ಐತಿಹಾಸಿಕ ತೀರ್ಪಿಗೆ ಸಾಕ್ಷಿಯಾದ ಮರಕುಂಬಿ
ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ, ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ನೀಡಿರುವುದು ಇದೇ ಮೊದಲು ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ. ಕೊಪ್ಪಳದ ಜಿಲ್ಲಾ ಸೆಷನ್ಸ್ ನ್ಯಾಯಾಲಯ 24 ಅಕ್ಟೋಬರ್ 2024 ರಂದು ಪ್ರಕಟಿಸಿದ ಮಹತ್ವದ ತೀರ್ಪಿನಲ್ಲಿ ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದಲ್ಲಿ 2014 ರಲ್ಲಿ ನಡೆದಿದ್ದ ದಲಿತರ ಮೇಲಿನ ಹಲ್ಲೆ ಮತ್ತು ಗುಡಿಸಲಿಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 101 ಅಪರಾಧಿಗಳಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ಮತ್ತು 3 ಜನರಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
ಏನೀ ಮರಕುಂಬಿ ಪ್ರಕರಣ, ಇಂತಹ ತೀರ್ಪು ಬರಲು ಕಾರಣವೇನು? ಇದರ ಹಿಂದೆ ಏನೆಲ್ಲಾ ನಡೆದಿತ್ತು ಎಂಬುದರ ಕುರಿತು ಸ್ವಲ್ಪ ಬೆಳಕು ಚೆಲ್ಲುವ ಪ್ರಯತ್ನದ ಭಾಗವಾಗಿ ಈ ಬರಹ. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವಂತೆ ಈ ಪ್ರಕರಣದ ಮೂಲ 2014 ರಲ್ಲಿ ಗಂಗಾವತಿಯ ಚಿತ್ರಮಂದಿರ ಒಂದರಲ್ಲಿ ಪುನೀತ್ ರಾಜ್ ಕುಮಾರ್ ಅವರ ‘ಪವರ್’ ಸಿನೆಮಾ ವೀಕ್ಷಣೆಗೆಂದು ಮರಕುಂಬಿಯ ದಲಿತ ಯುವಕರು ಹೋಗಿದ್ದಾಗ ಅಲ್ಲಿ ದಲಿತ ಯುವಕರು ಹಾಗೂ ಸವರ್ಣೀಯ ಯುವಕರ ನಡುವೆ ಗಲಾಟೆ ಆರಂಭವಾಗಿ ಅದು ವಿಭಿನ್ನ ತಿರುವು ತೆಗೆದುಕೊಂಡು ಸುಮಾರು 150 ಜನ ಸವರ್ಣೀಯರು ಮರಕುಂಬಿಯ ದಲಿತ ಕಾಲನಿಗೆ ನುಗ್ಗಿ ಮಹಿಳೆಯರು, ಮಕ್ಕಳು ವೃದ್ಧರ ಮೇಲೆಲ್ಲಾ ಮಾರಣಾಂತಿಕ ಹಲ್ಲೆ ಮಾಡಿ 4 ಗುಡಿಸಲಿಗೆ ಬೆಂಕಿಯಿಟ್ಟು ಬೂದಿ ಮಾಡಿದ್ದರು. ಆಗ ಸವರ್ಣೀಯರ ಮೇಲೆ ದಾಖಲಾಗಿದ್ದ ಈ ಪ್ರಕರಣ 10 ವರ್ಷಗಳ ನಂತರ ಇಂತಹದೊಂದು ಮಹತ್ತರ ತೀರ್ಪನ್ನು ನೀಡಿದೆ.
ಆದರೆ ಈ ಪ್ರಕರಣದ ಹಿಂದೆ ಇಷ್ಟು ಮಾತ್ರ ನಡೆದಿಲ್ಲ ಮತ್ತು ಯಾವುದೋ ಒಂದು ಕಾರಣಕ್ಕೆ ಮಾತ್ರ ಈ ಘಟನೆ ನಡೆದಿಲ್ಲ. ಬದಲಾಗಿ ಸಾವಿರಾರು ವರ್ಷಗಳಿಂದ ಹಳ್ಳಿಗಳಲ್ಲಿ ಮಡುಗಟ್ಟಿರುವ ಕ್ರೂರ ಮತ್ತು ಅನಿಷ್ಟ ಜಾತಿ ಪದ್ಧತಿಯ ಕರಾಳ ರೂಪವಾಗಿ ಇದು ವ್ಯಕ್ತವಾಗಿದೆ. ಅವಿಭಜಿತ ರಾಯಚೂರು ಜಿಲ್ಲೆಯಲ್ಲಿದ್ದ ಗಂಗಾವತಿ ತಾಲೂಕು (ಈಗ ಕೊಪ್ಪಳ ಜಿಲ್ಲೆ) ಅತಿ ಹೆಚ್ಚು ದಲಿತರಿರುವ ಮತ್ತು ಬಡ ಭೂಹೀನ ಕೂಲಿಕಾರರಿರುವ ಮತ್ತು ಪಾಳೇಗಾರಿ ಮೌಲ್ಯಗಳನ್ನು ಮೈತುಂಬ ಹೊದ್ದು ಮಲಗಿರುವ ತಾಲೂಕು. ಇಲ್ಲಿ ದಲಿತರ ಮೇಲಿನ ದೌರ್ಜನ್ಯ, ಹಲ್ಲೆ, ಜಾತಿ ನಿಂದನೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ.
ಇಂತಹ ಸಂದರ್ಭದಲ್ಲಿ ದಲಿತರ ಬದುಕನ್ನು ಹಸನು ಮಾಡುವ ಉದ್ದೇಶದಿಂದ ವಿವಿಧ ಸರಕಾರಗಳು ದಲಿತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳಲ್ಲಿ ದಲಿತ ಕೇರಿಗಳಲ್ಲಿ ಮದುವೆ, ಮತ್ತಿತರ ಸಮಾರಂಭಗಳನ್ನು ನಡೆಸಿಕೊಳ್ಳಲು ಅನುಕೂಲವಾಗುವಂತೆ ಸಮಾಜ ಕಲ್ಯಾಣ ಇಲಾಖೆಯಿಂದ ದಲಿತ ಕೇರಿಯಲ್ಲಿ ಸರಕಾರಿ ಸಮುದಾಯ ಭವನವನ್ನು ನಿರ್ಮಿಸಲಾಗಿತ್ತು. ಆದರೆ ಈ ಸಮುದಾಯ ಭವನವನ್ನು ದಲಿತರು ಬಳಕೆ ಮಾಡುವ ಮೊದಲೇ ಮರಕುಂಬಿಯ ಸಾಹುಕಾರ (ಸವರ್ಣೀಯ ಜಮೀನ್ದಾರ) ತನ್ನ ಜಮೀನಿನಲ್ಲಿ ಬೆಳೆದಿದ್ದ ಸುಮಾರು 713 ಚೀಲ ನೆಲ್ಲನ್ನು (ಭತ್ತ) ತುಂಬಿಸಿದ್ದ. ವರ್ಷಾನುಗಟ್ಟೆ ಈ ದಾಸ್ತಾನನ್ನು ಖಾಲಿ ಮಾಡುವ ಯಾವ ಯೋಚನೆಯನ್ನೂ ಸಾಹುಕಾರ ಮಾಡಲೇ ಇಲ್ಲ. ಇದೇ ಸಂದರ್ಭದಲ್ಲಿ ಊರಿನ ದಲಿತ ಯುವಕರು ಒಂದೆಡೆ ಸೇರಿ, ಸಭೆ ಮಾಡಿ ಸಮುದಾಯ ಭವನದಲ್ಲಿರುವ ಭತ್ತದ ಚೀಲಗಳನ್ನು ಖಾಲಿ ಮಾಡಿ ನಾವು ಸಮುದಾಯದ ಮದುವೆಯಂತಹ ಶುಭ ಕಾರ್ಯಕ್ರಮಗಳನ್ನು ನಡೆಸಲು ಅನುವು ಮಾಡಿಕೊಡಲು ಸಾಹುಕಾರರಿಗೆ ಮನವಿ ಮಾಡುವಂತೆ ಊರಿನ ಹಿರಿಯರೊಂದಿಗೆ ಚರ್ಚಿಸಿದರು.
ಇವರುಗಳ ನಡುವೆ ಚರ್ಚೆಯಾದ ಈ ಸುದ್ದಿ ಗಾಳಿಯಲ್ಲಿ ತೇಲುತ್ತಾ ಸಾಹುಕಾರನ ಕಿವಿಗೆ ಮುಟ್ಟಿತು. ಇದರಿಂದ ಕೋಪಗೊಂಡ ಸಾಹುಕಾರನ ಮನಸ್ಸಿನಲ್ಲಿ ಜಾತಿ ಪ್ರಜ್ಞೆ ಜಾಗೃತವಾಯಿತು. ಇದಕ್ಕೆ ಏನಾದರೂ ಮಾಡಬೇಕೆಂದು ಯೋಚಿಸಿದ ಪಾಳೇಗಾರಿ ಮನಸ್ಥಿತಿಯ ಸಾಹುಕಾರ ಸಮುದಾಯ ಭವನದಲ್ಲಿರುವ ಭತ್ತದ ಮೂಟೆಗಳು ಕಳವಾಗಿವೆ ಎಂದು ಸುಳ್ಳು ಆರೋಪವನ್ನು ಮಾಡಿ ಪಾಂಡುರಂಗ, ಭೀಮೇಶ, ಬಸವರಾಜ, ಹನುಮೇಶ ಮತ್ತು ಗೌರೀಶ ಎಂಬ ಐವರು ದಲಿತ ಯುವಕರನ್ನು ಆಳುಗಳನ್ನು ಕಳುಹಿಸಿ ತನ್ನ ಮನೆಯ ಬಳಿ ಕರೆಸಿಕೊಂಡು ವಿದ್ಯುತ್ ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ್ದು ಮಾತ್ರವಲ್ಲದೆ, ಸಮುದಾಯ ಭವನದಲ್ಲಿ ತುಂಬಿದ್ದ ಭತ್ತದ ಮೂಟೆಗಳನ್ನು ಇವರೇ ಕಳ್ಳತನ ಮಾಡಿದ್ದಾರೆ ಎಂದು ದೂರಿ ಆರೋಪ ಹೊರಿಸಿದ. ಇದನ್ನು ಪ್ರಶ್ನಿಸಿದ ತಾಯಂದಿರ ಮೇಲೆ ಹಲ್ಲೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ತೀರ್ವ ಗಾಯಗೊಂಡಿದ್ದ ಐವರು ಯುವಕರನ್ನೂ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈ ಪ್ರಕರಣ ನಡೆದದ್ದು 2003 ರಲ್ಲಿ. ಅಂದರೆ ಈಗ ತೀರ್ಪು ನೀಡಿರುವ ಪ್ರಕರಣ ನಡೆಯುವ 10 ವರ್ಷಗಳ ಮೊದಲೇ ಇಲ್ಲಿ ಜಾತಿ ದೌರ್ಜನ್ಯ, ಸವರ್ಣೀಯರ ದಬ್ಬಾಳಿಕೆಗಳು ಹೆಗ್ಗಿಲ್ಲದೆ ನಡೆದಿದ್ದವು.
ಈ ಸುಳ್ಳು ಆರೋಪ, ಹಲ್ಲೆ ಮತ್ತು ಅವಮಾನವನ್ನು ಗಂಭೀರವಾಗಿ ತೆಗೆದುಕೊಂಡ ಮರಕುಂಬಿಯ ದಲಿತರು ನ್ಯಾಯಕ್ಕಾಗಿ ಆಗ್ರಹಿಸಿ ಜಿಲ್ಲೆಯಲ್ಲಿ ಬಡ ದಲಿತ ಕೂಲಿಕಾರರ ನಡುವೆ ಕೆಲಸ ಮಾಡುತ್ತಿದ್ದ ಕೆಂಬಾವುಟದ ‘‘ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ’’ದ ಮುಖಂಡರನ್ನು ಸಂಪರ್ಕಿಸಿದರು. ಅವರು ಮರಕುಂಬಿಗೆ ಭೇಟಿ ನೀಡಿ, ಸಭೆ ನಡೆಸಿದರು. ಈ ಸಂದರ್ಭದಲ್ಲಿ ಊರಿನ ಹಿರಿಯರು ‘‘ಇದನ್ನೇ ದೊಡ್ಡದು ಮಾಡುವುದು ಬೇಡ ಹೇಗೋ ಅನುಸರಿಸಿಕೊಂಡು ಹೋಗೋಣ’’ ಎಂದು ಸಲಹೆ ನೀಡುತ್ತಾರೆ. ಆದರೆ ಈ ಸಲಹೆಯನ್ನು ಒಪ್ಪದ ಯುವಕರು ‘‘ಇಂತಹ ದೌರ್ಜನ್ಯಗಳನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಇದರ ವಿರುದ್ಧ ಪ್ರಕರಣ ದಾಖಲು ಮಾಡಲೇಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು’’ ಎಂದು ಪಟ್ಟು ಹಿಡಿಯುತ್ತಾರೆ. ಆಗ ಪ್ರಕರಣ ದಾಖಲಾಗಿ 14 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂದನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದರೂ ಪ್ರಮುಖ ಆರೋಪಿ ಸಾಹುಕಾರ ತಲೆಮರೆಸಿಕೊಂಡು ಹೋಗುತ್ತಾನೆ.
ಇದೇ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧಿಕಾರಿಯಾಗಿದ್ದ ನಾಗಲಾಂಬಿಕಾ ದೇವಿಯವರು ಮರಕುಂಬಿಗೆ ಭೇಟಿ ನೀಡಿ, ಗ್ರಾಮ ಸಭೆ ನಡೆಸಿ, ಸರಕಾರಿ ಸಮುದಾಯ ಭವನದಲ್ಲಿ ಅಕ್ರಮವಾಗಿ ತುಂಬಿದ್ದ 713 ಚೀಲ ಭತ್ತವನ್ನು ವಶಪಡಿಸಿಕೊಂಡು ಎಪಿಎಂಸಿಗೆ ಕಳುಹಿಸುತ್ತಾರೆ. ಹಾಗೂ ಊರಿನಲ್ಲಿ ಮತ್ತೆ ಜಾತಿ ದೌರ್ಜನ್ಯ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡುತ್ತಾರೆ. ಈ ಪ್ರಕರಣದಲ್ಲಿ ಸಾಹುಕಾರ ಜಾಮೀನು ಪಡೆದು ಮರಳಿ ಊರಿಗೆ ಬರುತ್ತಾನೆ. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತದೆ. ಅಷ್ಟರಲ್ಲಿ ಸಂಘಟಿತರಾಗಿದ್ದ ದಲಿತರು ಕೂಲಿಕಾರರ ಸಂಘದ ನೇತೃತ್ವದಲ್ಲಿ ಗ್ರಾಮ ಪಂಚಾಯತ್‌ನ ಚುನಾವಣೆಯಲ್ಲಿ ಸ್ಪರ್ಧಿಸಿ ಇಬ್ಬರು ಸದಸ್ಯರು ಗೆಲುವು ಪಡೆಯುತ್ತಾರೆ. ಪಂಚಾಯಿತಿಯ ಅಧ್ಯಕ್ಷರ ಎರಡನೇ ಅವಧಿಯ ಚುನಾವಣೆಯ ಸಂದರ್ಭದಲ್ಲಿ ದಲಿತ ಸಮುದಾಯದಿಂದ ಆಯ್ಕೆಯಾಗಿದ್ದ ದೇವದಾಸಿ ಹೆಣ್ಣುಮಗಳು ಅಧ್ಯಕ್ಷರಾಗುವ ಸಂದರ್ಭ ಬಂದಾಗ ಕಾಂಗ್ರೆಸ್ ಪಕ್ಷದಲ್ಲಿದ್ದ ಸಾಹುಕಾರ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಕೂಲಿಕಾರ ದಲಿತರಿಗೆ ಬೆಂಬಲಿಸಿ 2 ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ. 2013 ರ ವರೆಗೂ ಪರಿಸ್ಥಿತಿ ತಿಳಿಗೊಳ್ಳುತ್ತಿರುವಂತೆ ಕಂಡರೂ ಜಾತಿ ವೈಷಮ್ಯ ಒಳಗೇ ಬೂದಿ ಮುಚ್ಚಿದ ಕೆಂಡದಂತಿತ್ತು.
2014 ರಲ್ಲಿ ಮರಕುಂಬಿಯಲ್ಲಿ ಹೋಟೆಲ್‌ಗಳಲ್ಲಿ ಪ್ರತ್ಯೇಕ ಲೋಟದ ವ್ಯವಸ್ಥೆ ಮತ್ತು ಕ್ಷೌರದ ಅಂಗಡಿಗಳಲ್ಲಿ ದಲಿತರಿಗೆ ಕ್ಷೌರದ ನಿರಾಕರಣೆ, ಅಂಗಡಿಗಳಲ್ಲಿ ದಲಿತರಿಗೆ ದಿನಸಿ ಸಾಮಾನು ನೀಡುವುದನ್ನು ನಿರಾಕರಿಸುವ ಪ್ರಕರಣಗಳು ಬೆಳಕಿಗೆ ಬರುತ್ತವೆ. ಈ ಸಂದರ್ಭದಲ್ಲಿ ಎಲ್ಲಾ ದಲಿತರು ಒಟ್ಟಿಗೆ ಸೇರಿ ಕೂಲಿಕಾರರ ಸಂಘ ಮತ್ತು ಕಮ್ಯುನಿಸ್ಟ್ ಪಕ್ಷದ (ಸಿಪಿಐಎಂ) ನೇತೃತ್ವದಲ್ಲಿ ಗಂಗಾವತಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದಲಿತರಿಗೆ ನ್ಯಾಯ ನೀಡಬೇಕೆಂದು ಮನವಿ ಸಲ್ಲಿಸುತ್ತಾರೆ. ಈ ಮನವಿಯ ಮೇರೆಗೆ ಮರಕುಂಬಿಗೆ ಆಗಮಿಸಿದ ತಹಶೀಲ್ದಾರ್‌ರವರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಾಂತಿ ಸಭೆಯನ್ನು ನಡೆಸಿ ಹೋಟೆಲ್‌ಗಳಲ್ಲಿರುವ ಎರಡು ಲೋಟ ಪದ್ಧತಿಯಯನ್ನು ಕೂಡಲೇ ನಿಲ್ಲಿಸಬೇಕು, ಯಾವುದೇ ಜಾತಿ ತಾರತಮ್ಯ ಮಾಡದೇ ಎಲ್ಲರಿಗೂ ಸಮಾನವಾಗಿ ನೀಡಬೇಕು, ಕ್ಷೌರದ ಅಂಗಡಿಯಲ್ಲಿ ದಲಿತರಿಗೂ ಕ್ಷೌರಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಸೂಚಿಸಿದರು. ಈ ಸೂಚನೆಯನ್ನು ಧಿಕ್ಕರಿಸಿದ ಸವರ್ಣೀಯರು ದಲಿತರಿಗೆ ಪ್ರವೇಶ ನೀಡಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಹೋಟೆಲ್ ಮತ್ತು ಕ್ಷೌರದ ಅಂಗಡಿಯನ್ನೇ ಸಂಪೂರ್ಣ ಮುಚ್ಚಿದರು. ಈ ಪ್ರಕರಣ ದಲಿತರ ನಡುವೆ ಒಂದು ರೀತಿಯ ಅಭದ್ರತೆಯನ್ನು ಉಂಟು ಮಾಡಿ ಸಾಮಾಜಿಕ ಬಹಿಷ್ಕಾರ ಮಾಡಿದಂತಹ ವಾತಾವರಣ ನಿರ್ಮಾಣವಾಗಿತ್ತು.
ಇದೇ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ‘ಪವರ್’ ಸಿನೆಮಾ ಬಿಡುಗಡೆಯಾಗಿರುತ್ತದೆ. ಈ ಸಿನೆಮಾವನ್ನು ವೀಕ್ಷಿಸಲು ಗಂಗಾವತಿಯ ಚಿತ್ರಮಂದಿರಕ್ಕೆ ಮರಕುಂಬಿಯ ದಲಿತ ಯುವಕರೂ ಮತ್ತು ಸವರ್ಣೀಯ ಯುವಕರೂ ಕಾಕತಾಳೀಯವಾಗಿ ಒಂದೇ ದಿನ ಹೋಗಿರುತ್ತಾರೆ. ಇದೇ ಸಂದರ್ಭದಲ್ಲಿ ಮರಕುಂಬಿಯ ಸವರ್ಣೀಯರಿಗೂ ಗಂಗಾವತಿಯ ಕೆಲ ಯುವಕರ ನಡುವೆ ಟಿಕೆಟ್ ವಿಚಾರದಲ್ಲಿ ಗಲಾಟೆಗಳು ನಡೆದು ಗಂಗಾವತಿಯ ಯುವಕರು ಮರಕುಂಬಿಯ ಸವರ್ಣೀಯ ಯುವಕರ ಮೇಲೆ ಹಲ್ಲೆ ಮಾಡುತ್ತಾರೆ. ಈ ಗಲಾಟೆಯನ್ನು ಮರಕುಂಬಿಯ ದಲಿತರೇ ಗಂಗಾವತಿಯ ಯುವಕರಿಂದ ಮಾಡಿಸಿದ್ದು ಎಂದು ಅನುಮಾನಿಸಿದ ಸವರ್ಣೀಯರು ಮರುದಿನ ಸಂಜೆ 4 ಗಂಟೆಯ ಸಮಯದಲ್ಲಿ ಸುಮಾರು 150 ಜನ ಒಟ್ಟಿಗೆ ಸೇರಿ ಮರಕುಂಬಿಯ ದಲಿತ ಕೇರಿಗೆ ನುಗ್ಗುತ್ತಾರೆ. ಬೂದಿ ಮುಚ್ಚಿದ್ದ ಕೆಂಡದಂತಿದ್ದ ಜಾತಿ ವೈಷಮ್ಯದ ಕಟ್ಟೆ ಒಡೆದು ಸಿಕ್ಕ ಸಿಕ್ಕ ಹೆಂಗಸರು, ಮಕ್ಕಳು, ವೃದ್ಧರು ಎನ್ನುವುದನ್ನೂ ನೋಡದೆ ಎಲ್ಲರ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಾರೆ. ಅತ್ಯಂತ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡುತ್ತಾರೆ. ಇಷ್ಟು ಮಾತ್ರವಲ್ಲದೆ ‘‘ನಿಮ್ಮನ್ನು ಜೀವಂತವಾಗಿ ಬಿಟ್ಟರೆ ಭಾರೀ ಮೆರಿತೀರಿ, ನಿಮ್ಮನ್ನು ಜೀವಂತ ಸುಟ್ಟು ಹಾಕುತ್ತೇವೆ’’ ಎಂದು 4 ಗುಡಿಸಲುಗಳಿಗೆ ಬೆಂಕಿಯಿಟ್ಟು, ಬೂದಿ ಮಾಡಿ ಅಟ್ಟಹಾಸ ಮೆರೆಯುತ್ತಾರೆ. ಗಲಾಟೆಯಿಂದಾಗಿ ಎಲ್ಲರೂ ಗುಡಿಸಲುಗಳಿಂದ ಹೊರ ಬಂದಿದ್ದರಿಂದ ಯಾರಿಗೂ ಪ್ರಾಣಾಪಾಯವಾಗಿರಲಿಲ್ಲ. ಸಿಮೆಂಟ್ ಶೀಟುಗಳಿಂದ ನಿರ್ಮಿಸಿಕೊಂಡಿದ್ದ ಮನೆಗಳನ್ನು ಪುಡಿಗಟ್ಟುತ್ತಾರೆ. ಊರಿನಲ್ಲಿ ಬಂದೋಬಸ್ತ್‌ಗೆಂದು ನಿಯೋಜಿಸಿದ್ದ ಪೊಲೀಸರ ಮೇಲೂ ಕಲ್ಲುತೂರಾಟ ನಡೆಸಿ ಹಲ್ಲೆ ಮಾಡುತ್ತಾರೆ. ಇದರಿಂದ ಇಬ್ಬರು ಪೊಲೀಸರ ತಲೆಗೆ ಪೆಟ್ಟು ಬಿದ್ದು ತೀವ್ರ ಗಾಯಗೊಳ್ಳುತ್ತಾರೆ. ತೀವ್ರವಾಗಿ ಗಾಯಗೊಂಡಿದ್ದ 27 ದಲಿತರನ್ನು ಆಸ್ಪತ್ರೆಗೆ ದಾಖಲಿಸಿ 15 ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ.
ಈ ಪ್ರಕರಣದ ತೀವ್ರತೆಯನ್ನು ಅರಿತ ಸಿಪಿಐಎಂ, ಕೃಷಿ ಕೂಲಿಕಾರರ ಸಂಘ ಮತ್ತು ದಲಿತ ಹಕ್ಕುಗಳ ಸಮಿತಿಯ ಮುಖಂಡರುಗಳು ಮರಕುಂಬಿ ಗ್ರಾಮಕ್ಕೆ ಭೇಟಿ ನೀಡಿ ನೊಂದ ದಲಿತರಿಗೆ ಧೈರ್ಯ ತುಂಬಿ ಈ ಪ್ರಕರಣವನ್ನು ಖಂಡಿಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕು ಮತ್ತು ಹಳ್ಳಿಗಳಲ್ಲಿ ಜಾತಿ ದೌರ್ಜನ್ಯ ನಿಂತು ಶಾಂತಿ ನೆಲೆಸಬೇಕು ಹಾಗೂ ದೌರ್ಜನ್ಯಕ್ಕೆ ಒಳಗಾಗಿರುವ ದಲಿತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸಿಪಿಐಎಂನ ಅಂದಿನ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ಮುಖಂಡರಾದ ಜಿ.ಎನ್.ನಾಗರಾಜ್, ನಿತ್ಯಾನಂದಸ್ವಾಮಿ, ಜಿ.ಸಿ. ಬಯ್ಯಾರೆಡ್ಡಿ, ಮಾರುತಿ ಮಾನ್ಪಡೆ, ಚಂದ್ರಪ್ಪ ಹೊಸ್ಕೆರಾ ಮತ್ತಿತರರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತಾರೆ. ಮಾತ್ರವಲ್ಲದೆ 2014 ಆಗಸ್ಟ್‌ನಲ್ಲಿ ಮರಕುಂಬಿಯಿಂದ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಗೆ ಸುಮಾರು 55 ಕಿಲೋಮೀಟರ್‌ಗಳನ್ನು ಮೂರು ದಿನ ಪಾದಯಾತ್ರೆ ಮಾಡಿ ಪ್ರತಿಭಟಿಸಲಾಗುತ್ತದೆ. ಇದರಿಂದಾಗಿ ಮನೆ ಕಳೆದುಕೊಂಡವರಿಗೆ ಮತ್ತು ದೌರ್ಜನ್ಯಕ್ಕೊಳಗಾದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸ್ವಲ್ಪಮಟ್ಟಿನ ಪರಿಹಾರ ದೊರಕಿಸಿಕೊಡಲು ಸಾಧ್ಯವಾಯಿತು.
ಈ ಮಧ್ಯೆ ಗುಡಿಸಲಿಗೆ ಬೆಂಕಿಯಿಟ್ಟ ಮತ್ತು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪಂಚನಾಮೆ ಸಾಕ್ಷಿದಾರರಾದ ವೀರೇಶಪ್ಪ, ಬಸವರಾಜು ಮತ್ತು ದೇವರಾಜು ಜಿಲ್ಲಾ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಹಾಜರಾಗಿ ಒಮ್ಮೆ ಸಾಕ್ಷಿ ನುಡಿದಿದ್ದರು. ಸಾಕ್ಷಿ ಹೇಳಿ ಬಂದ ಮೂರೇ ದಿನಗಳಲ್ಲಿ ಸಾಕ್ಷಿದಾರನಾಗಿದ್ದ ಮರಕುಂಬಿಯ ದಲಿತ, ಕೃಷಿ ಕೂಲಿಕಾರರ ಸಂಘದ ಮುಖಂಡರಾಗಿದ್ದ ವೀರೇಶಪ್ಪ ಕೊಪ್ಪಳದ ರೈಲ್ವೆ ಹಳಿಗಳ ಮೇಲೆ ಶವವಾಗಿ ಬಿದ್ದಿದ್ದ. ಇದು ದ್ವೇಷದಿಂದಲೇ ನಡೆಸಿದ ಕೊಲೆಯಾಗಿದ್ದು ಇದನ್ನು ಸೂಕ್ತ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಗಂಗಾವತಿ ಪೊಲೀಸ್ ಠಾಣೆಯ ಎದುರು ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತದೆ. ಈ ಪ್ರತಿಭಟನೆಯಲ್ಲಿ ಸಿಪಿಐಎಂನ ಪೊಲಿಟ್ ಬ್ಯೂರೋ ಸದಸ್ಯ ಎಂ.ಎ.ಬೇಬಿ ಮತ್ತು ದಲಿತ ಶೋಷಣ್ ಮುಕ್ತಿ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕೆ.ರಾಧಾಕೃಷ್ಣನ್‌ರವರು ಭಾಗವಹಿಸುತ್ತಾರೆ.
ವೀರೇಶಪ್ಪನ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮರಕುಂಬಿಯಿಂದ ಬೆಂಗಳೂರಿಗೆ 2014 ನವೆಂಬರ್ 19 ರಂದು ಪಾದಯಾತ್ರೆಯನ್ನು ನಡೆಸಲಾಯಿತು. ಸುಮಾರು 300 ಕ್ಕೂ ಹೆಚ್ಚು ಜನ 15 ದಿನಗಳ ಕಾಲ, ಸುಮಾರು 370 ಕಿಲೋಮೀಟರ್ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು. ಈ ಪಾದಯಾತ್ರೆಯಲ್ಲಿ ಸಿಪಿಐಎಂನ ಯು.ಬಸವರಾಜ್, ಎಂ.ಬಸವರಾಜ, ಜಿ.ನಾಗರಾಜ, ನಿರುಪಾದಿ, ಗಂಗಾಂಧರಸ್ವಾಮಿ, ಮರಿನಾಗಪ್ಪ, ಮಂಜುನಾಥ್ ಡೆಗ್ಗಿ, ಹುಸೇನಪ್ಪ, ಹುಲಿಗೆಮ್ಮ, ದುರುಗಪ್ಪ ಬಡಿಗೇರಾ, ರಾಘವೇಂದ್ರ, ಭೀಮೇಶ್, ಹುಲ್ಲೇಶ್ ಬಡಿಗೇರಾ, ದುರಗೇಶ್ ಸೇರಿ ಹಲವರು ನೇತೃತ್ವ ನೀಡಿದ್ದರು. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶಗೊಂಡು ರಾಜ್ಯ ಸರಕಾರವನ್ನು ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಅಂದಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್.ಆಂಜನಯ್ಯನವರು ಆಗಮಿಸಿ ಸರಕಾರದ ಪರವಾಗಿ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದ್ದರು. ಆ ನಂತರ ರಾಜ್ಯ ಸರಕಾರ ವೀರೇಶಪ್ಪ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಿತು. ಹಲವರನ್ನು ವಿಚಾರಣೆಗೊಳಪಡಿಸಿದರೂ ಸರಿಯಾದ ಸಾಕ್ಷ್ಯಾಧಾರಗಳಿಲ್ಲ ಎನ್ನುವ ಕಾರಣ ನೀಡಿ ಯಾವುದೇ ನ್ಯಾಯ ನೀಡದೇ ಈ ಪ್ರಕರಣ ಅಂತ್ಯಕಂಡಿತ್ತು.
ಈ ಎಲ್ಲಾ ಘಟನೆಗಳಿಂದ ಬೇಸತ್ತಿದ್ದ ದಲಿತರು ಗ್ರಾಮಗಳನ್ನು ಬಿಡಲು ಆರಂಭಿಸಿದ್ದರು, ಬದುಕನ್ನು ಅರಸಿ ಪಟ್ಟಣಗಳಿಗೆ ವಲಸೆ ಹೋಗಿ ಅಲ್ಲಿ ಕೂಲಿ ಮಾಡಿ ಬದುಕನ್ನು ಕಂಡುಕೊಳ್ಳಲು ಹರಸಾಹಸ ಪಟ್ಟರು. ಬೆರಳೆಣಿಕೆಯ ಕೆಲವು ದಲಿತರಿಗೆ ಮಾತ್ರ ಅರ್ಧ, ಒಂದು ಎಕರೆಯಷ್ಟು ಭೂಮಿಯಿತ್ತು. ಅದನ್ನು ನಂಬಿ ಜೀವನ ನಡೆಸುವುದು ಕಷ್ಟಕರವಾಗಿತ್ತು. ಕೂಲಿಯನ್ನೇ ನಂಬಿ ಬದುಕಿದ್ದ ದಲಿತ ಕೂಲಿಕಾರರಿಗೆ ಸವರ್ಣೀಯರು ತಮ್ಮ ಜಮೀನಿನಲ್ಲಿ ಕೂಲಿ ಕೆಲಸ ನೀಡಲಿಲ್ಲ. ಹುಟ್ಟಿ ಬೆಳೆದ ಭೂಮಿಯನ್ನು ಬಿಟ್ಟು ಪರ ಊರುಗಳಿಗೆ ಹೋಗಿ ನೆಲೆಸುವ ದಾರುಣ ಸ್ಥಿತಿ ನಿರ್ಮಾಣವಾಯಿತು. ಸಮಾಜದ ಅತ್ಯಂತ ಅನಿಷ್ಟ ಜಾತಿ ಪದ್ಧತಿಯಲ್ಲಿ ಸಿಲುಕಿಕೊಂಡು ದೌರ್ಜನ್ಯವನ್ನು ಸಹಿಸಲಾಗದೆ ಅದನ್ನು ಎದುರಿಸಿ ಜೀವನವನ್ನು ಕಟ್ಟಿಕೊಳ್ಳಲೂ ಆಗದೆ ಹೆಣಗಾಡಿದ ದಲಿತರ ಸ್ಥಿತಿಯನ್ನು ಅಕ್ಷರಗಳಲ್ಲಿ ಕಟ್ಟಿಕೊಡುವುದು ಕಷ್ಟದ ಕೆಲಸ. ಒಟ್ಟು ಸುಮಾರು 400 ಕುಟುಂಬಗಳಿರುವ ಮರಕುಂಬಿ ಗ್ರಾಮದಲ್ಲಿ 60 ದಲಿತ ಕುಟುಂಬಗಳಿವೆ. ಇನ್ನುಳಿದಂತೆ ಎಲ್ಲಾ ಜಾತಿಗಳಿಗೆ ಸೇರಿದ ಸವರ್ಣೀಯರೂ ಈ ಗ್ರಾಮದಲ್ಲಿದ್ದಾರೆ.
ಗುಡಿಸಲುಗಳನ್ನು ಸುಟ್ಟ ಮತ್ತು ದಲಿತರ ಮೇಲಿನ ದೌರ್ಜನ್ಯ ಪ್ರಕರಣ 2014 ರಿಂದ ಕೊಪ್ಪಳದ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. 118 ಜನರ ಮೇಲೆ ಆರೋಪ ಪಟ್ಟಿ ಹೊರಿಸಲಾಗಿತ್ತು. ಪ್ರಕರಣ ವಿಚಾರಣೆಯ ಹಂತದಲ್ಲಿನ ಹತ್ತು ವರ್ಷಗಳಲ್ಲಿ 17 ಜನ ನಿಧನರಾಗಿದ್ದರು. ಅಂತಿಮವಾಗಿ 101 ಜನರ ಮೇಲಿನ ಆರೋಪ ಸಾಬೀತಾಗಿದ್ದು, ಅದರಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆಯನ್ನು ಮತ್ತು 3 ಜನರಿಗೆ 5 ವರ್ಷಗಳ ಕಾಲ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದೆ. 27 ಜನರು ಸಾಕ್ಷಿಗಳಾಗಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು.