ಕೊಡ್ಲಿಪೇಟೆಯ ನಂದಿಪುರ ಕೆರೆಗೆ ಆಧುನಿಕ ಸ್ಪರ್ಶ
ಮಡಿಕೇರಿ: ಕೊಡಗು ಜಿಲ್ಲೆಯ ಕೊಡ್ಲಿಪೇಟೆ ಗ್ರಾಪಂಗೆ ಸೇರಿದ ನೂರಾರು ವರ್ಷಗಳ ಹಿಂದಿನ ನಂದಿಪುರ ಕೆರೆಯನ್ನು ‘ಎ’ ಶ್ರೇಣಿಯ ವ್ಯವಸ್ಥೆಯಡಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.
ನಂದಿಪುರ ಕೆರೆ ಸುತ್ತಮುತ್ತಲಿನ ರೈತರ ನೂರಾರು ಎಕರೆ ಕೃಷಿ ಜಮೀನಿಗೆ ನೀರು ಒದಗಿಸುತ್ತಿದ್ದು, ೪.೫೦ ಎಕರೆ ವಿಸ್ತೀರ್ಣ ಹೊಂದಿದೆ. ಬಹಳಷ್ಟು ವರ್ಷಗಳಿಂದ ಈ ಕೆರೆಯಲ್ಲಿ ತುಂಬಿದ್ದ ಹೂಳನ್ನು ಹಿಂದಿನ ಸರಕಾರದ ಅವಧಿಯಲ್ಲಿ ತೆಗೆಯಲಾಗಿತ್ತು. ಇದೀಗ ೩.೮೦ ಕೋಟಿ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೆರೆಗೆ ಆಧುನಿಕ ಸ್ಪರ್ಶ ನೀಡಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ಉದ್ಘಾಟನೆಗೆ ಸಜ್ಜಾಗಿದೆ. ಕೊಡ್ಲಿಪೇಟೆ ಮೂಲ ನಿವಾಸಿಯಾಗಿರುವ ಈಗ ಬೆಂಗಳೂರಿನ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಹಾಗೂ ಕೊಡ್ಲಿಪೇಟೆ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮತ್ತು ರಾಜಕಾರಣಿ ಎಚ್.ಎಸ್.ಚಂದ್ರಮೌಳಿ ಅವರು ತನ್ನೂರಿನ ಕೆರೆಯನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಒಳಗೊಂಡ ಪ್ರಸ್ತಾವವನ್ನು ಸಿದ್ಧಪಡಿಸಿ ಮನವಿಯನ್ನು ಹಿಂದಿನ ಸರಕಾರದ ಅವಧಿಯಲ್ಲಿ ಅಂದಿನ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಯವರಿಗೆ ಸಲ್ಲಿಸಿದ್ದರು. ಸಚಿವರು ಸ್ಪಂದಿಸಿ ಮಂಜೂರಾತಿ ನೀಡಿ ಸಹಕರಿಸಿದ್ದರು.
ನಂತರ ಈಗಿನ ಸರಕಾರದ ಸಣ್ಣ ನೀರಾವರಿ ಇಲಾಖೆಯ ಸಚಿವ ಬೋಸರಾಜ್ ಅವರ ಗಮನಕ್ಕೆ ತಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡರ ಸಹಕಾರದೊಂದಿಗೆ ಯೋಜನೆಗೆ ಹಣಕಾಸು ಮಂಜೂರಾತಿ ಮಾಡಿಸಿದ್ದರು. ಅದರಂತೆ ಸಣ್ಣ ನೀರಾವರಿ ಇಲಾಖೆ ಕೆರೆ ಅಭಿವೃದ್ಧಿಗೆ ೩.೮೦ ಕೋಟಿ ರೂ. ಬಿಡುಗಡೆ ಮಾಡಿತ್ತು. ಈಗ ಕೆರೆ ಅಭಿವೃದ್ಧಿ ಕಾಮಗಾರಿಯು ಮುಕ್ತಾಯ ಹಂತಕ್ಕೆ ಬಂದಿದೆ. ಸದ್ಯದಲ್ಲೇ ಕೆರೆಯನ್ನು ಲೋಕಾರ್ಪಣೆಗೊಳಿಸಲಾಗುತ್ತದೆ.
ನಾಗರಿಕರು ಬೆಳಗ್ಗೆ ಸಂಜೆ ವಾಕಿಂಗ್ ಹೋಗಲು ಮತ್ತು ವಿಶ್ರಾಂತಿಪಡೆಯಲು ವ್ಯವಸ್ಥೆ ಇರಲಿಲ್ಲ. ನಂದಿಪುರ ಕೆರೆಯನ್ನು ಅಭಿವೃದ್ಧಿ ಪಡಿಸಿ ಉದ್ಯಾನವನದಲ್ಲಿ ಜನರಿಗೆ ವ್ಯವಸ್ಥೆ ಮಾಡಿಕೊಡುವ ಉದ್ದೇಶದಿಂದ ಈ ಕುರಿತು ಯೋಜನೆಗಳನ್ನೊಳಗೊಂಡ ಪ್ರಸ್ತಾವವನ್ನು ಸಲ್ಲಿಸಲಾಗಿತ್ತು. ಹಿಂದಿನ ಸರಕಾರದ ಸಚಿವರು ಪ್ರಸ್ತಾವಕ್ಕೆ ಸ್ಪಂದಿಸಿ ಸಹಕಾರ ನೀಡಿದ್ದರು. ನಂತರ ಈಗಿನ ಸಚಿವ ಬೋಸರಾಜ್, ಶಾಸಕ ಡಾ.ಮಂತರ್ ಗೌಡ ಮತ್ತು ಸ್ಥಳೀಯರ ಸಹಕಾರದಿಂದ ಸಣ್ಣ ನೀರಾವರಿ ಇಲಾಖೆಯಿಂದ ನಾವು ನೀಡಿದ್ದ ಯೋಜನೆಯ ಪ್ರಕಾರದಂತೆ ಕೆರೆಯನ್ನು ಅಭಿವೃದ್ಧಿ ಪಡಿಸಲಾಗಿದೆ.
-ಎಚ್.ಎಸ್.ಚಂದ್ರಮೌಳಿ, ಹಿರಿಯ ವಕೀಲ, ಬೆಂಗಳೂರು
ಕೊಡ್ಲಿಪೇಟೆ ಭಾಗದಲ್ಲಿ ಉದ್ಯಾನವನ ನಿರ್ಮಿಸಲು ಸೂಕ್ತ ಸ್ಥಳಗಳ ಕೊರತೆ ಇತ್ತು. ಈಗ ನಮ್ಮೂರಿನ ನಂದಿಪುರ ಕೆರೆಯನ್ನು ಪ್ರೇಕ್ಷಣೀಯ ಸ್ಥಳಗಳಂತೆ ಅಭಿವೃದ್ಧಿ ಪಡಿಸಿರುವುದು ನಮ್ಮ ಭಾಗದ ಜನರಿಗೆ ಅತೀವ ಸಂತಸ ತಂದಿದೆ. ಸುಂದರ ಉದ್ಯಾನವನ ನಿರ್ಮಿಸಲು ಪ್ರಮುಖ ಕಾರಣಕರ್ತರಾದ ಚಂದ್ರಮೌಳಿ ಅವರಿಗೆ ಹಾಗೂ ಸಹಕರಿಸಿದ ಸಚಿವರು ಮತ್ತು ಶಾಸಕರಿಗೆ ಅಭಾರಿಯಾಗಿದ್ದೇವೆ.
-ಬಿ.ಕೆ.ಯತೀಶ್, ನಿರ್ದೇಶಕ ಪ್ರಾ.ಕ್ರ.ಪ.ಸ. ಸಂಘ ಕೊಡ್ಲಿಪೇಟೆ
ನಮ್ಮ ಗ್ರಾಪಂಗೆ ಸೇರಿದ ನಂದಿಪುರ ಕೆರೆಯನ್ನು ‘ಎ’ ಶ್ರೇಣಿಯ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿರುವುದು ನಮ್ಮ ಭಾಗದ ಜನರಿಗೆ ಹೆಮ್ಮೆಯ ವಿಷಯ. ಈಗ ನಮ್ಮೂರಿನ ಪ್ರೇಕ್ಷಣೀಯ ಸ್ಥಳವಾಗುತ್ತಿರುವುದು ಸಂತಸ ತಂದಿದೆ. ಮುಂದೆ ಸಣ್ಣ ನೀರಾವರಿ ಇಲಾಖೆಯು ಗ್ರಾಪಂಗೆ ಹಸ್ತಾಂತರ ಮಾಡಿದ ನಂತರ ಎಲ್ಲ ಸದಸ್ಯರುಗಳ ಸಹಕಾರದೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಸೂಸುತ್ರವಾಗಿ ನಿರ್ವಹಣೆ ಮಾಡುತ್ತೇವೆ.
-ಗೀತಾ ತ್ಯಾಗರಾಜ್, ಅಧ್ಯಕ್ಷೆ, ಕೊಡ್ಲಿಪೇಟೆ ಗ್ರಾಪಂ
3.80 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
ಸುತ್ತ ಉದ್ಯಾನವನ, ವಾಯುವಿಹಾರ ಟ್ರ್ಯಾಕ್, ವಿಶ್ರಾಂತಿ ಧಾಮ, ಉದ್ಯಾನವನದಲ್ಲಿ ಕಾರಂಜಿ ನಿರ್ಮಾಣ, ಮಕ್ಕಳಿಗೆ ಆಟ ಆಡಲು ವ್ಯವಸ್ಥೆ, ಬಣ್ಣಬಣ್ಣದ ವಿದ್ಯುತ್ ದೀಪದ ವ್ಯವಸ್ಥೆ, ಕೆರೆ ಸುತ್ತ ತಡೆ ಬೇಲಿ ನಿರ್ಮಾಣ ಇನ್ನೂ ಮುಂತಾದ ವ್ಯವಸ್ಥೆಯಡಿಯಲ್ಲಿ ನಂದಿಪುರ ಕೆರೆಯನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗಿದೆ.