ಬಕ್ರೀದ್ ನಲ್ಲಿ ಆಡುಗಳನ್ನು 'ರಕ್ಷಿಸಿದ' ಜೈನರಿಗೆ ಒಂದು ಆತ್ಮೀಯ ಪತ್ರ
ನೀವು ಈ ಸೇವೆಯನ್ನು ವಿಸ್ತರಿಸಿದರೆ ಅದು ಮುಗಿಯದಷ್ಟು ದೊಡ್ಡ ಪಟ್ಟಿ ಈ ದೇಶದಲ್ಲಿದೆ: ದರ್ಶನ್ ಮೊಂಡ್ಕರ್
ಸಾಂದರ್ಭಿಕ ಚಿತ್ರ (PTI)
ಇತ್ತೀಚಿಗೆ ದಿಲ್ಲಿಯಲ್ಲಿ ಜೈನ ಸಮುದಾಯದ ಕೆಲವರು ಮುಸ್ಲಿಮರ ಹಾಗೆ ಉಡುಪು ಧರಿಸಿಕೊಂಡು ಹೋಗಿ 124 ಮೇಕೆಗಳನ್ನು ಖರೀದಿಸಿ ಅವುಗಳು ಬಕ್ರೀದ್ ಗೆ ಬಲಿಯಾಗದಂತೆ ತಡೆದರು ಎಂದು ಸುದ್ದಿಯಾಗಿತ್ತು. ಆ ಹಿನ್ನೆಲೆಯಲ್ಲಿ ಮುಂಬೈನ ಲೇಖಕ, ಸಾಮಾಜಿಕ ಕಾರ್ಯಕರ್ತ ದರ್ಶನ್ ಮೊಂಡ್ಕರ್ ಅವರು ಜೈನರಿಗೆ ಒಂದು ಪತ್ರ ಬರೆದಿದ್ದಾರೆ.
ದರ್ಶನ್ ಮೊಂಡ್ಕರ್ ಪತ್ರದಲ್ಲೇನಿದೆ?:
ಆತ್ಮೀಯ ಜೈನರೇ,
ಮೊತ್ತಮೊದಲನೆಯದಾಗಿ, ನೀವು ಅದ್ಭುತ ಕೆಲಸ ಮಾಡಿದ್ದೀರಿ. ನೀವು ಹಳೆ ದೆಹಲಿಯ ಮಾರುಕಟ್ಟೆಗೆ – ಮುಸ್ಲಿಮರಂತೆ ವೇಷ ಧರಿಸಿ – ಹೋಗಿ, 124 ಮೇಕೆಗಳನ್ನು ಬಕ್ರೀದ್ ಸಮಯದಲ್ಲಿ ಖರೀದಿಸಿ, ಅವುಗಳು ಬಲಿಯಾಗದಂತೆ ರಕ್ಷಿಸಿದ್ದೀರಿ. ಈಗ, ತಾರ್ಕಿಕವಾಗಿ ಚರ್ಚಿಸುವುದಾದರೆ, ಈದ್ ಸಮಯದಲ್ಲಿ ಅಥವಾ ಇನ್ನಾವುದೇ ಸಮಯದಲ್ಲಿ ಆಡುಗಳನ್ನು ಖರೀದಿಸಲು ಒಬ್ಬ ಮುಸಲ್ಮಾನನಂತೆ ವೇಷಭೂಷಣ ಧರಿಸಬೇಕಾಗಿಲ್ಲ. ನೀವು ಯಾವುದೇ ಮಾಂಸ ಮಾರುಕಟ್ಟೆಗೆ ಹೋಗಬಹುದು. ಅವರು ನಿಮಗೆ ಆಡನ್ನು ಮಾರುತ್ತಾರೆ; ಕಾರಣ: ಅದು ಅವರ ಉದ್ಯಮ ಮತ್ತು ಅವರ ಆದಾಯದ ಮೂಲವಾಗಿದೆ.
ಇದನ್ನು ಒಮ್ಮೆ ಪ್ರಯತ್ನಿಸಿ ನೋಡಿ...ನಿಮಗೆ ಆಶ್ಚರ್ಯವಾಗಬಹುದು. "ನೀವು ಮುಸ್ಲಿಮರಲ್ಲದೇ ಇರುವಾಗ ಮೇಕೆಯನ್ನು ಏಕೆ ಖರೀದಿಸುತ್ತೀರಿ?" ಎಂದು ಯಾರೂ ನಿಮ್ಮನ್ನು ಕೇಳುವುದಿಲ್ಲ.
ಈ ಕಡೆಗಣಿಸಲಾಗದ ಸತ್ಯದ ಕುರಿತು ನಿಮಗೆ ತಿಳಿದಿಲ್ಲದಿರಬಹುದು; ನಿಮ್ಮ ಸಮಾಜದಲ್ಲಿ ಯಾವುದೇ ಇತರ ಸಮುದಾಯಗಳಿಗೆ ಮನೆ ಖರೀದಿಸಲು ನೀವು ಎಂದಿಗೂ ಅನುಮತಿಸುವುದಿಲ್ಲ ಎಂದು ನನಗೆ ತಿಳಿದಿದೆ. ಆದ್ದರಿಂದ ನಿಮ್ಮ ಸಂಸ್ಕೃತಿಯನ್ನು ಹೊರತುಪಡಿಸಿ ಬೇರೆ ಸಂಸ್ಕೃತಿಗಳನ್ನು ತಿಳಿದುಕೊಳ್ಳದೇ ಇರೋದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ.
ಲಾಜಿಕ್ ಅನ್ನೋದು ಭಾರತದಲ್ಲಿ ವಿದ್ಯುಚ್ಛಕ್ತಿಯಂತೆ! ಪ್ರತಿಯೊಬ್ಬರಿಗೂ ಅದು ಸಿಗೋದಿಲ್ಲ, ; ಅಲ್ಲದೇ, ಖಂಡಿತವಾಗಿಯೂ ಎಲ್ಲಾ ಸಮಯದಲ್ಲೂ ಅದು ಇರೋದೇ ಇಲ್ಲ. ಈಗ ನೀವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬೇಕಾದ ಸಮಯ.
ನೀವು ಪಶ್ಚಿಮ ಮಹಾರಾಷ್ಟ್ರಕ್ಕೆ ಬಂದರೆ, ನಮ್ಮಲ್ಲಿ ಗ್ರಾಮದೇವತೆಯ ಜಾತ್ರೆ ಎಂದು ನಡೆಯುತ್ತೆ. ಈ ಯಾತ್ರೆಯ ಸಮಯದಲ್ಲಿ, ಗ್ರಾಮದೇವತೆಯನ್ನು ಪೂಜಿಸಿದ ನಂತರ ಬೃಹತ್ ಮಟನ್ ಭೋಜನವಿರುತ್ತದೆ.
ನನ್ನ ಅಂದಾಜಿನ ಪ್ರಕಾರ ಪ್ರತಿ ಮನೆಗೆ ಸುಮಾರು 4-5 ಮೇಕೆಗಳನ್ನು ಕಡಿದು ಇಡೀ ಗ್ರಾಮ ಮತ್ತು ಅವರ ಸಂಬಂಧಿಕರನ್ನು ಈ "ಪವಿತ್ರ ಭೋಜನ" ದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗುತ್ತದೆ. ಹಾಗಾಗಿ ನಿಮ್ಮ ಮುಂದಿನ ಭೇಟಿಯಲ್ಲಿ ಪಶ್ಚಿಮ ಮಹಾರಾಷ್ಟ್ರಕ್ಕೆ ಬಂದರೆ ನೀವು ಊಹಿಸುವುದಕ್ಕಿಂತ ಹೆಚ್ಚಿನ ಆಡುಗಳನ್ನು ನೀವು ಉಳಿಸಬಹುದು.
ನೀವು ಬರೋದಾದ್ರೆ ನಾನೇ ನಿಮ್ಮನ್ನು ಹತ್ತಿರದ ಬಸ್ ನಿಲ್ದಾಣದಿಂದ ಕರೆದುಕೊಂಡು ಈ ಎಲ್ಲಾ ಹಳ್ಳಿಗಳಿಗೆ ಕರೆದೊಯ್ಯುತ್ತೇನೆ ಎಂದು ಭರವಸೆ ನೀಡುತ್ತೇನೆ.
ನೀವು ಮೇಕೆಗಳನ್ನು ಉಳಿಸಲು ಪ್ರಯತ್ನಿಸಬಹುದು, ಆದರೆ ನಿಮ್ಮ ಕೆಲಸದಲ್ಲಿ ನೀವು ವಿಫಲರಾದರೆ ನಾನು ರುಚಿಕರವಾದ ಮಟನ್ ಊಟಕ್ಕಾಗಿ ಎದುರು ನೋಡುತ್ತೇನೆ. ನೀವು ವಿಫಲರಾಗಬೇಕೆಂದು ನಾನು ಖಂಡಿತ ಬಯಸುವುದಿಲ್ಲ, ದಯವಿಟ್ಟು ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ.
ನಿಮ್ಮ ಇದೇ ರೀತಿಯ ಸೇವೆಯ ಅಗತ್ಯವಿರುವ ಇತರ ಕೆಲವು ಸ್ಥಳಗಳು ಇಲ್ಲಿವೆ....
– ಪಶ್ಚಿಮ ಬಂಗಾಳದಲ್ಲಿ ಅವರು ಕಾಳಿ ಮಾತೆಗೆ ಆಡುಗಳನ್ನು ಬೋಲಿ (ಅಂದ್ರೆ ಬಲಿದಾನ್) ಎಂದು ಅರ್ಪಿಸುತ್ತಾರೆ; ವಿಶೇಷತಃ ಕಾಳಿಘಾಟ್ ದೇವಸ್ಥಾನದಲ್ಲಿ ನಿರಮಿಶ್ ಮಾಂಗ್ಶೋ (ಮಟನ್ ಕರಿ) ಅನ್ನು ಪವಿತ್ರ ಭೋಜನವಾಗಿ ನೀಡುತ್ತಾರೆ.
– ಮಹಾರಾಷ್ಟ್ರದ ಕರಾವಳಿಯ ಭಾಗದಲ್ಲಿ— ಅಲ್ಲಿ ಅಗ್ರಿ ಕೋಲಿ ಸಮುದಾಯವು ಗೌರಿ ದೇವಿಗೆ ಮಾಂಸ ಮತ್ತು ಮೀನುಗಳನ್ನು ಅರ್ಪಿಸುತ್ತದೆ
– ಹೆರಾತ್ ಅಥವಾ ಮಹಾಶಿವರಾತ್ರಿ ಸಮಯದಲ್ಲಿ ಕಾಶ್ಮೀರಿ ಪಂಡಿತರ ಮನೆಗಳಲ್ಲಿ ಶಿವ ಮತ್ತು ಪಾರ್ವತಿ ದೇವಿಯ ವಿವಾಹವನ್ನು ಆಚರಿಸುತ್ತಾರೆ, ಅವರು ಹಬ್ಬದ ಸಮಯದಲ್ಲಿ ಮೀನು ಮತ್ತು ಕುರಿಗಳನ್ನು ಅರ್ಪಿಸುತ್ತಾರೆ.
– ನಂತರ, ನೀವು ಇತರ ದೇಶಗಳಿಗೆ ಮಾಂಸವನ್ನು ರಫ್ತು ಮಾಡುವ ಅಲ್ ಕಬೀರ್ನಂತಹ ಕಂಪನಿಗಳನ್ನು ಖರೀದಿಸಬಹುದು ಮತ್ತು ಅವುಗಳನ್ನು ಮುಚ್ಚಿ ಬಿಡಬಹುದು.
ಈ ಮಾಂಸ ರಫ್ತು ಸಂಸ್ಥೆಗಳಲ್ಲಿ ಹೆಚ್ಚಿನವುಗಳ ಮಾಲಕರು ಯಾರೆಂದು ನನಗೆ ಯಾವುದೇ ಸುಳಿವು ಇಲ್ಲ..... ನಿಜವಾಗಿಯೂ ನನಗೆ ಗೊತ್ತಿಲ್ಲ.
ನೀವು ಈ ಸೇವೆ ವಿಸ್ತರಿಸಲು ಹೊರಟರೆ ಇಂತಹ ಸ್ಥಳಗಳ ಪಟ್ಟಿ ಮುಗಿಯುವುದಿಲ್ಲ. ನೀವು ಈಗಲೇ ಈ ಸೇವೆ ಪ್ರಾರಂಭಿಸಿದರೆ, ಮುಂದಿನ ವರ್ಷ ಇದೇ ವೇಳೆಗೆ ನೀವು ಭಾರತದಲ್ಲಿನ ಇಂತಹ ಎಲ್ಲಾ ಸ್ಥಳಗಳನ್ನು ಹಾಗು ಘಟನೆಗಳನ್ನು ಕವರ್ ಮಾಡಲು ಸಾಧ್ಯವಾಗುತ್ತದೆ.
ಮತ್ತೊಮ್ಮೆ ಹೇಳ್ತೀನಿ , ದೆಹಲಿಯಲ್ಲಿ ನೀವು ಮಾಡಿದ್ದು ನಿಜವಾಗಿಯೂ ಶ್ಲಾಘನೀಯ.
ಇನ್ನು ನೀವು ಮೇಕೆಗಳನ್ನು ಖರೀದಿಸಿದ್ದರಿಂದ ಮುಸ್ಲಿಮರಿಗೆ ಈದ್ಗೆ ತಿನ್ನಲು ಮೇಕೆ ಸಿಗದೇ ಇರಲಿಲ್ಲ. ಆದರೆ ಮೇಕೆ ಮಾರಾಟಗಾರರು ಹೆಚ್ಚುವರಿ ವ್ಯಾಪಾರ ಮಾಡಿದರು, ನಿಮಗೆ ಧನ್ಯವಾದಗಳು. ಅವರು ಸಾಮಾನ್ಯವಾಗಿ ಮಾರಾಟ ಮಾಡುವುದಕ್ಕಿಂತ 124 ಹೆಚ್ಚು ಮೇಕೆಗಳನ್ನು ಮಾರಾಟ ಮಾಡಿದರು.
ಆದ್ದರಿಂದ, ಪ್ರಿಯ ಜೈನ ಬಾಂಧವರೇ, ಆರ್ಥಿಕತೆಗೆ – ವಿಶೇಷತಃ ಅಂಚಿನಲ್ಲಿರುವ ಸಮುದಾಯದ ವ್ಯವಹಾರಗಳಿಗೆ ಸಹಾಯ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು.
ನಿಮ್ಮ ಸಂಸ್ಕೃತಿ ಮತ್ತು "ಶುದ್ಧತೆ"ಯ ಕುರಿತು ಜನರಿಗೆ ನೀವು ಕಲಿಸಲು ಪ್ರಾರಂಭಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ. ಅದಕ್ಕಾಗಿ ಎಲ್ಲ ಧರ್ಮದವರಿಗೂ ತಾರತಮ್ಯ ಮಾಡದೆ ನಿಮ್ಮ ಸೊಸೈಟಿಗಳಲ್ಲಿ ಮನೆಗಳನ್ನು ಖರೀದಿಸಲು ಅವಕಾಶ ಮಾಡಿಕೊಡಿ. ಇದರಿಂದ ಅವರು ನಿಮ್ಮಂತೆಯೇ ಆಗಬಹುದು.
ನಾನು ನೀವು ಮಾಡಿದ ಸೇವೆಗಾಗಿ ಇಲ್ಲಿ ನಿಂತು ಚಪ್ಪಾಳೆ ತಟ್ಟುತ್ತಿದ್ದೆ, ಆದರೆ ನಾನು ಕುಳಿತು ಬಿರಿಯಾನಿ ತಿನ್ನುತ್ತಿದ್ದೇನೆ. ಈಗ ಎದ್ದು ನಿಂತು ಚಪ್ಪಾಳೆ ತಟ್ಟಿದರೆ ಇಲ್ಲೆಲ್ಲ ಗಲೀಜಾಗಿ ಬಿಡುತ್ತೆ.
ಇನ್ನು ನೀವು ಖರೀದಿಸಿದ ಆ 124 ಆಡುಗಳಿಗೆ ಈಗ ಏನಾಗಲಿದೆ ಎಂದು ನಾನು ಯೋಚಿಸುತ್ತಿದ್ದೇನೆ. ನೀವು ಚೆನ್ನಾಗಿ ಸಾಕಿ, ಅವುಗಳು ಬಹಳಷ್ಟು ಮಕ್ಕಳನ್ನು ಹೆತ್ತು – ಅವು ಮಾಂಸದ ಆಡುಗಳಾಗಿ ಬೆಳೆದರೆ ಅವುಗಳನ್ನು ಮುಂದಿನ ಬಕ್ರೀದ್ ಸಮಯದಲ್ಲಿ ಪುನಃ ನೀವು – ಮುಸ್ಲಿಮರಂತೆ ವೇಷಭೂಷಣ ಧರಿಸಿ – ಖರೀದಿಸಬಹುದು.