ಮೋದಿ ವರ್ಸಸ್ ಯೋಗಿ! ಬಿಜೆಪಿಯೊಳಗೆ ಆರೆಸ್ಸೆಸ್ ಗೇಮ್‌ಪ್ಲ್ಯಾನ್?
ಉತ್ತರ ಪ್ರದೇಶದ ಬಿಜೆಪಿ ಸರಕಾರದಲ್ಲಿ ಈಗ ಎಲ್ಲವೂ ಸರಿಯಿಲ್ಲ. ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ರಾಜ್ಯ ಘಟಕದ ಬಿಜೆಪಿ ನಾಯಕರು ತಿರುಗಿಬಿದ್ದಿದ್ದಾರೆ. ಯೋಗಿಯವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲಾಗುತ್ತದೆ ಎಂಬ ರಾಜಕೀಯ ಚರ್ಚೆಗಳು ಶುರುವಾಗಿವೆ. ಇದಕ್ಕೆಲ್ಲ ಕಾರಣವಾದದ್ದು ಲೋಕಸಭಾ ಚುನಾವಣೆಯ ಫಲಿತಾಂಶ. ಚಾರ್ ಸೌ ಪಾರ್ ಹುಮ್ಮಸ್ಸಿನಲ್ಲಿದ್ದ ಬಿಜೆಪಿ, ಉತ್ತರ ಪ್ರದೇಶದಲ್ಲಿ ಎಲ್ಲಾ ೮೦ ಸ್ಥಾನ ಗೆದ್ದು ಕ್ಲೀನ್ ಸ್ವೀಪ್ ಮಾಡುವ ಉಮೇದಿನಲ್ಲಿತ್ತು. ಆದರೆ ಯುಪಿ ಮತದಾರ ಬಿಜೆಪಿಗೆ ದೊಡ್ಡ ಆಘಾತ ನೀಡಿದ. ೨೦೧೯ರಲ್ಲಿ ೬೨ ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿಯನ್ನು ಅನಾಮತ್ತು ೩೩ ಸ್ಥಾನಗಳಿಗೆ ಮತದಾರ ತಳ್ಳಿದ್ದಾನೆ. ಅಂದರೆ ಅರ್ಧದಷ್ಟು ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಬೇಕಾಯಿತು. ಇದರ ಪರಿಣಾಮವಾಗಿ ಬಿಜೆಪಿ ಸಂಸತ್ತಿನಲ್ಲಿ ಸರಳ ಬಹುಮತವನ್ನೂ ತಲುಪಲಾಗದೆ ಕೇವಲ ೨೪೦ ಸ್ಥಾನಗಳಿಗೆ ಕುಸಿದು, ಮಿತ್ರಪಕ್ಷಗಳ ಮರ್ಜಿಯಲ್ಲಿ ಸರಕಾರ ನಡೆಸಬೇಕಾದ ಅನಿವಾರ್ಯತೆಗೆ ತುತ್ತಾಗಿದೆ. ಈ ಕಾರಣಕ್ಕಾಗಿ ಯೋಗಿ ವಿರುದ್ಧ ಅಸಮಾಧಾನಗಳು ಭುಗಿಲೆದ್ದಿವೆ ಎಂದು ನಾವು ಊಹಿಸಬಹುದು. ಆದರೆ, ಈ ಬೆಳವಣಿಗೆಯ ಹಿಂದಿರುವ ರಾಜಕಾರಣ ಇಷ್ಟು ಸರಳವಾಗಿಲ್ಲ. ಯೋಗಿ ಆದಿತ್ಯನಾಥ್ ಹಾಗೂ ಮೋದಿ-ಶಾ ಜೋಡಿ ನಡುವೆ ನಡೆಯುತ್ತಿರುವ ತೆರೆಮರೆಯ ಶೀತಲ ಸಮರ ಮತ್ತು ಮೋದಿಯವರ ವಿರುದ್ಧ ತಿರುಗಿಬಿದ್ದಿರುವ ಆರೆಸ್ಸೆಸ್, ಆದಿತ್ಯನಾಥ್‌ರನ್ನು ಮುಂದಿಟ್ಟುಕೊಂಡು ಹೆಣೆದಿರುವ ರಾಜಕೀಯ ಚಕ್ರವ್ಯೆಹಗಳು ಇದರ ಹಿಂದಿದೆ ಅನ್ನೋದನ್ನು ನಾವು ಮರೆಯಬಾರದು.
ಮೋದಿ ಮತ್ತು ಯೋಗಿ ನಡುವಿನ ಶೀತಲ ಸಮರದ ಚರಿತ್ರೆ ಹೇಗೆ ಶುರುವಾಯಿತು? ಅದೀಗ ಎಲ್ಲಿಗೆ ಬಂದು ನಿಂತಿದೆ ಅನ್ನುವುದನ್ನು ತಿಳಿದುಕೊಳ್ಳುವುದಕ್ಕೂ ಮೊದಲು ಯೋಗಿ ಆದಿತ್ಯನಾಥ್ ಇವತ್ತು ಎಂತಹ ಇಕ್ಕಟ್ಟಿನಲ್ಲಿದ್ದಾರೆ ಅನ್ನುವುದನ್ನು ನೋಡೋಣ. ಇತ್ತೀಚೆಗೆ ಜುಲೈ ೧೪ನೇ ತಾರೀಕು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನೇತೃತ್ವದಲ್ಲಿ ಲಕ್ನೋದಲ್ಲಿ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಉತ್ತರ ಪ್ರದೇಶದಲ್ಲಿ ನಡೆದ ಮೊತ್ತಮೊದಲ ಸಭೆ ಅದು. ಆ ಸಭೆಯಲ್ಲಿ ಸೋಲಿನ ಹೊಣೆಯಿಂದ ಕಳಚಿಕೊಳ್ಳಲು ಯತ್ನಿಸಿದ ಆದಿತ್ಯನಾಥ್, ‘‘ಅಭ್ಯರ್ಥಿಗಳನ್ನಾಗಿ ಹೊಸ ಮುಖಗಳನ್ನು ಆಯ್ಕೆ ಮಾಡಿದ್ದು ಮತ್ತು ಪಕ್ಷದ ಒಟ್ಟಾರೆ ಓವರ್ ಕಾನ್ಫಿಡೆನ್ಸ್‌ನ ಕಾರಣಕ್ಕೆ ನಾವು ಸೋಲಬೇಕಾಯಿತು’’ ಎಂಬ ಹೇಳಿಕೆ ನೀಡಿದರು. ಪರೋಕ್ಷವಾಗಿ ಮೋದಿಯವರ ಚಾರ್ ಸೌ ಪಾರ್ ಓವರ್ ಕಾನ್ಪಿಡೆನ್ಸ್ ಘೋಷಣೆಯನ್ನು ಯೋಗಿ ಎಳೆದು ತಂದರು. ಆದರೆ ಯೋಗಿಯವರ ಮಾತಿಗೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ ಡೆಪ್ಯುಟಿ ಸಿಎಂ ಕೇಶವ್ ಪ್ರಸಾದ್ ಮೌರ್ಯ ‘‘ಸಂಘಟನ್ ಸರಕಾರ್ ಸೇ ಬಡಾ ಥಾ, ಬಡಾ ಹೈ ಔರ್ ಬಡಾ ರಹೇಂಗೆ’’ ಎಂದರು. ಅರ್ಥಾತ್ ಸರಕಾರಕ್ಕಿಂತ ಪಕ್ಷ ಸಂಘಟನೆಯೇ ದೊಡ್ಡದು ಎಂಬರ್ಥದಲ್ಲಿ ಮಾತು ಶುರು ಮಾಡಿದ ಮೌರ್ಯ, ಸರಕಾರದ ಕಾರ್ಯವೈಖರಿಯಿಂದ ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ, ಅವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ, ಬ್ಯೂರೋಕ್ರೆಟ್‌ಗಳ ಮಾತುಕೇಳಿ ಆಡಳಿತ ನಡೆಸಲಾಗುತ್ತಿದೆ, ಇದೇ ಸೋಲಿಗೆ ಮುಖ್ಯ ಕಾರಣ ಎಂದು ನೇರವಾಗಿ ಯೋಗಿ ಮೇಲೆ ಮುಗಿಬಿದ್ದರು. ಅಲ್ಲಿಗೆ ಯೋಗಿ ಮತ್ತು ಮೌರ್ಯ ನಡುವೆ ನಡೆಯುತ್ತಿದ್ದ ತೆರೆಮರೆಯ ಕಚ್ಚಾಟ ಆ ವೇದಿಕೆ ಮೂಲಕ ಬಹಿರಂಗವಾಯಿತು.
ಯೋಗಿ ಆದಿತ್ಯನಾಥ್‌ರ ವಿರುದ್ಧ ತುಂಬಾ ದಿನಗಳಿಂದ ಅಸಮಾಧಾನ ಹೊಂದಿರುವ ಮೌರ್ಯ, ಇತ್ತೀಚೆಗೆ ಕ್ಯಾಬಿನೆಟ್ ಮೀಟಿಂಗ್‌ಗಳಿಗೆ ಸಹ ಹೋಗದೆ ತಮ್ಮ ಆಕ್ರೋಶ ಹೊರಹಾಕಿದ್ದುಂಟು. ಇದಾದ ಮೂರೇ ದಿನಗಳಿಗೆ, ಅಂದರೆ ಜುಲೈ ೧೭ರಂದು ಬಿಜೆಪಿ ಎಂಎಲ್‌ಸಿ ದೇವೇಂದ್ರ ಪ್ರತಾಪ್ ಸಿಂಗ್, ಸಿಎಂ ಯೋಗಿಗೆ ನೇರವಾಗಿ ಪತ್ರ ಬರೆದು ‘‘ಜನ ನಮ್ಮ ವಿರುದ್ಧ ಸಿಟ್ಟಾಗಲು ಕಾರಣಗಳೇನು ತಿಳಿಸಿ?’’ ಎಂದು ಆಗ್ರಹಿಸಿದರು. ಇದರ ಬೆನ್ನಿಗೇ ಬಿಜೆಪಿ ಶಾಸಕ ರಮೇಶ್ ಮಿಶ್ರಾ ಅವರ ಒಂದು ವೀಡಿಯೊ ಉತ್ತರ ಪ್ರದೇಶದಲ್ಲಿ ಸಾಕಷ್ಟು ವೈರಲ್ ಆಯಿತು. ಅದರಲ್ಲಿ ಆತ ರಾಜ್ಯದಲ್ಲಿ ಈಗ ಬಿಜೆಪಿ ಶಿಥಿಲಾವಸ್ಥೆ ತಲುಪಿದೆ, ಕೇಂದ್ರ ನಾಯಕರು ಆದಷ್ಟು ಬೇಗ ಮಧ್ಯಪ್ರವೇಶಿಸದಿದ್ದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ನಿರ್ನಾಮವಾಗಲಿದೆ ಅಂತ ಹೇಳಿದ್ದರು.
ಒಂದುಕಡೆ ತನ್ನ ನಾಯಕತ್ವದ ವಿರುದ್ಧ ಇಷ್ಟೆಲ್ಲ ವಿರೋಧ ಕೇಳಿ ಬರುತ್ತಿದ್ದರೂ, ತಾನು ಇದಕ್ಕೆಲ್ಲ ಕದಲುವುದಿಲ್ಲ ಎನ್ನುವ ಧಾಟಿಯಲ್ಲಿ ಯೋಗಿ ಆದಿತ್ಯನಾಥ್ ವರ್ತಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ೧೦ ಶಾಸಕರು ಗೆದ್ದು ಸಂಸದರಾಗಿರುವುದರಿಂದ ತೆರವಾಗಿರುವ ಆ ೧೦ ವಿಧಾನಸಭಾ ಕ್ಷೇತ್ರಗಳಿಗೆ ಸದ್ಯದಲ್ಲೇ ಉಪಚುನಾವಣೆ ನಡೆಯಲಿದೆ. ಆ ಉಪಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಪುನಃ ತನ್ನ ವರ್ಚಸ್ಸು ಸೃಷ್ಟಿಸಿಕೊಳ್ಳಬೇಕು ಎಂಬುದು ಯೋಗಿ ಇಂಗಿತ. ಉಪಚುನಾವಣೆಯ ತಯಾರಿಗೋಸ್ಕರ ಜುಲೈ ೧೭ರಂದು ಅವರು ಒಂದು ಸಭೆ ಕರೆದಿದ್ದರು. ಆ ಸಭೆಗೂ ಡಿಸಿಎಂ ಮೌರ್ಯ, ಹಿರಿಯ ನಾಯಕ ಬ್ರಜೇಶ್ ಪಾಠಕ್ ಮತ್ತು ಹಲವು ಸಚಿವರುಗಳು ಗೈರಾಗುವ ಮೂಲಕ ಯೋಗಿಗೆ ಬಂಡಾಯದ ಸಂದೇಶ ರವಾನಿಸಿದ್ದಾರೆ.
ಮೇಲ್ನೋಟಕ್ಕೆ ಇದು, ರಾಜ್ಯ ಘಟಕದ ಭಿನ್ನಾಭಿಪ್ರಾಯದಂತೆ ಕಾಣಬಹುದು. ಆದರೆ ಇದರ ಹಿಂದೆ ಮೋದಿ-ಶಾ ಜೋಡಿಯ ರಾಜಕೀಯ ತಂತ್ರಗಾರಿಕೆ ಅಡಗಿದೆ ಅನ್ನುವುದನ್ನು ಮುಂದಿನ ಸಂಗತಿಗಳು ಸಾಬೀತು ಮಾಡುತ್ತವೆ. ಮೊದಲನೆಯದಾಗಿ, ಈಗ ಯೋಗಿ ವಿರುದ್ಧ ಬಂಡಾಯವೆದ್ದಿರುವ ಡಿಸಿಎಂ ಮೌರ್ಯರಿಂದ ಹಿಡಿದು ಬ್ರಜೇಶ್ ಪಾಠಕ್, ದೇವೇಂದ್ರ ಪ್ರತಾಪ್, ರಮೇಶ್ ಮಿಶ್ರಾ ಮೊದಲಾದವರೆಲ್ಲ ಮೋದಿಯವರ ನೇರ ಕೃಪಾಕಟಾಕ್ಷದಲ್ಲಿ ಗುರುತಿಸಿಕೊಂಡವರು. ಹಾಗಾಗಿಯೇ, ಕಾರ್ಯಕಾರಿಣಿ ಸಭೆಯ ನಂತರ ಡಿಸಿಎಂ ಕೇಶವ್ ಮೌರ್ಯ ಅವರನ್ನು ಜೆ.ಪಿ. ನಡ್ಡಾ ದಿಲ್ಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದರು. ಉತ್ತರ ಪ್ರದೇಶದ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿಯವರನ್ನು ದಿಲ್ಲಿಗೆ ಕರೆಸಿಕೊಂಡ ಪ್ರಧಾನಿ ಮೋದಿ, ಬೆಳವಣಿಗೆಗಳ ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೆಲ್ಲ ನೋಡಿಯೇ, ಉಪಚುನಾವಣೆಯ ಫಲಿತಾಂಶದ ನಂತರ ಯೋಗಿ ಆದಿತ್ಯನಾಥ್‌ರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲಾಗುತ್ತದೆ ಎಂಬ ಮಾತುಗಳು ಹುಟ್ಟಿಕೊಂಡಿವೆ. ಅದೇ ಕಾರಣಕ್ಕೇ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ‘‘ನೂರು ಶಾಸಕರನ್ನು ಕರೆತನ್ನಿ, ನಮ್ಮ ಸಹಕಾರದೊಂದಿಗೆ ಸಿಎಂ ಆಗಿ’’ ಎಂಬ ಮಾನ್ಸೂನ್ ಆಫರ್‌ನ ಲೇವಡಿ ಮಾಡಿದ್ದು!
ಈಗ ಅಸಲಿ ವಿಚಾರಕ್ಕೆ ಬರೋಣ. ೨೦೧೭ರಲ್ಲಿ ಯಾರು ಸಹ ನಿರೀಕ್ಷೆ ಮಾಡದಿದ್ದ ರೀತಿಯಲ್ಲಿ ಯೋಗಿ ಆದಿತ್ಯನಾಥ್‌ರನ್ನು ಉತ್ತರ ಪ್ರದೇಶದ ಸಿಎಂ ಆಗಿ ಅಚ್ಚರಿಯ ಘೋಷಣೆ ಮಾಡಿದ್ದ ಮೋದಿ-ಶಾ ಜೋಡಿಯೇ ಈಗ್ಯಾಕೆ ಆದಿತ್ಯನಾಥ್‌ರ ವಿರುದ್ಧ ತಿರುಗಿಬಿದ್ದಿದೆ? ಇದರಲ್ಲಿ ಆರೆಸ್ಸೆಸ್‌ನ ತಂತ್ರ ಅಥವಾ ದೂರದೃಷ್ಟಿ ಏನಿರಬಹುದು?
ಹೌದು, ಯೋಗಿ ಆದಿತ್ಯನಾಥ್ ಸಿಎಂ ಆಗಬಹುದು ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಸಾಧು ರೂಪದ ರಾಜಕಾರಣಿಯನ್ನು ಸಿಎಂ ಆಗಿ ಘೋಷಿಸಿದ್ದೇ ಮೋದಿ. ಹೀಗೆ ಘೋಷಿಸಿದ ಮೊದಲ ನಾಲ್ಕು ವರ್ಷ ಎಲ್ಲಾ ಸುಸೂತ್ರವಾಗಿತ್ತು. ಆದರೆ ೨೦೨೨ರಲ್ಲಿ ಉತ್ತರ ಪ್ರದೇಶದ ಚುನಾವಣೆ ಬರುವ ವೇಳೆಗೆ ಇಬ್ಬರ ನಡುವೆ ಸಣ್ಣ ಬಿರುಕು ಕಾಣಲಾರಂಭಿಸಿತ್ತು. ಅದಕ್ಕೆ ಕಾರಣ ಮೋದಿಯವರ ವ್ಯಕ್ತಿತ್ವ ಅನ್ನುವುದು ಎಷ್ಟು ಸತ್ಯವೋ, ಆದಿತ್ಯನಾಥ್‌ರ ಕಾರ್ಯವೈಖರಿ ಎನ್ನುವುದೂ ಅಷ್ಟೇ ಸತ್ಯ. ಮೋದಿಯವರ ರಾಜಕೀಯ ಹಿನ್ನೆಲೆ ಗಮನಿಸಿದರೆ, ಅವರು ಪಕ್ಷದಲ್ಲಿ ತಮಗೆ ಪ್ರತಿಸ್ಪರ್ಧಿಯಾಗಬಲ್ಲ ನಾಯಕರನ್ನು ವ್ಯವಸ್ಥಿತವಾಗಿ ಮಟ್ಟಹಾಕುತ್ತಾ ಬಂದದ್ದು ನಮಗೆ ಅರ್ಥವಾಗುತ್ತದೆ. ಅಡ್ವಾಣಿಯವರಿಂದ ಮೊದಲ್ಗೊಂಡು ಮುರಳಿ ಮನೋಹರ ಜೋಷಿ, ಯಶವಂತ ಸಿನ್ಹಾ, ಉಮಾಭಾರತಿ, ವಸುಂಧರಾ ರಾಜೇ, ಯಡಿಯೂರಪ್ಪ ಹೀಗೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ನಾಯಕರನ್ನು ವ್ಯವಸ್ಥಿತವಾಗಿ ಸೈಡ್‌ಲೈನ್ ಮಾಡುತ್ತಾ ಬಂದಿದ್ದಾರೆ. ಅದೇ ಕಾರಣಕ್ಕೆ, ರಾಜ್ಯಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ ಅಥವಾ ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡುವಾಗ ಪ್ರಭಾವಿ ಹಿನ್ನೆಲೆ ಇರದ ಎರಡನೇ ಶ್ರೇಣಿಯ ನಾಯಕರನ್ನು ಮೋದಿ ಪರಿಗಣಿಸುತ್ತಾ ಬರುತ್ತಿದ್ದಾರೆ. ಹೊಸಬರು ತಮ್ಮ ಅಂಕೆಯಲ್ಲಿರುತ್ತಾರೆ ಹಾಗೂ ತಮಗೆ ಪ್ರತಿಸ್ಪರ್ಧಿಯಾಗುವ ಸಂಭವವೂ ಕಡಿಮೆ ಎಂಬ ನಿರೀಕ್ಷೆಯಿರಬಹುದು. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನದಲ್ಲಿ ವಸುಂಧರಾ ರಾಜೇ ಸಿಎಂ ಹುದ್ದೆ ತಪ್ಪಿಸಿಕೊಂಡದ್ದು ಇದೇ ಕಾರಣಕ್ಕೆ. ೨೦೧೭ರಲ್ಲಿ ಹೊಸ ಮುಖ ಯೋಗಿ ಆದಿತ್ಯನಾಥ್‌ರನ್ನು ಯುಪಿಯ ಸಿಎಂ ಹುದ್ದೆಗೆ ಆಯ್ಕೆ ಮಾಡುವಾಗ ಮೋದಿಯವರು ಇದೇ ಲೆಕ್ಕಾಚಾರ ಹಾಕಿದ್ದರೂ ಅಚ್ಚರಿಯಿಲ್ಲ.
ಆದರೆ, ಯೋಗಿ ಆದಿತ್ಯನಾಥ್ ಸಾಧು ವೇಷಧಾರಿಯಾದರೂ ರಾಜಕೀಯವಾಗಿ ಮೋದಿಯವರಷ್ಟೇ ಮಹತ್ವಾಕಾಂಕ್ಷಿ. ದಿನದಿಂದ ದಿನಕ್ಕೆ ಮೋದಿಯವರ ಪ್ರಭಾವದಿಂದ ಹೊರಬಂದ ಯೋಗಿ, ಹಿಂದುತ್ವದ ಐಕಾನ್ ಇಮೇಜು ಬೆಳೆಸಿಕೊಳ್ಳಲಾರಂಭಿಸಿದರು. ಮುಸ್ಲಿಮ್ ದ್ವೇಷದಲ್ಲಿ ಮೋದಿಗಿಂತಲೂ ಚಾಂಪಿಯನ್ ಆಗಲಾರಂಭಿಸಿದರು. ಮೂಲ ಆರೆಸ್ಸಿಸಿಗನಲ್ಲದಿದ್ದರೂ, ಆರೆಸ್ಸೆಸ್ ಕೂಡಾ ಯೋಗಿಯ ದ್ವೇಷಪೂರ್ಣ ರಾಜಕೀಯ ವೈಖರಿಗೆ ಮಣೆ ಹಾಕುತ್ತಾ ಬಂತು. ಬಹುಶಃ ಆಗಲೇ, ಯೋಗಿಗೆ ಕಡಿವಾಣ ಹಾಕಬೇಕು ಎಂದು ಮೋದಿ-ಶಾ ಜೋಡಿಗೆ ಅನ್ನಿಸಿದ್ದಿರಬಹುದು.
ಆದರೆ, ಹೇಗೆ?... ಈ ಪ್ರಶ್ನೆಗೆ ಅವರಿಗೆ ಉತ್ತರವಾಗಿ ಕಂಡದ್ದು ಮಾಜಿ ಬ್ಯೂರೋಕ್ರೆಟ್ ಅರವಿಂದ್ ಕುಮಾರ್ ಶರ್ಮ! ಈತ ಉತ್ತರ ಪ್ರದೇಶ ಮೂಲದವರಾದರೂ ಗುಜರಾತ್ ಕೇಡರಿನಲ್ಲಿ ಐಎಎಸ್ ಅಧಿಕಾರಿಯಾಗಿದ್ದವರು. ಮೋದಿ ಮೊದಲ ಬಾರಿ ಸಿಎಂ ಆಗಿದ್ದಾಗಿನಿಂದಲೂ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವರು. ಮೋದಿಯವರ ಏಳಿಗೆಯಲ್ಲಿ ಇವರ ಪಾತ್ರ ಅಪಾರ. ಅವಧಿಗೂ ಮೊದಲೇ ವಾಲಂಟರಿ ರಿಟೈರ್‌ಮೆಂಟ್ ತೆಗೆದುಕೊಂಡಿದ್ದ ಅವರನ್ನು ಉತ್ತರಪ್ರದೇಶದ ಎಂಎಲ್‌ಸಿಯಾಗಿ ಆಯ್ಕೆ ಮಾಡಿದ ಮೋದಿ-ಶಾ, ಅವರನ್ನು ಡೆಪ್ಯುಟಿ ಸಿಎಂ ಆಗಿ ನೇಮಿಸಬೇಕು ಎಂಬ ಯೋಜನೆಯಲ್ಲಿದ್ದರು. ಹಾಗೊಮ್ಮೆ ಶರ್ಮ ಡೆಪ್ಯುಟಿ ಸಿಎಂ ಆದರೆ, ಆತನ ಮೂಲಕ ಯೋಗಿಯನ್ನು ಕಟ್ಟಿಹಾಕಬಹುದು ಅನ್ನುವುದು ಮೋದಿ-ಶಾ ಲೆಕ್ಕಾಚಾರ ಎನ್ನಲಾಗಿತ್ತು. ಅಷ್ಟರಲ್ಲಾಗಲೇ ಯೋಗಿ ಸಂಪುಟದಲ್ಲಿ ಇಬ್ಬರು ಡೆಪ್ಯುಟಿ ಸಿಎಂಗಳಿದ್ದರು. ಅವರಿಬ್ಬರಲ್ಲಿ ಒಬ್ಬರನ್ನು ಬದಲಿಸುವುದು ಸುಲಭವಿರಲಿಲ್ಲ. ಹಾಗಾಗಿ ಶರ್ಮರನ್ನು ಮೂರನೇ ಡೆಪ್ಯುಟಿ ಸಿಎಂ ಆಗಿ, ಯೋಗಿಯನ್ನು ಮತ್ತಷ್ಟು ಡೈಲ್ಯೂಟ್ ಮಾಡುವುದು ಇದರ ಉದ್ದೇಶ. ಇದೆಲ್ಲ ನಡೆದದ್ದು ೨೦೨೧ರ ಕೊನೇ ಮತ್ತು ೨೦೨೨ರ ಆರಂಭದಲ್ಲಿ. ಅಂದರೆ ಉತ್ತರ ಪ್ರದೇಶವು ಚುನಾವಣೆಗೆ ಅಣಿಯಾಗುತ್ತಿದ್ದ ಸಂದರ್ಭದಲ್ಲಿ.
ಮೋದಿ-ಶಾ ಜೋಡಿಯ ಈ ಯೋಜನೆಗೆ ಯೋಗಿ ತಿರುಗಿಬಿದ್ದರು. ಅರವಿಂದ್ ಕುಮಾರ್ ಶರ್ಮರನ್ನು ಡೆಪ್ಯುಟಿ ಸಿಎಂ ಮಾಡುವುದಿರಲಿ, ಅವರ ಭೇಟಿಗೂ ಅವಕಾಶ ಕೊಡಲಿಲ್ಲ. ಉತ್ತರ ಪ್ರದೇಶದ ಗವರ್ನರ್, ಗುಜರಾತ್ ಮೂಲದ ಆನಂದಿಬೆನ್ ಪಟೇಲ್ ಅವರನ್ನು ಮಧ್ಯಸ್ಥಿಕೆಗೆ ಬಳಸಿಕೊಳ್ಳಲಾಯಿತು. ಅದಕ್ಕೂ ಯೋಗಿ ಮಣೆ ಹಾಕಲಿಲ್ಲ. ಕೊನೆಗೆ ಆರೆಸ್ಸೆಸ್ ಅಖಾಡಕ್ಕಿಳಿಯಬೇಕಾಯಿತು. ದತ್ತಾತ್ರೇಯ ಹೊಸಬಾಳೆ, ಬಿ.ಎಲ್. ಸಂತೋಷ್, ರಾಧಾ ಮೋಹನ್ ಸಿಂಗ್ ಉತ್ತರ ಪ್ರದೇಶದಲ್ಲಿ ಬೀಡುಬಿಟ್ಟು ಮೋದಿ-ಯೋಗಿ ನಡುವಿನ ಬಿರುಕು ಶಮನಗೊಳಿಸಲು ಯತ್ನಿಸಿದರು. ಆಗಲೂ ಯೋಗಿ, ಅರವಿಂದ್ ಕುಮಾರ್ ಶರ್ಮರನ್ನು ತನ್ನ ಡೆಪ್ಯುಟಿ ಸಿಎಂ ಆಗಿ ನೇಮಿಸಿಕೊಳ್ಳಲು ಒಪ್ಪಲಿಲ್ಲ.
ಮೋದಿ ಮತ್ತು ಯೋಗಿ ನಡುವಿನ ಶೀತಲ ಸಮರ ಶುರುವಾದದ್ದು ಹೀಗೆ. ಅಷ್ಟರಲ್ಲಿ ೨೦೨೨ರ ಚುನಾವಣೆಯೂ ಬಂತು. ೨೦೧೭ಕ್ಕೆ ಹೋಲಿಸಿದರೆ ಬಿಜೆಪಿಯ ಸೀಟು ಗಳಿಕೆ ಕುಸಿದಿದ್ದು ನಿಜವಾದರೂ, ಬಿಜೆಪಿಯನ್ನು ಏಕಾಂಗಿಯಾಗಿ ಬಹುಮತ ದಾಟಿಸುವಲ್ಲಿ ಯೋಗಿ ಆದಿತ್ಯನಾಥ್ ಯಶಸ್ವಿಯಾದರು. ಹಾಗಾಗಿ, ಮತ್ತೊಮ್ಮೆ ಅವರು ಸಿಎಂ ಆಗುವುದನ್ನು ತಪ್ಪಿಸಲು ಮೋದಿಗೆ ಕಷ್ಟವಾಯಿತು. ಅದೂ ಅಲ್ಲದೆ, ಬೇರೆ ರಾಜ್ಯಗಳಂತೆ ಉತ್ತರ ಪ್ರದೇಶದಲ್ಲಿ ಬಂಡಾಯವನ್ನು ಮೈಮೇಲೆ ಎಳೆದುಕೊಳ್ಳುವುದು ತನ್ನ ಮೂರನೇ ಅವಧಿಯ ಪ್ರಧಾನಿ ಕನಸಿಗೂ ಕ್ಷೇಮವಲ್ಲ ಎಂಬುದು ಮೋದಿಗೆ ತಿಳಿದಿತ್ತು. ಯಾಕೆಂದರೆ ೮೦ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ, ಕೇಂದ್ರದಲ್ಲಿ ಸರಕಾರ ರಚನೆಗೆ ನಿರ್ಣಾಯಕ ಎನಿಸುವಂತಹದ್ದು. ಅಲ್ಲಿ, ಯಡವಟ್ಟು ಮಾಡಿಕೊಂಡು ಅರ್ಧದಷ್ಟು ಸೀಟು ಕಳೆದುಕೊಂಡರೂ, ಬಿಜೆಪಿಯ ಸ್ಥಾನ ಗಳಿಕೆ ನೆಲಕಚ್ಚುತ್ತದೆ ಅನ್ನುವುದು ವಾಸ್ತವ. ಹಾಗಾಗಿ ೨೦೨೨ರಲ್ಲೂ ಯೋಗಿಯನ್ನೇ ಸಿಎಂ ಮಾಡಬೇಕಾಯಿತು. ಆಗಲೂ ಶರ್ಮರನ್ನು ಡೆಪ್ಯುಟಿ ಸಿಎಂ ಮಾಡಬೇಕೆನ್ನುವ ಮೋದಿ-ಶಾ ಜೋಡಿಯ ಸಲಹೆಗೆ ಯೋಗಿ ಸೊಪ್ಪು ಹಾಕಲಿಲ್ಲ.
ಈ ನಡುವೆ ಇದಕ್ಕಿಂತಲೂ ಮುಖ್ಯವಾದ ಬೆಳವಣಿಗೆ ಘಟಿಸಲಾರಂಭಿಸಿತು. ಅದು ಮೋದಿ ಮತ್ತು ಆರೆಸ್ಸೆಸ್ ನಡುವಿನ ಬಿರುಕು. ಸತತ ಚುನಾವಣಾ ಯಶಸ್ಸುಗಳಿಂದ ಮೋದಿ ತಮ್ಮ ಅಂಕೆ ಮೀರಿ ಬೆಳೆಯುತ್ತಿದ್ದಾರೆ ಎಂಬ ಆತಂಕ ಆರೆಸ್ಸೆಸ್ ಸಂಘಟನೆಯನ್ನು ಕಾಡಲಾರಂಭಿಸಿತ್ತು. ಅವರನ್ನು ನಿಯಂತ್ರಿಸಬೇಕೆಂದರೆ, ಅವರಿಗೆ ಪರ್ಯಾಯವಾಗಿ ತಮಗೋರ್ವ ಚೆಕ್‌ಮೇಟ್ ವ್ಯಕ್ತಿ ಬೇಕಾಗುತ್ತೆ ಎಂದು ಆರೆಸ್ಸೆಸ್ ಶೋಧಕ್ಕಿಳಿದಾಗ, ಯೋಗಿ ಆದಿತ್ಯನಾಥ್ ಆಯ್ಕೆಯಾಗಿ ಕಂಡರು. ಯೋಗಿ ಮೂಲತಃ ಆರೆಸ್ಸೆಸ್ ಸಂಘಟನೆಯಿಂದ ಬಂದ ವ್ಯಕ್ತಿ ಅಲ್ಲದಿದ್ದರೂ, ತನ್ನದೇ ಹಿಂದೂ ಯುವವಾಹಿನಿ ಸಂಘಟನೆ ಮೂಲಕ ಆರೆಸ್ಸೆಸ್‌ನ ಹಿಂದೂರಾಷ್ಟ್ರ ಪರಿಕಲ್ಪನೆಗೆ ಪೂರಕವಾಗಿ, ಮುಸ್ಲಿಮ್ ದ್ವೇಷದ ಐಕಾನ್ ಆಗಿ ಗುರುತಿಸಿಕೊಂಡಂತಹವರು. ಮುಖ್ಯವಾಗಿ, ಹಿಂದೂಗಳ ಧಾರ್ಮಿಕ ರಾಜಕಾರಣಕ್ಕೆ ಹೇಳಿಮಾಡಿಸಿದಂತೆ ಸನ್ಯಾಸಿಯ ಹಿನ್ನೆಲೆಯವರು. ಅಲ್ಲದೆ, ಮೋದಿಗಿಂತ ವಯಸ್ಸಿನಲ್ಲಿ ೨೦ ವರ್ಷ ಚಿಕ್ಕವರು. ಅವರನ್ನು ಮುನ್ನೆಲೆಗೆ ತಂದರೆ, ಮೋದಿಗೆ ಪರ್ಯಾಯ ನಾಯಕನನ್ನು ಮುಂದಿಡಬಹುದು ಎಂಬ ಲೆಕ್ಕಾಚಾರದಲ್ಲಿ ಆರೆಸ್ಸೆಸ್, ಯೋಗಿಯನ್ನು ಮೋದಿ ನಂತರದ ಪ್ರಧಾನಿ ಅಭ್ಯರ್ಥಿ ಎಂಬಂತೆ ಬಿಂಬಿಸಲಾರಂಭಿಸಿತು. ಹಾಗಾಗಿಯೇ ಬೇರೆಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲೂ, ಯೋಗಿ ಆದಿತ್ಯನಾಥ್‌ರನ್ನು ಸ್ಟಾರ್ ಕ್ಯಾಂಪೇನರ್ ಆಗಿ ಆರೆಸ್ಸೆಸ್ ಪ್ರಪೋಸ್ ಮಾಡಲು ಶುರು ಮಾಡಿತು. ಮುಸ್ಲಿಮ್ ಬಾಹುಳ್ಯವಿರುವ ಹೈದರಾಬಾದ್ ಮುನ್ಸಿಪಲ್ ಎಲೆಕ್ಷನ್‌ಗೂ ಯೋಗಿ ಕ್ಯಾಂಪೇನರ್ ಆಗಿ ಭಾಗವಹಿಸಿದರು. ಅಂದರೆ, ಯೋಗಿ ಆದಿತ್ಯನಾಥ್‌ರನ್ನು ಹಿಂದುತ್ವದ ಹೊಸ ಐಕಾನ್ ಆಗಿ ಪ್ರತಿಷ್ಠಾಪಿಸುವುದು ಆರೆಸ್ಸೆಸ್‌ನ ಉದ್ದೇಶವಾಗಿತ್ತು. ಅದಕ್ಕೆ ತಕ್ಕಂತೆ ಯೋಗಿ ಕೂಡಾ ತಮ್ಮ ಆಡಳಿತದಲ್ಲಿ ಮುಸ್ಲಿಮ್ ವಿರೋಧಿ, ಬುಲ್ಡೋಜರ್ ಶೈಲಿಯ ಆಡಳಿತವನ್ನು ಕಾರ್ಯರೂಪಕ್ಕೆ ತಂದು ಆರೆಸ್ಸೆಸ್‌ಗೆ ಸನಿಹಗೊಳ್ಳಲಾರಂಭಿಸಿದರು.
ಆರೆಸ್ಸೆಸ್‌ನ ಈ ತಂತ್ರ ಮೋದಿಯವರ ಸಿಟ್ಟನ್ನು ಮತ್ತಷ್ಟು ನೆತ್ತಿಗೇರಿಸಿತು. ಲೋಕಸಭಾ ಚುನಾವಣೆಗೂ ಮೊದಲು ಜೆ.ಪಿ. ನಡ್ಡಾ, ‘‘ನಮಗೀಗ ಆರೆಸ್ಸೆಸ್‌ನ ಅಗತ್ಯವಿಲ್ಲ’’ ಎಂಬ ಹೇಳಿಕೆ ನೀಡಿದ್ದರ ಹಿಂದೆ ಈ ಎಲ್ಲಾ ಬೆಳವಣಿಗೆಗಳು ಅಡಗಿದ್ದವು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೨೪೦ ಸ್ಥಾನಗಳಿಗೆ ಕುಸಿದ ನಂತರ, ಆರೆಸ್ಸೆಸ್ ಪರೋಕ್ಷವಾಗಿ ಮೋದಿಯವರ ವ್ಯಕ್ತಿತ್ವದ ಮೇಲೆ ದಾಳಿ ಮಾಡಲಾರಂಭಿಸಿದೆ. ಮೋಹನ್ ಭಾಗವತ್ ಅವರ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಈ ಹಂತದಲ್ಲಿ ಮೋದಿಯವರಿಗೆ ಎರಡು ಸಂಗತಿಗಳು ಸ್ಪಷ್ಟವಾದಂತೆ ಕಾಣುತ್ತದೆ. ಮೊದಲನೆಯದ್ದು, ಆರೆಸ್ಸೆಸ್ ಜೊತೆಗೆ ತನ್ನ ಬಿರುಕನ್ನು ಆದಷ್ಟು ಸರಿಪಡಿಸಿಕೊಳ್ಳಲು ಯತ್ನಿಸಬೇಕು. ಅದರ ಭಾಗವಾಗಿಯೇ, ಸರಕಾರಿ ನೌಕರರ ಸಂಘ ಚಟುವಟಿಕೆಗಳ ಮೇಲಿನ ನಿಷೇಧ ರದ್ದು ಆದೇಶ ಹೊರಬಿದ್ದಿರಬಹುದು. ಎರಡನೆಯದ್ದು, ತನಗೆ ಪರ್ಯಾಯವಾಗಿ ಆರೆಸ್ಸೆಸ್ ಸೃಷ್ಟಿಸಲು ಯತ್ನಿಸುತ್ತಿರುವ ಯೋಗಿ ಆದಿತ್ಯನಾಥ್‌ರನ್ನು ರಾಜಕೀಯವಾಗಿ ಹಿನ್ನೆಲೆಗೆ ಸರಿಯುವಂತೆ ಮಾಡಬೇಕು. ಈ ತಂತ್ರಗಾರಿಕೆಯ ಭಾಗವಾಗಿಯೇ, ಡೆಪ್ಯುಟಿ ಸಿಎಂ ಕೇಶವ್ ಮೌರ್ಯ ಮೂಲಕ ಯೋಗಿ ವಿರುದ್ಧ ಬಂಡಾಯವನ್ನು ಭುಗಿಲೇಳಿಸಲು ಯತ್ನಿಸಲಾಗುತ್ತಿದೆ. ಆ ಬಂಡಾಯವನ್ನು ನೆಪ ಮಾಡಿಕೊಂಡು ಸಿಎಂ ಹುದ್ದೆಯಿಂದಲೇ ಯೋಗಿಯವರನ್ನು ಕೆಳಗಿಳಿಸಿ, ಅಧಿಕಾರದಿಂದ ದೂರವಾಗಿಸಿದರೆ ಅವರ ರಾಜಕೀಯ ಭವಿಷ್ಯ ನಶಿಸಿಹೋಗುತ್ತದೆ. ಇದು ಉತ್ತರ ಪ್ರದೇಶದ ಬಿಜೆಪಿ ಬಂಡಾಯದ ಹಿಂದಿರುವ ರಾಜಕೀಯ ಸಂಕೀರ್ಣತೆ.
ಆದರೆ, ಇಲ್ಲೊಂದು ಪ್ರಶ್ನೆ ಕಾಡದಿರದು. ಈಗಾಗಲೇ ಒಮ್ಮೆ, ಮೋದಿಯವರ ಅತಿವರ್ಚಸ್ಸಿನ ಆಘಾತಕ್ಕೆ ಈಡಾಗಿರುವ ಆರೆಸ್ಸೆಸ್, ಅಷ್ಟು ಸುಲಭದಲ್ಲಿ ಯೋಗಿ ಎಂಬ ತನ್ನ ಚೆಕ್‌ಮೇಟ್ ಅನ್ನು ಕಳೆದುಕೊಳ್ಳುವುದೇ? ಇಂತಹ ಸಂದರ್ಭಕ್ಕೂ ಆರೆಸ್ಸೆಸ್ ಅಣಿಯಾಗಿರುವ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ. ಒಂದೊಮ್ಮೆ, ರಾಜ್ಯ ಘಟಕದ ಬಂಡಾಯದ ಬಿಸಿ ಜೋರಾಗಿ, ಯೋಗಿ ಆದಿತ್ಯನಾಥ್ ತಮ್ಮ ಸಿಎಂ ಸ್ಥಾನ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾದರೆ, ಆಗ ಅದನ್ನು ತನ್ನ ಲಾಭವಾಗಿ ಬಳಸಿಕೊಳ್ಳಲು ಆರೆಸ್ಸೆಸ್ ಯೋಚಿಸಿದೆಯಂತೆ. ಸದ್ಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿ ಮುಕ್ತಾಯವಾಗಿ ಅವರು ಹಂಗಾಮಿ ಅವಧಿಯಲ್ಲಿದ್ದಾರೆ. ಈಗ ಕೇಂದ್ರ ಸಚಿವ ಸಂಪುಟವನ್ನೂ ಸೇರಿರುವ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಮುಂದುವರಿಯುವುದು ಸಾಧ್ಯವಿಲ್ಲ. ಹಾಗೆ ತೆರವಾಗುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯೋಗಿ ಆದಿತ್ಯನಾಥ್‌ರನ್ನು ತಂದುಕೂರಿಸಲು ಆರೆಸ್ಸೆಸ್ ಯೋಜನೆ ರೂಪಿಸಿದೆ ಎನ್ನಲಾಗುತ್ತಿದೆ. ಹಾಗೇನಾದರೂ ಆದಲ್ಲಿ, ಯೋಗಿ ಮತ್ತಷ್ಟು ಬಲಿಷ್ಠರಾಗಲಿದ್ದಾರೆ. ಮೋದಿಯವರ ಸ್ಥಾನಕ್ಕೆ ಮತ್ತಷ್ಟು ಕಂಟಕವಾಗಲಿದ್ದಾರೆ. ಆಗ ಮೋದಿ ಕೂಡಾ ತನ್ನ ಮುಂದೆ ಮೃದುವಾಗಬೇಕಾಗುತ್ತದೆ ಅನ್ನುವುದು ಆರೆಸ್ಸೆಸ್ ಲೆಕ್ಕಾಚಾರವಾಗಿರಬಹುದು.