ತುಳುನಾಡಿನ ಸಾಮರಸ್ಯದ ಗತವೈಭವ ಮರು ಸೃಷ್ಟಿ ನನ್ನ ಧ್ಯೇಯ: ಪದ್ಮರಾಜ್ ಆರ್. ಪೂಜಾರಿ
ಪ್ರಚಾರ ಕಾರ್ಯ ಹೇಗೆ ನಡೆಯುತ್ತಿದೆ?
ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಇತರ ಹಬ್ಬಗಳಂತೆ ಇದನ್ನೂ ಸಂತಸ ಸಂಭ್ರಮಗಳಿಂದ ಆಚರಿಸಬೇಕು. ದ್ವೇಷ ಹಂಚಿಕೊಂಡು ಅಪಪ್ರಚಾರ ಮಾಡುವುದು ಬೇಡ. ಸಂತಸದಿಂದ ಕಾಂಗ್ರೆಸ್ ಪಕ್ಷ ಮಾಡಿರುವ ಸಾಧನೆ, ಮುಂದಿನ ಯೋಜನೆಗಳನ್ನು, ಪ್ರೀತಿಯನ್ನು ಹಂಚುತ್ತಾ ನಾವು ಈ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದೇವೆ.
ನಿಮ್ಮ ಪರ ಮತದಾರರಿಂದ ಯಾವ ಅಭಿಪ್ರಾಯ ವ್ಯಕ್ತವಾಗುತ್ತಿದೆ?
ಮತದಾರರ ಬಳಿ ಹೋಗುವ ವೇಳೆ, ರೋಡ್ ಶೋ, ಮನೆ ಮನೆ ಭೇಟಿಯ ಸಂದರ್ಭ ಜನರ ಸ್ಪಂದನ ಗಮನಿಸಿದರೆ ಚುನಾ ವಣೆಯಲ್ಲಿ ಮತ ಕೇಳಲು ಹೋಗುತ್ತಿಲ್ಲ, ಬದಲಾಗಿ ಕಾಂಗ್ರೆಸ್‌ನ ವಿಜಯೋತ್ಸವ ಆಚರಿಸುತ್ತಿರುವ ಭಾವನೆ ಕಂಡುಬರುತ್ತಿದೆ. ಪಟಾಕಿ ಸಿಡಿಸುವುದು, ಚೆಂಡೆ ಬಾರಿಸುವುದು ಗಮನಿಸಿದರೆ ಬಹು ವರ್ಷಗಳ ನಂತರ ಜನ ಬದಲಾವಣೆ ಬಯಸುತ್ತಿದ್ದಾರೆ. ಅದನ್ನು ನನ್ನ ಮೂಲಕ ನಿರೀಕ್ಷಿಸುತ್ತಿದ್ದಾರೆ ಎಂದೆನಿಸುತ್ತಿದೆ.
ಪ್ರಧಾನಿ ಮಂಗಳೂರಿನಲ್ಲಿ ನಡೆಸಿದ ರೋಡ್ ಶೋ ಬಳಿಕ ಒತ್ತಡ ಸೃಷ್ಟಿ ಆಗಿದೆಯೇ?
ನಾನು ಹಿಂದಿನ ಮನಸ್ಥಿತಿಯಲ್ಲೇ ಇದ್ದೇನೆ. ನನ್ನಲ್ಲಿ ಯಾವುದೇ ಒತ್ತಡ ಇಲ್ಲ. ಕಳೆದ ಕೆಲವು ದಿನಗಳಿಂದ ಪ್ರಚಾರ ಕಾರ್ಯ ಬಿರು ಸಾಗಿರುವ ಕಾರಣ ಒಂದೆರಡು ಗಂಟೆಯೂ ಸರಿಯಾಗಿ ನಿದ್ದೆ ಮಾಡಲು ಸಮಯ ಸಿಗುತ್ತಿಲ್ಲ. ಅದು ಬಿಟ್ಟರೆ ಬೇರೆ ಯಾವುದೇ ಒತ್ತಡ ನನಗಿಲ್ಲ. ಪ್ರಚಾರದ ವೇಳೆ ಜನರು ತೋರುವ ಪ್ರೀತಿ, ವಿಶ್ವಾಸ ಆದರ ಗಳ ಮುಂದೆ ಈ ನಿದ್ದೆಯಿಲ್ಲದ ಒತ್ತಡವೂ ಮಾಸಿ ಹೋಗುತ್ತಿದೆ.
ವಿಧಾನಸಭೆಗೆ, ಎಂಎಲ್‌ಸಿ ಟಿಕೆಟ್ ಕೇಳಿದ ನಿಮಗೆ ನಾರಾಯಣ ಗುರು ಎಂ.ಪಿ. ಟಿಕೆಟನ್ನೇ ಕೊಡಿಸಿದ್ದಾರೆ, ಹೌದೇ?
ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ನನ್ನ ಹೆಸರಿತ್ತು. ಆದರೆ ನಾನು ಟಿಕೆಟ್ ಆಕಾಂಕ್ಷಿ ಆಗಿರಲಿಲ್ಲ. ಕಾಂಗ್ರೆಸ್‌ನಲ್ಲಿ ಟಿಕೆಟ್ ಪಡೆಯಬೇಕಾದರೆ ಅರ್ಜಿ ಹಾಕಬೇಕಿತ್ತು. ಆದರೆ ಪದ್ಮರಾಜ್ ಯಾವತ್ತೂ ಟಿಕೆಟ್‌ಗಾಗಿ ಅರ್ಜಿ ಹಾಕಿಲ್ಲ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ತನ್ನ ಮೂಲಗಳಿಂದ ಆಂತರಿಕ ಸಮೀಕ್ಷೆ ನಡೆಸಿದ್ದು, ಅದರಂತೆ ನನ್ನ ಹೆಸರು ಮುಂಚೂಣಿಯಲ್ಲಿತ್ತು. ಜಾತ್ಯತೀತ ನಿಲುವಿನ ವ್ಯಕ್ತಿಗೆ ಟಿಕೆಟ್ ನೀಡುವುದಾದರೆ ಜಿಲ್ಲೆಯ ನಾಲ್ಕೈದು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಬಹುದು ಎಂಬ ಸಮೀಕ್ಷಾ ವರದಿ ಯಂತೆ ನನ್ನನ್ನು ಕರೆದು ಕೆಲ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಆಫರ್ ನೀಡಿದ್ದರು. ಆದರೆ ನಾನು ಸ್ಪರ್ಧಿಸುವುದಾರೆ ಮಂಗಳೂರು ದಕ್ಷಿಣದಲ್ಲಿ ಎಂಬ ಮನವಿ ಮಾಡಿದ್ದೆ. ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿ ಹೊಂದಿರುವ ನಮ್ಮ ಪಕ್ಷ ಆ ಸ್ಥಾನವನ್ನು ಕ್ರೈಸ್ತ ಸಮುದಾಯಕ್ಕೆ ನೀಡಿತ್ತು. ಒಂದು ರಾಷ್ಟ್ರೀಯ ಪಕ್ಷ ಸಾಮಾನ್ಯ ವ್ಯಕ್ತಿಗೂ ಈ ರೀತಿಯ ಗೌರವ ನೀಡಿರುವುದು ನಿಜಕ್ಕೂ ಹೆಮ್ಮೆ ಅನ್ನಿಸಿದೆ.
ಕಾಂಗ್ರೆಸ್‌ನಲ್ಲಿ 3-4 ದಶಕ ಕೆಲಸ ಮಾಡಿದವರಿಗೂ ಎಂ.ಪಿ. ಸೀಟು ಗಿಟ್ಟಿಸಿಕೊಳ್ಳುವುದು ಕಷ್ಟಸಾಧ್ಯ. ಅಂತಹದರಲ್ಲಿ ನಿಮಗೆ ಸಿಕ್ಕಿರುವುದು ಅಪರೂಪದ ವಿದ್ಯಮಾನವೇ?
ಅದು ನಿಜ. ಆದರೆ, ನಾನು 1992ರಿಂದ ಸಕ್ರಿಯ ರಾಜಕಾರಣದಲ್ಲಿ ಇರದಿದ್ದರೂ, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ಒಲವು ಹೊಂದಿ ಮೆಚ್ಚಿಕೊಂಡಿದ್ದ ವ್ಯಕ್ತಿ. ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಪಕ್ಷವು ದೇಶವನ್ನು ಕಟ್ಟಿ ಬೆಳೆಸಿದೆ. ದೇಶದಲ್ಲಿ, ಜಿಲ್ಲೆಯಲ್ಲಿ ಇಷ್ಟು ಅಭಿವೃದ್ಧಿ ಆಗಿರುವುದು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎನ್ನುವುದು ವಾಸ್ತವ. ನಾನು ನಾರಾಯಣ ಗುರುಗಳ ಅನುಯಾಯಿ. ಅವರ ಸಂದೇಶಗಳು ಕಾಂಗ್ರೆಸ್ ತತ್ವ ಸಿದ್ಧಾಂತಗಳಿಗೆ ಹೊಂದಿಕೊಳ್ಳುವಂತಹದ್ದು. ಪಕ್ಷದ ಬಗ್ಗೆ ಒಲವು ಹಾಗೂ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಮಿಥುನ್ ರೈ ಚುನಾವಣೆಗೆ ನಿಂತಾಗ, ಕಳೆದ ಅವಧಿಯಲ್ಲಿ ಜೆ.ಆರ್.ಲೋಬೊ ಗೆಲುವಿಗಾಗಿಯೂ ಕೆಲಸ ಮಾಡಿದ್ದೇನೆ.
ಬಹಳ ಬೇಗ ದೊಡ್ಡ ಹುದ್ದೆ, ಗೌರವ ನಿಮಗೆ ಸಿಕ್ಕಿದೆ. ಇದು ಪಕ್ಷದ ಸ್ಥಳೀಯ ನಾಯಕರ ಕಸಿವಿಸಿಗೆ ಕಾರಣವಾಗಿತ್ತು. ಈ ಬಗ್ಗೆ ಏನಂತೀರಿ?
ಆ ವಿಷಯದಲ್ಲಿ ನಾನು ಪುಣ್ಯವಂತ ಎಂದೇ ಹೇಳಬೇಕಾಗುತ್ತದೆ. ಆದರೆ, ಪದ್ಮರಾಜ್ ಯಾರ ಜೊತೆಗೂ ಲಾಬಿ ಮಾಡಿಲ್ಲ. ಪಕ್ಷ ಈ ಬಾರಿಯೂ ಟಿಕೆಟ್ ನೀಡುವಾಗ ತನ್ನದೇ ಆದ ಮೂಲಗಳಿಂದ ಸಮೀಕ್ಷೆ ಮಾಡಿ, ಪಕ್ಷದ ನಾಯಕರು, ಕಾರ್ಯಕರ್ತರ ಒಮ್ಮತದ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದೆ. ನನಗೆ ಅವಕಾಶ ನೀಡಿದ ಬಗ್ಗೆ ಯಾವುದೇ ನಾಯಕರಲ್ಲೂ ಭಿನ್ನಾಭಿಪ್ರಾಯ ಇರಲಿಲ್ಲ ಎಂಬುದು ಕೂಡಾ ಸತ್ಯ.
ಬಿಲ್ಲವ ಕೋಟಾದಿಂದಾಗಿ ನಿಮಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಕ್ಕಿತೇ?
ಈ ಮಾತನ್ನು ಅಲ್ಲಗಳೆಯಲಾರೆ. ಆದರೆ ಪದ್ಮರಾಜ್ ಯಾವತ್ತೂ ಒಂದು ಜಾತಿ, ಧರ್ಮವನ್ನು ಮುಂದಿಟ್ಟು ರಾಜಕೀಯ ಮಾಡಲು ಬಂದವನಲ್ಲ. ನಾನು ರಾಜಕೀಯಕ್ಕೆ ಬಂದಿರುವುದೇ ಜ್ವಲಂತ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕಾದರೆ ನಾವು ಸುಮ್ಮನೆ ಕುಳಿತರೆ ಆಗದು ಎಂಬ ಸತ್ಯದೊಂದಿಗೆ. ಈ ಸ್ಪರ್ಧೆ ರಾಜಕೀಯದಲ್ಲಿ ಅನಿವಾರ್ಯವಾಗಿ ಸಿಕ್ಕಿದ ಅವಕಾಶ.
ನೀವು ಘಟ್ಟದ ಮೇಲಿನವರು, ಬಿಲ್ಲವರೇ ಅಲ್ಲ ಎಂಬ ಟ್ರೋಲ್ ಬಗ್ಗೆ ಏನು ಹೇಳುತ್ತೀರಿ?
ಬಿಜೆಪಿಯವರಿಗೆ ಇಂತಹ ವಿಚಾರ ಬಿಟ್ಟು ಬೇರೆ ವಿಷಯವೇ ಇಲ್ಲ. ನಾನು ಚುನಾವಣೆಗೆ ಸ್ಪರ್ಧಿ ಸುವ ವಿಚಾರ ಸುದ್ದಿಯಾಗಿದ್ದು ಕಳೆದೊಂದು ವರ್ಷದಿಂದೀಚೆಗೆ. ನಾನು ಹುಟ್ಟಿದ್ದು 1970ರಲ್ಲಿ, ನನ್ನ ಶಾಲಾ ಪ್ರಮಾಣ ಪತ್ರ ನೋಡಿದವರಿಗೆ ಅದು ತಿಳಿಯುತ್ತದೆ. ಅದೆಲ್ಲಾ ಚರ್ಚೆಯ ವಿಚಾರವೇ? ಅಧಿಕಾರಕ್ಕಾಗಿ, ಸೋಲಿನ ಭೀತಿ ಯಿಂದ ಇಂತಹ ಅಪಪ್ರಚಾರ ಅವರು ಮಾಡುತ್ತಿದ್ದಾರೆ. ನನ್ನ ತಂದೆ ಮುಲ್ಕಿ, ತಾಯಿ ಮೂಡುಬಿದಿರೆಯವರು. ವ್ಯವಹಾರಕ್ಕಾಗಿ ಅಲ್ಲಿ ಹೋಗಿ ನೆಲೆಸಿದ್ದವರು ಅಷ್ಟೇ.
ಬಿಲ್ಲವರು ಬಿಜೆಪಿಯಿಂದ ಭ್ರಮನಿರಸನಗೊಂಡಿರುವುದು ನಿಜವೇ? ವದಂತಿಯೇ?
ನಾನು ಬಿಲ್ಲವರೆಂದು ಹೇಳಲಾರೆ. ದ.ಕ. ಜಿಲ್ಲೆ, ಈ ತುಳುನಾಡು ಸಾಮರಸ್ಯದ ಗತ ವೈಭವವನ್ನು ಹೊಂದಿದೆ. 40 ವರ್ಷ ಇಲ್ಲಿ ಕಾಂಗ್ರೆಸ್‌ನ ಸಂಸದರು ಆಡಳಿತ ಮಾಡಿದ್ದಾರೆ. ಆ ಸಂದರ್ಭದಲ್ಲಿ ವಿಮಾನ ನಿಲ್ದಾಣ, ನವ ಮಂಗಳೂರು ಬಂದರು, ರೈಲ್ವೆ, ಹೆದ್ದಾರಿಗಳು, ಕೆಆರ್‌ಇಸಿ, ಕೆಐಒಸಿಎಲ್, ಎಂಆರ್‌ಪಿಎಲ್, ಎಂಸಿಎಫ್ ಮಾತ್ರವಲ್ಲದೆ ನೂರಾರು ವಿದ್ಯಾ ಸಂಸ್ಥೆಗಳು 1991ರವವರೆಗೆ ಆಗಿವೆ. ಶ್ರೀನಿವಾಸ ಮಲ್ಯ, ಕೆ.ಕೆ.ಶೆಟ್ಟಿ ರಂಗನಾಥ ಶೆಣೈ, ಜನಾರ್ದನ ಪೂಜಾರಿ, ಅವಿಭಜಿತ ದ.ಕ. ಜಿಲ್ಲೆ ಎಂದಾಗ ಆಸ್ಕರ್ ಫೆರ್ನಾಂಡಿಸ್, ಟಿಎಂಎ ಪೈ, ವಿನಯ ಕುಮಾರ್ ಸೊರಕೆ ಸೇರಿದಂತೆ ಇನ್ನೂ ಹಲವರ ಮೂಲಕ ಜಿಲ್ಲೆ ಅಭಿವೃದ್ಧಿಯನ್ನು ಕಂಡಿತ್ತು. ಆದರೆ ಬಿಜೆಪಿಯವರಿಗೆ ಅಭಿವೃದ್ಧಿ ವಿಚಾರದಲ್ಲಿ ಗೆಲ್ಲಲು ಸಾಧ್ಯವಿಲ್ಲ. ಅದಕ್ಕಾಗಿ ಅವರು ಮಾಡಿದ ಮಹಾನ್ ಕಾರ್ಯ ತುಳುನಾಡಿನ ಸಾಮರಸ್ಯದ ಗತ ವೈಭವ್ಯವನ್ನು ಕೋಮುವಾದದ ವಿಷ ಬೀಜ ಬಿತ್ತಿ ಹಾಳುಗೆಡವಿದ್ದು. ಇದರಿಂದ ಇಲ್ಲಿನ ಜನಸಮುದಾಯಕ್ಕೆ ಭ್ರಮ ನಿರಸನ ಆಗಿರುವುದು ಹೌದು.
ಸಂಸದರಾದರೆ ನೀವು ಮೊದಲು ಮಾಡುವುದು ಏನು?
ಜಿಲ್ಲೆಗೆ ಕೋಮುಸೂಕ್ಷ್ಮ ಎಂಬ ಹಣೆಪಟ್ಟಿ ಇದೆ. ಇದರಿಂದಾಗಿ ಹೂಡಿಕೆ ಬರುತ್ತಿಲ್ಲ. ಉದ್ಯೋಗ ಸೃಷ್ಟಿ ಯಾಗುತ್ತಿಲ್ಲ. ಉದ್ದಿಮೆ ಬರುತ್ತಿಲ್ಲ. ಆದ್ದರಿಂದ ಈ ಹಣೆಪಟ್ಟಿಯನ್ನು ಮೊದಲು ಬದಲಾಯಿಸಬೇಕಿದೆ. ದೇಶಪ್ರೇಮಿ ಯಾವತ್ತೂ ಯಾರ ಮನೆಯನ್ನೂ ಹಾಳು ಮಾಡಲಾರ. ಆದರೆ ಬಿಜೆಪಿಯವರು ರಾಷ್ಟ್ರೀಯ ವಾದಿ ಎಂದು ಹೇಳಿಕೊಂಡು ಆರ್ಥಿಕವಾಗಿ ಹಿಂದು ಳಿದ ಸಮಾಜದ ಯುವಕರನ್ನು ಕಾನೂನುಬಾಹಿರ ಚಟು ವಟಿಕೆಗಳಿಗೆ ಪ್ರಚೋದಿಸುವ ಕೆಲಸ ಮಾಡಿ ಮಕ್ಕಳು ಪೆಟ್ಟು ತಿಂದು ಜೈಲಿಗೆ ಸೇರುವ ಹಾಗೆ, ಕೋರ್ಟ್‌ಗೆ ಅಲೆಯುವ ಹಾಗೆ ಅಥವಾ ಪೆಟ್ಟು ತಿಂದು ಆಸ್ಪತ್ರೆಯಲ್ಲಿ ಮಲಗುವಂತೆ ಅಥವಾ ಕೊಲೆ ಗೀಡಾಗುವಂತೆ ಮಾಡಿದ್ದೇ ಸಾಧನೆ. ಅದೆಷ್ಟೋ ಕುಟುಂಬಗಳನ್ನು ಅನಾಥರನ್ನಾಗಿರುವುದು ಬಿಜೆಪಿಯ ರಾಷ್ಟ್ರ ಪ್ರೇಮ.
ಮೋದಿ, ಹಿಂದುತ್ವಕ್ಕಾಗಿ ಬಿಜೆಪಿಯನ್ನು ಬೆಂಬಲಿಸುವ ಮತದಾರರಿಗೆ ನಿಮ್ಮ ಸಲಹೆ ಏನು?
ನಮ್ಮ ಯುವಕರು ಈ ಕಾರಣದಿಂದಾಗಿಯೇ ಬಿಜೆಪಿಯತ್ತ ಆಕರ್ಷಿತರಾಗಿದ್ದನ್ನು ಒಪ್ಪಿಕೊಳ್ಳಬೇಕಾಗಿದೆ. ಆದರೆ ಜನರು ಇದೀಗ ಪ್ರಬುದ್ಧರಾಗುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಬಿಲ್ಲವ ಸಮಾಜ ಹಾಗೂ ಆರ್ಥಿಕವಾಗಿ ಹಿಂದುಳಿದ ಕಟ್ಟಕಡೆಯ ವ್ಯಕ್ತಿಗಳನ್ನು ಕೂಡಾ ಸಂಪರ್ಕಿಸುವ ಕೆಲಸವನ್ನು ವಿವಿಧ ರೀತಿಯಿಂದ ಮಾಡುತ್ತಿದ್ದೇವೆ. ಅವರ ಮನಸ್ಸನ್ನು ಬದಲಾಯಿಸಿ, ನಿಮ್ಮನ್ನು ಕಷ್ಟದಿಂದ ದುಡಿದು ಸಾಕಿದ ತಂದೆತಾಯಿಯನ್ನು ಒಳ್ಳೆಯ ರೀತಿಯಿಂದ ನೋಡುವಂತಾಗಬೇಕು. ಸಮಾಜವನ್ನು ಕಟ್ಟುವ ಕೆಲಸ ಮಾಡುವಂತೆ ಮನವೊಲಿಸುವ ಕೆಲಸ ವಿವಿಧ ಸಂಘಸಂಸ್ಥೆಗಳ ಮೂಲಕ ನಾವು ಮಾಡುತ್ತಿದ್ದೇವೆ.
ಬಿಲ್ಲವರನ್ನು ಹೊರತುಪಡಿಸಿ ಇಲ್ಲಿ ಮುಸ್ಲಿಮ್ ಸಮುದಾಯ, ಮೀನುಗಾರರು ಹಾಗೂ ಇತರ ಹಿಂದುಳಿದ ವರ್ಗಗಳ ಮತದಾರ ರನ್ನು ಸೆಳೆಯಲು ನಿಮ್ಮ ಕಾರ್ಯತಂತ್ರಗಳೇನು?
ನನ್ನ ಪ್ರಕಾರ ಎಲ್ಲಾ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಸಂಘಸಂಸ್ಥೆಗಳ ನಾಯಕರನ್ನು ನಾನು ಭೇಟಿ ಮಾಡಿದ್ದೇನೆ. ಎಲ್ಲ ರಿಂದಲೂ ಬಂದಿರುವ ವಿಶ್ವಾಸದ ನುಡಿಗಳು, ಅವರು ನೀಡಿರುವ ಗೌರವ, ಅವರು ಇಟ್ಟಿರುವ ನಿರೀಕ್ಷೆ ನೋಡಿದರೆ, ನನ್ನ ಹಿರಿಯರು ಅಥವಾ ಸ್ವತಃ ನಾನೇ ಹಿಂದಿನ ಜನ್ಮ ದಲ್ಲಿ ಏನೋ ಪುಣ್ಯದ ಕಾರ್ಯ ಮಾಡಿರಬೇಕು. ನಾನು ಓರ್ವ ಸಾಮಾನ್ಯರಲ್ಲಿ ಸಾಮಾನ್ಯ. ಬಡ ಕುಟುಂಬ ದಿಂದ ಬಂದವ. ನನ್ನ ಅಣ್ಣ, ತಂಗಿ ಜತೆ 1ರಿಂದ 10ನೇ ತರಗತಿವರೆಗೆ ಶಾಲೆಗೆ ಹೋಗಿಬರಲು ದಿನ 8 ಕಿ.ಮೀ. ನಡೆಯಬೇಕಿತ್ತು. ಆ ವೇಳೆ ನಾವಿದ್ದಿದ್ದು ಬಾಡಿಗೆ ಮನೆಯಲ್ಲಿ. ಅಂತಹ ಪದ್ಮರಾಜ್ ಬಗ್ಗೆ ಎಲ್ಲ ವರ್ಗದ ಜನರು ಆದರ ತೋರಿಸುತ್ತಿದ್ದಾರೆ.
ಕೇಂದ್ರ ಸಚಿವರಾಗಿ ಜಿಲ್ಲೆಗೆ ಅನೇಕ ಕೊಡುಗೆ ನೀಡಿದ ಜನಾರ್ದನ ಪೂಜಾರಿಯವರನ್ನು ಜಿಲ್ಲೆಯ ಜನ ಸೋಲಿಸಿದ್ದಾರಲ್ಲ?
ಜನಾರ್ದನ ಪೂಜಾರಿ ಯಾವತ್ತೂ ಸೋತಿಲ್ಲ. ಆದರೆ ಅವರ ಸೋಲಿಗೆ ಕಾರಣರಾದವರು ಅವರಲ್ಲಿ ಕ್ಷಮೆ ಯಾಚಿಸಿದ್ದಾರೆ.
ನೀವು ನ್ಯಾಯವಾದಿ, ಹಾಗಾಗಿ ಒಳ್ಳೆಯ ಮಾತುಗಾರನೂ ಹೌದೆನ್ನುತ್ತಾರೆ?
ಮಾತುಗಾರರು ತುಂಬಾ ಜನ ಇದ್ದಾರೆ. ಚಿನ್ನದ ರಸ್ತೆ ಮಾಡಿಕೊಟ್ಟವರು, ಬುಲೆಟ್ ಟ್ರೈನ್ ತಂದವರೂ ಇದ್ದಾರೆ. ನಾನು ಮಾತುಗಾರ ಎನ್ನುವುದನ್ನು ಒಪ್ಪಲಾರೆ. ಆದರೆ ಪ್ರಾಮಾಣಿಕವಾಗಿ ಮನಸ್ಸಿನಲ್ಲಿ ಏನಿದೆಯೋ ಅದನ್ನು ಹೇಳುತ್ತೇನೆ ಮತ್ತು ಅದನ್ನು ಪಾಲಿಸುವ ಕೆಲಸವನ್ನೂ ಮಾಡುತ್ತೇನೆ.
ನಿಮ್ಮ ಬಂಧುತ್ವದ ಎದುರು ಬಿಜೆಪಿಯ ಹಿಂದುತ್ವ ಯಾಕೆ ಸೋಲಬೇಕು?
ನಾವೆಲ್ಲರೂ ರಾಷ್ಟ್ರ ಪ್ರೇಮಿಗಳು, ಈ ದೇಶವನ್ನು ಕಟ್ಟಲು ಹೊರಟವರು. ಜಾತಿ-ಧರ್ಮಗಳ ನಡುವೆ ಕಂದಕ ಸೃಷ್ಟಿಸಿ, ಸಂವಿಧಾನ ವಿರೋಧ ಕೃತ್ಯ ಮಾಡುತ್ತಾ, ಯುವಕರನ್ನು ಕಾನೂನು ಬಾಹಿರ ಕೃತ್ಯಗಳಿಗೆ ಪ್ರಚೋದಿಸಿ ಮನೆಗಳನ್ನು ಅನಾಥವಾಗಿಸುವುದರಿಂದ ದೇಶ ಉದ್ಧಾರ ಆಗುವುದಿಲ್ಲ. ದೇಶ ಬಲಿಷ್ಠ ಆಗ ಬೇಕಾದರೆ, ಪ್ರತಿಯೊಂದು ಮನೆಯಲ್ಲಿ ಮಕ್ಕಳಿಗೆ ಶಿಕ್ಷಣ, ಉದ್ಯೋಗ ದೊರೆಯಬೇಕು. ಇದು ಬಿಜೆಪಿಯಿಂದ ಆಗುತ್ತಿಲ್ಲ.
ಕಾಂಗ್ರೆಸ್‌ನ ಪ್ರಣಾಳಿಕೆ ಆಗಿರಬಹುದು ಅಥವಾ ಹಿಂದಿನ ಸಾಧನೆಗಳ ವಿಚಾರವಾಗಿರಲಿ ಜನರಿಗೆ ಸರಿಯಾಗಿ ತಲುಪುತ್ತಿಲ್ಲ ಎಂಬ ಆರೋಪದ ಬಗ್ಗೆ ಏನಂತೀರಿ?
ಈ ಮಾತನ್ನು ಸ್ವಲ್ಪ ಮಟ್ಟಿಗೆ ಒಪ್ಪಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಯಾರೂ ಕಡೆಗಣಿ ಸುವಂತಿಲ್ಲ. ಆದರೆ ಅದನ್ನು ಮಾರ್ಕೆಟಿಂಗ್ ಮಾಡು ವಲ್ಲಿ ಕಾಂಗ್ರೆಸ್ ಹಿಂದೆ ಬಿದ್ದಿದೆ. ಆದರೆ ಯಾವುದೇ ಸಾಧನೆ ಮಾಡದೆ ಎಲ್ಲವನ್ನೂ ತಾವೇ ಮಾಡಿದ್ದು ಎಂಬಂತೆ ಬಿಂಬಿಸುವ ಬಿಜೆಪಿ ಮಾರ್ಕೆಟಿಂಗ್‌ನಲ್ಲಿ ಬಹಳ ಮುಂದಿದೆ. ಕಾಂಗ್ರೆಸ್ ಮಾಡಿದ ಅಭಿವೃದ್ಧಿ ಯೋಜನೆ, ಸರಕಾರಿ ಸೊತ್ತುಗಳನ್ನು ಮಾರಾಟ ಮಾಡಿದ್ದೇ ಬಿಜೆಪಿ ಸಾಧನೆ. ಕಾಂಗ್ರೆಸ್ ಯಾವತ್ತೂ ಅಪ ಪ್ರಚಾರವನ್ನು ರಾಜಕೀಯಕ್ಕೆ ಬಳಸಿಲ್ಲ. ಅದು ಏನಿದ್ದರೂ ನ್ಯಾಯ, ನೀತಿ, ಅಭಿವೃದ್ಧಿ ಮುಂದಿಟ್ಟು ಚುನಾವಣೆ ಎದುರಿಸಿದೆ.
ದ.ಕ. ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಭರವಸೆಗಳೇನು?
ಸಮುದ್ರ ನದಿಗಳಿಂದ ಸುತ್ತುವರಿದಿರುವ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ, ಬೃಹತ್ ಕಂಪೆನಿಗಳಿದ್ದರೂ ಸ್ಥಳೀಯರಿಗೆ ಉದ್ಯೋಗವಿಲ್ಲ, ಮಂಗಳೂರು ಸ್ಮಾರ್ಟ್ ಆದರೂ ಒಳಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಕಳೆದ ಸುಮಾರು 33 ವರ್ಷಗಳಿಂದ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿದವರ ಇಚ್ಛಾಶಕ್ತಿಯ ಕೊರತೆಯಿಂದ ಈ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುವ ಜತೆಗೆ ವಾತಾವರಣದಲ್ಲಿ ಏರುತ್ತಿರುವ ಉಷ್ಣತೆಗೆ ತಜ್ಞರಿಂದ ಸಲಹೆ ಪಡೆದು ಪರಿಸರ ಸಹ್ಯ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ತುಳುನಾಡಿ ವಿಶೇಷ ದೈವ ದೇವರಗಳು ಸಂಸ್ಕೃತಿಯ ಬಗ್ಗೆ ವಿದೇಶದವರೂ ಆಕರ್ಷಿ ತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರವಾಸೋಮದ್ಯಕ್ಕೆ ಉತ್ತೇಜನ, ಎಜುಕೇಶನ್ ಟೂರಿಸಂ, ಮೆಡಿಕಲ್ ಟೂರಿಸಂಗೆ ಉತ್ತೇಜನಕ್ಕೆ ಆದ್ಯತೆ ನೀಡಲಾಗುವುದು.
ಮುಂಬೈನಂತೆ 24 ಗಂಟೆಯೂ ನಗರ ಸಕ್ರಿಯವಾಗಿರುವ ಎಲ್ಲಾ ರೀತಿಯ ಅವಕಾಶಗಳು ಮಂಗಳೂರಿನಲ್ಲಿದ್ದು, ಅದಕ್ಕೆ ಒತ್ತು ನೀಡಲಾಗುವುದು. ಈ ಎಲ್ಲಾ ಬಗ್ಗೆ ಎಲ್ಲಾ ವಿಭಾಗಗಳ ತಜ್ಞರ ಸಲಹೆಯ ಮೇರೆಗೆ ಅಭಿವೃದ್ಧಿಯ ನೀಲನಕ್ಷೆಯೊಂದನ್ನು ಸಿದ್ಧಪಡಿ ಸಲಾಗುವುದು. ಉದ್ಯೋಗಕ್ಕಾಗಿ ತಮ್ಮ ಹೆತ್ತವರನ್ನು ತೊರೆದು ಹೊರ ದೇಶಗಳಿಗೆ ಹೋಗುವ ಯುವ ಉದ್ಯೋಗಾಕಾಂಕ್ಷಿಗಳಿಗೆ ನಗರದಲ್ಲಿ ಗುಣಮಟ್ಟದ ಉದ್ಯೋಗ ಸೃಷ್ಟಿಗೆ ಗಮನಹರಿಸಲಾಗುವುದು.
ಬಿಲ್ಲವ ಸಮುದಾಯಕ್ಕೆ ನಿಮ್ಮ ಭರವಸೆ ಏನು?
ಪ್ರಧಾನಿ ಮೋದಿ ಕೊಟ್ಟಿದ್ದು ಭರವಸೆ ಇಲ್ಲ. ಅವರು ಸುಮಾರು 14 ಬಾರಿ ಮಂಗಳೂರಿಗೆ ಭೇಟಿ ನೀಡಿ ದ್ದಾರೆ. ಪ್ರಧಾನಿಯಾಗಿ ಅವರ ಭೇಟಿ ಸಂತಸದ ವಿಚಾರ. ಚುನಾವಣಾ ಪ್ರಚಾರಕ್ಕೆ ಬರುವಾಗ ಇಲ್ಲಿನ ನಾಯಕರು ಅವರಿಗೆ ಯಾವ ರೀತಿ ಇಲ್ಲಿನ ಚಿತ್ರಣ ನೀಡಿರಬ ಹುದು ಎಂಬುದು ಮುಖ್ಯವಾಗುತ್ತದೆ. ಹಿಂದೆ ಅಷ್ಟು ಬಾರಿ ಬಂದಾ ಗಲೂ, ಈ ಜಗತ್ತಿಗೆ, ಒಂದೇ ಮತ, ಒಂದೇ ದೇವರು, ಒಂದೇ ಧರ್ಮ ಎಂಬ ಸಂದೇಶ ನೀಡಿರುವ ಬ್ರಹ್ಮಶ್ರೀ ನಾರಾಯಣ ಗುರು ಗಳಿಂದ ಸ್ಥಾಪಿಸಲ್ಪಟ್ಟ ಕ್ಷೇತ್ರಕ್ಕೆ ಭೇಟಿ ನೀಡಲು ಯಾಕೆ ಸಲಹೆ ನೀಡಿಲ್ಲ? 15ನೇ ಬಾರಿ ಬಂದಾಗ ಪೂರ್ವ ನಿಗದಿತ ಸಮಾವೇಶ ರದ್ದು ಮಾಡಿ ರೋಡ್ ಶೋಗೆ ನಿರ್ಧರಿಸಲಾಯಿತು. ನಾರಾಯಣಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿರುವಂತಹದ್ದು ಏನನ್ನು ಸೂಚಿ ಸುತ್ತದೆ? ನಾರಾಯಣಗುರುಗಳ ನೆನಪಾಗಿದ್ದು, ಪದ್ಮರಾಜ್ ಸ್ಪರ್ಧಿಸಿದ ಬಳಿಕವೇ? ಗುರುಗಳಿಂದ ಸ್ಥಾಪಿಸಿದ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಸಕ್ತ ಅಭ್ಯರ್ಥಿ ಕಳೆದ 27 ವರ್ಷಗಳಿಂದ ಟ್ರಸ್ಟಿಯಾಗಿ, ಕೋಶಾಧಿಕಾರಿಯಾಗಿ ನಾರಾಯಣಗುರುಗಳ ತತ್ವ ಸಂದೇಶವನ್ನು ಅಕ್ಷರಶಃ ಅನುಷ್ಠಾನ ಮಾಡಿಕೊಂಡು ಬಂದವನು ಸ್ಪರ್ಧಿಸಿದಾಗ ಬಿಜೆಪಿಗೆ ನಾರಾಯಣಗುರುಗಳ ನೆನಪಾಗಿರುವುದೇ ಎಂಬ ಪ್ರಶ್ನೆ ಪ್ರತಿಯೊಂದು ಮನೆಯಿಂದಲೂ ಕೇಳಿಬರುತ್ತಿದೆ.
ಎದುರಾಳಿ ಪಕ್ಷದ ಜತೆ ಹೆಚ್ಚಾಗಿ ಗುರುತಿಸಿಕೊಂಡಿರುವ ಬಿಲ್ಲವರು ಈ ಬಾರಿ ಪದ್ಮರಾಜ್ ಕೈ ಹಿಡಿಯಲಿದ್ದಾರೆಯೇ?
ನಿಜ, ನಾನು ಬಿಲ್ಲವ ಸಮಾಜದಲ್ಲಿ ಹುಟ್ಟಿದವ. ನನಗೆ ಅದರ ಬಗ್ಗೆ ಹೆಮ್ಮೆ ಇದೆ. ಮತ್ತೆ ನನ್ನ ಧರ್ಮ ಹಿಂದೂ ಜ್ಞಾನದ ಸಂಕೇತ. ಆ ಹಿಂದೂ ಧರ್ಮ ಬೋಧಿಸಿರುವಂತೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಕಟ್ಟಾ ಅನುಯಾಯಿಯಾಗಿರುವ ನಾನು ಅವರ ತತ್ವ ಸಂದೇಶಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿ ರುವಂತೆ, ನಾನು ಎಲ್ಲ ಜಾತಿ ಧರ್ಮದವವರನ್ನು ಒಂದಾಗಿ ಕಾಣುವಂತಹದ್ದು. ನಾನು ಆರ್ಥಿಕವಾಗಿ ಹಿಂದುಳಿದ ವರ್ಗಗಗಳಾದ ಬ್ರಾಹ್ಮಣ, ಜಿಎಸ್‌ಬಿ, ಬಿಲ್ಲವ, ಬಂಟ, ಕುಲಾಲ, ಗಾಣಿಗ, ಭಂಡಾರಿ ಸೇರಿದಂತೆ ಎಲ್ಲ ಸಮುದಾಯಗಳ ಜತೆ ಇರುವೆ.
ನಿಮ್ಮ ಗುರುಗಳು ದಾರಿ ತೋರಿಸಿದ್ದು ಬಂಧುತ್ವದ್ದು, ಬಿಜೆಪಿಯದ್ದು ಹಿಂದುತ್ವ. ಈ ಹಿಂದುತ್ವ ಮತ್ತು ಬಂಧುತ್ವವನ್ನು ಯಾವ ರೀತಿ ನೀವು ನೋಡುತ್ತೀರಿ?
ನಾನು ಬಿಜೆಪಿಯ ಹಿಂದುತ್ವವನ್ನು ಒಪ್ಪುವುದಿಲ್ಲ. ಆದರೆ ನನ್ನ ಪವಿತ್ರವಾದ, ಸನಾತನ ಹಿಂದೂ ಧರ್ಮವು ‘ನಿನ್ನ ಧರ್ಮವನ್ನು ಗೌರವಿಸುವ ಜತೆಗೆ ಇನ್ನೊಂದು ಧರ್ಮವನ್ನು ಗೌರವಿಸು. ಸಮಾಜದಲ್ಲಿರುವ ಅಶಕ್ತರ ಕಣ್ಣೀರೊರೆಸುವ ಕೆಲಸ ಮಾಡು’ ಎಂದು ಹೇಳುತ್ತದೆ. ನಾನು ಓರ್ವ ಹಿಂದು ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ. ಹಿಂದೂ ಧರ್ಮಕ್ಕೆ ಸೇರಿದ ಕುದ್ರೋಳಿ ಕ್ಷೇತ್ರದಲ್ಲಿ 27 ವರ್ಷಗಳಿಂದ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಜಿಲ್ಲೆಯ ವಿವಿಧ ದೇವಸ್ಥಾನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬರುತ್ತಿದ್ದೇನೆ. ಆದರೆ ಈ ಬಿಜೆಪಿಯ ಹಿಂದುತ್ವದ ಬಗ್ಗೆ ಮಾತನಾಡುವವರು ನನ್ನೆದೆರು ವೇದಿಕೆಯಲ್ಲಿ ಚರ್ಚಿಸಲಿ.