ಅಳಿವಿನ ಅಂಚಿನಲ್ಲಿ ಮಂಗಳೂರು ಹೆಂಚು
►ಕ್ಷೀಣಿಸಿದ ಬೇಡಿಕೆ, ಕಚ್ಚಾವಸ್ತುಗಳ ಕೊರತೆ ►ಗಾಯದ ಮೇಲೆ ಬರೆ ಎಳೆದ ಜಿಎಸ್‌ಟಿ ಏರಿಕೆ
ಮಂಗಳೂರು: ಮಂಗಳೂರು ಹೆಂಚುಗಳು ಎಂದರೆ ಕರ್ನಾಟಕದ ಪಾಲಿನ ಹೆಮ್ಮೆಯಾಗಿ ಗುರುತಿಸಲ್ಪಟ್ಟಿತ್ತು. ಮಂಗಳೂರು ಮೂಲದ ಹೆಂಚಿಗೆ ವಿದೇಶದಲ್ಲೂ ಹೆಚ್ಚಿನ ಬೇಡಿಕೆಯಿದ್ದ ಒಂದು ಕಾಲವಿತ್ತು. ಇಲ್ಲಿನ ಜನಸಾಮಾನ್ಯರಿಗೆ ಬದುಕು ಕಟ್ಟಿಕೊಟ್ಟ ಹೆಂಚು ಉದ್ಯಮವು ಬರಬರುತ್ತಾ ಕ್ಷೀಣಿಸುತ್ತಾ ಬಂದಿರುವುದಂತೂ ದುರಂತ. ಆರ್ಥಿಕ ಅಡಚಣೆ ಮತ್ತು ಬೇಡಿಕೆ ಕಡಿಮೆಯಾದಂತೆ ಉದ್ಯಮಗಳು ಮೂಲೆಗುಂಪಾಗುವುದು ಸ್ವಾಭಾವಿಕವಾದರೂ, ಸಾವಿರಾರು ಸಣ್ಣ, ಮಧ್ಯಮ ವರ್ಗದ ಜನರಿಗೆ ಉದ್ಯೋಗ ನೀಡಿದ ಹೆಂಚು ಉದ್ಯಮವು ಇಂದು ಬೆರಳೆಣಿಕೆಯಷ್ಟು ಕಾರ್ಖಾನೆಗಳ ಮೂಲಕ ಕುಂಟುತ್ತಾ ಸಾಗುತ್ತಿದೆ. ಬೇಡಿಕೆಗಳು ಕಡಿಮೆಯಾಗಿದ್ದು ಮಾತ್ರವಲ್ಲದೆ, ಹೆಂಚು ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳಾದ ಆವೆಮಣ್ಣು, ಕಟ್ಟಿಗೆ, ತೈಲದ ಬೆಲೆ ಏರಿಕೆ, ಜೊತೆಗೆ ಸುಮಾರು ಶೇ.5ರಷ್ಟಿದ್ದ ಜಿಎಸ್‌ಟಿಯು ಶೇ.12ಕ್ಕೆ ಏರಿಕೆ ಆಗಿರುವುದು ಕೂಡ ಹೆಂಚು ಉದ್ಯಮದ ಅವನತಿಗೆ ಕಾರಣ ಎನ್ನಲಾಗುತ್ತಿದೆ.
ಉದ್ಯೋಗ ಕಳಕೊಂಡ ಕಾರ್ಮಿಕರು ಪರ್ಯಾಯ ಉದ್ಯೋಗ ಅರಸಿಕೊಂಡರು. ಅದೊಂದು ಖಾಸಗಿ ಉದ್ಯಮವಾದ ಕಾರಣ ಅಲ್ಲಿನ ಆರ್ಥಿಕ ಸಂಕಷ್ಟಗಳಿಗೆ ಸರಕಾರವನ್ನು ಹೊಣೆಯನ್ನಾಗಿಸುವುದು ಸಾಧ್ಯವಿಲ್ಲದಿದ್ದರೂ, ಕಣ್ಮರೆಯಾಗುವ ಅಂಚಿನಲ್ಲಿರುವ, ಜನಸಾಮಾನ್ಯರಿಗೆ ಉದ್ಯೋಗ ನೀಡಬಹುದಾದ ಉದ್ಯಮವೊಂದರ ಉಳಿವಿಗೆ ಸರಕಾರಿ ಮಟ್ಟದಲ್ಲಿ ಪ್ರಯತ್ನ ಸಾಗಿದರೆ ಅದೊಂದು ಉತ್ತಮ ಬೆಳವಣಿಗೆಯಾಗಬಹುದು ಎಂಬುದು ಹೆಂಚು ಉದ್ಯಮದಲ್ಲಿ ಹಲವು ಕಾಲ ಕಾರ್ಯನಿರ್ವಹಿಸಿದವರ ಅಭಿಪ್ರಾಯ.
1865- 1905ರ ನಡುವೆ ಬಾಸೆಲ್ ಮಿಷನ್ ಮಂಗಳೂರು ಮತ್ತು ಕ್ಯಾಲಿಕಟ್‌ನಲ್ಲಿ ಪ್ರಮುಖ ಕೈಗಾರಿಕಾ ಮತ್ತು ವ್ಯಾಪಾರ ನೆಲೆಗಳೊಂದಿಗೆ ಮಲಬಾರ್ ಕರಾವಳಿಯಲ್ಲಿ ಏಳು ಹೆಂಚು ಕಾರ್ಖಾನೆಗಳನ್ನು ಸ್ಥಾಪಿಸಿತು. ಹೆಂಚುಗಳು ಹೆಚ್ಚಿನ ಮಳೆಯ ವಾತಾವರಣದಲ್ಲಿ ಪರಿಣಾಮಕಾರಿ ಎಂಬುದು ಸಾಬೀತಾದ ಕಾರಣ ಇಲ್ಲಿನ ಹೆಂಚುಗಳನ್ನು ಪೂರ್ವ ಆಫ್ರಿಕಾ, ಯಮನ್, ಅಡೆನ್, ಬಸರಾ, ಸುಮಾತ್ರಾ, ಬ್ರಿಟಿಷ್ ಬೊರ್ನಿಯೊ ಮತ್ತು ಆಸ್ಟ್ರೇಲಿಯದಂತಹ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತಿದ್ದವು. ಒಟ್ಟಾರೆಯಾಗಿ 1900ರ ಹೊತ್ತಿಗೆ, ಮಂಗಳೂರಿನಲ್ಲಿ ಹೆಂಚುಗಳನ್ನು ಉತ್ಪಾದಿಸುವ 25 ಕಾರ್ಖಾನೆಗಳು ಇದ್ದರೆ, 1994ರ ಸುಮಾರಿಗೆ ಅವುಗಳ ಸಂಖ್ಯೆ ದುಪ್ಪಟ್ಟು ಹೆಚ್ಚಳವಾಗಿ 75 ಹೆಂಚು ಕಾರ್ಖಾನೆಗಳು ಕಾರ್ಯಾಚರಿಸುತ್ತಿದ್ದವು ಎನ್ನಲಾಗಿದೆ.
ಈ ಕಾರ್ಖಾನೆಗಳಲ್ಲಿ ಉತ್ಪಾದಿಸಿದ ಹೆಂಚುಗಳಿಗೆ ಭಾರತೀಯ ಉಪಖಂಡ ಮತ್ತು ಪೂರ್ವ ಆಫ್ರಿಕದಾದ್ಯಂತ ಹೆಚ್ಚಿನ ಬೇಡಿಕೆಯಿತ್ತು. ವಿಶ್ವ ಪಾರಂಪರಿಕ ತಾಣವಾದ ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಸ್ ಮಂಗಳೂರು ಹೆಂಚುಗಳನ್ನು ಹೊಂದಿವೆ. ಬರಬರುತ್ತಾ ಈ ಹೆಂಚುಗಳ ಜೊತೆಗೆ ಹೆಚ್ಚಿನ ಕಾರ್ಖಾನೆಗಳಲ್ಲಿ ಇಟ್ಟಿಗೆಗಳಂತಹ ವಸ್ತುಗಳನ್ನೂ ತಯಾರಿಸಲು ಪ್ರಾರಂಭಿಸಲಾಯಿತು.
1977ರಲ್ಲಿ ಭಾರತೀಯರ ಕೈಗೆ ಹಸ್ತಾಂತರವಾಗುವ ವರೆಗೆ ಹೆಂಚು ಉದ್ಯಮವು ಬ್ರಿಟಿಷ್ ಭಾರತದಲ್ಲಿನ ಬಾಸೆಲ್ ಮಿಷನ್ ಹಿಡಿತದಲ್ಲಿದ್ದವು. 1865ರಿಂದ 1905 ರವರೆಗೆ ಬಾಸೆಲ್ ಮಿಷನ್, ಮಲಬಾರ್ ಮತ್ತು ದಕ್ಷಿಣ ಕನ್ನಡದಲ್ಲಿ ಏಳು ಕಾರ್ಖಾನೆಗಳನ್ನು ಸ್ಥಾಪಿಸಿದ್ದು, ಆ ಪೈಕಿ ಮೂರು ಕಾರ್ಖಾನೆಗಳು ಮಾತ್ರ ಈಗ ಉಳಿದಿವೆ. ಸ್ಥಳೀಯ ಉದ್ಯಮಿಗಳು ಸ್ಥಾಪಿಸಿದ ನೂರಾರು ಸ್ಪರ್ಧಾತ್ಮಕ ಕಾರ್ಖಾನೆಗಳು ಇದೇ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿವೆ.
2015ರವರೆಗೆ ಕುಂಟುತ್ತಾ ಸಾಗುತ್ತಿದ್ದ ಹೆಂಚು ಉದ್ಯಮವು ಕ್ಷೀಣಿಸುತ್ತಾ ಬಂದಿದ್ದು, 2013ರ ಸುಮಾರಿಗೆ ಮಂಗಳೂರಿನಲ್ಲಿ 3 ಹಾಗೂ ಉಡುಪಿ ಜಿಲ್ಲೆಯಲ್ಲಿ 9 ಹೆಂಚು ಕಾರ್ಖಾನೆಗಳು ಕಾರ್ಯಾಚರಿಸುತ್ತಿತ್ತು ಎನ್ನಲಾಗಿದೆ. ಬೇಡಿಕೆ, ಕಚ್ಚಾವಸ್ತುಗಳು ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ಹೆಚ್ಚಿನ ಎಲ್ಲಾ ಕಾರ್ಖಾನೆಗಳು ಮುಚ್ಚಲ್ಪಟ್ಟವು. ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳು ಸಣ್ಣ ಇಟ್ಟಿಗೆಗಳು ಮತ್ತಿತರ ವಸ್ತುಗಳಾದ ಹೋಲೊ ಕ್ಲೈ ಬ್ಲಾಕ್ಸ್, ಬ್ರಿಕ್ಸ್, ರೂಫಿಂಗ್ ಟೈಲ್ಸ್, ಜಾಲಿ ಇತ್ಯಾದಿ ತಯಾರಿಕೆಯತ್ತ ಮುಖ ಮಾಡಿದೆ. ಎಲ್ಲೆಂದರಲ್ಲಿ ಕಾಂಕ್ರಿಟ್ ಕಟ್ಟಡಗಳು ತಲೆ ಎತ್ತುತ್ತಿದ್ದು, ಹೆಂಚು ಉದ್ಯಮಕ್ಕೆ ಹೊಡೆತ ಬೀಳಲು ಅದೂ ಒಂದು ಕಾರಣ ಎನ್ನಬಹುದು.
1868ರಲ್ಲಿ ಸ್ಥಾಪನೆಗೊಂಡ ಅಲ್ಬುಕರ್ಕ್ ಟೈಲ್ಸ್ ವರ್ಕ್ಸ್ ಕಾರ್ಖಾನೆ ಮತ್ತು 1916ರಲ್ಲಿ ಸ್ಥಾಪನೆಗೊಂಡ ಕ್ಯಾಸ್ಸಿಯಾ ಹೆಂಚು ಕಾರ್ಖಾನೆ ಇಂದಿಗೂ ಹೆಂಚು ತಯಾರಿಯಲ್ಲಿ ಮುಂದುವರಿಯುತ್ತಿದ್ದು, ಮಂಗಳೂರು ನಗರ ವಲಯದಲ್ಲಿ ಹೆಂಚು ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಖಾನೆಗಳು ಎನ್ನಲಾಗಿದೆ. ಹೆಂಚುಗಳ ಜೊತೆಗೆ ಇತರ ವಿವಿಧ ಆವೆಮಣ್ಣಿನ ಉತ್ಪನ್ನಗಳನ್ನೂ ಈ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತಿದೆ. ಅಲೆಕ್ಸ್ ಪೈ ಸ್ಥಾಪಿಸಿದ ಅಲ್ಬುಕರ್ಕ್ ಟೈಲ್ಸ್ ವರ್ಕ್ಸ್
ಕಾರ್ಖಾನೆಯನ್ನು ಬಳಿಕ ಅವರ ಮಗ ಫೆಲಿಕ್ಸ್ ಪೈ ಮುನ್ನಡೆಸಿದ್ದು, ಬಳಿಕ ಅವರ ಮಗ ಸಿರಿಲ್ ಎಸ್. ಅಲ್ಬುಕರ್ಕ್ ಮುನ್ನಡೆಸಿದರು. ಇದೀಗ ಸಿರಿಲ್ ಅವರ ಮಗ ಜಾರ್ಜ್ ಅಲ್ಬುಕರ್ಕ್ ಪೈ ಒಡೆತನದಲ್ಲಿ ಕಾರ್ಖಾನೆಯು ಬೋಳಾರ ಬಳಿಯ ಹೊಯ್ಗೆ ಬಝಾರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಅದೇ ರೀತಿ ಎಚ್.ಜೆ.ಲೋಬೊ ಅವರಿಂದ ಸ್ಥಾಪನೆಗೊಂಡ ಕ್ಯಾಸ್ಸಿಯಾ ಹೆಂಚು ಕಾರ್ಖಾನೆಯು ಅವರ ಮಗ ಎಫ್.ಎಂ.ಲೋಬೊ ಮುನ್ನೆಡೆಸಿದ್ದು, ಇದೀಗ ಎಫ್.ಎಂ.ಲೋಬೊ ಅವರ ಮಗ ಇಯಾನ್ ಡೆಸ್ಮಂಡ್ ಲೋಬೊ ಮೂಲಕ ಮುನ್ನಡೆಯುತ್ತಿದೆ. ಈ ವರ್ಷದಿಂದ ಉದ್ಯಮ ಪರವಾನಿಗೆ ನವೀಕರಣ ಸಂಬಂಧಿಸಿ ತೊಡಕು ಉಂಟಾಗಿರುವ ಕಾರಣದಿಂದ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದರೂ ಉದ್ದಿಮೆ ಪರವಾನಿಗೆ ನವೀಕರಣ ಪ್ರಕ್ರಿಯೆ ಪೂರ್ಣಗೊಂಡರೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೆಂಚು ತಯಾರಿಕೆಯನ್ನು ಅಭಿಮಾನದ ಸಂಕೇತವಾಗಿ ಕಾಣುವ ಸಂಸ್ಥೆಯ ಮಾಲಕ ಐ.ಡಿ. ಲೋಬೊ ಹೇಳುತ್ತಾರೆ. ನಗರ ಹೊರವಲಯದ ಗುರುಪುರ ಪರಿಸರದಲ್ಲೂ ಪೂಂಜಾ ಟೈಲ್ಸ್, ರಾಜ್ ಟೈಲ್ಸ್ ಅಲ್ಲದೆ ಗಣೇಶ್ ಟೈಲ್ಸ್ ಎಂಬ ಹೆಂಚು ಕಾರ್ಖಾನೆಗಳು ಕಾಯಾಚರಿಸುತ್ತಿದೆ.
ಮಂಗಳೂರು ಹೆಂಚಿನ ಉದಯ: ಸ್ವಾತಂತ್ರ್ಯ ಪೂರ್ವದಲ್ಲೇ ಮಂಗಳೂರಿನಲ್ಲಿ ಬಾಸೆಲ್ ಮಿಷನ್‌ನ ಇಂಜಿನಿಯರ್ ಆಗಿದ್ದ ಜರ್ಮನ್ ಮಿಷನರಿ ಜಾರ್ಜ್ ಪ್ಲೆಬ್ಸ್ಟ್ (1823-1888) ಎಂಬವರು ಮಂಗಳೂರು ಹೆಂಚು ತಯಾರಿಕೆಗೆ ನಾಂದಿ ಹಾಡಿದ್ದರು. 1834ರಿಂದ ದಕ್ಷಿಣ ಭಾರತದಲ್ಲಿ ಸಕ್ರಿಯವಾಗಿದ್ದ ಕ್ರಿಶ್ಚಿಯನ್ ಮಿಷನರಿ ಸೊಸೈಟಿಯಾದ ಸ್ವಿಸ್-ಜರ್ಮನ್ ಬಾಸೆಲ್ ಮಿಷನ್ 1865ರಲ್ಲಿ ಸ್ಥಾಪಿಸಲಾಯಿತು. ಪ್ರಾರಂಭದಲ್ಲಿ ಟೆರಾಕೋಟಾ ಛಾವಣಿಯ-ಟೈಲ್ ಉದ್ಯಮ, ಮುದ್ರಣ ಮತ್ತು ನೇಯ್ಗೆ-ಪಥದ ಭಾಗವಾಗಿ ಉದ್ಯೋಗವನ್ನು ಸೃಷ್ಟಿಸುವ ಉದ್ದೇಶದಿಂದ ಮಿಷನ್ ಸ್ಥಾಪಿಸಲಾಗಿತ್ತು.
1865ರಲ್ಲಿ ಬಾಸೆಲ್ ಮಿಷನ್ ಸಂಸ್ಥೆಯು ಮೊದಲ ಹೆಂಚು ಕಾರ್ಖಾನೆಯನ್ನು ಸ್ಥಾಪಿಸಿತು. ಸ್ಥಳೀಯವಾಗಿ ಈ ಹೆಂಚು ಕಾರ್ಖಾನೆಗಳನ್ನು ಬಾಸೆಲ್ ಮಿಷನ್ ಟೈಲ್ ಫ್ಯಾಕ್ಟರಿ ಎಂದು ಉಲ್ಲೇಖಿಸಲಾಗಿದೆ. ಇದು ಭಾರತದ ಮೊದಲ ಟೈಲ್ ಫ್ಯಾಕ್ಟರಿಯಾಗಿದ್ದು, ಮಂಗಳೂರಿನ ಮೋರ್ಗನ್ಸ್ ಗೇಟ್ ಬಳಿಯ ನೇತ್ರಾವತಿ ನದಿಯ ದಡದಲ್ಲಿದೆ. ಇದಕ್ಕೆ ಈಗ ಕಾಮನ್‌ವೆಲ್ತ್ ಟ್ರಸ್ಟ್ ಲಿಮಿಟೆಡ್ ಎಂಬ ಹೆಸರಿದೆ. ಇದು ಉಳ್ಳಾಲ ಸೇತುವೆಯಿಂದ 100 ಮೀ.(0.10 ಕಿ.ಮೀ.) ದೂರದಲ್ಲಿದೆ.
ಜಾರ್ಜ್ ಪ್ಲೆಬ್ಸ್ಟ್ 1851ರಲ್ಲಿ ಜರ್ಮನ್-ಸ್ವಿಸ್ ಬಾಸೆಲ್ ಮಿಷನರಿಯ ಸಾಮಾನ್ಯ ಉದ್ಯೋಗಿಯಾಗಿ ಭಾರತಕ್ಕೆ ಬಂದವರು. ವಿಶೇಷವೆಂದರೆ ಬಾಸೆಲ್ ಮಿಷನ್ ವತಿಯಿಂದ ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಮುದ್ರಣ ತಂತ್ರಗಳನ್ನು ಸುಧಾರಿಸುವ ಉಸ್ತುವಾರಿಯನ್ನು ಪ್ಲೆಬ್ಸ್ಟ್ ಅವರಿಗೆ ವಹಿಸಲಾಗಿತ್ತು. ಪ್ರಿಂಟಿಂಗ್ ಪ್ರೆಸ್ ಅನ್ನು ಸುಧಾರಿಸುವ ಕೆಲಸದಲ್ಲಿ ಪ್ಲೆಬ್ಸ್ಟ್ ಮಗ್ನರಾಗಿದ್ದ ವೇಳೆ, ಸ್ಥಳೀಯ ಕುಂಬಾರಿಕೆ ಮತ್ತು ನಾಡ- ಹೆಂಚುಗಳಲ್ಲಿ ರಂಧ್ರಗಳಿ ರುವುದನ್ನು ಗಮನಿಸಿದ ಅವರು, ಕುಂಬಾರಿಕೆ ಘಟಕಗಳಲ್ಲಿ ಬಳಸುತ್ತಿರುವ ಸಾಮಾನ್ಯ ಜೇಡಿಮಣ್ಣಿಗೆ ಬದಲಾಗಿ ನದಿಗಳ ವಿಶೇಷ ಹಳದಿ ಜೇಡಿಮಣ್ಣು ಬಳಸುವಂತೆ ಕೇಳಿಕೊಂಡರು.
ನೇತ್ರಾವತಿ ಮತ್ತು ಗುರುಪುರ ನದಿಗಳ ಮಣ್ಣಿನ ಮಾದರಿಯನ್ನು ಸ್ವಿಸ್ ಮತ್ತು ಜರ್ಮನ್ ಪ್ರಯೋಗಾಲಯಕ್ಕೆ ಕೊಂಡೊಯ್ದು ಪರೀಕ್ಷಿಸಲಾಯಿತು. ಪ್ಲೆಬ್ಸ್ಟ್ ಅನಾರೋಗ್ಯ ನಿಮಿತ್ತ ರಜೆಯ ಮೇಲೆ ಯುರೋಪ್‌ಗೆ ಹಿಂದಿರುಗಿದಾಗ, ಜೇಡಿಮಣ್ಣನ್ನು ಮೆರುಗುಗೊಳಿಸುವ ತಂತ್ರಗಳ ಬಗ್ಗೆ ಅಲ್ಲಿ ಅಧ್ಯಯನ ನಡೆಸಿದರು. ಅವರು ಭಾರತದಲ್ಲಿ ಹೆಂಚು ತಯಾರಿಸುವ ಸಲುವಾಗಿ 1863ರಲ್ಲಿ ಮತ್ತೆ ಭಾರತಕ್ಕೆ ಮರಳಿದರು. ಮೂಲ ಹೆಂಚು ವಿನ್ಯಾಸವು ಫ್ರಾನ್ಸ್ ನಲ್ಲಿ ಪೇಟೆಂಟ್ ಪಡೆದ ಹೆಂಚು ವಿನ್ಯಾಸಗಳಿಂದ ಪ್ರೇರಿತವಾಗಿದೆ ಎಂದು ನಂಬಲಾಗಿದೆ.
ಮಂಗಳೂರು ಹೆಂಚುಗಳ ತಯಾರಿಕೆಗಾಗಿ 1865ರಲ್ಲಿ ಅಚ್ಚುಗಳನ್ನು ಉತ್ಪಾದಿಸಲಾಯಿತು. ಮನೆಯಲ್ಲಿ ತಯಾರಿಸಿದ ಒಲೆಯಲ್ಲಿ ಮರಳು ಮತ್ತು ಜೇಡಿಮಣ್ಣಿನ ಸರಿಯಾದ ಸಂಯೋಜನೆಯೊಂದಿಗೆ ಪ್ಲೆಬ್ಸ್ಟ್ ಈ ಕ್ಷೇತ್ರದಲ್ಲಿ ಪರಿಣತರಾಗಿರುವ ಭಾರತೀಯ ಕುಂಬಾರರ ಜೊತೆ ಕೆಲಸ ಮಾಡಿದರು. ಹಾಗೆ ಪ್ರತಿ ದಿನ ಕೇವಲ 360 ಹೆಂಚುಗಳಿಂದ ಪ್ರಾರಂಭಗೊಂಡ ಉತ್ಪಾದನೆಯು ಬಳಿಕ ವಾರ್ಷಿಕ 1 ಮಿಲಿಯನ್‌ಗೆ ಏರಿತು. ಹೆಂಚುಗಳು ಎಷ್ಟು ಜನಪ್ರಿಯವಾಯಿತು ಎಂದರೆ, ಅವುಗಳ ಬೇಡಿಕೆಯನ್ನು ಪೂರೈಸಲು ಇಲ್ಲಿನ ತಯಾರಿಕೆ ಸಾಕಾಗದ ಪರಿಸ್ಥಿತಿ ಬಂದೊದಗಿತು. ಬಳಿಕ ಮಂಗಳೂರಿನಲ್ಲಿ ಸ್ಪರ್ಧಾತ್ಮಕ ಟೈಲ್ ಕಾರ್ಖಾನೆಗಳು ಒಂದರ ಮೇಲೆ ಒಂದರಂತೆ ತಲೆ ಎತ್ತಿದವು. ಇದರಲ್ಲಿ ಅಲ್ಬುಕರ್ಕ್ ಆ್ಯಂಡ್ ಸನ್ಸ್ (1868), ರೇಗೊ ಆ್ಯಂಡ್ ಸನ್ಸ್ (1871), ಕ್ಯಾಸ್ಸಿಯಾ (1916) ಮತ್ತು ಸುಜೀರ್‌ಕಾರ್ಸ್ ಅವರ ಟೈಲ್ ವರ್ಕ್ಸ್ (1918) ಪ್ರಮುಖ ಕಾರ್ಖಾನೆಗಳು.
ಹೆಂಚು ತಯಾರಿಕಾ ವಿಧಾನ
ಮಂಗಳೂರಿನ ಹೆಂಚುಗಳಿಗೆ ಜೇಡಿಮಣ್ಣನ್ನು ನದಿ ಪಾತ್ರದಿಂದ ಸಂಗ್ರಹಿಸಿ, ಫಿಲ್ಟರ್ಮಾಡಿ ನಂತರ ಅಚ್ಚಿನಲ್ಲಿ ಹಾಕಲಾಗುತ್ತದೆ. ಹೆಚ್ಚುವರಿ ಜೇಡಿಮಣ್ಣನ್ನು ತೆಗೆದುಹಾಕಲಾಗುತ್ತದೆ ಮತ್ತು ಅದರ ವಿಶಿಷ್ಟ ಆಕಾರವನ್ನು ನೀಡಲು ಮತ್ತು ಕಾರ್ಖಾನೆಯ ಲೋಗೊ ಇರುವ ಅಚ್ಚನ್ನು ಯಂತ್ರಕ್ಕೆ ಜೋಡಿಸಲಾಗುತ್ತದೆ. ನಂತರ ಆಕಾರದ ಹೆಂಚನ್ನು ಅಚ್ಚಿನಿಂದ ತೆಗೆದು ಗೂಡುಗಳಲ್ಲಿ ಸಂಸ್ಕರಿಸಲಾಗುತ್ತದೆ. ಜೇಡಿಮಣ್ಣಿನಲ್ಲಿರುವ ಕಬ್ಬಿಣ ಅಂಶದಿಂದ ಹೆಂಚುಗಳು ವಿಶಿಷ್ಟವಾದ ಕೆಂಪು ಬಣ್ಣವನ್ನು ಪಡೆಯುತ್ತವೆ. ಮಂಗಳೂರು ಹೆಂಚುಗಳು ಅನೇಕ ವಿಶಿಷ್ಟ ಗುಣಗಳನ್ನು ಹೊಂದಿದ್ದು, ನದಿಪಾತ್ರದ ಜೇಡಿಮಣ್ಣಿನಿಂದ ತಯಾರಿಸಲಾದ ಈ ಹೆಂಚುಗಳು ನೈಸರ್ಗಿಕವಾಗಿ ನಿರೋಧಕ ಗುಣಲಕ್ಷಣಗಳನ್ನು ಹೊಂದಿವೆ. ಬೇಸಿಗೆಯಲ್ಲಿ ಮನೆಗಳನ್ನು
ತಂಪಾಗಿರಿಸುತ್ತದೆ ಮತ್ತು ಚಳಿಗಾಲದಲ್ಲಿ ಬೆಚ್ಚಗಿಡುತ್ತದೆ. ಮಾತ್ರವಲ್ಲದೆ, ಬೆಂಕಿಯಿಂದ ಉಂಟಾಗುವ ಹಾನಿಗೆ ತಡೆಯೊಡ್ಡುವ ಈ ಹೆಂಚುಗಳ ಆಕಾರ ಮತ್ತು ವಿನ್ಯಾಸವು ಗಾಳಿಯ ಸಂಚಾರವನ್ನು ನಿಯಂತ್ರಿಸಿ, ವಾತಾವರಣವನ್ನು ಸುಧಾರಿಸುವಂತೆಯೂ ಮಾಡುತ್ತದೆ.
ಕುಂದಾಪುರದ ಸಣ್ಣ ಹೆಂಚುಗಳು
ಮಂಗಳೂರಿನ ಹೊರತಾಗಿ ಕುಂದಾಪುರದಲ್ಲೂ ಹೆಂಚು ಉದ್ಯಮ ಛಾಪು ಒತ್ತಿದ್ದು, ಈಗಲೂ ಅತ್ಯುತ್ತಮ ರೀತಿಯಲ್ಲಿ ಕಾರ್ಯಾಚರಿಸುವ ಹೆಂಚು ಕಾರ್ಖಾನೆಗಳು ಕುಂದಾಪುರದಲ್ಲಿವೆ. ಅದೂ ಅಲ್ಲದೆ ಆರ್ಸಿಸಿ ಮನೆಗಳಿಗೆ ಉಪಯೋಗಿಸುವ ಸಣ್ಣ ಹೆಂಚುಗಳ ನಿರ್ಮಾಣ ಕೂಡ ಅಲ್ಲಿ ವ್ಯವಸ್ಥಿತ ರೀತಿಯಲ್ಲಿ ಮುಂದುವರಿಯುತ್ತಿದ್ದು, ಅಂತಹ ನಾಲ್ಕರಷ್ಟು ಸಣ್ಣಪುಟ್ಟ ಕಾರ್ಖಾನೆಗಳು ಕುಂದಾಪುರದಲ್ಲಿ ಕಾರ್ಯಾಚರಿಸುತ್ತಿವೆ. 1998ರಲ್ಲಿ ಯೂಸುಫ್ ಹಂಝರ ಮಾಲಕತ್ವದಲ್ಲಿ ಪ್ರಾರಂಭಗೊಂಡ ಕ್ಲಾಸಿಕ್ ಇಂಡಸ್ಟ್ರೀಸ್ ಎನ್ನುವ ಸಣ್ಣ ಹೆಂಚುಗಳ ನಿರ್ಮಾಣ ಘಟಕವು ತನ್ನ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸುತ್ತಿದೆ. ಆದರೆ, 2000 ಇಸವಿಯ ಆಸುಪಾಸಿನಲ್ಲಿದ್ದ ಬೇಡಿಕೆಯು ಕೊರೋನ ಬಳಿಕ ಕಡಿಮೆಯಾಗಿದ್ದರೂ, ಬೇಡಿಕೆಯನುಸಾರ ತಯಾರಿಕೆ ಮುಂದುವರಿದಿದ್ದು, ಕಾರ್ಖಾನೆೆಯು ಉತ್ತಮ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ ಎಂದು ಸಂಸ್ಥೆಯ ಮಾಲಕ ಯೂಸುಫ್ ಹಂಝ ಹೇಳುತ್ತಾರೆ.
ಮಂಗಳೂರಿನಲ್ಲಿ ಹೆಂಚು ಕಾರ್ಖಾನೆಗಳಿಗೆ ಬೀಗಜಡಿ ಯಲು ಆರ್ಥಿಕ ಅಡಚಣೆ ಅಥವಾ ಕಚ್ಛಾ ವಸ್ತುಗಳಾದ ಆವೆಮಣ್ಣು, ಇಂಧನ ದುಬಾರಿ, ಕಟ್ಟಿಗೆಗಳ ಕೊರತೆ ಮಾತ್ರ ಕಾರಣವಲ್ಲ. ನಗರ ಪ್ರದೇಶಗಳಲ್ಲಿ ಅತ್ಯಂತ ದುಬಾರಿಯಾದ ಎಕರೆಗಟ್ಟಲೆ ಭೂಮಿಯಲ್ಲಿ ಲಾಭದಾಯಕವಾದ ವಸತಿ ಸಮುಚ್ಚಯ ಮತ್ತಿತರ ಪರ್ಯಾಯ ಮಾರ್ಗವನ್ನು ಹುಡುಕುವವರು ಈ ಉದ್ಯಮದಿಂದ ಹಿಂದೆ ಸರಿಯುತ್ತಿರುವುದು ಕಾರಣ. ಗ್ರಾಮೀಣ ಪ್ರದೇಶಗಳಲ್ಲಿ ಹೆಂಚುಗಳಿಗೆ ಈಗಲೂ ಬೇಡಿಕೆ ಇದ್ದು, ಆವೆಮಣ್ಣು, ಕಟ್ಟಿಗೆ ಮತ್ತಿತರ ಕಚ್ಚಾವಸ್ತುಗಳು ಸುಲಭವಾಗಿ ಲಭ್ಯವಾದಲ್ಲಿ ಹೆಂಚು ಉದ್ಯಮವನ್ನು ಇನ್ನೂ ಮುಂದುವರಿಸುವುದು ಸಾಧ್ಯ.
-ಯೂಸುಫ್ ಹಂಝ, ಮಾಲಕರು, ಕ್ಲಾಸಿಕ್ ಇಂಡಸ್ಟ್ರೀಸ್ ಕುಂದಾಪುರ
ಕೆಲ ವರ್ಷಗಳಿಂದ ಹೆಂಚುಗಳಿಗೆ ಬೇಡಿಕೆ ಕಡಿಮೆಯಾಗಿದ್ದರೂ ಇದೀಗ ಮತ್ತೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಕಾರ್ಮಿಕರ ಕೊರತೆ ಅತಿಯಾಗಿ ಕಾಡುತ್ತಿದೆ. ಈ ಹಿಂದೆ ಉತ್ತರ ಕರ್ನಾಟಕ ಮೂಲದ ಕಾರ್ಮಿಕರು ಸಿಗುತ್ತಿದ್ದರು, ಅವರೆಲ್ಲರೂ ಬೇರೆ ಕಸುಬು ಹುಡುಕಿ ತೆರಳಿದ್ದಾರೆ. ಇದೀಗ ಉತ್ತರ ಭಾರತದ ಕಾರ್ಮಿಕರನ್ನು ನೆಚ್ಚಿಕೊಳ್ಳುವ ಅನಿವಾರ್ಯತೆ ಇದೆ. ಆದರೆ, ಅವರಿಗೆ ಹೆಂಚು ತಯಾರಿಕೆ ಬಗ್ಗೆ ಮಾಹಿತಿಯ ಕೊರತೆ ಇದೆ. ಕುಂದಾಪುರ ಕಡೆ ಆವೆ ಮಣ್ಣು, ಕಟ್ಟಿಗೆ ಮತ್ತಿತರ ಕಚ್ಚಾ ವಸ್ತುಗಳು ಕಡಿಮೆ ದರದಲ್ಲಿ ಸಿಗುತ್ತಿದ್ದು, ಕಾರ್ಮಿಕರ ಸಂಬಳ ಕೂಡ ಕಡಿಮೆ ಇದೆ. ಆ ಕಾರಣಕ್ಕಾಗಿ ಅಲ್ಲಿ ಹೆಂಚು ದರ ಕೂಡ ಕಡಿಮೆ ಇದೆ. ಅವರೊಂದಿಗೆ ಪೈಪೋಟಿ ನಡೆಸುವುದು ಕೂಡ ಸವಾಲಾಗಿದೆ. ಹಾಗಿದ್ದರೂ ಪರವಾನಿಗೆ ನವೀಕರಿಸಿದಲ್ಲಿ ಇಷ್ಟು ವರ್ಷಗಳಿಂದ ಮುನ್ನಡೆಸುತ್ತಾ ಬಂದಿರುವ ಶತಮಾನದಷ್ಟು ಹಳೆಯದಾದ ಈ ಕಾರ್ಖಾನೆಯನ್ನು ಮುಂದುವರಿಸುವುದು ನನ್ನ ಉದ್ದೇಶ. ಒಂದು ವೇಳೆ ಹೆಂಚು ತಯಾರಿಕೆ ಕಡಿಮೆಯಾದರೂ, ತಲೆತಲಾಂತರದಿಂದ ಬದುಕುಳಿದ ಈ ಕಾರ್ಖಾನೆಯ ಬಗ್ಗೆ ಮುಂದಿನ ತಲೆಮಾರಿಗೆ ಮಾಹಿತಿ ನೀಡುವ ಸಲುವಾಗಿ ಮ್ಯೂಸಿಯಂ ತರಹ ಉಳಿಸುವುದು ನನ್ನ ಅಭಿಲಾಷೆ.
-ಇಯಾನ್ ಡೆಸ್ಮಂಡ್ ಲೋಬೊ, ಮಾಲಕರು, ಕ್ಯಾಸ್ಸಿಯಾ ಹೆಂಚು ಕಾರ್ಖಾನೆ ಮಂಗಳೂರು
2010ರ ಸುಮಾರಿಗೆ ಉತ್ತರ ಕರ್ನಾಟಕದಾದ್ಯಂತ ಬೇಡಿಕೆ ಇದ್ದ ಕಾರಣದಿಂದ ಇಲ್ಲಿ ಹೆಂಚು ತಯಾರಿಕೆ ಮುಂದುವರಿದಿತ್ತು. ಬರಬರುತ್ತಾ ಅಲ್ಲಿ ಕೂಡ ಆರ್ಸಿಸಿ ಕಟ್ಟಡದತ್ತ ಜನರು ಆಸಕ್ತಿ ವಹಿಸಿದಾಗ ಇಲ್ಲಿನ ಹೆಂಚು ತಯಾರಿಕೆ ಕ್ಷೀಣಿಸುತ್ತಾ ಬಂದಿದೆ. ಇಲ್ಲಿ ಕಾರ್ಖಾನೆಯ ಉಸ್ತುವಾರಿ ವಹಿಸಿಕೊಂಡವರಿಗೆ ಆಸಕ್ತಿ ಕಡಿಮೆಯಾಗಿದ್ದು ಕೂಡ ಕಾರ್ಖಾನೆ ಸ್ಥಗಿತಗೊಳ್ಳಲು ಕಾರಣವಾಗಿರಬಹುದು. ನಾನು ಹತ್ತು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದು, ಆ ಹೊತ್ತಲ್ಲೂ ಬೇಡಿಕೆ ಕೊರತೆ ಕಾಡುತ್ತಿತ್ತು. ಒಟ್ಟಿನಲ್ಲಿ ಕಚ್ಚಾವಸ್ತುಗಳ ಕೊರತೆಯಿಂದ ಹೆಂಚು ತಯಾರಿಕೆ ಮೊಟಕುಗೊಂಡಿಲ್ಲ. ಬೇಡಿಕೆ ಇಲ್ಲದ ಕಾರಣ ಹೆಚ್ಚಿನ ಕಾರ್ಖಾನೆಗಳು ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.
-ಮುಹಮ್ಮದ್ ಎನ್., ನಿವೃತ್ತ ಸುಪರ್ ವೈಸರ್, ಕಾಮನ್ವೆಲ್ತ್ ಟೈಲ್ ಫ್ಯಾಕ್ಟರಿ ಮಂಗಳೂರು