ಕೋವಿಡ್ ಬಳಿಕ ಕರಾವಳಿಯಲ್ಲಿ ವಲಸೆ ಕಾರ್ಮಿಕರ ಹೆಚ್ಚಳ
►ನಿಖರ ಮಾಹಿತಿಯ ಕೊರತೆ ► ಕಾರ್ಮಿಕರಿಗೆ ಅಭದ್ರತೆಯ ಭೀತಿ
Photo:PTI
ಮಂಗಳೂರು, ಡಿ.19: ರಾಜ್ಯದ ಹಲವೆಡೆ ಕೋವಿಡ್ ರೂಪಾಂತರಿ ತಳಿ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿರುವಂತೆಯೇ ಜೀವನೋಪಾಯಕ್ಕೆ ಕೂಲಿ ಕೆಲಸಕ್ಕಾಗಿ ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ಹಾಗೂ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಿಂದ ಇತರ ಜಿಲ್ಲೆಗಳಿಗೆ ಕೂಲಿ ಕೆಲಸಕ್ಕೆ ಹೋಗುವ ವಲಸೆ ಕಾರ್ಮಿಕರಲ್ಲಿ ತಳಮಳಕ್ಕೆ ಕಾರಣವಾಗಿದೆ. ಆದರೆ ಇಂತಹ ಅಸಂಘಟಿತ ವಲಯದ ಈ ವಲಸೆ ಕಾರ್ಮಿಕರು ಅದೆಷ್ಟು ಸಂಖ್ಯೆಯಲ್ಲಿ ರಾಜ್ಯದ್ದಾರೆ? ಅವರಿಗೆ ಸಿಗುತ್ತಿರುವ ಕನಿಷ್ಠ ವೇತನ, ಮೂಲ ಸೌಕರ್ಯಗಳ ಬಗ್ಗೆ ನಿಖರ ಮಾಹಿತಿ ಮಾತ್ರ ಇಲ್ಲವೇ ಇಲ್ಲ!.
ಇದರಿಂದಾಗಿ ಅಸಂಘಟಿತ ವಲಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ವಲಸೆ ಕಾರ್ಮಿಕರು ಕನಿಷ್ಠ ಕೂಲಿ, ಮೂಲಭೂತ ಸೌಕರ್ಯಗಳ ಜೊತೆಗೆ ಅಭದ್ರತೆಯ ಭೀತಿಯನ್ನು ಎದುರಿಸುವಂತಾಗಿದೆ.
ಕೋವಿಡ್ 2019ರ ಪ್ರಥಮ ಅಲೆಯ ಸಂದರ್ಭ ಅತ್ಯಂತ ಹೀನಾಯ ಸ್ಥಿತಿಯನ್ನು ಅನುಭವಿಸಿದವರಲ್ಲಿ ವಲಸೆ ಕಾರ್ಮಿಕರು ಪ್ರಮುಖರು. ಹಲವು ಸಂಕಷ್ಟಗಳನ್ನು ಎದುರಿಸಿ ತಮ್ಮ ರಾಜ್ಯ, ಊರುಗಳಿಗೆ ಮರಳಿದ್ದ ವಲಸೆ ಕಾರ್ಮಿಕರು ಮತ್ತೆ ಹೊಟ್ಟೆಪಾಡಿಗಾಗಿ ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ವಾಪಸಾಗಿದ್ದಾರೆ. ಅದರಲ್ಲೂ ರಾಜ್ಯದ ಉಭಯ ಜಿಲ್ಲೆಗಳಾದ ದ.ಕ. ಮತ್ತು ಉಡುಪಿ ಜಿಲ್ಲೆಗಳಿಗೆ ಕೋವಿಡ್ ಪೂರ್ವಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರ ಆಗಮನವಾಗಿದೆ. ಕಟ್ಟಡ ನಿರ್ಮಾಣವಲ್ಲದೆ ಹೊಟೇಲ್, ವಿವಿಧ ಕೈಗಾರಿಕೆಗಳು, ಮನೆ ಕೆಲಸ, ತೋಟ ಸೇರಿದಂತೆ ಹಲವು ರೀತಿಯಲ್ಲಿ ಕೂಲಿಯಾಳುಗಳಾಗಿ ಬಂದಿರುವ ವಲಸೆ ಕಾರ್ಮಿಕ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಸರಕಾರಿ ಇಲಾಖೆ ಅಧಿಕಾರಿಗಳು, ಅಸಂಘಟಿತ ವಲಯದ ಕಾರ್ಮಿಕರ ಹಿತಾಸಕ್ತಿಗಾಗಿ ದುಡಿಯುವ ಸರಕಾರೇತರ ಸಂಘ ಸಂಸ್ಥೆಗಳು ಹೇಳುತ್ತವೆಯಾದರೂ ನಿಖರ ಮಾಹಿತಿ, ಅಂಕಿಅಂಶಗಳು ಮಾತ್ರ ಲಭ್ಯವಿಲ್ಲ.
ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಉತ್ತರ ಭಾರತದ ಒಡಿಶಾ, ಜಾರ್ಖಂಡ್, ಮಧ್ಯ ಪ್ರದೇಶ, ಬಿಹಾರ, ಉತ್ತರ ಪ್ರದೇಶ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ರಾಜ್ಯದ ಬೆಳಗಾವಿ, ತುಮಕೂರು, ಹುಬ್ಬಳ್ಳಿ, ಬಾಗಲಕೋಟೆ, ಧಾರವಾಡ, ಕುಷ್ಟಗಿ, ಕೊಪ್ಪಳ, ಬಿಜಾಪುರ, ಬಳ್ಳಾರಿ ಮೊದಲಾದ ಜಿಲ್ಲೆಗಳಿಂದ ವಲಸೆ ಕಾರ್ಮಿಕರು ಆಗಮಿಸುತ್ತಾರೆ.
ದ.ಕ. ಜಿಲ್ಲೆಯ ಕಾರ್ಮಿಕ ಇಲಾಖೆಯ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಸುಮಾರು 120 ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು, ಬಹುತೇಕ ಎಲ್ಲದರಲ್ಲೂ ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕಾರ್ಮಿಕ ಇಲಾಖೆಯಲ್ಲಿ ಈ ವಲಸೆ ಕಾರ್ಮಿಕರ ನಿಖರ ಅಂಕಿಅಂಶ ಕೇಳಿದರೆ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಅಸ್ಸಾಂ, ಜಾರ್ಖಂಡ್ ಸೇರಿದಂತೆ ಉತ್ತರ ಭಾರತದ 35,000ದಷ್ಟು ವಲಸೆ ಕಾರ್ಮಿಕರನ್ನು ಕೋವಿಡ್ 2019ರ ಆರಂಭದ ವೇಳೆ ರೈಲು ಮೂಲಕ ಕಳುಹಿಸಲಾಗಿತ್ತು. ಆದರೆ ಅವರು ನಮ್ಮಲ್ಲಿ ನೋಂದಣಿ ಆಗಿಲ್ಲದ ಕಾರಣ ನಿಖರ ಸಂಖ್ಯೆ ಇಲ್ಲ ಎನ್ನುತ್ತಾರೆ.
ರಾಜ್ಯ ಮಟ್ಟದಲ್ಲಿ ಅಂತರ್ರಾಜ್ಯ ವಲಸೆ ಕಾರ್ಮಿಕರ ಕಾಯ್ದೆಯಡಿ ಸಹಾಯಕ ಕಾರ್ಮಿಕ ಆಯುಕ್ತರಲ್ಲಿ ಹೊರ ರಾಜ್ಯಗಳ ವಲಸೆ ಕಾರ್ಮಿಕರು ನೋಂದಣಿಗೆ ಅವಕಾಶವಿದೆ. ಹೊರ ರಾಜ್ಯಗಳಿಂದ ಬರುವವರು ತಮ್ಮ ರಾಜ್ಯಗಳಲ್ಲಿ ಮಾಡಿಸಿದ ನೋಂದಣಿ ದಾಖಲೆಯನ್ನು ಕರ್ನಾಟಕದಲ್ಲಿ ಹಾಜರುಪಡಿಸಿ ಈ ಕಾಯ್ದೆಯಡಿ ನೋಂದಣಿ ಮಾಡಿದರೆ ತುರ್ತು ಸಂದರ್ಭಗಳಲ್ಲಿ ಪರಿಹಾರ ಪಡೆಯುವುದು ಸುಲಭ. ಆದರೆ ಇಂತಹ ರಿಜಿಸ್ಟ್ರೇಶನ್ ಹಲವು ವರ್ಷಗಳಿಂದ ನಡೆಯುತ್ತಿಲ್ಲ. ಕಾರ್ಮಿಕರು ನೇರವಾಗಿ ಏಜೆಂಟ್, ಗುತ್ತಿಗೆದಾರರ ಮೂಲಕ ಬಂದು ಹೋಗುತ್ತಿರುತ್ತಾರೆ. ಹಾಗಾಗಿ ವಲಸೆ ಕಾರ್ಮಿಕರ ನಿಖರ ಮಾಹಿತಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಿದ್ದರೂ, ಅಸಂಘಟಿತ ವಲಯದ ಕಾರ್ಮಿಕರು ಅಪಘಾತ, ಸೈಟ್ನಿಂದ ಬಿದ್ದು ಮೃತಪಟ್ಟ ಸಂದರ್ಭ ಸಂಬಂಧಪಟ್ಟ ಕಟ್ಟಡ ಕಾರ್ಮಿಕ ಮಂಡಳಿ ಅಥವಾ ಅಸಂಘಟಿತರ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಯಿಂದ ಪರಿಹಾರ ನೀಡುವ ಕಾರ್ಯವನ್ನು ಇಲಾಖೆಯಿಂದ ನಡೆಸಲಾಗುತ್ತಿದೆ ಎನ್ನುವುದು ಮಂಗಳೂರಿನ ಕಾರ್ಮಿಕ ಇಲಾಖೆಯ ಅಧಿಕಾರಿ ವಿಲ್ಮಾ ಅವರ ಅಭಿಪ್ರಾಯ.
ಈ ಹಿಂದಿನ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಲಾಕ್ಡೌನ್ ಘೋಷಣೆಯ ವೇಳೆ ಬಹುತೇಕ ವಲಸೆ ಕಾರ್ಮಿಕರು ಅವರಾಗಿಯೇ ತಮ್ಮ ಊರುಗಳಿಗೆ ವಾಪಸು ಹೋಗಿರಬಹುದು ಅಥವಾ ಇಲ್ಲೇ ಬಾಡಿಗೆ ಮನೆಯಲ್ಲಿ ಹಲವು ವರ್ಷಗಳಿಂದ ನೆಲೆಸಿಕೊಂಡವರೂ ಇರಬಹುದು. ವಲಸೆ ಕಾರ್ಮಿಕರಾಗಿ ಉಭಯ ಜಿಲ್ಲೆಗಳಿಗೆ ಸುಮಾರು 25 ವರ್ಷಗಳಿಂದೀಚೆಗೆ ಆಗಮಿಸಿ ಇಲ್ಲೇ ಬಾಡಿಗೆ ಅಥವಾ ಸ್ವಂತ ಮನೆ ಮಾಡಿಕೊಂಡು ನೆಲೆಸಿರುವ ಕೂಲಿ ಕಾರ್ಮಿಕರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎನ್ನುತ್ತಾರೆ ಉತ್ತರ ಬಾದಾಮಿಯ ಕಾರ್ಮಿಕ ರಂಗನಾಥ್.
ತನ್ನ 16ನೇ ವಯಸ್ಸಿನಲ್ಲಿ ಕೂಲಿ ಕೆಲಸ ಹುಡುಕಿ ಮಂಗಳೂರಿಗೆ ಆಗಮಿಸಿದ್ದ ರಂಗನಾಥ್ ಗಾರೆ ಕಾರ್ಮಿಕನಾಗಿ ದುಡಿಯುತ್ತಿದ್ದು, ತನ್ನ ಪತ್ನಿ ಮಕ್ಕಳ ಸಹಿತ ಇಲ್ಲೇ ವಾಸವಾಗಿದ್ದಾರೆ. ಮಕ್ಕಳನ್ನು ನಗರದ ಸರಕಾರಿ ಶಾಲೆಯಲ್ಲಿ ಓದಿಸುತ್ತಿದ್ದಾರೆ. ವಿಶೇಷವೆಂದರೆ ಅವರೇ ಹೇಳುವಂತೆ ನಗರದ ಉರ್ವಾ ಮಣ್ಣಗುಡ್ಡೆಯ ಶಾಲೆಯಲ್ಲಿ ಉತ್ತರ ಕರ್ನಾಟಕ ಭಾಗದ ವಲಸೆ ಕಾರ್ಮಿಕರ ಸುಮಾರು 200ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದಾರೆ. ಇಲ್ಲಿಯ ಜನರು, ಇಲ್ಲಿನ ಶಿಕ್ಷಣ ವ್ಯವಸ್ಥೆ ಎಲ್ಲವೂ ಚೆನ್ನಾಗಿದೆ. ಹಾಗಾಗಿ ಇಲ್ಲಿ ಕೂಲಿ ಕೆಲಸ ಹುಡುಕಿಕೊಂಡು ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ಬರುತ್ತಿದ್ದು, ಕೋವಿಡ್ ಬಳಿಕ ಈ ರೀತಿ ಕೂಲಿಗಾಗಿ ಬರುವ ವಲಸೆ ಕಾರ್ಮಿಕರ ಸಂಖ್ಯೆ ಅಧಿಕವಾಗಿದೆ ಎನ್ನುತ್ತಾರೆ ರಂಗನಾಥ್.
ವಲಸೆ ಕಾರ್ಮಿಕರಿಗೆ ಸೂಕ್ತ ಭದ್ರತೆ, ಆರೋಗ್ಯ, ನಿಗದಿತ ಕನಿಷ್ಠ ಕೂಲಿ ಎಂಬ ಪರಿಕಲ್ಪನೆ ಇಲ್ಲ. ಬಹುತೇಕರು ಕೆಲ ತಿಂಗಳ ಕಾಲ ಹೊಟ್ಟೆಪಾಡಿಗಾಗಿ ಕೂಲಿ ಕೆಲಸಕ್ಕೆ ಬಂದು ಹೋಗುವುದರಿಂದ ಸರಕಾರದ ಯೋಜನೆಗಳ ಲಾಭ ಪಡೆಯಲು ಖಾಯಂ ವಿಳಾಸ, ಆಧಾರ್ ಕಾರ್ಡ್ನ ಸಮಸ್ಯೆ ಎದುರಾಗುತ್ತದೆ. ಇದರಿಂದ ಪಡಿತರ ಸೌಲಭ್ಯವೂ ಇಲ್ಲಿ ಪಡೆಯಲಾಗುತ್ತಿಲ್ಲ ಎನ್ನುವುದು ವಲಸೆ ಕಾರ್ಮಿಕರ ಅಳಲು.
ದಿನಕೂಲಿಯಲ್ಲಿ ತಾರತಮ್ಯ, ವಂಚನೆ: ಕೂಲಿ ಕಾರ್ಮಿಕರಾಗಿ ಬರುವವರಿಗೆ ಸಿಗುವ ಕೂಲಿಯಲ್ಲೂ ಸಾಕಷ್ಟು ತಾರತಮ್ಯ, ವಂಚನೆ ನಡೆಯುತ್ತಿರುತ್ತದೆ. ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ದುಡಿಯುವ ಪುರುಷರಿಗೆ ಕೆಲವೆಡೆ ಅಂದಾಜು 500ರೂ.ನಿಂದ 700 ರೂ., ಮಹಿಳೆಯರಿಗೆ 450 ರೂ.ನಿಂದ 600 ರೂ., ಮನೆ ಕೆಲಸದವರಿಗೆ ಮಾಸಿಕವಾಗಿ 6,000 ರೂ.ನಿಂದ 8,000 ರೂ., ಕಾರ್ಖಾನೆಗಳಲ್ಲಿ ಮಾಸಿಕ 6,000 ರೂ.ನಿಂದ 15,000 ರೂ.ವರೆಗೆ ದೊರೆಯುತ್ತದೆ. ಅದು ನಿಖರವಾಗಿ ಯಾವುದೂ ಇಲ್ಲ. ಉತ್ತರ ಭಾರತದ ಕೂಲಿಯಾಳುಗಳನ್ನು ಅತ್ಯಲ್ಪ ಹಣದಲ್ಲಿ ದುಡಿಸಲಾಗುತ್ತಿದೆ ಎನ್ನುತ್ತಾರೆ ಇಂಡಿಯಾ ಲೇಬರ್ ಲೈನ್ ಸಂಘಟನೆಯ ಮಂಗಳೂರು ವಿಭಾಗದ ಸಂಯೋಜಕ ಲಾಯ್ಡ್ ಆರ್. ಡಿಸೋಜಾ. ಅವರು ಹೇಳುವಂತೆ, ಇತ್ತೀಚೆಗೆ ಸವಿತಾ (ಹೆಸರು ಬದಲಿಸಲಾಗಿದೆ) ಮತ್ತು ಇತರ ಐದು ಜನ ಮಹಿಳೆಯರು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದು, ಅವರನ್ನು ಕೆಲಸಕ್ಕಿಟ್ಟಿದ್ದ ಏಜೆನ್ಸಿಯು ವೇತನ ಕೊಡದೆ ಸತಾಯಿಸುತ್ತಿದ್ದ ಬಗ್ಗೆ ಸಂಸ್ಥೆಯ ಹೆಲ್ಪ್ಲೈನ್ 1-800-833-9020ಗೆ ಬಂದ ದೂರಿನ ಮೇರೆಗೆ ವ್ಯವಸ್ಥಾಪಕರ ಜೊತೆ ಸತತ ಮಾತುಕತೆಯ ಮೂಲಕ ವೇತನ ಕೊಡಿಸಲಾಯಿತು. 2022ರ ಡಿಸೆಂಬರ್ನಿಂದ ಈವರೆಗೆ ಸಂಸ್ಥೆಯಿಂದ ವಲಸೆ ಕಾರ್ಮಿಕರ ಸಮಸ್ಯೆಗಳಿಗೆ ಸಂಬಂಧಿಸಿ ಮಂಗಳೂರಿನಲ್ಲಿ 305 ದೂರುಗಳು ದಾಖಲಾಗಿದ್ದು, 148 ದೂರುಗಳನ್ನು ಬಗೆಹರಿಸಲಾಗಿದೆ ಎನ್ನುತ್ತಾರೆ ಲಾಯ್ಡ್.
ಅಸಂಘಟಿತ ಕಾರ್ಮಿಕರಾಗಿ ‘ಇಶ್ರಮ್ ಪೋರ್ಟಲ್’: ಕೋವಿಡ್ ಮುಂಚಿತವಾಗಿ ವಲಸೆ ಕಾರ್ಮಿಕರ ಬಗ್ಗೆ ದಾಖಲೆಗಳು ಇಲ್ಲದ ಕಾರಣಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಅಂಕಿಅಂಶ ಸಂಗ್ರಹಕ್ಕಾಗಿ ಇ-ಶ್ರಮ್ ಪೋರ್ಟಲ್ ಕೇಂದ್ರ ಸರಕಾರದಿಂದ ಆರಂಭಿಸಲಾಗಿದೆ.
ಪೋರ್ಟಲ್ನ ಮಾಹಿತಿಯ ಪ್ರಕಾರ ಇ-ಶ್ರಮ್ನಡಿ 29,24,32,114 ಮಂದಿ ನೋಂದಣಿಯಾಗಿದ್ದಾರೆ. ಇಎಸ್ಐ, ಪಿಎಫ್ಐ ಇಲ್ಲದೆ ಅಸಂಘಟಿತ ವಲಯದ ಕಾರ್ಮಿಕರು ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಣಿಗೆ ಅವಕಾಶವಿದೆ. ಯಾವುದೇ ರೀತಿಯ ಸಾಂಕ್ರಾಮಿಕ ಅಥವಾ ಸಂಕಷ್ಟಕ್ಕೆ ಒಳಗಾಗುವ ಅಸಂಘಟಿತ ಕಾರ್ಮಿಕರು ಇಶ್ರಮ್ನಡಿ ನೋಂದಣಿಯಾಗಿದ್ದರೆ ಸರಕಾರದ ಸೌಲಭ್ಯ ಲಭ್ಯವಾಗುತ್ತದೆ. ಇ-ಶ್ರಮ್ ಪೋರ್ಟಲ್ನಡಿ ದ.ಕ. ಜಿಲ್ಲೆಯಿಂದ 2,23,000 ವಿವಿಧ ಕ್ಷೇತ್ರದ ಅಸಂಘಟಿತ ಕಾರ್ಮಿಕರು ನೋಂದಣಿಯಾಗಿದ್ದಾರೆ ಎನ್ನುತ್ತಾರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು.
ವಲಸೆ ಕಾರ್ಮಿಕರ ಬಗ್ಗೆ ನಿಖರ ಅಂಕಿಅಂಶಗಳು ಕಾರ್ಮಿಕ ಇಲಾಖೆಯಲ್ಲಿ ಇಲ್ಲ. ವರ್ಷದಿಂದ ವರ್ಷಕ್ಕೆ ಹೊರ ರಾಜ್ಯ ಅಥವಾ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಯ ವಿವಿಧ ರೀತಿಯ ಕೂಲಿ ಕೆಲಸಕ್ಕಾಗಿ ವಲಸೆ ಹೋಗುವವರು ಅಥವಾ ಹೋಗುವವರ ಸಂಖ್ಯೆಯಲ್ಲಿ ಬದಲಾವಣೆಯಾಗುತ್ತಿರುತ್ತದೆ. ಹಾಗಾಗಿ ಇಲಾಖೆಯ ಸೀಮಿತ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ನಡುವೆ ನಿಖರವಾದ ಮಾಹಿತಿಯನ್ನು ಇಟ್ಟುಕೊಳ್ಳುವುದು ಕಷ್ಟಸಾಧ್ಯ.
- ಸಂತೋಷ್ ಲಾಡ್, ಸಚಿವರು,
ಕಾರ್ಮಿಕ ಇಲಾಖೆ, ಕರ್ನಾಟಕ
ವಿವಿಧ ರಾಜ್ಯ, ಜಿಲ್ಲೆಗಳಿಂದ ಆಗಮಿಸುವ ವಲಸೆ ಕಾರ್ಮಿಕರ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳು, ಗುತ್ತಿಗೆದಾರರಿಂದ ಕಾರ್ಮಿಕ ಇಲಾಖೆ ಮಾಹಿತಿಯನ್ನು ಇರಿಸಿಕೊಳ್ಳುವುದು ಅತೀ ಅಗತ್ಯ. ಅಸಂಘಟಿತ ವಲಯದಲ್ಲಿ ಗುರುತಿಕೊಂಡಿರುವ ಇಂತಹ ವಲಸೆ ಕಾರ್ಮಿಕರು ಕಾರ್ಖಾನೆ ಅಥವಾ ಕಟ್ಟಡ ನಿರ್ಮಾಣ ಸೇರಿದಂತೆ ಕೆೆಲಸದ ಸಂದರ್ಭ ನಡೆಯುವ ಅವಘಡಗಳಿಂದ ಪ್ರಾಣ ಹಾನಿ, ಗಾಯಾಳುಗಳಾಗುವ ಸಂದರ್ಭ ಸಾಕಷ್ಟು ರೀತಿಯ ಯಾತನೆಯನ್ನು ಅನುಭವಿಸುತ್ತಿರುತ್ತಾರೆ. ಕೆಲ ಸಮಯದ ಹಿಂದಷ್ಟೇ ಬೈಕಂಪಾಡಿಯ ಕಾರ್ಖಾನೆಯಲ್ಲಿ ನಡೆದ ಘಟನೆ, ಮಂಗಳೂರು ಕರಂಗಲ್ಪಾಡಿಯ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯ ಕುಸಿತದಿಂದ ಹಲವರು ಮೃತಪಟ್ಟಾಗ ಅವರಿಗೆ ಸೂಕ್ತ ಪರಿಹಾರಕ್ಕಾಗಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಯಿತು.
- ಸುನೀಲ್ ಕುಮಾರ್ ಬಜಾಲ್,
ಮುಖಂಡರು, ಸಿಐಟಿಯು
ಇಂಡಿಯಾ ಲೇಬರ್ ಲೈನ್ ವಲಸೆ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಕೂಲಿ ವಂಚನೆ, ಪಿಎಫ್, ಗ್ರಾಚ್ಯುಟಿ, ಕೆಲಸದ ಸ್ಥಳದಲ್ಲಿ ಕಾರ್ಮಿಕರ ಮೇಲೆ ನಡೆಯುವ ಹಿಂಸೆಗೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ಮೂಲಕ ನೆರವು ನೀಡುತ್ತದೆ. ಸಂಸ್ಥೆಯು ಬೆಂಗಳೂರು, ಹುಬ್ಬಳ್ಳಿ- ಧಾರವಾಡ, ಮುಂಬೈ, ದೆಹಲಿ ಸೇರಿದಂತೆ ದೇಶದ ೧೬ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಲಸೆ ಕಾರ್ಮಿಕರು ವೇತನ ತಾರತಮ್ಯದ ಜತೆಗೆ ಜಾಗೃತಿಯ ಕೊರತೆಯಿಂದ ವಲಸೆ ಕಾರ್ಮಿಕರ ಕಾಲನಿ ಅಥವಾ ಗುಂಪುಗಳಲ್ಲಿ ಮಹಿಳೆಯರು ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವುದು ಕಂಡು ಬರುತ್ತಿದೆ. ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವ ಜತೆಗೆ ಅವರ ನಿಖರ ಸಂಖ್ಯೆಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿಯೂ ್ನ ಸಂಸ್ಥೆ ಪ್ರಯತ್ನಿಸಲಿದೆ.
- ಸ್ವರ್ಣ ಭಟ್, ಸಂಚಾಲಕರು, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ