ಕೊಂಕಣಿ ಸಾಹಿತ್ಯ ಅಕಾಡಮಿಯಲ್ಲಿ ಅರ್ಹ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಲಿ
ಮಾನ್ಯರೇ
ರಾಜ್ಯ ಸರಕಾರವು ಸಾಹಿತ್ಯ ಅಕಾಡಮಿಗಳು ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಕ್ಕೆ ಸಂಬಂಧಿಸಿ ಆಯ್ಕೆ ಸಮಿತಿಯನ್ನು ರಚಿಸಿರುವುದಾಗಿ ತಿಳಿದು ಬಂದಿದೆ. ಈ ಸಮಿತಿಯು ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಿ ಅರ್ಹರ ಪಟ್ಟಿ ತಯಾರಿಸಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಸುಮಾರು ೪೨ ಸಮುದಾಯದ ಜನರು ಕೊಂಕಣಿ ಭಾಷೆಯನ್ನು ಮಾತನಾಡುತ್ತಾರೆ. ಆದರೆ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಮತ್ತು ಸದಸ್ಯರ ನೇಮಕದ ಸಂದರ್ಭ ಕೆಥೊಲಿಕ್ ಕ್ರೈಸ್ತರು ಮತ್ತು ಜಿಎಸ್ಬಿ ಸಮುದಾಯದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರಿಂದ ಇತರ ೪೦ ತಳ ಸಮುದಾಯದ ಕೊಂಕಣಿ ಮಾತೃಭಾಷಿಗರು ಕೊಂಕಣಿ ಅಕಾಡಮಿಯಲ್ಲಿ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಬಂದಾಗ ಕೆಥೊಲಿಕ್ ಕ್ರೈಸ್ತರು ಮತ್ತು ಬಿಜೆಪಿ ಸರಕಾರ ಬಂದಾಗ ಜಿಎಸ್ಬಿ ಸಮುದಾಯಕ್ಕೆ ಸೇರಿದವರು ಅಧ್ಯಕ್ಷರನ್ನಾಗಿ ಮಾಡುವ ಸಂಪ್ರದಾಯ ಈ ಹಿಂದಿನಿಂದ ಬೆಳೆದು ಬಂದಿದೆ. ಇದು ಸರಿಯಾದ ಕ್ರಮವಲ್ಲ.
ಯಾವ ಕಾರಣಕ್ಕೂ ತಳ ಸಮುದಾಯದ ಕೊಂಕಣಿ ಭಾಷಿಗರನ್ನು ಕಡೆಗಣಿಸಬಾರದು. ನಾಡಿನ ಎಲ್ಲಾ ಸಮುದಾಯವನ್ನು ಸಮಾನವಾಗಿ ಕಾಣುವುದಾಗಿ ಭರವಸೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಮತ್ತು ಸದಸ್ಯರ ನೇಮಕದ ಸಂದರ್ಭ ಅವಕಾಶ ವಂಚಿತ ಸಮುದಾಯವನ್ನು ಪರಿಗಣಿಸಬೇಕು. ಇಲ್ಲದಿದ್ದರೆ ಸಾಮಾಜಿಕ ನ್ಯಾಯ ಎಂಬುದು ಮರೀಚಿಕೆಯಾಗಲಿದೆ. ಕೊಂಕಣಿ ಸಾಹಿತ್ಯ ಅಕಾಡಮಿಯು ೧೯೯೪ರ ಎಪ್ರಿಲ್ ೨೧ರಂದು ರಚನೆಯಾಗಿದೆ. ಈವರೆಗೆ ೧೦ ಅಧ್ಯಕ್ಷರನ್ನು ಸರಕಾರ ನೇಮಕ ಮಾಡಿದೆ. ಈ ಪೈಕಿ ಕೆಥೊಲಿಕ್ ಕ್ರೈಸ್ತ ಮತ್ತು ಜಿಎಸ್ಬಿ ಸಮುದಾಯದ ತಲಾ ೪ ಮಂದಿಯನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ವಿಪರ್ಯಾಸ. ಉಳಿದಂತೆ ‘ಖಾರ್ವಿ’ ಮತ್ತು ‘ಕೋಮಾರ ಪಂಥ’ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಉಳಿದ ಸಮುದಾಯವನ್ನು ಅಂದರೆ ಕೊಂಕಣಿ ಮಾತನಾಡುವ ಕುಡುಬಿ, ನವಾಯತ್, ದಾಲ್ದಿ, ಮೇಸ್ತ ಇತ್ಯಾದಿ ಸಮುದಾಯದ ಅರ್ಹರನ್ನು ಅಧ್ಯಕ್ಷ-ಸದಸ್ಯರ ನೇಮಕದ ಸಂದರ್ಭ ಸರಕಾರ ಪರಿಗಣಿಸಬೇಕಿದೆ. ಅಕಾಡಮಿ/ಪ್ರಾಧಿಕಾರಗಳ ಆಯ್ಕೆ ಸಮಿತಿಯ ಸದಸ್ಯರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹಾಗೂ ಕನ್ನಡ-ಸಂಸ್ಕೃತಿ ಇಲಾಖೆಯ ಸಚಿವರು ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿ ವಿನಂತಿ
-ಕೆ.ಎನ್. ನಾಯ್ಕ್
ಕಾರವಾರ