ಮಹಾರಾಷ್ಟ್ರ ಇವಿಎಂ ಪವಾಡ!?
ಆರೂವರೆ ಗಂಟೆಗಳಲ್ಲಿ 76 ಲಕ್ಷ ಜನ ಮತ ಚಲಾವಣೆ ಹೇಗೆ ಸಾಧ್ಯವಾಯಿತು? ಎನ್ನುವ ಪರಕಾಲ ಪ್ರಭಾಕರ್‌ರ ಪ್ರಶ್ನೆಗೆ ಉತ್ತರವಿದೆಯೇ?
ಮಹಾರಾಷ್ಟ್ರದಲ್ಲಿ ಚುನಾವಣೆ ಮುಗಿದ ನಂತರ ಚುನಾವಣಾ ಆಯೋಗ ಪ್ರಕಟಿಸಿದ್ದ ಮತದಾನ ಪ್ರಮಾಣಕ್ಕೂ ಅದೇ ರಾತ್ರಿ ಪ್ರಕಟಿಸಲಾದ ಪ್ರಮಾಣಕ್ಕೂ ಭಾರೀ ವ್ಯತ್ಯಾಸವಿದ್ದು, ಕೆಲವೇ ಗಂಟೆಗಳಲ್ಲಿ ಅಂಥ ಅಗಾಧ ವ್ಯತ್ಯಾಸ ಆದದ್ದು ಹೇಗೆ ಎಂಬ ಪ್ರಶ್ನೆಯೆದ್ದಿದೆ. ಮತದಾನದ ಶೇಕಡಾವಾರು ಅಂಕಿಅಂಶಗಳ ಬಗ್ಗೆ ಅನುಮಾನಗಳು ಎದ್ದಿವೆ.
ದಿನವಿಡೀ ನಡೆದ ಮತದಾನ ಪ್ರಮಾಣಕ್ಕೂ, ಮತದಾನ ಅಧಿಕೃತವಾಗಿ ಮುಗಿದ ನಂತರದ ಕೆಲವೇ ಗಂಟೆಗಳಲ್ಲಿನ ಬದಲಾದ ಮತದಾನ ಪ್ರಮಾಣಕ್ಕೂ ನಡುವಿನ ಅಂತರ ನೋಡಿದರೆ, ಅದು ಯಾವ ಲೆಕ್ಕದಲ್ಲಾದರೂ ಆಗಿರುವುದು ಸಾಧ್ಯವೆ ಎಂಬ ಪ್ರಶ್ನೆ ತಲೆದೋರಿದೆ.
ಈ ವಿಚಿತ್ರ ಲೆಕ್ಕಾಚಾರದ ತಾರ್ಕಿಕತೆಯನ್ನು ಅರ್ಥಶಾಸ್ತ್ರಜ್ಞ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಪರಕಾಲ ಪ್ರಭಾಕರ್ ಪ್ರಶ್ನಿಸಿದ್ಧಾರೆ.
ಚುನಾವಣಾ ಆಯೋಗ ನೀಡಿದ ಮತದಾನ ಪ್ರಮಾಣ ಕುರಿತ ಅಂಕಿಅಂಶಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ದಿ ವೈರ್’ಗಾಗಿ ಕರಣ್ ಥಾಪರ್‌ಗೆ ನೀಡಿರುವ ಸಂದರ್ಶನದಲ್ಲಿ ಅವರು ಇದರ ಹಿಂದಿನ ಆಟವನ್ನು ವಿಶ್ಲೇಷಿಸಿದ್ದಾರೆ.
ಆಯೋಗ ಪ್ರಕಟಿಸಿದ ಅಧಿಕೃತ ಮತದಾನದ ಅಂಕಿಅಂಶಗಳಲ್ಲಿನ ವಿವರಿಸಲಾಗದ ಮತ್ತು ಅಸ್ಪಷ್ಟ ವ್ಯತ್ಯಾಸಗಳನ್ನು ಪರಕಾಲ ಪ್ರಭಾಕರ್ ಪ್ರಶ್ನೆ ಮಾಡಿದ್ದಾರೆ. ಇದು ಜನಾದೇಶದ ನ್ಯಾಯಸಮ್ಮತತೆಯ ಬಗ್ಗೆಯೇ ಅನುಮಾನ ಮೂಡಿಸುವುದನ್ನು ಅವರು ತೋರಿಸಿದ್ದಾರೆ.
ನವೆಂಬರ್ 20ರಂದು ಸಂಜೆ 5 ಗಂಟೆಗೆ ಮತದಾನ ಮುಕ್ತಾಯಗೊಂಡಾಗ ಶೇ.58.22ರಷ್ಟು ಮತದಾನವಾಗಿತ್ತು. ಸಂಜೆ 5ರ ಹೊತ್ತಿಗೆ ಸರದಿಯಲ್ಲಿನ್ನೂ ನಿಂತಿದ್ದ ಮತದಾರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿದ ನಂತರ ಅದೇ ರಾತ್ರಿ 11:30ರ ಹೊತ್ತಿಗೆ ಆಯೋಗ ಮತ್ತೆ ಮತದಾನ ಪ್ರಮಾಣವನ್ನು ಪ್ರಕಟಿಸುತ್ತದೆ. ಅದರ ಪ್ರಕಾರ ಮತದಾನ ಪ್ರಮಾಣ ಶೇ.65.02ಕ್ಕೆ ಏರಿತ್ತು.
ಆನಂತರ, ನವೆಂಬರ್ 23ರಂದು ಎಣಿಕೆ ಪ್ರಾರಂಭವಾಗುವ ಕೆಲ ಗಂಟೆಗಳ ಮೊದಲು ಅದನ್ನು ಶೇ.66.05 ಎಂದು ತೋರಿಸಲಾಗಿತ್ತು. ಅಂದರೆ ಸಂಜೆ 5 ಗಂಟೆಗೆ ಮತದಾನ ಮುಗಿದ ನಂತರ ಶೇ.7.83ರಷ್ಟು ಮತದಾನವಾಗಿದೆ.
ಅದರ ಪ್ರಕಾರ, ಎಷ್ಟು ಜನರು ಎಂದು ನೋಡಿದರೆ ಜನರ ಸಂಖ್ಯೆಯಲ್ಲಿ ಸುಮಾರು 76 ಲಕ್ಷ ಹೆಚ್ಚಳವಾಗಿದೆ ಎಂದು ಪರಕಾಲ ಪ್ರಭಾಕರ್ ಅಂದಾಜಿಸಿದ್ದಾರೆ.
ಅದೇ ದಿನ ಸಂಜೆ 5 ಗಂಟೆಯಿಂದ 11:30 ಗಂಟೆಯವರೆಗೆ ಸರತಿ ಸಾಲಿನಲ್ಲಿ ನಿಂತಿದ್ದ ಅಂತಿಮ ವ್ಯಕ್ತಿ ಮತ ಚಲಾಯಿಸುವ ಮತದಾನದ ನಡುವಿನ ಆರು ಗಂಟೆಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರು ಮತದಾನ ಮಾಡುವುದು ಸಾಧ್ಯವಾಯಿತೇ?
ಇದು ನಿಜವಾಗಿ ಎಷ್ಟು ಅಸಾಧ್ಯವಾದದ್ದು ಎಂಬುದನ್ನು ಪರಕಾಲ ಪ್ರಭಾಕರ್ ಸರಳ ಉದಾಹರಣೆಯ ಮೂಲಕ ವಿವರಿಸಿದ್ದಾರೆ.
ಸಂಜೆ 5 ಗಂಟೆಗೆ ಮತದಾನ ಮುಗಿದಾಗ ಒಂದು ಬೂತ್‌ನಲ್ಲಿ 1,000 ಜನರು ಮತ ಚಲಾಯಿಸಲು ಕಾಯುತ್ತಿದ್ದರು ಎಂದು ಅಂದುಕೊಳ್ಳೋಣ. ಅವರು ಸಂಜೆ 5 ಗಂಟೆಯ ಮೊದಲು ಬಂದಿದ್ದರಿಂದ ಅವರಿಗೆ ಮತದಾನದ ಹಕ್ಕಿದೆ.
ಪ್ರತೀ ವ್ಯಕ್ತಿಗೆ ಮತ ಹಾಕಲು ಒಂದು ನಿಮಿಷ ಬೇಕು ಎಂದುಕೊಳ್ಳೋಣ. (ನಿಜವಾಗಿ ಒಂದು ನಿಮಿಷ ಸಾಕಾಗುವುದಿಲ್ಲ.)
ಆ ಲೆಕ್ಕದಲ್ಲಿ, ಸರದಿಯಲ್ಲಿದ್ದ 1,000 ಜನರು ಮತ ಚಲಾಯಿಸಲು 1,000 ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ.
ಒಂದು ಸಾವಿರ ನಿಮಿಷಗಳೆಂದರೆ, 16:6 ಗಂಟೆಗಳು.
ಆದರೆ, ಸಂಜೆ 5ರಿಂದ 11:30ರವರೆಗಿನ ಅವಧಿಯೆಂದರೆ ಆರೂವರೆ ಗಂಟೆಗಳು ಮಾತ್ರ.
ಹಾಗಾಗಿ ಆ ಸಮಯದಲ್ಲಿ 1,000 ಜನರು ಮತ ಚಲಾಯಿಸಲು ಸಾಧ್ಯವೇ ಇಲ್ಲ. ಹೀಗಿರುವಾಗ 76 ಲಕ್ಷ ಜನ ಮತ ಚಲಾಯಿಸುವುದು ಹೇಗೆ ಸಾಧ್ಯವಾಯಿತು? ಇದು ಪರಕಾಲ ಪ್ರಭಾಕರ್ ಎತ್ತಿರುವ ಪ್ರಶ್ನೆ.
ಇದರ ಬಗ್ಗೆ ಚುನಾವಣಾ ಆಯೋಗದಿಂದ ವಿವರಣೆ ಕೇಳಲಾಗಿದೆ. ಇವಿಎಂ ಕುರಿತ ಅನುಮಾನಗಳನ್ನು, ಆರೋಪಗಳನ್ನು ಕೂಡ ತಳ್ಳಿಹಾಕುವ ಆಯೋಗ, ಈ ಪ್ರಶ್ನೆಗೆ ಉತ್ತರಿಸುವುದೇ?
ಹರ್ಯಾಣ ಚುನಾವಣೆ ಫಲಿತಾಂಶದ ಹೊತ್ತಿನಲ್ಲೂ ವಿಪಕ್ಷಗಳು ಅದರ ಬಗ್ಗೆ ಪ್ರಶ್ನೆ ಎತ್ತಿದ್ದವು. ಆದರೆ ಪ್ರಶ್ನಿಸಿದ್ದೇ ತಪ್ಪು ಎನ್ನುವ ಹಾಗೆ ಆಯೋಗದ ಪ್ರತಿಕ್ರಿಯೆಯಿತ್ತು. ಈಗ ಮಹಾರಾಷ್ಟ್ರದಲ್ಲೂ ಅಂತಿಮವಾಗಿ ಅನುಮಾನವೇ ಉಳಿದಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮೊದಲು ಪ್ರಕಟಿಸಲಾದ ಮತದಾನದ ಅಂಕಿಅಂಶಗಳು ಮತ್ತು
ಅಂತಿಮ ಅಂಕಿಅಂಶಗಳ ನಡುವಿನ ವ್ಯಾಪಕ ವ್ಯತ್ಯಾಸದ ಬಗ್ಗೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಕೂಡ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅವರು 2010-2012 ರ ನಡುವೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದವರು.
‘ಇಂಡಿಯಾ ಟುಡೆ’ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇದು ಆತಂಕಕಾರಿ ಎಂದಿದ್ದಾರೆ.
ಇದು ಖಂಡಿತವಾಗಿಯೂ ಚಿಂತೆಪಡಬೇಕಾದ ವಿಷಯ.
ಮತದಾನದ ದಿನದ ಕೊನೆಯಲ್ಲಿ ಫಾರ್ಮ್ 17ಸಿ ಅನ್ನು ಭರ್ತಿ ಮಾಡಿದ ನಂತರ ಮತ್ತು ಅಭ್ಯರ್ಥಿಗಳ ಏಜೆಂಟರ ಸಹಿಗಳನ್ನು ತೆಗೆದುಕೊಳ್ಳಲಾಗುತ್ತದೆ.
17ಸಿ ಪ್ರತೀ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ಸಂಖ್ಯೆಯನ್ನು ದಾಖಲಿಸುತ್ತದೆ. ಆದರೆ ಮರುದಿನ ಡೇಟಾ ಹೇಗೆ ಬದಲಾಗುತ್ತದೆ ಎಂಬುದು ಅರ್ಥವಾಗದ ವಿಷಯ ಎಂದಿದ್ದಾರೆ.
ಇದಕ್ಕೆ ಚುನಾವಣಾ ಆಯೋಗ ವಿವರಣೆ ನೀಡಬೇಕು.
ದೇಶದಾದ್ಯಂತ ಅನುಮಾನಗಳು ಹರಡುತ್ತಿವೆ, ಪ್ರತಿಯೊಬ್ಬರ ತಲೆಯೊಳಗೂ ಅದೇ ಅನುಮಾನ ಬಂದರೆ, ಇಡೀ ವ್ಯವಸ್ಥೆಯ ಮೇಲೆಯೇ ಅಪನಂಬಿಕೆ ಮೂಡುತ್ತದೆ ಎಂದು ಖುರೇಷಿ ಹೇಳಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಕೂಡ ಮತದಾರರ ಮತದಾನದ ಪ್ರಮಾಣ ಮತ್ತು ಪ್ರತೀ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ಸಂಖ್ಯೆಯನ್ನು ದಾಖಲಿಸುವ ನಮೂನೆ 17ಸಿ ಯಲ್ಲಿನ ಪ್ರಮಾಣದಲ್ಲಿ ವ್ಯತ್ಯಾಸ ಕಂಡಿತ್ತು.
ಆ ಸಮಯದಲ್ಲಿ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪ್ರತೀ ಮತದಾನದ ಹಂತದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ಬಿಡುಗಡೆ ಮಾಡಲು ನಿರ್ದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಆರಂಭಿಕ ಮತ್ತು ಅಂತಿಮ ಮತದಾನದ ಅಂಕಿಅಂಶಗಳ ನಡುವೆ ಶೇ.5ರಿಂದ ಶೇ.6ರಷ್ಟು ವ್ಯತ್ಯಾಸ ಕಂಡಿತ್ತು.
ಆದರೆ ಆಗ ಆಯೋಗದ ವಾದಗಳ ಆಧಾರದ ಮೇಲೆ ಆ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.
ಫಾರ್ಮ್ 17ಸಿ ಡೇಟಾ ಅಭ್ಯರ್ಥಿಗಳ ಏಜೆಂಟ್‌ರ ಮಾಹಿತಿಗಾಗಿಯೇ ಹೊರತು ಸಾರ್ವಜನಿಕಗೊಳಿಸಲು ಅಲ್ಲ ಎಂದು ಆಯೋಗ ಹೇಳಿತ್ತು.
ಮತದಾನ ಮುಗಿದ ನಂತರ ಶೇ. 7ಕ್ಕಿಂತ ಹೆಚ್ಚು ಮತದಾನ ಪ್ರಮಾಣ ದಾಖಲಾದುದರ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕೆಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಟೋಲೆ, ಮತದಾನದ ಅಂಕಿಅಂಶಗಳಲ್ಲಿನ ವ್ಯತ್ಯಾಸಗಳು ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಬಗ್ಗೆ ಅನುಮಾನ ಹುಟ್ಟುಹಾಕುತ್ತವೆ.
ಪಾರದರ್ಶಕತೆಯ ಬಗ್ಗೆಯೇ ಪ್ರಶ್ನೆಗಳು ಏಳುತ್ತವೆ ಎಂದಿದ್ದಾರೆ. ಇದು ಮತಗಳ್ಳತನ. ಇದರ ವಿರುದ್ಧ ನಾವು ಕಾನೂನಿನ ಮೊರೆ ಹೋಗುತ್ತೇವೆ. ಜನರಲ್ಲಿ ಅರಿವು ಮೂಡಿಸಲು ಬೀದಿಗಿಳಿಯುತ್ತೇವೆ ಎಂದು ಪಟೋಲೆ ಹೇಳಿದ್ಧಾರೆ.
ರಾತ್ರಿ 11:30ರವರೆಗೆ ಮತದಾನ ನಡೆದ ಬೂತ್‌ಗಳ ಛಾಯಾಚಿತ್ರಗಳನ್ನು ಚುನಾವಣಾ ಆಯೋಗ ಪ್ರಕಟಿಸಬೇಕು ಎಂದು ಪಟೋಲೆ ಒತ್ತಾಯಿಸಿದ್ದಾರೆ. ಯಾರು ಗೆದ್ದರು ಅಥವಾ ಯಾರು ಸೋತರು ಎಂಬುದು ಈಗ ವಿಷಯವಲ್ಲ. ಪ್ರಜಾಪ್ರಭುತ್ವವನ್ನು ಉಳಿಸುವ ದೃಷ್ಟಿಯಿಂದ ಕಾಂಗ್ರೆಸ್ ಹೋರಾಡಲು ಬಯಸಿದೆ ಎಂದು ಅವರು ಹೇಳಿದ್ದಾರೆ.
ಪಟೋಲೆ ಕೂಡ ಭಂಡಾರಾ ಜಿಲ್ಲೆಯ ಸಕೋಲಿ ಕ್ಷೇತ್ರದಲ್ಲಿ ಗೆದ್ದಿರುವುದು ತೀರಾ ಅತ್ಯಲ್ಪ ಮತಗಳ ಅಂತರದಿಂದ. ಕೇವಲ 208 ಮತಗಳಿಂದ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಅವಿನಾಶ್ ಬ್ರಹ್ಮಂಕರ್ ಅವರನ್ನು ಸೋಲಿಸಿದ್ದರು.
ಇವಿಎಂ ವಿರುದ್ಧ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸತೊಡಗಿದೆ. ಬ್ಯಾಲೆಟ್ ಪೇಪರ್ ಮತದಾನವನ್ನು ಅದು ಬಯಸುತ್ತಿದೆ.
ದೇಶದಲ್ಲಿ ಮತಪತ್ರ ವ್ಯವಸ್ಥೆಯನ್ನು ಪುನಃ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಲು, ಕಾಂಗ್ರೆಸ್ ‘ಭಾರತ ಜೋಡೊ ಯಾತ್ರೆ’ಯಂತಹ ಆಂದೋಲನ ಆರಂಭಿಸಬೇಕೆಂದು ಅವರು ರಾಹುಲ್ ಗಾಂಧಿಯವರನ್ನು ಒತ್ತಾಯಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕುವ ಹಾಗೆ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಕೆಲವೇ ತಿಂಗಳುಗಳ ಅಂತರದಲ್ಲಿ ಒಂದರ ಬೆನ್ನಲ್ಲೊಂದು ಸೋಲನ್ನು ಕಾಣುತ್ತಿದೆ. ಇಷ್ಟು ಕಡಿಮೆ ಅಂತರದಲ್ಲಿ ಈ ವ್ಯತಿರಿಕ್ತ ಬದಲಾವಣೆ ಯಾಕೆ ಆಗುತ್ತಿದೆ ಮತ್ತು ಹೇಗೆ ಆಗುತ್ತಿದೆ ಎಂಬುದು ಕಾಂಗ್ರೆಸ್ ಅನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಈ ಹಂತದಲ್ಲಿ ಅದರ ಮುಂದೆ ಪ್ರಬಲಗೊಳ್ಳುತ್ತಿರುವುದೇ, ಇವಿಎಂ ತೊಲಗಿಸುವ ನಿಟ್ಟಿನ ಅಭಿಯಾನದ ಪರಿಕಲ್ಪನೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಎಲ್ಲೆಲ್ಲಿ ಹೆಚ್ಚುವರಿ ಮತಗಳು ಕಾಣಿಸಿವೆ ಎಂಬುದನ್ನು ಗಮನಿಸಿದರೆ,
ಒಡಿಶಾ 42 ಲಕ್ಷ , ಮಹಾರಾಷ್ಟ್ರ 27 ಲಕ್ಷ, ಪಶ್ಚಿಮ ಬಂಗಾಳ 36,71,283 ಮತಗಳ ಹೆಚ್ಚಳ, ಆಂಧ್ರಪ್ರದೇಶ 49 ಲಕ್ಷ, ಕರ್ನಾಟಕ 22,23,000 ಮತಗಳ ಹೆಚ್ಚಳ, ಛತ್ತೀಸ್‌ಗಡ 9 ಲಕ್ಷ, ರಾಜಸ್ಥಾನ 29,30,000 ಮತಗಳ ಹೆಚ್ಚಳ, ಬಿಹಾರ 11,60,000 ಮತಗಳ ಹೆಚ್ಚಳ, ಹರ್ಯಾಣ 12 ಲಕ್ಷ, ಮಧ್ಯಪ್ರದೇಶ 21 ಲಕ್ಷ, ತೆಲಂಗಾಣ 14 ಲಕ್ಷ ಮತ್ತು ಅಸ್ಸಾಂ 15 ಲಕ್ಷ ಮತಗಳ ಹೆಚ್ಚಳವಾಗಿದೆ.
ಇಷ್ಟೂ ಹೆಚ್ಚಳದ ಕಾರಣದಿಂದಾಗಿ 79 ಲೋಕಸಭಾ ಸ್ಥಾನಗಳ ಫಲಿತಾಂಶದಲ್ಲಿ ಶೇಕಡಾವಾರು ಮತಗಳ ಹೆಚ್ಚಳವಾಗಿತ್ತು.
ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಇವಿಎಂ ಬಳಕೆ ಬಗ್ಗೆ ಆಕ್ಷೇಪಗಳನ್ನು ಎತ್ತತೊಡಗಿದೆ.
ಕಾಂಗ್ರೆಸ್‌ಗೆ ಈಗ ಇದು ಅಸ್ತಿತ್ವದ ಪ್ರಶ್ನೆಯೂ ಆಗಿದೆ.