ವಿಶೇಷ ರೈಲುಗಳು ಮಂಗಳೂರು ಜಂಕ್ಷನ್‌ಗೆ ಬರಲಿ
ರೈಲು ಬವಣೆ
ಪಶ್ಚಿಮ ರೈಲ್ವೆಯು ಪ್ರತೀವರ್ಷ ಚೌತಿ ಸಂದರ್ಭದಲ್ಲಿ, ರೈಲು ಪ್ರಯಾಣಿಕರ ಸಂಖ್ಯೆಯು ಹೆಚ್ಚಿರುವುದನ್ನು ಗಮನಿಸಿ; ಮುಂಬೈ-ಮಂಗಳೂರು ಮಧ್ಯೆ, ವಿಶೇಷ ರೈಲುಗಳನ್ನು ಓಡಿಸುತ್ತಿದೆ.
ಕಳೆದ 2008ರಿಂದ ಮುಂಬೈ ರೈಲು ಯಾತ್ರಿ ಸಂಘವು ಬಾಂದ್ರಾದಿಂದ ವಸಾಯಿ ಮೂಲಕ ಮಂಗಳೂರಿಗೆ ಪ್ರತೀದಿನದ ರೈಲು ಆರಂಭಿಸಲು ಉನ್ನತ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿತ್ತು. 2013 ಆಗಸ್ಟ್ ತಿಂಗಳಲ್ಲಿ ಚೌತಿಯ ವೇಳೆ ಬಾಂದ್ರಾ-ಮಂಗಳೂರು ವಿಶೇಷ ರೈಲನ್ನು ಪಶ್ಚಿಮ ರೈಲ್ವೆಯು ಓಡಿಸಿತ್ತು.
ಇದೀಗ ಮಾಧ್ಯಮಗಳಲ್ಲಿ ಪಶ್ಚಿಮ ರೈಲು ನೀಡಿದ ಪತ್ರಿಕಾ ಜಾಹೀರಾತಿನಂತೆ, ಗಣೇಶ ಹಬ್ಬಕ್ಕಾಗಿ ಸೆಪ್ಟಂಬರ್ ಮೂರರಿಂದ 18ರ ತನಕ ರೈಲು ಸಂಖ್ಯೆ 09001/09002 ರೈಲನ್ನು ಮುಂಬೈ ಸೆಂಟ್ರಲ್‌ನಿಂದ ವಸಾಯಿ ರೋಡ್ ಮಾರ್ಗವಾಗಿ ತೋಕೂರು ತನಕ ಓಡಿಸಲಾಗುತ್ತಿದೆ.
ತೋಕೂರು ಹಳ್ಳಿ ಪ್ರದೇಶವಾಗಿದ್ದು, ಅಲ್ಲಿ ಸುಸಜ್ಜಿತವಾದ ರೈಲು ನಿಲ್ದಾಣವಿಲ್ಲ. ತೋಕೂರು ನಿಲ್ದಾಣದಿಂದ ಹತ್ತಿರಕ್ಕೆ ಹೆದ್ದಾರಿಯೂ ಇಲ್ಲ. ರಸ್ತೆ, ವಾಹನ ಸಂಪರ್ಕವೂ ಸರಿಯಾಗಿಲ್ಲ. ನೀರಿನ ಸೌಲಭ್ಯವೂ ಇಲ್ಲ. ಪ್ಲಾಟ್ ಫಾರ್ಮ್ ಒಂದನ್ನು ಬಿಟ್ಟು ಬೇರೆ ಯಾವ ಕಟ್ಟಡವೂ ಅಲ್ಲಿಲ್ಲ. ದೂರದೂರಿಗೆ ರೈಲು ಆರಂಭಿಸಲು ಹಾಗೂ ಆಖೈರುಗೊಳಿಸಲು ತೋಕೂರು ಟರ್ಮಿನಲ್ ಅಲ್ಲ. ಹೀಗಿರುವಾಗ ಈ ರೈಲನ್ನು ಮಂಗಳೂರು ಜಂಕ್ಷನ್ ತನಕ ತಂದರೆ ಮೂರು ರೈಲು ಪ್ಲಾಟ್‌ಫಾರ್ಮ್‌ಗಳು, ನೀರಿನ ಸೌಲಭ್ಯ, ಸಿಟಿ ಬಸ್, ಆಟೋ, ರಸ್ತೆ ಇವೆಲ್ಲವೂ ಲಭ್ಯವಿವೆ. ವಿಶೇಷ ರೈಲನ್ನು (09001/ 09002) ಮಂಗಳೂರು ಜಂಕ್ಷನ್ ತನಕ ವಿಸ್ತರಣೆ ಮಾಡಬೇಕು ಎಂದು ಮುಂಬೈ ರೈಲು ಯಾತ್ರಿ ಸಂಘ ವಿನಂತಿಸುತ್ತದೆ.
ಮಹಾರಾಷ್ಟ್ರ ಕನ್ನಡಿಗರು, ಕರಾವಳಿ ಕರ್ನಾಟಕದಲ್ಲಿ ಇರುವ ಹುಟ್ಟೂರಿಗೆ ತ್ವರಿತವಾಗಿ ಹೋಗಿ ಬರಲು ರೈಲು ಆರಂಭಿಸಲು ಯಾತ್ರಿ ಸಂಘವು ಕೇಳಿತ್ತು. ಆದರೆ ಈ ರೈಲಿಗೆ 31 ಪ್ರಯಾಣಿಕರ ನಿಲುಗಡೆಗಳನ್ನು ನೀಡಿ ಸಿಟಿ ಬಸ್ಸಿನಂತೆ ಮಾಡಿದ್ದು ತಪ್ಪು. ಪನ್ವೇಲ್ ನಂತರ ಸಿಬ್ಬಂದಿ (ಲೋಕೋ ಪೈಲೆಟ್, ಗಾರ್ಡ್, ಚಲಿಸುವ ಟಿಕೆಟ್ ಪರಿವೀಕ್ಷಣೆಗಾರರು) ಬದಲಾವಣೆಗಾಗಿ ರತ್ನಗಿರಿ ಹಾಗೂ ಮಡಗಾಂವ್‌ನಲ್ಲಿ ಮಾತ್ರ ಪ್ರಯಾಣಿಕರ ನಿಲುಗಡೆ ನೀಡಿ; ಆನಂತರ ಕರಾವಳಿ ಕರ್ನಾಟಕದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಕೊಟ್ಟು 14 ಗಂಟೆ 30 ನಿಮಿಷದ ಒಳಗೆ ಮಂಗಳೂರು ಜಂಕ್ಷನ್ ತಲುಪಬೇಕು. ಹಬ್ಬದ ಸಂದರ್ಭ ವಿಶೇಷ ರೈಲುಗಳಲ್ಲಿ ಹೋಗಲು ಕರಾವಳಿ ಕನ್ನಡಿಗರು ಇಷ್ಟಪಡುತ್ತಾರೆ. ಇತರ ರೈಲಿಗಿಂತ ಈ ರೈಲಿಗೆ ಟಿಕೆಟ್ ದರವು ಜಾಸ್ತಿ. ಜಾಸ್ತಿ ದರ ನೀಡಿ ಮಧ್ಯಾಹ್ನ 12 ಗಂಟೆಯಿಂದ ಮರು ದಿವಸ ಬೆಳಗ್ಗೆ 8:50 ಗಂಟೆಗೆ ತೋಕೂರು ತಲುಪುತ್ತದೆ. ಅಂದರೆ 1,135 ಕಿ.ಮೀ. ಸಂಚರಿಸಲು ಬರೋಬ್ಬರಿ 21 ಗಂಟೆ ಪ್ರಯಾಣ!! ಉಳಿದೆಲ್ಲ ಎಕ್ಸ್‌ಪ್ರೆಸ್ ರೈಲುಗಳು 16 ಗಂಟೆ ಒಳಗೆ ಮಂಗಳೂರು ಜಂಕ್ಷನ್ ತಲುಪುವಾಗ; ಇದು ಇನ್ನೂ ಪ್ರಯಾಣವನ್ನು ಅದೂ ತೋಕೂರು ತನಕ ಮಾತ್ರ ತಲುಪಲು 21 ಗಂಟೆ ಯಾಕೆ ? ಇಂತಹ ರೈಲಿನಲ್ಲಿ ಪ್ರಯಾಣಿಸಲು ಯಾರು ಇಷ್ಟಪಟ್ಟಾರು?.