ನಾರಾಯಣಗುರು ಪ್ರತಿಪಾದಿಸಿದ್ದು ಸನಾತನ ಧರ್ಮವನ್ನಲ್ಲ
ಒಂದೆಡೆ ಸಾಮಾಜಿಕವಾದ ಮೂಢನಂಬಿಕೆಗಳು ಮತ್ತು ಅನಾಚಾರಗಳ ವಿರುದ್ಧದ ಹೋರಾಟ. ಮತ್ತೊಂದೆಡೆ ಮದ್ಯಪಾನ ದಂಥ ದುರಭ್ಯಾಸಗಳ ವಿರುದ್ಧದ ಆಂದೋಲನ. ಇವೆರಡಷ್ಟೇ ಅಲ್ಲದೆ ಶಿಕ್ಷಣ ಮತ್ತು ಸ್ವಾವಲಂಬನೆಗಾಗಿ ಪ್ರಯತ್ನ. ಈ ಮೂರೂ ಹೋರಾಟದ ಹಾದಿಗಳನ್ನು ಸಮನ್ವಯಿಸಿದವರು ಶ್ರೀನಾರಾಯಣ ಗುರುಗಳು. ಇದನ್ನು ಗಮನಿಸದೆ ಗುರುಗಳನ್ನು ಕೇವಲ ಆಧ್ಯಾತ್ಮಿಕ ಸಾಧನೆಗೆ ಸೀಮಿತಗೊಳಿಸಬಾರದು.
ಶಿವಗಿರಿ ತೀರ್ಥಯಾತ್ರೆಯ ಭಾಗವಾಗಿ ನಡೆಯುತ್ತಿರುವ ಮಹಾಸಮ್ಮೇಳನದ ಉದ್ಘಾಟನೆ ಇಂದಿಲ್ಲಿ ನಡೆಯುತ್ತಿದೆ. ಶ್ರೀನಾರಾಯಣ ಗುರುಗಳ ಸ್ಮರಣೆಗೆ ಪ್ರಣಾಮಗಳು.
ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಸುಧಾರಣೆಗೆ ಸಂಬಂಧಿಸಿದ ಬಹುಮುಖ್ಯ ಸಂದೇಶವೊಂದು ಆದರಣೀಯ ಸಚ್ಚಿದಾನಂದ ಸ್ವಾಮಿಗಳಿಂದ ಬಂದಿದೆ. ಅಂಗಿಯನ್ನು ತೆಗೆದ ಮೇಲಷ್ಟೇ ದೇವಾಲಯಗಳೊಳಕ್ಕೆ ಪ್ರವೇಶಿಸಬೇಕು ಎಂಬ ನಿಬಂಧನೆಗೆ ಕಾಲಕ್ಕೆ ಅನುಗುಣವಾದ ಬದಲಾವಣೆ ಬೇಕು ಎಂಬ ಪ್ರಸ್ತಾಪವೊಂದನ್ನು ನಾರಾಯಣ ಗುರುಗಳ ಸತ್ಪರಂಪರೆಯನ್ನು ಎತ್ತಿಹಿಡಿದೇ ಸಚ್ಚಿದಾನಂದ ಸ್ವಾಮಿಗಳು ಸಮಾಜದ ಮುಂದಿಟ್ಟಿದ್ದಾರೆ. ಈ ಸಲಹೆ ಬಹುಮುಖ್ಯವಾದ ಸಾಮಾಜಿಕ ಸುಧಾರಣೆಯಾಗುವ ಸಾಧ್ಯತೆಯನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ನಮ್ಮ ಅನೇಕ ದೇಗುಲಗಳು ಈ ಹಾದಿಯನ್ನು ಅನುಸರಿಸುತ್ತವೆ ಎಂಬುದು ಖಚಿತ. ಯಾರನ್ನೂ ಒತ್ತಾಯಿಸಬೇಕಾದ ಅಗತ್ಯವಿಲ್ಲ. ಆದರೆ ನಮ್ಮ ನಾಡಿನಲ್ಲಿ ಈ ಬಗೆಯ ಅನೇಕ ಸಂಪ್ರದಾಯಗಳು ಕಾಲಕ್ಕನುಗುಣವಾಗಿ ಬದಲಾಗಿವೆ ಎಂಬುದು ವಾಸ್ತವ. ಈ ಬದಲಾವಣೆಗೆ ನೇತೃತ್ವ ನೀಡುವ ಕೆಲಸ ಶಿವಗಿರಿ ಮಠದ ಕಡೆಯಿಂದ ನಡೆದಿದೆ. ಶ್ರೀನಾರಾಯಣ ಗುರುಗಳೊಂದಿಗೆ ಸಂಬಂಧವಿರುವ ಎಲ್ಲಾ ದೇವಾಲಯಗಳೂ ಈ ಹೊಸ ಮಾದರಿಯನ್ನು ಅನುಸರಿಸಬೇಕೆಂದು ಸಚ್ಚಿದಾನಂದ ಸ್ವಾಮಿಗಳು ಹೇಳಿದ್ದಾರೆ. ಆದರೆ, ಇದು ಕೇವಲ ಗುರುಗಳೊಂದಿಗೆ ಸಂಬಂಧ ವಿರುವ ದೇಗುಲಗಳಿಗೆ ಸೀಮಿತವಾಗಬೇಕಿಲ್ಲ. ಇತರ ದೇವಾಲಯಗಳೂ ಈ ಮಾದರಿಯನ್ನು ಅನುಸರಿಸಬಹುದು ಎಂಬ ನಿರೀಕ್ಷೆಯಿದೆ.
ಕೇರಳ ನವೋದಯ ಚರಿತ್ರೆಯ ಪ್ರಮುಖ ಘಟನೆಗಳಾದ ವೈಕಂ ಸತ್ಯಾಗ್ರಹ, ಆಲುವ ಸರ್ವಧರ್ಮ ಸಮ್ಮೇಳನ ಮುಂತಾದುವುಗಳ ಶತಮಾನೋತ್ಸವ ಘಟ್ಟವಿದು. ಈ ಚಾರಿತ್ರಿಕ ಘಟನೆಗಳು ಮುಂದಿಟ್ಟ ಆಶಯಗಳು ಮತ್ತು ಅವುಗಳ ಹಿನ್ನೆಲೆಯಲ್ಲಿ ಒಂದು ಶತಮಾನದ ಹಿಂದೆಯೇ ಗುರುಗಳು ಬೋಧಿಸಿದ ವಿಚಾರಗಳೆಲ್ಲವೂ ಹೆಚ್ಚು ಪ್ರಸ್ತುತವಾಗುತ್ತಿರುವ ಹೊತ್ತಿನಲ್ಲಿ ಈ ಬಾರಿಯ ಶಿವಗಿರಿ ತೀರ್ಥಯಾತ್ರೆ ನಡೆಯುತ್ತಿದೆ.
ಜಗತ್ತಿನ ಹಲವೆಡೆ ಮತ ಸಂಬಂಧಿ ಚಿಂತನೆಗಳು ಉಗ್ರವಾದ ಮತ್ತು ಅದನ್ನೂ ದಾಟಿ ಭಯೋತ್ಪಾದಕತೆಯ ಕಡೆಗೆ ಸಾಗುತ್ತಿರುವ ವರದಿಗಳು ನಿತ್ಯವೂ ಹೊರಬರುತ್ತಿವೆ. ಜನಾಂಗೀಯ ಭೇದ ಮತ್ತು ಅದು ಸೃಷ್ಟಿಸುವ ಸಂಘರ್ಷದಿಂದ ಜಗತ್ತಿನ ಹಲವು ಭಾಗಗಳಲ್ಲಿ ನೆತ್ತರ ಹೊಳೆ ಹರಿಯುತ್ತಿದೆ. ಈ ಜನಾಂಗೀಯ ಭೇದದ ಜ್ವಾಲೆಗಳಿಂದ ತಪ್ಪಿಸಿಕೊಳ್ಳಲು ಜನರು ಸಾಮೂಹಿಕವಾಗಿ ಗುಳೆ ಎದ್ದು ಹೋಗಬೇಕಾಗಿ ಬಂದಿದೆ. ಇದರಿಂದಾಗಿ ಎಲ್ಲೆಡೆಯೂ ಸೋರಿ ಹೋಗುತ್ತಿರುವುದು ಮಾನವೀಯತೆ. ಇಂದು ಫೆಲೆಸ್ತೀನ್, ಅಫ್ಘಾನಿಸ್ತಾನ, ಮಣಿಪುರ ಅಥವಾ ಮತ್ತೆಲ್ಲೋ ನಡೆಯುತ್ತಿರುವ ಜನಾಂಗೀಯ ಸಂಘರ್ಷಗಳು ಗಾಯಗೊಳಿಸುತ್ತಿರುವುದು ಮಾನವೀಯತೆಯನ್ನು ಎಂಬ ಅಂಶವನ್ನು ನಾವು ಮನಗಾಣಬೇಕಿದೆ.
ಹೀಗೆ ಸೋರಿ ಹೋಗುತ್ತಿರುವ ಮಾನವೀಯತೆಯನ್ನು ಮತ್ತೆ ಮನುಷ್ಯರೊಳಕ್ಕೆ ತುಂಬಿಸಲು ಇರುವ ದಾರಿ ಯಾವುದು ಎಂದು ಆಲೋಚಿಸಿದರೆ ನಾರಾಯಣ ಗುರು ಸಂದೇಶಗಳ ಪ್ರಸ್ತುತತೆ ನಮಗೆ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತದೆ. ಜಾತಿ, ಮತ ಮತ್ತು ಜನಾಂಗದ ಹೆಸರಿನಲ್ಲಿ ಅಕ್ರಮವೆಸಗುತ್ತಿರುವವರಿಗೆ ಹಲವು ಮತಗಳ ಸಾರವೂ ಒಂದೇ ಎಂಬ ಗುರು ಸಂದೇಶವನ್ನು ತಲುಪಿಸಲು ಸಾಧ್ಯವಾದರೆ ಅದು ಬಹುದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. ‘ಕೊಲ್ಲುವುದು ಹೇಗೆ ಜೀವಿಗಳ’ ಎಂಬ ಗುರುಗಳ ಕಾವ್ಯದ ಸಾಲು ಪ್ರತಿಪಾದಿಸುವ ಸಂದೇಶವನ್ನು ಎಲ್ಲರಿಗೂ ತಲುಪಿಸಲು ಸಾಧ್ಯವಾಗಿದ್ದರೆ? ‘ಮತ ಯಾವುದಾದರೂ ಮನುಷ್ಯ ಒಳ್ಳೆಯವನಾದರೆ ಸಾಕು’ ಎಂಬ ಗುರುವಚನದ ಬೆಳಕನ್ನು ತಲುಪಿಸಲು ಸಾಧ್ಯವಾಗಿದ್ದರೆ? ‘ಮನುಷ್ಯಾಣಾಂ ಮನುಷ್ಯತ್ವಂ ಜಾತಿ’ ಅರ್ಥಾತ್ ಮನುಷ್ಯತ್ವವೇ ಮಾನವನ ಜಾತಿ ಎಂಬ ಗುರುಸಂದೇಶವನ್ನು ತಲುಪಿಸಲು ಸಾಧ್ಯವಾಗಿದ್ದರೆ? ಅದು ಕ್ರೌರ್ಯವನ್ನು ಮಾನವೀಯತೆಯ ಮೂಲಕ ಎದುರಿಸುವ ಮಾದರಿಯಾಗುತ್ತಿತ್ತು. ಕೋಮು ಮತ್ತು ಜನಾಂಗೀಯ ದ್ವೇಷಗಳನ್ನೂ ಅವುಗಳು ಸೃಷ್ಟಿಸುವ ನರಮೇಧಗಳನ್ನೂ ನಿವಾರಿಸುವ ಹಾದಿಯಾಗುತ್ತಿತ್ತು.
ಇದರಿಂದಾಗಿಯೇ ಗುರುಸಂದೇಶಗಳಿಗೆ ಸಾರ್ವಲೌಕಿಕವೂ ಸಾರ್ವಕಾಲಿಕವೂ ಆದ ಪ್ರಸ್ತುತತೆ ಇದೆ. ಗುರುಗಳು ಬಾಳಿ ಮಾನವೀಯತೆಯನ್ನು ಪಸರಿಸಿದ ಮಣ್ಣು ಇಲ್ಲಿನದ್ದು. ಅದರಿಂದಾಗಿಯೇ ಕೇರಳದಲ್ಲಿ ಜನಾಂಗೀಯ ದ್ವೇಷವೆಂಬ ಬೆಂಕಿ ಭೀಕರವಾಗಿ ಹರಡಲಿಲ್ಲ. ಗುರುಗಳ ಸಂದೇಶವನ್ನು ವಿಶ್ವವ್ಯಾಪಿಯಾಗಿಸಲು ಶ್ರಮಿಸುವ ಅಗತ್ಯವಿದೆ. ಇತ್ತೀಚೆಗಷ್ಟೇ ಆಲುವಾ ಸರ್ವಧರ್ಮ ಸಮ್ಮೇಳನದ ಶತಮಾನೋತ್ಸವವನ್ನು ರೋಮ್‌ನಲ್ಲಿ ಆಚರಿಸಲಾಯಿತು. ಈ ಸಮಾರಂಭದಲ್ಲಿ ಪೋಪ್ ಪಾಲ್ಗೊಂಡದ್ದು ಅತ್ಯಂತ ಶ್ಲಾಘನೀಯ ಸಂಗತಿ. ಶಿವಗಿರಿ ತೀರ್ಥಯಾತ್ರೆಯು ಈ ಬಗೆಯ ಪ್ರಯತ್ನಗಳಿಗೆ ಶಕ್ತಿ ತುಂಬುವಂಥದ್ದಾಗಬೇಕು.
ಶ್ರೀನಾರಾಯಣ ಗುರುಗಳನ್ನು ಸನಾತನ ಧರ್ಮದ ವಕ್ತಾರರನ್ನಾಗಿಯೂ ಪ್ರತಿಪಾದಕರನ್ನಾಗಿಯೂ ಬಿಂಬಿಸುವ ಸಂಘಟಿತ ಪ್ರಯತ್ನವೊಂದು ಈಗ ನಡೆಯುತ್ತಿದೆ. ಈ ಶಿವಗಿರಿ ತೀರ್ಥಯಾತ್ರಾ ಸಮ್ಮೇಳನದಲ್ಲಿಯೂ ಭಾಷಣಕಾರರೊಬ್ಬರು ಇಂಥದ್ದೊಂದು ವಾದವನ್ನು ಮಂಡಿಸಿದರು. ಗುರುಗಳು ಶಿವಗಿರಿ ತೀರ್ಥಯಾತ್ರೆಯ ಪರಿಕಲ್ಪನೆಯನ್ನು ರೂಪಿಸಿದಾಗಲೇ ಇದನ್ನೊಂದು ಸಂವಾದದ ವೇದಿಕೆಯನ್ನಾಗಿಯೂ ಕಲ್ಪಿಸಿಕೊಂಡಿದ್ದರು. ಆದ್ದರಿಂದ ಗುರುಗಳನ್ನು ಸನಾತನ ಧರ್ಮದ ವಕ್ತಾರ ಮತ್ತು ಪ್ರತಿಪಾದಕರನ್ನಾಗಿ ಬಿಂಬಿಸುವ ಸುಳ್ಳುವಾದಗಳನ್ನು ಈ ವೇದಿಕೆಯಲ್ಲೇ ತಿದ್ದಬೇಕಾದ ಅಗತ್ಯವಿದೆ ಎಂದು ಭಾವಿಸುತ್ತೇನೆ.
ಶ್ರೀನಾರಾಯಣ ಗುರುಗಳು ಸನಾತನ ಧರ್ಮದ ವಕ್ತಾರರೋ ಪ್ರತಿಪಾದಕರೋ ಆಗಿರಲಿಲ್ಲ. ಬದಲಾಗಿ ಅವರು ಸನಾತನ ಧರ್ಮವನ್ನು ಒಡೆದು ಮರು ಎರಕ ಹೊಯ್ದು ಹೊಸ ಕಾಲದ ನವಯುಗ ಧರ್ಮವನ್ನು ಅನಾವರಣಗೊಳಿಸಿದ ಸನ್ಯಾಸಿವರ್ಯ ರಾಗಿದ್ದಾರೆ. ಸನಾತನ ಧರ್ಮವೆಂಬ ಪರಿಕಲ್ಪನೆಯು ಸೂಚಿಸುವ ಅರ್ಥವಾದರೂ ಏನು? ಅದು ವರ್ಣಾಶ್ರಮ ಧರ್ಮವಲ್ಲದೆ ಮತ್ತೇನೂ ಅಲ್ಲ. ಈ ವರ್ಣಾಶ್ರಮ ಧರ್ಮಕ್ಕೆ ಸವಾಲೊಡ್ಡಿಯೂ ಅದರ ಪರಿಮಿತಿಗಳನ್ನೂ ದಾಟಿಯೂ ಕಾಲಕ್ಕೆ ಅನುಗುಣವಾಗಿ ನಿಲ್ಲುವಂಥದ್ದು ಗುರುಗಳು ಪ್ರತಿಪಾದಿಸಿದ ನವಯುಗ ಮಾನವ ಧರ್ಮ.
ಮತಗಳು ನಿರ್ವಚಿಸಿಟ್ಟ ಧರ್ಮವಲ್ಲ ಗುರುಗಳು ಪ್ರತಿಪಾದಿಸಿದ ನವಯುಗ ಧರ್ಮ. ‘ಮತ ಯಾವುದಾದರೂ ಮನುಷ್ಯ ಒಳ್ಳೆಯವನಾದರೆ ಸಾಕು’ ಎಂದು ನಾರಾಯಣ ಗುರುಗಳು ಹೇಳುವ ತನಕ ಯಾವುದಾದರೊಂದು ಮತ ಪ್ರತಿಪಾದಿಸಿತ್ತೇ? ಇಲ್ಲ, ಸರ್ವ ಮತಗಳ ಸಾರವೂ ಒಂದು ಎಂದು ಯಾವುದಾದರೂ ಮತ ಹೇಳಿತ್ತೇ? ಇಲ್ಲ, ಇದೇ ಎಲ್ಲವನ್ನೂ ಸ್ಪಷ್ಟಪಡಿಸುತ್ತದೆಯಲ್ಲವೇ? ಮತಾತೀತವಾದ ಮಾನವತ್ವದ ಸಾರವನ್ನು ಒಳಗೊಂಡ ಜೀವಪರವಾದ ವಿಶ್ವದರ್ಶನವನ್ನು ಗುರುಗಳು ಎತ್ತಿಹಿಡಿದರು. ಅದನ್ನು ಸನಾತನ ತತ್ವದ ಚೌಕಟ್ಟಿನೊಳಗೆ ಸೇರಿಸುವ ಪ್ರಯತ್ನವು ಬಹು ದೊಡ್ಡ ಗುರುನಿಂದನೆಯೇ ಸರಿ.
ಸನಾತನ ಧರ್ಮ ಎಂಬುದಕ್ಕೆ ಸಮಾನಾರ್ಥಕವಾಗಿರುವುದು ಅಥವಾ ಅದರ ಅವಿಭಾಜ್ಯ ಅಂಗವಾಗಿರುವುದೇ ವರ್ಣಾಶ್ರಮ ಧರ್ಮ. ಅಂದರೆ ಚಾತುರ್ವರ್ಣದ ನಿಯಮಗಳಿಗೆ ಬದ್ಧವಾಗಿರುವ ವರ್ಣಾಶ್ರಮ ಧರ್ಮ. ಅದು ಎತ್ತಿ ಹಿಡಿದದ್ದು ಏನನ್ನು, ಕುಲಕಸುಬನ್ನು! ಶ್ರೀನಾರಾಯಣ ಗುರುಗಳಾದರೋ ಕುಲಕಸುಬನ್ನು ಧಿಕ್ಕರಿಸಬೇಕೆಂಬ ಕರೆ ನೀಡಿದರು. ಹಾಗಿರುವಾಗ ಗುರುಗಳು ಹೇಗೆ ಸನಾತನ ಧರ್ಮದ ವಕ್ತಾರರಾಗುತ್ತಾರೆ? ಚಾತುರ್ವರ್ಣ್ಯ ವ್ಯವಸ್ಥೆಯನ್ನು ಪ್ರಶ್ನಿಸುವುದು ಮತ್ತು ಅದನ್ನು ಧಿಕ್ಕರಿಸಿ ನಿಲ್ಲುವುದೇ ಅವರ ಸನ್ಯಾಸ ಜೀವನವಾಗಿತ್ತು. ‘ಒಂದೇ ಜಾತಿ. ಒಂದೇ ಮತ, ಒಂದೇ ದೈವ ಮನುಜ’ಗೆ ಎಂದು ಘೋಷಿಸಿದ ಗುರುಗಳು, ಹೇಗೆ ಒಂದೇ ಮತದ ಪರಿಮಿತಿಯೊಳಗೆ ರೂಪತಳೆದ ಸನಾತನ ಧರ್ಮದ ವಕ್ತಾರನಾಗಲು ಸಾಧ್ಯ? ಗುರುಗಳು ಪ್ರತಿಪಾದಿಸಿದ್ದು ವರ್ಣವ್ಯವಸ್ಥೆಗೆ ವಿರುದ್ಧವಾಗಿದ್ದ ಧರ್ಮವನ್ನು.
ಸನಾತನ ಧರ್ಮವನ್ನು ಅನುಸರಿಸುವ, ಅದನ್ನು ಸಂಶಯದಿಂದ ಕಾಣುವ ಮತ್ತು ಅದಕ್ಕೆ ಸವಾಲೆಸೆದು ನಿರಾಕರಿಸುವ ಮೂರು ಚಿಂತನಾ ಧಾರೆಗಳು ಭಾರತದಲ್ಲಿ ಹುಟ್ಟಿವೆ. ಇವುಗಳಲ್ಲಿ ಮೂರನೇ ಧಾರೆಯ ಪ್ರತಿನಿಧಿಯಾಗಿದ್ದವರು ಗುರುಗಳು. ಬುಡಕಟ್ಟು ವ್ಯವಸ್ಥೆ ಹಿಂದೆ ಸರಿದು ವರ್ಣವ್ಯವಸ್ಥೆ ಪ್ರಾಮುಖ್ಯ ಪಡೆಯುತ್ತಿದ್ದ ಕಾಲಘಟ್ಟದ ಸಾಂಸ್ಕೃತಿಕ ಉತ್ಪನ್ನವೇ ಮಹಾಭಾರತ. ಆದರೆ ಅದು ಕೂಡಾ ಧರ್ಮ ಯಾವುದು ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಹೇಳದೆ ಸಂದೇಹದ ಪ್ರಶ್ನಾರ್ಥಕ ಚಿಹ್ನೆಯನ್ನು ಮುಂದಿಟ್ಟು ಹಿಂದೆ ಸರಿಯುತ್ತದೆ.
ಧರ್ಮಯುದ್ಧವನ್ನು ನಡೆಸಿದ ಎನ್ನಲಾಗುವ ಧರ್ಮರಾಯ ಸಶರೀರನಾಗಿ ಸ್ವರ್ಗಕ್ಕೆ ಹೋದಾಗ ಅಲ್ಲಿಯ ತನಕವೂ ಅಧರ್ಮ ಯುದ್ಧ ನಡೆಸಿದನೆಂಬ ಆರೋಪಕ್ಕೆ ಗುರಿಯಾದ ದುರ್ಯೋಧನನೂ ಸ್ವರ್ಗದಲ್ಲಿರುವುದನ್ನು ಕಾಣುತ್ತಾನೆ. ಸ್ವರ್ಗಕ್ಕೆ ಹೋಗಲು ಬೇಕಿರುವ ಒಳಿತನ್ನು ಕೌರವರೂ ಮಾಡಿದ್ದಾರೆ ಎಂಬುದನ್ನು ಸೂಚಿಸುವ ಮೂಲಕ ಧರ್ಮದ ಕುರಿತು ಮಹಾಭಾರತವೂ ಸಂದೇಹವನ್ನಷ್ಟೇ ಮುಂದಿಟ್ಟಿದೆಯಲ್ಲವೇ? ಆ ಸಂದೇಹವೇ ಮುಂದೆ ಪ್ರಶ್ನಿಸುವ ಪರಂಪರೆಯಾಗಿ ಬೆಳೆಯಿತು. ಈ ಪ್ರಶ್ನಿಸುವಿಕೆಯನ್ನು ಅತ್ಯಂತ ಸಮರ್ಥವಾಗಿ ನಡೆಸಿದ್ದು ನಾರಾಯಣ ಗುರುಗಳು ಎಂಬುದೇ ಸತ್ಯ.
ಸನಾತನ ಧರ್ಮದ ರಾಷ್ಟ್ರ ಎಂದು ಘೋಷಿಸಿಕೊಂಡು ಮಾರ್ತಾಂಡವರ್ಮ ತಿರುವಿದಾಂಕೂರಿನಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದರು. ಇಂದಿಗೂ ಭಾರತೀಯ ರಾಜಕಾರಣದಲ್ಲಿ ಆಗಾಗ ಮೊಳಗುವ ಘೋಷಣೆಗಳಲ್ಲೊಂದು ಸನಾತನ ಹಿಂದುತ್ವ. ಈ ಘೋಷಣೆ ರಾಜಾಧಿಪತ್ಯ ಮತ್ತು ಜನಾಂಗೀಯಾಧಿಪತ್ಯಗಳೆರಡಕ್ಕೂ ಇಷ್ಟ ಎಂಬುದನ್ನು ಗಮನಿಸಬೇಕಿದೆ. ಸನಾತನ ಹಿಂದುತ್ವ ಎಂಬ ಪರಿಕಲ್ಪನೆಯ ಮೂಲಕ ಇವರು ಸ್ಥಾಪಿಸಲು ಹೊರಟಿರುವುದು ಬ್ರಾಹ್ಮಣಾಧಿಪತ್ಯದ ಹಳೆಯ ರಾಜಾಧಿಪತ್ಯವನ್ನು ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಯಾವ ಸಾಕ್ಷ್ಯ ಬೇಕು? ಇವರಿಗೆ ಪ್ರಜಾಪ್ರಭುತ್ವ ಎಂದರೆ ಅಲರ್ಜಿ ಎಂಬುದಕ್ಕೂ ಇನ್ಯಾವ ಪುರಾವೆಯ ಅಗತ್ಯವಿದೆ?
‘‘ಸನಾತನ ಹಿಂದುತ್ವವೆಂಬುದು ಬಹಳ ಮಹತ್ವವುಳ್ಳ ಮತ್ತು ಹೆಮ್ಮೆಪಡಬೇಕಾದ ಏನೋ ಒಂದು. ಮತ್ತು ಅದನ್ನು ಮರುಸ್ಥಾಪಿಸುವುದು ಎಲ್ಲಾ ಸಾಮಾಜಿಕ ಸಮಸ್ಯೆಗಳಿಗಿರುವ ಏಕೈಕ ಪರಿಹಾರ’’ ಎಂಬ ವಾದವೊಂದು ಬಲಗೊಳ್ಳುತ್ತಿರುವ ಕಾಲವಿದು. ಇದಕ್ಕೆ ಸಮರ್ಥನೆಯಾಗಿ ಅವರು ‘ಲೋಕಾಃ ಸಮಸ್ತಾ ಸುಖಿನೋ ಭವಂತು’ ಎಂದು ಆಶಯವಾಕ್ಯವೊಂದನ್ನು ಎತ್ತಿ ತೋರಿಸುತ್ತಾರೆ. ಇಡೀ ಜಗತ್ತಿಗೆ ಸುಖವು ಲಭಿಸಲಿ ಎಂಬುದು ಈ ವಾಕ್ಯದ ಅರ್ಥ. ಇದನ್ನು ಯಾವ ಕಾರಣಕ್ಕೆ ವಿರೋಧಿಸಬೇಕು? ಇದೊಂದು ಉದಾತ್ತವಾದ ಪರಿಕಲ್ಪನೆಯಲ್ಲವೇ? ಇಡೀ ಜಗತ್ತಿನಲ್ಲಿ ಇಂಥದ್ದೊಂದು ಆಶಯವನ್ನು ಮುಂದಿಟ್ಟದ್ದು ಹಿಂದುತ್ವವಲ್ಲವೇ? ಎಂದೆಲ್ಲಾ ಇವರ ವಾದಗಳು ಸಾಗುತ್ತವೆ.
ಈ ವಾದವನ್ನು ಸತತವಾಗಿ ಮುಂದಿಡುತ್ತಿದ್ದವರು ಈ ಆಶಯ ವಾಕ್ಯದ ಹಿಂದೆ ಇರುವ ಮತ್ತೊಂದು ವಾಕ್ಯವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಾರೆ. ‘ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ’ ಎಂಬುದೇ ಆ ವಾಕ್ಯ. ಅಂದರೆ ಗೋವಿಗಳಿಗೂ ಶುಭವಾಗಲಿ ಎಂದರ್ಥ. ಇದನ್ನೂ ಸೇರಿಸಿಕೊಂಡು ನಾವು ಆಶಯ ವಾಕ್ಯವನ್ನು ಅರ್ಥಮಾಡಿಕೊಂಡರೆ, ದನಗಳಿಗೂ ಬ್ರಾಹ್ಮಣರಿಗೂ ಸುಖವಿದ್ದರೆ ಲೋಕಕ್ಕೇ ಸುಖವೆಂದಾಯಿತು! ಈ ಎರಡೂ ಎಷ್ಟು ಚೆನ್ನಾಗಿ ಬೆಸೆದುಕೊಂಡಿವೆ ನೋಡಿ. ‘ಲೋಕಾಃ ಸಮಸ್ತಾ ಸುಖಿನೋ ಭವಂತು’ ಎಂಬ ಸನಾತನತ್ವದ ಘೋಷಣೆಯೇ ಇಂದಿನ ಗೋವು(ದನ) ಕೇಂದ್ರಿತ, ಬ್ರಾಹ್ಮಣ ಕೇಂದ್ರಿತ ರಾಜಕಾರಣ ಎಂಬುದನ್ನು ಮನಗಾಣಬೇಕಿದೆ.
ಆ ಕಾಲದಲ್ಲಿದ್ದ ಸಾಮಾಜಿಕ ಅಸಮಾನತೆಗಳೆಲ್ಲವೂ ಈಗ ಮಾಯವಾಗಿವೆ ಎಂದು ಭಾವಿಸಲು ಸಾಧ್ಯವೇ? ಅವೆಲ್ಲವೂ ಈಗಲೂ ಹಲವು ರೂಪಗಳಲ್ಲಿ ಅಸ್ತಿತ್ವದಲ್ಲಿವೆ. ಅಂದು ಅವುಗಳಿಗೆ ರಾಜಕೀಯಾಧಿಕಾರದ ರಕ್ಷಣೆಯಿತ್ತು. ಅದೇ ಬಗೆಯ ರಕ್ಷಣೆ ಈ ಕಾಲದಲ್ಲೂ ಇದೆ. ಅದರಿಂದಾಗಿಯೇ ಉತ್ತರಭಾರತದ ಹಳ್ಳಿಗಳಲ್ಲಿ ದಲಿತರು, ಹಿಂದುಳಿದ ವರ್ಗಗಳವರು ಮತ್ತು ಅಲ್ಪಸಂಖ್ಯಾತರು ಹಿಂಸೆಗೆ ಗುರಿಯಾಗಿದ್ದಾರೆ. ಹಿಂಸಕರೆಲ್ಲರೂ ಕಾನೂನಿನ ಕರಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಬಗೆಯ ಹಿಂಸೆ-ಶೋಷಣೆಗಳಿಗೆ ರಕ್ಷಣೆ ನೀಡುವವರ ವಾದವೇ ಸನಾತನ ಧರ್ಮ ವಾದ. ಆ ವಾದ ಅವರಿಗಿರಲಿ. ಆದರೆ ಗುರುಗಳನ್ನು ಆ ವಾದದ ಜೊತೆಗೆ ಸಮೀಕರಿಸಕೂಡದು.
ಸನಾತನ ಧರ್ಮ ಎಂಬುದಕ್ಕೆ ಸಮಾನಾರ್ಥಕವಾಗಿರುವುದು ಅಥವಾ ಅದರ ಅವಿಭಾಜ್ಯ ಅಂಗವಾಗಿರುವುದೇ ವರ್ಣಾಶ್ರಮ ಧರ್ಮ. ಅಂದರೆ ಚಾತುರ್ವರ್ಣದ ನಿಯಮಗಳಿಗೆ ಬದ್ಧವಾಗಿರುವ ವರ್ಣಾಶ್ರಮ ಧರ್ಮ. ಅದು ಎತ್ತಿ ಹಿಡಿದದ್ದು ಏನನ್ನು, ಕುಲಕಸುಬನ್ನು! ಶ್ರೀನಾರಾಯಣ ಗುರುಗಳಾದರೋ ಕುಲಕಸುಬನ್ನು ಧಿಕ್ಕರಿಸಬೇಕೆಂಬ ಕರೆ ನೀಡಿದರು. ಹಾಗಿರುವಾಗ ಗುರುಗಳು ಹೇಗೆ ಸನಾತನ ಧರ್ಮದ ವಕ್ತಾರರಾಗುತ್ತಾರೆ?
ಯಾವುದಾದರೊಂದು ವಿಚಾರವನ್ನು ನಾವು ಅನುಸರಿಸಬೇಕಿದ್ದರೆ ಅದು ಇಡೀ ಜಗತ್ತಿಗೆ ಬೆಳಕನ್ನು ಪಸರಿಸುವಂಥದ್ದೂ, ಮಾನವ ಬದುಕನ್ನು ಉತ್ತಮಪಡಿಸುವಂಥದ್ದೂ ಆಗಿರಬೇಕು. ವಿಚಾರವೊಂದರಿಂದ ಮಾನವ ದುಃಖಿಸಬೇಕಾದ, ಕಷ್ಟಪಡಬೇಕಾದ ಸ್ಥಿತಿಯಿದ್ದರೆ ಅದನ್ನು ದೂರವಿಡಬೇಕಾದುದು ಸಹಜ. ಹೀಗೆ ಎಷ್ಟೆಷ್ಟೋ ವಿಚಾರಗಳು ಕಾಲದ ಜೊತೆಗೆ ನವೀಕರಣಗೊಳ್ಳುತ್ತಾ ಬಂದದ್ದರಿಂದ ವಿಸ್ಮತಿಗೆ ಸರಿದು ಹೋದವು. ಆದರೆ ಶ್ರೀನಾರಾಯಣ ಗುರುಗಳ ವಿಚಾರಗಳು ಅವರು ಬದುಕಿದ್ದ ಸಹಸ್ರಾಬ್ದವನ್ನೂ ದಾಟಿ ಬಂದು ಲೋಕಕ್ಕೆ ಬೆಳಕನ್ನು ಹರಡುತ್ತಿದೆ. ಶ್ರೀನಾರಾಯಣಗುರುಗಳ ಮಹತ್ವವಿರುವುದೇ ಈ ಸಂಗತಿಯಲ್ಲಿ. ಈ ಯುಗಪ್ರಭೆಯಂಥ ವ್ಯಕ್ತಿತ್ವದ ವಿಚಾರಗಳನ್ನು ಒಳಗೊಂಡು ಕೈಗೊಳ್ಳಲಾಗುವ ಶಿವಗಿರಿ ತೀರ್ಥಯಾತ್ರೆಯೂ ಮಹತ್ವವನ್ನು ಪಡೆದುಕೊಂಡಿದೆ.
ಯಾಕಾಗಿ ಶಿವಗಿರಿ ತೀರ್ಥಯಾತ್ರೆ? ಗುರುಗಳಿಗೆ ಈ ವಿಚಾರದಲ್ಲಿ ಸ್ಪಷ್ಟ ಕಲ್ಪನೆಯಿತ್ತು. ಶ್ರೀಬುದ್ಧನ ಅಷ್ಟಾಂಗ ಮಾರ್ಗದಂತೆ ಗುರುಗಳೂ ಎಂಟು ಸಂಗತಿಗಳನ್ನು ಉಪದೇಶಿಸಿದರು. ಶಿಕ್ಷಣ, ಶುಚಿತ್ವ, ಭಕ್ತಿ, ಸಂಘಟನೆ, ಕೃಷಿ, ವ್ಯಾಪಾರ, ಕರಕೌಶಲ, ತಾಂತ್ರಿಕ ತರಬೇತಿ ಎಂಬ ಈ ಎಂಟು ಸಂಗತಿಗಳನ್ನು ಶಿವಗಿರಿಗೆ ಆಗಮಿಸುವ ತೀರ್ಥಯಾತ್ರಿಗಳು ತಮ್ಮ ಗುರಿಯಾಗಿಟ್ಟುಕೊಂಡಿರಬೇಕು ಎಂದು ಗುರುಗಳು ಹೇಳಿದ್ದರ ಹಿಂದೆ ಕೇವಲ ಸ್ವಸಮುದಾಯದ ಅಭಿವೃದ್ಧಿಯಷ್ಟೇ ಇರಲಿಲ್ಲ. ಇಡೀ ಸಮಾಜದ ಅಭಿವೃದ್ಧಿಯ ಗುರಿಯಿತ್ತು ಎಂಬುದು ಸ್ಪಷ್ಟ. ಅರಿವನ್ನು ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬುದನ್ನು ಗುರುಗಳು ಅಂದೇ ಹೇಳಿದ್ದರು. ಅದೆಷ್ಟು ದೊಡ್ಡ ದೂರದೃಷ್ಟಿ ಈ ಮಾತುಗಳಲ್ಲಿದೆ ಎಂಬುದನ್ನು ಗಮನಿಸಬೇಕು.
ಇದೇ ಹಾದಿಯಲ್ಲೇ ನಮ್ಮ ರಾಜ್ಯ ಸಾಗುತ್ತಿದೆ ಎಂದು ನಾನು ಹೆಮ್ಮೆಯಿಂದ ಹೇಳಲು ಇಚ್ಛಿಸುತ್ತೇನೆ. ಶಿಕ್ಷಣ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಏರಿಸಿ, ಕೃಷಿಯ ಸ್ವಾವಲಂಬನೆಯ ಹಾದಿಯಲ್ಲಿ ನಾಡನ್ನು ಕೊಂಡೊಯ್ದು, ಮಾಲಿನ್ಯ ನಿವಾರಣೆಗೆ ವಿಶೇಷ ಆಂದೋಲನಗಳನ್ನು ಆರಂಭಿಸಿ, ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದ ನಡುವಣ ಜೈವಿಕ ಸಂಬಂಧವನ್ನು ಗಟ್ಟಿಗೊಳಿಸುವುದರ ಮೂಲಕ ಗುರುಗಳು ತೋರಿಸಿದ ಹಾದಿಯಲ್ಲಿ ರಾಜ್ಯ ಸರಕಾರವೂ ಮುಂದಡಿಯಿಡುತ್ತಿದೆ.
ಮಾನವೀಯತೆಯ ಮಹಾ ಸಂದೇಶವನ್ನು ಜಗತ್ತಿಗೇ ಹರಡಿದ ತೀರ್ಥಕ್ಷೇತ್ರವೇ ಶಿವಗಿರಿ. ಲೋಕದ ಮತ್ತು ಜನರ ಮನುಸ್ಸುಗಳ ಕತ್ತಲೆ ತುಂಬಿದ ಮೂಲೆಗಳಿಗೆ ಮಾನವ ಪ್ರೇಮದ ಬೆಳಕು ಪಸರಿಸಿದ್ದು ಶಿವಗಿರಿಯಿಂದ. ಆ ಬೆಳಕು ಕಾಲವನ್ನೇ ಬದಲಾಯಿಸಿತು. ಜಾತಿ, ಮತ ಮತ್ತು ಎಲ್ಲಾ ಬಗೆಯ ಜನಾಂಗೀಯ ಭಿನ್ನತೆಗಳಿಗೆ ಅತೀತವಾದ ಮಹತ್ವಪೂರ್ಣ ಆದ ಸಂದೇಶದ ಭಾಗವಾಗುವುದಕ್ಕಾಗಿ ಪ್ರತೀ ವರ್ಷವೂ ಹೆಚ್ಚು ಹೆಚ್ಚು ಜನರು ಶಿವಗಿರಿಗೆ ಬರುತ್ತಾರೆ.
ನಿಜಾರ್ಥದಲ್ಲಿ ಶಿವಗಿರಿ ತೀರ್ಥಯಾತ್ರೆ ಪೂರ್ಣಗೊಳ್ಳುವುದು ಗಿರಿಗೆ ಹಲವು ಸಾವಿರ ಸಂಖ್ಯೆಯಲ್ಲಿ ಬರುವ ಯಾತ್ರಿಕರ ಮೂಲಕವಲ್ಲ. ಅಲ್ಲಿಗೆ ಬರುವ ಈ ಸಾವಿರಾರು ಯಾತ್ರಿಕರು ಗುರುಗಳ ಕಾರುಣ್ಯಪೂರ್ಣ ಮಹಾಸಂದೇಶವನ್ನು ಮನಸ್ಸಿಗಿಳಿಸಿಕೊಂಡು, ಹಿಂದಿರುಗಿ ತಮ್ಮ ಊರುಗಳನ್ನು ತಲುಪಿ, ವೈಯಕ್ತಿಕ ಬದುಕಿನಲ್ಲೂ ಸಾಮಾಜಿಕ ಬದುಕಿನಲ್ಲೂ ಈ ಸಂದೇಶವನ್ನು ಅಳವಡಿಸಿಕೊಂಡಾಗ ಶಿವಗಿರಿ ತೀರ್ಥಯಾತ್ರೆ ಸಾರ್ಥಕವಾಗುತ್ತದೆ. ಪ್ರತೀ ವರ್ಷವೂ ಹೆಚ್ಚು ಹೆಚ್ಚು ಜನರು ಶಿವಗಿರಿಗೆ ತೀರ್ಥಯಾತ್ರಿಗಳಾಗಿ ಬರುವುದು ಒಳ್ಳೆಯ ಸಂಗತಿಯೇ. ಬರುವ ಯಾತ್ರಿಕರೆಲ್ಲರೂ ಶ್ರೀನಾರಾಯಣ ಗುರುಗಳು ಪ್ರತಿಪಾದಿಸಿದ ಮಾನವೀಯತೆಯ ಮಹೋಪದೇಶವನ್ನು ಅದರ ಪೂರ್ಣ ಅರ್ಥದಲ್ಲಿ ತಮ್ಮದಾಗಿಸಿಕೊಳ್ಳುತ್ತಾರೆ ಎಂಬುದನ್ನು ಖಾತರಿಪಡಿಸಿಕೊಳ್ಳುವುದರಲ್ಲಿಯೂ ಆಸಕ್ತಿ ಇರಬೇಕು.
ಗುರುಗಳ ಸಂದೇಶಗಳಲ್ಲಿ ಶ್ರದ್ಧೆಯಿಲ್ಲದೆ ಕೇವಲ ತೀರ್ಥಯಾತ್ರೆ ಯನ್ನು ಕೈಗೊಂಡರೆ ಅದೊಂದು ಡಾಂಭಿಕ ಆಚಾರವಷ್ಟೇ ಆಗಿ ಉಳಿದು ಮೌಲ್ಯ ಕಳೆದುಕೊಳ್ಳಬಹುದು. ಕುರುಡಾಗಿ ಆಚರಿಸುವ ಎಲ್ಲದರ ವಿರುದ್ಧವೂ ಗುರುಗಳು ಕಾರ್ಯತತ್ಪರಾಗಿದ್ದರು ಎಂಬುದರ ಹಿನ್ನೆಲೆಯಲ್ಲಿ ಇದನ್ನು ನೋಡಬೇಕು. ಆಗ ಡಾಂಭಿಕ ಆಚಾರವೆಂಬುದು ಗುರು ನಿಂದನೆಯೆಂಬಂತೆ ಕಾಣಿಸುತ್ತದೆ. ಇದು ಸಂಭವಿಸದಂತೆ ತಡೆಯಲು ಎಲ್ಲ ತೀರ್ಥಯಾತ್ರಿಕರೂ ಗುರುಗಳ ಮಹತ್ವಪೂರ್ಣ ಸಂದೇಶಗಳನ್ನು ತಮ್ಮದಾಗಿಸಿಕೊಳ್ಳುವುದನ್ನು ಖಾತರಿಪಡಿಸಿಕೊಳ್ಳುವುದು ಅಗತ್ಯವಿದೆ ಎಂಬುದಕ್ಕೆ ಇಷ್ಟನ್ನು ಹೇಳಬೇಕಾಯಿತು.
ಮಾನವಪ್ರೇಮವೇ ಗುರುಗಳ ಸಂದೇಶ. ಈ ಪ್ರೀತಿಗೆ ಜಾತಿ ಮತಗಳ ಭೇದವಿಲ್ಲ. ಈ ಬಗೆಯ ಭೇದಗಳನ್ನು ತರುವುದಕ್ಕೆ ಯಾರಾದರೂ ಪ್ರಯತ್ನಿಸಿದ್ದರೆ ಅದನ್ನು ಗುರುಗಳು ಸಹಿಸುತ್ತಲೂ ಇರಲಿಲ್ಲ. ಅಂಥಾ ಗುರುವನ್ನು ಜಾತಿಯದ್ದೋ, ಮತದ್ದೋ ಆದ ಬೇಲಿ ಕಟ್ಟಿ ಅದರೊಳಗೆ ಪ್ರತಿಷ್ಠಾಪಿಸಲು ಯಾರಾದರೂ ಪ್ರಯತ್ನಿಸಿದರೆ ಅದಕ್ಕಿಂತ ದೊಡ್ಡ ಗುರುನಿಂದನೆ ಮತ್ತೊಂದಿಲ್ಲ. ಇದನ್ನು ನಾವು ಸದಾ ನೆನಪಿಟ್ಟುಕೊಂಡಿರಬೇಕು. ನೆನಪಿಟ್ಟುಕೊಂಡರಷ್ಟೇ ಸಾಕಾಗದು, ಆ ಬಗೆಯ ಪ್ರಯತ್ನಗಳ ಕುರಿತು ಸದಾ ಎಚ್ಚರದಿಂದ ಇರಬೇಕು.
ಈ ಎಚ್ಚರವಿಲ್ಲದೇ ಹೋದರೆ ಗುರುಗಳು ಯಾವುದನ್ನು ದೃಢವಾಗಿ ಪ್ರತಿಪಾದಿಸಿದರೋ ಅದಕ್ಕೆ ವಿರುದ್ಧವಾದ ಕಡೆಗೆ ಗುರುಗಳನ್ನು ಅಪಹರಿಸಿ ಕೊಂಡೊಯ್ದು ಅಲ್ಲಿ ಪುನಃಪ್ರತಿಷ್ಠಾಪಿಸುವ ಪ್ರಯತ್ನಗಳು ನಡೆಯಬಹುದು. ಗುರುಗಳು ಯಾವುದರ ವಿರುದ್ಧ ಹೋರಾಡಿದರೋ ಅವುಗಳ ವಕ್ತಾರನಾಗಿ ಗುರುಗಳನ್ನು ಬಿಂಬಿಸುವ ಪ್ರಯತ್ನಗಳು ನಡೆಯುತ್ತವೆ. ಅದು ಸಂಭವಿಸಕೂಡದು. ಆ ಬಗೆಯ ಅಪವ್ಯಾಖ್ಯಾನಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಘೋಷಿಸಲು ಸಾಧ್ಯವಾಗಬೇಕು.
ಸಮಾಜ ಸುಧಾರಕರಾಗಿದ್ದ ಶ್ರೀನಾರಾಯಣ ಗುರುಗಳನ್ನು ಕೇವಲ ಒಂದು ಮತದ ನೇತಾರನಾಗಿ ಇಲ್ಲವೇ ಒಂದು ಮತದ ಸನ್ಯಾಸಿಯಾಗಿ ಕುಬ್ಜಗೊಳಿಸಿ ಬಿಂಬಿಸುವ ಪ್ರಯತ್ನಗಳನ್ನು ಗುರುತಿಸಬೇಕು. ಗುರುಗಳಿಗೆ ಮತವಿಲ್ಲ ಎಂಬುದನ್ನು ಅರಿಯಬೇಕು. ಗುರುಗಳಿಗೆ ಜಾತಿಯೂ ಇರಲಿಲ್ಲವೆಂಬುದನ್ನು ಮನಗಾಣಬೇಕು. ಈ ಜಗತ್ತಿನಲ್ಲಿ ಮಾನವರಾಗಿ ಹುಟ್ಟಿದ ಪ್ರತಿಯೊಬ್ಬರಿಗೂ ಸದಾ ಕಾಲವೂ ಗುರುವಾಗಿರಬೇಕಾದ ಮಹಾ ವ್ಯಕ್ತಿತ್ವವನ್ನು ಸೀಮಿತ ದೃಷ್ಟಿಕೋನದ ಜಾತಿ ಅಥವಾ ಮತದೊಳಗೆ ಬಂಧಿಸಿಡುವುದು ಸರಿಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು.
ಗುರುಗಳ ಜಾತಿ ಯಾವುದೆಂದು ಗುರುಗಳ ಬಳಿಯೇ ಒಬ್ಬರು ಕೇಳಿದಾಗ ಅದಕ್ಕೆ ಗುರುಗಳು ನೀಡಿದ ಉತ್ತರವನ್ನು ಇತಿಹಾಸ ನಿಖರವಾಗಿ ದಾಖಲಿಸಿಟ್ಟಿದೆ. ‘‘ನಾವು ಜಾತಿಭೇದವನ್ನು ತ್ಯಜಿಸಿ ಈಗ ಹಲವಾರು ಸಂವತ್ಸರಗಳು ಕಳೆದಿವೆ. ಹಾಗಿದ್ದರೂ ಕೆಲ ವರ್ಗದವರು, ಜಾತಿಯವರು ನಮ್ಮನ್ನು ಅವರದೇ ವರ್ಗಕ್ಕೆ ಸೇರಿದವರೆಂದು ಭಾವಿಸಿ ಮುಂದುವರಿಯುತ್ತಿದ್ದಾರೆ. ಇದು ನಮ್ಮ ವಾಸ್ತವ ನಿಲುವಿಗೆ ವಿರುದ್ಧವಾದ ಭಾವವನ್ನು ಮೂಡಿಸುವುದಕ್ಕೆ ಕಾರಣವಾಗಿದೆ ಎಂದು ನಮಗೆ ತಿಳಿದುಬಂದಿದೆ. ನಾವು ಯಾವುದೇ ಒಂದು ಜಾತಿಗೋ ಅಥವಾ ಮತಕ್ಕೋ ಸೇರಿದವರಲ್ಲ. ಈ ವಾಸ್ತವವನ್ನು ಜನರಿಗೆ ತಿಳಿಸಲು ಈ ಪ್ರಕಟಣೆಯನ್ನು ನೀಡಲಾಗಿದೆ.’’
ಇವು ಇತಿಹಾಸ ದಾಖಲಿಸಿರುವ ಗುರುಗಳ ಮಾತುಗಳು. ಈ ಮಾತುಗಳು ಯಾವ ಸಂಶಯಕ್ಕೂ ಅವಕಾಶ ನೀಡುತ್ತಿಲ್ಲ. ಇಷ್ಟಾಗಿಯೂ ಗುರುಗಳು ಒಂದು ಮತದ ಆಚಾರ್ಯರೆಂದು ಯಾರಾದರೂ ಪ್ರತಿಪಾದಿಸಿದರೆ...? ಈ ವಿಚಾರದಲ್ಲಿ ಗುರುಗಳ ಮಾತೇ ಅಂತಿಮವಾಗಿ ಇರುವುದರಿಂದ ವ್ಯಾಖ್ಯಾನಕಾರರ ವೇಷದಲ್ಲಿ ಬರುವ ಯಾರೂ ಹೊಸ ಭಾಷ್ಯಗಳನ್ನು ಮುಂದಿಡುವ ಅಗತ್ಯವಿಲ್ಲ.
ಸರ್ವಧರ್ಮ ಸಮ್ಮೇಳನದ ಬಗ್ಗೆ ಈ ಮೊದಲೇ ಹೇಳಿದ್ದೆ. ವಾದಿಸಿ ಗೆಲ್ಲುವುದಕ್ಕಲ್ಲ, ಅರಿಯುವುದಕ್ಕೂ ಅರಿವನ್ನು ಹಂಚುವುದಕ್ಕೂ ಈ ಸಮ್ಮೇಳನ ಎಂದು ಬರೆಯಿಸಿ ಸಮ್ಮೇಳಾಂಗಣದಲ್ಲಿ ಇಡಿಸಿದವರು ಗುರುಗಳು. ಇದರ ಅರ್ಥವೇನು? ಮತಗಳು ಪರಸ್ಪರ ವಾದಿಸಿ ಜಗಳವಾಡುವುದು ಬೇಡ ಎಂಬುದೇ ಇದರ ಅರ್ಥ. ಅಂಥಾ ಗುರುಗಳ ಸ್ಮತಿ ತುಂಬಿರುವ ಪವಿತ್ರ ಸ್ಥಳ ಈ ಶಿವಗಿರಿ. ಈ ಶಿವಗಿರಿ ಎಂದೆಂದಿಗೂ ಎಲ್ಲರಿಗೂ ಹಕ್ಕಿರುವ ಸ್ಥಳವಾಗಿಯೇ ಮುಂದುವರಿಯಬೇಕು.
ಜಾತಿ ಭೇದ, ಮತದ್ವೇಷಗಳಿಲ್ಲದ ಸರ್ವರೂ ಸೋದರರಂತೆ ಬಾಳುವ ಮಾದರಿ ಸ್ಥಾನ ಎಂಬುದಲ್ಲವೇ ಗುರುಗಳ ಪರಿಕಲ್ಪನೆ? ಅರವಿಪ್ಪುರವಾದರೂ ಚೆಂಬಳಂತಿಯಾದರೂ ಶಿವಗಿರಿಯಾದರೂ ಗುರುಗಳೊಂದಿಗೆ ಸಂಬಂಧವಿರುವ ಯಾವುದೇ ಸ್ಥಳವಾದರೂ, ಸಂಸ್ಥೆಯಾದರೂ ಎಲ್ಲರಿಗೂ ಸದಾ ಮುಕ್ತವಾಗಿ ತೆರೆದಿರಬೇಕು. ಆ ಆಶಯವು ಕೇರಳದ ಮೂಲೆ ಮೂಲೆಗಳಲ್ಲಿ ಅನುರಣಿಸಬೇಕು. ಈ ನಾಡು ಇಡೀ ಜಗತ್ತೇ ಗಮನಿಸುವಂಥ ಮಾದರಿಯಾಗಬೇಕು.
ಒಂದೆಡೆ ಸಾಮಾಜಿಕವಾದ ಮೂಢನಂಬಿಕೆಗಳು ಮತ್ತು ಅನಾಚಾರಗಳ ವಿರುದ್ಧದ ಹೋರಾಟ. ಮತ್ತೊಂದೆಡೆ ಮದ್ಯಪಾನ ದಂಥ ದುರಭ್ಯಾಸಗಳ ವಿರುದ್ಧದ ಆಂದೋಲನ. ಇವೆರಡಷ್ಟೇ ಅಲ್ಲದೆ ಶಿಕ್ಷಣ ಮತ್ತು ಸ್ವಾವಲಂಬನೆಗಾಗಿ ಪ್ರಯತ್ನ. ಈ ಮೂರೂ ಹೋರಾಟದ ಹಾದಿಗಳನ್ನು ಸಮನ್ವಯಿಸಿದವರು ಶ್ರೀನಾರಾಯಣ ಗುರುಗಳು. ಇದನ್ನು ಗಮನಿಸದೆ ಗುರುಗಳನ್ನು ಕೇವಲ ಆಧ್ಯಾತ್ಮಿಕ ಸಾಧನೆಗೆ ಸೀಮಿತಗೊಳಿಸಬಾರದು. ಯಾವುದೋ ಗುಹೆಯಲ್ಲಿ ಕುಳಿತು ಬದುಕಿನ ಅಂತ್ಯದವರೆಗೆ ಏಕಾಂಗಿಯಾಗಿ ಪ್ರಾರ್ಥಿಸಿದವರಲ್ಲ ಗುರುಗಳು. ಅವರು ಸಮಾಜವನ್ನು ಬದಲಾಯಿಸಲು ಸಂದೇಶಗಳು ಮತ್ತು ಚಟುವಟಿಕೆಗಳ ಮೂಲಕ ಕಾರ್ಯತತ್ಪರರಾದವರು. ಸಾಮಾ ಜಿಕ ಬದಲಾವಣೆಗೆ ಪ್ರಾರ್ಥನೆ ಸಾಕಾಗದು, ಅದಕ್ಕೆ ಕರ್ಮವೇ ಅಗತ್ಯ ಎಂದು ಕಲಿಸಿಕೊಟ್ಟವರು ಶ್ರೀನಾರಾಯಣ ಗುರುಗಳು.
‘ಸಂಘಟಿತರಾಗುವ ಮೂಲಕ ಶಕ್ತರಾಗಬೇಕು’ ಎಂಬ ಘೋಷಣೆ ಯನ್ನು ಗುರುಗಳು ನೀಡಿದ ಕಾಲಕ್ಕೆ ಅದು ಅತ್ಯಂತ ಪ್ರಗತಿಪರವಾದ ನಿಲುವಾಗಿತ್ತು. ಈಗಲೂ ಅದು ಪ್ರಸ್ತುತ ಎಂಬುದನ್ನು ಗಮನಿಸಬೇಕು. ಅಷ್ಟೇ ಅಲ್ಲ, ಮತ್ಯಾವ ಗುರುವೂ ಇಂಥದ್ದೊಂದು ಮಾತನ್ನು ಹೇಳಿಲ್ಲ ಎಂಬುದನ್ನೂ ನೆನಪಿಟ್ಟುಕೊಳ್ಳಬೇಕು. ಉತ್ತರ ಕೇರಳದಲ್ಲಿ ತೀಯಾ ಮಹಾಸಭಾ ಮತ್ತು ದಕ್ಷಿಣ ಕೇರಳದಲ್ಲಿ ಈಳವ ಮಹಾಸಭಾಗಳು ಇದ್ದಕಾಲದಲ್ಲಿ ಗುರುಗಳು ತಾವು ಸ್ಥಾಪಿಸಿದ ಸಂಘಟನೆಗೆ ಜಾತಿಯ ಹೆಸರನ್ನಿಡಲಿಲ್ಲ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಜನರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಬೇಕು ಎಂದು ಹೇಳಿದರೇ ಹೊರತು ಇತರರ ವಿರುದ್ಧ ಸಂಘಟಿತರಾಗಬೇಕು ಎಂದಲ್ಲ ಎಂಬುದನ್ನು ಮರೆಯಬಾರದು. ಮಾನವೀಯತೆಯ ಮಹಾಸಂದೇಶವನ್ನು ಗುರುಗಳು ನೀಡಿದರೇ ಹೊರತು ಜಾತೀಯತೆಯ ಸಂಕುಚಿತ ಸಂದೇಶವನ್ನಲ್ಲ.
ಅಸ್ಪಶ್ಯತೆಯ ತೀವ್ರತೆಯ ವಿರುದ್ಧ ಗಾಂಧೀಜಿ ತಮ್ಮ ‘ಹರಿಜನ್’ ಎಂಬ ಪತ್ರಿಕೆಯಲ್ಲಿ ಬರೆದದ್ದರ ಹಿಂದೆಯೂ ಶ್ರೀನಾರಾಯಣ ಗುರು ಚಿಂತನೆಗಳ ಪ್ರಭಾವವಿದ್ದುದನ್ನು ಕಾಣಬಹುದು. ಗುರುಗಳ ಪ್ರಭಾವದಿಂದಾಗಿಯೇ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ಅಸ್ಪಶ್ಯತೆಯ ವಿರುದ್ಧದ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ನಿರ್ಣಯವನ್ನು ಮಂಡಿಸಿದ ಟಿ.ಕೆ. ಮಾಧವನ್ ಅವರಿಗೆ ಆ ಶಕ್ತಿ ದೊರೆತದ್ದರ ಹಿಂದೆ ಇದ್ದದ್ದೂ ಗುರುಗಳು ಪ್ರತಿಪಾದಿಸಿದ ಚಿಂತನೆಗಳೇ.
ಜಾತಿಭೇದವೂ ಮತದ್ವೇಷವೂ ಇಲ್ಲದ ಕೇರಳ ಶ್ರೀನಾರಾಯಣ ಗುರುಗಳ ಕನಸಾಗಿತ್ತು. ಎಲ್ಲರೂ ಸೋದರತೆಯಿಂದ ಬಾಳುವ ಮಾದರಿ ನಾಡೊಂದು ಗುರುಗಳ ಕಲ್ಪನೆಯಾಗಿತ್ತು. ಅದನ್ನು ಸಾಕ್ಷಾತ್ಕಾರಗೊಳಿಸುವ ಪ್ರಯತ್ನವನ್ನು ದುರ್ಬಲಗೊಳಿಸುವ ನಡೆಗಳು ಯಾವ ಕಡೆಯಿಂದಲೂ ನಡೆಯಕೂಡದು. ಅಂಥದ್ದು ಸಂಭವಿಸಿದರೆ ಅದನ್ನು ಎದುರಿಸಿ ತಡೆಯುವ ದೃಢ ಪ್ರತಿಜ್ಞೆಯೊಂದಿಗೆ ಇಲ್ಲಿಗೆ ಬಂದಿರುವ ತೀರ್ಥಯಾತ್ರಿಗಳು ಹಿಂದಿರುಗಬೇಕು. ಆಗ ಮಾತ್ರ ಶಿವಗಿರಿ ತೀರ್ಥಯಾತ್ರೆ ಅರ್ಥಪೂರ್ಣವಾಗುತ್ತದೆ ಎಂದು ನೆನಪಿಸುತ್ತಾ ಈ ಮಹಾಸಮ್ಮೇಳನವನ್ನು ಉದ್ಘಾಟಿಸಿದ್ದೇನೆಂದು ತಿಳಿಸಬಯಸುವೆ.
► ಅನುವಾದ: ಇಸ್ಮಾಯಿಲ್