ಜೀವಂತ ಕಪ್ಪೆಯ ಪಕ್ಕೆ ಯಲ್ಲಿ ಅಣಬೆ ಮೊಳಕೆ!
ಕಾರ್ಕಳ ಮಾಳದಲ್ಲಿ ವಿಜ್ಞಾನ ಲೋಕದ ವಿಸ್ಮಯ ►ಜಗತ್ತಿನಲ್ಲಿಯೇ ಪ್ರಪ್ರಥಮ ದಾಖಲೆ
ಉಡುಪಿ, ಫೆ.18: ಜೀವಂತ ಕಪ್ಪೆಯ ಮೈಮೇಲೆ ಅಣಬೆಯೊಂದು ಮೊಳಕೆಯೊಡೆದು ಬೆಳೆದಿರುವ ಅಪರೂಪದ ವಿಸ್ಮಯಕಾರಿ ವಿದ್ಯಾಮಾನವೊಂದು ಪತ್ತೆಯಾಗಿದೆ. ಕಾರ್ಕಳ ತಾಲೂಕಿನ ಕುದುರೆಮುಖ ಉದ್ಯಾನವನ ವ್ಯಾಪ್ತಿಯ ಮಾಳ ಗ್ರಾಮದಲ್ಲಿ ಜಗತ್ತಿನ ಪ್ರಪ್ರಥಮ ಈ ದಾಖಲೆ ವರದಿಯಾಗಿದೆ.
ಕರ್ನಾಟಕ ಮತ್ತು ಕೇರಳ ಪಶ್ಚಿಮ ಘಟ್ಟಗಳಲ್ಲಿ ಸ್ಥಳೀಯವಾಗಿ ಮಾತ್ರ ಕಂಡು ಬರುವ ‘ಗೋಲ್ಡನ್ ಬ್ಯಾಕ್ಡ್ ಫ್ರಾಗ್’ ಜಾತಿಯ ಕಪ್ಪೆಯ ಎಡ ಪಾರ್ಶ್ವದಲ್ಲಿ ಅಣಬೆ ಮೊಳಕೆ ಒಡೆದಿರುವುದು ಕಂಡುಬಂದಿದೆ. 2023ರ ಜೂ.19ರಂದು ರಾತ್ರಿ ವೇಳೆ ಮಾಳದ ದಟ್ಟ ಅರಣ್ಯದಲ್ಲಿ ರಾತ್ರಿ ವೇಳೆ ಕಪ್ಪೆಮತ್ತು ಹಾವುಗಳನ್ನು ಗಮನಿಸಲು ಹೋದ ತಂಡ, ಕೊಳವೊಂದರಲ್ಲಿ ನಲವತ್ತಕ್ಕೂ ಹೆಚ್ಚು ಗೋಲ್ಡನ್ ಬ್ಯಾಕ್ಡ್ ಕಪ್ಪೆಗಳಿರುವುದನ್ನು ಗಮನಿಸಿತು.
ಅದರಲ್ಲಿ ಒಂದು ಕಪ್ಪೆಯ ಪಕ್ಕೆಯಲ್ಲಿ ಈ ಅಪರೂಪದ ವಿದ್ಯಮಾನವನ್ನು ಗುರುತಿಸಿದ ಲೋಹಿತ್ ವೈ.ಟಿ. ಫೋಟೊವನ್ನು ದಾಖಲಿಸಿದರು. ಬಳಿಕ ಹೆಚ್ಚಿನ ಅಧ್ಯಯನ ಹಾಗೂ ತಜ್ಞರ ಅಭಿಪ್ರಾಯ ಪಡೆದು ಪರಿಸರ ತಜ್ಞರಾದ ಚಿನ್ಮಯ್ ಸಿ.ಮಳಿಯೆ ಮತ್ತು ಲೋಹಿತ್ ವೈ.ಟಿ. ಈ ಕುರಿತ ಲೇಖನವನ್ನು ಬರೆದು ಜನವರಿ ತಿಂಗಳ ಅಂತರ್‌ರಾಷ್ಟ್ರೀಯ ಜರ್ನಲ್ ‘ರೇಪ್ಟೈಲ್ಸ್ ಆ್ಯಂಡ್ ಅಂಫಿ ಬಿಯನ್ಸ್’ನಲ್ಲಿ ಪ್ರಕಟಿಸಿದರು. ಈ ತಂಡದಲ್ಲಿ ನಿಶಾ ಬಿ.ಜಿ., ಆಶಾ ಎಸ್., ನವೀನ್ ಐಯ್ಯರ್ ಇದ್ದರು.
ಬಾನೆಟ್ ಮಶ್ರೂಮ್: ಬೆಳೆದ ಅಣಬೆಗಳು ತನ್ನ ಸ್ಪೋರ್ಸ್(ಬೀಜಕ)ಗಳನ್ನು ಗಾಳಿಯಲ್ಲಿ ಬಿಟ್ಟು ಬಿಡುತ್ತದೆ. ಅವು ತನಗೆ ಸೂಕ್ತವಾದ ವಾತಾವರಣ ಹಾಗೂ ಜಾಗದಲ್ಲಿ ನೆಲೆಯೂರಿ ಮೊಳಕೆ ಒಡೆಯುತ್ತದೆ. ಪ್ರಾಣಿ ವರ್ಗ ಮತ್ತು ಸಸ್ಯ ವರ್ಗ ಗಳೆರಡಕ್ಕೂ ಸೇರದ ಅಣಬೆ, ಫಂಗೈ ವರ್ಗಕ್ಕೆ ಸೇರಿದೆ. ಅಣಬೆಗಳು ಕೊಳೆಯುತ್ತಿರುವ ಇತರ ವಸ್ತುಗಳಿಂದ ಮತ್ತು ಮಣ್ಣಿನಲ್ಲಿ ಮಾತ್ರ ಬೆಳೆಯುತ್ತವೆ.
ಗೋಲ್ಡನ್ ಬ್ಯಾಕ್ಡ್ ಕಪ್ಪೆಮೇಲೆ ಬೆಳೆದಿರುವ ಅಣಬೆ ಯನ್ನು ಮೈಸಿನ ಅಥವಾ ಬಾನೆಟ್ ಮಶ್ರೂಮ್ ಎಂದು ಗುರುತಿಸಲಾಗಿದೆ. ಈ ಅಣಬೆ ಕೊಳೆತ ಮರದ ಮೇಲಷ್ಟೇ ಬೆಳೆಯುತ್ತದೆ. ಆದರೆ ಇಲ್ಲಿ ಒಂದು ಜೀವಂತ ಜೀವಿಯ ಮೇಲೆ ಅಣಬೆ ಬೆಳೆದಿರುವುದು ಜಗತ್ತಿನಲ್ಲಿಯೇ ಮೊದಲ ದಾಖಲೆಯಾಗಿದೆ. ಈ ಅದ್ಭುತವು ಇಡೀ ವಿಜ್ಞಾನ ಲೋಕವನ್ನೇ ನಿಬ್ಬೆರಗು ಗೊಳಿಸಿದೆ ಎನ್ನುತ್ತಾರೆ ಪರಿಸರ ತಜ್ಞ ಲೋಹಿತ್.
ಉಭಯಚರ ಜೀವಿಗಳಿಗೆ ಕೆಲವೊಂದು ಫಂಗೈಗಳಿಂದ ಕಾಯಿಲೆಗಳು ಸಂಭವಿಸಿ ಸಾಯುತ್ತವೆ. ಅಂತಹ ಸಮಸ್ಯೆ ಕೀಟ ಮತ್ತು ಜೇಡಗಳಲ್ಲೂ ಕಾಣ ಬಹುದು. ಆದರೆ ಜೀವಂತ ಕಪ್ಪೆಯ ಮೇಲಿನ ಅಣಬೆ ಇನ್ನಷ್ಟು ವೈಜ್ಞಾನಿಕ ಸಂಶೋಧನೆಗಳಿಗೆ ದಾರಿ ಮಾಡಿಕೊಟ್ಟಿದೆ. ಇದಕ್ಕೆ ನಿಖರವಾದ ಕಾರಣವನ್ನು ಈವರೆಗೂ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಪೋರ್ಟಲ್‌ನಿಂದ ದೃಢ: ಕೊಳದಲ್ಲಿದ್ದ ಕಪ್ಪೆಗಳನ್ನು ಗಮನಿಸುವಾಗ ಒಂದು ಕಪ್ಪೆಯ ಮೇಲೆ ಈ ಬೆಳವಣಿಗೆ ಗಮನಿಸಿದ್ದು ಬಳಿಕ ಫೋಟೊ ತೆಗೆದು ದಾಖಲಿಸಿಕೊಳ್ಳಲಾಗಿತ್ತು. ಈ ಕಪ್ಪೆಯು ಚಟುವಟಿಕೆಯಿಂದ ಕೂಡಿದ್ದು ಇತರ ಕಪ್ಪೆಗಳಿಗೂ ಇದಕ್ಕೂ ಅಂತಹ ಬೇರೆ ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ ಎಂದು ಲೋಹಿತ್ ವೈ.ಟಿ. ಹೇಳಿದರು.
ಈ ಫೋಟೊಗಳನ್ನು ಗಮನಿಸಿದ ವಿಜ್ಞಾನಿಗಳು ಮತ್ತು ಪರಿಸರಾಸಕ್ತರು ಮೊದಲು ನಂಬಲಿಲ್ಲ. ಕೆಲವರು ಈ ಫೋಟೋವನ್ನು ಆರ್ಟಿಫಿಷಿಯಲ್ ಇಂಟಲಿಜೆಂನ್ಸ್ ಅಥವಾ ಫೋಟೋ ಶಾಪ್‌ನಿಂದ ಮಾಡಿರುವುದಾಗಿ ಅನುಮಾನಿಸಿದ್ದರು. ಬಳಿಕ ಐ ನ್ಯಾಚುರಲಿಸ್ಟ್ ಮತ್ತು ಇಂಡಿಯಾ ಬಯೋ ಡೈವರ್ಸಿಟಿ ಪೋರ್ಟಲ್‌ನಲ್ಲಿ ಒಪ್ಪಿಕೊಂಡ ನಂತರ ಈ ಅನುಮಾನಗಳು ದೂರವಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಸತ್ತ ವಸ್ತುಗಳ ಮೇಲೆ ಬೆಳೆಯುವ ಅಣಬೆ ಜೀವಂತ ಕಪ್ಪೆಯ ಮೇಲೆ ಬೆಳೆದಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ. ಇಷ್ಟು ಸೂಕ್ಷ್ಮ ವಿಚಾರವನ್ನು ಗುರುತಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ರೀತಿಯ ದಾಖಲೆ ಈವರೆಗೆ ಎಲ್ಲೂ ಕೇಳಿಲ್ಲ. ಇದೊಂದು ಹೊಸ ದಾಖಲೆಯಾಗಿ ಸೇರ್ಪಡೆಗೊಂಡಿದೆ.
| ಗುರುರಾಜ್ ಕೆ.ವಿ.,
ಕಪ್ಪೆ ತಜ್ಞರು
ಕೊಳೆತ ವಸ್ತುಗಳ ಮೇಲೆ ಬೆಳೆಯುವ ಅಣಬೆಗಳು ಅದರಲ್ಲಿರುವ ಅಂಶಗಳನ್ನು ತೆಗೆದುಕೊಂಡು ಬೆಳೆಯುತ್ತದೆ. ಆದರೆ ಕಪ್ಪೆಯ ಮೇಲೆ ಮೊಳಕೆ ಒಡೆದಿರುವ ಅಣಬೆ ಯಾವ ಆಹಾರ ಸೇವಿಸುತ್ತಿದೆ ಎಂಬುದು ಗೊತ್ತಾಗಿಲ್ಲ. ಅಣಬೆಯು ಕಪ್ಪೆಯ ಮಾಂಸ ಅಥವಾ ರಕ್ತವನ್ನು ಆಹಾರವನ್ನಾಗಿ ಬಳಸಿಕೊಂಡಿತ್ತೆ ಎಂಬುದು ಪ್ರಯೋಗಾಲಯದಲ್ಲಿಯೇ ಸಾಬೀತಾಗಬೇಕು. ಇದರ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಾಗಿ ಆಗಬೇಕು. ಕಪ್ಪೆಯನ್ನು ಹಿಡಿದು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸುತ್ತಿದ್ದರೆ ಹೆಚ್ಚಿನ ಮಾಹಿತಿ ಸಿಗುತ್ತಿತ್ತು.
| ಲೋಹಿತ್ ವೈ.ಟಿ.,
ಪರಿಸರ ತಜ್ಞ