ನಾನು ಭ್ರಷ್ಟಾಚಾರ ಮಾಡಿದ್ದರೆ ಸರಕಾರ ತನಿಖೆ ಮಾಡಿಸಲಿ: ಕೋಟ ಶ್ರೀನಿವಾಸ ಪೂಜಾರಿ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಕಣಕ್ಕೆ ಇಳಿದಿದ್ದು, ಇವರು ಪ್ರಸಕ್ತ ವಿಧಾನ ಪರಿಷತ್ ಸದಸ್ಯರಾಗಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಗ್ರಾಪಂ, ತಾಪಂ, ಜಿಪಂ ಸದಸ್ಯರಾಗಿ, ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಮೂರು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವಿ ರಾಜಕಾರಣಿ. ಅವರು ‘ವಾರ್ತಾಭಾರತಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಹೇಗಿದೆ ಚುನಾವಣೆ ಪ್ರಚಾರ, ಜನರ ಪ್ರತಿಕ್ರಿಯೆ?
ಕೋಟ: ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಥಮ ಸುತ್ತಿನ ಪ್ರಚಾರ ಕಾರ್ಯ ಮುಗಿದಿದೆ. ಮನೆ ಮನೆ ಪ್ರಚಾರ ಆರಂಭಿಸಿದ್ದೇವೆ. ಅತ್ಯುತ್ತಮವಾದ ಸಂಘಟನೆ ಸೂತ್ರ, ಕಾರ್ಯಕರ್ತರ ಉತ್ಸಾಹ ಹಾಗೂ ಮತದಾರರಲ್ಲಿರುವ ರಾಷ್ಟ್ರಭಕ್ತಿ ಭಾವನೆ ನಮಗೆ ಹೆಚ್ಚು ಶಕ್ತಿ ಕೊಡುತ್ತಿದೆ. ದೇಶಕ್ಕಾಗಿ ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಿ ಮಾಡಬೇಕೆಂಬುದು ಜನರ ಭಾವನೆ ಆಗಿದೆ. ನಾನು ಎರಡು ಜಿಲ್ಲೆಗಳಿಗೂ ಪರಿಚಯಸ್ಥನಾಗಿರುವುದರಿಂದ ನನ್ನ ಮೇಲೆ ಜನರಿಗೆ ಪ್ರೀತಿ ಇದೆ. ಆ ಕಾರಣಕ್ಕೆ ನಾನು ಗೆಲ್ಲುವ ವಿಶ್ವಾಸ ಇದೆ.
ಆಸ್ತಿ ವಿವರಗಳಿಗೆ ಸಂಬಂಧಿಸಿ ನಿಮ್ಮ ಬಗ್ಗೆ ವೈರಲ್ ಆದ ತಪ್ಪು ಮಾಹಿತಿಯಿಂದ ಚುನಾವಣಾ ಅವಕಾಶಕ್ಕೆ ಧಕ್ಕೆ ಉಂಟಾಗಬಹುದೇ?
ಕೋಟ: ಇದರಿಂದ ನನಗೆ ಯಾವುದೇ ಧಕ್ಕೆ ಆಗಿಲ್ಲ. ಈ ಹಿಂದೆ ನನ್ನ ಸಂಪತ್ತಿಗಿಂತ ನನ್ನ ಹೊಸ ಮನೆ ದೊಡ್ಡದಿದೆ ಎಂಬ ಆರೋಪವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಯಿತು. ಈ ಆರೋಪದ ಬಗ್ಗೆ ತನಿಖೆ ಮಾಡುವಂತೆ ನನ್ನ ಮೇಲೆ ನಾನೇ ಲೋಕಾಯುಕ್ತಕ್ಕೆ ದೂರು ಕೊಟ್ಟೆ. ಈ ರೀತಿ ನನ್ನ ಬಿಟ್ಟು ಕರ್ನಾಟಕದಲ್ಲಿ ಬೇರೆ ಯಾರೂ ಮಾಡಿಲ್ಲ. ಲೋಕಾಯುಕ್ತರು ತನಿಖೆ ಮಾಡಿದರು. ನನ್ನ ವೇತನ, ಗೌರವಧನ ಎಲ್ಲವೂ ನನ್ನ ಸಂಪತ್ತಿನ ಮಿತಿಯೊಳಗೆ ಇದೆ ಎಂಬುದಾಗಿ ಲೋಕಾಯುಕ್ತರು ಪ್ರಮಾಣ ಪತ್ರ ನೀಡಿದರು.
ಆರೋಪ ಮಾಡುವಾಗ ಒಂದು ಮಿತಿ ಬೇಕು. ಕೆಲವರು 64 ಕೋಟಿ ರೂ. ಆಸ್ತಿ ಇರುವ ಕೋಟ ಶ್ರೀನಿವಾಸ ಪೂಜಾರಿ ಸರಳವೇ ಎಂದು ಟೀಕೆ ಮಾಡಿದರು. ನಾನು ಸರಳ ಅಂತ ಎಲ್ಲೂ ಹೇಳಿ ಕೊಂಡಿಲ್ಲ. ಸಾರ್ವಜನಿಕರು ಹೇಳಿದರೆ ನಾನು ಆಕ್ಷೇಪಿ ಸಲು ಆಗುವುದಿಲ್ಲ. ನನ್ನ ಆಸ್ತಿ ಬಗ್ಗೆ ತಪ್ಪು ಮಾಹಿತಿ ನೀಡಿದ ಟಿವಿ ಮಾಧ್ಯಮದವರು ಕರೆದು ಸಾರ್ವ ಜನಿಕವಾಗಿ ಬೇಷರತ್ ಕ್ಷಮೆ ಯಾಚಿಸಿದರು. ನಾನು ಭಾವುಕರಾಗಿ ಅವರಿಗೆ ಗೌರವ ಸಲ್ಲಿಸಿದ್ದೇನೆ.
ನನ್ನ ಆಸ್ತಿಗೆ ಸಂಬಂಧಿಸಿ ನೈಜ್ಯತೆ, ಪಾರದರ್ಶಕತೆ ಬಗ್ಗೆ ನನಗೆ ಹೆಮ್ಮೆ ಇದೆ. 3.5 ಕೋಟಿ ರೂ. ಆಸ್ತಿ ಇದ್ದರೂ 1.25 ಕೋಟಿ ರೂ. ಸಾಲ ಇದೆ. ಅದರಲ್ಲಿ 35 ಲಕ್ಷ ರೂ. ಸಾಲ ತೀರಿಸಿದ್ದೇನೆ. ನನ್ನ ಮೇಲೆ ಆರೋಪ ಮಾಡುವ ಪಕ್ಷದ್ದೆ ಸರಕಾರ ರಾಜ್ಯದಲ್ಲಿದೆ. ಬೇಕಾದರೆ ನನ್ನ ಆಸ್ತಿ ಬಗ್ಗೆ ತನಿಖೆ ಮಾಡಲಿ. ಸಿದ್ಧರಾಮಯ್ಯ, ಡಿಕೆಶಿ ಒಟ್ಟು ಸೇರಿ ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ಅಕ್ರಮ ಆಸ್ತಿ ಇದೆ ಎಂದು ಲೋಕಾಯುಕ್ತಕ್ಕೆ ದೂರು ಕೊಟ್ಟು ತನಿಖೆ ಮಾಡಿಸಲಿ. ಅವರಲ್ಲಿ ಬ್ರಹ್ಮಾಸ್ತ್ರ ಇದ್ದರೆ ಬಿಡಲಿ.
ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅಭಿವೃದ್ಧಿ ವಿಷಯವನ್ನೇ ಪ್ರಧಾನವಾಗಿರಿಸಿಕೊಂಡು ಪ್ರಚಾರ ನಡೆಸುತ್ತಿದ್ದರೆ, ನೀವು ಮೋದಿ, ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದೀರಿ?
ಕೋಟ: ಯಾರು ಅಭಿವೃದ್ಧಿ ಮಾಡಿದ್ದಾರೆಂಬುದು ನನಗೆ ಗೊತ್ತಿಲ್ಲ. ನಾನು ಮಾಡಿರುವ ಅಭಿವೃದ್ಧಿಗಳು ದಾಖಲೆಯಾಗಿದೆ. ಇನ್ನೊಬ್ಬರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ. ಒಂದೂವರೆ ವರ್ಷ ಮೀನುಗಾರಿಕೆ ಸಚಿವನಾಗಿದ್ದ ನಾನು 181 ಕೋಟಿ ರೂ. ಅನುದಾನ ದಡಿ ಹೆಜಮಾಡಿ ಬಂದರು ನಿರ್ಮಿಸಿದ್ದೇನೆ. 21 ಸಾವಿರ ಮೀನುಗಾರ ಮಹಿಳೆಯರ ಸಾಲಮನ್ನಾ ಮಾಡಿದ್ದೇನೆ.
ಹಿಂದುತ್ವ, ಮೋದಿ ಬಗ್ಗೆ ಮಾತನಾಡಿದರೇ ತಪ್ಪೇನು? ಒಂದು ಕಾಲದಲ್ಲಿ ಕಾಂಗ್ರೆಸ್‌ನವರು ಇಂದಿರಾ ಗಾಂಧಿ ಹೆಸರು ಹೇಳಿಕೊಂಡು ಚುನಾವಣೆ ಎದುರಿಸಲಿಲ್ಲವೇ? ಮೋದಿ ಉಜ್ವಲ ಯೋಜನೆಯಡಿ ಬಡವರಿಗೆ ಗ್ಯಾಸ್, ಬಯಲು ಶೌಚಾಲಯ ಮಾಡು ತ್ತಿದ್ದವರಿಗೆ ಶೌಚಾಲಯ, ವಿದ್ಯುತ್ ಇಲ್ಲದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಿದವರನ್ನು ಸಮರ್ಥನೆ ಮಾಡುವಾಗ, ಅಧಿಕಾರಕ್ಕೆ ಬಂದರೆ ರಾಮ ಮಂದಿರ ಒಡೆದು ಮಸೀದಿ ಕಟ್ಟು ತ್ತೇವೆ ಎಂಬ ಹೇಳುವಾಗ, ನಮ್ಮ ಪಾಲಿನ ಹಣ ಕೊಡದಿದ್ದರೆ ದೇಶ ವಿಭಜನೆ ಮಾಡುತ್ತೇವೆ ಎಂಬ ಹೇಳಿಕೆ ನೀಡುವಾಗ ಹಿಂದುಗಳು ಒಂದಾಗಿ ದೇಶ ಕಟ್ಟುವ ಕಾರ್ಯ ಮಾಡಬೇಕಾಗಿದೆ. ಅದಕ್ಕಾಗಿ ನಾವು ಹಿಂದುತ್ವದ ಬಗ್ಗೆ ಮಾತನಾಡುತ್ತೇವೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ನೀವು ಟೀಕೆ ಮಾಡಿದ್ದೀರಿ. ಆದರೆ ಅವರಿಂದು ನಾವು ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಿದ್ದರಲ್ಲ?
ಕೋಟ: ಗ್ಯಾರಂಟಿ ಯೋಜ ನೆಗಳ ಬಗ್ಗೆ ನಾನು ತುಂಬಾ ಟೀಕೆ ಮಾಡಿ ದ್ದೇನೆ. ಈಗಲೂ ಅದನ್ನು ಸಮರ್ಥನೆ ಮಾಡು ತ್ತೇನೆ. ಚುನಾವಣೆಗೆ ಮೊದಲು ಈ ಯೋಜನೆಗೆ ಅಷ್ಟೊಂದು ಹಣ ಎಲ್ಲಿಂದ ತರುತ್ತೀರಿ ಎಂದು ಕೇಳಿದ್ದೆ. ಆದರೆ ಜನ ಅವ ರನ್ನು ನಂಬಿ ಮತ ಹಾಕಿದರು. ಮೊದಲು ಎಲ್ಲರಿಗೂ ಉಚಿತ ಹೇಳಿದರೂ ಮಹಿಳೆಯರು ಬಸ್ ಹತ್ತುವಾಗ ಟಿಕೆಟ್ ಕೇಳಿದರು. ಎಲ್ಲರಿಗೂ 200 ಯುನಿಟ್ ವಿದ್ಯುತ್ ಫ್ರೀ ಅಂದರೂ ಬಿಲ್ ಪಾವತಿಸದಿದ್ದರೆ ಫ್ಯೂಸ್ ತೆಗೆಯುವುದಾಗಿ ಬೆದರಿಸಿದರು. ಆಗ ಉಚಿತ ಬಸ್, ವಿದ್ಯುತ್ ನೀಡದಿದ್ದರೆ ಕೆಎಸ್ಸಾರ್ಟಿಸಿ, ಮೆಸ್ಕಾಂಗೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದೆವು. ನಂತರ ಸರಕಾರ ಎಲ್ಲವನ್ನು ಫ್ರೀ ಮಾಡಿತು. ಅವರು ನುಡಿದಂತೆ ನಡೆಯುವಂತೆ ಮಾಡಿರುವುದೇ ನಾವು.
ಉಡುಪಿ, ದ.ಕ. ಜಿಲ್ಲೆಯಲ್ಲಿ ಈ ಬಾರಿ ಚುನಾ ವಣೆ ಕಣ ಬಂಟ ಮತ್ತು ಬಿಲ್ಲವ ಸಮುದಾಯದ ನಡುವಿನ ಹೋರಾಟವಾಗುತ್ತಿದೆಯೇ?
ಕೋಟ: ಮಳೆ ಬರುವಾಗ ಮೊದಲು ಗುಡುಗು, ಸಿಡಿಲು ಬರುತ್ತದೆ. ಅದೇರೀತಿ ರಾಜಕಾರಣದಲ್ಲೂ ಆರಂಭದಲ್ಲಿ ಬಂಟರು, ಬಿಲ್ಲವರು ಎಂಬ ಜಾತಿ ಗಳು ಬರುತ್ತವೆ. ಒಂದೆಡೆ ಬಿಲ್ಲವರನ್ನು ಆರಿಸಿ ಕಳುಹಿ ಸಿಕೊಡಬೇಕು, ಮತ್ತೊಂದೆಡೆ ಬಂಟರನ್ನೇ ಆರಿಸಿ ಕಳುಹಿಸಬೇಕು ಎಂಬ ವಿಚಾರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಲಾಗುತ್ತದೆ. ಈ ಫೋಸ್ಟ್ ಮಾಡುವವರು ಯಾರು ಕೂಡಾ ಬಂಟರೂ ಅಲ್ಲ, ಬಿಲ್ಲವರೂ ಅಲ್ಲ. ಅವರಿಗೆ ಜಾತಿ ಮಧ್ಯೆ ಜಗಳ ನಡೆಸು ವುದೇ ಉದ್ದೇಶವಾಗಿರುತ್ತದೆ.
ಇದು ಬಂಟರು, ಬಿಲ್ಲವರು, ರಾಮಕ್ಷತ್ರಿಯರು, ಮೊಗ ವೀರರು, ಬ್ರಾಹ್ಮಣರು ಎಂಬ ಜಾತಿಯ ಚುನಾವಣೆ ಅಲ್ಲ. ಬದಲು ಇದು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಿದೆ.
ಬಿಜೆಪಿ ಮೀನು ಗಾರರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ ಎಂಬ ಬೇಸರ, ಅಸಮಾಧಾನ ನಿಮ್ಮ ಸಂಸದರ ವಿರುದ್ಧ ಬಹಿರಂಗ ವಾಗಿಯೇ ವ್ಯಕ್ತವಾಗಿತ್ತು. ಇದು ಮೊಗವೀರರ ಬೆಂಬಲ ಗಳಿಸುವಲ್ಲಿ ಅಡ್ಡಿಯಾಗ ಲಿದೆಯೇ?
ಕೋಟ: ನಮಗೆ ಕೆಲಸ ಮಾಡಲು ಗೊತ್ತಿದೆ. ಆದರೆ ಮಾರ್ಕೆಟ್ ಮಾಡಲು ಬರುವುದಿಲ್ಲ. ನಾನು ಇಷ್ಟೊಂದು ಕೆಲಸ ಮಾಡಿದರೂ ಅದಕ್ಕೆ ಪ್ರಚಾರ ತೆಗೆದುಕೊಳ್ಳಲು ಗೊತ್ತಾಗಲೇ ಇಲ್ಲ. ಕೆಲ ವರು ಕೂತಲ್ಲೇ ಪ್ರಚಾರ ಪಡೆದು ಕೊಳ್ಳುತ್ತಾರೆ. ನಾವು ಕೆಲಸ ಮಾಡಿಯೂ ಪ್ರಚಾರ ತೆಗೆದು ಕೊಳ್ಳದೇ ಇರು ವುದು ನಮ್ಮ ತಪ್ಪು ಗಳಲ್ಲಿ ಒಂದು. ನಮಗೆ ಡಂಗೂರು ಬಾರಿಸಲು ಬರಲ್ಲ. ಪತ್ರಿಕೆಗಳಲ್ಲಿ ಪುಟ ಗಟ್ಟಲೆ ಜಾಹೀರಾತು ಕೊಡಲು ಆಗಿಲ್ಲ. ಪ್ರಜಾ ಪ್ರಭುತ್ವದಲ್ಲಿ ಅಪಸ್ವರ, ಟೀಕೆ ಟಿಪ್ಪಣಿ ಇರುತ್ತದೆ. ಆದರೆ ಜನತಂತ್ರ ವ್ಯವಸ್ಥೆಯಲ್ಲಿ ಮೀನುಗಾರರು ಬಿಜೆಪಿ ಪರವಾಗಿರುವುದು ಕಾಣುತ್ತಿದೆ.
ನೀವು ಗ್ರಾಪಂ, ತಾಪಂಗಳನ್ನು ಹೊರತು ಪಡಿಸಿದರೆ ನೇರವಾಗಿ ಜನರಿಂದ ಆಯ್ಕೆಯಾಗಿಲ್ಲ. ಆದುದರಿಂದ ಈ ಬಾರಿ ಜನರ ವಿಶ್ವಾಸ ಗಳಿಸಲು ನೀವು ಅನುಸರಿಸುತ್ತಿರುವ ತಂತ್ರ ಏನು?
ಕೋಟ: ನೇರವಾಗಿ ಜನರಿಂದ ಆಯ್ಕೆ ಅಂದರೆ ಹೇಗೆ? ಉದಾಹರಣೆಗೆ ಈ ದೇಶದ ಪ್ರಧಾನಿ ನೇರ ವಾಗಿ ಜನರಿಂದ ಆಯ್ಕೆಯಾಗುವವರು ಅಲ್ಲ ಎಂದು ಹೇಳಲಾಗುತ್ತದೆಯೇ? ಅವರು ಸಂಸದರಿಂದ ಆಯ್ಕೆಯಾಗುವವರಲ್ಲವೇ? ಜನಪ್ರತಿನಿಧಿಗಳಿಂದ ಆಯ್ಕೆಯಾದವನು ಜನರಿಂದ ಆಯ್ಕೆಯಾದವರಿ
ಗಿಂತ ಕಡಿಮೆ ಇಲ್ಲ. ನಾನು ಜನರ ಪ್ರತಿನಿಧಿಗಳಿಂದ ಆಯ್ಕೆಯಾದವನು. ಗ್ರಾಪಂ, ತಾಪಂ, ಜಿಪಂಗೆ ನಾನು ಜನರಿಂದ ನೇರವಾಗಿ ಆಯ್ಕೆಯಾದವನು. ಎಂಎಲ್‌ಸಿಯಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಂದ ಮತ ಪಡೆದು ಆಯ್ಕೆಯಾದ ನನ್ನನ್ನು ನೇರವಾಗಿ ಆಯ್ಕೆಯಾದವ ಅಲ್ಲ ಎಂದು ಹೇಗೆ ಹೇಳುತ್ತೀರಿ?
ನೀವು ಸರಳ ವ್ಯಕ್ತಿತ್ವದವರಾದರೂ, ಜನಪ್ರತಿನಿಧಿ ಯಾಗಿ, ಸಚಿವರಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ ಎಂಬ ಟೀಕೆ ಜೋರಾಗಿದೆ. ಇದಕ್ಕೆ ಏನಂತೀರಿ?
ಕೋಟ: ಧಾರ್ಮಿಕ ದತ್ತಿ ಇಲಾಖೆ ಸಚಿವನಾಗಿದ್ದಾಗ ಸಣ್ಣಪುಟ್ಟ ಬಡ ದೇವಸ್ಥಾನಗಳಿಗೆ ಹಣ ಕೊಟ್ಟವರು ಯಾರು ಎಂಬುದನ್ನು ವಿಧಾನಸೌಧದಲ್ಲಿ ಹೋಗಿ ಕೇಳಿ. ಸಪ್ತಪದಿ ಯೋಜನೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಹಣದಿಂದ ಬಡವರ ಮಕ್ಕಳ ಮದುವೆ ಮಾಡಿಸಿ ತೋರಿಸಿಕೊಟ್ಟರು ಯಾರು? ಮೀನು ಗಾರಿಕೆ ಮಂತ್ರಿಯಾಗಿದ್ದ ಕೋಟ್ಯಂತರ ರೂ. ಯೋಜನೆ ತಂದವರು ಯಾರು? ಹಿಂದುಳಿದ ವರ್ಗಗಳ ಸಚಿವನಾಗಿದ್ದಾಗ 26 ಸಾವಿರ ಮಕ್ಕಳನ್ನು ಹಾಸ್ಟೆಲ್‌ಗೆ ತೆಗೆದುಕೊಂಡಿದ್ದೇವೆ. ಹಿಂದುಳಿದ ವರ್ಗದ ಯುವಕರಿಗೆ ಪೊಲೀಸ್ ಹಾಗೂ ಸೈನ್ಯಕ್ಕೆ ಸೇರಲು ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ್ದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆ.
ಚಿಕ್ಕಮಗಳೂರಿನಲ್ಲಿ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಅಲ್ಲಿ ಬಿಜೆಪಿಗೆ ಲೀಡ್ ಕಷ್ಟ ಎನ್ನಲಾಗುತ್ತಿದ್ದು ನಿಮ್ಮ ರಣತಂತ್ರ ಏನು?
ಕೋಟ: ಉಡುಪಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ನಮ್ಮ ಪಕ್ಷದ ಶಾಸಕರು ಸಾಕಷ್ಟು ಓಡಾಟ ಮಾಡುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ನಮ್ಮ ಪಕ್ಷದ ಪರಾಜಿತ ಶಾಸಕರು ಇದ್ದಾರೆ. ಇವರೆಲ್ಲ ಅಲ್ಪ ಅಂತರ ಅಂದರೆ ಒಟ್ಟು 15 ಸಾವಿರ ಮತಗಳಿಂದ ಸೋಲು ಅನುಭವಿಸಿದ್ದಾರೆ. ಅದನ್ನು ಈ ಬಾರಿ ನಾವು ಪಿಕ್‌ಅಪ್ ಮಾಡುತ್ತೇವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೋದ ಕಡೆಗಳಲ್ಲಿ ಎಲ್ಲರು ಜಾತಿ-ಭೇದ ಮರೆತು ಮೋದಿಗೆ ಬೆಂಬಲ ಕೊಡುತ್ತಿದ್ದಾರೆ.
ನೀವು ಸಚಿವರಾಗಿದ್ದಾಗ ನೀಡಿದ್ದ ಕರಾವಳಿ ಜಿಲ್ಲೆಗಳಿಗೆ ಪಡಿತರದಲ್ಲಿ ಕುಚ್ಚಲಕ್ಕಿ ಭರವಸೆ ಈಡೇರಿಸಿಲ್ಲ ಎಂಬ ಟೀಕೆ ಬಗ್ಗೆ ಏನು ಹೇಳುತ್ತೀರಿ?
ಕೋಟ: ಕುಚ್ಚಲಕ್ಕಿ ಕೊಟ್ಟಿಲ್ಲ ಅಂತ ಕಾಂಗ್ರೆಸ್‌ನವರು ಟೀಕೆ ಮಾಡುತ್ತಿದ್ದಾರೆ. ಅವರು ಕೇಳುವುದು ಸರಿಯೇ ಆಗಿದೆ, ತಪ್ಪು ಎಂದು ಹೇಳುವುದಿಲ್ಲ. ಆದರೆ ದ್ವೇಷಪೂರಿತ ಪದಗಳಿಂದ ಹೇಳಬಾರದು. ಹಿರಿಯರಾದ ಗೋಪಾಲ ಪೂಜಾರಿ ಬುದ್ಧಿಯಿದ್ದು ಹೇಳುತ್ತಾರೆಯೊ, ಇಲ್ಲದೇ ಹೇಳುತ್ತಾರೆಯೋ ಗೊತ್ತಿಲ್ಲ. ರಾಜಕಾರಣದಲ್ಲಿ ಕನಸು ಕಾಣುವುದು ತಪ್ಪಲ್ಲ. ಆ ಕನಸು ನನಸು ಮಾಡುವುದು ಅವರ ಜವಾಬ್ದಾರಿಯಾಗಿದೆ.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕುಚ್ಚಲಕ್ಕಿ ಒಂದು ಲಕ್ಷ ಕಿಂಟ್ವಾಲ್ ಬೇಕಾಗುತ್ತದೆ. ಅದಕ್ಕೆ 16 ಲಕ್ಷ ಕಿಂಟ್ವಾಲ್ ಭತ್ತವನ್ನು ಖರೀದಿ ಸಬೇಕು. ಈ ಸಂಬಂಧ ನಾಲ್ಕೈದು ಬಾರಿ ಸಭೆ ಕರೆದೆ. ಆದೇಶ ಕೂಡ ಹೊರಡಿಸಿದೆ. ಆದರೆ ಭತ್ತಕ್ಕೆ ಕೇಂದ್ರದಿಂದ ಬೆಂಬಲ ಬೆಲೆ ಇರಲಿಲ್ಲ. ಪ್ರಯತ್ನ ಮಾಡಿ ಬೆಂಬಲ ಬೆಲೆ ಘೋಷಣೆ ಮಾಡಿ, ಖಾಸಗಿ ಮಿಲ್‌ನವರು ಭತ್ತ ಖರೀದಿಸಿದರು. ಅಷ್ಟರಲ್ಲಿ ನಮ್ಮ ಸರಕಾರ ಬಿದ್ದು ಹೋಯಿತು.
ನಿರುದ್ಯೋಗ, ಬೆಲೆಯೇರಿಕೆ ಈ ಬಾರಿ ಚುನಾ ವಣಾ ವಿಷಯ ಆಗಲಿವೆ ಎಂದು ಸಮೀಕ್ಷೆ ಯೊಂದು ಹೇಳಿದೆ. ಇದಕ್ಕೆ ನೀವು ಏನು ಹೇಳ್ತೀರಿ?
ಕೋಟ: ಬೆಲೆ ಏರಿಕೆ ಯಾವ ಕಾಲದಲ್ಲಿ ಎಷ್ಟು ಆಗಿದೆ ಎಂಬುದರ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ. ಬೆಲೆ ಏರಿಕೆ ಆಗದಂತೆ ಎಲ್ಲ ತಂತ್ರ, ಶಕ್ತಿಗಳನ್ನು ಪ್ರಯೋಗಿಸಿ ಕೇಂದ್ರ ಸರಕಾರ ಬಡವರ ಪರ ನಿಂತಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ-ಇಳಿಕೆ ಅಂತರ್‌ರಾಷ್ಟ್ರೀಯ ಮಟ್ಟದ ದರವನ್ನು ಅವಲಂಬಿಸಿರುತ್ತದೆ. ಆದರೆ ಕಾಂಗ್ರೆಸ್ ನವರು ಪ್ರತಿಯೊಂದರಲ್ಲೂ ಅಪಪ್ರಚಾರ ಮಾಡು ವುದನ್ನೇ ಗುರಿಯಾಗಿಸಿಕೊಂಡು ಇಂದು ಬೆಲೆ ಏರಿಕೆ ನಿರುದ್ಯೋಗದ ಬಗ್ಗೆ ಮಾತನಾಡುತ್ತಾರೆ. 2 ಕೋಟಿ ಉದ್ಯೋಗ ಎಲ್ಲಿ ಎಂದು ಕೇಳಿದವರು, 70- 80 ಲಕ್ಷ ಉದ್ಯೋಗ ಕೊಟ್ಟು ಉದ್ಯೋಗ ಪತ್ರ ಹಂಚಿದಾಗ ಮಾತನಾಡೇ ಇಲ್ಲ. ರಾಜಕಾರಣ ಏಕಪಕ್ಷೀಯವಾಗಿಬಾರದು. ರಾಜಕಾರಣದಲ್ಲಿ ಹೊಗಳಿಕೆ ಸಾಧ್ಯ ಇಲ್ಲದಿದ್ದರೂ ಅಪ್ರಚಾರ ಮಾಡಬಾರದು.
ಈ ಬಾರಿ ಜನ ನಿಮ್ಮನ್ನೇ ಯಾಕೆ ಗೆಲ್ಲಿಸಬೇಕು?
ಕೋಟ: ನಾನು ಈ ಕ್ಷೇತ್ರದಲ್ಲಿರುವ ಮೀನುಗಾರರು, ಕಾಫಿ, ತೆಂಗು, ಅಡಿಕೆ ಬೆಳೆಗಾರರು ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಬಹು ಬೇಗ ಅರ್ಥ ಮಾಡಿಕೊಳ್ಳುತ್ತೇನೆ ಎಂಬ ವಿಶ್ವಾಸ ಇದೆ. ಎರಡು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಪರಹರಿಸಲು ಮುಂದೆ ಸಂಸದನಾಗಿ ಪ್ರಯತ್ನಿಸಿ ಯಶಸ್ವಿಯಾಗುತ್ತೇನೆ ಎಂಬ ವಿಶ್ವಾಸ ಇದೆ. ಆ ಕಾರಣಕ್ಕಾಗಿ ನನಗೆ ಮತ ಹಾಕಿ ಅಂತ ಕೇಳುತ್ತೇನೆ.
ಪ್ರಧಾನಿ ಮೋದಿಯವರನ್ನೇ ಕೇಂದ್ರವಾಗಿಟ್ಟುಕೊಂಡು ಬಿಜೆಪಿಗೆ ಕೇಳುವ ಮತದ ಬಗ್ಗೆ ಮತದಾರರಿಂದ ಹಾಗೂ ಎದುರಾಳಿ ಪಕ್ಷದಿಂದ ಕೇಳಿಬರುತ್ತಿರುವ ಟೀಕೆಗಳಿಗೆ ಏನಂತೀರಿ?
ಕೋಟ: ಮೋದಿ ಹೆಸರಲ್ಲಿ ಮತ ಕೇಳುವುದು ಯಾಕೆ ತಪ್ಪು?. ದೇಶಕ್ಕೆ ಮೋದಿಯಂತಹ ಪ್ರಧಾನಿ ಬೇಕೆಂಬುದು ಜನರ ಅಪೇಕ್ಷೆ. ಮೋದಿ ಮುಖ ಅಂತ ಯಾಕೆ ಹೇಳುತ್ತೀರಿ. ಅವರು ರಾಹುಲ್ ಗಾಂಧಿ ಮುಖ ತೋರಿಸಲಿ. ನಾವು ಮೋದಿ ಮುಖ ತೋರಿಸುತ್ತೇವೆ. ಅದರಲ್ಲಿ ಏನು ತಪ್ಪು. ತಮ್ಮ ನಾಯಕತ್ವದ ಬಗ್ಗೆಯೂ ಸಮರ್ಥನೆ ಮಾಡಲು ಆಗದಷ್ಟು ರಾಜಕೀಯ ಪಕ್ಷದವರು ಅಸಹಾಯಕ ಆಗಬಾರದು
ಪ್ರಧಾನಿ ಅಭ್ಯರ್ಥಿಯಾಗಿ ಮಾತ್ರ ಮೋದಿಯನ್ನು ಹೇಳಿದ್ದೇವೆ. ಪ್ರಧಾನಿ ಅಭ್ಯರ್ಥಿ ಯಾರು ಅಂದರೆ ಮೋದಿ, ಎಂ.ಪಿ. ಯಾರು ಕೇಳಿದರೆ ಕೋಟ ಶ್ರೀನಿವಾಸ ಪೂಜಾರಿ ಆಗಬೇಕೆಂಬ ಕಾರಣಕ್ಕೆ ನಾಮಪತ್ರ ಸಲ್ಲಿಸಿದ್ದೇನೆ. ಆದರೂ ಕೆಲವರು ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಲೋಕಸಭಾ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿಯನ್ನು ಆಯ್ಕೆ ಮಾಡಿ. ಆ ಮೂಲಕ ಭಾರತಕ್ಕೆ ಮೋದಿ ಪ್ರಧಾನಿಯಾಗಲು ಅವಕಾಶ ಕೊಡಿ ಎಂಬುದು ನಮ್ಮ ಘೋಷಣೆಯಾಗಿದೆ.
ಗ್ರಾಪಂ ಸದಸ್ಯನಾಗಿ ರಾಜಕಾರಣಕ್ಕೆ ಬಂದಿರುವ ನಾನು ೩೨ ವರ್ಷಗಳಿಂದ ಸ್ಥಳೀಯಾಡಳಿತ ಸಮಸ್ಯೆಗಳನ್ನು ಅರಿತಿದ್ದೇನೆ. ತಾಪಂ, ಜಿಪಂ ಸದಸ್ಯನಾಗಿ, ಎಂಎಲ್‌ಸಿಯಾಗಿ, ಸಚಿವನಾಗಿ, ವಿಪಕ್ಷ ನಾಯಕನಾಗಿ ನನಗೆ ಆಡಳಿತದ ಅನುಭವ ಇದೆ. ಜನರು ನನ್ನನ್ನು ಪ್ರೀತಿಯಿಂದ ಕರೆದು ಓಟು ಕೊಡುವಷ್ಟು ನಾನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ.