ಕುಗ್ರಾಮಗಳಿಗೆ ಸ್ಯಾಟಲೈಟ್ ಮೂಲಕ ಮೊಬೈಲ್ ನೆಟ್‌ವರ್ಕ್ ಸಂಪರ್ಕ
ಅಲೆಖಾನ್ ಹೊರಟ್ಟಿ ಗ್ರಾಮದಲ್ಲಿ ಬಿಎಸ್ಸೆನ್ನೆಲ್‌ನಿಂದ ಮಹತ್ತರ ಸಾಧನೆ

ಚಿಕ್ಕಮಗಳೂರು : ರಾಜ್ಯದ ಚಿಕ್ಕಮಗಳೂರು, ರಾಮನಗರ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಂಪರ್ಕವೇ ಇಲ್ಲದ ಕುಗ್ರಾಮಗಳಿಗೆ ಸ್ಯಾಟಲೈಟ್ ಮೂಲಕ ಮೊಬೈಲ್ ನೆಟ್‌ವರ್ಕ್ ಸಂಪರ್ಕ ಕಲ್ಪಿಸಿ ಇಲ್ಲಿನ ಜನರ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಲು ಬಿಎಸ್ಸೆನ್ನೆಲ್ ಸಂಸ್ಥೆ ಕ್ರಮವಹಿಸಿದೆ.
ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಅನೇಕ ಕುಗ್ರಾಮಗಳು ಮೊಬೈಲ್ ನೆಟ್‌ವರ್ಕ್‌ನಿಂದ ವಂಚಿತವಾಗಿವೆ. ಅಂತಹ ಗ್ರಾಮಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲೆಖಾನ್ ಹೊರಟ್ಟಿ ಗ್ರಾಮವೂ ಒಂದಾಗಿತ್ತು. ಅತ್ಯಂತ ಕಡಿದಾದ ಪ್ರದೇಶ ಹಾಗೂ ಸುತ್ತಮುತ್ತ ಬೆಟ್ಟಗುಡ್ಡಗಳಿದ್ದ ಪರಿಣಾಮ ಈ ಗ್ರಾಮದ ಜನತೆ ಇದುವರೆಗೂ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ತುರ್ತು ಸಂದರ್ಭಗಳಲ್ಲಿ ಹೊರ ಜಗತ್ತಿನ ಸಂಪರ್ಕ ಸಾಧಿಸಲು ಪರದಾಡುತ್ತಿದ್ದರು.
2019-20ನೇ ಸಾಲಿನಲ್ಲಿ ಈ ಭಾಗದಲ್ಲಿ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿದ ಸಂದರ್ಭದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸಂಪರ್ಕ ಸಾಧಿಸಲು ಗ್ರಾಮಸ್ಥರು ಪರದಾಡಿದ್ದರು. ಈ ಭಾಗದಲ್ಲಿ ಒಎಫ್‌ಸಿ ಕೇಬಲ್ ಅಳವಡಿಕೆಗೂ ಅಡ್ಡಿಯಾಗಿತ್ತು. ಗ್ರಾಮದಲ್ಲಿ 35 ಮನೆಗಳ 300 ಜನರಿದ್ದು, ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ಸಂಪರ್ಕ ಸಾಧಿಸಲು ಮತ್ತು ಇತರ ಇಂಟರ್‌ನೆಟ್ ಕೆಲಸ ಕಾರ್ಯಗಳಿಗೆ ಪಟ್ಟಣ ಪ್ರದೇಶವನ್ನೇ ಅವಲಂಬಿಸಬೇಕಿತ್ತು. ಗ್ರಾಮಕ್ಕೆ ಮೊಬೈಲ್ ಸಂಪರ್ಕ ಕಲ್ಪಿಸುವಂತೆ ಗ್ರಾಮಸ್ಥರು ಬಹುವರ್ಷಗಳ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದರೂ ಕಡಿದಾದ ಪ್ರದೇಶದ ಕಾರಣಕ್ಕೆ ಈ ಕೆಲಸ ನನೆಗುದಿಗೆ ಬಿದ್ದಿತ್ತು.
ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿರುವ ಕುಗ್ರಾಮಗಳಿಗೆ ನೆಟ್‌ವರ್ಕ್ ಸಂಪರ್ಕ ಕಲ್ಪಿಸುವುದನ್ನು ಆದ್ಯತೆಯಾಗಿ ಪರಿಗಣಿಸಿದ ಕೇಂದ್ರ ಸರಕಾರ ಯಾವುದೇ ಮೊಬೈಲ್ ನೆಟ್‌ವರ್ಕ್ ಇಲ್ಲದ ಗ್ರಾಮಗಳನ್ನು ಬಿಎಸ್ಸೆನ್ನೆಲ್ ಸಂಸ್ಥೆಯ ದಿಲ್ಲಿ ಕೇಂದ್ರ ಕಚೇರಿ ಗುರುತಿಸಿದ್ದು, ಇಲ್ಲಿಗೆ ಸ್ಯಾಟಲೈಟ್ ಮೂಲಕ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲು ಅನುದಾನ ಮಂಜೂರು ಮಾಡಿ ಕಾರ್ಯಗತಗೊಳಿಸಿದ ಪರಿಣಾಮ ಸದ್ಯ ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲೆಖಾನ್ ಹೊರಟ್ಟಿಯಲ್ಲಿ ಸ್ಯಾಟಲೈಟ್ ಮೂಲಕ ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲಾಗಿದೆ. ಸ್ಯಾಟಲೈಟ್ ನೆಟ್‌ವರ್ಕ್ ಸಂಪರ್ಕ ಕಲ್ಪಿಸಲು ಅಂದಾಜು 80 ಲಕ್ಷ ರೂ. ಖರ್ಚಾಗಿದ್ದು, ಕೇಂದ್ರ ಸರಕಾರದ ಅನುದಾನದಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ.
ಸ್ಯಾಟಲೈಟ್ ನೆಟ್‌ವರ್ಕ್ ಕಾರ್ಯನಿರ್ವಹಿಸುವ ವಿಧಾನ :
ಯಾವುದೇ ಖಾಸಗಿ ಸೇರಿದಂತೆ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸೌಲಭ್ಯ ಇಲ್ಲದ ಗ್ರಾಮಗಳಲ್ಲಿ ತುರ್ತು ಅಗತ್ಯಕ್ಕೆ ಸ್ಯಾಟಲೈಟ್ ನೆಟ್‌ವರ್ಕ್ ಬಳಕೆ ಮಾಡಲಾಗುತ್ತದೆ. ಗುಡ್ಡಗಾಡು ಪ್ರದೇಶದಲ್ಲಿ ಟವರ್‌ನಿಂದ ಹೊರಹೊಮ್ಮುವ ತರಂಗಾಂತರಗಳಿಗೆ ಅಡೆತಡೆ ಉಂಟಾಗುವುದರಿಂದ ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತದೆ. ಇಂತಹ ಪ್ರದೇಶದಲ್ಲಿ ಸ್ಯಾಟಲೈಟ್ ಮೂಲಕ ನೆಟ್‌ವರ್ಕ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಾಮಾನ್ಯವಾಗಿ ನಿರ್ಮಾಣ ಮಾಡಿರುವ ನೆಟ್‌ವರ್ಕ್ ಟವರ್‌ಗೆ ವಿಶೇಷವಾದ ಆ್ಯಂಟೆನಾ ಅಳವಡಿಕೆ ಮಾಡಲಾಗುತ್ತದೆ. ಈ ಆ್ಯಂಟೆನಾ ನೇರವಾಗಿ ಬಾಹ್ಯಾಕಾಶದಲ್ಲಿರುವ ಮೂರು ಸ್ಯಾಟಲೈಟ್‌ಗಳಿಗೆ ಸಂಪರ್ಕ ಸಾಧಿಸುತ್ತದೆ. ಅಲ್ಲಿಂದ ನೇರವಾಗಿ ಬೆಂಗಳೂರಿನ ಪ್ರಮುಖ ಮೊಬೈಲ್ ಯಂತ್ರೋಪಕರಣಕ್ಕೆ ಕರೆ ಕನೆಕ್ಟ್ ಆಗುತ್ತದೆ. ಅಲ್ಲಿಂದ ನೇರವಾಗಿ ಗ್ರಾಹಕರ ಮೊಬೈಲ್‌ಗೆ ಕರೆ ಕನೆಕ್ಟ್ ಆಗುತ್ತದೆ. ಸ್ಯಾಟಲೈಟ್‌ನಿಂದ ನೇರ ಸಂಪರ್ಕ ಸಾಧಿಸುವುದರಿಂದ ಯಾವುದೇ ಅಡೆತಡೆ ಇಲ್ಲದಂತೆ ಗ್ರಾಹಕರು ಸಂವಹನ ನಡೆಸಲು ಸಾಧ್ಯವಾಗುತ್ತದೆ. ಜತೆಗೆ ಆನ್‌ಲೈನ್ ಕೆಲಸ ಕಾರ್ಯಗಳನ್ನು ಸುಗಮವಾಗಿ ನಡೆಸಲು ಸಾಧ್ಯವಾಗುತ್ತದೆ. ಸ್ಯಾಟಲೈಟ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವುದು ದುಬಾರಿಯಾಗಿದ್ದು, ಸದ್ಯ ರಾಜ್ಯದ ಚಿಕ್ಕಮಗಳೂರು ಸೇರಿದಂತೆ ರಾಮನಗರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೆಟ್‌ವರ್ಕ್ ಸಂಪರ್ಕ ಸಾಧಿಸಲು ಸಾಧ್ಯವಾಗದ ಗ್ರಾಮಗಳಿಗೆ ಸ್ಯಾಟಲೈಟ್ ನೆಟ್‌ವರ್ಕ್ ಸಂಪರ್ಕವನ್ನು ಕಲ್ಪಿಸಲಾಗಿದೆ.
ಅಲೆಖಾನ್ ಹೊರಟ್ಟಿಯಲ್ಲಿ 35 ಕುಟುಂಬಗಳಿದ್ದು, ಇಲ್ಲಿಯವರೆಗೆ ಗ್ರಾಮಕ್ಕೆ ನೆಟ್‌ವರ್ಕ್ ಇರಲಿಲ್ಲ. ಸಾವು ನೋವು ಸಂಭವಿಸಿದರೆ ಎರಡು ಮೂರು ದಿನಗಳು ತಡವಾಗಿ ಗೊತ್ತಾಗುತ್ತಿತ್ತು. ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ನೌಕರಿಯಲ್ಲಿರುವ ಯುವಕ ಯುವತಿಯರಿಗೆ ತುಂಬಾ ತೊಂದರೆಯಾಗುತ್ತಿತ್ತು. ಗುಡ್ಡಗಾಡು ಪ್ರದೇಶದಲ್ಲಿ ನೆಟ್‌ವರ್ಕ್ ಸಿಗುವ ಜಾಗದಲ್ಲಿ ಕೆಲಸ ನಿರ್ವಹಿಸುವ ಅನಿವಾರ್ಯತೆ ಎದುರಾಗಿತ್ತು. ಸದ್ಯ ಗ್ರಾಮಕ್ಕೆ ಸ್ಯಾಟಲೈಟ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಸಂಪರ್ಕ ಸಾಧಿಸಲು ಅನುಕೂಲವಾಗುತ್ತಿದೆ.
-ಸಂದೀಪ್, ಅಲೆಖಾನ್ ಹೊರಟ್ಟಿ ಗ್ರಾಮಸ್ಥ