ಮಹಾರಾಷ್ಟ್ರ: ಶಿಂದೆ-ಅಜಿತ್ ಪವಾರ್ ನಡುವೆ ಸ್ಥಾನ ಹೊಂದಾಣಿಕೆ ಸಾಧ್ಯವೇ?
ಸರಣಿ- 10
ಮಹಾರಾಷ್ಟ್ರದ ಒಟ್ಟು ಜನಸಂಖ್ಯೆ 11.23 ಕೋಟಿಗೂ ಅಧಿಕ. ಅದರಲ್ಲಿ ಹಿಂದೂಗಳು ಒಟ್ಟು ಜನಸಂಖ್ಯೆಯ ಶೇ.79.83, ಮುಸ್ಲಿಮರು ಶೇ.11.54, ಬೌದ್ಧರು ಶೇ.5.81. ಉಳಿದಂತೆ ಜೈನರು, ಕ್ರೈಸ್ತರು, ಸಿಖ್ಖರು ಮತ್ತಿತರ ಸಮುದಾಯದವರು ಇದ್ದಾರೆ.
ಇಲ್ಲಿನ ಒಟ್ಟು ಲೋಕಸಭಾ ಕ್ಷೇತ್ರಗಳು 48
ಮಹಾರಾಷ್ಟ್ರದ 2019ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಗಮನಿಸುವುದಾದರೆ, ಎನ್‌ಡಿಎ ಒಕ್ಕೂಟ 41 ಸ್ಥಾನಗಳನ್ನು ಗೆದ್ದಿತ್ತು. ಅದರಲ್ಲಿ ಬಿಜೆಪಿ ಗೆದ್ದಿದ್ದು 23 ಸ್ಥಾನಗಳಾದರೆ, ಶಿವಸೇನೆ 18 ಸ್ಥಾನಗಳು.ಇನ್ನು ಯುಪಿಎ ಗೆದ್ದಿದ್ದು 5 ಸ್ಥಾನಗಳಲ್ಲಿ ಮಾತ್ರ. ಅದರಲ್ಲಿ ಕಾಂಗ್ರೆಸ್ 1 ಸ್ಥಾನ ಮತ್ತು ಎನ್‌ಸಿಪಿ 4 ಸ್ಥಾನಗಳು.
2014ರ ಫಲಿತಾಂಶ ಕೂಡ ಹೆಚ್ಚು ಕಡಿಮೆ ಹೀಗೆಯೇ ಇತ್ತು. ಆಗ ಬಿಜೆಪಿ 23, ಶಿವಸೇನೆ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 2 ಮತ್ತು ಎನ್‌ಸಿಪಿ 4 ಸ್ಥಾನಗಳಲ್ಲಿ ಗೆದ್ದಿದ್ದವು.
ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಪಡೆದ ಮತಗಳ ಪ್ರಮಾಣ ಶೇ.50. 2014ರ ಚುನಾವಣೆಯಲ್ಲಿ ಅವೆರಡೂ ಪಡೆದಿದ್ದ ಮತಗಳ ಪ್ರಮಾಣ ಶೇ.48 ಇತ್ತು.
ಕಾಂಗ್ರೆಸ್ ಮತ್ತು ಎನ್‌ಸಿಪಿ 2019ರಲ್ಲಿ ಪಡೆದ ಮತಗಳ ಪ್ರಮಾಣ ಶೇ.32. 2014ರಲ್ಲಿ ಅವು ಪಡೆದಿದ್ದ ಮತಗಳ ಪ್ರಮಾಣ ಶೇ.34. ಎನ್‌ಡಿಎ ಮೈತ್ರಿಕೂಟದ ಮತ ಗಳಿಕೆಯಲ್ಲಿ ಏರಿಕೆ ಕಂಡಿದ್ದರೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಯ ಮತ ಹಂಚಿಕೆ ಕುಸಿದಿತ್ತು.
ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳಲ್ಲಿ 9 ಸ್ಥಾನಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿವೆ.
ಕಾಂಗ್ರೆಸ್ ಇಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯ ಭಾಗವಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಕೆಲ ತಿಂಗಳ ಹಿಂದೆಯೇ ಘೋಷಿಸಿದೆ. ಎನ್‌ಸಿಪಿ ವಿಭಜನೆಯ ನಂತರ ನಡೆದ ಕಾರ್ಯತಂತ್ರ ಕುರಿತ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಿರುವುದು ವರದಿಯಾಗಿತ್ತು
ಇನ್ನೊಂದೆಡೆ ಬಿಜೆಪಿ ತನ್ನ ಮೈತ್ರಿ ಪಕ್ಷಗಳೊಡನೆ ಸೀಟು ಹಂಚಿಕೆ ಹೆಚ್ಚುಕಡಿಮೆ ಅಂತಿಮಗೊಂಡಿರುವುದಾಗಿ ಹೇಳಿದೆ.
ಬಿಜೆಪಿ, ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಒಟ್ಟಾಗಿ ಕಣಕ್ಕಿಳಿಯಲಿವೆ. ಬಿಜೆಪಿ 26 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಶಿವಸೇನೆ ಮತ್ತು ಎನ್‌ಸಿಪಿ 22 ಸ್ಥಾನಗಳಲ್ಲಿ ಕಣಕ್ಕಿಳಿಯಲಿವೆ ಎನ್ನಲಾಗಿದೆ.
ಈ ನಡುವೆ ಶಿಂದೆ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮಧ್ಯೆ ಸೀಟು ಹಂಚಿಕೆ ವಿಚಾರವಾಗಿ ಬಿರುಕು ಮೂಡಿದೆ ಎಂಬ ವರದಿಗಳೂ ಇವೆ. ಬಿಜೆಪಿ ನಾಯಕ, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಇದನ್ನು ಅಲ್ಲಗಳೆಯುತ್ತಾರಾದರೂ, ವಾಸ್ತವ ಬೇರೆಯೇ ಇದೆ ಎನ್ನುತ್ತಿವೆ ವರದಿಗಳು.
22 ಸ್ಥಾನಗಳನ್ನು ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಶಿವಸೇನೆ ಬಣ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಹೇಗೆ ಹಂಚಿಕೊಳ್ಳಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.
11 ಸ್ಥಾನಗಳಲ್ಲಿ ಸ್ಪರ್ಧಿಸಲು ಅಜಿತ್ ಪವಾರ್ ಪಾಳಯ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಮಸ್ಯೆಯಿರುವುದು, ಈಗಾಗಲೇ ಶಿಂದೆ ಬಣ 13 ಹಾಲಿ ಸಂಸದರನ್ನು ಹೊಂದಿದ್ದು, ಅಜಿತ್ ಪವಾರ್ ಬಣ ರಾಯಗಢ ಕ್ಷೇತ್ರದಿಂದ ಮಾತ್ರ ಒಬ್ಬ ಸಂಸದರನ್ನು ಹೊಂದಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ವಿಭಜನೆಗೂ ಮೊದಲು ಶಿವಸೇನೆ ಗೆದ್ದಿದ್ದ ಮಾವಲ್, ಕೊಲ್ಹಾಪುರ ಮತ್ತು ನಾಸಿಕ್ ಈ ಮೂರೂ ಕ್ಷೇತ್ರಗಳು ತನಗೆ ಬೇಕು ಎಂದು ಅಜಿತ್ ಪವಾರ್ ಬಣ ಪಟ್ಟು ಹಿಡಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಹೆಚ್ಚುವರಿಯಾಗಿ, ಈಗ ಉದ್ಧವ್ ಠಾಕ್ರೆಯವರ ಶಿವಸೇನೆ (ಯುಬಿಟಿ) ವಶದಲ್ಲಿರುವ ಪರ್ಭಾನಿ, ಧಾರಶಿವ್ (ಹಳೆಯ ಉಸ್ಮಾನಾಬಾದ್) ಮತ್ತು ದಕ್ಷಿಣ ಮುಂಬೈಯಂತಹ ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಒತ್ತಡವನ್ನೂ ಅಜಿತ್ ಪವಾರ್ ಬಣ ಹಾಕುತ್ತಿದೆ ಎಂದು ವರದಿಗಳು ಹೇಳುತ್ತಿವೆ.
ಪ್ರಮುಖ ಕ್ಷೇತ್ರಗಳನ್ನು ಗೆಲುವತ್ತ ಅಜಿತ್ ಪವಾರ್ ಬಣ ಕಣ್ಣಿಟ್ಟಿದೆ. ಉದಾಹರಣೆಗೆ, ಮಾವಲ್ ಲೋಕಸಭಾ ಕ್ಷೇತ್ರದಲ್ಲಿ, ಎನ್‌ಸಿಪಿ ಎರಡು ಅಸೆಂಬ್ಲಿ ಸ್ಥಾನಗಳನ್ನು ಹೊಂದಿದೆ, ಬಿಜೆಪಿ ಮೂರು ಮತ್ತು ಶಿಂದೆ ಅವರ ಶಿವಸೇನೆ ಒಂದು ಸ್ಥಾನವನ್ನು ಹೊಂದಿದೆ.
ಹಾಗೆಯೇ ಕೊಲ್ಹಾಪುರದಲ್ಲಿ ಎನ್‌ಸಿಪಿ ಎರಡು, ಕಾಂಗ್ರೆಸ್ ಮೂರು ಮತ್ತು ಶಿಂದೆ ಶಿವಸೇನೆ ಒಂದು ವಿಧಾನಸಭಾ ಸ್ಥಾನವನ್ನು ಹೊಂದಿದೆ.
ನಾಸಿಕ್ ಕ್ಷೇತ್ರದಲ್ಲಿ ಎನ್‌ಸಿಪಿ ಮತ್ತು ಬಿಜೆಪಿ ತಲಾ ಮೂರು ಅಸೆಂಬ್ಲಿ ಸ್ಥಾನಗಳನ್ನು ಹೊಂದಿವೆ, ಕಾಂಗ್ರೆಸ್ ಒಂದು ಸ್ಥಾನ ಹೊಂದಿದ್ದರೆ, ಶಿಂದೆಯ ಶಿವಸೇನೆ ಅಲ್ಲಿ ಸ್ಥಾನ ಹೊಂದಿಲ್ಲ.
ಪ್ರಸಕ್ತ ಶಿವಸೇನೆ ಬಳಿಯಿರುವ ಮೂರು ಲೋಕಸಭಾ ಸ್ಥಾನಗಳ ಮೇಲೆ ಹಿಡಿತ ಸಾಧಿಸಲು ಅಜಿತ್ ಪವಾರ್ ಬಣ ವಿಧಾನಸಭೆಯಲ್ಲಿನ ತನ್ನ ಸ್ಥಾನಗಳಲ್ಲಿನ ಬಲವನ್ನು ಅಸ್ತ್ರವಾಗಿ ಬಳಸುತ್ತಿದೆ ಎನ್ನಲಾಗಿದೆ. ಆದರೆ, ಪವಾರ್ ಪಾಳಯಕ್ಕೆ ಯಾವುದೇ ಲೋಕಸಭಾ ಸ್ಥಾನಗಳನ್ನು ಬಿಟ್ಟುಕೊಡಲು ಏಕನಾಥ ಶಿಂದೆ ಸಿದ್ಧರಿಲ್ಲ ಎಂದು ವರದಿಗಳು ಹೇಳುತ್ತಿವೆ. ಆದರೆ, ರಾಜ್ಯದಲ್ಲಿನ ಆಡಳಿತಾರೂಢ ಮೈತ್ರಿ 45 ಲೋಕಸಭಾ ಸ್ಥಾನಗಳನ್ನು ಖಚಿತವಾಗಿ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಸಿಎಂ ಶಿಂದೆ ವ್ಯಕ್ತಪಡಿಸಿದ್ದಾರೆ.
ಪವಾರ್ ಜೊತೆಗಿನ ಭಿನ್ನಮತದ ಬಗ್ಗೆ ಅವರು ಬಹಿರಂಗವಾಗಿ ಏನನ್ನೂ ಹೇಳದೆ, ಮಹಾಯುತಿ (ಮಹಾ ಮೈತ್ರಿ) ಒಟ್ಟಾಗಿ ಚುನಾವಣೆ ಎದುರಿಸಲಿದೆ ಎಂದಿದ್ಧಾರೆ.
ಇವೆಲ್ಲದರ ನಡುವೆಯೇ, ಲೋಕಸಭೆ ಚುನಾವಣೆಯ ಜೊತೆಗೇ ರಾಜ್ಯ ವಿಧಾನಸಭೆ ಚುನಾವಣೆಯೂ ನಡೆಯಬಹುದು ಎಂಬ ವದಂತಿಗಳಿವೆ. ಮಹಾರಾಷ್ಟ್ರ ಬಿಜೆಪಿ ಕೂಡ ಅದನ್ನು ಬಯಸಿದೆ.
ಲೋಕಸಭೆ ಚುನಾವಣೆ ಜೊತೆಗೇ ಮಹಾರಾಷ್ಟ್ರ ವಿಧಾನಸಭೆಗೂ ಚುನಾವಣೆ ನಡೆಸಲು ಕೇಂದ್ರ ನಿರ್ಧರಿಸಲೂಬಹುದು ಎಂದಿರುವ ಉದ್ಧವ್ ಠಾಕ್ರೆ, ತಮ್ಮ ಕಾರ್ಯಕರ್ತರಿಗೆ ತಯಾರಾಗಿರಲು ಸೂಚಿಸಿರುವುದು ವರದಿಯಾಗಿದೆ.
ಆದರೆ, ಲೋಕಸಭಾ ಸ್ಥಾನಗಳ ಲೆಕ್ಕದಲ್ಲಿ ಉತ್ತರ ಪ್ರದೇಶದ ನಂತರದ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿನ ರಾಜಕಾರಣ ವಿವಿಧ ರಾಜಕೀಯ ನಾಯಕರು ಕೊಡುತ್ತಿರುವ ಮೇಲುಮೇಲಿನ ಹೇಳಿಕೆಗಳಷ್ಟೇ ಸರಳವಾಗಿಲ್ಲ ಎಂಬುದಂತೂ ನಿಜ.
ವಿಶ್ಲೇಷಕರು ಹೇಳುವ ಪ್ರಕಾರ, ಮಹಾರಾಷ್ಟ್ರದಲ್ಲಿ ರಾಜಕೀಯ ಒಳಸಂಚು ತೀವ್ರ ಮಟ್ಟದಲ್ಲಿದೆ.
ಲೋಕಸಭಾ ಚುನಾವಣೆ ನಡೆಯುವ ಕಡೆಯ ಕ್ಷಣದವರೆಗೂ ಅಲ್ಲಿ ಯಾವುದೇ ರೀತಿಯ ರಾಜಕೀಯ ತಿರುವುಗಳ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ.
ಅಜಿತ್ ಪವಾರ್ ಅಧಿಕಾರಕ್ಕಾಗಿ ಆಸೆಪಡುವುದರ ಜೊತೆಗೇ ಈ.ಡಿ. ತೂಗುಕತ್ತಿಯ ಭಯವೂ ಬಿಜೆಪಿ ಜೊತೆ ಕೈಜೋಡಿಸುವುದಕ್ಕೆ ಕಾರಣವಾಗಿದೆ.
ಹಾಗೆಯೇ ಶರದ್ ಪವಾರ್ ಅಪ್ತ ಪ್ರಫುಲ್ ಪಟೇಲ್ ಯಾವತ್ತಾದರೂ ಶರದ್ ಪವಾರ್ ಅವರಿಗೆ ಕೈಕೊಡಬಹುದೆಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಈ.ಡಿ. ಭಯ ಅವರ ರಾಜಕೀಯ ಹಾದಿಯನ್ನು ಬದಲಿಸಿತೆಂಬುದು ಸುಳ್ಳಲ್ಲ.
ಮೋದಿ 70 ಸಾವಿರ ಕೋಟಿ ರೂ. ಭ್ರಷ್ಟಾಚಾರ ಹಗರಣವನ್ನು ಪ್ರಸ್ತಾಪಿಸುತ್ತ, ಎನ್‌ಸಿಪಿಯನ್ನು ‘ಹಗರಣದ ಪಾರ್ಟಿ’ ಎಂದು ಹೇಳಿದ್ದೇ ಮಹಾರಾಷ್ಟ್ರದ ರಾಜಕಾರಣದಲ್ಲಿ ಹಲವು ಬದಲಾವಣೆಗಳು ಆಗಿಹೋಗಿದ್ದವು.
ಮಹಾರಾಷ್ಟ್ರವನ್ನು ಈಗಾಗಲೇ ಮಹಾ ವಿಕಾಸ್ ಅಘಾಡಿ ಸರಕಾರ ಬೀಳಿಸಿ ಬಿಜೆಪಿ ಹೇಗೆ ತನ್ನ ವಶಕ್ಕೆ ತೆಗೆದುಕೊಂಡಿತು ಎಂಬುದನ್ನು ನೋಡಿದ್ದೇವೆ. ಆದರೆ ಆಟ ಅಲ್ಲಿಗೇ ನಿಂತಿಲ್ಲ. ಲೋಕಸಭೆ ಚುನಾವಣೆಯವರೆಗೂ ಏನು ಬೇಕಾದರೂ ಆಗಬಹುದು ಮತ್ತು ಇದು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಎದುರಿನ ಮತ್ತೊಂದು ಸವಾಲು ಕೂಡ ಆಗಿದೆ.