ಯುವಜನರಿಗಾಗಿ ಯೋಜನೆಗಳನ್ನು ರೂಪಿಸಿ
ಯುವ ಸಮುದಾಯವನ್ನು ನಮ್ಮ ಸುತ್ತಲಿನ ಸಮಾಜ ಯಾವತ್ತಿಗೂ ಜವಾಬ್ದಾರಿ ರಹಿತ, ಅಶಿಸ್ತಿನಿಂದ ಕೂಡಿದ, ಗುರುಹಿರಿಯರಿಗೆ ಗೌರವಕೊಡದ ಒಂದು ಗುಂಪು ಎಂಬುದಾಗಿ ನೋಡಿರುವುದೇ ಹೆಚ್ಚು. ಆದರೆ, ಮೂಲಭೂತವಾಗಿ ಯುವಸಮುದಾಯ ಹಾಗೆ ಇರುವುದು ನಿಜವೇ ಎಂದು ನೋಡಿದರೆ, ಇದೊಂದು ಕಟ್ಟಿಕೊಂಡಿರುವ ಮನಸ್ಥಿತಿ ಎನ್ನುವುದು ಭಾಸವಾಗುತ್ತದೆ. ಎಲ್ಲಾ ವಯೋ ಮಾನದ ವ್ಯಕ್ತಿಗಳ ಗುಂಪಿನಲ್ಲಿಯೂ ಇಂತಹವರು ಇರುವುದು ಇದ್ದದ್ದೇ. ಹಾಗಿರುವಾಗ ಯುವ ಸಮುದಾಯವನ್ನು ಮಾತ್ರ ಈ ನೆಲೆಯಲ್ಲಿ ಆರೋಪಿಸುವುದು ಸಮಂಜಸವೂ ಅಲ್ಲ, ಸಾಧುವೂ ಅಲ್ಲ.
ಇವತ್ತು ಯುವಸಮುದಾಯ ಅತಿಹೆಚ್ಚು ಸಾಮರ್ಥ್ಯವನ್ನು ವೃದ್ಧಿಸಿಕೊಂಡು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡಿದೆ. ಡಿಜಿಟಲ್ ತಂತ್ರಾಂಶದ ಜೊತೆಗೆ ತಮ್ಮನ್ನು ಅನುದಿನವೂ ಅಪ್‌ಡೇಟ್ ಮಾಡಿಕೊಳ್ಳುತ್ತಿದೆ. ದೊಡ್ಡವರು ಅನ್ನಿಸಿಕೊಳ್ಳುವವರು ತಮ್ಮ ಯುವ ವಯಸ್ಸಿನಲ್ಲಿ ಎಷ್ಟು ಸ್ಮಾರ್ಟ್ ಇದ್ದರೋ ಅದಕ್ಕಿಂತ ಅನೇಕ ಪಟ್ಟು ಹೆಚ್ಚು ಇಂದಿನ ಯುವಸಮುದಾಯ ಇದೆ. ಹೀಗಿರುವಾಗ ಯುವಸಮುದಾಯವನ್ನು ಹೀಗೆಳೆಯುವುದು ಸಮರ್ಥನೀಯವಲ್ಲ.
ಜನಸಮುದಾಯ ಯುವಜನರನ್ನು ಈ ದೇಶದ ಜವಾಬ್ದಾರಿಯುತ ನಾಗರಿಕರನ್ನಾಗಿ ಕಾಣುವ ಮತ್ತು ಅವರಿಗೆ ದೊರಕಬೇಕಾದ ಎಲ್ಲಾ ಹಕ್ಕುಗಳನ್ನು ಒದಗಿಸಿಕೊಡುವ ಕಡೆಗೆ ಸರಕಾರ ಗಮನ ನೀಡಬೇಕು. ಯುವಜನರಿಗೆ ಪೌಷ್ಟಿಕ ಆಹಾರ ದೊರಕಬೇಕಾದುದು ಅವರ ಹಕ್ಕು. ಸರಕಾರ ಇದನ್ನು ಖಾತ್ರಿಪಡಿಸುವ ಸಲುವಾಗಿ ಇಂದಿರಾ ಕ್ಯಾಂಟೀನ್ ಮಾದರಿಯ ಯೋಜನೆ ಅಥವಾ ಬಿಸಿಯೂಟ ಯೋಜನೆಯ ವಿಸ್ತರಣೆಯನ್ನು ಕಾಲೇಜುಗಳಿಗೂ ಮಾಡಬೇಕಿದೆ.
ಕಾಲೇಜುಗಳಲ್ಲಿ ಯುವಜನರ ಮಾನಸಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಆಪ್ತಸಮಾಲೋಚಕರ ನೇಮಕಾತಿ ಮತ್ತೊಂದು ಇಂದಿನ ಅಗತ್ಯತೆ. ಇತ್ತೀಚೆಗೆ ಒತ್ತಡ, ಮಾನಸಿಕ ಕಾಯಿಲೆ, ಒಂಟಿತನ, ಮೊಬೈಲ್ ಗೀಳು, ಮಾದಕ ವ್ಯಸನ ಮುಂತಾದವುಗಳಿಂದ ಮನೋವೇದನೆಗೆ ಒಳಗಾಗುವ ಮತ್ತು ಆತ್ಮಹತ್ಯೆಯಂತಹ ಯೋಚನೆಯ ಕಡೆಗೆ ಹೊರಳುವ ಯುವಜನರ ಸಂಖ್ಯೆ ಹೆಚ್ಚಾಗಿರು ವುದು ಕಳವಳಕಾರಿ. ಯುವಜನರ ತುಮುಲ, ಆತಂಕ, ಗಲಿಬಿಲಿ, ಗೊಂದಲಗಳನ್ನು ಆಲಿಸಲು ಆಪ್ತಸಮಾಲೋಚಕರ ಉಪಸ್ಥಿತಿ ಕಾಲೇಜುಗಳಲ್ಲಿ ಕಡ್ಡಾಯಗೊಳಿಸಬೇಕಿದೆ.
ಸರಕಾರಗಳು ಯುವಜನತೆಯನ್ನು ಕೇಂದ್ರವಾಗಿಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕು. ಸಮಾಜವೂ ಅದಕ್ಕೆ ಪೂರಕವಾಗಿ ಯುವಜನಸ್ನೇಹಿಯಾಗಿ ವಿಕಸಿತವಾಗಬೇಕು. ಆಗ ಮಾತ್ರ ಯುವಜನತೆಯ ದಿನಗಳು ಯಶಸ್ಸು ಕಾಣಬಹುದು.