆ, ಸಾತ್ವಿಕರಿಗೆ ಒಂದು ಕರಾಳ ನೆನಪು. ಅದು ರೆಸಾರ್ಟ್‌ನಲ್ಲಿ ತಂಗಿದಂತಲ್ಲ. ಆದರೆ ಹೊರಬಂದ ತಕ್ಷಣ ಎಲ್ಲ ರಾಜಕಾರಣಿಗಳಂತೆ ಆಪ್ ಮಹನೀಯರು ಇತರ ಎಲ್ಲ ಪಕ್ಷದವರನ್ನು ದೂಷಿಸುತ್ತಲೇ ಹೋದರು. ದಿಲ್ಲಿಯ ಮಾತ್ರವಲ್ಲ ದೇಶದ ಹಲವು ಭಾಗದ ಪ್ರಜೆಗಳು ಆಪ್ ಒಂದು ವಿಭಿನ್ನ ಪಕ್ಷವಾಗಿ ಬೆಳೆಯಬಹುದೆಂದುಕೊಂಡರೂ ಆಪ್ ‘ಹತ್ತರೊಟ್ಟಿಗೆ ಹನ್ನೊಂದು’ ಆಗಿ ಬೆಳೆಯುವಲ್ಲಿ ತನ್ನ ಗತಿಯನ್ನು ಕಂಡುಕೊಂಡಿತು.
ರಾಜಕಾರಣದಲ್ಲಿ ಬಿಳಿ-ಕಪ್ಪು ಎಂದಿಲ್ಲ. ಬೂದುವಲಯವೇ ಹೇರಳವಾಗಿರುವುದು. ಆಪ್ ಅಬಕಾರಿ ಹಗರಣದಲ್ಲಿ ಸಿಕ್ಕಿಬಿದ್ದದ್ದು ಒಂದು ದುರಂತ. ಬೆಂಕಿಯಿಲ್ಲದೆ ಹೊಗೆ ಬಾರದು. ಅವರು ಮಾಡುತ್ತಾರೆ ನಾವು ಮಾಡಿದರೆ ತಪ್ಪೇನು? ಎಂಬ ನೀತಿ ಭಾಜಪಕ್ಕೆ ನೆರವಾಗಿರಬಹುದು; ಏಕೆಂದರೆ ಅದು ಮತೀಯ ಪ್ರಭಾವವನ್ನು ಧಾರಾಳವಾಗಿ ಬಳಸಿಕೊಂಡಿದೆ. ಹೀಗಾಗಿ ಕಾಂಗ್ರೆಸ್ ಎಸಗಿದ ಎಲ್ಲ ಪ್ರಮಾದಗಳನ್ನು ಎಸಗಿಯೂ ಭಾಜಪ ತನ್ನ ಜನಬೆಂಬಲವನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿದೆ. ಈ ದೇಶದಲ್ಲಿ ಜನಬೆಂಬಲವೆಂದರೆ ಶೇ. 50 ಅಥವಾ ಅದಕ್ಕೂ ಮಿಗಿಲೆಂದು ಹೇಳಲಾಗದು. ಅಳಿದೂರಿಗೆ ಉಳಿದ ಶೇಕಡಾವಾರು ಬೆಂಬಲ. ಹರಿದು ಹಂಚಿಹೋಗುವ ಮತಗಳಲ್ಲಿ ಅತೀ ಹೆಚ್ಚನ್ನು ಪಡೆಯುವ ಪಕ್ಷ ಅಧಿಕಾರದಲ್ಲಿರುತ್ತದೆ. ಶೇಕಡಾವಾರು ಮತಗಳಿಗೂ ಗಳಿಸುವ/ಗಳಿಸಿದ ಸ್ಥಾನಗಳಿಗೂ ಸಂಬಂಧವೇ ಇರುವುದಿಲ್ಲ. ಇದು ಈ ಬಾರಿಯೂ ಎಂದಿನಂತೆಯೇ ಸ್ಪಷ್ಟವಾಗಿದೆ. 48 ಸ್ಥಾನಗಳನ್ನು ಗಳಿಸಿದ ಭಾಜಪವು ಶೇ. 47.2 ಮತಗಳನ್ನು ಪಡೆದರೆ 22 ಸ್ಥಾನಗಳನ್ನು ಪಡೆದ ಆಪ್ ಶೇ. 43.6 ಮತಗಳನ್ನು ಪಡೆದಿದೆ. ಕಾಂಗ್ರೆಸ್ ಒಂದೂ ಸ್ಥಾನವನ್ನು ಗಳಿಸದಿದ್ದರೂ ಶೇ. 6.3 ಮತಗಳನ್ನು ಪಡೆದಿದೆ. ಇತರರೂ ಶೇ. 2.9 ಮತಗಳನ್ನು ಪಡೆದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಲಾಗಾಯ್ತಿನಿಂದ ಹರಿದು ಬಂದ ಅಸಂಗತ ಪ್ರವಾಹದಲ್ಲಿ ಇದೂ ಒಂದು. ಇದರಿಂದಾಗಿ ನಾವು ಸದಾ ಪಡಬಹುದಾದ ಒಂದು ಅನಿವಾರ್ಯವೆಂದರೆ ನಮ್ಮನ್ನಾಳುವವರು ಅಲ್ಪಸಂಖ್ಯಾತರು.
ಇದು ಭಾರತದಲ್ಲಿ ಎಂದಲ್ಲ; ಇದೊಂದು ಜಾಗತಿಕ ರಾಜಕೀಯ ವಿದ್ಯಮಾನ. ಅಮೆರಿಕದ ಈ ಹೊಸ ಟ್ರಂಪ್ ಕೇವಲ ಶೇ. 33 ಮತಗಳನ್ನು ಗಳಿಸಿಯೂ ವಿಜೇತರಾದರು. ಸೋತವರಿಗೆ ಶೇ. 1-2 ಮತಗಳಷ್ಟೇ ನಷ್ಟವಾಗಿರುವುದು. ಆದರೆ ಮತಹಾಕದವರು ಶೇ. 36 ಇದ್ದರು. ಇನ್ನೊಂದಷ್ಟು ಗಣನೀಯ ಪ್ರಮಾಣ ಕುಲಗೆಟ್ಟವು!
ಆಪ್‌ನ ಸೋಲಿಗೆ ಮತ್ತು ಭಾಜಪದ ಗೆಲುವಿಗೆ ಕಾರಣರಾರು? ಮೇಲ್ನೋಟಕ್ಕೆ ಕಾಂಗ್ರೆಸ್ ಸೂತ್ರಧಾರರಂತೆ ಕಾಣಿಸುತ್ತಿದೆ. ತಾನು ಗೆಲ್ಲದಿದ್ದರೂ ಪರವಾಗಿಲ್ಲ, ಆಪ್ ಅಧಿಕಾರ ಹಿಡಿಯದಂತೆ ನೋಡಿಕೊಳ್ಳುವ ಕಾರುಬಾರು ಕಾಂಗ್ರೆಸ್ ವಹಿಸಿದೆ. ಆದರೆ ಅಧಿಕಾರ ರಾಜಕೀಯದಲ್ಲಿ ಇದು ಸಹಜವೇ. ತಾನು ಗೆಲ್ಲುವಷ್ಟೇ ಮುಖ್ಯ ತನ್ನ ಸ್ಫರ್ಧಿ ಸೋಲಬೇಕಾದ್ದು. ಕಾಂಗ್ರೆಸ್ ದಿಲ್ಲಿಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಮೂರು ಚುನಾವಣೆಗಳಾದವು. ಪಕ್ಷವನ್ನು ಕಟ್ಟಲು ಕಾಂಗ್ರೆಸ್ ದಿಲ್ಲಿಯಲ್ಲಿ ಅರ್ಥಪೂರ್ಣ ಪ್ರಯತ್ನಗಳನ್ನು ಮಾಡಿಲ್ಲ. ತುರ್ತುಸ್ಥಿತಿ, ದಿಲ್ಲಿ ಹತ್ಯಾಕಾಂಡವನ್ನು ಜನರಿಂದ ಮರೆಸಲು ಅದು ವಿಶೇಷ ಕಾರ್ಯಕ್ರಮಗಳನ್ನೇನೂ ಹಾಕಿಕೊಂಡಿಲ್ಲ. ಇಂದಿರಾಗಾಂಧಿಯ ಬಳಿಕ ಅದು ನೆಹರೂ ಕುಟುಂಬೇತರರನ್ನು ಪ್ರಧಾನಿ ಗದ್ದುಗೆಯಲ್ಲಿ ಕೂರಿಸಿದ್ದರೆ ಅದು ಪರಿಸ್ಥಿತಿಯ ಒತ್ತಡದಿಂದಲೇ ಹೊರತು ಮನಃಪೂರ್ವಕವಾಗಿ ಅಲ್ಲ. ಅದಿನ್ನೂ ನೆಹರೂ ಕುಟುಂಬದ ನೆರಳಿನಿಂದ ಹೊರಬರುವುದು ಬಿಡಿ, ಅಂತಹ ದಿಕ್ಕಿನಲ್ಲಿ ಪ್ರಯತ್ನವನ್ನೂ ಮಾಡುತ್ತಿಲ್ಲ. ನರಸಿಂಹರಾವ್ ಪ್ರಧಾನಿಯಾಗಿದ್ದರೂ ಕಾಂಗ್ರೆಸ್‌ನಿಂದ ನಿರ್ಲಕ್ಷಿತರಾದರು. ಮನಮೋಹನ್ ಸಿಂಗ್ ತನ್ನ ಅರ್ಥಶಾಸ್ತ್ರಜ್ಞಾನದಿಂದ ಪ್ರಧಾನಿಯಾದರು ಎಂಬುದಕ್ಕಿಂತಲೂ ನೆಹರೂ ಕುಟುಂಬಕ್ಕಿಟ್ಟ ನಿಷ್ಠೆ ಅವರನ್ನು ಆಯ್ಕೆ ಮಾಡಿತು ಎನ್ನಬಹುದು. ಇದರಿಂದಾಗಿ ಅಧಿಕಾರ ವಂಚಿತರಾದವರು ಪ್ರಣವ್ ಮುಖರ್ಜಿ. ಹೀಗೆ ಪಕ್ಷದೊಳಗಣ ರಾಜಕೀಯವು ಪಕ್ಷವನ್ನು ಬೆಳೆಸಲು ವಿಫಲವಾಯಿತು ಮಾತ್ರವಲ್ಲ ಅದನ್ನು ಇನ್ನಷ್ಟು ಕ್ಷೀಣಗೊಳಿಸಿತು. ಇತ್ತೀಚೆಗಿನ ಉದಾಹರಣೆಯನ್ನೇ ನೆನಪಿಸುವುದಾದರೆ ಶಶಿತರೂರ್ ಕಾಂಗ್ರೆಸ್ ಅಧ್ಯಕ್ಷತೆಗೆ ಸ್ಪರ್ಧಿಸಿದಾಗ ಅದನ್ನು ಒಂದು ಪ್ರಹಸನವಾಗಿಸಿದ್ದು ನೆಹರೂ ಕುಟುಂಬದ ಇನ್ನೊಬ್ಬ ಕಟ್ಟಪ್ಪನಂತಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನು ಸ್ಪರ್ಧಿಯಾಗಿಸಿದ್ದು. ಮಹತ್ವಾಕಾಂಕ್ಷೆಯಿಲ್ಲದವರನ್ನು ನಾಯಕರಂತೆ ಪ್ರದರ್ಶಿಸುವುದರಲ್ಲಿ ಕಾಂಗ್ರೆಸಿನ ಕೈ ಯಾವಾಗಲೂ ಎತ್ತಿದ ಕೈ.
2014ರಲ್ಲಿ ಮೋದಿಯ ಆಯ್ಕೆಯ ಹಿಂದೆ ಅವರ ವೈಯಕ್ತಿಕ ಮಹತ್ವಾಕಾಂಕ್ಷೆ ಮತ್ತು ಪಕ್ಷವನ್ನು ಅಧಿಕಾರಕ್ಕೆ ತರುವ ಮಹದಾಕಾಂಕ್ಷೆ ಕೆಲಸಮಾಡಿತು. ಇದಕ್ಕಾಗಿ ಅಡ್ವಾಣಿ, ಮುರಳೀಮನೋಹರ ಜೋಶಿ, ಜಸ್ವಂತ್ ಸಿಂಗ್ ಮುಂತಾದವರನ್ನು ಬಲಿ ತೆಗೆದುಕೊಳ್ಳಲು ಸಂಘಟನೆ ಹಿಂಜರಿಯಲಿಲ್ಲ. ವೈಯಕ್ತಿಕವಾಗಿ ಕೌಟುಂಬಿಕ ರಾಜಕೀಯ ಭಾಜಪದಲ್ಲಿದೆಯಾದರೂ ಯಾವುದೇ ಒಂದು ಕುಟುಂಬ ಅದನ್ನು ನಿಯಂತ್ರಿಸುತ್ತಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರತ್ಯಕ್ಷ ಅಧಿಕಾರವನ್ನು ಬಯಸದೆಯೂ ತನ್ನ ಗುಪ್ತ ಕಾರ್ಯಸೂಚಿಯನ್ನು ಸಾಧಿಸಲು ಯಶಸ್ವಿಯಾಗಿದೆ.
ಆಪ್ ಇತ್ತ ಅರವಿಂದ ಕೇಜ್ರೀವಾಲ್ ರಾಷ್ಟ್ರೀಯ ನಾಯಕರಾಗುವಲ್ಲೂ ಪ್ರಯತ್ನಿಸಲಿಲ್ಲ. ಅವರನ್ನು ದಿಲ್ಲಿಗೆ ಟ್ಟಿಹಾಕುವ ಮೂಲಕ ರಾಜಕೀಯ ಬೆಳವಣಿಗೆ ನಿಂತೆಂದು ತಿಳಿಯಬಾರದು. ಏಕೆಂದರೆ ಈ ಯೋಜನೆಯ ರೂವಾರಿ ಅವರೇ. ತನ್ನದಾದ ಒಂದು ಕ್ಷೇತ್ರವನ್ನೂ ಅವರು ಪೋಷಿಸದೇ ಹೋದರು. ಲೋಕಸಭೆಗೆ ಅವರು ತನ್ನ ಕ್ಷೇತ್ರವನ್ನು ಆಯ್ಕೆಮಾಡಲಿಲ್ಲ. ಬದಲಾಗಿ ಮೋದಿಗೆ ಸೆಡ್ಡುಹೊಡೆಯುವ ಸಲುವಾಗಿ ವಾರಣಾಸಿಯಂತಹ ಕ್ಷೇತ್ರವನ್ನು ಆಯ್ಕೆಮಾಡಿದರು. ಮೋದಿಯ ಹಿಂದೆ ಭಾಜಪ ಹಾಗೂ ಸಂಘಪರಿವಾರ ಹಾಗೂ ಹಿಂದುತ್ವದ ಹಲವಾರು ಗುಂಪುಗಳಿದ್ದವು. ಪ್ರತಿಪಕ್ಷಗಳು ಒಂದೇ ಅಭ್ಯರ್ಥಿಯನ್ನು ಸ್ಪರ್ಧಿಯಾಗಿಸಲು ಹೆಜ್ಜೆಹೆಜ್ಜೆಗೂ ವಿಫಲವಾದವು.
ಈಗಲೂ ಅಷ್ಟೇ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಖ್ಯಾಶಾಸ್ತ್ರವನ್ನು ನೆಚ್ಚಿಕೊಂಡರೇ ವಿನಾ ಗೆಲ್ಲುವ ಸರದಾರರನ್ನು ಆಯ್ಕೆಮಾಡಿಲ್ಲ. ಪ್ರತಿಯೊಂದು ಪ್ರತಿಪಕ್ಷವೂ ಈ ವ್ಯವಹಾರದಲ್ಲಿ ತನಗೇನು ಲಾಭ ಎಂದು ನೋಡಿತು; ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ತಾನು ಮಾಡಬಹುದಾದ ತ್ಯಾಗವೇನೆಂದು ತೋರಿಸಲು ವಿಫಲವಾಯಿತು. ದಿಲ್ಲಿ ಚುನಾವಣೆಯಲ್ಲಿ ಆಪ್ ಮತ್ತು ಕಾಂಗ್ರೆಸ್ ಜೊತೆಯಾಗಿದ್ದರೆ ಮತ್ತು ಇನ್ನಿತರ ಶೇ. 2.9 ಮತಗಳಿಕೆಯ ಪಕ್ಷಗಳು ಒಂದಾಗಿದ್ದರೆ ಫಲಿತಾಂಶ ಬೇರೆಯಿರುತ್ತಿತ್ತು. ಆದರೆ ಆಪ್ ಕಾಂಗ್ರೆಸನ್ನೂ, ಕಾಂಗ್ರೆಸ್ ಆಪ್‌ಪಕ್ಷವನ್ನೂ ಖಳನಾಯಕರಾಗಿ ಜನರೆದುರು ಇಟ್ಟಿತು. ಕಾಂಗ್ರೆಸ್ ಹೆಸರಿಗೆ ರಾಷ್ಟ್ರೀಯ ಪಕ್ಷವಾದರೂ ತೀರಾ ಎಳಸು ಮನಸ್ಸನ್ನು ತೋರಿಸಿತು. ಆಪ್ ಬೆಳೆಯುವ ಪಕ್ಷವಾದರೂ ಮಕ್ಕಳು ಚಾಕಲೇಟ್ ಡಬ್ಬಕ್ಕೆ ಕೈಹಾಕಿ ತುಂಬಿಕೊಂಡಂತೆ ಎಲ್ಲವನ್ನೂ ದೋಚುವ ಯತ್ನದಲ್ಲಿ ತನ್ನ ಮುಷ್ಟಿಯನ್ನು ಹೊರತರಲು ವಿಫಲವಾಯಿತು. ಪರಿಣಾಮವಾಗಿ ಮತದಾರರು ಈ ಚಿಲ್ಲರೆ ರಾಜಕೀಯಕ್ಕಿಂತ ಕೆಟ್ಟದ್ದಾದರೂ ಒಂದು ದೊಡ್ಡ ಪಕ್ಷ ಅಧಿಕಾರಕ್ಕೆ ಬಂದರೆ ಲೇಸೆಂದು ಮತ್ತು ಅದು ಸ್ಥಿರವಾಗಿರುತ್ತದೆಂದು ತಿಳಿದರು. ಬೆಕ್ಕುಗಳ ಜಗಳದಲ್ಲಿ ಬೆಣ್ಣೆ ಕಪಿಯ ಪಾಲಾಯಿತು.
ಪ್ರತಿಪಕ್ಷಗಳ ‘ಇಂಡಿಯಾ’ ಈಗ ಭಾರತವೂ ಆಗದೆ ಹಿಂದೂಸ್ಥಾನಕ್ಕೆ ಹೆಚ್ಚು ಹೆಚ್ಚು ಅವಕಾಶ ಕಲ್ಪಿಸುತ್ತಿದೆ. ಅದೃಷ್ಟವಿದ್ದಾಗ ಮಣ್ಣೂ ಚಿನ್ನವಾಗುತ್ತದೆಯೆಂಬುದಕ್ಕೆ ಇತ್ತೀಚಿನ ಚುನಾವಣೆಗಳಲ್ಲಿ ಭಾಜಪದ ಗೆಲುವೇ ಸಾಕ್ಷಿ. ಅದು ಇತರ ಪಕ್ಷಗಳು ಮಾಡುವ ತಪ್ಪನ್ನು ಮಾಡಿಯೂ ಮುಗ್ಧವಾಗಿ, ನಿರ್ದೋಷಿಯಾಗಿ ನಿಂತಿದೆ. ಅದಕ್ಕೆ ಇಂಬಾಗಿರುವುದು ಪ್ರತಿಸ್ಪರ್ಧಿಗಳ ನಡುವಿನ ಒಡಕೇ ಹೊರತು ಅದರ ಶಕ್ತಿಯಲ್ಲ.
ಇಂತಹ ಪರಿಸ್ಥಿತಿ ಬದಲಾಗಬೇಕಾದರೆ ಪ್ರತಿಪಕ್ಷಗಳಿಗೆ ಗಾಂಧಿಯಂತಹ ಅಧಿಕಾರದ ನೆರಳೂ ತನ್ನನ್ನು ಸೋಕದಂತಹ ವ್ಯಕ್ತಿತ್ವದ ನಾಯಕತ್ವವು ಬೇಕಾಗಿದೆ. ಹೋಗಲಿ, ಗಾಂಧಿ ಈಗ ಯಾರಿಗೂ ಬೇಕಾಗಿಲ್ಲ; ಆತನನ್ನು ಸಾಧ್ಯವಾದಷ್ಟೂ ದೂರ ಇಟ್ಟಿದ್ದೇವೆ. ಜಯಪ್ರಕಾಶ ನಾರಾಯಣರಂತಹವರ ನಾಯಕತ್ವವಾದರೂ ಬೇಕು. ಆದರೆ ಅದಕ್ಕೂ ಮುಹೂರ್ತ ಬರಬೇಕಾಗಿದೆ. ಅಣ್ಣಾ ಹಝಾರೆಯವರಂತಹ ಬಣ್ಣಬದಲಾಯಿಸುವ ಅನಧಿಕಾರ ನಾಯಕರು ಈಗ ತೆರೆಮರೆಗೆ ಸರಿದು ಅಲರಾಂ ಗಡಿಯಾರದಂತೆ ನಿಗದಿತ ಹೊತ್ತಿನಲ್ಲಿ ಕೂಗಿಕೊಳ್ಳುತ್ತಿದ್ದಾರೆ. ಇಂತಹ ಗಾಳಿಕೋಳಿಯ ಜೊತೆಯಲ್ಲಿದ್ದರೂ ಕೇಜ್ರಿವಾಲ್ ಸ್ವಂತವಾಗಿಯೇ ಬೆಳೆದರು. ಅವರ ಜೊತೆಗಿದ್ದ ಇತರರು ಪ್ರತ್ಯೇಕ ಗುಂಪುಗಳಾಗದೆ ವ್ಯಕ್ತಿತ್ವವೂ ಆಗದೇ ವ್ಯಕ್ತಿಗಳಾಗಿಯೇ ಉಳಿದಿದ್ದಾರೆ. ಇಂತಹ ಸ್ಥಿತಿಯಲ್ಲಿ ಅಹಂ ಹಿಂದಕ್ಕೆ ಸರಿಯದಿದ್ದರೂ ಸ್ವಲ್ಪ ಪಕ್ಕಕ್ಕೆ ಸರಿಯದಿದ್ದರೆ ದಿಲ್ಲಿಯ ಕೆಂಪುಕೋಟೆ ದೇಶದ್ಯಾಂತ ಕೇಸರಿಕೋಟೆಯಾಗುವುದರಲ್ಲಿ ಸಂದೇಹವಿಲ್ಲ.