ನಕ್ಸಲ್ ವಿಕ್ರಂ ಗೌಡ ಎನ್ಕಂಟರ್ ಪ್ರಕರಣ: ಪೀತ್ ಬೈಲು ಪರಿಸರದಲ್ಲಿ ನೀರವ ಮೌನ
ಮನೆಗಳು ಖಾಲಿ ಖಾಲಿ
ಹೆಬ್ರಿ: ಪಶ್ಚಿಮ ಘಟ್ಟದ ದಟ್ಟ ಅರಣ್ಯದ ಮಧ್ಯೆ ಬೀಗ ಹಾಕದಿರುವ ಖಾಲಿ ಮನೆಗಳು, ಕೋಳಿ, ನಾಯಿ, ದನಗಳು ಬಿಟ್ಟರೆ ಮನೆಮಂದಿಯೇ ಇಲ್ಲದ ಪರಿಸರದಲ್ಲಿ ನೀರವ ವೌನ, ರಕ್ತ ಅಂಟಿಕೊಂಡ ಮನೆಯ ಜಗುಲಿ, ಅಡುಗೆ ಕೋಣೆಯಲ್ಲಿ ಅರ್ಧದಲ್ಲೇ ಬಿಟ್ಟು ಹೋದ ಪಾತ್ರೆಗಳು, ಮರದಲ್ಲಿ ಹೂತು ಹೋಗಿದ್ದ ನಿರ್ಜೀವ ಗುಂಡು....!
ಇದು ನ.18ರಂದು ಸಂಜೆ ನಕ್ಸಲ್ ನಾಯಕ ವಿಕ್ರಂ ಗೌಡ ಅವರ ಎನ್ಕೌಂಟರ್ ನಡೆದಿದೆ ಎನ್ನಲಾದ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ದುರ್ಗಮ ಕಾಡಿನೊಳಗಿನ ಪೀತ್ಬೈಲು ಪರಿಸರದ ಚಿತ್ರಣ. ಇಲ್ಲಿರುವುದು ಒಂದೇ ಕುಟುಂಬದ ಕೇವಲ ಮೂರೇ ಮನೆಗಳು. ಸಹೋದರರು ಮನೆಬಿಟ್ಟು ಹೋಗಿ, ಗುಂಡಿನ ಸದ್ದು ಮೊಳಗಿ ರಕ್ತ ಹರಿದು ನಾಲ್ಕು ದಿನಗಳು ಕಳೆದರೂ ಆತಂಕದ ಛಾಯೆ ಇನ್ನೂ ಕೂಡ ಮನೆ ಮಾಡಿದೆ.
‘ವಾರ್ತಾಭಾರತಿ’ ಸಹಿತ ಮಾಧ್ಯಮದವರ ತಂಡ ಶುಕ್ರವಾರ ಹೆಬ್ರಿ ಸಮೀಪದ ಕಬ್ಬಿನಾಲೆಯಿಂದ ಸುಮಾರು ಎಂಟು ಕಿ.ಮೀ. ದೂರದ ದಟ್ಟ ಅರಣ್ಯದೊಳಗೆ ಪ್ರವೇಶಿಸಿ, ಎನ್ಕೌಂಟರ್ ನಡೆದಿದೆ ಎನ್ನಲಾದ ಜಯಂತ್ ಗೌಡರ ಮನೆಯನ್ನು ಸಂದರ್ಶಿಸಿ ಪ್ರತ್ಯಕ್ಷ ವರದಿ ಮಾಡಿದೆ. ಆಗ ಈ ಎಲ್ಲ ದೃಶ್ಯಗಳು ಇಲ್ಲಿ ಕಣ್ಣಿಗೆ ಕಟ್ಟುವಂತೆ ಕಂಡುಬಂದವು.
ಮೂವರು ಸಹೋದರರ ಕುಟುಂಬ: ಪೀತ್ಬೈಲಿನಲ್ಲಿರು ವುದು ಸಹೋದರರಾದ ಜಯಂತ್ ಗೌಡ, ನಾರಾಯಣ ಗೌಡ ಹಾಗೂ ಸುಧಾಕರ ಗೌಡ ಅವರ ಮನೆಗಳು. ಜಯಂತ್ ಗೌಡ ಅವರ ಮನೆಯಲ್ಲಿ ಪತ್ನಿ, ಮೂವರು ಮಕ್ಕಳು ವಾಸ ಮಾಡಿಕೊಂಡಿದ್ದರೆ, ನಾರಾಯಣ ಗೌಡರ ಮನೆಯಲ್ಲಿ ಪತ್ನಿ ಮೂವರು ಮಕ್ಕಳು ಹಾಗೂ ಸುಧಾಕರ ಗೌಡ ಅವರ ಮನೆಯಲ್ಲಿ ಸುಧಾಕರ ಗೌಡ ಒಬ್ಬರೇ ವಾಸವಾಗಿದ್ದಾರೆ. ಸುಧಾಕರ ಗೌಡರ ಪತ್ನಿ ತನ್ನ ತವರೂರು ಧರ್ಮಸ್ಥಳದಲ್ಲಿ ವಾಸವಾಗಿದ್ದರು. ಇದೀಗ ಜಯಂತ್ ಗೌಡರ ಮಗಳು ಮದುವೆಯಾಗಿ ಅಲ್ಲಿಂದ 5 ಕಿ.ಮೀ. ದೂರದಲ್ಲಿರುವ ಕಬ್ಬಿನಾಲೆ ಪುಲ್ಲಾಂತ್ಬೆಟ್ಟು ಎಂಬಲ್ಲಿ ನೆಲೆ ನಿಂತಿದ್ದಾರೆ.
ಪೀತ್ಬೈಲು ಪರಿಸರದಲ್ಲಿ ಸುಮಾರು 15 ವರ್ಷಗಳ ಹಿಂದೆ ನಕ್ಸಲ್ ಹೋರಾಟವು ಬಹಳಷ್ಟು ತೀವ್ರವಾಗಿತ್ತು. ಕರ್ನಾಟಕ ವಿಮೋಚನಾ ರಂಗವನ್ನು ಕಟ್ಟಿಕೊಂಡು ಪ್ರಜಾಸತಾತ್ಮಕ ಬೇಡಿಕೆ ಈಡೇರಿಸುವಂತೆ ಯುವಕರ ತಂಡ ಹೋರಾಟಕ್ಕೆ ಇಳಿದಿತ್ತು. ಆಗ ಈ ತಂಡ ಪೀತ್ಬೈಲು ಪರಿಸರದಲ್ಲೂ ಓಡಾಟ ನಡೆಸಿ ಯುವಕರನ್ನು ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿತ್ತು. ಅದರ ಅನುಭವ ಇತ್ತೀಚೆಗೆ ಎನ್ಕೌಂಟರ್ ನಡೆದ ಜಯಂತ್ ಗೌಡ ಅವರ ಕುಟುಂಬಕ್ಕೂ ಆಗಿತ್ತು. ಆದರೆ ಜಯಂತ್ ಗೌಡರು ತಮ್ಮ ಮಕ್ಕಳನ್ನು ಆ ಹೋರಾಟಕ್ಕೆ ಕಳುಹಿಸಲು ನಿರಾಕರಿಸಿದ್ದರು.
ಮೂರು ಮನೆಗಳು ಖಾಲಿ: ಎನ್ಕೌಂಟರ್ ನಡೆಯುವ ವಾರದ ಹಿಂದೆ ಅಂದರೆ ನ.13ರಂದು ಜಯಂತ್ ಗೌಡ ಅವರ ಎರಡನೇ ಮಗ ರಾಕೇಶ್, ಕಂಬದಿಂದ ಬಿದ್ದು ಕೈ ಮುರಿದು ಕೊಂಡಿದ್ದು, ಈ ಹಿನ್ನೆಲೆಯಲ್ಲಿ ಇಡೀ ಕುಟುಂಬ ಮಾಲತಿ (ಮಗಳು)ಯ ಮನೆಗೆ ಹೋಗಿ ವಾಸ ಮಾಡಿಕೊಂಡಿತ್ತೆನ್ನಲಾಗಿದೆ. ಈ ಬಗ್ಗೆ ಮಾಲತಿ ಮನೆಗೆ ಭೇಟಿ ನೀಡಿದ ಮಾಧ್ಯಮಗಳ ತಂಡಕ್ಕೆ ಜಯಂತ್ ಗೌಡರ ಪತ್ನಿ ಗಿರಿಜಾ, ಮಗಳು ಮಾಲತಿ, ಮಗ ರಾಕೇಶ್, ಅಲ್ಲದೆ ಸ್ವತಃ ಜಯಂತ್ ಗೌಡರೇ ಸ್ಪಷ್ಟಪಡಿಸಿದರು.
ಅದೇ ರೀತಿ ನ.18ರಂದು ಸಂಜೆ ನಾರಾಯಣ ಗೌಡ ಕುಟುಂಬ ಹಾಗೂ ಸುಧಾಕರ ಗೌಡರ ಇನ್ನೋರ್ವ ಸಹೋದರ ತಿಂಗಳಮಕ್ಕಿಯಲ್ಲಿರುವ ಸುಂದರ ಗೌಡರ ಮನೆಯಲ್ಲಿ ಹೋಗಿ ವಾಸವಾಗಿದ್ದರು. ಹೀಗಾಗಿ ಎನ್ಕೌಂಟರ್ ನಡೆಯುವ ದಿನ ಪರಿಸರದ ಮೂರು ಮನೆಗಳು ಖಾಲಿಯಾಗಿದ್ದವು. ಆದರೆ ಈ ಮನೆಗಳ ನಾಯಿ, ದನ, ಕೋಳಿಗಳು ಕಳೆದ ನಾಲ್ಕೈದು ದಿನಗಳಿಂದ ಮನೆ ಮಾಲಕರಿಲ್ಲದೆ ಅನಾಥವಾಗಿವೆ.
ಮೂರು ಮನೆಗಳು ಕೂಡ ಬೀಗ ಹಾಕದೆ ತೆರೆದೇ ಇದೆ. ಆದರೆ ಒಳಗಡೆ ಯಾರೂ ಕೂಡ ಇಲ್ಲ. ಅಡುಗೆ ಮನೆಯಲ್ಲಿ ಪಾತ್ರೆಗಳು ಹಾಗೆ ಉಳಿದು ಕೊಂಡಿದೆ. ಮನೆ ಮಾಲಕ ಮಲಗುವ ನೆಲದ ಮೇಲೆ ಹಾಸಿದ ಬೆಡ್ನಲ್ಲಿ ನಾಯಿ ವಿಶ್ರಾಂತಿ ಪಡೆದಿರುವುದು ಕಂಡುಬಂದಿದೆ. ಹೀಗೆ ಇಡೀ ಪರಿಸರದಲ್ಲಿ ನೀರವ ವೌನ ಕಾಡುತ್ತಿದೆ.
ಜೀವಂತ ಸಾಕ್ಷಿಗಳೇ ಇಲ್ಲ: ನ.18ರಂದು ಸಂಜೆ ವೇಳೆ ನಕ್ಸಲ್ ಎನ್ಕೌಂಟರ್ ನಡೆದಿದ್ದರೂ ಸುದ್ದಿ ಹರಡಿರುವುದು ಮಾತ್ರ ಮರುದಿನ ನ.19ರಂದು ಬೆಳಗ್ಗೆ. ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ್ದ ಮಾಧ್ಯಮಗಳಿಗೆ ಮಾತ್ರ ಎನ್ಕೌಂಟರ್ ನಡೆದ ಮನೆಗೆ ಪ್ರವೇಶ ನಿರಾಕರಿಸಿ, ಸುಮಾರು 500 ಮೀಟರ್ ದೂರದಲ್ಲಿಯೇ ತಡೆ ಒಡ್ಡಲಾಗಿತ್ತು. ತನಿಖೆ ನೆಪದಲ್ಲಿ ಮನೆಯನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ನ.21ರಂದು ತನಿಖೆಯನ್ನು ಪೂರ್ಣಗೊಳಿಸಿದರು.
ಆ ಹಿನ್ನೆಲೆಯಲ್ಲಿ ನ.22ರಂದು ಮಾಧ್ಯಮ ತಂಡ ಎನ್ಕೌಂಟರ್ ನಡೆದ ಜಯಂತ್ ಗೌಡ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದು, ಆಗ ಅಲ್ಲಿ ಹಲವು ದೃಶ್ಯಗಳು ಕಂಡುಬಂದವು. ಇವು ಎನ್ಕೌಂಟರ್ಗೆ ಸಾಕ್ಷಿಯಾಗಿ ಕಂಡು ಬಂದರೂ ಹಲವು ಅನುಮಾನಗಳನ್ನು ಹುಟ್ಟು ಹಾಕುವಂತಿತ್ತು. ಆದರೆ ಇದಕ್ಕೆಲ್ಲ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಯಾಕೆಂದರೆ ಅಲ್ಲಿನ ಮೂರು ಮನೆಗಳು ಕೂಡ ಖಾಲಿಯಾಗಿದ್ದವು. ಮೂಕ ಸಾಕ್ಷಿಗಳಾದ ದನ, ನಾಯಿ, ಕೋಳಿ ಗಳನ್ನು ಬಿಟ್ಟರೆ ಅಲ್ಲಿ ಜೀವಂತ ಸಾಕ್ಷಿಗಳೇ ಇರಲಿಲ್ಲ.
ಮನೆಯೊಳಗೆ ಸಾಕ್ಷ ಗುರುತು: ಎನ್ಕೌಂಟರ್ ನಡೆದ ಜಯಂತ್ ಗೌಡ ಮನೆಯ ಜಗಲಿಯಲ್ಲಿ ವಿಕ್ರಂ ಗೌಡ ಎಎನ್ಎಫ್ನವರ ಗುಂಡೇಟಿಗೆ ಬಲಿಯಾಗಿ ಬಿದ್ದಿರುವ ಜಾಗವನ್ನು ಗುರುತು ಮಾಡಲಾಗಿದೆ. ಆದರೆ ಅಲ್ಲಿ ಯಾವುದೇ ರಕ್ತದ ಕುರುಹುಗಳು ಕಂಡು ಬಂದಿಲ್ಲ.
ಅದೇ ರೀತಿ ಮನೆಯೊಳಗೆ ಕೂಡ ಎಎನ್ಎಫ್ ತಂಡ ವಶಪಡಿಸಿಕೊಂಡಿದ್ದಾರೆನ್ನಲಾದ ಸೊತ್ತುಗಳ ಬಗ್ಗೆ ಗುರುತು ಮಾಡಿರುವುದು ಕಂಡುಬಂದಿದೆ. ಹೀಗೆ ಸುಮಾರು 15 ವಸ್ತು ಹಾಗೂ ಸಾಕ್ಷಗಳನ್ನು ಪೊಲೀಸರು ಇಲ್ಲಿಂದ ಸಂಗ್ರಹ ಮಾಡಿದ್ದಾರೆ. ಈ ಸೊತ್ತುಗಳನ್ನು ನಕ್ಸಲರು ಮನೆಯೊಳಗೆ ಬಿಟ್ಟು ಹೋಗಿರುವ ಅಥವಾ ಇತರ ವಸ್ತುಗಳಾಗಿರಲೂ ಬಹುದಾಗಿದೆ. ಮಾತ್ರವಲ್ಲದೆ ಕಾರ್ಯಾಚರಣೆ ಸಂದರ್ಭ ಸಿಡಿದ ಗುಂಡುಗಳು ಕೂಡ ಆಗಿರಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಮಾಧ್ಯಮಗಳ ಕಣ್ಣಿಗೆ ಬಿದ್ದ ಗುಂಡು!
ಮನೆಯ ಸುತ್ತಮುತ್ತ ಮಾಧ್ಯಮ ತಂಡ ಪರಿಶೀಲನೆ ನಡೆಸಿದಾಗ ಸಿಡಿದ ನಿರ್ಜಿವ ಗುಂಡು ಮನೆಯ ಅಂಗಳದಲ್ಲಿರುವ ಅಡಿಕೆ ಮರದಲ್ಲಿ ಹೂತು ಅಂಟು ಕುಳಿತಿರುವುದು ಕಂಡುಬಂದಿದೆ.
ಅದೇ ರೀತಿ ಮನೆಯ ಅಂಗಳದಲ್ಲಿರುವ ತುಳಸಿಕಟ್ಟೆಯ ಮಣ್ಣು ಗುರಿ ತಪ್ಪಿ ಸಿಡಿದ ಗುಂಡಿನಿಂದ ಒಡೆದು ಬಿದ್ದಿರುವುದು ಕಂಡುಬಂದಿದೆ. ಅದೇ ರೀತಿ ಅಲ್ಲೇ ಸಮೀಪದ ಮಣ್ಣಿನ ಇಟ್ಟಿಗೆ ಕೂಡ ತೂತಾಗಿರುವುದು ಕಾಣಸಿಕ್ಕಿದೆ. ಅಲ್ಲದೆ ಅಂಗಳದಲ್ಲಿರುವ ಅಡಿಕೆ ಮರದಲ್ಲಿ ಗುಂಡು ತಾಗಿದ ಸಾಕ್ಷಿಗಳು ಇವೆ. ಆದುದರಿಂದ ಇಲ್ಲಿ ಹಲವು ಸುತ್ತಿನ ಗುಂಡಿನ ಚಕಮಕಿ ನಡೆದಿರುವುದನ್ನು ಕಂಡುಬರುತ್ತದೆ.
ಅವರ ಹೋರಾಟ ಇಲ್ಲದಿದ್ದರೆ ನಮ್ಮನ್ನು ಯಾವತ್ತೋ ಒಕ್ಕಲೆಬ್ಬಿಸುತ್ತಿದ್ದರು: ಕಬ್ಬಿನಾಲೆಯ ಕುಚ್ಚೂರು ಸದಾಶಿವ ಗೌಡ
ಹೆಬ್ರಿ: ‘ವಿಕ್ರಂ ಗೌಡ ನಮ್ಮ ಜಾತಿ ಮಗ. ಅವನು ಈ ರೀತಿ ದಾರುಣ ಅಂತ್ಯ ಕಂಡಿರುವುದು ನೋಡಿದರೆ ನೋವಾಗುತ್ತದೆ. ಅವರ ಹೋರಾಟ ಇಲ್ಲದಿದ್ದರೆ ನಮ್ಮನ್ನು ಇಲ್ಲಿಂದ ಯಾವತ್ತೋ ಒಕ್ಕಲ್ಲೆಬ್ಬಿಸಿ ಬೇರೆ ಕಡೆ ಕಳುಹಿಸುತ್ತಿದ್ದರು’ ಎಂದು ಕಬ್ಬಿನಾಲೆಯ ಕುಚ್ಚೂರು ದರ್ಖಾಸ್ ನಿವಾಸಿ ಸದಾಶಿವ ಗೌಡ ಹೇಳಿದ್ದಾರೆ.
ಹೆಬ್ರಿಯಲ್ಲಿ ಗಣೇಶ್ ಹೊಟೇಲಿನಲ್ಲಿ ಕೆಲಸ ಮಾಡುತ್ತಿರುವ ವಿಕ್ರಮ ಗೌಡನನ್ನು ನಾನು ನೋಡಿದ್ದೆ. ಒಳ್ಳೆಯ ಹುಡುಗ. ಅವನನ್ನು ಸಾಯುವ ರೀತಿ ಮಾಡಿರುವುದೇ ಅರಣ್ಯ ಇಲಾಖೆಯವರು. ಹೋರಾಟದಲ್ಲಿ ಭಾಗವಹಿಸಿದ್ದ ಎಂಬ ಕಾರಣಕ್ಕೆ ಅವನಿಗೆ ಥಳಿಸಿ ಕಿರುಕುಳ ನೀಡಿದ್ದಾರೆ. ಮನೆಯೊಳಗೆ ಬಂದು ಊಟ ಚೆಲ್ಲಿ ಹೋಗಿದ್ದರು. ಆ ರೋಷ ಅವನಲ್ಲಿ ಇತ್ತು. ಆದರೆ ಈಗ ನಮಗೆ ಅರಣ್ಯ ಇಲಾಖೆಯ ಕಿರುಕುಳ ಕಡಿಮೆ ಆಗಿದೆ ಎಂದರು.
ಈ ಪರಿಸರದಲ್ಲಿ ಪೊಲೀಸ್ ಮಾಹಿತಿದಾರ ಎಂಬ ನೆಲೆಯಲ್ಲಿ ಸದಾಶಿವ ಗೌಡನ ಹತ್ಯೆ ಮಾಡಿರುವುದು ಬಿಟ್ಟರೆ ನಕ್ಸಲರಿಂದ ಸ್ಥಳೀಯರಿಗೆ ಯಾವುದೇ ತೊಂದರೆ ಆಗಿಲ್ಲ. ಕಸ್ತೂರಿ ರಂಗನ್ ವರದಿ ಹಾಗೂ ಒಕ್ಕಲೆಬ್ಬಿಸುವುದರ ಬಗ್ಗೆ ನಮಗೆ ಈಗಲೂ ಭಯ ಇದೆ. ನಮಗೆ ಇಲ್ಲಿ ಅಗತ್ಯವಾಗಿ ಬೇಕಾಗಿರುವುದು ರಸ್ತೆ. ಮಕ್ಕಳನ್ನು ಶಾಲೆಗೆ ಬಿಡಲು ಮೂರು ಕಿ.ಮೀ. ದೂರ ಹೋಗಬೇಕು. ಮಳೆಗಾಲದಲ್ಲಿ ಅಂತೂ ತುಂಬಾ ಕಷ್ಟ ಎಂದು ಅವರು ತಿಳಿಸಿದರು.
13 ದಿನಗಳಿಂದ ಮಗಳ ಮನೆಯಲ್ಲಿದ್ದೇನೆ: ಜಯಂತ್ ಗೌಡ
‘ನನ್ನ ಮಗ ಬಿದ್ದು ಕೈ ಮುರಿದು ಕೊಂಡಿರುವುದರಿಂದ ನಾನು 13 ದಿನಗಳಿಂದ ನನ್ನ ಮಗಳ ಮನೆಯಲ್ಲಿ ಇದ್ದೇನೆ. ಅಲ್ಲಿ ಏನು ಆಗಿದೆ ಎಂಬುದು ನಮಗೆ ಯಾರಿಗೂ ಗೊತ್ತಿಲ್ಲ ಇನ್ನು ಹೋಗಿ ಅಲ್ಲಿ ನೋಡಬೇಕಾಗಿದೆ’ ಎಂದು ಎನ್ಕೌಂಟರ್ ನಡೆದ ಮನೆಯ ಯಜಮಾನ ಜಯಂತ್ ಗೌಡ ತಿಳಿಸಿದರು.
ಪೊಲೀಸರು ಹೇಳದೆ ಮತ್ತು ಮಗನ ಕೈ ಗುಣ ಆಗದೇ ಮನೆಗೆ ವಾಪಸ್ ಹೋಗುವುದಿಲ್ಲ. ಅಲ್ಲಿ ಹೋಗಲು ನಮಗೆ ಯಾವುದೇ ಭಯ ಇಲ್ಲ. ನಮಗೆ ಪೊಲೀಸರ ಭಯ ಇಲ್ಲ, ನಕ್ಸಲರ ಭಯ ಈವರೆಗೆ ಇರರಲಿಲ್ಲ. ಮುಂದೆ ಏನಾಗುತ್ತದೆ ಎಂಬುದು ಗೊತ್ತಿಲ್ಲ’ ಎಂದು ಅವರು ಹೇಳಿದರು.
ನಕ್ಸಲರು ನಮ್ಮ ಮನೆಗೆ ದಿನಸಿ ತೆಗೆದುಕೊಂಡು ಬಂದಿರುವುದಾಗಿ ಹೇಳುತ್ತಿರುವುದು ಎಲ್ಲ ಸುಳ್ಳು. ಸುಮಾರು 15 ವರ್ಷಗಳ ಹಿಂದೆ ಎರಡು ಬಾರಿ ನಮ್ಮ ಮನೆಗೆ ಬಂದಿದ್ದರು. ಒಮ್ಮೆ ವಿಮೋಚನಾ ರಂಗ ಎಂದು ಹೇಳಿ ಬಂದು ನಮ್ಮ ಮಕ್ಕಳನ್ನು ನಕ್ಸಲ್ ಸಂಘಟನೆಗೆ ಸೇರುವಂತೆ ಹೇಳಿದ್ದರು. ನನ್ನ ಮಕ್ಕಳು ಸಣ್ಣವರು ಅಂತ ಅವರಿಗೆ ಹೇಳಿದ್ದೆ ಮತ್ತು ನಾವು ಸೇರುವುದಿಲ್ಲ ಎಂದು ತಿಳಿಸಿದ್ದೆ. ಅದರ ನಂತರ ಯಾರು ಬಂದಿಲ್ಲ ಎಂದರು.