ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ವಿಶ್ವದರ್ಜೆಗೆ
► ಒಂದೂವರೆ ದಶಕದ ಹಿಂದಿನ ಯೋಜನೆಗೆ ಮರುಜೀವ
ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಇನ್ನೇನು ಗರಿಷ್ಠ ಮೂರು ವರ್ಷಗಳೊಳಗೆ ವಿಶ್ವದರ್ಜೆಗೇರುವ ಭರವಸೆ ಕೇಂದ್ರದ ರೈಲ್ವೆ ಸಚಿವರಿಂದ ಜಿಲ್ಲೆಯ ಜನತೆಗೆ ದೊರಕಿದೆ. ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟರ ಮುತುವರ್ಜಿಯಲ್ಲಿ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸೋಮಣ್ಣ ಮಂಗಳೂರಿನಲ್ಲಿ ಇತ್ತೀಚೆಗೆ ಸಭೆ ನಡೆಸಿ, ವಿಶ್ವದರ್ಜೆಯ ರೈಲು ಅಭಿವೃದ್ಧಿ ಕಾಮಗಾರಿಯ ರೂಪುರೇಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದು ಕರಾವಳಿಯ ರೈಲು ಪ್ರಯಾಣಿಕರಲ್ಲಿ ಆಶಾಭಾವನೆ ಮೂಡಿಸಿದೆ.
ಅಂದ ಹಾಗೆ, ಮಂಗಳೂರು ರೈಲು ನಿಲ್ದಾಣ ವಿಶ್ವ ದರ್ಜೆಗೇರುವ ಯೋಜನೆ ಇಂದು-ನಿನ್ನೆಯ ಭರವಸೆ ಅಥವಾ ಯೋಜನೆಯಲ್ಲ. 2009ರ ಜುಲೈ 3ರಂದು ಮಂಗಳೂರು ಸೇರಿದಂತೆ ದೇಶದ 50 ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೇರಿಸುವ ಬಗ್ಗೆ ಆಗಿನ ರೈಲ್ವೆ ಸಚಿವೆ ಮಮತಾ ಬಾನರ್ಜಿ ಬಜೆಟ್ನಲ್ಲಿ ಘೋಷಿಸಿದ್ದರು.
ಆದರೆ ಕಳೆದ ಸುಮಾರು ಒಂದೂವರೆ ದಶಕದಲ್ಲಿ ಮಂಗಳೂರು ಸೆಂಟ್ರಲ್ ಅಥವಾ ಮಂಗಳೂರು ಜಂಕ್ಷನ್ ಇದರಲ್ಲಿ ಯಾವುದನ್ನು ವಿಶ್ವದರ್ಜೆ ಗೇರಿಸುವುದು ಎಂಬ ಲೆಕ್ಕಾಚಾರದಲ್ಲಿ ತೆವಳುತ್ತಾ ಸಾಗಿದ ಯೋಜನೆ ಬಹುತೇಕ ನನೆಗುದಿಗೆ ಬಿದ್ದಿತ್ತು. 2021ರಲ್ಲಿ ಮತ್ತೆ ಮುನ್ನೆಲೆಗೆ ಬಂದ ಯೋಜನೆಯ ಕುರಿತಾದ ಮಾತುಕತೆಯ ವೇಳೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನೇ ವಿಶ್ವದರ್ಜೆಗೇರಿಸಲು ನಿರ್ಧರಿಸಲಾಗಿತ್ತು. ಬಳಿಕ ಮತ್ತೆ ತೆರೆಮರೆಗೆ ಸರಿದಿದ್ದ ಯೋಜನೆಗಾಗಿನ ಅಧಿಕೃತ ಪ್ರಕ್ರಿಯೆಗಳು ಸದ್ಯ ಆರಂಭವಾಗಿವೆ. ರೈಲ್ವೆ ಇಲಾಖೆಯ ರಾಜ್ಯ ಸಚಿವ ಸೋಮಣ್ಣ ಬುಧವಾರ ಮಂಗಳೂರಿನಲ್ಲಿ ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಿ, 2025ರ ಮಾರ್ಚ್- ಎಪ್ರಿಲ್ನಲ್ಲಿ ಕಾಮಗಾರಿ ಆರಂಭಿಸಿ ಬಳಿಕ ಮೂರು ವರ್ಷಗಳಲ್ಲಿ 310 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದರೂ, ಸಚಿವ ಸೋಮಣ್ಣ ತಾನು ಸಚಿವನಾಗಿದ್ದಲ್ಲಿ ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಸುವ ಹುಮ್ಮಸ್ಸು ತೋರ್ಪಡಿಸಿರುವುದು ದ.ಕ. ಜಿಲ್ಲೆಯ ರೈಲ್ವೆ ಪ್ರಯಾಣಿಕರನ್ನು ಸಂತುಷ್ಟಗೊಳಿಸಿದೆ.
► ಒಂದೂವರೆ ದಶಕದಿಂದ ನನೆಗುದಿಗೆ ಬಿದ್ದಿದ್ದೇಕೆ ?
ದ.ಕ. ಜಿಲ್ಲೆಗೆ ಸುಸಜ್ಜಿತ ರೈಲ್ವೆ ಕೇಂದ್ರ ಬೇಕೆಂಬುದು ಜಿಲ್ಲೆಯ ರೈಲು ಪ್ರಯಾಣಿಕರ ಬಹುಮುಖ್ಯ ಬೇಡಿಕೆಯಾಗಿದೆ. ಈ ಬೇಡಿಕೆಗೆ ಒಂದೂವರೆ ದಶಕದ ಹಿಂದೆ ಅಂದಿನ ಕೇಂದ್ರ ಸರಕಾರದಿಂದ ಅನುಮೋದನೆ ದೊರಕಿದ್ದರೂ, ಸೂಕ್ತ ಸ್ಥಳಾವಕಾಶದ ಕೊರತೆಯಿಂದಾಗಿ ಯೋಜನೆ ನನೆಗುದಿಗೆ ಬಿದ್ದಿತ್ತು. ಮಂಗಳೂರು ಸೆಂಟ್ರಲ್ ನಿಲ್ದಾಣ ನಗರದ
ಪ್ರಮುಖ ಭಾಗದಲ್ಲಿದ್ದರೂ ಅಲ್ಲಿ ಜಾಗದ ಕೊರತೆ, ಜಂಕ್ಷನ್ ನಿಲ್ದಾಣಕ್ಕೆ ಸಂಪರ್ಕದ ಕೊರತೆಯು ಯೋಜನೆ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿತ್ತು. ವಿಶ್ವದರ್ಜೆಯ ನಿಲ್ದಾಣಕ್ಕೆ 100 ಎಕರೆಯ ಜಾಗದ ಅಗತ್ಯವಿದೆ ಎಂಬ ಲೆಕ್ಕಾಚಾರದಲ್ಲಿ ಮಂಗಳೂರು ಸೆಂಟ್ರಲ್ನಲ್ಲಿ ಇದು ಅಸಾಧ್ಯ. ಹಾಗಾಗಿ ಮಂಗಳೂರು ಜಂಕ್ಷನ್ನಲ್ಲಿ ರೈಲ್ವೆ ಇಲಾಖೆಯ ಬಳಿ ಇರುವ 60 ಎಕರೆ ಭೂಮಿಗೆ, 40 ಎಕರೆ ರಾಜ್ಯ ಸರಕಾರದ ಮೂಲಕ ಪಾಲಿಕೆ ನೀಡಿದರೆ ಕಾಮಗಾರಿ ಆರಂಭಿಸುವ ಬಗ್ಗೆ2017ರಲ್ಲಿ ಆಗಿನ ಸಂಸದ ನಳಿನ್ ಕುಮಾರ್ ಕಟೀಲು ಸಭೆಯೊಂದರಲ್ಲಿ ಹೇಳಿದ್ದರು. ಬಳಿಕ ಈ ಪ್ರಸ್ತಾವ ತೆರೆಮರೆಗೆ ಸರಿದಿತ್ತು.
ಮತ್ತೆ 2021ರಲ್ಲಿ ವಿಶ್ವದರ್ಜೆಯ ಪ್ರಸ್ತಾವ ಮುನ್ನೆಲೆಗೆ ಬಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲೇ ವಿಶ್ವದರ್ಜೆಯ ಸೌಲಭ್ಯ ಅಳವಡಿಸಿಕೊಂಡು ಮರು ಅಭಿವೃದ್ಧಿಗೆ ನಿರ್ಧರಿಸಲಾಗಿತ್ತು. ಈ ಬಗ್ಗೆ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ರೈಲ್ವೆ ಸಚಿವಾಲಯ ರೈಲು ಭೂ ಅಭಿವೃದ್ಧಿ ಪ್ರಾಧಿಕಾರ(ಆರ್ಎಲ್ಡಿಎ)ಕ್ಕೆ ಸೂಚಿಸಿತ್ತು. ಬಳಿಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ನಾಲ್ಕು ಮತ್ತು ಐದನೇ ಪ್ಲಾಟ್ಫಾರ್ಮ್ಗಳೂ ಸಿದ್ಧಗೊಂಡಿವೆ.
► ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕಿದೆ ಶತಮಾನದ ಇತಿಹಾಸ
ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗಕ್ಕೆ ಒಳಪಡುವ ಮಂಗಳೂರು ಸೆಂಟ್ರಲ್ ನಿಲ್ದಾಣವು 117 ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾಗಿದೆ. ಕೆಲ ದಾಖಲೆಗಳ ಪ್ರಕಾರ 1907ರ ನವೆಂಬರ್ 4ರಂದು ಹೊಸತಾಗಿ ನಿರ್ಮಾಣವಾಗಿದ್ದ ನೇತ್ರಾವತಿ ಸೇತುವೆಯಲ್ಲಿ ಕೇರಳದ ಕಲ್ಲಿಕೋಟೆಯಿಂದ ಮಂಗಳೂರಿಗೆ ಪ್ರಥಮ ರೈಲು ಪ್ರಯಾಣಿಸಿತ್ತು ಎನ್ನಲಾಗಿದೆ. ದಕ್ಷಿಣ ರೈಲ್ವೆಯ ದಾಖಲೆಗಳಲ್ಲಿ 1914ರಲ್ಲಿ ಹಿಂದಿನ ಮದ್ರಾಸ್ ಮತ್ತು ಮಂಗಳೂರು ಬಂದರಿನ ನಡುವೆ ಪ್ರಥಮ ರೈಲು ಸಂಚರಿಸಿತ್ತು ಎನ್ನಲಾಗಿದೆ. ಒಟ್ಟಿನಲ್ಲಿ ಶತಮಾನವನ್ನು ಕಂಡಿರುವ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ವಿಶ್ವದರ್ಜೆಯ ಕನಸಿಗೆ ಇದೀಗ ಮರುಜೀವ ದೊರಕಿದೆ.
ವಿಶ್ವದರ್ಜೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪೂರಕವಾದ ಆಧುನಿಕ ಸೌಲಭ್ಯಗಳು ಲಭ್ಯವಾಗಲಿವೆ. ಯೋಜನೆಯ ಕುರಿತಂತೆ ಅಧಿಕಾರಿಗಳು ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಗೊಳಿಸುತ್ತಿದ್ದು, ಆಗಸ್ಟ್ನಲ್ಲಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.
ಮಂಗಳೂರು ಸೆಂಟ್ರಲ್ 100 ವರ್ಷಗಳಿಗೂ ಹಳೆಯದ್ದಾಗಿದ್ದರೂ ಅದಕ್ಕೆ ಸಿಗಬೇಕಾದ ಸೌಲಭ್ಯ ಈವರೆಗೂ ದೊರಕಿಲ್ಲ. 2009ರಲ್ಲಿ ಮಮತಾ ಬ್ಯಾನರ್ಜಿ ವಿಶ್ವದರ್ಜೆಗೇರಿಸುವ ಘೋಷಣೆ ಮಾಡಿದ್ದರೂ ಅನುಷ್ಠಾನ ಆಗಿಲ್ಲ. ಇದೀಗ ರೈಲ್ವೆ ಇಲಾಖೆಯ ರಾಜ್ಯ ಸಚಿವರು ನೀಡಿರುವ ಭರವಸೆ ಸ್ವಾಗತಾರ್ಹ. ಆದಷ್ಟು ಬೇಗ ಅಭಿವೃದ್ಧಿ ಕಾಮಗಾರಿಗಳು ನಡೆದು ಪ್ರಯಾಣಿಕರಿಗೆ ಎಲ್ಲ ಸೌಲಭ್ಯಗಳು ಸಿಗುವಂತಾಗಲಿ ಎಂಬುದು ನಮ್ಮ ಆಶಯ.’
► ಅನಿಲ್ ಹೆಗ್ಡೆ, ತಾಂತ್ರಿಕ ಸಲಹೆಗಾರರು, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ, ಮಂಗಳೂರು.