ಜಾತಿ-ವರ್ಗ-ಲಿಂಗ ಆಧಾರಿತ ಹಿಂಸೆಗಳನ್ನು ಬಯಲು ಮಾಡುವ ‘ಮೂಗೇಟು’

ಸಮಾಜದ ಶ್ರೇಣೀಕೃತ ಜಾತಿ ವ್ಯವಸ್ಥೆಯು ಲಿಂಗ ಮತ್ತು ವರ್ಗ ಅಸಮಾನತೆಯೊಂದಿಗೆ ಹೇಗೆ ಮಿಳಿತವಾಗುತ್ತದೆ ಎಂಬುದನ್ನು ಮನಮುಟ್ಟುವಂತೆ ಹೇಳುವ ರಂಗ ಸಾಹಿತ್ಯವೊಂದು ಪ್ರದರ್ಶನಗೊಂಡಿದೆ. ‘ಯಾರೂ ಏನೂ ದೌರ್ಜನ್ಯ ಮಾಡಿಯೇ ಇಲ್ಲ. ಎಲ್ಲಿದೆ ಹಿಂಸೆ ?’ ಎಂದು ಕೇಳುತ್ತಲೇ ರಕ್ತ ಹರಿಸದೇ ನಡೆಸುವ ಜಾತಿ-ವರ್ಗ-ಲಿಂಗ ಆಧಾರಿತ ಹಿಂಸೆಗಳನ್ನು ಬಯಲು ಮಾಡುವ ನಾಟಕವೇ ಮೂಗೇಟು !
ಸಂವಿಧಾನ ಮತ್ತು ಚಳವಳಿಗಳು ಏಕಕಾಲದಲ್ಲಿ ಜಾರಿಯಲ್ಲಿದ್ದಾಗ ಮಾತ್ರ ಜಾತಿ ಅಸಮಾನತೆಯನ್ನು ಹೋಗಲಾಡಿಸಬಹುದು. ಚಳವಳಿ ಇಲ್ಲದೆಯೇ, ಸಂವಿಧಾನ ಇದೆ ಎನ್ನುವ ಒಂದೇ ಭರವಸೆಯಲ್ಲಿ ನಾವು ಸಮಾನತೆಯನ್ನು ನಿರೀಕ್ಷಿಸುವಂತಿಲ್ಲ. ಯಾಕೆಂದರೆ ಜಾತಿ ಎನ್ನುವುದು ವರ್ಗ ಮತ್ತು ಲಿಂಗ ಅಸಮಾನತೆಯ ವ್ಯವಸ್ಥೆಯೊಳಗೂ ಅಡಗಿ ಕೂತಿದೆ. ಹಾಗಾಗಿಯೇ ಅಂಬೇಡ್ಕರ್ ವಾದ ಮತ್ತು ಕಮ್ಯುನಿಸಂ ಒಟ್ಟಾಗಬೇಕು ಎಂದು ‘ಮೂಗೇಟು’ ನಾಟಕ ಬಯಸುತ್ತದೆ. ‘ಇಡೀ ದೇಶಕ್ಕೆ class conciousness ಬರಲಿ ಅನ್ನೋ ಕಾರಣಕ್ಕೆ ಕಮ್ಯುನಿಷ್ಟರು ಸಂವಿಧಾನದಲ್ಲಿ ಜಾತಿಗೆ ಸಂಬಂಧ ಪಟ್ಟಿರೋ ಎಲ್ಲ ವಿಷಯವನ್ನು ವಿರೋಧಿಸಿದರು. ಅವರು ಇನ್ನೂ ಮುಂದುವರಿದು ಜಾತಿ ಅನ್ನೋದನ್ನೇ ಕಡೆಗಣಿಸಿ ಬರಿ class ಅನ್ನೋದು ಮಾತ್ರ ಇರೋದು ಅಂಥ ನೋಡಿದ್ದರಿಂದಲೇ ಇವತ್ತು ಅಧಿಕಾರದಲ್ಲಿ ಇರುವವರೇ ಮತ್ತೆ ಮತ್ತೆ ಅಧಿಕಾರದಲ್ಲಿ ಉಳಿಯೋಕೆ ಸಾಧ್ಯ ಆಗಿರೋದು’ ಎಂದು ಓರ್ವ ವಿದ್ಯಾರ್ಥಿ ಪಾತ್ರ ಹೇಳುತ್ತದೆ.
ಇನ್ನೋರ್ವ ವಿದ್ಯಾರ್ಥಿಯು ಇದಕ್ಕೆ ಪ್ರತಿಕ್ರಿಯೆ ಕೊಡುತ್ತಾ ‘ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟಿರೋ ಸಂವಿಧಾನದ ದಾರಿಯಲ್ಲೇ ಇದ್ದುಕೊಂಡು ನಾವು ಅಧಿಕಾರಕ್ಕೆ ಬರಬೇಕು, ಪ್ರೊಟೆಸ್ಟ್, ಹೋರಾಟ ಎಲ್ಲಾ ಮಾಡಬಾರದು ಅಂತ ಕೆಲವು ದಲಿತ ಮುಖಂಡರು ಹೇಳ್ತಾರೆ. ಈ ದಲಿತ ಮುಖಂಡರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕಮ್ಯುನಿಸ್ಟರು ಅಂದ್ರೆ ನಮ್ಮ ಶತ್ರುಗಳು. ಅವರಿಂದ ದೂರ ಇರ್ಬೇಕು ಅಂತ ಹೇಳೋದರ ಮೂಲಕ ಅಧಿಕಾರದಲ್ಲಿ ಇರೋರೆ ಅಧಿಕಾರದಲ್ಲಿ ಉಳಿಯುವಂತೆ ನೋಡಿಕೊಳ್ತಿದ್ದಾರೆ’ ಎನ್ನುತ್ತಾನೆ.
ಇಬ್ಬರು ವಿದ್ಯಾರ್ಥಿಗಳ ಸಂಭಾಷಣೆಗೆ ಪ್ರತಿಕ್ರಿಯಿಸುವ ಶಿಕ್ಷಕ ‘ಈ ಅಂಬೇಡ್ಕರ್‌ವಾದಿಗಳು ಮತ್ತು ಕಮ್ಯುನಿಷ್ಟರ ಮಧ್ಯೆ ಒಂದು ಅಂತರ ಸೃಷ್ಟಿಯಾಗಿದೆಯಲ್ವಾ, ಆ ಅಂತರವನ್ನೇ ಬಳಸಿಕೊಂಡು ಅಧಿಕಾರದಲ್ಲಿ ಇರುವವರು ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ. ಈ ಅಂತರವನ್ನು ಅವರುಗಳು ಬಳಸಿಕೊಳ್ಳುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು’ ಎನ್ನುತ್ತಾರೆ.
ಈ ಸಂಭಾಷಣೆಯೇ ಇಡೀ ನಾಟಕದ ಸಾರಾಂಶವಾಗಿದೆ. ಕಮ್ಯುನಿಷ್ಟರು ಪ್ರತಿಪಾದಿಸುವಂತೆ ‘ವರ್ಗ’ (ಈಗ ಜಾತಿಯ ಬಗೆಗೂ ಕಮ್ಯುನಿಷ್ಟರಿಗೆ ಸ್ಪಷ್ಟ ನಿಲುವು ಇದೆ) ಮತ್ತು ಅಂಬೇಡ್ಕರ್‌ವಾದಿಗಳು ಪ್ರತಿಪಾದಿಸುವಂತೆ ‘ಜಾತಿ’ಯು ನಮ್ಮ ಸಮಾಜ ಮತ್ತು ವೈಯಕ್ತಿಕ ಬದುಕಿನಲ್ಲಿ ಎಷ್ಟು ಕ್ರೂರವಾಗಿದೆ ಎಂಬುದನ್ನು ನಾಟಕ ಮನಮುಟ್ಟುವಂತೆ ಹೇಳುತ್ತದೆ.
ವಿಶ್ವವಿದ್ಯಾನಿಲಯಗಳಲ್ಲಿ ಶೋಷಿತ ಸಮುದಾಯದ ವಿದ್ಯಾರ್ಥಿಗಳು ಅನುಭವಿಸುವ ಜಾತಿ ತಾರತಮ್ಯ, ಅವಮಾನ, ಹಿಂಸೆಗಳು, ಆ ಮೂಲಕ ನಡೆಯುವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಆತ್ಮಹತ್ಯೆ ಹೆಸರಿನ ಹತ್ಯೆಗಳು ಜಾತಿ ಕ್ರೂರತೆಯನ್ನು ಸಾರುತ್ತದೆ. ಕಾಲೇಜುಗಳಲ್ಲಿ ಶೋಷಿತ ಸಮುದಾಯದ ವಿದ್ಯಾರ್ಥಿಗಳನ್ನು ಶಿಕ್ಷಕರು ಬಳಸಿಕೊಳ್ಳುವ ರೀತಿ, ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಇರುವ ಕೀಳರಿಮೆಯನ್ನೂ ಈ ನಾಟಕ ಎದೆಗೆ ನಾಟುವಂತೆ ಪ್ರಸ್ತುತಪಡಿಸುತ್ತದೆ.
ಬರಹಗಾರ ರವಿಕಿರಣ್ ರಾಜೇಂದ್ರನ್ ಅವರು ಮೂಗೇಟು ನಾಟಕವನ್ನು ಬರೆದಿದ್ದು ಸಿದ್ಧಾರ್ಥ ಮಾಧ್ಯಮಿಕ ಅವರು ನಾಟಕವನ್ನು ನಿರ್ದೇಶಿಸಿದ್ದಾರೆ. ‘ಫೋರ್ತ್ ವಾಲ್ ಥೀಯೇಟರ್’ನ ಕಲಾವಿದರು ನಾಟಕವನ್ನು ಪ್ರಸ್ತುತಪಡಿಸಿದ್ದಾರೆ. ರೋಹಿತ್ ವೇಮುಲಾ ಅವರ ‘ಕೊಲೆ’ ಈ ನಾಟಕದ ಬರವಣಿಗೆಗೆ ಪ್ರೇರೇಪಿಸಿದೆ. ಹಲವು ಕನಸುಗಳನ್ನು ಕಟ್ಟಿಕೊಂಡಿದ್ದ ಶೋಷಿತ ಸಮುದಾಯದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಅನುಭವಿಸಿದ ಸಂಕಟಗಳು ಆತ್ಮಹತ್ಯೆಯಲ್ಲಿ ಕೊನೆಯಾಗುತ್ತದೆ.
ಕಚೇರಿಗಳಲ್ಲಿ, ನೆರೆಹೊರೆಯಲ್ಲಿ, ರೈಲು ಬಸ್ಸುಗಳ ಸೀಟಿನ ಅಕ್ಕಪಕ್ಕದಲ್ಲಿ ಮಾತಿಗಿಳಿದರೆ ‘ನೀವು ಯಾವ ಜನ?’ ಎಂದು ಕೇಳುವ ಪ್ರಶ್ನೆಯು ಕಾನೂನಿನ ಪ್ರಕಾರ ಜಾತಿ ನಿಂದನೆಯಲ್ಲ. ಇದು ವರ್ಗದೊಳಗೆ ಅಡಗಿಕೊಂಡಿರುವ ಜಾತಿಯ ದೌರ್ಜನ್ಯ ! ಸಾಕ್ಷ್ಯ ಉಳಿಸದೇ ನಡೆಸುವ ಹಿಂಸೆ ! ಸಂವಿಧಾನ, ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಜಾತಿವಾದಿ ಜನಗಳ ಈ ‘ತನಿಖೆಯ ಕಲೆ’ಯಿಂದಾಗಿ ವರ್ತಮಾನದಲ್ಲಿ ಜಾತಿಯು ವರ್ಗದ ಹಿಂದೆ ಅವಿತಿದೆ. ಹಾಗಾಗಿಯೇ ಕಾಲೇಜು, ಕಚೇರಿ, ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳೆಲ್ಲದರಲ್ಲೂ ಜಾತಿಯನ್ನು ವಿಚಾರಿಸದೆಯೇ ಜಾತಿ ದೌರ್ಜನ್ಯವನ್ನು ಸಲೀಸಾಗಿ ನಡೆಸಬಹುದು.
ಜಾತಿ-ವರ್ಗ-ಲಿಂಗ ಅಸಮಾನತೆ ಮತ್ತು ದೌರ್ಜನ್ಯಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಣೀತ ಸಂವಿಧಾನದ ಆಧಾರದಲ್ಲಿ ನಡೆಯುವ ಪ್ರಜಾಸತ್ತಾತ್ಮಕ ಚಳವಳಿಗಳೇ ಪರಿಹಾರ. ಇಲ್ಲದೇ ಇದ್ದರೆ ಜಾತಿ ದೌರ್ಜನ್ಯದ ಭಾಗವಾಗಿ ನಡೆದ ಸಾಂಸ್ಥಿಕ ಕೊಲೆಗಳು ಸಾಕ್ಷ್ಯಗಳಿಲ್ಲದೇ ಆತ್ಮಹತ್ಯೆಗಳಾಗಿಯೇ ಉಳಿದುಕೊಳ್ಳುತ್ತದೆ. ಜಾತಿಯು ವರ್ಗದ ಹಿಂದೆ ಅವಿತುಕೊಂಡು ಗಹಗಹಿಸುತ್ತಿರುತ್ತದೆ ಎಂದು ಮೂಗೇಟು ನಾಟಕವು
ಅರಿವು ಮೂಡಿಸುತ್ತದೆ. ಶಾಲಾ ಕಾಲೇಜುಗಳಲ್ಲಿ ಈ ನಾಟಕ ಪ್ರದರ್ಶನಗೊಳ್ಳಬೇಕಾದ ಅವಶ್ಯಕತೆ ಇದೆ. ಅದಕ್ಕೂ ಮೊದಲು ಎಡ ಮತ್ತು ದಲಿತ ಹೋರಾಟಗಾರರು ಈ ನಾಟಕವನ್ನು ನೋಡಲೇಬೇಕಾದ ಅನಿವಾರ್ಯತೆ ಇದೆ.