Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಮ್ಮ ಸಂವಿಧಾನದ ಜೀವಾಳ: ಧರ್ಮನಿರಪೇಕ್ಷತೆ

ನಮ್ಮ ಸಂವಿಧಾನದ ಜೀವಾಳ: ಧರ್ಮನಿರಪೇಕ್ಷತೆ

ಜಿ.ಪಿ. ಬಸವರಾಜುಜಿ.ಪಿ. ಬಸವರಾಜು24 Feb 2024 11:30 AM IST
share
ನಮ್ಮ ಸಂವಿಧಾನದ ಜೀವಾಳ: ಧರ್ಮನಿರಪೇಕ್ಷತೆ
ಯಾವುದೇ ಧರ್ಮ ಎಷ್ಟೇ ದೊಡ್ಡದಾದರೂ ಅದು ಇತರ ಧರ್ಮಗಳ ಮೇಲೆ ಸವಾರಿ ಮಾಡಲು ಅವಕಾಶವನ್ನು ನಾವು ಒಪ್ಪಿಕೊಂಡಿರುವ ಮತ್ತು ನಮಗೆ ನಾವೇ ಕೊಟ್ಟುಕೊಂಡಿರುವ ಸಂವಿಧಾನ ನೀಡುವುದಿಲ್ಲ. ಎಲ್ಲ ಸಣ್ಣಪುಟ್ಟ ಸಮುದಾಯಗಳು, ಭಾಷಿಕ ಗುಂಪುಗಳು, ವಿಭಿನ್ನ ಧರ್ಮಗಳು ಜೊತೆಜೊತೆಯಲ್ಲಿಯೇ ಸಾಗಬೇಕು. ಇವುಗಳನ್ನು ಸಮಾನವಾಗಿ ಕಾಣುವ, ಇವುಗಳ ಘನತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಹೊಣೆ ಸರಕಾರದ್ದಾಗಿರುತ್ತವೆ.

ನಮ್ಮದು ಧರ್ಮನಿರಪೇಕ್ಷ ರಾಷ್ಟ್ರ. ಯಾವ ಪಕ್ಷದ ಸರಕಾರ ಅಧಿಕಾರಕ್ಕೆ ಬಂದರೂ, ಈ ಧರ್ಮನಿರಪೇಕ್ಷ ಎನ್ನುವ ಮಾತು ಬೇರೆ ಬೇರೆ ಅರ್ಥಗಳಿಗೆ ಎಡೆಮಾಡಿ ಕೊಡುವುದಿಲ್ಲ. ನಮ್ಮ ಸಂವಿಧಾನ ಇದನ್ನು ಸ್ಪಷ್ಟವಾಗಿ ತಿಳಿಸಿದೆ.

ಒಂದು ರಾಷ್ಟ್ರ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮ ಇರುವ ರಾಷ್ಟ್ರಗಳಲ್ಲಿ ಧರ್ಮನಿರಪೇಕ್ಷ ಎನ್ನುವ ಪದಕ್ಕೆ ಅರ್ಥ ಇಲ್ಲದೆ ಇರಬಹುದು. ಅಲ್ಲಿ ಒಂದು ಧರ್ಮ, ರಾಷ್ಟ್ರಧರ್ಮವಾಗಿ ಮೆರೆಯಬಹುದು. ಒಂದು ಭಾಷೆ ರಾಷ್ಟ್ರಭಾಷೆಯೂ ಆಗಿ ಗೌರವ ಪಡೆಯಬಹುದು. ಆದರೆ ನಮ್ಮ ರಾಷ್ಟ್ರದಲ್ಲಿ ಅದು ಸಾಧ್ಯವಾಗುವ ಮಾತಲ್ಲ. ಇಲ್ಲಿ ಯಾವ ಧರ್ಮವೂ ರಾಷ್ಟ್ರಧರ್ಮವಾಗಿ ಮಾನ್ಯವಾಗಲಾರದು. ಅನೇಕ ಧರ್ಮಗಳು ಇಲ್ಲಿ ನೂರಾರು ವರ್ಷಗಳಿಂದ ಜೊತೆಜೊತೆಯಲ್ಲಿ ನಡೆದಿವೆ. ನೂರಾರು ಸಮುದಾಯಗಳು, ಈ ಸಮುದಾಯದ ಭಾಷೆಗಳು, ಸಂಸ್ಕೃತಿಗಳು, ಆಚರಣೆಗಳು, ದೈವಗಳು ಈಗಲೂ ನಮ್ಮ ರಾಷ್ಟ್ರವನ್ನು ಭಾರತವಾಗಿ ರೂಪಿಸಿವೆ. ಇದು ಒಂದು ರಾಜ್ಯದ ರಾಷ್ಟ್ರವಲ್ಲ. ಹಲವು ರಾಜ್ಯಗಳು ಸೇರಿದ ಗಣರಾಜ್ಯ ಭಾರತ. ಈ ವೈವಿಧ್ಯಮಯ ರಾಷ್ಟ್ರವನ್ನು ಹೇಗೆ ಮುನ್ನಡೆಸಬೇಕು, ಯಾವ ನಿಯಮಗಳನ್ನು ಪಾಲಿಸಬೇಕು, ಹೇಗೆ ಎಲ್ಲ ಸಮುದಾಯಗಳಿಗೂ, ವ್ಯಕ್ತಿಗಳಿಗೂ ಸಮಾನತೆ, ಸಹೋದರತೆ, ಸ್ವಾತಂತ್ರ್ಯ ನ್ಯಾಯಯುತ ವಾಗಿ ಸಿಗಬೇಕು, ಸಮಾಜವಾದಿ ಆಶಯ ಮತ್ತು ಧರ್ಮನಿರಪೇಕ್ಷ ತತ್ವ ಹೇಗೆ ಪಾಲನೆಯಾಗಬೇಕು ಎಂಬುದನ್ನು ಸೂಚಿಸುವ ರಾಷ್ಟ್ರಗ್ರಂಥವೇ ನಮ್ಮ ಸಂವಿಧಾನ.

ವ್ಯಕ್ತಿಯ ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಹೊಣೆಗಾರಿಕೆಗಳು, ಸಹಬಾಳ್ವೆಯ ಸಾಮರಸ್ಯದ ಬದುಕನ್ನು ನಡೆಸುತ್ತ, ವೈಚಾರಿಕ ನೆಲೆಯಲ್ಲಿ ರಾಷ್ಟ್ರವನ್ನು ಮುನ್ನಡೆಸುವುದು ಹೇಗೆ ಎಂಬ ಸಂಕೀರ್ಣವಾದ ಪ್ರಶ್ನೆಗೆ ನೇರ, ದಿಟ್ಟ, ಸರಳ ಉತ್ತರಗಳು ನಮ್ಮ ಸಂವಿಧಾನದಲ್ಲಿವೆ. ಸಂವಿಧಾನ ಎಂಬುದು ಯಾರೋ ಕೊಟ್ಟ ಕೊಡುಗೆಯಲ್ಲ. ಸ್ವಾತಂತ್ರ್ಯ ಬಂದ ನಂತರ ನಮ್ಮ ಚಿಂತನೆಗಳನ್ನು, ಸಂವಾದಗಳನ್ನು, ಚರ್ಚೆಗಳನ್ನು ಒಟ್ಟುಗೂಡಿಸಿ ನಾವು ರೂಪಿಸಿದ ಗ್ರಂಥವೇ ನಮ್ಮ ಸಂವಿಧಾನ.

ಈ ಸಂವಿಧಾನ ರಚನೆಗೆ ಅನೇಕ ಮನಸ್ಸುಗಳು ಹಗಲಿರುಳು ದುಡಿದಿವೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಮುಂದಾಳಾಗಿದ್ದರು. ಜಗತ್ತಿನ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ನಮ್ಮ ರಾಷ್ಟ್ರದ ಸಂವಿಧಾನ ಹೇಗಿರಬೇಕೆಂಬ ದಿಕ್ಕನ್ನು ಸೂಚಿಸುವ ಪರಿಣತಿ ಕಾನೂನು ಪಂಡಿತ ಅಂಬೇಡ್ಕರ್ ಅವರಿಗೆ ಇತ್ತು. ಇದು ಕೇವಲ ಪಾಂಡಿತ್ಯದ ಪ್ರಶ್ನೆಯೂ ಆಗಿರಲಿಲ್ಲ. ಜಾತಿವ್ಯವಸ್ಥೆಯ ಸಮಾಜದಲ್ಲಿ ಅತ್ಯಂತ ಕೆಳ ಸ್ತರದ ಸಮುದಾಯದಲ್ಲಿ ಹುಟ್ಟಿದ ಅಂಬೇಡ್ಕರ್ ಅವರಿಗೆ ನೋವು, ಅಪಮಾನ, ಬಡತನ, ಹೋರಾಟದ ಬದುಕು ಅನುಭವದ ಭಾಗಗಳಾಗಿದ್ದವು. ಹೀಗಾಗಿ ಸಣ್ಣಪುಟ್ಟ ಸಮುದಾಯಗಳಿಗೆ, ತುಳಿತಕ್ಕೊಳಗಾದ ಜನತೆಗೆ ಸಮಾನತೆ, ಘನತೆಯ ಬದುಕು ಮತ್ತು ಮುನ್ನಡೆಯನ್ನು ತಂದುಕೊಡುವುದರ ಕಡೆಗೇ ಬಾಬಾಸಾಹೇಬ್ ಅವರ ಗಮನ ಕೇಂದ್ರೀಕೃತವಾಗಿತ್ತು. ಈ ಕಾರಣದಿಂದಾಗಿಯೇ ನಮ್ಮ ಸಂವಿಧಾನ ಸರ್ವರ ಉದಯದ ಪ್ರಶ್ನೆಯನ್ನೇ ಮುಖ್ಯ ಪ್ರಶ್ನೆಯನ್ನಾಗಿ ಮಾಡಿಕೊಂಡಿತ್ತು. ಭಾರತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಸುರಕ್ಷತೆ, ಸ್ವಾತಂತ್ರ್ಯ, ಸಮಾನತೆ ಮತ್ತು ಜಾತಿಪದ್ಧತಿಯಂಥ ಅನಿಷ್ಟಗಳಿಂದ ಬಿಡುಗಡೆ ನಮ್ಮ ಸಂವಿಧಾನದ ಮುಖ್ಯ ಆಶಯವಾಗಿ ರೂಪಪಡೆಯಿತು.

ನಮ್ಮ ಸಂವಿಧಾನಕ್ಕೆ ತಂದ 42ನೇ ತಿದ್ದುಪಡಿ (1976) ನಮ್ಮದು ಧರ್ಮನಿರಪೇಕ್ಷ ರಾಷ್ಟ್ರ ಎಂಬುದನ್ನು ಮತ್ತೊಮ್ಮೆ ದೃಢವಾಗಿ ಹೇಳಿತು. ಮುಂದೆ 1994ರಲ್ಲಿ ಎಸ್.ಆರ್. ಬೊಮ್ಮಾಯಿ ವರ್ಸಸ್ ಒಕ್ಕೂಟ ಸರಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ನಮ್ಮ ಸಂವಿಧಾನ ರಚನೆಯಲ್ಲಿಯೇ ಧರ್ಮನಿರಪೇಕ್ಷ ತತ್ವ ಅಡಕವಾಗಿದೆ ಎಂದು ಹೇಳಿ ಎಲ್ಲ ಅನುಮಾನಗಳನ್ನು ದೂರಮಾಡಿತು. ಸರಕಾರ ಭಾರತದಲ್ಲಿರುವ ಎಲ್ಲ ಧರ್ಮಗಳನ್ನು ಸಮಾನವಾಗಿ ನೋಡಬೇಕು, ಎಲ್ಲ ಧರ್ಮಗಳನ್ನೂ ಗುರುತಿಸಿ ಗೌರವಿಸಬೇಕು, ಯಾವುದೇ ಧರ್ಮವನ್ನು ತಾರತಮ್ಯದಿಂದ ಕಾಣಬಾರದು ಎಂಬ ಮಾತನ್ನೂ ಹೇಳಿತು. ಇದು ಸಂವಿಧಾನದ ಮುಖ್ಯ ಆಶಯವನ್ನು ಮತ್ತೆ ಮತ್ತೆ ಹೇಳುವುದಕ್ಕೆ ಈ ಪ್ರಕರಣ ದಾರಿಮಾಡಿಕೊಟ್ಟಿತು.

ಇಷ್ಟೆಲ್ಲ ಹಿನ್ನೆಲೆ ಇದ್ದರೂ, ನಮ್ಮ ಕೆಲವು ಭಾಜಪ ರಾಷ್ಟ್ರೀಯ ನಾಯಕರು ಮತ್ತೆ ಮತ್ತೆ ಹಿಂದೂ ಧರ್ಮವನ್ನು ಚರ್ಚೆಗೆ ಎಳೆದು ತರುತ್ತಿದ್ದಾರೆ. ಹಿಂದೂಗಳು ಹೆಚ್ಚಿನ ಪ್ರಮಾಣದಲ್ಲಿ (ಜನಸಂಖ್ಯೆಯ ಶೇ. 79.8) ಇರುವುದರಿಂದ ನಮ್ಮದು ಹಿಂದೂ ರಾಷ್ಟ್ರ, ನಮ್ಮ ರಾಷ್ಟ್ರೀಯ ಧರ್ಮ ಹಿಂದೂಧರ್ಮ ಎಂಬ ವಾದವನ್ನು ಮಂಡಿಸುತ್ತಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದು ಭಾಜಪ. ಈ ಪಕ್ಷದ ಸಿದ್ಧಾಂತ ಆರೆಸ್ಸೆಸ್ ಮತ್ತು ಹಿಂದೂ ಪರಿವಾರ ಸಂಘಟನೆಗಳ ಸಿದ್ಧಾಂತವಲ್ಲದೆ ಬೇರೆ ಅಲ್ಲ. ಈ ಹಿಂದುತ್ವ ಎಂಬ ಪರಿಭಾಷೆಯನ್ನು ರೂಪಿಸಿ ಚಲಾವಣೆಗೆ ತಂದವರು ಸಾವರ್ಕರ್. 1920ರಲ್ಲಿ. ಇದು ಆರೆಸ್ಸೆಸ್ ಹುಟ್ಟಿದ ವರ್ಷವೂ ಹೌದು. ಭಾಜಪ ಮತ್ತು ಪರಿವಾರ ಸಂಘಟನೆಗಳು ನಮ್ಮ ಸಂವಿಧಾನದ ಧರ್ಮನಿರಪೇಕ್ಷ ಸಿದ್ಧಾಂತವನ್ನು ಒಪ್ಪುವುದಿಲ್ಲ.

‘ಭಾರತೀಯವಾದ, ರಾಷ್ಟ್ರೀಯ ಸಂಸ್ಕೃತಿ ಮತ್ತು ಗುರುತುಗಳನ್ನು ಹಿಂದೂಧರ್ಮದಿಂದ ಬೇರ್ಪಡಿಸಲಾಗದು’ ಎನ್ನುವ ಮಾತನ್ನು ಆಡುತ್ತ, ಹಿಂದೂಧರ್ಮವನ್ನು ವೈಭವೀಕರಿಸುವ ಮತ್ತು ಇತರ ಧರ್ಮಗಳ ಮೇಲೆ ಹಿಂದೂಧರ್ಮವನ್ನು ಹೇರುವ ಹುನ್ನಾರ ನಡೆಯುತ್ತಿದೆ. ಭಾರತವನ್ನು 16ನೇ ಶತಮಾನದಿಂದ ಮೊಗಲ್ ದೊರೆಗಳು ಆಳಿದರೆಂಬ ಕಾರಣವನ್ನು ನೀಡಿ, ಮುಸ್ಲಿಮ್ ದ್ವೇಷವನ್ನು ಬೆಳೆಸಲು ನೋಡಲಾಗುತ್ತಿದೆ. ಇದೆಲ್ಲವನ್ನು ನಮ್ಮ ಸಂವಿಧಾನ ಒಪ್ಪುವುದಿಲ್ಲ. ಯಾವುದೇ ಧರ್ಮ ಎಷ್ಟೇ ದೊಡ್ಡದಾದರೂ ಅದು ಇತರ ಧರ್ಮಗಳ ಮೇಲೆ ಸವಾರಿ ಮಾಡಲು ಅವಕಾಶವನ್ನು ನಾವು ಒಪ್ಪಿಕೊಂಡಿರುವ ಮತ್ತು ನಮಗೆ ನಾವೇ ಕೊಟ್ಟುಕೊಂಡಿರುವ ಸಂವಿಧಾನ ನೀಡುವುದಿಲ್ಲ. ಎಲ್ಲ ಸಣ್ಣಪುಟ್ಟ ಸಮುದಾಯಗಳು, ಭಾಷಿಕ ಗುಂಪುಗಳು, ವಿಭಿನ್ನ ಧರ್ಮಗಳು ಜೊತೆಜೊತೆಯಲ್ಲಿಯೇ ಸಾಗಬೇಕು. ಇವುಗಳನ್ನು ಸಮಾನವಾಗಿ ಕಾಣುವ, ಇವುಗಳ ಘನತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಹೊಣೆ ಸರಕಾರದ್ದಾಗಿರುತ್ತದೆ.

ನಮ್ಮ ಸಂವಿಧಾನ ಆಡಳಿತ ನಡೆಸುವ ಸರಕಾರಗಳ ನಡೆಯನ್ನು ಸೂಚಿಸುತ್ತದೆ, ನಿಯಂತ್ರಿಸುತ್ತದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅದು ಸಂವಿಧಾನದ ಸೂಚನೆಗಳ ಮೇಲೆಯೇ ನಡೆಯಬೇಕು. ಬಲಪಂಥೀಯ, ಎಡಪಂಥೀಯ ಅಥವಾ ಇನ್ನಾವುದೇ ಸಿದ್ಧಾಂತದ ಪಕ್ಷವಾಗಿರಲಿ, ಅದು ಸಂವಿಧಾನಕ್ಕೆ ತಲೆಬಾಗಲೇ ಬೇಕು. ಇಲ್ಲವಾದರೆ ಸಹಬಾಳ್ವೆ, ಸಹನೆ, ಸಮಭಾವ, ಸರ್ವರ ಉದಯ ಸಾಧ್ಯವಾಗುವುದಿಲ್ಲ. ಇದು ಸಾಧ್ಯವಾಗದಿದ್ದರೆ ಪ್ರಜಾಪ್ರಭುತ್ವವೇ ಉಳಿಯುವುದಿಲ್ಲ. ಈ ಎಚ್ಚರ ಎಲ್ಲರಿಗೂ ಇರಬೇಕಾಗುತ್ತದೆ.

ರಾಜಕೀಯದಿಂದ ಧರ್ಮವನ್ನು ಎಂದೂ ಬೇರ್ಪಡಿಸಬಾರದು ಎಂದು ಗಾಂಧೀಜಿ ಹೇಳುತ್ತಿದ್ದರು. ಆದರೆ ಯಾವುದೇ ಒಂದು ಧರ್ಮವನ್ನು ರಾಜಕೀಯಕ್ಕೆ ಅವರು ತಳುಕು ಹಾಕುತ್ತಿರಲಿಲ್ಲ, ಹಿಂದೂ, ಮುಸ್ಲಿಮ್, ಸಿಖ್, ಕ್ರಿಶ್ಚಿಯನ್ ಇತ್ಯಾದಿ ಎಲ್ಲ ಧರ್ಮಗಳ ನೈತಿಕತೆಯೇ ನಿಜವಾದ ಧರ್ಮ; ಈ ಧರ್ಮದಿಂದಲೇ ರಾಜಕೀಯ ನಡೆಯಬೇಕು; ನೈತಿಕತೆ ಇಲ್ಲದ ರಾಜಕೀಯ ರಾಜಕೀಯವೇ ಅಲ್ಲ ಎಂದು ಗಾಂಧಿ ತಮ್ಮ ನಿಲುವನ್ನು ಮಂಡಿಸುತ್ತಿದ್ದರು. ತನ್ನದು ಹಿಂದೂಧರ್ಮವಾದರೂ ತಾನು ಎಲ್ಲ ಧರ್ಮಗಳನ್ನು ಗೌರವದಿಂದ ಮತ್ತು ಸಮಾನತೆಯಿಂದ ನೋಡುತ್ತೇನೆ ಎಂದೂ ಅವರು ಹೇಳುತ್ತಿದ್ದರು. ಹಾಗೆಯೇ ನಡೆದುಕೊಳ್ಳುತ್ತಿದ್ದರು.

ಇವತ್ತು ಧರ್ಮವನ್ನು ರಾಜಕೀಯಕ್ಕೆ ಎಳೆದು ತರುತ್ತಿರುವ ನಾಯಕರಿಗೆ ಗಾಂಧೀಜಿಯವರ ಈ ನಿಲುವು ಮತ್ತು ನೋಟಗಳು ಅರ್ಥವಾಗಬೇಕು. ಇಲ್ಲವಾದರೆ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯುವುದು ಕಷ್ಟ.

share
ಜಿ.ಪಿ. ಬಸವರಾಜು
ಜಿ.ಪಿ. ಬಸವರಾಜು
Next Story
X