ಹಿಪ್ಪು ನೇರಳೆಗೆ ಸುರುಳಿ ಕೀಟದ ಕಾಟ, ಬೆಳೆಗಾರರಿಗೆ ಸಂಕಷ್ಟ
ಹೊಸಕೋಟೆ: ರೇಷ್ಮೆಗೂಡಿನ ಬೆಲೆ ಕುಸಿತದ ನಡುವೆ ಹಿಪ್ಪುನೇರಳೆ ಬೆಳೆಗೆ ಸುರುಳಿ ಕೀಟ ಅಥವಾ ಕುಡಿ ಹುಳ ಬಾಧೆ ವ್ಯಾಪಕವಾಗಿ ಬೆಳೆಗಾರರನ್ನು ಕಂಗೆಡಿಸಿದೆ. ಕುಡಿ ಹುಳುವಿನ ನಿಯಂತ್ರಣಕ್ಕಾಗಿ ರೇಷ್ಮೆ ಬೆಳೆಗಾರರು ಎಲ್ಲ ಪ್ರಯತ್ನ ನಡೆಸಿ ಸೋತಿದ್ದಾರೆ. ಪೀಡೆ ನಿರ್ವಹಣೆಯ ಒಟ್ಟು ಖರ್ಚು ಶೇ.15-20 ಮೀರುತ್ತಿದೆ. ಹೀಗಾಗಿ ಅವರು ಆರ್ಥಿಕ ಸಂಕಷ್ಟಕ್ಕೂ ಸಿಲುಕುತ್ತಿದ್ದಾರೆ.
ಜಿಲ್ಲಾದ್ಯಂತ ನುಸಿ ಪೀಡೆ, ಪಪಾಯ ಮೀಲಿ ಬಗ್, ಶಂಖದ ಹುಳು, ಓಡು ಹುಳು(ಬೀಟಲ್ಸ್) ಇತ್ಯಾದಿ ಕೀಟಗಳ ಹಾವಳಿಯಿಂದ ತೀವ್ರ ನಷ್ಟ ಅನುಭವಿ ಸುತ್ತಿರುವ ರೇಷ್ಮೆ ಬೆಳೆಗಾರರಿಗೆ ಸುರುಳಿ ಕೀಟದಿಂದಾಗಿ ತಲೆ ನೋವು ಹೆಚ್ಚಾಗಿದೆ. ರೇಷ್ಮೆಗೂಡು ಮಾರಾಟಕ್ಕೆ ಹರಸಾಹಸ ಪಡುತ್ತಾ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ರೇಷ್ಮೆ ಬೆಳೆಗಾರರಿಗೆ ಕೀಟ ಬಾಧೆ ನಿದ್ದೆಗೆಡಿಸಿದ್ದು, ಅಪಾರ ಪ್ರಮಾಣದ ಹಿಪ್ಪುನೇರಳೆ ಸೊಪ್ಪು ಈಗ ಕೈಗೆ ಬಾರದ ಸ್ಥಿತಿಗೆ ತಲುಪಿದೆ.
ಸರಕಾರ ವಿಫಲ: ಹಿಪ್ಪುನೇರಳೆ ಬೆಳೆಗೆ ಬಾಧಿಸುತ್ತಿರುವ ಸುರುಳಿ ಕೀಟ ಅಥವಾ ಕುಡಿ ಹುಳು ಬಾಧೆ ನಿಯಂತ್ರಣ ಮಾಡುವಲ್ಲಿ ಸರಕಾರ ವಿಫಲವಾಗಿದೆ. ರಾಮನಗರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ವರ್ಷಗಳಿಂದ ಈ ರೋಗಕ್ಕೆ ರೇಷ್ಮೆ ಬೆಳೆಗಾರರು ತತ್ತರಿಸಿದ್ದಾರೆ. ಇದರ ನಿಯಂತ್ರಣ ಸಂಬಂಧ ವಿಜ್ಞಾನಿಗಳು ಈ ತನಕ ಔಷಧಿ ಪತ್ತೆ ಮಾಡದಿರುವುದು ವರ್ಷದಿಂದ ವರ್ಷಕ್ಕೆ ರೋಗ ವ್ಯಾಪ್ತಿ ಹೆಚ್ಚಾಗುತ್ತಿದೆ. ನಿಯಂತ್ರಣ ಕ್ರಮದ ಕುರಿತು ರೇಷ್ಮೆ ಇಲಾಖೆ ಅಧಿ ಕಾರಿಗಳು ಸಹ ಸಾಕಷ್ಟು ತಲೆಕೆಡಿಸಿಕೊಂಡಿ ದ್ದಾರೆ. ಆದರೂ ಪರಿಹಾರ ಕ್ರಮ ಮಾತ್ರಕಂಡುಕೊಂಡಿಲ್ಲ.
ಇಳುವರಿ ಮೇಲೆ ಪರಿಣಾಮ: ಸುರುಳಿಕೀಟ ಅಥವಾ ಕುಡಿ ಹುಳು ಕಾಟದಿಂದಾಗಿ ರೇಷ್ಮೆಗೂಡು ಇಳುವರಿ ಮೇಲೆ ಪರಿಣಾಮ ಬೀಳಲಿದೆ. ಪರಿಸ್ಥಿತಿ ಇದೇ ರೀತಿ ಮುಂದು ವರಿದರೆ ಗೂಡು ಅವಕ ಕಡಿಮೆಯಾಗಲಿದೆ ಎಂಬ ಆತಂಕದಲ್ಲಿ ರೈತರಿದ್ದಾರೆ. ಜಿಲ್ಲೆಯಲ್ಲಿ ಶೇ.100ರಷ್ಟು ಸುರುಳಿಕೀಟ ಅಥವಾ ಕುಡಿ ಹುಳು ಕಾಟ ವ್ಯಾಪಿಸಿದೆ. ಇದನ್ನು ತಕ್ಷಣಕ್ಕೆ ನಿಯಂತ್ರಣ ಮಾಡಿದರೆ ಗೂಡು ಮಾರಾಟದ ಮೇಲೆ ನೇರ ಪರಿ ಣಾಮ ಬೀರಲಿದೆ.
ಪ್ರಚಾರ ಇಲ್ಲ: ಸುರುಳಿ ಕೀಟ ಅಥವಾ ಕುಡಿ ಹುಳು ಬಾಧೆ ನಿಯಂತ್ರಣ ಸಂಬಂಧ ಜಿಲ್ಲಾಡಳಿತವಾಗಲಿ ಅಥವಾ ಜಿಲ್ಲಾ ರೇಷ್ಮೆ ಇಲಾಖೆಯಾಗಲಿ ಪ್ರಚಾರ ಮಾಡುತ್ತಿಲ್ಲ. ಸುರುಳಿ ಕೀಟದ ಸಮಸ್ಯೆಯಿಂದ ಇಡೀ ಹಿಪ್ಪುನೇರಳೆ ತೋಟವನ್ನು ಕೀಳುವ ಸ್ಥಿತಿಗೆ ತಲುಪಿದೆ. ನಿಯಂತ್ರಣ ಕ್ರಮಗಳ ಸಂಬಂಧ ಕನಿಷ್ಟ ಪ್ರಚಾರ ನೀಡದಿರುವುದು ರೇಷ್ಮೆ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.
24 ಸಾವಿರ ಕುಟುಂಬ
ರೇಷ್ಮೆ ಬೆಳೆ ನಂಬಿಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 24 ಸಾವಿರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಸುರುಳಿ ಕೀಟ ಅಥವಾ ಕುಡಿಹುಳು ಬಾಧೆಯಿಂದಾಗಿ ಇಷ್ಟು ಕುಟುಂಬಗಳ ಮೇಲೆ ನೇರ ಪರಿಣಾಮ ಉಂಟು ಮಾಡು ತ್ತಿದೆ. ಕೀಟ ಬಾಧೆಯಿಂದಾಗಿ ತೊಂದರೆ ಅನುಭವಿಸುವಂತಾಗಿದೆ.
ಅಧಿಕಾರಿಗಳು ಪರಿಶೀಲಿಸಲಿ
ತಾಲೂಕಿನ ಬಹುತೇಕ ಕಡೆ ಹಿಪ್ಪುನೇರಳೆ ತೋಟಗಳಿಗೆ ಹುಳ ಬಿದ್ದು ಬೆಳೆ ಹಾಳಾಗಿವೆ. ಈ ಬಗ್ಗೆ ರೇಷ್ಮೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ರೈತರಾದ ಸಂಜೀವಪ್ಪ, ರಾಮಣ್ಣ, ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ
ಕಡ್ಡಿ ಕೀಳಬೇಕಾದ ಸ್ಥಿತಿ
ಸುರುಳಿ ಕೀಟಿದ ಕಾಟದಿಂದಾಗಿ ಹಿಪ್ಪುನೇರಳೆ ಕಡ್ಡಿ ಕೇಳಬೇಕಾದ ಸ್ಥಿತಿ ಎದುರಾಗಿದೆ. ತರಕಾರಿ ಹೂ ಬೆಳೆಗೆ ಹೆಚ್ಚಿನಡೋಸ್ ಹೊಂದಿರುವ ಕೀಟನಾಶಕ ಸಿಂಪಡಿಸಿದರೆ ಬೆಳೆ ಉಳಿಯಲಿದೆ. ಆದರೆ, ರೇಷ್ಮೆ ಬೆಳೆಯಲ್ಲಿ ಒಮ್ಮೆಲೆ ಅತಿ ಹೆಚ್ಚಿನ ಡೋಸ್ ಕೀಟನಾಶಕ ಸಿಂಪಡಿಸಲು ಸಾಧ್ಯವಿಲ್ಲ. ಹಾಗಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇನ್ನು ಹವಾಮಾನ ವೈಪರೀತ್ಯವೂ ರೇಷ್ಮೆ ಬೆಳೆಗಳ ಮೇಲೆ ನೇರ ಪರಿಣಾಮ ಉಂಟು ಮಾಡುತ್ತಿದೆ.