ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ನಿಧನಕ್ಕೆ ಕಂಬನಿ ಮಿಡಿದ ಮೈಸೂರಿಗರು
ದಲಿತರು, ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಅಧಿಕಾರಿ
Photo: fb.com/Kshivaramu
ಮೈಸೂರು, ಫೆ.29: ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ದಲಿತರು, ಪೌರಕಾರ್ಮಿಕರು ಮತ್ತು ಹಿಂದುಳಿದವರ ಏಳಿಗೆಗೆ ಶಕ್ತಿ ಮೀರಿ ಶ್ರಮಿಸಿ ತಮ್ಮದೇ ಆದ ಚಾಪನ್ನು ಮೂಡಿಸಿ ಅದೆಷ್ಟೊ ಕುಟುಂಬಗಳಿಗೆ ಬೆಳಕನ್ನು ನೀಡಿ ಅಭಿಮಾನಿಗಳ ಪಡೆಯನ್ನೇ ಹುಟ್ಟು ಹಾಕಿ ಹೆಸರು ಮಾಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಚಲನಚಿತ್ರ ನಟ ಬಿಜೆಪಿ ಮುಖಂಡ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಶಿವರಾಮ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಮೈಸೂರಿನ ಹಲವು ಕಡೆಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
1990 ರಿಂದ 1993ರವರೆಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಕೆ.ಶಿವರಾಮ್ ಮೈಸೂರು ನಗರದ ಅಶೋಕಪುರಂ, ಗಾಂಧಿನಗರ, ಕುರಿಮಂಡಿ, ಕುರುಬಾರ ಹಳ್ಳಿ, ಜಯನಗರ, ಮಳಲವಾಡಿ, ಮಾನಂದವಾಡಿ ರಸ್ತೆಗಳಲ್ಲಿನ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಿ ಮನೆಗಳನ್ನು ನಿರ್ಮಿಸಿಕೊಟ್ಟು ಜನಮಾನಸದಲ್ಲಿ ಅಚ್ಚಾಗಿ ಉಳಿದಿದ್ದಾರೆ.
ಪೌರಕಾರ್ಮಿಕರು, ದಲಿತರು ಮತ್ತು ಹಿಂದುಳಿದ ವರ್ಗದವರ ಮಕ್ಕಳು ಶಿಕ್ಷಿತರಾಗಬೇಕು ಎಂದು ಸದಾ ಬಯಸುತ್ತಿದ್ದ ಅವರು ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಮಹಾನಗರ ಪಾಲಿಕೆ ವತಿಯಿಂದಲೇ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿದ್ದರು. ಜೊತೆಗೆ ಶೇ.18ರಷ್ಟು ಯೋಜನೆಯ ಹಣವನ್ನು ಪರಿಣಾಮಕಾರಿಯಾಗಿ ಬಳಸಿ ದಲಿತರು, ಪೌರಕಾರ್ಮಿಕರ ಮಕ್ಕಳ ಶಿಕ್ಷಣ ಸೇರಿದಂತೆ ಅವರ ಉದ್ಯೋಗಕ್ಕೆ ಉತ್ತೇನ ನೀಡಿದ್ದರು.
ಇದರ ಜೊತೆಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ವೇಳೆ ಇವರ ಮೊದಲ ಕನ್ನಡ ಚಲನಚಿತ್ರ ನಾಗತಿಹಳ್ಳಿ ಚಂದ್ರಶೇಖರ್ ನಿರ್ಮಾಣದ ಬಾ ನಲ್ಲೆ ಮಧು ಚಂದ್ರಕೆ ಚಲನ ಚಿತ್ರದ ಬಹುಭಾಗ ಮೈಸೂರಿನಲ್ಲೇ ಚಿತ್ರೀಕರಣಗೊಂಡಿತ್ತು. ಈ ವೇಳೆ ಐಎಎಸ್ ಅಧಿಕಾರಿಯೊಬ್ಬರು ಸಿನೆಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಮಿಂಚಿನಂತೆ ಹರಡಿತ್ತು. ಈ ಸಿನೆಮಾ ಬಿಡುಗಡೆಗೊಂಡ ನಂತರ ಮೈಸೂರು ಜಿಲ್ಲೆಯಾದ್ಯಂತ ಚಿತ್ರಮಂದಿರ ಹೌಸ್ ಫುಲ್ ಆಗಿತ್ತು.
ಸದಾ ಕಾಲ ದಲಿತರ ಮಕ್ಕಳು, ಬಡವರ ಮಕ್ಕಳು ಶಿಕ್ಷಣ ಪಡೆಯಬೇಕು ಎಂದು ಅವರಿಗೆ ಸರಕಾರದ ಎಲ್ಲ ನೆರವುಗಳನ್ನು ದೊರಕುವಂತೆ ಮಾಡುತ್ತಿದ್ದರು. ಇದರ ಜೊತೆಗೆ ವೈಯಕ್ತಿಕವಾಗಿ ಸಹಾಯವನ್ನು ಮಾಡುತ್ತಿದ್ದರು. ಇವರ ಸೇವೆಯನ್ನು ಮೆಚ್ಚಿ ಮೈಸೂರು ಜಿಲ್ಲೆಯ ಅನೇಕ ಊರುಗಳಲ್ಲಿ ಕೆ.ಶಿವರಾಮ್ ಅಭಿಮಾನಿ ಬಳಗಗಳು ಹುಟ್ಟಿಕೊಂಡವು.
ಹಲವು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದ ಕೆ.ಶಿವರಾಮ್: ಬಡಕುಟುಂಬದಿಂದ ಬಂದ ದಲಿತ ವ್ಯಕ್ತಿಯೊಬ್ಬ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಐಎಎಸ್ ಮಾಡಿದ್ದಾರೆ ಎಂಬ ಹೆಗ್ಗಳಿಕೆ ಕೆ.ಶಿವರಾಮ್ ಅವರ ಮುಡಿಗೇರಿತ್ತು.
ಕೆ.ಶಿವರಾಮ್ ಐಎಎಸ್ ಅಧಿಕಾರಿಯಾಗಿರುವುದನ್ನು ಕಂಡ ಹಲವರು ತಮ್ಮ ಮಕ್ಕಳಿಗೆ ಶಿವರಾಮ್ ಅವರ ರೀತಿ ನೀವು ಐಎಎಸ್ ಆಗಿ ಎಂದು ಹೇಳುತ್ತಿದ್ದರು. ಜೊತೆಗೆ ಹಲವಾರು ವಿದ್ಯಾರ್ಥಿಗಳಿಗೆ ಶಿವರಾಮ್ ಅವರ ರೀತಿ ಕನ್ನಡದಲ್ಲೇ ನಾವು ಸಾಧನೆ ಮಾಡಬೇಕು ಎಂಬ ಸ್ಪೂರ್ತಿಯೂ ಹುಟ್ಟಿತ್ತು.
ಇದರಿಂದ ಹಲವಾರು ವಿದ್ಯಾರ್ಥಿಗಳು ಪದವಿ ಓದುವ ಸಂದರ್ಭದಲ್ಲಿ ಐಚ್ಛಿಕ ಕನ್ನಡವನ್ನೇ ತೆಗೆದುಕೊಂಡು ನಾವು ಐಎಎಸ್ ಮಾಡಬೇಕು ಎಂದು ಓದುತ್ತಿದರು. ಐಚ್ಛಿಕ ಕನ್ನಡ ವಿಷಯ ತೆಗೆದುಕೊಂಡ ಹಲವಾರು ವಿದ್ಯಾರ್ಥಿಗಳು ಐಎಎಸ್ ಮಾಡದಿದ್ದರೂ ಕನ್ನಡ ಶಿಕ್ಷಕರು, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಲವರ ಕಂಬನಿ: ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ. ಮೈಸೂರಿನ ಆಶೋಕಪುಂ ಯುವಕರು ಅಶೋಕ ವೃತ್ತದಲ್ಲಿ ಅವರ ಭಾವಚಿತ್ರವಿಟ್ಟು ಶ್ರದ್ಧಾಂಜಲಿ ಸಲ್ಲಿಸಿದರು.
ಕೆ.ಶಿವರಾಮ್ ಅವರು ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ತಿಳಿದು ಮನಸಿಗೆ ತುಂಬಾ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿಸಿಗಲಿ, ಅವರ ಕುಟುಂಬಸ್ಥರಿಗೆ ಅವರ ಪಾರ ಅಭಿಮಾನಿಗಳಿಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದ್ದಾರೆ.
ಮಾಜಿ ಮೇಯರ್ಗಳಾದ ಪುರು ಷೋತ್ತಮ್, ನಾರಾಯಣ್, ದಲಿತ ಮುಖಂ ಡರಾದ ಬೆಟ್ಟಯ್ಯ ಕೋಟೆ, ಶಂಭುಲಿಂಗಸ್ವಾಮಿ, ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಲೇಖಕ ಸಿದ್ದಸ್ವಾಮಿ, ಮುಖಂಡ ಭರತ್ ರಾಮಸ್ವಾಮಿ, ಮುಡಾ ಮಾಜಿ ಸದಸ್ಯ ಶಿವಕುಮಾರ್ ಹಲವರು ಸಂತಾಪ ಸೂಚಿಸಿದ್ದಾರೆ.
ಪೌರಕಾರ್ಮಿಕರ ಮಕ್ಕಳ ಏಳಿಗೆಗೆ ಸದಾ ಕಾಲ ಮಿಡಿಯುತ್ತಿದ್ದವರು ಶಿವರಾಮ್ ಸಾಹೇಬರು. ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ. ಪೌರಕಾರ್ಮಿಕರ ಮಕ್ಕಳಿಗೆ ಶೇ.೧೮ರಷ್ಟು ಯೋಜನೆಯಡಿ ಶಾಲಾ ಬ್ಯಾಗ್, ಸಮವಸ್ತ್ರ, ಪುಸ್ತಕಗಳನ್ನು ನೀಡಿ ಅವರು ವಿದ್ಯಾವಂತರಾಗಬೇಕು ಎಂದು ಬಯಸುತ್ತಿದ್ದರು. ಇವರ ನಿಧನ ತುಂಬಲಾರದ ನಷ್ಟ.
-ನಾರಾಯಣ್, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ
ಕೆ.ಶಿವರಾಮ್ ದಲಿತ ಸಮುದಾಯಕ್ಕೆ ಮಾದರಿ ವ್ಯಕ್ತಿ. ಅವರು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ವೇಳೆ ಹಲವು ಜನಪರ ಕೆಲಸಗಳನ್ನು ಮಾಡಿದ್ದಾರೆ. ಮಳಲವಾಡಿಯಲ್ಲಿ ಕೆ.ಶಿವರಾಮ್ ಬಡಾವಣೆ ಎಂದೇ ಅಲ್ಲಿನ ಜನರು ಹೆಸರಿಟ್ಟಿದ್ದಾರೆ. ಇವರು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದ ವೇಳೆ ದಲಿತ ಹೆಣ್ಣು ಮಕ್ಕಳಿಗೆ ಉಚಿತ ನರ್ಸಿಂಗ್ ತರಬೇತಿ ನೀಡಿ ಹಲವು ಹೆಣ್ಣು ಮಕ್ಕಳಿಗೆ ಬೆಳಕಾಗಿದ್ದಾರೆ. ದಲಿತರಿಗೆ ಗಗನಸಖಿ ತರಬೇತಿಗೂ ಉತ್ತೇಜನ ನೀಡಿದ್ದಾರೆ.
_-ಪುರುಷೋತ್ತಮ್, ಮಾಜಿ ಮೇಯರ್