ಕರ್ನಾಟಕದಲ್ಲಿ ಬಲವರ್ಧನೆಗೊಂಡ ಮುಸ್ಲಿಮ್ ವೋಟ್ ಬ್ಯಾಂಕ್, ಕುಸಿದ ರಾಜಕೀಯ ಪ್ರಾತಿನಿಧ್ಯ

ಒಂದು ಸಮಾನತಾವಾದಿ ಸರಕಾರಕ್ಕೆ, ವಿವಿಧ ಸಮುದಾಯಗಳ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವ ಪ್ರತಿನಿಧಿತ್ವ ಅಗತ್ಯ. ಮುಸ್ಲಿಮ್ ಸಮುದಾಯದಿಂದ ಅತೀ ಹೆಚ್ಚು ಮತಗಳನ್ನು ಪಡೆದುಕೊಂಡ ಕಾಂಗ್ರೆಸ್, ಮುಸ್ಲಿಮ್ ಸಮುದಾಯಕ್ಕೆ ದೊರಕಬೇಕಾದ ನ್ಯಾಯಯುತ ಪ್ರಾತಿನಿಧ್ಯ ನೀಡದಿದ್ದರೆ, ಮುಸ್ಲಿಮರನ್ನು ಕೇವಲ ಮತಬ್ಯಾಂಕ್ ಎಂದು ಮಾತ್ರ ಭಾವಿಸಿದೆ ಎಂಬ ಅನುಮಾನ ಸತ್ಯವಾಗುತ್ತದೆ. ಕಾಂಗ್ರೆಸ್ ಇನ್ನಾದರೂ ತೋರಿಕೆಯ ಮಾತುಗಳನ್ನು ಬಿಟ್ಟು ಕ್ರಿಯೆಗೆ ಒತ್ತುಕೊಡಲಿ. ಇಲ್ಲವಾದರೆ, ಇದು ಮುಸ್ಲಿಮ್ ಮತದಾರರಿಗೆ ಮಾಡಿದ ಮೋಸವಷ್ಟೇ ಅಲ್ಲ, ಪ್ರಜಾಪ್ರಭುತ್ವದ ಮೇಲೆ ದಶಕಗಳಿಂದ ಮಾಡುತ್ತಾ ಬಂದಿರುವ ಅತೀ ದೊಡ್ಡ ನಿಂದನೆಯಾಗಲಿದೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಫಲಿತಾಂಶವು ರಾಷ್ಟ್ರಮಟ್ಟದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಆತ್ಮಬಲ ಹೆಚ್ಚಿಸಿತ್ತು. ಅಂದಿನ ರಾಜ್ಯ ಬಿಜೆಪಿ ಸರಕಾರದ ವಿರುದ್ದ ಕೇಳಿಬಂದ 40 ಪರ್ಸೆಂಟ್ ಕಮಿಷನ್ ಆರೋಪ, ಹಿಜಾಬ್-ಹಲಾಲ್ ಮುಂತಾದ ಕೋಮುವಾದಿ ನಿಲುವುಗಳು ಹಾಗೂ ಬಿಜೆಪಿಯ ಆಂತರಿಕ ಕಚ್ಚಾಟದಿಂದ ರಾಜ್ಯದ ಜನ ರೋಸಿಹೋಗಿದ್ದರು. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು, ರಾಜ್ಯದಲ್ಲಿ ಹಾದುಹೋದ ರಾಹುಲ್‌ಗಾಂಧಿಯವರ ಭಾರತ ಜೋಡೊ ಯಾತ್ರೆ, ರಾಜ್ಯ ಕಾಂಗ್ರೆಸ್ ನಾಯಕರ ಒಗ್ಗಟ್ಟು, ಸಂವಿಧಾನ ಬದಲಾವಣೆಯಂತಹ ಹೇಳಿಕೆಗಳಿಂದ ಬೇಸರಗೊಂಡಿದ್ದ ದಲಿತ ಮತದಾರರು ಕಾಂಗ್ರೆಸ್‌ಪರ ವಾಲಿದರು. ಹಿಜಾಬ್-ಹಲಾಲ್-2ಬಿ ಮೀಸಲಾತಿ ರದ್ದತಿಯಿಂದಾಗಿ ನೊಂದಿದ್ದ ಮುಸ್ಲಿಮರ ಒನ್‌ಸೈಡ್ ವೋಟಿಂಗ್‌ನಿಂದಾಗಿ ಕಾಂಗ್ರೆಸ್ ಪಕ್ಷವು 130ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಜಯಿಸಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಗೆಲುವಿನ ಹಿಂದಿನ ಮತಪ್ರಮಾಣಗಳ ಕುರಿತು ಕಾಂಗ್ರೆಸ್‌ನ ಆಂತರಿಕ ಲೆಕ್ಕಾಚಾರದ ಪ್ರಕಾರವೇ ಹೇಳುವುದಾದರೆ ರಾಜ್ಯದಾದ್ಯಂತ ಸುಮಾರು 80ಕ್ಕೂ ಅಧಿಕ ಸಂಖ್ಯೆಯ ಮುಸ್ಲಿಮ್ ಮತದಾರರು ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದಿದೆ. ಬಹಳಷ್ಟು ಸಂದರ್ಭಗಳಲ್ಲಿ ಕಾಂಗ್ರೆಸ್‌ನ ರಾಜ್ಯ ನಾಯಕರೇ ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಿದೆ. ಮುಸ್ಲಿಮ್ ಸಮುದಾಯದ ಬೇಷರತ್ ಬೆಂಬಲವೇ ಕಾಂಗ್ರೆಸ್ ಪಕ್ಷಕ್ಕೆ 130ಕ್ಕೂ ಹೆಚ್ಚು ಸಂಖ್ಯೆಯ ಸ್ಥಾನಗಳಲ್ಲಿನ ಗೆಲುವಿಗೆ ಕಾರಣವೆಂದು ರಾಜಕೀಯ ವಲಯಗಳಲ್ಲಿ ವಿಶ್ಲೇಷಿಸಲಾಗಿದೆ. ಹೀಗೆ ಅಪಾರವಾದ ಬೆಂಬಲ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು ಇಂದು ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ಮುಸ್ಲಿಮ್ ಸಮುದಾಯ ಹಾಗೂ ಪಕ್ಷದ ಕಾರ್ಯಕರ್ತರು ರೋಸಿ ಹೋಗಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷವು ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿತ್ತು. ಆದರೆ ಮುಸ್ಲಿಮ್ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ವಿಚಾರ ಬಂದಾಗ ಕಾಂಗ್ರೆಸ್‌ಪಕ್ಷವು ಜಾಣ ಕಿವುಡು ಪ್ರದರ್ಶಿಸುತ್ತಿರುವುದು ಸಮುದಾಯದ ಜನರಲ್ಲಿ ಬೇಸರ ತರಿಸಿದೆ. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬೇಡಿಕೆಯನ್ನು ಮುಸ್ಲಿಮ್ ಸಮುದಾಯವು ಕಾಂಗ್ರೆಸ್ ಪಕ್ಷದ ಮುಂದಿಟ್ಟಿತ್ತು. ಮುಸ್ಲಿಮ್ ಅಭ್ಯರ್ಥಿಗಳಿಗೆ ಇತರ ಸಮುದಾಯದವರು ಮತ ನೀಡುವುದಿಲ್ಲ ಎನ್ನುವ ಸಬೂಬು ಮುಂದಿಟ್ಟು, ವಿಧಾನಸಭೆಯಲ್ಲಿ ಮುಸ್ಲಿಮ್ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ಬೇಡಿಕೆಯನ್ನು ತಿರಸ್ಕರಿಸಲಾಯಿತು. ಅಧಿಕಾರಕ್ಕೆ ಬಂದ ಬಳಿಕ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿ ರಾಜಕೀಯ ಪ್ರಾತಿನಿಧ್ಯವನ್ನು ಸರಿದೂಗಿಸಲಾಗುವುದು ಎಂಬ ಸಮಜಾಯಿಷಿ ನೀಡಿ, ವಿಧಾನಸಭಾ ಚುನಾವಣೆಯ ಟಿಕೆಟುಗಳನ್ನು ಕಡಿತಗೊಳಿಸಲಾಯಿತು. ಆದರೆ, ಇದೀಗ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ, ಈ ಭರವಸೆಗಳನ್ನು ಈಡೇರಿಸದಿರುವುದರಿಂದ ಸಮುದಾಯದ ಜನರಲ್ಲಿ ವಿಶ್ವಾಸದ್ರೋಹದ ಭಾವನೆ ಮೂಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿನ ಮುಸ್ಲಿಮ್ ಕಾರ್ಯಕರ್ತರಲ್ಲಿಯೂ ಸಹ ಪಕ್ಷದ ಮೇಲಿನ ತಮ್ಮ ನಿಷ್ಠೆಯನ್ನು ಮರುಪರಿಶೀಲಿಸುವ ಕುರಿತು ಸಮುದಾಯದಿಂದ ಒತ್ತಡ ನಿರ್ಮಾಣವಾಗಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಕಾಂಗ್ರೆಸ್ ಪಕ್ಷವು ಮುಸ್ಲಿಮರ ಹಿತಾಸಕ್ತಿಗಳನ್ನು ಸಂರಕ್ಷಿಸುವ ಬದಲಿಗೆ, ಅವರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದೆ. ಇದರಿಂದ ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಕೇವಲ ಮತಬ್ಯಾಂಕ್ ಆಗಿ ಉಪಯೋಗಿಸುತ್ತದೆ ಎಂಬ ಮನೋಭಾವ ಇನ್ನಷ್ಟು ಗಟ್ಟಿಯಾಗುತ್ತಿದೆ.
ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿಯವರೇ ಹೇಳುವಂತೆ, ‘‘ಜಿಸ್ಕಿ ಜಿತ್ನಿ ಸಂಖ್ಯಾ, ಉಸ್ಕಿ ಉತ್ನಿ ಭಾಗಿದಾರಿ’’ಯ ಪ್ರಕಾರವೇ ಅವಲೋಕಿಸುವುದಾದರೆ, ಕರ್ನಾಟಕದಲ್ಲಿ 2011ರ ಜನಗಣತಿಯ ಪ್ರಕಾರ, ಮುಸ್ಲಿಮರು ಒಟ್ಟು ಜನಸಂಖ್ಯೆಯ ಶೇ. 13ರಷ್ಟಿದ್ದಾರೆ. ವಿಧಾನಸಭೆಯ ಚುನಾವಣೆ ಮುಗಿದು ಹೋಗಿರುವುದರಿಂದ ಅಲ್ಲಿನ ಪ್ರಾತಿನಿಧ್ಯದ ವಿಚಾರವನ್ನು ಬದಿಗಿಟ್ಟು, ವಿಧಾನ ಪರಿಷತ್ತಿನ 75 ಸ್ಥಾನಗಳ ವಿಷಯಕ್ಕೆ ಬರೋಣ. ರಾಜ್ಯದ ಮುಸ್ಲಿಮರ ಜನಸಂಖ್ಯೆ ಆಧಾರದಲ್ಲಿ ಕನಿಷ್ಠವೆಂದರೂ 9 ಜನ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವವರಿರಬೇಕು. ಆದರೆ ಈಗ ಇರುವುದು ಕೇವಲ 4 ಜನ ಮಾತ್ರ. 2024ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರು ಮಾತು ಕೊಟ್ಟಂತೆ ಪರಿಷತ್ತಿನಲ್ಲಿ ಮುಸ್ಲಿಮ್ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿ ಪ್ರಾತಿನಿಧ್ಯದ ಅಸಮತೋಲನವನ್ನು ಸರಿದೂಗಿಸಲು ಇನ್ನೆಷ್ಟು ಸಮಯ ಬೇಕು ಎಂಬುದು ಸಮುದಾಯದಲ್ಲಿರುವ ವಿದ್ಯಾವಂತ ವರ್ಗ ಹಾಗೂ ಕಾಂಗ್ರೆಸ್ ಒಳಗಿರುವ ಮುಸ್ಲಿಮ್ ಕಾರ್ಯಕರ್ತರ ಪ್ರಶ್ನೆಯಾಗಿದೆ.
ಪ್ರಾತಿನಿಧ್ಯದ ವಿಚಾರ ಬಂದಾಗ ಇತರ ಸಮುದಾಯಗಳ ಮುಖಂಡರು ಪಕ್ಷದ ಹೊರಗೆ ಹಾಗೂ ಒಳಗೆ ಧ್ವನಿಯೆತ್ತಲು ಹಿಂದೆ-ಮುಂದೆ ಯೋಚಿಸು ವುದಿಲ್ಲ. ಉದಾಹರಣೆಗೆ, ವೀರಶೈವ-ಲಿಂಗಾಯತ ಸಮುದಾಯ. ಸಾಮಾನ್ಯವಾಗಿ ಈ ಸಮುದಾಯವು ಬಿಜೆಪಿಯೆಡೆಗೆ ಹೆಚ್ಚಿನ ಒಲವು ಹೊಂದಿದ್ದರೂ, ಪಕ್ಷದೊಳಗೆ ಶ್ಯಾಮನೂರು ಶಂಕರಪ್ಪ, ಎಂ.ಬಿ.ಪಾಟೀಲ್ ಅವರಂತಹ ನಾಯಕರ ಗಟ್ಟಿ ಧ್ವನಿಯಿಂದಾಗಿ ಕಾಂಗ್ರೆಸ್‌ನಲ್ಲಿ ಹೆಚ್ಚು-ಹೆಚ್ಚು ಟಿಕೆಟ್‌ಗಳು, ಸಚಿವ ಸ್ಥಾನಗಳು ಮತ್ತು ಪ್ರಮುಖ ಹುದ್ದೆಗಳು ಆ ಸಮುದಾಯಕ್ಕೆ ದೊರೆಯುತ್ತಿವೆ. ಆದರೆ ಮುಸ್ಲಿಮ್ ಸಮುದಾಯದ ನಾಯಕರ ನಿಲುವು ಈ ವಿಚಾರದಲ್ಲಿ ಸ್ವಲ್ಪ ಭಿನ್ನವೇ ಆಗಿದೆ. ಏಕೆಂದರೆ ಕಾಂಗ್ರೆಸ್‌ನಲ್ಲಿ ಮುಸ್ಲಿಮ್ ನಾಯಕರ ಧ್ವನಿ ಗಟ್ಟಿಯಾಗುತ್ತಿದೆ ಎನ್ನುವಷ್ಟರಲ್ಲಿ ಆ ನಾಯಕರನ್ನು ಮೂಲೆಗುಂಪು ಮಾಡುವ ಎಲ್ಲಾ ತಂತ್ರಗಳು ಯಶಸ್ವಿಯಾಗಿರುತ್ತವೆ. ಉದಾ: ಜಾಫರ್‌ಷರೀಫ್, ರೆಹಮಾನ್ ಖಾನ್, ಸಿ.ಎಂ. ಇಬ್ರಾಹೀಂ, ರೋಷನ್ ಬೇಗ್ ಇತ್ಯಾದಿ ನಾಯಕರು ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡುವಷ್ಟು ಸಾಮರ್ಥ್ಯವನ್ನು ಹೊಂದಿದ್ದರು. ಆದರೆ ಇಂದು ಆ ಸಾಮರ್ಥ್ಯವನ್ನು ಹೊಂದಿರುವ ಒಬ್ಬರೇ ಒಬ್ಬ ನಾಯಕ ರಾಜ್ಯ ರಾಜಕಾರಣದಲ್ಲಿ ಇಲ್ಲ. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಮುಸ್ಲಿಮ್ ಸಮುದಾಯದ ನಾಯಕತ್ವವನ್ನು ಬೆಳೆಸಲು ಯಾವುದೇ ರೀತಿಯ ಉತ್ಸಾಹ ಅಥವಾ ಕಾರ್ಯತಂತ್ರ ಹೊಂದಿಲ್ಲ. ಜೀ ಹುಜೂರ್ ಮಾಡುವವರಿಗೆ ಮಾತ್ರ ಆದ್ಯತೆ ನೀಡಲಾಗಿದೆ ಅದೂ ಕಾಟಾಚಾರಕ್ಕೆ ಎಂಬಂತಿದೆ. ಸಚಿವ ಸಂಪುಟ ಅಥವಾ ನಿಗಮ ಮಂಡಳಿಗಳು ಅಥವಾ ಬೋರ್ಡುಗಳ ವಿಚಾರಕ್ಕೆ ಬರುವುದಾದರೆ ಮುಸ್ಲಿಮ್ ಶಾಸಕರು ಅಥವಾ ಕಾರ್ಯಕರ್ತರನ್ನು ಕೇವಲ ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಖಾತೆಗೆ ಸೀಮಿತಗೊಳಿಸಲಾಗುತ್ತದೆ. ಇದು ಮುಸ್ಲಿಮ್ ಶಾಸಕರು, ಕಾರ್ಯಕರ್ತರ ನಾಯಕತ್ವದ ಸಾಮರ್ಥ್ಯವನ್ನು ಪ್ರಶ್ನಿಸುವಂತೆ ಮಾಡುತ್ತಿದೆ. ಮುಸ್ಲಿಮ್ ನಾಯಕರು ಇತರ ಪ್ರಮುಖ ಇಲಾಖೆಗಳ ನೇತೃತ್ವ ವಹಿಸಲು ಅಸಮರ್ಥರು ಎಂಬ ಸಂದೇಶವನ್ನು ಕಾಂಗ್ರೆಸ್ ಪಕ್ಷ ರಾಜ್ಯದ ಮುಸ್ಲಿಮರಿಗೆ ನೀಡಿದೆ.
ಇನ್ನ್ನು ರಾಷ್ಟ್ರ ರಾಜಕಾರಣದ ವಿಚಾರಕ್ಕೆ ಬರುವುದಾದರೆ, ಸುಮಾರು ಇಪ್ಪತ್ತು ವರ್ಷಗಳಿಂದ ಲೋಕಸಭೆಯಲ್ಲಿ ಕರ್ನಾಟಕದಿಂದ ಒಬ್ಬರೇ ಒಬ್ಬ ಮುಸ್ಲಿಮ್ ಪ್ರತಿನಿಧಿಯಿಲ್ಲದಿರುವುದು ಘೋರ ಅನ್ಯಾಯವೇ ಸರಿ. ಕೇವಲ ಒಂದು ಟಿಕೆಟ್ ನೀಡಿ ಕೈತೊಳೆದುಕೊಂಡರೆ ಸರಿಯೇ? ಲೋಕಸಭಾ ಚುನಾವಣೆಯಿರಲಿ ಅಥವಾ ವಿಧಾನಸಭಾ ಚುನಾವಣೆಯಿರಲಿ, ಮುಸ್ಲಿಮ್ ಅಭ್ಯರ್ಥಿಗಳು ಗೆಲ್ಲುವ ಅವಕಾಶವಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬುದು ಆ ಕ್ಷೇತ್ರದ, ಜಿಲ್ಲೆಯ ಮುಸ್ಲಿಮೇತರ ಸಮು ದಾಯದ ಮುಖಂಡರು ನಿರ್ಧರಿಸುತ್ತಾರೆ. ಉದಾಹರಣೆಗೆ ಬಿಜಾಪುರ, ಧಾರವಾಡ, ರಾಯಚೂರು, ಹಾವೇರಿ, ಮಂಗಳೂರು ಮತ್ತು ತುಮಕೂರು. ಆದರೆ ಅದೇ ಮುಸ್ಲಿಮ್ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಪಕ್ಷದಲ್ಲಿನ ಅದೇ ಮುಸ್ಲಿಮೇತರ ಸಮುದಾಯದ ನಾಯಕರು ಏಕೆ ವಹಿಸಿಕೊಳ್ಳುವುದಿಲ್ಲ ಎಂಬುದು ಯೋಚಿಸಬೇಕಾದ ಸಂಗತಿ!
ಇನ್ನು ಸಾಮಾಜಿಕ ವಿಚಾರಗಳಿಗೆ ಬರುವುದಾದರೆ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡುವ ಮುಖಂಡರು, ಹಾಗೂ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಆದರೆ ಕಾಂಗ್ರೆಸ್ ಸರಕಾರ ಸ್ಥಾಪನೆಯಾದ ಮೇಲೂ ಹಿಂದುತ್ವ ಸಂಘಟನೆಗಳಿಂದ ಮುಸ್ಲಿಮರ ಮೇಲಿನ ದಾಳಿ, ದೌರ್ಜನ್ಯಗಳು ಎಗ್ಗಿಲ್ಲದೆ ಮುಂದುವರಿದಿವೆ. ಮಂಡ್ಯದಲ್ಲಿ ಪ್ರಭಾಕರ ಭಟ್ ಮಾಡಿದ ಮುಸ್ಲಿಮ್ ವಿರೋಧಿ, ಮಹಿಳಾ ವಿರೋಧಿ ಭಾಷಣದ ವಿರುದ್ಧ ಒಂದು ಪ್ರಕರಣ ದಾಖಲಿಸುವ ಧೈರ್ಯವನ್ನೂ ಈ ಕಾಂಗ್ರೆಸ್ ಸರಕಾರ ತೋರಲಿಲ್ಲ. ಕೊನೆಗೆ ನಜ್ಮಾ ನಝೀರ್ ಚಿಕ್ಕನೆರಳೆ ಸಮಾನ ಮನಸ್ಕರ ಜೊತೆಗೂಡಿ ಪ್ರಕರಣ ದಾಖಲಿಸಿದರು. ಎಸ್. ಬಾಲನ್ ಅವರ ಸಹಾಯದಿಂದ ನ್ಯಾಯಾಲಯದ ಮೂಲಕ ಪ್ರಭಾಕರ ಭಟ್‌ಗೆ ಛೀಮಾರಿ ಹಾಕಿಸಿದರು. ಆದರೆ ಆ ಸಂದರ್ಭದಲ್ಲಿಯೂ ರಾಜ್ಯ ಸರಕಾರ ಪ್ರಭಾಕರ ಭಟ್‌ರನ್ನು ಬಂಧಿಸುವ ಯಾವುದೇ ಇರಾದೆ ಇಲ್ಲ ಎಂದು ಹೇಳಿಕೆ ನೀಡಿಸಿತು ಮತ್ತು ಜಾಮೀನಿಗೆ ಯಾವುದೇ ವಿರೋಧವನ್ನೂ ವ್ಯಕ್ತಪಡಿಸದಷ್ಟು ದುರ್ಬಲವಾಗಿ ವರ್ತಿಸಿತು. ಇದೇ ರೀತಿಯಾಗಿ, ಈ ಹಿಂದೆ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪವನ್ನು ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸುವ ಪುನೀತ್ ಕೆರೆಹಳ್ಳಿ ಮೇಲೆ ಹೇರಿದ್ದ ಗೂಂಡಾ ಆ್ಯಕ್ಟ್ ಅನ್ನು ಕೆಲವೇ ದಿನಗಳಲ್ಲಿ ವಾಪಸ್ ಪಡೆಯಿತು. ಆತನಿಂದ ಕೊಲ್ಲಲ್ಪಟ್ಟ ಇದ್ರೀಸ್ ಪಾಶಾ ಕುಟುಂಬಕ್ಕೆ ಇಂದಿಗೂ ನ್ಯಾಯ ದೊರಕಿಸಲು ಕಾಂಗ್ರೆಸ್ ಪಕ್ಷದ ಸರಕಾರದಿಂದ ಸಾಧ್ಯವಾಗಲಿಲ್ಲ. ಇಷ್ಟೇ ಅಲ್ಲದೆ, 2ಬಿ ಮೀಸಲಾತಿ, ಹಿಜಾಬ್ ಕುರಿತ ಸಮಸ್ಯೆಗಳ ಕುರಿತು ಶಾಸನ ಹಾಗೂ ಕಾನೂನಿನ ಮುಖಾಂತರ ಶಾಶ್ವತ ಪರಿಹಾರ ನೀಡುವ ಕುರಿತು ಕೊಟ್ಟ ಭರವಸೆಗಳು ಇನ್ನೂ ಭರವಸೆಗಳಾಗಿಯೇ ಉಳಿದಿವೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ಆಗಿರುವ ಅನ್ಯಾಯಗಳನ್ನು ಸರಿದೂಗಿಸಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಲ್ಲಿ ತರಲು ಮುಸ್ಲಿಮ್ ಸಮುದಾಯ ಸೇರಿದಂತೆ ಅನೇಕ ಇತರ ಸಮುದಾಯಗಳು, ಪ್ರಗತಿಪರರು, ಕೋಮುವಾದದ ವಿರೋಧಿಗಳು ಹಗಲಿರುಳು ಶ್ರಮಿಸಿದ್ದಿದೆ. ಆದರೆ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಅವಧಿಯ ಪ್ರಮಾದಗಳನ್ನು ಸರಿದೂಗಿಸುವುದು ಇರಲಿ ಅದರ ಕುರಿತು ಚಕಾರವೇ ಎತ್ತದಷ್ಟು ಆಲಸ್ಯ ಕಾಂಗ್ರೆಸ್ ಪಕ್ಷದ ಸರಕಾರಕ್ಕೆ ಹಾಗೂ ಅದರ ನಾಯಕರಿಗೆ. ಬಿಜೆಪಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ವಿವಿಗಳ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡುತ್ತದೆ, ಶೈಕ್ಷಣಿಕ ಸಂಸ್ಥೆಗಳ ಆಯಕಟ್ಟಿನ ಜಾಗಗಳಲ್ಲಿ ತಮ್ಮ ಸಿದ್ಧಾಂತದವರನ್ನು ನೇಮಕಗೊಳಿಸುತ್ತದೆ. ಪಠ್ಯಪುಸ್ತಕ ಬದಲಾವಣೆ ವಿಚಾರಗಳಲ್ಲಿ ಶರವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಕಾಂಗ್ರೆಸ್ ಸರಕಾರ ಗಾಢ ನಿದ್ರೆಗೆ ಜಾರಿ ವರ್ಷಗಳ ಸಮಯ ತೆಗೆದುಕೊಳ್ಳುತ್ತದೆ.
ಇನ್ನು ಆರ್ಥಿಕ ವಿಚಾರಗಳಿಗೆ ಬರುವುದಾದರೆ, ಮುಸ್ಲಿಮರ ಆರ್ಥಿಕ ಸುಧಾರಣೆಗಾಗಿ ಸರಕಾರದಿಂದ ಅಥವಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಯಾವುದೇ ರಚನಾತ್ಮಕ ಅಥವಾ ವಿಶೇಷವಾದ ಯೋಜನೆಗಳು ರೂಪುಗೊಂಡಿಲ್ಲ. ಹಿಂದಿನ ಆರ್ಥಿಕ ವರ್ಷದಲ್ಲಿ ಘೋಷಿಸಿದ ಸಂಪೂರ್ಣ ಮೊತ್ತ ಬಿಡುಗಡೆಯಾಗಲಿಲ್ಲ, ಬಿಡುಗಡೆಯಾದಷ್ಟು ಖರ್ಚೂ ಆಗಲಿಲ್ಲ ಎಂಬ ಆರೋಪಗಳು ದಾಖಲೆ ಸಮೇತ ವಿವಿಧ ಮಾಧ್ಯಮಗಳಲ್ಲಿ ಚರ್ಚೆಗೆ ಒಳಪಟ್ಟಿವೆ. ಪ್ರಸ್ತುತ ಸಾಲಿನ ಬಜೆಟ್ ಪೂರ್ವ ಚರ್ಚೆಗೆ ಸಂಬಂಧಿಸಿದ ಸಭೆಗಳಿಗೆ ಮುಖ್ಯಮಂತ್ರಿ ಕಚೇರಿಯು ವಿವಿಧ ಸಮುದಾಯದ ಹಲವಾರು ರಾಜಕೀಯೇತರ ವಲಯದ ಮುಖಂಡರುಗಳನ್ನು ಅಹ್ವಾನಿಸಿ ಸಭೆಗಳನ್ನು ಏರ್ಪಡಿಸಿತು. ಆದರೆ ಮುಸ್ಲಿಮ್ ಸಮುದಾಯದ ವಿಚಾರದಲ್ಲಿ ಕೇವಲ ಪಕ್ಷದ ಶಾಸಕರು ಹಾಗೂ ಮಂತ್ರಿಗಳೊಂದಿಗೆ ಸಭೆ ಏರ್ಪಡಿಸಿ ಮುಕ್ತಾಯಗೊಳಿಸಿತು. ಇದರ ಪರಿಣಾಮವಾಗಿ ಈ ವಿತ್ತವರ್ಷದಲ್ಲಿ ಅಲ್ಪಸಂಖ್ಯಾತ ಇಲಾಖೆಗೆ ಘೋಷಣೆಯಾದ ಮೊತ್ತದ ಬಹುದೊಡ್ಡ ಪ್ರಮಾಣವು ನಿರ್ಮಾಣ ಕಾಮಗಾರಿಗಳಿಗೆ ಮೀಸಲಿಡಲಾಗಿದೆ ಎಂಬ ಗುಸುಗುಸು ಕೇಳಿಬರುತ್ತಿದೆ. ನಿರ್ಮಾಣ ಕಾಮಗಾರಿಗಳಿಂದ ಜನಸಾಮಾನ್ಯರಿಗಿಂತ ಶಾಸಕರು, ಮಂತ್ರಿಗಳು, ಮುಖಂಡರುಗಳಿಗೆ ಹೆಚ್ಚಿನ ಅನುಕೂಲವೆಂಬುದು ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ. ಇನ್ನು ಇತ್ತೀಚೆಗೆ ಘೋಷಿಸಿದ ಸರಕಾರಿ ಟೆಂಡರ್‌ಗಳಲ್ಲಿ 2ಬಿ ಮೀಸಲಾತಿಗೆ ಸೇರಿದ ವ್ಯಕ್ತಿಗಳಿಗೆ ರೂ. 2 ಕೋಟಿ ಮೊತ್ತದವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲಾಗಿದೆ. ಆದರೆ ಇದೂ ಸಹ ಆಯಾ ಕ್ಷೇತ್ರದ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಸಹಾಯವಾಗಲಿದೆ ಹೊರತು ಮುಸ್ಲಿಮ್ ಸಮುದಾಯದ ಜನಸಾಮಾನ್ಯರ ಬದುಕಿನಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳೇನು ಆಗುವುದಿಲ್ಲ.
ವಿವಿಧ ಮಂಡಳಿಗಳಿಗೆ ನೇಮಕ, ಪರಿಷತ್, ರಾಜ್ಯಸಭೆಗೆ ನಾಮನಿರ್ದೇಶನದ ವಿಚಾರ ಬಂದಾಗ ‘ಸಾಮಾಜಿಕ ನ್ಯಾಯ’, ‘ಪ್ರದೇಶವಾರು ಪ್ರಾತಿನಿಧ್ಯ’ದಂತಹ ಭಾರವಾದ ಪದಗಳ ಉಪಯೋಗವಾಗುತ್ತದೆ. ಆದರೆ ಮುಸ್ಲಿಮರ ನಾಮನಿರ್ದೇಶನ ಹಾಗೂ ನೇಮಕಾತಿಗಳಲ್ಲೂ ಈ ನಿಯಮ ಅನ್ವಯವಾಗಬೇಕಲ್ಲವೆ? ಅದೇಕೆ ಕೇವಲ ಬೆಂಗಳೂರಿಗೆ ಸೀಮಿತವಿರುವ ಅಥವಾ ದಕ್ಷಿಣ ಕರ್ನಾಟಕ ಭಾಗದ ಮುಸ್ಲಿಮರಿಗೆ ಎಲ್ಲಾ ಅವಕಾಶಗಳು ನೀಡುತ್ತಾ ಬರಲಾಗುತ್ತಿದೆ? ಪರಿಷತ್‌ನಲ್ಲಿರುವ ಮುಸ್ಲಿಮ್ ಸದಸ್ಯರಲ್ಲಿ ಕೋಲಾರ, ಶಿವಮೊಗ್ಗ, ಧಾರವಾಡ ಹಾಗೂ ದಾವಣಗೆರೆಗೆ ಸೇರಿದ ಒಬ್ಬೊಬ್ಬರಿದ್ದಾರೆ. ಇಡೀ ಹೈದರಾಬಾದ್-ಕರ್ನಾಟಕದ ಭಾಗದ ಒಬ್ಬೇ ಒಬ್ಬ ಮುಸ್ಲಿಮ್ ಕಾರ್ಯಕರ್ತನಿಗೆ ಇದುವರೆಗೂ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿಲ್ಲ. ಹೈದರಾಬಾದ್-ಕರ್ನಾಟಕದ ಏಳು ಜಿಲ್ಲೆಗಳ ಪೈಕಿ, ಮುಸ್ಲಿಮರ ಸಮಸ್ಯೆಗಳಿಗೆ ಧ್ವನಿಯಾಗಲು ಬೀದರ್ ಜಿಲ್ಲೆಯಲ್ಲಿ ರಹೀಮ್‌ಖಾನ್, ಹಾಗೇಯೇ ಕಲಬುರಗಿ ಜಿಲ್ಲೆಗೆ ಕನೀಜ್ ಫಾತಿಮಾ, ಬಳ್ಳಾರಿಗೆ ನಾಸೀರ್ ಹುಸೈನ್, ವಿಜಯನಗರ ಜಿಲ್ಲೆಗೆ ಝಮೀರ್ ಅಹ್ಮದ್ ಇದ್ದಾರೆ ಎಂದುಕೊಳ್ಳೋಣ. ಆದರೆ ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಮುಸ್ಲಿಮರ ಸಮಸ್ಯೆಗಳಿಗೆ ಧ್ವನಿಯಾಗಲು ಒಬ್ಬರೂ ಜನಪ್ರತಿನಿಧಿಯಿಲ್ಲ. ಅದರಲ್ಲೂ ರಾಯಚೂರು ಹಾಗೂ ಯಾದಗಿರಿ ಒಂದೇ ಲೋಕಸಭಾ ಕ್ಷೇತ್ರಕ್ಕೆ ಸೇರಿರುವಾಗ ವಿಧಾನಸಭೆ ಹಾಗೂ ವಿಧಾನ ಪರಷತ್ ಸೇರಿ ಒಬ್ಬರಾದರೂ ಮುಸ್ಲಿಮ್ ಪ್ರತಿನಿಧಿ ಇಲ್ಲದಿರುವುದು ಅನ್ಯಾಯ. ಸಾಮಾಜಿಕ ನ್ಯಾಯದ ನೀತಿಗೆ ಕನ್ನಡಿ ಹಿಡಿಯಲು ಮುಸ್ಲಿಮ್ ಸಮುದಾಯದ ಅಡಿಯಲ್ಲೇ ಬರುವ ವಿವಿಧ ಜಾತಿ ಪಂಗಡಗಳಿಗೆ ಎಷ್ಟು ಪ್ರಾತಿನಿಧ್ಯವನ್ನು ಕೊಡಲಾಗಿದೆ ಎಂಬುದು ಪ್ರಶ್ನಿಸಿಕೊಳ್ಳಬೇಕು. ಕೇವಲ ಖಾನ್, ಸೈಯದ್, ಅಹಮದ್, ಅನ್ಸಾರಿ, ಸೇಠ್‌ಗಳ ಪಂಗಡಗಳಿಗೆ ಸೇರಿದ ಪುರೋಹಿತಶಾಹಿಗಳು ಮಾತ್ರ ಮುಸ್ಲಿಮ್ ಸಮುದಾಯವೇ? ಇನ್ನೂ ಇತರ ಹಿಂದುಳಿದ, ಅತೀ ಹಿಂದುಳಿದ ಮುಸ್ಲಿಮ್ ಸಮುದಾಯದವರಿಗೆ ಅವಕಾಶಗಳು, ಅಧಿಕಾರಗಳು ಬೇಡವೇ? ಇಡೀ ಮುಸ್ಲಿಮ್ ಸಮುದಾಯದ ಹೆಣ್ಣುಮಕ್ಕಳ ಸಮಸ್ಯೆಗಳನ್ನು ಆಲಿಸಲು ಅವರ ಸಮಸ್ಯೆಗಳಿಗೆ ಧ್ವನಿಯಾಗಲು ಕೇವಲ ಇಬ್ಬರು ಮುಸ್ಲಿಮ್ ಶಾಸಕಿಯರು ಸಾಕೇ? ಕಾಂಗ್ರೆಸ್ ಪಕ್ಷದ ಪಾಲಿಗೆ ಇದೇ ಲಿಂಗ ಸಮಾನತೆಯೇ? ಇದೇ ಪ್ರಾದೇಶಿಕ ಸಮಾನತೆಯೇ? ಇದೇ ಸಾಮಾಜಿಕ ಸಮಾನತೆಯೇ?
ಒಂದು ಸಮಾನತಾವಾದಿ ಸರಕಾರಕ್ಕೆ, ವಿವಿಧ ಸಮುದಾಯಗಳ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವ ಪ್ರತಿನಿಧಿತ್ವ ಅಗತ್ಯ. ಮುಸ್ಲಿಮ್ ಸಮುದಾಯದಿಂದ ಅತೀ ಹೆಚ್ಚು ಮತಗಳನ್ನು ಪಡೆದುಕೊಂಡ ಕಾಂಗ್ರೆಸ್, ಮುಸ್ಲಿಮ್ ಸಮುದಾಯಕ್ಕೆ ದೊರಕಬೇಕಾದ ನ್ಯಾಯಯುತ ಪ್ರಾತಿನಿಧ್ಯ ನೀಡದಿದ್ದರೆ, ಮುಸ್ಲಿಮರನ್ನು ಕೇವಲ ಮತಬ್ಯಾಂಕ್ ಎಂದು ಮಾತ್ರ ಭಾವಿಸಿದೆ ಎಂಬ ಅನುಮಾನ ಸತ್ಯವಾಗುತ್ತದೆ. ಕಾಂಗ್ರೆಸ್ ಇನ್ನಾದರೂ ತೋರಿಕೆಯ ಮಾತುಗಳನ್ನು ಬಿಟ್ಟು ಕ್ರಿಯೆಗೆ ಒತ್ತುಕೊಡಲಿ. ಇಲ್ಲವಾದರೆ, ಇದು ಮುಸ್ಲಿಮ್ ಮತದಾರರಿಗೆ ಮಾಡಿದ ಮೋಸವಷ್ಟೇ ಅಲ್ಲ, ಪ್ರಜಾಪ್ರಭುತ್ವದ ಮೇಲೆ ದಶಕಗಳಿಂದ ಮಾಡುತ್ತಾ ಬಂದಿರುವ ಅತೀ ದೊಡ್ಡ ನಿಂದನೆಯಾಗಲಿದೆ.