ಕಂದಮೂಲಗಳ ದಾಖಲೀಕರಣ ಆಗಲಿ
ಸುಮಾರು ನಾಲ್ಕೈದು ವರ್ಷಗಳ ಹಿಂದೆ ಬುಡಕಟ್ಟು ಜನಾಂಗದ ಆಹಾರ ಅಧ್ಯಯನದ ಉದ್ದೇಶದಿಂದ ಫೆಲೋಶಿಪ್ ಒಂದಕ್ಕೆ ಅರ್ಜಿ ಹಾಕಿದ್ದೆ. ನನ್ನ ಉದ್ದೇಶ ಇದ್ದದ್ದು ಇಷ್ಟೇ. ಕಾಡನ್ನೇ ಅವಲಂಬಿಸಿ ಬದುಕುವ ನಮ್ಮ ಮೂಲನಿವಾಸಿಗಳ ಆರೋಗ್ಯದ ಗುಟ್ಟನ್ನು ಆಹಾರದ ದಾರಿಯಲ್ಲಿ ಶೋಧಿಸುವುದು. ಪ್ರಕೃತಿ ಪರಿಸರದ ಬಗೆಗಿನ ಅವರ ಅನುಭವ, ಒಳಸುರಿಗಳನ್ನು ದಾಖಲಿಸುವುದು.
ನಾಗರಿಕತೆ ಬೆಳೆದರೂ ಇನ್ನೂ ಅರಣ್ಯದೊಳಗೆ ಮತ್ತು ಕಾಡಿನ ಸರಹದ್ದಿನಲ್ಲಿ ಬದುಕುವ ಆದಿವಾಸಿಗಳ ಆರೋಗ್ಯ ರಹಸ್ಯ ಇರುವುದೇ ಭೂಮಿಯ ಬುನಾದಿಯಲ್ಲಿ. ಬೆಂಗಳೂರಿನ ಅರಣ್ಯ ಭವನದಲ್ಲಿ ಉನ್ನತ ಅರಣ್ಯಾಧಿಕಾರಿಗಳು ಆಯ್ಕೆಯ ಪ್ರಕ್ರಿಯೆಯನ್ನು ನಡೆಸುವಾಗ ನನ್ನಲ್ಲಿ ಕೇಳಿದ ಮೊದಲ ಪ್ರಶ್ನೆ ‘‘ನಿಮ್ಮ ಸಂಶೋಧನೆಯನ್ನು ನೀವು ಎಲ್ಲಿ ನಡೆಸುತ್ತೀರಿ?’’ ಎಂದು. ‘‘ಬುಡಕಟ್ಟು ನಿವಾಸಿಗಳು ಇರುವ ಕಾಡಿನ ಒಳಗಡೆಯೇ ನಡೆಸಬೇಕಾಗುತ್ತದೆ, ಇನ್ನೆಲ್ಲಿ ಸಾಧ್ಯ?’’ ಎಂದು ನಾನು ಮರುತ್ತರ ಕೊಟ್ಟೆ. ಅದಕ್ಕೆ ಕರ್ನಾಟಕ ಘನ ಸರಕಾರದ ಅರಣ್ಯಾಧಿಕಾರಿಗಳು ಕೊಟ್ಟ ಉತ್ತರ ‘‘ನಿಮ್ಮ ಈ ಇಡೀ ಪ್ರಸ್ತಾವನೆಯನ್ನೇ ನಾವು ರಿಜೆಕ್ಟ್ ಮಾಡುತ್ತೇವೆ, ಇದು ಬಹಳ ಸೂಕ್ಷ್ಮವಿಚಾರ. ಅರಣ್ಯವಾಸಿಗಳ ಆರೋಗ್ಯದ ಗುಟ್ಟನ್ನು ಅರಣ್ಯದೊಳಗಡೆಯ ನಾರು ಬೇರು ಗೆಡ್ಡೆ ಗೆಣಸು ಗಿಡಮೂಲಿಕೆ ಕಾಡು ಉತ್ಪನ್ನಗಳಿಗೆ ಸಮೀಕರಿಸಿಕೊಂಡು ತೋರಿಸುವ ನಿಮ್ಮ ಸಂಶೋಧನೆಯೇ ನಮ್ಮ ಕಾಡಿಗೆ ಅಪಾಯಕಾರಿ. ಅದರ ಫಲಿತಗಳು ಕಾಡುನಾಶಕ್ಕೆ ಕಾರಣವಾಗಬಹುದು. ನಾಗರಿಕ ಜಗತ್ತು ಕಾಡಿನೊಳಗಡೆಯ ಆರೋಗ್ಯಕರ ಒಳಸುರಿಗಳನ್ನು ದರೋಡೆ ಮಾಡಬಹುದು. ಈ ಎಲ್ಲಾ ಕಾರಣಗಳಿಗಾಗಿ ನಿಮಗೆ ಫೆಲೋಶಿಪ್ ಬಿಡಿ, ಸಂಶೋಧನೆಗೆ ಅನುಮತಿಯನ್ನೇ ನಿರಾಕರಿಸಲಾಗುತ್ತದೆ. ನೀವು ವಿಷಯ ಬದಲಾಯಿಸಿಕೊಂಡು ಬನ್ನಿ. ಸಂಶೋಧನೆಯ ಫಲಿತಾಂಶಗಳು ಕಾಡನ್ನು ನಾಗರಿಕ ಜಗತ್ತಿಗೆ ತೆರೆದಿಡುವ ಬದಲು ಮುಚ್ಚುದಾರಿಯಲ್ಲಿ ಶೋಧಿಸುವಂತಿರಬೇಕು. ಅಂತಹ ವಿಷಯವಿದ್ದರೆ ತನ್ನಿ’’ ಎಂದರು ಅರಣ್ಯ ಅಧಿಕಾರಿಗಳು.
ಅರಣ್ಯ ಸಂರಕ್ಷಕರ ಈ ಸೂಕ್ಷ್ಮತೆ, ಕಾಳಜಿಗೆ ನಾನು ಶರಣಾದೆ. ನನ್ನ ಸಂಶೋಧನೆಗಿಂತ ಅವರ ಸಂರಕ್ಷಣಾ ಉದ್ದೇಶ ನನಗೆ ಮುಖ್ಯವಾಯಿತು. ಹೌದಲ್ಲ, ನಮ್ಮ ಪ್ರಾಚೀನ ಆಹಾರ ಸಂಸ್ಕೃತಿ ನೂರಕ್ಕೆ ನೂರರಷ್ಟು ಕಾಡನ್ನೇ ಅವಲಂಬಿಸಿತ್ತು. ವಲಸೆ ಸಂಸ್ಕೃತಿಗೆ ಜೀವಕೊಟ್ಟದ್ದೇ ಕಾಡು. ಮನುಷ್ಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ದಾಟುತ್ತಿದ್ದಾಗ ಅವನಿಗೆ ಆಹಾರ ಒದಗುತ್ತಿದ್ದ ಮೂಲ ಒಂದು ಬೇಟೆ ಮತ್ತೊಂದು ಕಂದಮೂಲಗಳು. ಬೇಟೆಯಾಡುವಾಗ ಕಾಣಿಸುವ ಪ್ರಾಣಿಗಳೆಲ್ಲ ಅವನ ಕಣ್ಣು ಕಿವಿ ಕರಣಗಳನ್ನು ಸೂಕ್ಷ್ಮಗೊಳಿಸುತ್ತಾ ಯುದ್ಧ ತಂತ್ರವನ್ನು ಹರಿತಗೊಳಿಸುತ್ತಾ ಹೋದರೆ ನೆಲಮೂಲದಲ್ಲಿ ನಿಗೂಢವಾಗಿದ್ದ ಕಂದಮೂಲಗಳು ಅವನ ಬುದ್ಧಿವಂತಿಕೆಗೆ ಸವಾಲಾಗಿದ್ದವು. ಕಾಡು ಒಳಗಡೆ ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು, ಎಂಬುದನ್ನು ಬಣ್ಣ, ರೂಪ, ಸೌಂದರ್ಯ ರಹಿತವಾಗಿ ಶೋಧಿಸುತ್ತಿದ್ದ ಕಾಲದ ಕಥೆ ಎಷ್ಟೊಂದು ರೋಚಕ.
ಅದರಲ್ಲೂ ಗೆಡ್ಡೆ ಗೆಣಸುಗಳಂತಹ ಸಸ್ಯಾವಲಂಬನೆಗಳು; ಅವುಗಳ ಮೂಲಕ್ಕೆ ಹೋದರೆ ಮಣ್ಣಿನ ಒಳಗಡೆ ಯಾವ ಸುಳಿವನ್ನೂ ಕೊಡದೆ ಗೆಡ್ಡೆಯ ರೂಪದಲ್ಲಿ ಹುದುಗಿರುತ್ತಿದ್ದ ಕಂದಮೂಲಗಳನ್ನು ಶೋಧಿಸುವ ಮನುಷ್ಯ ಜಾಣ್ಮೆಯನ್ನು ಗಮನಿಸಲೇಬೇಕು. ಅಲ್ಲಿ ಕಣ್ಣುಗಳಷ್ಟೇ ಅಲ್ಲ ಮೂಗು ಕೂಡ ಕೆಲಸ ಮಾಡುತ್ತದೆ. ಭೂಮಿಯಾಳದಲ್ಲಿ ಕಾಣಿಸದ ಮತ್ತು ಭೂಮಿಯ ಮೇಲೆ ಕಾಣಿಸುವ ಸಾವಿರಾರು ಸಸ್ಯಮೂಲಗಳನ್ನು ಯಾವುದು ವಿಷ? ಯಾವುದು ವಿಷ ಅಲ್ಲ? ಯಾವುದು ನಂಜು? ಯಾವುದು ಶೀತ? ಯಾವುದು ಹೊಟ್ಟೆಗೆ? ಯಾವುದು ಜ್ವರಕ್ಕೆ? ಯಾವುದು ತಂಬಳಿ, ಯಾವುದು ಗೊಜ್ಜು, ಯಾವುದು ಸಾರು, ಯಾವುದು ಪಲ್ಯ, ಯಾವುದು ಮದ್ದು, ಯಾವುದು ಸಿಹಿ, ಯಾವುದು ಕಹಿ, ಯಾವುದು ಘನ, ಯಾವುದು ದ್ರವ ಹೀಗೆ ಯಾವುದು ಯಾವುದಕ್ಕೆ ಎಂದೆಲ್ಲ ಶೋಧಿಸಿದ ನಮ್ಮ ಹಿರಿಯರು ವಿಜ್ಞಾನಿಗಳಲ್ಲ. ಸಸ್ಯಶಾಸ್ತ್ರ, ಬೀಜ ಶಾಸ್ತ್ರವನ್ನು ವಿಶ್ವವಿದ್ಯಾನಿಲಯದಲ್ಲಿ ಓದಿದವರಲ್ಲ. ಪ್ರತಿಯೊಂದನ್ನೂ ಅರೆದು ಅಳೆದು ಕುಡಿದು ಅನುಭವಿಸಿ ಪರಿಶೋಧಿಸಿದ ಪರಮ ಫಲಿತಗಳವು.
ಮೊನ್ನೆ ತಾನೆ ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ್ದ ಬೃಹತ್ ಮಟ್ಟದ ಗೆಡ್ಡೆ ಗೆಣಸು ಮತ್ತು ಸೊಪ್ಪುಗಳ ಮಹಾ ಮೇಳವನ್ನು ಗಮನಿಸಿದ್ದೆ. ಕೇರಳ ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ ಆಗಮಿಸಿದ ಒಂದಷ್ಟು ಗೆಡ್ಡೆ ಬೆಳೆಗಾರರು ಪೇರಿಸಿಟ್ಟ ಗೆಡ್ಡೆಗಳ ಬಣ್ಣ ಆಕಾರ ಗಾತ್ರ ಗಳನ್ನು ಗಮನಿಸಿದ್ದೆ. ಅದ್ಯಾವುದಕ್ಕೂ ವರ್ತಮಾನದ ನವ ನಾಗರಿಕ ರಂಗಿನ ನಾಜೂಕಿನ ಮನಸ್ಸು ಆಸೆ ಪಡುವ ಬಣ್ಣ ರೂಪಗಳಿರಲಿಲ್ಲ. ಸ್ವರೂಪ, ಸುವಾಸನೆ, ಬಣ್ಣಗಳೇ ಆಹಾರವಾಗುತ್ತಿರುವ ಕಾಲಧರ್ಮದಲ್ಲಿ ಇವು ಯಾವುದೂ ಅಲ್ಲದ ಗೆಡ್ಡೆ ಗೆಣಸುಗಳ ಶೋಧನೆಯ ಚರಿತ್ರೆ ಅದ್ಭುತವೇ ಸರಿ.
ನಾನು ನನ್ನ ಬಾಲ್ಯದ ಬಡತನದಲ್ಲಿ ನರೆ, ಈಯರ್ ಎಂಬಂತಹ ಗೆಡ್ಡೆಗಳನ್ನು ತಿಂದವನೇ. ನಮ್ಮೂರಿನ ಹರಿಜನ ಕಾಲನಿಯ ವಯಸ್ಸಾದ ಹೆಂಗಸರು ಮನೆ ಮುಂದಿನ ಮನೋಳಿ ಕಾಡಿಗೆ ಹೋಗಿ ಇವೆರಡನ್ನು ಹೊತ್ತು ತರುತ್ತಿದ್ದರು. ಅದರಲ್ಲೂ ನರೆ ಎನ್ನುವ ಒಂದು ಗೆಡ್ಡೆ ಆರೇಳು ಅಡಿಯಷ್ಟು ಭೂಮಿಯ ಆಳದಲ್ಲಿ ಉದ್ದಕ್ಕೆ ಮಲಗಿರುತ್ತಿತ್ತು. ಅದನ್ನು ತುಂಡರಿಸಿ ಅದರಡಿಗೆ ಸೊಪ್ಪಿಟ್ಟು ಕಟ್ಟಿಗೆ ಹೊರೆಯಂತೆ ಕಟ್ಟಿಕೊಂಡು ಬಡವಾಸಿ ಹೆಂಗಸರು ಮನೆ ಹಿಂದಿನ ದಾರಿಯಲ್ಲಿ ಸರಿಯುತ್ತಿದ್ದಾಗ ನಾನು ಅಡ್ಡ ನಿಂತು ಬೇಡಿದ್ದೂ ಇದೆ. ಈಯರ್ ಎನ್ನುವ ಮೂಲಿಕೆಯಂತೂ ನಾರು ಇಲ್ಲದ ಕುವೆಯನ್ನು ಹೋಲುವ ರುಚಿಯಾದ ಗೆಡ್ಡೆ. ಇಂಥ ಗೆಡ್ಡೆಯನ್ನು ತೊಳೆದು ಉಪ್ಪುಹಾಕಿ ಅಮ್ಮ ಬೇಯಿಸಿಕೊಟ್ಟದ್ದು, ನಾವು ಜಗಲಿಯಲ್ಲಿ ಕೂತು ಬಹಳ ಹೊತ್ತು ಆ ನಾರಿನಂಶದ ಗೆಡ್ಡೆಯನ್ನು ಜಬ್ಬಿದ್ದಿದೆ. ಅದು ಅದರ ಸಹಜ ರುಚಿಯೋ ಬಡತನದ ಹಸಿವೆಯೋ ನನಗಿನ್ನೂ ಖಚಿತಪಡಿಸಲು ಸಾಧ್ಯವಾಗುತ್ತಿಲ್ಲ
ಅಲ್ಲಿಂದ ಶುರುವಾಯಿತು ನೋಡಿ ನರೆ ಮತ್ತು ಈಯರ್‌ನ್ನು ನಮ್ಮ ಮನೆ ಸುತ್ತಲಿನ ಕಾಡಿನೊಳಗಡೆ ಹುಡುಕುವುದು. ಎಂಥಾ ಬುದ್ಧಿವಂತ ಬಳ್ಳಿಗಳಿವು ಗೊತ್ತಾ? ಸೊಂಪಾಗಿ ಭೂಮಿಯ ಮೇಲೆ ಬೆಳೆದಿದ್ದ ಬಳ್ಳಿಯಲ್ಲಿ ವಿಪರೀತ ಗೆಡ್ಡೆಗಳಿರಬಹುದು ಎಂದು ಒಕ್ಕಿದರೆ ಅಲ್ಲಿ ಗೆಡ್ಡೆಗಳೇ ಇರುತ್ತಿರಲಿಲ್ಲ. ಸತ್ತು ಹೋದ ಮೇಲ್ನೋಟಕ್ಕೆ ಕುರುಹು ಕೊಡದ ಒಣಕಲು ಬಳ್ಳಿ ಬಹಳಷ್ಟು ಪ್ರಮಾಣದಲ್ಲಿ ಗೆಡ್ಡೆಯನ್ನು ಹೊಂದಿರುತ್ತಿದ್ದವು.
ಗೆಡ್ಡೆ ಗೆಣಸುಗಳ ಕಥೆಯನ್ನು ನಮ್ಮ ಪುರಾಣ ಚರಿತ್ರೆ ಆಯುರ್ವೇದ ವಿಜ್ಞಾನ ನಿರಂತರ ದಾಖಲಿಸುತ್ತಾ ಬಂದಿದೆ. ರಾಮಾಯಣ ಮಹಾಭಾರತದ ಭಾಗಶಃ ಕ್ರಿಯಾರಂಗವೇ ಕಾಡು. ಕಾಡು ಒಳಗಡೆ ಬದುಕುವ ಋಷಿಮುನಿಗಳು, ವನವಾಸ ಅಜ್ಞಾತವಾಸದ ನೆಪದಲ್ಲಿ ಕಾಡು ಪ್ರವೇಶಿಸುವ ಅರಸು ಕುಲದವರು, ಜ್ಞಾನಾರ್ಜನೆಗೆ ಹೋದ ನಾಡು ನಗರ ಪ್ರಪಂಚದ ವಿದ್ಯಾರ್ಥಿಗಳು. ಇವರೆಲ್ಲ ಕಂದಮೂಲಗಳನ್ನು ಆಶ್ರಯಿಸಿಕೊಂಡಿದ್ದರು. ಭೂಮಿ ಆಳದ ಖನಿಜ ಜಲಮೂಲಗಳನ್ನು ಶೋಧಿಸುವ ಹಾಗೆ ಕಂದಮೂಲ ಮೂಲಿಕೆಗಳನ್ನು ಶೋಧಿಸುವ ಕ್ಷಕಿರಣದ ಕಣ್ಣುಗಳು ಕಾಡು ಮೂಲದ ಗ್ರಾಮ್ಯರಲ್ಲಿ ಇವತ್ತಿಗೂ ಇದೆ. ಜೇನು, ಗಿಡಮೂಲಿಕೆಗಳ, ನಾರು ಬೇರುಗಳ ಶೋಧನೆ ಎಂದರೆ ಅದು ನಮ್ಮನ್ನು ನಾವು ಶೋಧಿಸುವಂತಹ ಧ್ಯಾನ ಎಂದರ್ಥ. ಎಲ್ಲೋ ಇರುವ ಬಳ್ಳಿಯ ಬುಡ ಇನ್ನೆಲ್ಲಿಯೋ ಇನ್ಯಾವುದೋ ಮರದ ಬಡ್ಡೆಗಂಟಿಕೊಂಡು ಇಳಿದಿರುತ್ತದೆ. ಇಂಥ ಕಾಡಿನ ಅರಾಜಕತೆಯ ಸಾವಯವ ಬಂಧದಲ್ಲಿ ನಮ್ಮ ಹಿರಿಯರು ಶೋಧಿಸಿಟ್ಟ ಎಷ್ಟೋ ಕಾಡುಮೂಲ ಗೆಡ್ಡೆ ಗೆಣಸುಗಳನ್ನು ನಾಗರಿಕ ಪ್ರಪಂಚ ಇವತ್ತು ತಮ್ಮ ತುಂಡು ತುಂಡು ಕೃಷಿ ಭೂಮಿಯಲ್ಲಿ ಬೆಳೆಸಿ ನಮಗೆ ಸುಲಭಲಭ್ಯ ಗೊಳಿಸಿದೆ. ಸಿದ್ಧಿ, ಕುಣಬಿ, ಕುರುಬ, ಸೋಲಿಗ ಮುಂತಾದ ಕಾಡು ಜನಾಂಗಗಳ ಗೆಡ್ಡೆ ಜ್ಞಾನ ಅದ್ಭುತವಾದದ್ದು. ಕೇರಳದ ಒಬ್ಬ ಸಾಧಕ ಸುಮಾರು ಮುನ್ನೂರಕ್ಕಿಂತ ಹೆಚ್ಚು ಗೆಡ್ಡೆಗಳನ್ನು ಸಂಗ್ರಹಿಸಿ ಬೆಳೆಸಿ ಪ್ರದರ್ಶಿಸುತ್ತಾರೆ ಎಂದರೆ ಗೆಡ್ಡೆ ಜಗತ್ತಿನ ಅಗಾಧತೆಯನ್ನು ಗಮನಿಸಿ.
ವರ್ತಮಾನದ ಹೊಸ ಜನನ ಜಗತ್ತು ಆಸ್ಪತ್ರೆಯಲ್ಲೇ ಹುಟ್ಟಿ ಆಸ್ಪತ್ರೆಯಲ್ಲೇ ಬೆಳೆದು ಆಸ್ಪತ್ರೆಯಲ್ಲೇ ಸಾಯುವ ಕ್ರೂರ ಸನ್ನಿವೇಶದಲ್ಲಿದೆ. ವಿಷದ ಬಟ್ಟಲಲ್ಲಿ ತೇಲಿ ಬರುವ ಪ್ರತೀ ಅನ್ನವು ನಿಧಾನ ವಿಷವಾಗಿ ನಮ್ಮನ್ನು ಕೊಲ್ಲುತ್ತಿದೆ. ವಿಷ ಸುರಿಯದ ಈ ಜಗತ್ತಿನ ವಿಕೃತ ಮನಸ್ಥಿತಿಯ ಮನುಷ್ಯನ ಸಹವಾಸವೇ ಇಲ್ಲದೆ ಭೂಮಿ ಒಳಗಡೆ ಸುರಕ್ಷಿತವಾಗಿ ಬೆಳೆದು ಉಳಿದು ಮತ್ತೆ ವ್ಯಾಪಿಸಿ ಲಕ್ಷಾಂತರ ವರ್ಷದಿಂದ ಬಾಳಿದ ಇಂತಹ ಕಂದಮೂಲಗಳ ಅವಲಂಬನೆ ಹೆಚ್ಚಾದರೆ ಅದು ಜೀವ ರಕ್ಷಕವೂ ಹೌದು ಎನ್ನುವುದೇ ಮಂಗಳೂರು ಸಾವಯವ ಗ್ರಾಹಕ ಬಳಗದ ಉದ್ದೇಶವಾಗಿತ್ತು. ಅದಕ್ಕಾಗಿ ಅದು ಅಪರೂಪದ ಇಂಥ ಪ್ರದರ್ಶನ ಮತ್ತು ಆ ನೆಪದಲ್ಲಿ ವಿಚಾರಗೋಷ್ಠಿಯನ್ನು ಏರ್ಪಡಿಸಿತ್ತು.
ಹಣ್ಣು ತರಕಾರಿ ಆಹಾರವನ್ನು ರೂಪ ಬಣ್ಣ ಅಲಂಕಾರದ ದಾರಿಯಲ್ಲಿ ನಾವೀಗ ಖರೀದಿಸುತ್ತಿದ್ದೇವೆ. ಸೇವಿಸುತ್ತೇವೆ. ಎಂದೋ ಕೊಯ್ದ ಸೇಬು, ವಿಷದಲ್ಲಿ ಮುಳುಗೆದ್ದು ಬಂದ ದ್ರಾಕ್ಷಿ ಅವುಗಳು ನಮಗೆ ಬೆಲೆಯ ಮೂಲಕ ನಮಗೆ ಇಷ್ಟವಾಗುತ್ತದೆ. ಇನ್ನೂರು ಮುನ್ನೂರು ರೂಪಾಯಿ ಬೆಲೆಯ ದ್ರಾಕ್ಷಿ, ಸೇಬು ಮುಂದೆ ಮರಗೆಣಸು, ತುಪ್ಪೆ ಗೆಣಸು, ಶತಾವರಿ, ಹಾಲುಗೆಣಸು ಇವೆಲ್ಲ ನಮಗೆ ಸಪ್ಪೆಯಾಗುತ್ತವೆ. ಇಂಥ ನೆಲಮೂಲ ಗೆಡ್ಡೆ ಗೆಣಸುಗಳನ್ನು ಬೆಳೆಸುವ, ಕಾಪಿಡುವ ಮೂಲ ನಿವಾಸಿಗಳನ್ನು ಪ್ರದರ್ಶನದ ಅಂಗಳಕ್ಕೇ ತಂದು ಅವರ ಅನುಭವಗಳನ್ನು ದಾಖಲಿಸುವ, ಮುಂದಿನ ತಲೆಮಾರಿಗೆ ದಾಟಿಸುವ ಅಗತ್ಯ ಬಹಳ ಪ್ರಮುಖವಾದದ್ದು. ಕಾಡುಮೂಲ ಬುಡಕಟ್ಟು ಜನಾಂಗದವರ ಈ ಜ್ಞಾನ ನಮ್ಮ ಆಹಾರ ಭದ್ರತೆಗಷ್ಟೇ ಅಲ್ಲ ಆರೋಗ್ಯ ಭದ್ರತೆಗೂ ಬುನಾದಿ ಎಂಬುವುದು ನಿರ್ವಿವಾದ.