ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಎಲ್ಲಾ ಆಚರಣೆಗಳ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲಾಗಲಿ, ನಮಾಝ್ ಗೆ ಮಾತ್ರ ಏಕೆ ?: ಯುನಿವೆಫ್ ಕರ್ನಾಟಕ
ಇತ್ತೀಚೆಗೆ ಶುಕ್ರವಾರದಂದು ರಸ್ತೆ ಬದಿಯಲ್ಲಿ ಕೆಲವು ವಿದ್ಯಾರ್ಥಿಗಳು ಮಸೀದಿಯೊಳಗೆ ಸ್ಥಳದ ಅಭಾವವನ್ನು ಕಂಡು ತರಾತುರಿಯಲ್ಲಿ ಮಸೀದಿಯ ಆವರಣದ ಗೋಡೆಗೆ ತಾಗಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಮಾಝ್ ನಿರ್ವಹಿಸಿದ್ದರು. ಕೇವಲ ಐದು ನಿಮಿಷಗಳಲ್ಲಿ ಮುಗಿದ ಈ ನಮಾಝ್ ಅನ್ನು ಯಾರೋ ಒಬ್ಬ ಚಿತ್ರೀಕರಿಸಿ ಸಾರ್ವಜನಿಕರ ಮಧ್ಯೆ ಪ್ರಚೋದನಾತ್ಮಕವಾಗಿ ಬಿತ್ತರಿಸಿ ಸಮುದಾಯವು ಮಹಾ ಅಪರಾಧ ನಡೆಸಿದಂತೆ ಅದನ್ನು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹರಿಯ ಬಿಟ್ಟಿದ್ದನು. ಇದರ ಭಾಗವಾಗಿ ಪೊಲೀಸ್ ಇಲಾಖೆ ನಮಾಝ್ ನಿರ್ವಹಿಸಿದವರ ಮೇಲೆ ಸ್ವಯಂ ಪ್ರೇರಿತ ಕೇಸ್ ದಾಖಲಿಸಿದೆ.
ದ.ಕ. ಜಿಲ್ಲೆ ಪರಂಪರಾಗತವಾಗಿ ಸೌಹಾರ್ದತೆಯನ್ನು ಬೆಳೆಸಿಕೊಂಡು ಬಂದಿರುವ ಒಂದು ಜಿಲ್ಲೆ. ಇಲ್ಲಿ ಅನೇಕ ಸಂದರ್ಭಗಳಲ್ಲಿ ವಿವಿಧ ಧರ್ಮೀಯರು ನಿರ್ಬಂಧಿತಾವಸ್ಥೆಯಲ್ಲಿ ತಮ್ಮ ಆಚರಣೆಗಳನ್ನು ಮಸೀದಿ, ದೇವಾಲಯಗಳು ಮತ್ತು ಚರ್ಚ್ ಗಳ ಹೊರ ಭಾಗದಲ್ಲಿ ನಡೆಸುತ್ತಿರುವುರುವುದು ಬಹಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಅದು ಇತಿಹಾಸ. ಇದನ್ನು ಯಾರು ಕೂಡ ಆಕ್ಷೇಪಿಸುತ್ತಿರಲಿಲ್ಲ ಅಥವಾ ಅದನ್ನು ಪ್ರಶ್ನಿಸುವ ಅಗತ್ಯವೂ ಇರಲಿಲ್ಲ. ಆದರೆ ಕೇವಲ ರಾಜಕೀಯ ಹಿತಾಸಕ್ತಿಗಳಿಗಾಗಿ ತನ್ನ ಅಸ್ತಿತ್ವದ ತೋರ್ಪಡಿಕೆಗಾಗಿ ಸಾರ್ವಜನಿಕರಿಗೆ ತೊಂದರೆಯಾಗದಿದ್ದರೂ ಇದನ್ನು ಸಮಾಜದಲ್ಲಿ ಪ್ರಚೋದಿತ ಕೆಲಸವೆಂದು ಬಿಂಬಿಸಿರುವುದು ತೀವ್ರ ಖಂಡನೀಯ. ಯುನಿವೆಫ್ ಕರ್ನಾಟಕ ಇದನ್ನು ಬಲವಾಗಿ ಖಂಡಿಸುತ್ತದೆ.
ನಿಜವಾಗಿಯೂ ಸಾರ್ವಜನಿಕರ ಹಿತಾಸಕ್ತಿಗಾಗಿ ಪೋಲೀಸ್ ಇಲಾಖೆ ಇಲ್ಲಿ ಸ್ವಯಂ ಪ್ರೇರಿತ ಕೇಸು ದಾಖಲಿಸಿದ್ದರೆ, ಇಲ್ಲಿ ಮಾತ್ರವಲ್ಲ ನಗರದ ವಿವಿಧ ಕಡೆಗಳಲ್ಲಿ ಇತರ ಧರ್ಮೀಯರೂ ರಸ್ತೆ ತಡೆಮಾಡಿ ತಮ್ಮ ಆಚರಣೆಗಳು ನಡೆಸುವಾಗ ಅದು ಸಾರ್ವಜನರಿಗೆ ತೊಂದರೆ ಆಗುವುದಿಲ್ಲವೇ ? ಅದರ ಮೇಲೂ ಸ್ವಯಂ ಪ್ರೇರಿತ ಕೇಸ್ ದಾಖಲಾಗಬೇಡವೇ ? ಕೇವಲ ನಮಾಝ್ ಮಾಡಿದವರ ಮೇಲೆ ಮಾತ್ರ ಏಕೆ ಈ ತಾರತಮ್ಯ ?
ಅವರವರ ಪ್ರಾರ್ಥನಾಲಯಗಳ ಮುಂದೆ ಅವರವರ ಆಚರಣೆಗಳು ನಡೆಸುವ ಪರಂಪರೆ ದ.ಕ. ಜಿಲ್ಲೆಯಲ್ಲಿ ಬಹಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ ಅದು ಮುಂದುವರಿಯಲಿ. ಇಲ್ಲ ಅದನ್ನು ನಿರ್ಬಂಧಿಸಬೇಕೆಂದಿದ್ದಲ್ಲಿ ಕೇವಲ ಒಂದು ಜನಾಂಗಕ್ಕೆ ಮಾತ್ರ ಸೀಮಿತಗೊಳ್ಳದೆ ಎಲ್ಲರ ಮೇಲೆ ಅದು ಅನ್ವಯವಾಗಲಿ. ಇಂತಹ ಪ್ರಕರಣಗಳ ಮೂಲಕ ಕೋಮುವಾದಿಗಳು ತಮ್ಮ ಬೇಳೆ ಬೇಯಿಸಿಕೊಳ್ಳದಿರಲಿ.