ಮೇಕೆದಾಟು ಯೋಜನೆ: ನಿರ್ಲಕ್ಷ್ಯ ಸಲ್ಲದು
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಪತ್ರ
ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸನ್ನಿಧಾನಕ್ಕೆ,
ನೀವು ಬೆಂಗಳೂರು ಉಸ್ತುವಾರಿ ಸಚಿವರಾಗಿ ಹೊಣೆ ವಹಿಸಿಕೊಂಡ ನಂತರ, ಬೆಂಗಳೂರಿನ ಗತವೈಭವನ್ನು ಮರಳಿ ತರಲು ‘ಬ್ರ್ಯಾಂಡ್ ಬೆಂಗಳೂರು’ ಎಂಬ ಯೋಜನೆಯಡಿ ಹಲವಾರು ಕ್ರಿಯಾಶೀಲ ಕೆಲಸಗಳನ್ನು ನಡೆಸುತ್ತಿದ್ದೀರಿ. ಬೆಂಗಳೂರಿನ ಸಂಚಾರ ದಟ್ಟಣೆಯ ನಿಯಂತ್ರಣಕ್ಕೆ ಹಲವಾರು ಅತ್ಯಾಧುನಿಕ ತಾಂತ್ರಿಕ ಉಪಕ್ರಮಗಳಿಗೆ ಚಾಲನೆ ನೀಡಿರುವ ಪ್ರಪ್ರಥಮ ಬೆಂಗಳೂರು ಉಸ್ತುವಾರಿ ಸಚಿವ ಎಂಬ ಹೆಗ್ಗಳಿಕೆಯೂ ನಿಮ್ಮದಾಗಿದೆ. ಇದಕ್ಕಾಗಿ ನಿಮ್ಮನ್ನು ಮೊದಲಿಗೆ ಅಭಿನಂದಿಸುತ್ತೇನೆ. ಇದರೊಂದಿಗೆ ಬೆಂಗಳೂರಿನ ನೀರಿನ ಬೇಡಿಕೆಯನ್ನು ಪೂರೈಸಲು ಮೇಕೆದಾಟು ಯೋಜನೆಯನ್ನು ನಿಮ್ಮ ಸರಕಾರದ ಅವಧಿಯಲ್ಲೇ ಸಂಪೂರ್ಣಗೊಳಿಸಲಾಗುವುದು ಎಂದು ಪದೇ ಪದೇ ಹೇಳುತ್ತಿದ್ದೀರಿ. ನಿಮ್ಮ ಈ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಪುನರುಚ್ಚರಿಸುತ್ತಿದ್ದಾರೆ. ಆದರೆ, ನಿಮ್ಮ ರಿಯಲ್ ಎಸ್ಟೇಟ್ ಹಿನ್ನೆಲೆಯ ಕಾರಣಕ್ಕೆ ಹಲವಾರು ಪರಿಸರ ತಜ್ಞರು, ಜಲ ತಜ್ಞರು ಹಾಗೂ ವಿಜ್ಞಾನಿಗಳು ಈ ಯೋಜನೆಯ ಕುರಿತು ಆಕ್ಷೇಪಿಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ನಿಮ್ಮ ತವರಾದ ಕನಕಪುರದವರೆಗೆ ವಿಸ್ತರಿಸಲೆಂದೇ ನೀವು ಮೇಕೆದಾಟು ಯೋಜನೆ ಜಾರಿಗೆ ಪಟ್ಟು ಹಿಡಿದಿದ್ದೀರಿ ಎಂಬುದು ಇಂಥವರ ಆರೋಪ ಮತ್ತು ಅಪಸ್ವರ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಭೌಗೋಳಿಕ ಹಾಗೂ ಪ್ರಾಕೃತಿಕ ಇತಿಹಾಸದ ಕುರಿತು ನಿಮ್ಮ ಗಮನಕ್ಕೆ ಒಂದಿಷ್ಟು ಮಾಹಿತಿಯನ್ನು ತರಲು ಬಯಸುತ್ತೇನೆ.
ಬೆಂಗಳೂರು ಮೂಲತಃ ಕೆರೆಗಳ ನಗರ. ಬೆಂಗಳೂರು ಸಾಗರದ ಮಟ್ಟದಿಂದ 920 ಮೀಟರ್ ಎತ್ತರದಲ್ಲಿರುವುದರಿಂದ, ದೇಶದ ಇತರ ಮಹಾನಗರಗಳಾದ ದಿಲ್ಲಿ, ಚೆನ್ನೈ, ಕೋಲ್ಕತಾ, ಮುಂಬೈ, ಹೈದರಾಬಾದ್ ನಗರಗಳಲ್ಲಿರುವಂತೆ ಇಲ್ಲಿ ತೇವಾಂಶ(humiಜiಣಥಿ)ದ ಪ್ರಮಾಣ ತೀವ್ರ ಸ್ವರೂಪದಲ್ಲಿಲ್ಲ. ಹೀಗಾಗಿ, ಇಲ್ಲಿ ಸೆಖೆಯ ಪ್ರಮಾಣ ಬೇಸಿಗೆ ಋತುವಿನಲ್ಲಿ ಮಾತ್ರ ಹೆಚ್ಚಿರುತ್ತದೆಯೇ ಹೊರತು ಮಳೆಗಾಲ, ಚಳಿಗಾಲದ ಋತುವಿನಲ್ಲಲ್ಲ. ಇದಲ್ಲದೆ ಬೆಂಗಳೂರಿನಲ್ಲಿ ಯಾವುದೇ ನದಿ, ಉಪನದಿ(ಅರ್ಕಾವತಿಯಂತಹ ಒಂದೆರಡು ನದಿ ಪಾತ್ರಗಳು ವಸತಿ ಪ್ರದೇಶಗಳ ಒತ್ತುವರಿ ಮತ್ತು ಕೈಗಾರಿಕಾ ತ್ಯಾಜ್ಯಗಳ ವಿಸರ್ಜನೆಯಿಂದ ಇತಿಹಾಸದ ಪುಟ ಸೇರಿವೆ)ಗಳಿಲ್ಲ. ಹೀಗಾಗಿ ಬೆಂಗಳೂರಿನ ನಿರ್ಮಾತೃವಾದ ಮೊದಲ ಕೆಂಪೇಗೌಡರು ಬೆಂಗಳೂರಿನಲ್ಲಿ ಕೆರೆಗಳು ಹಾಗೂ ಅವುಗಳ ವೈಜ್ಞಾನಿಕ ಜಾಲ ನಿರ್ಮಿಸಲು ಹೆಚ್ಚು ಆದ್ಯತೆ ನೀಡಿದ್ದರು. ಇದರಿಂದ ಬೆಂಗಳೂರಿನ ಅಂತರ್ಜಲ ಪ್ರಮಾಣವು ಗರಿಷ್ಠ ಮಟ್ಟದಲ್ಲಿದ್ದುದರಿಂದ ಭೂಮಿಯು ತಾಪಮಾನವೂ ತಂಪಾಗಿತ್ತು.
ಒಂದು ಅಂದಾಜಿನ ಪ್ರಕಾರ, ಇಂತಹ ಸುಮಾರು 2,000 ಬೃಹತ್ ಕೆರೆಗಳು ಬೆಂಗಳೂರಿನಲ್ಲಿದ್ದವು. ಆದರೆ, ಭೂಗಳ್ಳರ ಒತ್ತುವರಿ ಮತ್ತು ಕಬಳಿಕೆಯಿಂದಾಗಿ ಇದೀಗ ಇಂತಹ ಕೆರೆಗಳ ಸಂಖ್ಯೆಯು 201ಕ್ಕೆ ತಲುಪಿವೆ. ಅರ್ಥಾತ್ ಬೆಂಗಳೂರಿನಲ್ಲಿರುವ ಕೆರೆಗಳ ಪ್ರಮಾಣ ಶೇ. 10ಕ್ಕಿಳಿದಿದೆ. ಈ ಪೈಕಿ ಜೀವಂತವಾಗಿರುವ ಕೆರೆಗಳ ಪ್ರಮಾಣ ಬೆರಳೆಣಿಕೆಯಷ್ಟು ಮಾತ್ರ. ಈ ಕೆರೆಗಳಿಗೆ ಹೋಲಿಸಿದರೆ, ಪುನರುಜ್ಜೀವನಕ್ಕಾಗಿ ಕಾದಿರುವ ಕೆರೆಗಳ ಪ್ರಮಾಣವೇ ದುಪ್ಪಟ್ಟಿನದಾಗಿದೆ.
ಬೆಂಗಳೂರು ನಗರದ ಬೆಳವಣಿಗೆ ಕೆಂಪೇಗೌಡರು ವಿಧಿಸಿದ್ದ ನಗರ ಬೆಳವಣಿಗೆ ಮಿತಿಯೊಳಗೇ ಇದ್ದಾಗ, ನಗರವಾಸಿಗಳಿಗೆ ತಿಪ್ಪಗೊಂಡನಹಳ್ಳಿ ಹಾಗೂ ಹೆಸರಘಟ್ಟ ಕೆರೆಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿತ್ತು ಹಾಗೂ ಬೆಂಗಳೂರು ನಿವಾಸಿಗಳಿಗೆ ಇಲ್ಲಿಂದ ಸರಬರಾಜಾಗುತ್ತಿದ್ದ ಕುಡಿಯುವ ನೀರೇ ಸಾಕಷ್ಟಾಗುತ್ತಿತ್ತು. ಆದರೆ, 1991ರಲ್ಲಿ ಜಾಗತೀಕರಣ ಜಾರಿಗೊಂಡ ನಂತರ ಬೆಂಗಳೂರು ಅಂಕೆ ಮೀರಿ ಬೆಳೆಯತೊಡಗಿತು. ಆಗ ಬೆಂಗಳೂರಿನ ಹೊರವಲಯವು ರಿಯಲ್ ಎಸ್ಟೇಟ್ ಮಾಫಿಯಾ ಹಿಡಿತಕ್ಕೆ ಜಾರಿದ್ದರಿಂದ ನಗರದ ಬೆಳವಣಿಗೆ ಅವೈಜ್ಞಾನಿಕವಾಗಿ ನಡೆದು ಹೋಯಿತು. ಈಗಲೂ ಈ ರಿಯಲ್ ಎಸ್ಟೇಟ್ ಮಾಫಿಯಾದಿಂದಾಗಿಯೇ ಬೆಂಗಳೂರು ಅಡ್ಡಾದಿಡ್ಡಿ ಬೆಳೆಯುತ್ತಿದೆ. ಅದರ ಪರಿಣಾಮವೇ ಈ ಬಾರಿ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಬಿರು ಬೇಸಿಗೆ ಹಾಗೂ ಕುಡಿಯುವ ನೀರಿಗಾಗಿನ ಹಾಹಾಕಾರ.
ಐದು ದಶಕಗಳ ಹಿಂದೆ ಬೆಂಗಳೂರಿನ ಮೇಲಿದ್ದ ಹಸಿರು ಹೊದಿಕೆಯ ಪ್ರಮಾಣ ಶೇ. 68.2ರಷ್ಟಾಗಿತ್ತು. ಹೀಗಾಗಿಯೇ ಈ ನಗರವು ಉದ್ಯಾನನಗರಿ, ಹವಾನಿಯಂತ್ರಿತ ನಗರ ಎಂಬ ಜಾಗತಿಕ ಹಿರಿಮೆಗೆ ಪಾತ್ರವಾಗಿತ್ತು. ಆದರೀಗ ಬೆಂಗಳೂರಿನ ಹಸಿರು ಹೊದಿಕೆಯ ಪ್ರಮಾಣ ಕೇವಲ ಶೇ. 2.9ಕ್ಕೆ ಕುಸಿದಿದೆ. ಇದೇ ವೇಳೆ ಬೆಂಗಳೂರಿನಲ್ಲಿರುವ ಕಟ್ಟಡಗಳ ಪ್ರಮಾಣ ಶೇ. 92ಕ್ಕೆ ಏರಿಕೆಯಾಗಿದೆ. ಯಾವುದೇ ನಗರ ಇಷ್ಟು ಅವೈಜ್ಞಾನಿಕ ಬೆಳವಣಿಗೆ ಸಾಧಿಸಿದರೆ, ಅಂತಹ ನಗರ ಇತಿಹಾಸದ ಪುಟ ಸೇರಲೇಬೇಕಾಗುತ್ತದೆ. ಈಗ ಬೆಂಗಳೂರಿನ ವಿಷಯದಲ್ಲಿ ಆಗುತ್ತಿರುವುದೂ ಕೂಡಾ ಅದೇ.
ಈ ನಡುವೆ, ಬೆಂಗಳೂರಿನ ವಸತಿ ಪ್ರದೇಶಗಳ ಪ್ರಮಾಣ ಅಂಕೆ ಮೀರಿ ಬೆಳೆದಿರುವುದರಿಂದ ಬೆಂಗಳೂರು ನಗರ ಹರಪ್ಪ-ಮೊಹೆಂಜಾದಾರೊ ನಗರಗಳಂತೆ ಇತಿಹಾಸವಾಗಬಾರದಿದ್ದರೆ, ಮೇಕೆದಾಟು ಯೋಜನೆಯ ಜಾರಿ ಅನಿವಾರ್ಯ ಎಂದು ಕೆಲವು ತಜ್ಞರು ಪ್ರತಿಪಾದಿಸುತಿದ್ದಾರೆ. ಮತ್ತೊಂದೆಡೆ ಅಂತರ್ಜಲ ವೃದ್ಧಿ, ಮಳೆ ಕೊಯ್ಲು ಹಾಗೂ ಕೊಳಚೆ ನೀರಿನ ಮರು ಬಳಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಮೇಕೆದಾಟು ಯೋಜನೆಯಿಂದ ಬೆಂಗಳೂರು ನಗರಕ್ಕೆ ದೊರೆಯಲಿರುವ ಎರಡು ಪಟ್ಟು ನೀರನ್ನು ಪಡೆಯಲು ಸಾಧ್ಯವಿದೆ ಎಂದು ಪರಿಸರ ತಜ್ಞರು, ಜಲ ತಜ್ಞರು ಹಾಗೂ ವಿಜ್ಞಾನಿಗಳು ಪ್ರತಿಪಾದಿಸುತ್ತಿದ್ದಾರೆ.
ಮೇಕೆದಾಟು ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಯ ಪ್ರಕಾರ, ಈ ಯೋಜನೆಯನ್ನು ಸಂಪೂರ್ಣಗೊಳಿಸಲು ರೂ. 14,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆ ಪೂರ್ಣಗೊಂಡರೆ ಬೆಂಗಳೂರಿಗೆ 4 ಟಿಎಂಸಿ ನೀರು ಲಭ್ಯವಾಗಲಿದೆ ಹಾಗೂ ಜಲವಿದ್ಯುತ್ ಸ್ಥಾವರದ ಮೂಲಕ 400 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ 5,000 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಿಕೊಳ್ಳಬೇಕಾಗುತ್ತದೆ ಎಂದೂ ಅಂದಾಜಿಸಲಾಗಿದೆ. ಸದ್ಯ ಇದೇ ವಿವಾದದ ಕೇಂದ್ರ ಬಿಂದುವಾಗಿರುವುದು.
ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಮೊದಲಿಗೆ ಅಲ್ಲಿನ ಕಲ್ಲುಬಂಡೆಗಳನ್ನು ಸಿಡಿಮದ್ದುಗಳ ಮೂಲಕ ಸಿಡಿಸಬೇಕಾಗುತ್ತದೆ. ಇದರಿಂದ ಅಲ್ಲಿನ 5,000 ಹೆಕ್ಟೇರ್ ಭೂಮಿಯಲ್ಲಿ ವಾಸ್ತವ್ಯ ಹೂಡಿರುವ ಅನೇಕ ಅಪರೂಪದ ವನ್ಯಜೀವಿಗಳು ಹಾಗೂ ಪಕ್ಷಿ ಪ್ರಭೇದಗಳಿಗೆ ಸಂಚಕಾರ ಒದಗಲಿದೆ ಹಾಗೂ ಮೇಕೆದಾಟು ನದಿಪಾತ್ರದಲ್ಲಿರುವ ಹಲವಾರು ಅಮೂಲ್ಯ ಜಲಚರಗಳು ನಶಿಸಿ ಹೋಗಲಿವೆ ಎಂಬುದು ಈ ಯೋಜನೆಯನ್ನು ವಿರೋಧಿಸುತ್ತಿರುವ ಪರಿಸರ ತಜ್ಞರು, ಜಲ ತಜ್ಞರು ಹಾಗೂ ವಿಜ್ಞಾನಿಗಳ ಪ್ರಮುಖ ಆಕ್ಷೇಪ.
ಪರಿಸರದ ಸಮತೋಲನದಲ್ಲಿ ವನ್ಯಜೀವಿಗಳು, ಪಕ್ಷಿಗಳು ಹಾಗೂ ಜಲಚರಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಅವುಗಳ ಅಳಿವು-ಉಳಿವು ಹವಾಮಾನ ವೈಪರೀತ್ಯದ ಸೂಚಕವೂ ಆಗಿದೆ. ಹೀಗಾಗಿ ವನ್ಯಜೀವಿಗಳು, ಪಕ್ಷಿಗಳು ಹಾಗೂ ಜಲಚರ ಜೀವಿಗಳ ಅಸ್ತಿತ್ವಕ್ಕೆ ಧಕ್ಕೆಯಾಗುವಂತಹ ಯೋಜನೆಗಳನ್ನು ಜಾರಿಗೊಳಿಸುವಾಗ ಪರಿಸರ ತಜ್ಞರು, ಜಲ ತಜ್ಞರು, ವಿಜ್ಞಾನಿಗಳ ಸಲಹೆ, ಅಭಿಪ್ರಾಯಗಳಿಗೆ ಕಿವಿಗೊಡಬೇಕಿರುವುದು ಪ್ರಜಾತಾಂತ್ರಿಕವಾಗಿ ಆಯ್ಕೆಗೊಂಡಿರುವ ಯಾವುದೇ ಸರಕಾರದ ಆದ್ಯ ಹೊಣೆಗಾರಿಕೆಯಾಗಿದೆ.
ಪ್ರಜಾತಾಂತ್ರಿಕ ದೇಶವೊಂದು ಬುದ್ಧಿಜೀವಿ ವಲಯವನ್ನು ನಿರ್ಲಕ್ಷಿಸಿದರೆ, ಅಂತಹ ದೇಶವೊಂದು ನಿರಂಕುಶಾಧಿಕಾರದತ್ತ ಚಲಿಸಿ, ನಂತರ ಪತನಗೊಳ್ಳುತ್ತದೆ (ಅಡಾಲ್ಫ್ ಹಿಟ್ಲರ್ ಕಾಲದ ಜರ್ಮನಿ ಪತನಗೊಂಡಿದ್ದೇ ಹೀಗೆ).
ಹೀಗಾಗಿ, ಮೇಕೆದಾಟು ಯೋಜನೆಯ ಬಗ್ಗೆ ಪರ-ವಿರೋಧ ಹೊಂದಿರುವ ತಜ್ಞರೆಲ್ಲರ ಸಮತೋಲಿತ ಉನ್ನತ ಸಮಿತಿಯೊಂದನ್ನು ರಚಿಸಬೇಕಿರುವುದು ಈ ಹೊತ್ತಿನ ತುರ್ತು. ಇಷ್ಟಕ್ಕೂ ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಜ್ಞರೆಲ್ಲ ತಮ್ಮ ಪ್ರತಿಪಾದನೆಯಲ್ಲಿ ಶೇ. 100ರಷ್ಟು ಸಮರ್ಪಕವಾಗಿದ್ದಾರೆ ಎಂದು ನಂಬಬೇಕಿಲ್ಲ. ಆದರೆ, ಜನಜೀವನ ಮತ್ತು ಪರಿಸರದ ಮೇಲೆ ನಿಶ್ಚಿತ ಪರಿಣಾಮ ಬೀರುವ ಮೇಕೆದಾಟು ಯೋಜನೆಯಂಥ ಯೋಜನೆಯ ಜಾರಿ ಬಗ್ಗೆ ಆಕ್ಷೇಪಣೆ ಹೊಂದಿರುವ ಇಂತಹ ತಜ್ಞರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ, ಮಂಡಿಸುವ ಅವಕಾಶವನ್ನು ಪ್ರಜಾತಾಂತ್ರಿಕ ಸರಕಾರವೊಂದು ಒದಗಿಸಿಕೊಡಲೇ ಬೇಕಿದೆ. ಇಂತಹ ಉನ್ನತ ಸಮಿತಿಯ ಅಂತಿಮ ನಿರ್ಧಾರವು ಮೇಕೆದಾಟು ಯೋಜನೆ ಜಾರಿಯ ಪರವಾಗಿದ್ದರೆ, ಅದರಂತೆಯೆ ಮುಂದುವರಿಯಿರಿ. ಒಂದು ವೇಳೆ ಮೇಕೆದಾಟು ಯೋಜನೆ ಜಾರಿಯ ವಿರುದ್ಧವಾಗಿ ಹೊರ ಬಂದರೆ, ಅಂತಹ ತಜ್ಞರು ಬೆಂಗಳೂರಿನ ನೀರಿನ ಸಂಪನ್ಮೂಲದ ಹೆಚ್ಚಳ ಹಾಗೂ ರಕ್ಷಣೆಗೆ ನೀಡುತ್ತಿರುವ ಸಲಹೆಗಳಿಗೆ ಗಂಭೀರವಾಗಿ ಕಿವಿಗೊಡಿ. ಇದೇ ಯಾವುದೇ ಪ್ರಜಾತಾಂತ್ರಿಕ ಸರಕಾರವೊಂದು ತಳೆಯಬಹುದಾದ ಜನಪರ ನಿಲುವು.
ರಾಜಕಾರಣಿಗಳು ಆಡಳಿತದಲ್ಲಿ ನಿಪುಣರಾಗಿರುತ್ತಾರೆಯೇ ಹೊರತು ಪರಿಸರ, ತಂತ್ರಜ್ಞಾನ, ವಿಜ್ಞಾನ ವಿಷಯಗಳಲ್ಲಲ್ಲ. ಆದರೆ, ಇಂತಹ ವಲಯಗಳ ತಂತ್ರಜ್ಞರನ್ನು ಸಮರ್ಪಕವಾಗಿ ದುಡಿಸಿಕೊಂಡು, ಜನಪರ ಯೋಜನೆಗಳನ್ನು ಜಾರಿಗೊಳಿಸುವುದೇ ಯಾವುದೇ ರಾಜಕಾರಣಿಯೊಬ್ಬನ ಹೆಚ್ಚುಗಾರಿಕೆಯಾಗುತ್ತದೆ.
ಇತ್ತೀಚೆಗೆ ರಾಜಕೀಯ ವಿವಾದವೊಂದಕ್ಕೆ ಸಂಬಂಧಪಟ್ಟಂತೆ ನಿಮ್ಮನ್ನು ನೀವು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ವಾರಸುದಾರ ಎಂದು ಹೆಮ್ಮೆಯಿಂದ ಕರೆದುಕೊಂಡಿದ್ದೀರಿ, ಸಂತೋಷ. ನೀವು ಕೆಂಪೇಗೌಡರ ನೈಜ ವಾರಸುದಾರರೇ ಆಗಿದ್ದರೆ ಬೆಂಗಳೂರಿಗೆ ಈ ಕೆಳಗಿನ ಕೆಲವು ಮಹದುಪಕಾರಗಳನ್ನು ಮಾಡಿ ಎಂದು ಕಳಕಳಿಯ ಮನವಿ ಮಾಡುತ್ತೇನೆ.
1. ಬೆಂಗಳೂರಿನ ಹಸಿರು ಹೊದಿಕೆ ಪ್ರಮಾಣವನ್ನು ಹೆಚ್ಚಿಸಲು ಮುಂದಿನ ಐದು ವರ್ಷಗಳಿಗೆ ಪರಿಣಾಮಕಾರಿ ಕ್ರಿಯಾ ಯೋಜನೆಯನ್ನು ರೂಪಿಸಿ.
2. ಟಿಪ್ಪು ಸುಲ್ತಾನ್ ಹಾಗೂ ಬ್ರಿಟಿಷರ ನಂತರ, ಕರ್ನಾಟಕದ ಮತ್ತೊಬ್ಬ ಆಡಳಿತಗಾರ ಬೆಂಗಳೂರಿಗೆ ಪುಪ್ಪಸ ಸ್ಥಳ(Lung spaces)ಗಳನ್ನು ನಿರ್ಮಿಸಿಲ್ಲ. ಅಂತಹ ಸುವರ್ಣಾವಕಾಶವೀಗ ನಿಮಗೆ ದೊರೆತಿದೆ. ಬೆಂಗಳೂರು ಆನೇಕಲ್, ಹೊಸಕೋಟೆ, ಹೊಸೂರು ರಸ್ತೆ ಹಾಗೂ ಮೈಸೂರು ರಸ್ತೆಗಳಾಚೆ ದಾಟಿ ಬೆಳೆಯುತ್ತಿರುವುದರಿಂದ ಲಾಲ್ ಬಾಗ್, ಕಬ್ಬನ್ ಪಾರ್ಕ್‌ನಂತಹ ಪುಪ್ಪಸ ಸ್ಥಳಗಳನ್ನು ಬೆಂಗಳೂರಿನ ಅಷ್ಟ ದಿಕ್ಕುಗಳಲ್ಲೂ ನಿರ್ಮಿಸಲು ಆದ್ಯತೆ ನೀಡಿ. ಅದಕ್ಕಾಗಿ ಸ್ಥಳ ಪರಿಶೀಲನೆಗೆ ಈಗಿನಿಂದಲೇ ಚಾಲನೆ ನೀಡಿ.
3. ರಾಜಕಾಲುವೆ ಹಾಗೂ ಕೆರೆಗಳ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಿ, ಕೆರೆ ಜಾಲಗಳನ್ನು ವೈಜ್ಞಾನಿಕವಾಗಿ ಬಲಗೊಳಿಸಿ.
4. ಟೆಂಡರ್ ಶ್ಯೂರ್ ಹಾಗೂ ವೈಟ್ ಟಾಪಿಂಗ್ ಯೋಜನೆಗಳಲ್ಲಿ ಕಾಂಕ್ರಿಟ್ ಪ್ರಧಾನವಾಗಿ ಬಳಕೆಯಾಗುತ್ತಿರುವುದರಿಂದ, ಮಳೆ ನೀರು ಇಂಗುವಲ್ಲಿ ಸಮಸ್ಯೆಯಾಗುತ್ತಿರುವುದರಿಂದ ಬೆಂಗಳೂರು ಅಂತರ್ಜಲ ಪ್ರಮಾಣದ ವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಸಾಧ್ಯವಾದರೆ, ಕಾಂಕ್ರಿಟ್ ರಸ್ತೆಗಳ ನಿರ್ಮಾಣಕ್ಕೆ ತಿಲಾಂಜಲಿ ನೀಡಿ ಅಥವಾ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕಾಂಕ್ರಿಟ್ ಬಳಕೆ ಅನಿವಾರ್ಯವೆಂದಾದರೆ, ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸುವುದಕ್ಕೂ ಮುನ್ನ ಮಳೆ ನೀರುಗಾಲುವೆ (Rain water drain) ನಿರ್ಮಾಣವನ್ನು ಕಡ್ಡಾಯಗೊಳಿಸಿ.
ಬೆಂಗಳೂರಿನ ಹವಾಮಾನ ಕೈಮೀರಿ ಹೋಗಬಾರದಿದ್ದರೆ ಮುಂದಿನ ಐದು ವರ್ಷಗಳಲ್ಲಿ ಈ ಕಡೆ ಆದ್ಯತೆಯ ಗಮನ ನೀಡಬೇಕಿದೆ. ಆಗ ಬೆಂಗಳೂರಿನ ಮೂಲ ನಿವಾಸಿಗಳಾದ ನಮ್ಮಂಥವರು (ನೀವು ಬೆಂಗಳೂರಿನ ಹೊರವಲಯವಾದ ಕನಕಪುರದ ನಿವಾಸಿ ಎಂಬುದನ್ನು ನೆನಪಿಸುತ್ತಾ) ನೂರ್ಕಾಲ ನಿಮ್ಮ ಬಗ್ಗೆ ಕೃತಜ್ಞರಾಗಿರುತ್ತೇವೆ.