ಮಂಗಳೂರು ಹೋಮ್ ಸ್ಟೇ ಅನೈತಿಕ ಪೊಲೀಸ್‌ಗಿರಿ ಪ್ರಕರಣ: ನ್ಯಾಯ ಏಕೆ ಮರೀಚಿಕೆಯಾಯಿತು?
ಇಡೀ ದೇಶದ ಗಮನ ಸೆಳೆದಿದ್ದ ಮಂಗಳೂರು ಹೋಮ್ ಸ್ಟೇ ಕೇಸಿನ ಆರೋಪಿಗಳು ಖುಲಾಸೆ ಆಗಿದ್ದಾರೆ. ಮಂಗಳೂರಿಗೆ ಕಳಂಕ ಹಚ್ಚಿದ್ದ ಆ ಕೇಸಲ್ಲಿ ಸಾಕ್ಷಿಗಳಿದ್ದರೂ, ವೀಡಿಯೊ ಇದ್ದರೂ ಕೇಸು ಬಿದ್ದು ಹೋಗಿದೆ. ದಾಳಿಗೊಳಗಾದ ಸಂತ್ರಸ್ತರು ಮುಂದೆ ಬಂದು ಹೇಳಿಕೆ ಕೊಟ್ಟರೂ ಅಪರಾಧಿಗಳಿಗೆ ಶಿಕ್ಷೆಯಾಗಲಿಲ್ಲ ಎಂಬುದು ನೋವಿನ ಸಂಗತಿ.
ಅದು 2012ರ ಜುಲೈ 28.
ಮಂಗಳೂರಿನ ಹೋಮ್ ಸ್ಟೇ ಒಂದರಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದ ವೇಳೆ, ಅದನ್ನು ರೇವ್ ಪಾರ್ಟಿ ಎಂದು ಆರೋಪಿಸಿ 13 ಯುವಕ ಯುವತಿಯರ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದರು. ಹಲ್ಲೆಯ ವೀಡಿಯೊಗಳು ಸುದ್ದಿ ವಾಹಿನಿಗಳಲ್ಲಿ ವಾರಗಟ್ಟಲೆ ಪ್ರಸಾರವಾಗುವ ಮೂಲಕ ಈ ಪ್ರಕರಣ ದೇಶಾದ್ಯಂತ ಗಮನ ಸೆಳೆದಿತ್ತು.
12 ವರ್ಷಗಳ ಬಳಿಕ ಪ್ರಕರಣ ಮುಗಿದಿದೆ.
ಹಲ್ಲೆ ನಡೆಸಿದ್ದ ಎಲ್ಲ ಆರೋಪಿಗಳನ್ನು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ. ನ್ಯಾಯಮೂರ್ತಿ ಎಸ್.ವಿ. ಕಾಂತರಾಜು ಅವರು 2024ರ ಆಗಸ್ಟ್ 6ರಂದು ಎಲ್ಲ 39 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಂತ್ರಸ್ತರ ಹೇಳಿಕೆಗಳು ಮತ್ತು ವೀಡಿಯೊ ಸಾಕ್ಷ್ಯಗಳು ಆರೋಪಿಗಳ ಅಪರಾಧ ಸಾಬೀತಿಗೆ ಪ್ರಬಲ ಆಧಾರವಾಗಿಲ್ಲ ಎಂದು ಅಭಿಪ್ರಾಯಪಡುವ ಮೂಲಕ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ.
ಮಂಗಳೂರಿನ ಪಡೀಲ್‌ನಲ್ಲಿರುವ ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇನಲ್ಲಿ ಬರ್ತ್‌ಡೇ ಆಚರಣೆಗಾಗಿ ಆವತ್ತು ರಾತ್ರಿ ಊಟದ ಸಮಯಕ್ಕೆ ಐವರು ಯುವತಿಯರೂ ಸೇರಿ 13 ಮಂದಿ ಇದ್ದರು.
ಆದರೆ ಬರ್ತ್‌ಡೇ ಪಾರ್ಟಿ ದುಸ್ವಪ್ನವಾಗಿ ಕಾಡುವಂತಾಗಿತ್ತು. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹೋಂ ಸ್ಟೇ ಮೇಲೆ ದಾಳಿಗೆ ತಯಾರಾಗಿಬಿಟ್ಟಿದ್ದರು.
ಇದರ ಬಗ್ಗೆ ಸುಳಿವು ಪತ್ರಕರ್ತ ನವೀನ್ ಸೂರಿಂಜೆ ಅವರಿಗೆ ಸಿಕ್ಕಿತ್ತು. ಅವರು ಕ್ಯಾಮರಾಮ್ಯಾನ್ ರಾಜೇಶ್ ಪೂಜಾರಿಯವರನ್ನು ಕರೆದುಕೊಂಡು ಹೋಂ ಸ್ಟೇಗೆ ಧಾವಿಸಿದ್ದರು.
ಮೊದಲು ಯಾವ ಸುಳಿವು ಕೂಡ ಕಾಣಿಸದೆ ಸ್ತಬ್ಧವಾಗಿದ್ದ ಸ್ಥಳದಲ್ಲಿ ಕೆಲವೇ ಕ್ಷಣಗಳಲ್ಲಿ ದಾಳಿ ನಡೆದುಹೋಗಿತ್ತು. 40 ಮಂದಿ ಗೂಂಡಾಗಳ ರೀತಿಯಲ್ಲಿ ದಾಳಿ ನಡೆಸಿದ್ದರು.
ಸುಮಾರು 15 ನಿಮಿಷಗಳ ಕಾಲ ಹಿಂದುತ್ವದ ಗೂಂಡಾಗಳು ಯುವಕ ಯುವತಿಯರನ್ನು ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿ, ಕಿರುಕುಳ ನೀಡಿದ್ದರಲ್ಲದೆ, ಚಿನ್ನದ ಸರ ಹಾಗೂ ಹಣವನ್ನೂ ದೋಚಿದ್ದರು.
ಬಹುಶಃ ಪತ್ರಕರ್ತ ನವೀನ್ ಸೂರಿಂಜೆ ಅವರಿಲ್ಲದೇ ಇದ್ದಿದ್ದರೆ ಆ ದಾಳಿಯ ಬಗ್ಗೆ ಯಾರಿಗೂ ತಿಳಿಯುತ್ತಲೇ ಇರಲಿಲ್ಲವೇನೊ. ಯಾಕೆಂದರೆ, ಘಟನೆ ಬಳಿಕ ಸ್ಥಳಕ್ಕೆ ಬಂದಿದ್ದ ಪೊಲೀಸರು ಎಲ್ಲಾ ದಾಳಿಕೋರರನ್ನು ಬಿಟ್ಟಿದ್ದರು. ಅಲ್ಲದೆ, ಹಲ್ಲೆಗೊಳಗಾದ ಯುವಕ ಯುವತಿಯರನ್ನು ಅವರ ಪೋಷಕರನ್ನು ಕರೆದು ಅವರೊಂದಿಗೆ ಮನೆಗೆ ಕಳಿಸಿದ್ದರು.
ಆದರೆ, ಯಾವಾಗ ನವೀನ್ ಸೂರಿಂಜೆ ಘಟನೆ ಕುರಿತ ವರದಿ ಮಾಡಿದರೋ, ಆಗ ಹಲ್ಲೆಯ ದೃಶ್ಯಗಳು ದೇಶಾದ್ಯಂತ ಟಿವಿ ಪರದೆಗಳಲ್ಲಿ ಬರುವಂತಾಯಿತು. ಹಿಂದುತ್ವದ ಪುಂಡರು ಯುವಕ-ಯುವತಿಯರ ಮೇಲೆ ಹಲ್ಲೆ ನಡೆಸುವ ದೃಶ್ಯಗಳನ್ನು ಲಕ್ಷಾಂತರ ಮಂದಿ ನೋಡಿದ್ದರು.
ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರಕಾರ ಇಕ್ಕಟ್ಟಿಗೆ ಸಿಲುಕಿತ್ತು. ಆಗಿನ ಗೃಹ ಸಚಿವ ಆರ್. ಅಶೋಕ್, ಮಾಜಿ ಸಿಎಂ ಯಡಿಯೂರಪ್ಪ, ಸಿ.ಟಿ. ರವಿ ಎಲ್ಲರೂ ದಾಳಿಯನ್ನು ಖಂಡಿಸಿದ್ದರು ಮತ್ತು ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಸರಕಾರ ನೀಡಿತ್ತು.
ಒತ್ತಡಕ್ಕೆ ಮಣಿದ ಪೊಲೀಸರು ಕಾರ್ಯಪ್ರವೃತ್ತರಾಗ ಬೇಕಾಯಿತು. 43 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಪಾರ್ಟಿಯಲ್ಲಿ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ್ದರೂ, ಹಿಂದುತ್ವವಾದಿಗಳ ಆರೋಪಗಳು ನಿಂತಿರಲಿಲ್ಲ.
ದಾಳಿಗೆ ಒಳಗಾಗಿದ್ದವರಲ್ಲಿ ಇಬ್ಬರು ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬಹಿರಂಗವಾಗಿಯೇ ಹೇಳಿದ್ದರು ಮತ್ತು ಅದು ರೇವ್ ಪಾರ್ಟಿಯಾಗಿರಲಿಲ್ಲ ಕೇವಲ ಬರ್ತ್‌ಡೇ ಪಾರ್ಟಿಯಾಗಿತ್ತು ಎಂದು ಸ್ಪಷ್ಟಪಡಿಸಿದ್ದರು.
ಹಲ್ಲೆಯ ಬಗ್ಗೆ ಗೊತ್ತಿದ್ದರೂ ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಎಂದು ಆರೋಪಿಸಿ ಪೊಲೀಸರು ಪತ್ರಕರ್ತ ನವೀನ್ ಸೂರಿಂಜೆಯವರ ಮೇಲೆಯೂ ಪ್ರಕರಣ ದಾಖಲಿಸಿದ್ದರು.
ಘಟನೆಯಾದ ಮೂರು ತಿಂಗಳ ನಂತರ ಸೂರಿಂಜೆಯವರನ್ನು ಬಂಧಿಸಲಾಗಿತ್ತು ಮತ್ತು ಅವರು ನಾಲ್ಕು ತಿಂಗಳು ಜೈಲಿನಲ್ಲಿ ಕಳೆಯಬೇಕಾಯಿತು. 2023ರ ಮಾರ್ಚ್ 18ರಂದು ಸೂರಿಂಜೆಯವರಿಗೆ ಜಾಮೀನು ಸಿಕ್ಕಿತ್ತು.
ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗದಿರುವುದು ನಾಚಿಕೆಗೇಡು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಹೋಂ ಸ್ಟೇ ದಾಳಿ, ಪಬ್ ದಾಳಿಗಳೆರಡರಿಂದಲೂ ಮಂಗಳೂರನ್ನು ಭಯಭೀತಗೊಳಿಸಿದವರು ಆನಂತರವೂ ಅನೈತಿಕ ಪೊಲೀಸ್‌ಗಿರಿ ನಡೆಸುತ್ತಲೇ ಇದ್ದಾರೆ.
ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಮತ್ತು ಚರ್ಚ್ ದಾಳಿಯಂತಹ ಹಿಂದುತ್ವದ ಹಿಂಸಾಚಾರದಲ್ಲಿ ದೂರುದಾರರು ಅಥವಾ ಸಾಕ್ಷಿಗಳು ಮುಂದೆ ಬಾರದ ಕಾರಣ ಯಾರಿಗೂ ಶಿಕ್ಷೆಯಾಗುವುದೇ ಇಲ್ಲ. ಆದರೆ, ಹೋಂ ಸ್ಟೇ ದಾಳಿಯಲ್ಲಿ ಹಲ್ಲೆಗೊಳಗಾದವರೇ ಮುಂದೆ ಬಂದು ದೂರು ನೀಡಿದ್ದರು. ಸಾಕ್ಷ್ಯ ನುಡಿದಿದ್ದರು. ಹಲ್ಲೆಯ ವೀಡಿಯೊ ಕ್ಲಿಪ್‌ಗಳನ್ನೂ ಒದಗಿಸಿದ್ದರು. ಹೀಗಿದ್ದೂ ನ್ಯಾಯಾಲಯದಲ್ಲಿ ಕೇಸ್ ಬಿದ್ದುಹೋದದ್ದು ಹೇಗೆ?
ದೂರುದಾರ ವಿಜಯ್ ಕುಮಾರ್ ಮತ್ತು ಸಂತ್ರಸ್ತರಲ್ಲೊಬ್ಬರಾದ ಗುರುದತ್ ಕಾಮತ್ ನೀಡಿದ ಹೇಳಿಕೆಗಳ ಸುತ್ತ ಪ್ರಾಸಿಕ್ಯೂಷನ್ ತನ್ನ ವಾದ ರೂಪಿಸಿತ್ತು.
ಈ ಇಬ್ಬರೂ ದಾಳಿ ನಡೆಸಿದವರನ್ನು ಸ್ಪಷ್ಟವಾಗಿ ಗುರುತಿಸಿರುವುದರಿಂದ ಅವರ ಹೇಳಿಕೆಗಳ ಆಧಾರದಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡಬಹುದು ಎಂದು ವಾದಿಸಲಾಗಿತ್ತು.
ದಾಳಿಕೋರರು ತನ್ನ ಮತ್ತು ತನ್ನ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾಗಿಯೂ, ಯುವತಿಯೊಬ್ಬರನ್ನು ಎಳೆದೊಯ್ಯಲು ಯತ್ನಿಸಿ ದ್ದಾಗಿಯೂ, ಕೆಲವರ ಬಟ್ಟೆ ಬಿಚ್ಚಿಸಲಾಗಿತ್ತೆಂದೂ ದೂರುದಾರ ವಿಜಯ್ ಕುಮಾರ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.
‘‘ಈ ಘಟನೆಯಿಂದಾಗಿ ವಿಚಲಿತಗೊಂಡಿದ್ದೇನೆ. ಈವೆಂಟ್ ಮ್ಯಾನೇಜರ್ ಆಗಿದ್ದ ನನ್ನ ವೃತ್ತಿ ಬದುಕು ಈ ಘಟನೆ ನಂತರ ನಾಶವಾಯಿತು. ಮಾಧ್ಯಮಗಳಲ್ಲಿ ನನ್ನನ್ನು ತಪ್ಪು ರೀತಿಯಲ್ಲಿ ಬಿಂಬಿಸಲಾಗಿತ್ತು. ನನ್ನ ಮಾನಹಾನಿಯಾಯಿತು ಮತ್ತು ಎರಡು ವರ್ಷಗಳಿಂದ ಕೆಲಸವಿಲ್ಲವಾಗಿದೆ. ದಾಳಿಗೊಳಗಾಗಿದ್ದ ಯುವತಿಯರಂತೂ ಖಿನ್ನತೆಗೆ ಒಳಗಾಗಿದ್ದಾರೆ’’ ಎಂದಿದ್ದರು ವಿಜಯ್ ಕುಮಾರ್.
ತಮ್ಮ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ವಿಜಯ್ ನ್ಯಾಯಾಲಯದಲ್ಲಿ ಗುರುತಿಸಿದ್ದರು. ‘‘ಬರ್ತ್‌ಡೇ ಪಾರ್ಟಿಯಲ್ಲಿ ನಮ್ಮ ಮೇಲೆ ಹಲ್ಲೆ ಮಾಡಿದ ಮತ್ತು ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಕೆಲವರು ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಅವರನ್ನೂ ನಾನು ಗುರುತಿಸಬಲ್ಲೆ’’ ಎಂದು ವಿಜಯ್ ಹೇಳಿದ್ದರು.
ಪಾಟಿ ಸವಾಲಿನ ವೇಳೆ ವಿಜಯ್, ದಾಳಿಯ ವೇಳೆ ಕತ್ತಲಿತ್ತು ಎಂದಿದ್ದರು. ‘‘ಅಲ್ಲಿರುವ ಪ್ರತಿಯೊಬ್ಬರು ಏನೆಲ್ಲ ಮಾಡಿದರು ಎಂದು ವಿವರಿಸಲು ಸಾಧ್ಯವಿಲ್ಲ. ಆದರೆ ನಾನು ಈಗಾಗಲೇ ಅವರಲ್ಲಿ ಕೆಲವರು ನಡೆದುಕೊಂಡಿದ್ದ ರೀತಿಯನ್ನು ವಿವರಿಸಿದ್ದೇನೆ. ನಾನು ಎಲ್ಲರನ್ನೂ ಅಲ್ಲ, ಕೆಲ ಆರೋಪಿಗಳ ದೈಹಿಕ ಮತ್ತು ಮುಖದ ಲಕ್ಷಣ ವಿವರಿಸಿದ್ದೇನೆ’’ ಎಂದಿದ್ದರು.
ವಿಜಯ್ ಅವರ ಸಾಕ್ಷ್ಯವನ್ನು ತಿರಸ್ಕರಿಸಲು ನ್ಯಾಯಾಧೀಶರು ನೀಡಿದ ಕಾರಣಗಳಲ್ಲಿ ಈ ಹೇಳಿಕೆಗಳೂ ಸೇರಿವೆ.
ಮೊದಲು ಘಟನೆಯ ಬಗ್ಗೆ ವಿವರಿಸಿದ್ದ ಈ ಸಾಕ್ಷಿ ಪಾಟಿ ಸವಾಲಿನಲ್ಲಿ ಹೇಳಿರುವುದು ವ್ಯತಿರಿಕ್ತವಾಗಿದೆ. ಆರೋಪಿಗಳ ಕೃತ್ಯದ ಬಗ್ಗೆ ನಿರ್ದಿಷ್ಟವಾಗಿ ಹೇಳಿಲ್ಲ. ಹಾಗಾಗಿ ಅದು ಪ್ರಕರಣವನ್ನು ಸಂಪೂರ್ಣವಾಗಿ ಬೆಂಬಲಿಸುವುದಿಲ್ಲ ಎಂಬುದು ಕೋರ್ಟ್ ಅಭಿಪ್ರಾಯವಾಗಿತ್ತು. ಪಾಟಿ ಸವಾಲಿನ ಸಮಯದಲ್ಲಿ ಯಾರು ಯಾರ ಮೇಲೆ ಮತ್ತು ಯಾವ ರೀತಿಯಲ್ಲಿ ದಾಳಿ ಮಾಡಿದರು ಎಂಬುದನ್ನು ನಿಖರವಾಗಿ ವಿವರಿಸಿಲ್ಲ ಎಂಬುದೇ ತೀರ್ಪು ಹೀಗೆ ಬರಲು ಕಾರಣವಾಯಿತು.
ಅಂದಹಾಗೆ ಪ್ರಕರಣದ ವಿಚಾರಣೆ ಶುರುವಾಗಿದ್ದೇ ಘಟನೆಯ ಏಳು ವರ್ಷಗಳ ನಂತರ, ಅಂದರೆ 2019ರಲ್ಲಿ ಎಂಬುದನ್ನು ಗಮನಿಸಬೇಕು.
ವಿಜಯ್ ಅವರ ಸಾಕ್ಷ್ಯವನ್ನು ತಿರಸ್ಕರಿಸಲು ಮತ್ತೊಂದು ಕಾರಣ, ಪರೀಕ್ಷಾ ಗುರುತಿನ ಪರೇಡ್ ನಡೆಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಬುದಾಗಿತ್ತು.
ಇದನ್ನು ಸಾಮಾನ್ಯವಾಗಿ ಆರೋಪಿಗಳು ಅಪರಿಚಿತ ರಾಗಿರುವಾಗ ಮಾಡಲಾಗುತ್ತದೆ. ಸಂತ್ರಸ್ತರು ಪೊಲೀಸರಿಂದ ಸುತ್ತುವರಿದ ಶಂಕಿತರ ಸಾಲಿನಲ್ಲಿ ಆರೋಪಿಗಳನ್ನು ಗುರುತಿಸುತ್ತಾರೆ. ಈ ಪ್ರಕ್ರಿಯೆ ತಹಶೀಲ್ದಾರ್ ಸಮ್ಮುಖದಲ್ಲಿ ನಡೆಯುತ್ತದೆ.
ಪ್ರಾಸಿಕ್ಯೂಷನ್ ಹೊಂದಿದ್ದ ಎರಡನೇ ಸಾಕ್ಷಿ ಗುರುದತ್ ಕಾಮತ್. ದಾಳಿ ನಡೆಸಿದ್ದವರು ಹೇಗೆ ಒಬ್ಬ ಯುವತಿಗೆ ಕಿರುಕುಳ ನೀಡಲು ಪ್ರಯತ್ನಿಸಿದರು, ಕೆಲ ಯುವತಿಯರ ಬಟ್ಟೆಗಳನ್ನು ಹೇಗೆ ಹರಿದು ಹಾಕಿದರು ಮತ್ತು ವಿಜಯ್ ಮೇಲೆ ಹೇಗೆ ಹಲ್ಲೆ ನಡೆಸಿದರು ಎಂಬುದನ್ನು ಅವರು ವಿವರಿಸಿದ್ದರು.
ದಾಳಿಕೋರರು ತಮ್ಮಲ್ಲೇ ಒಬ್ಬನಿಗೆ ಯುವತಿಯರ ವೀಡಿಯೊ ಮಾಡಲು ಸೂಚಿಸಿದ್ದರೆಂಬುದನ್ನೂ, ಯುವತಿಯರು ಮುಖ ಮರೆಮಾಚಲು ಯತ್ನಿಸಿದಾಗ ಅವರು ಹಾಗೆ ಮಾಡದಂತೆ ತಡೆಯಲಾಯಿತೆಂದೂ ಗುರುದತ್ ಕೋರ್ಟ್‌ನಲ್ಲಿ ವಿವರಿಸಿದ್ದರು.
ನ್ಯಾಯಾಲಯದಲ್ಲಿ ಆರೋಪಿಗಳನ್ನು ಗುರುತಿಸಿದ ಗುರುದತ್, ‘‘ಎಲ್ಲಾ ಆರೋಪಿಗಳು ಘಟನೆಯಲ್ಲಿ ಭಾಗಿಗಳಾಗಿದ್ದರು. ಅವರಲ್ಲಿ ಕೆಲವರು ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಆದರೆ ನಾನು ಅವರನ್ನು ಗುರುತಿಸಬಲ್ಲೆ’’ ಎಂದಿದ್ದರು.
ಗುರುದತ್ ಗುರುತಿಸಿದ ದಾಳಿಕೋರರಲ್ಲಿ ಒಬ್ಬನ ಹೆಸರು ಗಣೇಶ್. ಆತ 2009ರ ಮಂಗಳೂರು ಪಬ್ ದಾಳಿ ಪ್ರಕರಣದ ಆರೋಪಿ. ಗಣೇಶ್ ಯುವತಿಯೊಬ್ಬಳ ಜಾಕೆಟ್ ಕಳಚಿದ್ದ ಮತ್ತು ಅದನ್ನು ತಾನು ಧರಿಸಿದ್ದ.
ದಾಳಿಯ ಪ್ರಮುಖ ಆರೋಪಿ ಸುಭಾಷ್ ಪಡೀಲ್ ಗುರುತು ಹಿಡಿಯುವಲ್ಲಿಯೂ ಗುರುದತ್ ಯಶಸ್ವಿಯಾಗಿದ್ದರು.
‘‘ಈ ಘಟನೆಯ ನಂತರ ಜೀವನವೇ ಕಷ್ಟಕರವಾಗಿದೆ. ಮೂರ್ನಾಲ್ಕು ತಿಂಗಳ ಕಾಲ ಮಾಧ್ಯಮಗಳು ನಮ್ಮ ಮುಖಗಳನ್ನೇ ತೋರಿಸುತ್ತಿದ್ದವು. ಯುವತಿಯರಂತೂ ಅವಮಾನದಿಂದ ಖಿನ್ನತೆಗೆ ಒಳಗಾದರು. ನಮ್ಮೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದರು ಮತ್ತು ಬಹಳ ಕಾಲ ಮನೆಗಳಿಂದ ಹೊರಗೇ ಹೋಗಲಿಲ್ಲ. ಘಟನೆಯ ಆಘಾತದಿಂದ ಹೊರಬರಲು ಏಳು ವರ್ಷ ಬೇಕಾಯಿತು’’ ಎಂದು ಗುರುದತ್ ವಿವರಿಸಿದ್ದರು.
ಗುರುದತ್ ಕೂಡ ಪಾಟಿ ಸವಾಲಿನ ವೇಳೆ, ‘‘ಎಲ್ಲರೂ ಒಟ್ಟಿಗೆ ಬಂದಿದ್ದರಿಂದ ಘಟನೆ ಕೆಲವೇ ಸೆಕೆಂಡುಗಳಲ್ಲಿ ಆಗಿಹೋಯಿತು. ಹೀಗಾಗಿ ಘಟನೆಯಲ್ಲಿ ಯಾರೆಲ್ಲ ಭಾಗವಹಿಸಿದ್ದರು ಎಂಬುದನ್ನು ಗಮನಿಸಲು ಸಾಧ್ಯವಾಗಿಲ್ಲ. ಯಾರು ಯಾರ ಮೇಲೆ ಹಲ್ಲೆ ನಡೆಸುತ್ತಿದ್ದಾರೆಂದು ಹೇಳಲು ಕಷ್ಟ’’ ಎಂದಿದ್ದರು. ಗುರುದತ್‌ಗೆ ಸಹ ಯಾವುದೇ ಪರೀಕ್ಷಾ ಗುರುತಿನ ಪರೇಡ್ ನಡೆಸಿರಲಿಲ್ಲ.
ಈ ಸಾಕ್ಷಿ ಪ್ರಾಸಿಕ್ಯೂಷನ್ ಪ್ರಕರಣವನ್ನು ಬೆಂಬಲಿಸುವಂತಿದ್ದರೂ, ಪಾಟಿ ಸವಾಲಿನ ವೇಳೆ ವಿರೋಧಾಭಾಸದ ಹೇಳಿಕೆ ನೀಡಿರುವುದಾಗಿ ಕೋರ್ಟ್ ಗಮನಿಸಿತ್ತು.
ಘಟನೆಯಲ್ಲಿನ ಸಂತ್ರಸ್ತ ಯುವತಿಯೊಬ್ಬಳ ಹೇಳಿಕೆಯನ್ನೂ ನ್ಯಾಯಾಧೀಶರು ಇದೇ ನೆಲೆಯಲ್ಲಿ ಕಡೆಗಣಿಸಿದರು. ಆಕೆ ಎಲ್ಲಾ ಆರೋಪಿಗಳನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ ಮತ್ತು ತಮಗಾದ ಗಾಯ ಹೇಗಾಯಿತು ಎಂಬುದನ್ನು ವಿವರಿಸಿಲ್ಲ ಎಂಬುದು ಕೋರ್ಟ್ ಆಕ್ಷೇಪವಾಗಿತ್ತು. ಇತರ ಹಲವರ ಹೇಳಿಕೆಯ ವಿಚಾರದಲ್ಲೂ ಕೋರ್ಟ್ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿತು.
2019ರ ಸೆಪ್ಟಂಬರ್ 19ರಂದು ಶುರುವಾದ ವಿಚಾರಣೆಯ ಸಮಯದಲ್ಲಿ, ಪ್ರಾಸಿಕ್ಯೂಷನ್ ಹಲ್ಲೆಗೊಳಗಾದ 13 ಸಂತ್ರಸ್ತರಲ್ಲಿ 11 ಮಂದಿ ಸೇರಿದಂತೆ 47 ಸಾಕ್ಷಿಗಳನ್ನು ಪರೀಕ್ಷಿಸಿತ್ತು. ಈ 11 ಸಂತ್ರಸ್ತರಲ್ಲಿ ನಾಲ್ವರನ್ನು ಪ್ರತಿಕೂಲ ಸಾಕ್ಷಿಗಳೆಂದು ಘೋಷಿಸಲಾಯಿತು. ಮೂವರು ಯುವತಿಯರೂ ಸೇರಿ ಐವರನ್ನು ಭಾಗಶಃ ಪ್ರತಿಕೂಲ ಎನ್ನಲಾಯಿತು. ಅವರ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್‌ಗೆ ಸಹಾಯಕವಾಗಿಲ್ಲ ಅಥವಾ ವಿಶ್ವಾಸಾರ್ಹವಲ್ಲ ಎಂದು ಘೋಷಿಸಲಾಯಿತು. ಏಕೆಂದರೆ ಅವರು ಆರೋಪಿಗಳನ್ನು ತಮ್ಮ ಮೇಲೆ ದಾಳಿ ಮಾಡಿದವರೆಂದು ಖಚಿತವಾಗಿ ಗುರುತಿಸುವಲ್ಲಿ ವಿಫಲರಾಗಿದ್ದರು.
39 ಆರೋಪಿಗಳ ಪರ 14 ವಕೀಲರು, ಬೆನಿಫಿಟ್ ಆಫ್ ಡೌಟ್ ಆಧಾರದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಬೇಕು ಎಂದು ವಾದಿಸಿದರು. ಪರೀಕ್ಷಾ ಗುರುತಿನ ಪರೇಡ್ ಕಡ್ಡಾಯವಾಗಿತ್ತು, ಆದರೆ ಅದನ್ನು ಮಾಡಿರಲಿಲ್ಲ ಎಂಬುದು ಅವರ ವಾದದ ಮುಖ್ಯ ಅಂಶವಾಗಿತ್ತು.
ಆದರೆ, ದೂರುದಾರರ ಸಾಕ್ಷ್ಯ ವಿಶ್ವಾಸಾರ್ಹವೆಂದು ಕಂಡುಬಂದಾಗ ಮತ್ತು ದೂರುದಾರರು ನ್ಯಾಯಾಲಯದಲ್ಲಿ ಆರೋಪಿಯನ್ನು ಗುರುತಿಸಲು ಸಾಧ್ಯವಾದಾಗ ಪರೀಕ್ಷಾ ಗುರುತಿನ ಪರೇಡ್ ಕಡ್ಡಾಯವಲ್ಲ ಎಂಬುದು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ಪ್ರಾಸಿಕ್ಯೂಷನ್‌ನ ವಾದವಾಗಿತ್ತು.
ವಿಜಯ್, ಗುರುದತ್ ಮತ್ತು ಯುವತಿಯೊಬ್ಬರು ದಾಳಿಕೋರರನ್ನು ಗುರುತಿಸಿದ್ದಾರೆ ಎಂಬುದು ಸ್ಪಷ್ಟವಾಗಿದ್ದರೂ, ಇತರ ಸಂತ್ರಸ್ತರ ಹೇಳಿಕೆಗಳಲ್ಲಿ ಹೆಚ್ಚಿನವು ಪ್ರಕರಣಕ್ಕೆ ಪ್ರತಿಕೂಲವಾಗಿದ್ದುದನ್ನು ನ್ಯಾಯಾಧೀಶರು ಪರಿಗಣಿಸಿದ್ದರು. ಆರೋಪಿಗಳ ಅಪರಾಧ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ದಾಳಿ ಘಟನೆಗೆ ಸಂಬಂಧಿಸಿದಂತೆ ಇದ್ದ ವೀಡಿಯೊಗಳನ್ನು ಲಕ್ಷಾಂತರ ಜನರು ವೀಕ್ಷಿಸಿದ್ದರು. ಮಾತ್ರವಲ್ಲ, ಅವುಗಳ ಆಧಾರದಲ್ಲೇ ಪೊಲೀಸರು ಕೂಡ ದಾಳಿಕೋರರನ್ನು ಗುರುತಿಸಿ ಬಂಧಿಸಿದ್ದರು. ಆದರೆ ನ್ಯಾಯಾಧೀಶರು ಮೂರು ಪ್ರಮುಖ ಕಾರಣಗಳಿಗಾಗಿ ವೀಡಿಯೊ ತುಣುಕನ್ನು ತಿರಸ್ಕರಿಸಿದರು:
1.ಫೋರೆನ್ಸಿಕ್ ಸಾಕ್ಷಿಯ ಗುಣಮಟ್ಟ ಅನುಮಾನಾಸ್ಪದವಾಗಿದೆ.
2.ವೀಡಿಯೊಗಳು ಸಂಪೂರ್ಣವಾಗಿ ವಿಶ್ವಾಸಾರ್ಹವಾಗಿಲ್ಲ. ಏಕೆಂದರೆ ಕೆಲ ಪರೀಕ್ಷೆಗಳನ್ನು ಮಾಡಲಾಗಿಲ್ಲ.
3. ಭಾರತೀಯ ಸಾಕ್ಷಿ ಕಾಯ್ದೆಯಡಿಯಲ್ಲಿ ಇಲೆಕ್ಟ್ರಾನಿಕ್ ತುಣುಕಿನ ನಿರ್ದಿಷ್ಟ ದಾಖಲೆಯನ್ನು ಸಲ್ಲಿಸಲಾಗಿಲ್ಲ.
ವೀಡಿಯೊಗಳು ತಿರುಚಿದ್ದಲ್ಲ ಎಂಬ ವರದಿಯಿದ್ದರೂ, ಕ್ರಾಸ್ ಎಕ್ಸಾಮಿನೇಷನ್ ಸಮಯದಲ್ಲಿ ಪೊಲೀಸರು ಗುಣಮಟ್ಟ ದೃಢೀಕರಣ ಪ್ರಮಾಣಪತ್ರ ಸಂಗ್ರಹಿಸಿರಲಿಲ್ಲ ಅಥವಾ ವಿಧಿವಿಜ್ಞಾನ ವರದಿಗೆ ಸಹಿ ಮಾಡಿರಲಿಲ್ಲ ಎಂದು ತಿಳಿದುಬಂದಿದೆ. ಈ ಲೋಪಗಳನ್ನು ನ್ಯಾಯಾಧೀಶರು ಉಲ್ಲೇಖಿಸಿದ್ದರು.
ಇನ್ನು ಈ ವೀಡಿಯೋಗಳನ್ನು ರೆಕಾರ್ಡ್ ಮಾಡಿದ್ದ ಕ್ಯಾಮರಾಮ್ಯಾನ್ ರಾಜೇಶ್ ಪೂಜಾರಿ, ಯಾವ ಆರೋಪಿ ಯಾವ ಸಂತ್ರಸ್ತರಿಗೆ ಯಾವ ರೀತಿಯಲ್ಲಿ ತೊಂದರೆ ಕೊಟ್ಟಿದ್ದಾನೆ ಎಂಬ ಬಗ್ಗೆ ನಿರ್ದಿಷ್ಟವಾಗಿ ಪೊಲೀಸರೆದುರು ಹೇಳಿಕೆ ನೀಡಿಲ್ಲ ಎಂದಿರುವ ಕೋರ್ಟ್, ಅದರಿಂದಾಗಿ ಅವರ ಸಾಕ್ಷ್ಯ ಅನುಮಾನ ಮೂಡಿಸುತ್ತದೆ ಎಂದಿತು.
ಹಾಗಾದರೆ ಈ ಪ್ರಕರಣದಲ್ಲಿ ಪೊಲೀಸರು ಅರ್ಧಂಬರ್ಧ ಕೆಲಸ ಮಾಡಿದರೇ? ಸಾಕ್ಷ್ಯ ಸಂಗ್ರಹಿಸುವಲ್ಲಿ ಅವರು ಅಸಮರ್ಥತೆ ತೋರಿಸಿದರೇ? ಅಥವಾ ನ್ಯಾಯಾಲಯ ಸಾಕ್ಷ್ಯವನ್ನು ಪರಿಗಣಿಸುವಲ್ಲಿ ವಿಫಲವಾಗಿದೆಯೇ? ಸಾಕ್ಷ್ಯಗಳ ವ್ಯಾಖ್ಯಾನದಲ್ಲಿ ಅದು ತಪ್ಪಿದೆಯೆ?
ವಿಚಾರಣಾ ನ್ಯಾಯಾಲಯ ಡಿಜಿಟಲ್ ಸಾಕ್ಷ್ಯದ ಆಧಾರದ ಮೇಲೆ ಆರೋಪಿಯನ್ನು ಗುರುತಿಸುವ ಪ್ರಯತ್ನ ಮಾಡದೆ ನಿಷ್ಕ್ರಿಯ ವಿಧಾನವನ್ನು ಅಳವಡಿಸಿಕೊಂಡಿದೆ.
ಅಲ್ಲದೆ, ಸಾಕ್ಷ್ಯಗಳಲ್ಲಿನ ಸಣ್ಣ ಲೋಪಗಳು ಮತ್ತು ತನಿಖೆಯಲ್ಲಿನ ದೋಷಗಳು ಸಾಕ್ಷ್ಯದ ಪವಿತ್ರತೆಯನ್ನು ಹಾಳುಮಾಡುವುದಿಲ್ಲ ಎಂಬುದು ಪರಿಣಿತರ ಅಭಿಪ್ರಾಯ.
ಘಟನೆಯ ವೀಡಿಯೊ ಮತ್ತು ಗುರುದತ್ ಮತ್ತು ವಿಜಯ್ ಅವರ ಹೇಳಿಕೆಗಳು ಆರೋಪಿಗಳು ಅಪರಾಧ ಮಾಡಿದ್ದಾರೆ ಎಂಬುದನ್ನು ಹೇಳುತ್ತವೆ.
ಆದರೆ ನ್ಯಾಯಾಧೀಶರು ಯಾವುದನ್ನೂ ಪರಿಗಣಿಸಿಲ್ಲ ಎಂಬುದು ಸ್ಪಷ್ಟವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ತೀರ್ಪು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ವೀಡಿಯೊ ತಿರುಚಲಾಗಿಲ್ಲ ಎಂದು ವಿಧಿವಿಜ್ಞಾನ ವರದಿ ಹೇಳಿದ್ದರೂ, ಎಲ್ಲಾ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಧೀಶರು ಹೇಳಿರುವುದು ಸಂಪೂರ್ಣ ಪಕ್ಷಪಾತಿ ನಿಲುವು ಎಂಬ ತಕರಾರು ಕೂಡ ವ್ಯಕ್ತವಾಗಿದೆ.
ನ್ಯಾಯಾಲಯಗಳು ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕೇ ವಿನಃ ಸಾಕ್ಷ್ಯಗಳ ಹೇಳಿಕೆಯಲ್ಲಿರುವ ವ್ಯತ್ಯಾಸಗಳಲ್ಲಿ ಸಿಲುಕಬಾರದು ಎಂದು ಸುಪ್ರೀಂ ಕೋರ್ಟ್ ಹಲವಾರು ಬಾರಿ ಹೇಳಿದೆ. ಸಾಕ್ಷಿಗಳು ತಿರುಗಿ ಬೀಳುವುದು ಸಾಮಾನ್ಯ. ಅತ್ಯಾಚಾರ ಪ್ರಕರಣಗಳಲ್ಲಿ ಸ್ವತಃ ಸಂತ್ರಸ್ತೆಯೇ ತಿರುಗಿ ಬಿದ್ದರೂ ನ್ಯಾಯಾಲಯಗಳು ಶಿಕ್ಷೆ ನೀಡಿವೆ ಎನ್ನುತ್ತಾರೆ ಬೆಂಗಳೂರಿನ ನ್ಯಾಯವಾದಿ ರಾಹುಲ್ ಮಾಚಯ್ಯ.
ಈ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಬೇಕು ಎಂಬ ಒತ್ತಾಯಗಳೂ ಕೇಳಿಬಂದಿವೆ.
ಮಂಗಳೂರು ಹೋಂಸ್ಟೇ ದಾಳಿ ನಂತರದ ಈ 12 ವರ್ಷಗಳಲ್ಲಿ ಅನೈತಿಕ ಪೊಲೀಸ್‌ಗಿರಿ ರಾಜ್ಯಾದ್ಯಂತ ವ್ಯಾಪಿಸಿದೆ.
ಸುಮಾರು ಎರಡು ದಶಕಗಳಿಂದ ಕರಾವಳಿ ಕರ್ನಾಟಕದಲ್ಲಿ ಹಿಂದುತ್ವ ಸಂಘಟನೆಗಳ ಅಬ್ಬರ ಹೆಚ್ಚಿದೆ. ಬೇರೆ ಬೇರೆ ಧರ್ಮದ ಯುವಕ ಯುವತಿಯರು ಒಟ್ಟಿಗೆ ಕಾಣಿಸಿಕೊಂಡರೆ ಹಲ್ಲೆ ನಡೆಸುವುದು ನಿರಂತರವಾಗಿ ನಡೆದಿದೆ. ಅದೀಗ ಸರ್ವೇ ಸಾಮಾನ್ಯ ಎಂಬಂತಾಗಿಬಿಟ್ಟಿದೆ.
ಇತ್ತೀಚೆಗೆ ಈ ಪ್ರವೃತ್ತಿ ಕರ್ನಾಟಕದ ಇತರ ಭಾಗಗಳಿಗೂ ಹರಡಿದೆ. ಕಳೆದ ಎರಡು ವರ್ಷಗಳಲ್ಲಿ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಮುಸ್ಲಿಮ್ ಮಹಿಳೆ ಮೇಲೆ ನಡೆದ ಭೀಕರ ಸಾಮೂಹಿಕ ಅತ್ಯಾಚಾರ ಸೇರಿದಂತೆ ದಾವಣಗೆರೆ ಮತ್ತು ಹಾವೇರಿಯಲ್ಲಿ ತಲಾ ಎರಡು ದಾಳಿಗಳು ನಡೆದಿದ್ದರೆ, ಚಿಕ್ಕಬಳ್ಳಾಪುರ ಮತ್ತು ಬಾಗಲಕೋಟೆಯಲ್ಲಿ ತಲಾ ಒಂದು ಘಟನೆ ವರದಿಯಾಗಿದೆ.
(The News Minute ನಲ್ಲಿ ಪ್ರಕಟವಾದ ಈ ವರದಿಯನ್ನು The Ground Truth Project ನ Report for the World ಸಹಕಾರದಿಂದ ಮಾಡಲಾಗಿದೆ.)