ಸುಪ್ರೀಂನಲ್ಲಿ ವಕ್ಫ್ ಬಗ್ಗೆ ಮೋದಿ ಸರ್ಕಾರದ ಕೋಮುವಾದಿ ಅಫಿಡವಿಟ್
ವಕ್ಫ್ ತಿದ್ದುಪಡಿ ಕಾಯಿದೆಯ ಹಿಂದಿನ ದುರುದ್ದೇಶದ ಬಹಿರಂಗ ಪ್ರತಿಪಾದನೆ ಮತ್ತು ಸಮರ್ಥನೆ

ಸಾಂದರ್ಭಿಕ ಚಿತ್ರ (PTI)
ಸಂಸತ್ತು ಸುಪ್ರೀಂ ಕೋರ್ಟಿಗಿಂತ, ಸಂವಿಧಾನಕ್ಕಿಂತ ಸುಪ್ರೀಂ ಎಂಬ ಫ್ಯಾಶಿಸ್ಟ್ ಪ್ರತಿಪಾದನೆ
ಹೀಗಾಗಿ ಕೇವಲ ವಕ್ಫ್ ವಿರುದ್ಧವಲ್ಲ, ಸಂವಿಧಾನದ ಪಾರಮ್ಯದ ವಿರುದ್ಧವೇ ಮೋದಿ ಸರ್ಕಾರದ ಯುದ್ಧ ಘೋಷಣೆ ...!
ಆತ್ಮೀಯರೇ ,
ಮೋದಿ ಸರ್ಕಾರ ನಿನ್ನೆ ವಕ್ಫ್ ತಿದ್ದುಪಡಿ ಕಾಯಿದೆಗಳ ವಿರುದ್ಧ ಸಲ್ಲಿಸಲಾಗಿರುವ ಅಹವಾಲುಗಳನ್ನು ವಿರೋಧಿಸಿ ಮತ್ತು ಅದರ ಬಗ್ಗೆ ಸುಪ್ರೀಂ ಕೋರ್ಟ್ ಇಂಗಿತ ತೋರಿಸಿರುವ ಸಂಭವನೀಯ ಕ್ರಮಗಳನ್ನು ವಿರೋಧಿಸಿ ಸುಪ್ರೀಂ ಕೋರ್ಟಿಗೆ ಅಹವಾಲು ಸಲ್ಲಿಸಿದೆ.
ಈ ಅಫಿಡವಿತ್ತು ಮೋದಿ ಸರ್ಕಾರವು ಈ ತಿದ್ದುಪಡಿಯನ್ನು ಮುಸ್ಲಿಮರ ಕಲ್ಯಾಣಕ್ಕೆ ತರಲಾಗುತ್ತಿದೆ ಎಂದು ಈವರೆಗೆ ಕೊಚ್ಚಿಕೊಳ್ಳುತ್ತಿದ್ದದ್ದೆಲ್ಲ ಬೂಟಾಟಿಕೆ ಮತ್ತು ಸೋಗಲಾಡಿತನದ್ದು ಎಂದು ಸ್ಪಷ್ಟಪಡಿಸಿದೆ ಮತ್ತು ತನ್ನ ಕಾನೂನಿಗೆ ತಡೆ ಹಾಕಲು ಹೊರಟಿದ್ದ ಸುಪ್ರೀಂ ಕೋರ್ಟಿಗೆ ಆ ಅಧಿಕಾರವೇ ಇಲ್ಲ ಎಂಬ ಫ್ಯಾಶಿಸ್ತ್ ವಾದವನ್ನು ಮುಂದಿಟ್ಟಿದೆ.
ವಕ್ಫ್ ನಾಶದ ಬಹಿರಂಗ ಘೋಷಣೆ:
ಮೋದಿ ಅಫಿಡವಿಟ್ಟು ಹೇಳಿರುವುದಿಷ್ಟು:
1." ವಕ್ಫ್ ಬೈ ಯೂಸರ್" ಅವಕಾಶದಡಿ ಮುಸ್ಲಿಮರು ಸರ್ಕಾರದ ಮತ್ತು ಖಾಸಗಿಯವರ ಲಕ್ಷಾಂತರ ಎಕರೆ ಜಾಮೀನು ಒತ್ತುವರಿ ಮಾಡಿಕೊಂಡು ಬಿಟ್ಟಿದ್ದಾರೆ. ಅದನ್ನು ತಡೆಗಟ್ಟುವುದೇ ಈ ಹೊಸ ಕಾಯಿದೆಯ ಅಸಲಿ ಉದ್ದೇಶವಂತೆ. ಆದರೆ ಕಾಯಿದೆಯ ಹೆಸರು ಮಾತ್ರ United Waqf Management, Efficiency, Empowerment and Development ! ಅಷ್ಟೇ ಅಲ್ಲ. ಕಾಯಿದೆಯ Objective ನಲ್ಲಿ ಕೂಡ ವಕ್ಫ್ ರಕ್ಷಣೆಯನ್ನು ಹೆಚ್ಚು ಮಾಡಲು ಕಾಯಿದೆ ತಿದ್ದುಪಡಿ ಎಂದು ಹೇಳಿತ್ತು, ಅಫಿಡವಿತ್ತು ಮತ್ತು ಕಾಯಿದೆಯಲ್ಲಿ ಮಾಡಿರುವ ತಿದ್ದುಪಡಿಗಳು ಇದು ವಕ್ಫ್ ಅನ್ನು ಮುಸ್ಲಿಮರಿಂದ ಕಸಿಯುವ ಮತ್ತು ವಕ್ಫ್ ಆಸ್ತಿಯನ್ನು ಸರ್ಕಾರವು ಕಾನೂನಿನ ಮೂಲಕ ಒತ್ತುವರಿ ಮಾಡಿಕೊಳ್ಳುವ ದುರುದ್ದೇಶ ಹೊಂದಿದೆ ಎಂಬುದು ಸ್ಪಷ್ಟವಾಗಿದೆ.
2. ಅದೇ ರೀತಿ ವಕ್ಫ್ ಕೌನ್ಸಿಲ್ ಮತ್ತು ವಕ್ಫ್ ಬೋರ್ಡ್ ಗಳಳ್ಳಿ ಮುಸ್ಲಿಮೇತರರ ನೇಮಕಾತಿಯನ್ನು ಮೋದಿ ಸರ್ಕಾರ ಕುತರ್ಕದ ಮೂಲಕ ಸಮರ್ಥಿಸಿಕೊಂಡಿದೆ. ಅದರ ಪ್ರಕಾರ ಕೌನ್ಸಿಲ್ ಮತ್ತು ಬೋರ್ಡ್ಗಳು ಆಡಳಿತ ನಿರ್ವಹಣೆ ಮಾಡುವ ಸೆಕ್ಯುಲರ್ ಕಾರ್ಯಭಾರ ಮಾಡುವುದರಿಂದ ಅದರಲ್ಲಿ ಮುಸ್ಲಿಮೇತರರು ಇರುವುದು ತಪ್ಪಲ್ಲವಂತೆ. ಆದರೆ ಅದೇ ರೀತಿ ಹಿಂದೂ ದೇವಸ್ಥಾನಗಳ ಸೆಕ್ಯುಲರ್ ಆಡಳಿತ ನಿರ್ವಹಣೆಯಲ್ಲಿ ಮುಸ್ಲಿಮರು ಏಕಿಲ್ಲ ಎಂಬ ಪ್ರಶ್ನೆಯನ್ನು ಪಕ್ಕಕ್ಕೆ ಸರಿಸಿದೆ.
3.ಮೋದಿ ಸರ್ಕಾರದ ವಕ್ಫ್ ತಿದ್ದುಪಡಿ ಕಾಯಿದೆಯು ಸೆಂಟ್ರಲ್ ವಕ್ಫ್ ಕೌನ್ಸಿಲ್ ನ 22 ಸದಸ್ಯರಲ್ಲಿ 12 ಸದಸ್ಯರು ಮತ್ತು ರಾಜ್ಯ ವಕ್ಫ್ ಬೋರ್ಡುಗಳ 11 ಸದಸ್ಯರಲ್ಲಿ 7 ಸದಸ್ಯರು ಮುಸ್ಲಿಮೇತರರೇ ಆಗಿರುವ ಅವಕಾಶವನ್ನು ಕಲ್ಪಿಸಿದ್ದರೂ, ಮೋದಿ ಸರ್ಕಾರ ತನ್ನ ಅಫಿಡವಿಟ್ಟಿನಲ್ಲಿ ಸೆಂಟ್ರಲ್ ವಕ್ಫ್ ಕೌನ್ಸಿಲ್ ನಲ್ಲಿ ಕೇವಲ ನಾಲ್ಕು ಜನರು ಮತ್ತು ವಕ್ಫ್ ಬೋರ್ಡಿನಲ್ಲಿ ಕೇವಲ ಮೂವರು ಮಾತ್ರ ಮುಸ್ಲಿಮೇತರು ಇರುವ ಅವಕಾಶವಿದೆ ಎಂದು ಸುಳ್ಳು ಹೇಳಿದೆ. ಹೀಗೆ ಮೋದಿ ಸರ್ಕಾರ ವಕ್ಫ್ ತಿದ್ದುಪಡಿಯ ಕಾಯಿದೆಯ ಹಿಂದಿನ ಫ್ಯಾಶಿಸ್ಟ್ ಹುನ್ನಾರವನ್ನೇ ಆಕ್ರಮಣಕಾರಿಯಾಗಿ ಅಫಿಡವಿಟ್ ಮಾಡಿ ದೇಶದ ಮುಂದಿರಿಸಿದೆ.
ಅಷ್ಟೇ ಮುಖ್ಯವಾಗಿ ಈ ಕಾಯಿದೆಗಳ ಸಂವಿಧಾನ ವಿರೋಧಿ ಅಂಶಗಳಿಗೆ ತಡೆ ಹಾಕುವ ಇಂಗಿತ ತೋರಿದ್ದ ಸುಪ್ರೀಂ ಕೋರ್ಟಿನಿನ ಸಾಂವಿಧಾನಿಕ ಅಧಿಕಾರವನ್ನೇ ಪ್ರಶ್ನಿಸಿದೆ.
ಸಂವಿಧಾನದ ಪಾರಮ್ಯವನ್ನು ನಿರಾಕರಿಸುವ ಮೋದಿ ಅಫಿಡವಿತ್ತು
ಮೋದಿ ಅಫಿಡವಿಟ್ ಪ್ರಕಾರ ಸಂಸತ್ತಿನಲ್ಲಿ ಒಂದು ಕಾಯಿದೆ ಪಾಸಾದರೆ ಅದು ಸಾಂವಿಧಾನಿಕವಾಗಿ ಮಾನ್ಯತೆ ಪಡೆದಿದೆ ಎಂದೇ ಅರ್ಥವಂತೆ. ಹೀಗಾಗಿ ಸಂಸತ್ತಿನಲ್ಲಿ ಪಾಸಾದ ಕಾಯಿದೆಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಅಹವಾಲುಗಳನ್ನು ಸುಪ್ರೀಂಕೋರ್ಟುಪರಿಶೀಲಿಸುವುದೇ ತಪ್ಪಂತೆ ...!
ಹಾಗೆಯೇ ಸುಪ್ರೀಂ ಕೋರ್ಟು ಒಂದು ವೇಳೆ ಸಂಸತ್ತಿನಲ್ಲಿ ಪಾಸಾದ ಕಾಯಿದೆಗಳಿಗೆ ತಡೆ ಒಡ್ಡಿದರೆ ಅಥವಾ ಷರತ್ತು ವಿಧಿಸಿದರೇ ಅದು ಸಂಸತ್ತಿನ ಅಧಿಕಾರದಲ್ಲಿ ನ್ಯಾಯಾಂಗದ ಮಧ್ಯಪ್ರವೇಶವಾಗುವುದಂತೆ. ಹೀಗಾಗಿ ವಕ್ಫ್ ಕಾಯಿದೆಯನ್ನು ವಿರೋಧಿಸುವ ಎಲ್ಲಾ ಅಹವಾಲುಗಳನ್ನು ತಿರಸ್ಕರಿಸಬೇಕೆಂದು ಮೋದಿ ಸರ್ಕಾರ ಪ್ರತಿಪಾದಿಸಿದೆ.
ಸಂವಿಧಾನದ ಸಾರ - ಮೂಲಭೂತ ಹಕ್ಕುಗಳ ರಕ್ಷಣೆ
ಆದರೆ ಸಂವಿಧಾನ ಸಭೆಯಲ್ಲಿ ತಮ್ಮ ಮೊದಲ ಭಾಷಣದಲ್ಲೇ ಅಂಬೇಡ್ಕರ್ ಅವರು ಬಹುಸಂಖ್ಯಾತವಾದಿ ಸರ್ಕಾರವೊಂದು ಈ ರೀತಿ ತಮ್ಮ ಸಂಸದೀಯ ಬಹುಮತವನ್ನು ಬಳಸಿಕೊಂಡು ಜನರ ಮೂಲಭೂತ ಹಕ್ಕುಗಳನ್ನು ಕಸಿಯುವ ಸಾಧ್ಯತೆಯಿಂದ ಜನರ ಹಕ್ಕುಗಳಿಗೆ ರಕ್ಷಣೆ ಹೇಗೆ ಎಂಬ ಪ್ರಶ್ನೆ ಯನ್ನೇ ಮೂಲಭೂತವಾಗಿ ಎತ್ತಿದ್ದರು.
ಈ ಕಾಳಜಿಗಳ ಭಾಗವಾಗಿಯೇ ಸಂವಿಧಾನದಲ್ಲಿ ಆರ್ಟಿಕಲ್ 13 ( ಶಾಸಕಾಂಗ ರಚಿಸುವ ಯಾವುದೇ ಕಾನೂನು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಬಾರದು ), ಆರ್ಟಿಕಲ್ 32 ಮತ್ತು 226 (ಸರ್ಕಾರದಿಂದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದರೆ ಹೈಕೋರ್ಟು ಮತ್ತು ಸುಪ್ರೀಂ ಕೋರ್ಟು ಮೊರೆ ಹೋಗುವ ಅವಕಾಶ ) ಮತ್ತು ಆರ್ಟಿಕಲ್ 142 (ಯಾವುದೇ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟು ವಿವೇಚನಾಯುತವಾಗಿ ಸಂಪೂರ್ಣ ನ್ಯಾಯ ಒದಗಿಸುವ ) ಅವಕಾಶವನ್ನು ಸಂವಿಧಾನದಲ್ಲಿ ಕಲ್ಪಿಸಲಾಗಿದೆ.
ಇದಲ್ಲದೆ ಇಂದಿರಾಗಾಂಧಿ ಕಾಲದಲ್ಲಿ ಕಾರ್ಯಾಂಗ (ಸರ್ಕಾರ ) ಇವತ್ತಿನ ಮೋದಿ ಸರ್ಕಾರದಂತೆ ತಾನು ಮಾಡುವ ಅತಿರೇಕಗಳು ಸುಪ್ರೀಂ ವಿಚಕ್ಷಣೆಯ ಅಡಿ ಬರದಂತೆ ಸಂವಿಧಾನಕ್ಕೆ ತಿದ್ದುಪಡಿ ತಂದಿತ್ತು.
ಸಂಸತ್ತಿನ ಪಾರಮ್ಯವಲ್ಲ- ಸಂವಿಧಾನದ ಪಾರಮ್ಯ
ಆಗ 1973 ರಲ್ಲಿ 13 ನ್ಯಾಯಾಧೀಶರ ಬೃಹತ್ ಸಂವಿಧಾನ ಪೀಠ ಭಾರತದ ಸಾಂವಿಧಾನಿಕ ಪ್ರಜಾತಂತ್ರದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಕ್ಕಿಂತ ಸಂವಿಧಾನವೇ ಸುಪ್ರೀಂ ಎಂದು ತೀರ್ಪಿತ್ತಿತ್ತು. ಯಾವ ಕಾನೂನುಗಳನ್ನು ಬೇಕಾದರೂ ಶಾಸಕಾಂಗ / ಸಂಸತ್ತು ಮಾಡಬಹುದು. ಆದರೆ ಅವುಗಳಿಗೆ ಸಂವಿಧಾನದ ಮೂಲ ರಚನೆಯನ್ನು ಬದಲಿಸಬಾರದು. ಅಂಥಾ ಅಧಿಕಾರ ಸಂಸತ್ತಿಗೂ ಇಲ್ಲ ಎಂದು ಬಹುಮತದ ನಿರ್ದೇಶನ ನೀಡಿತ್ತು.
ಹೀಗಾಗಿ ಮೋದಿ ಸರ್ಕಾರ ಹೇಳುವಂತೆ ಸಂಸತ್ತಿನಲ್ಲಿ ಮಾಡುವ ಯಾವುದೇ ಕಾನೂನು/ಕಾಯಿದೆಯು ತನ್ನಂತೆ ತಾನೇ ಸಾಂವಿಧಾನಿಕ ಸಿಂಧುತ್ವ ಹೊಂದಿರುವುದಿಲ್ಲ. ಅದು ಸಂವಿಧಾನದ ಆರ್ಟಿಕಲ್ 13, ಅನ್ನು ಉಲ್ಲಂಘಿಸುವ, ಹಿಂಬಾಗಿಲಿನಿಂದ ಕೇಶವಾನಂದ ಭಾರತಿ ಆದೇಶವನ್ನು ನಿರಾಕರಿಸುವ ದುರುದ್ದೇಶವನ್ನು ಹೊಂದಿದೆ.
ಈಗ ಸಂಸತ್ತಿನಲ್ಲಿ ಬಹುಮತ ಪಡೆದಿರುವ ಮೋದಿ ಸರ್ಕಾರವೂ ಸಂವಿಧಾನವನ್ನು ಬೇಕಾಬಿಟ್ಟಿ ಬದಲಾಯಿಸಲು ಅಡ್ಡಿಯಾಗಿರುವ ಕೇಶವಾನಂದ ಭಾರತಿ ಆದೇಶವನ್ನು ಮತ್ತು ಸಂಸತ್ತು ಮಾಡುವ ಕಾನೂನುಗಳ ಸಾಂವಿಧಾನಿಕತೆಯನ್ನು ಪರಿಶೀಲಿಸುವ ನ್ಯಾಯಾಂಗದ ಅಧಿಕಾರವನ್ನು ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಉಪ ರಾಷ್ಟ್ರಪತಿ ಧನಕರ್ ಅಂತೂ ಪ್ರತಿ ಸಂದರ್ಭದಲ್ಲೂ ಸಂಸತ್ತೇ ಕೋರ್ಟಿಗಿಂತ ಪರಮೋಚ್ಛ ಎಂದು ಪ್ರತಿಪಾದಿಸುತ್ತಿದ್ದಾರೆ.
ಇದೀಗ ವಕ್ಫ್ ಅಫಿಡವಿಟ್ಟಿನಲ್ಲೂ ಮೋದಿ ಸರ್ಕಾರ ಅದೇ ಸಂವಿಧಾನ ದ್ರೋಹಿ ಫ್ಯಾಶಿಸ್ಟ್ ಪ್ರತಿಪಾದನೆಯನ್ನೇ ಬಲವಾಗಿ ಮಾಡಿದೆ. ಹೀಗಾಗಿ ಇದು ಕೇವಲ ವಕ್ಫ್ ಮೇಲೆ ಮತ್ತು ಮುಸ್ಲಿಮರ ಮೇಲೆ ಮಾಡುತ್ತಿರುವ ದಾಳಿಯಾಗಿ ಉಳಿದಿಲ್ಲ. ಬದಲಿಗೆ ಮೋದಿ ಸರ್ಕಾರ ವಕ್ಫ್ ತಿದ್ದುಪಡಿಯ ಮೂಲಕ ಸಂವಿಧಾನದ ಪಾರಮ್ಯದ ಮೇಲೆ ದಾಳಿ ಮಾಡುತ್ತಿದೆ. ಸಂಸತ್ತಿನ ಬಹುಮತವನ್ನು ಬಳಸಿಕೊಂಡು ಫ್ಯಾಶಿಸಂ ಅನ್ನು ಸಾಂವಿಧಾನಿಕ ಗೊಳಿಸುವ ಹುನ್ನಾರ ನಡೆಸಿದೆ.
ಮೇ-5 ರಂದು ಸುಪ್ರೀಂ ಕೋರ್ಟು ತನ್ನ ಸಾಂವಿಧಾನಿಕ ಅಧಿಕಾರವನ್ನು ಬಳಸಿಕೊಂಡು ಮೋದಿ ಸರ್ಕಾರದ ಈ ಫ್ಯಾಶಿಸ್ತ್ ಹುನ್ನಾರವನ್ನು ಹಿಮ್ಮೆಟ್ಟಿಸುವುದೇ? ಗೊತ್ತಿಲ್ಲ. ಆದರೆ, " ನಾವು, ಈ ದೇಶದ ಜನರು" , ಈ ದೇಶದ ಮಾಲಕರು ಮತ್ತು ಸಂವಿಧಾನದ ಅಸಲೀ ಕರ್ತೃಗಳು ಮಾತ್ರ ವಕ್ಫ್ ತಿದ್ದುಪಡಿ ವಿರುದ್ಧದ ಹೋರಾಟವು ಸಾರದಲ್ಲಿ ಮೋದಿ ಸರ್ಕಾರ ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿಯನ್ನು ತಡೆಗಟ್ಟುವ ಹೋರಾಟವಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕಿದೆ. ಮತ್ತು ಎಲ್ಲಾ ಧರ್ಮೀಯ ಜನರು ಒಟ್ಟುಗೂಡಿ ಬೀದಿ ಹೋರಾಟದ ಮೂಲಕ ವಕ್ಫ್ ತಿದ್ದುಪಡಿಯನ್ನು ಸೋಲಿಸಬೇಕಿದೆ. ಹಾಗೂ ಸಂವಿಧಾನವನ್ನು ರಕ್ಷಿಸಿಕೊಳ್ಳಬೇಕಿದೆ.
-ಶಿವಸುಂದರ್