ನೀಟ್: ಆಯ್ಕೆಯಲ್ಲ, ಹೊರತಳ್ಳುವ ಹಗರಣ
ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ನೀಟ್ (ರಾಷ್ಟ್ರೀಯ ಅರ್ಹತೆ ಪ್ರವೇಶ ಪರೀಕ್ಷೆ) ಸ್ಪರ್ಧಾತ್ಮಕ ಪರೀಕ್ಷೆಗೆ ಈ ಬಾರಿ 24 ಲಕ್ಷ ವಿದ್ಯಾರ್ಥಿಗಳು ಬರೆದಿದ್ದಾರೆ. ಆದರೆ ಫಲಿತಾಂಶದ ನಂತರ ಈ ಪರೀಕ್ಷೆಯ ಹಗರಣ ಬಯಲಾಗಿದೆ. 67 ವಿದ್ಯಾರ್ಥಿಗಳಿಗೆ 720/720 ಅಂಕಗಳು ಬಂದಿವೆ. ಇದುವರೆಗೂ ಯಾವುದೇ ಕಾರಣಕ್ಕೂ ಗ್ರೇಸ್ ಅಂಕ ಕೊಡುವಂತಿಲ್ಲ ಎಂದು ನೀತಿ ರೂಪಿಸಲಾಗಿದೆ. ಆದರೆ ನಿಯಮ ಉಲ್ಲಂಘಿಸಿ ಸಮಯದ ಅಭಾವದ ನೆಪವೊಡ್ಡಿ ಗ್ರೇಸ್ ಅಂಕ ಕೊಡಲಾಗಿತ್ತು. ನಂತರ ಅದನ್ನು ರದ್ದುಪಡಿಸಿದ ಕಾರಣದಿಂದ 1,563 ವಿದ್ಯಾರ್ಥಿಗಳು ಈ ಅಂಕಗಳನ್ನು ಕಳೆದುಕೊಂಡಿದ್ದಾರೆ. ಗುಜರಾತ್‌ನ 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ, ಒಂದು ವಿಷಯದಲ್ಲಿ ಫೇಲಾದ ವಿದ್ಯಾರ್ಥಿ ನೀಟ್‌ನಲ್ಲಿ 705 ಅಂಕ ಪಡೆದಿದ್ದಾರೆ. ರಾಜಸ್ಥಾನದ ಒಂದು ಕೇಂದ್ರದಲ್ಲಿ ಕ್ರಮಸಂಖ್ಯೆ 61-66ರವರೆಗಿನ ಆರು ವಿದ್ಯಾರ್ಥಿಗಳಿಗೆ 670 ಅಂಕ ಬಂದಿದೆ.
ಬೆಚ್ಚಿಬೀಳಿಸುವ ವಿವರಗಳು
1 ಮೇ, 2016ರಂದು ಕೇಂದ್ರ ಸರಕಾರವು ನೀಟ್ ಅಡಿಯಲ್ಲಿ ಮೊಟ್ಟ ಮೊದಲ ಬಾರಿಗೆ ವೈದ್ಯಕೀಯ ವ್ಯಾಸಂಗಕ್ಕೆ ಅರ್ಹತೆ ಪಡೆಯಲು ಕಡ್ಡಾಯವಾದ ರಾಷ್ಟ್ರೀಯ ಮಟ್ಟದ ಏಕ ಗವಾಕ್ಷಿಯ ಪ್ರವೇಶ ಪರೀಕ್ಷೆ ನಡೆಸಿತು. ಇದಕ್ಕಾಗಿ ಸಂಸತ್ತಿನಲ್ಲಿ ಬಹುಮತವನ್ನು ಪಡೆದುಕೊಂಡಿತ್ತು ಮತ್ತು ಸುಪ್ರೀಂ ಕೋರ್ಟ್‌ನಿಂದಲೂ ಅನುಮತಿಯ ರಕ್ಷಣೆಯನ್ನು ಪಡೆದುಕೊಂಡಿತ್ತು. ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ರದ್ದುಗೊಳಿಸಿ ಈ ನೀಟ್ ತರಹದ ಕೇಂದ್ರೀಕಣಗೊಂಡ, ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮ ಆಧರಿಸಿದ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಗಳು ಖಾಸಗಿ ಕೋಚಿಂಗ್ ಮಾಫಿಯಾವನ್ನು ಸೃಷ್ಟಿಸಿದೆ. ಇದು ಸಹಜವಾಗಿಯೇ ಮೇಲ್ವರ್ಗದ, ಶ್ರೀಮಂತ ಮಕ್ಕಳಿಗೆ ಅನುಕೂಲ ಮಾಡಿಕೊಡುತ್ತದೆ. ಇದು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪರೀಕ್ಷೆಯಲ್ಲ, ಬಡ ಕುಟುಂಬದ ವಿದ್ಯಾರ್ಥಿಗಳನ್ನು ಹೊರತಳ್ಳುವ ಪರೀಕ್ಷೆ. ಶಿಕ್ಷಣವನ್ನು ಈ ರೀತಿಯಲ್ಲಿ ಕೇಂದ್ರೀಕರಣಗೊಳಿಸುವುದರ ವಿರುದ್ಧ, ಗ್ರಾಮೀಣ ಭಾಗದ, ರಾಜ್ಯ ಪಠ್ಯಕ್ರಮ ಓದುವ ವಿದ್ಯಾರ್ಥಿಗಳಿಗೆ ಪ್ರತಿಕೂಲವಾಗಿರುವ, ದುಬಾರಿ ಶುಲ್ಕ ವಿಧಿಸುವ ಕೋಚಿಂಗ್ ಸಂಸ್ಥೆಗಳ ಮಾಫಿಯಾದ ವಿರುದ್ಧ ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಎಂಟು ವರ್ಷಗಳಲ್ಲಿ ರಾಜಸ್ಥಾನದ ಕೋಟ ಜಿಲ್ಲೆಯು ಆತ್ಮಹತ್ಯೆಗಳ ಶಿಬಿರವಾಗಿ ಮಾರ್ಪಟ್ಟಿದೆ. ಈ ಮಾರಣಹೋಮ ಎಂಟನೇ ವರ್ಷಕ್ಕೆ ಕಾಲಿಟ್ಟಿದೆ.
ಇಡೀ ಭಾರತದಲ್ಲಿ ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಯುಎಂಎಸ್, ಬಿಎಚ್‌ಎಂಎಸ್ ಒಳಗೊಂಡಂತೆ ವೈದ್ಯಕೀಯ ಸೀಟುಗಳ ಸಂಖ್ಯೆ 1 ಲಕ್ಷದ 6 ಸಾವಿರ. ಆದರೆ ಇದಕ್ಕಾಗಿ 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕರ್ನಾಟಕದಲ್ಲಿ 9,345 ಸೀಟುಗಳಿವೆ. 1 ಲಕ್ಷದ 19 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಆಯ್ಕೆಯಾದ 1 ಲಕ್ಷ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಅಂದರೆ ಉಳಿದ 23 ಲಕ್ಷ ವಿದ್ಯಾರ್ಥಿಗಳ ಪಾಡೇನು? ಅವರು ಕೌಟುಂಬಿಕ ಒತ್ತಡಕ್ಕೆ ಮಣಿದು ಮರಳಿ ಮತ್ತೊಮ್ಮೆ, ಮಗದೊಮ್ಮೆ ನೀಟ್ ಪರೀಕ್ಷೆ ಬರೆಯುವರೇ? ಸತತ ಪ್ರಯತ್ನದ ನಂತರವೂ ಪ್ರವೇಶ ದೊರಕದೆ ಹೋದರೆ ಈ ವಿದ್ಯಾರ್ಥಿಗಳು ಯಾವ ದಾರಿ ಕಂಡುಕೊಳ್ಳುತ್ತಾರೆ? ಹಲವರು ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಿಕ್ಕವರು? ಇದರ ಕುರಿತು ವಿವರವಾದ ಸಮೀಕ್ಷೆಯಾಗಿಲ್ಲ. ಪ್ರತೀ ವರ್ಷ ಈ ರೀತಿ ಹತಾಶರಾದ, ಖಿನ್ನತೆಗೊಳಗಾದ 23 ಲಕ್ಷ ವಿದ್ಯಾರ್ಥಿಗಳು ಉತ್ಪತ್ತಿಯಾಗುತ್ತಿದ್ದಾರೆ. ಈ ವಿದ್ಯಾರ್ಥಿಗಳ ಮನಸ್ಸಿನಲ್ಲಿ ‘ಮಾಡು ಇಲ್ಲವೇ ಮಡಿ’ ಎನ್ನುವ ಬೀಜ ಬಿತ್ತಿ ವೈದ್ಯಕೀಯ ಪ್ರವೇಶ ಪಡೆಯದೇ ಹೋದರೆ ಬದುಕೇ ವ್ಯರ್ಥ ಎನ್ನುವ ವಾತಾವರಣ ಸೃಷ್ಟಿಸಲಾಗಿದೆ. ಮಾನವಿಕ ವಿಭಾಗಗಳನ್ನು ನಿರ್ಲಕ್ಷಿಸಿ ಕೇವಲ ವೃತ್ತಿಪರ ಶಿಕ್ಷಣಕ್ಕೆ ಏಕಪಕ್ಷೀಯವಾಗಿ ಹೆಚ್ಚಿನ ಬೆಂಬಲ ಕೊಡುವುದರ ಮೂಲಕ ಕುರಿತು ಹುಸಿಯಾದ ಭ್ರಮೆಗಳನ್ನು ಮೂಡಿಸಿದ ಸರಕಾರದ ಸಾರ್ವಜನಿಕ ನೀತಿ, ಮಕ್ಕಳ ಮೇಲೆ ಅನಗತ್ಯವಾಗಿ ಒತ್ತಡ ಹೇರಿ ಅವರ ಮಾನಸಿಕ ಅಸ್ಥಿರತೆಗೆ ಕಾರಣವಾಗುವ ಪೋಷಕರು ಇಡೀ ನೀಟ್ ಹಗರಣದ ಜವಾಬ್ದಾರಿ ಹೊರಬೇಕು.
ನೀಟ್‌ನ ಸಾಧಕ-ಬಾಧಕಗಳ ಕುರಿತು ವರದಿ ನೀಡಲು 2021ರಲ್ಲಿ ತಮಿಳುನಾಡಿನ ಡಿಎಂಕೆ ಸರಕಾರ ನ್ಯಾಯಮೂರ್ತಿ ರಾಜನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ನೇಮಿಸಿತ್ತು. ಅದರ ವರದಿಯ ಪ್ರಕಾರ ಗ್ರಾಮೀಣ ಭಾಗದಿಂದ, ತಮಿಳು ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವಿದ್ಯಾರ್ಥಿಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ. ನೀಟ್ ಪೂರ್ವದಲ್ಲಿ 2011-2017ರ ಅವಧಿಯಲ್ಲಿ ಶೇ.80.5-85.2ರಷ್ಟು ಇಂಗ್ಲಿಷ್ ಮಾಧ್ಯಮದ, ಶೇ.19.79ರಷ್ಟು ತಮಿಳು ಮಾಧ್ಯಮದ, ಶೇ.61ರಷ್ಟು ಗ್ರಾಮೀಣ ಭಾಗದ, ಶೇ.38.55ರಷ್ಟು ನಗರ ಪ್ರದೇಶದ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ನೀಟ್ ನಂತರ 2017-2022ರ ಅವಧಿಯಲ್ಲಿ ಶೇ.98ರಷ್ಟು ಇಂಗ್ಲಿಷ್ ಮಾಧ್ಯಮ, ಶೇ.1.6-3.2ರಷ್ಟು ತಮಿಳು ಮಾಧ್ಯಮದ, ಶೇ.49ರಷ್ಟು ಗ್ರಾಮೀಣ ಭಾಗದ, ಶೇ.50ರಷ್ಟು ನಗರ ಪ್ರದೇಶದ ವಿದ್ಯಾರ್ಥಿಗಳು ಪ್ರವೇಶ ಗಳಿಸಿದ್ದಾರೆ. 2019-20ರ ವರ್ಷದಲ್ಲಿ ನೀಟ್ ಪ್ರವೇಶ ಪಡೆದ ಶೇ.99ರಷ್ಟು ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
ನೀಟ್‌ನಿಂದ ಕ್ಯಾಪಿಟೇಷನ್ ಶುಲ್ಕ ಹಾವಳಿ ಕಡಿಮೆಯಾಗಿದೆ ಎಂದು ಸಮರ್ಥಕರು ವಾದಿಸುತ್ತಾರೆ. ಆದರೆ ಇವರ ವಾದಕ್ಕೆ ಯಾವುದೇ ಪುರಾವೆಗಳಿಲ್ಲ. ನೀಟ್ ಪೂರ್ವಕ್ಕೂ ನೀಟ್ ನಂತರದಲ್ಲಿಯೂ ಕ್ಯಾಪಿಟೇಷನ್ ಶುಲ್ಕ ಪದ್ಧತಿಯಲ್ಲಿ, ಅದರ ಮೊತ್ತದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮತ್ತಷ್ಟು ಹೆಚ್ಚಾಗಿದೆ. ಮುಂದುವರಿದು ‘ಮೆರಿಟ್’ ವಿದ್ಯಾರ್ಥಿಗಳಿಗೆ ಅವಕಾಶ ದೊರಕುತ್ತದೆ ಎನ್ನುತ್ತಾರೆ. ಆದರೆ ಭಾರತದಂತಹ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ‘ಮೆರಿಟ್’ ಆಧಾರಿತ ಎನ್ನುವುದೇ ಶಾಶ್ವತ ತಾರತಮ್ಯಕ್ಕೆ ಕಾರಣವಾಗುತ್ತದೆ. ಯಾವುದೇ ಸೌಕರ್ಯಗಳಿಲ್ಲದ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ನಗರ ಪ್ರದೇಶದ, ಇಂಗ್ಲಿಷ್ ಮಾಧ್ಯಮದ, ಖಾಸಗಿ ಸಂಸ್ಥೆಗಳಲ್ಲಿ ಓದುವ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಇದು ಅಸಮಾನ ಸ್ಪರ್ಧೆಯಾಗಿದೆ. ಇಲ್ಲಿ ಮೊದಲು ಸಮಾನ ಶಿಕ್ಷಣ ಜಾರಿಗೊಳ್ಳಬೇಕಿದೆ. 1-10ನೇ ತರಗತಿವರೆಗಿನ ಶಿಕ್ಷಣವನ್ನು ಆಧುನೀಕರಣಗೊಳಿಸಬೇಕಿದೆ, ಉತ್ತಮಗೊಳಿಸಬೇಕಿದೆ. ಅಲ್ಲಿಯವರೆಗೂ ಯಾವುದೇ ಬಗೆಯ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ಮತ್ತಷ್ಟು ಪ್ರತ್ಯೇಕತೆ, ತಾರತಮ್ಯಕ್ಕೆ ಕಾರಣವಾಗುತ್ತದೆ.
ವೈದ್ಯಕೀಯ ಕ್ಷೇತ್ರ ಇಂದಿಗೂ ಪ್ರತಿಷ್ಠಿತರ ಶಿಕ್ಷಣವಾಗಿರುವುದು ಇಲ್ಲಿನ ವೈರುಧ್ಯ. ಇದು ಉಳ್ಳವರು ಮತ್ತು ವಂಚಿತರ ನಡುವಿನ ಸ್ಪರ್ಧೆಯಾಗಿದೆ. ಇಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಅರ್ಹತೆ ಗಳಿಸಲು ಅತ್ಯಂತ ದುಬಾರಿ ಶುಲ್ಕದ ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆಯಲು ಸೂಕ್ತ ಅವಕಾಶಗಳಿಲ್ಲದೆ ಬಹುಪಾಲು ಗ್ರಾಮೀಣ ಭಾಗದ ವಂಚಿತ ಸಮುದಾಯದ ವಿದ್ಯಾರ್ಥಿಗಳು ತೇರ್ಗಡೆ ಆಗುವುದಿಲ್ಲ. ಮತ್ತೊಂದೆಡೆ 9ನೇ ತರಗತಿಯಿಂದ 12ನೇ ತರಗತಿಯವರೆಗೆ (ಕರ್ನಾಟಕದಲ್ಲಿ ಪಿಯುಸಿ) ಶಿಕ್ಷಣವು ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಮಾಫಿಯಾ ಹಿಡಿತಕ್ಕೆ ಒಳಪಟ್ಟಿದೆ. ಈ ಖಾಸಗಿ ಸಂಸ್ಥೆಗಳ ವಿದ್ಯಾರ್ಥಿಗಳನ್ನು 8ನೇ ತರಗತಿಯಿಂದಲೇ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಒತ್ತು ನೀಡಿ ತರಬೇತಿ ನೀಡಲಾಗುತ್ತದೆ.
ಸರಕಾರಿ ಶಾಲೆ, ಕಾಲೇಜುಗಳಲ್ಲಿ ರಾಜ್ಯ ಪಠ್ಯಕ್ರಮವನ್ನು ಓದುವ ವಿದ್ಯಾರ್ಥಿಗಳಿಗೆ ಅತ್ತ ಈ ದುಬಾರಿ ಖಾಸಗಿ ಕೋಚಿಂಗ್‌ನ ಲಭ್ಯತೆಯೂ ಇಲ್ಲದೆ, ಇತ್ತ ಕೇಂದ್ರ ಪಠ್ಯಕ್ರಮ ಆಧಾರಿತ ನೀಟ್ ಪರೀಕ್ಷೆಗೆ ಸೂಕ್ತ ತಯಾರಿಯೂ ಇಲ್ಲದೆ ಪ್ರತಿಭೆ ಇದ್ದರೂ ಪ್ರವೇಶ ದೊರಕುವುದಿಲ್ಲ. ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಾರೆ. ಇಲ್ಲಿ ಸಮಾನತೆಯೂ ಇಲ್ಲ, ಸಮತೆಯೂ ಇಲ್ಲ. ಈ ರೀತಿ ವರ್ಗ ಅಸಮಾನತೆಯನ್ನು ಸೃಷ್ಟಿಸಿ ನಂತರ ರಾಷ್ಟ್ರ ಮಟ್ಟದಲ್ಲಿ ಮೆರಿಟ್‌ನ್ನು ಒಂದಂಶದ ಅರ್ಹತೆಯನ್ನಾಗಿಸಿದಾಗ ಅದು ಸಾಮಾಜಿಕ ನ್ಯಾಯದ ನೀತಿಗಳಿಗೆ ವಿರೋಧಿಯಾಗುತ್ತದೆ. ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತದೆ. ಇದನ್ನು ನಿಯಂತ್ರಿಸಬೇಕಾದ ಸರಕಾರವು ಖಾಸಗಿಯವರೊಂದಿಗೆ ಕೈ ಜೋಡಿಸಿ ನೀಟ್‌ನಂತಹ ಮಸೂದೆಗಳನ್ನು ತಂದು ಬಡ ವಿದ್ಯಾರ್ಥಿಗಳಿಗೆ ಕಂಟಕವಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ಯಾವುದೇ ಮುಂದಾಲೋಚನೆ ಇಲ್ಲದೆ ಏಕಾಏಕಿ ಇಡೀ ಪ್ರವೇಶ ಪರೀಕ್ಷೆಯನ್ನು ಕೇಂದ್ರೀಕರಣಗೊಳಿಸಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿ ಎಂದು ಕಾಯ್ದೆ ಮಾಡಿದಾಗ ಈ ಪ್ರವೇಶ ಪರೀಕ್ಷೆಗೆ ಅಗತ್ಯವಾದ ಪಠ್ಯಕ್ರಮ, ಮಾದರಿ ಕುರಿತಾಗಿ ಯಾವುದೇ ಸ್ಪಷ್ಟತೆ ಇಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳು ಕಂಗಾಲಾದರು. ಸುಪ್ರೀಂ ಕೋರ್ಟ್ ಸಹ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ ಎನ್ನುವುದನ್ನು ಕಡೆಗಣಿಸಿ ಇದನ್ನು ಒಂದು ರಾಷ್ಟ್ರೀಯತೆ ಪ್ರಶ್ನೆ ಎನ್ನುವ ಅರ್ಥದಲ್ಲಿ ಆದೇಶ ನೀಡಿದ್ದು ಬಲು ದೊಡ್ಡ ವಿರೋಧಾಭಾಸವನ್ನು ಸೃಷ್ಟಿಸಿತು. ತಮಿಳುನಾಡಿನಲ್ಲಿ ಅನಿತಾ ಎನ್ನುವ ದಲಿತ ವಿದ್ಯಾರ್ಥಿನಿ 2016ರ 12ನೇ ತರಗತಿಯ ಪರೀಕ್ಷೆಯಲ್ಲಿ ಶೇ.98 ಪ್ರಮಾಣ ಅಂಕ ಗಳಿಸಿ (1,176/1,200) ವೈದ್ಯಕೀಯ ವ್ಯಾಸಂಗದ ಕನಸಿನಲ್ಲಿದ್ದಳು. ಆದರೆ ಅದೇ ವರ್ಷ ಕೇಂದ್ರ ಸರಕಾರ ಹಠಾತ್ತನೆ ನೀಟ್ ಪರೀಕ್ಷೆಯನ್ನು ಕಡ್ಡಾಯ ಮಾಡಿದಾಗ ಪ್ರತಿಭಾವಂತಳಾದ ಅನಿತಾ ನೀಟ್ ಪರೀಕ್ಷೆಯಲ್ಲಿ ಶೇ.86 ಅಂಕಗಳನ್ನು ಗಳಿಸಿದ್ದಳು. ಆದರೆ ವೈದ್ಯಕೀಯ ಕೋರ್ಸಗೆ ಆಯ್ಕೆ ಆಗಲಿಲ್ಲ. ಇದು ಅನಿತಾಳನ್ನು ಹತಾಶೆಗೆ ತಳ್ಳಿತು. ಕಡೆಗೆ 1, ಸೆಪ್ಟಂಬರ್ 2016ರಂದು ಆತ್ಮಹತ್ಯೆ ಮಾಡಿಕೊಂಡಳು. ಕಳೆದ ಎಂಟು ವರ್ಷಗಳಲ್ಲಿ 12ನೇ ತರಗತಿ/ಪಿಯುಸಿನಲ್ಲಿ ಅತ್ಯುತ್ತಮ ಅಂಕ ಗಳಿಸಿಯೂ ನೀಟ್ ಕಾರಣಕ್ಕೆ ವೈದ್ಯಕೀಯ ಪ್ರವೇಶ ಪಡೆಯಲು ವಿಫಲರಾದ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿಭಾವಂತರಾದರೂ ಸಹ ಬಡತನದ ಕಾರಣಕ್ಕೆ, ಜಾತಿ ಕಾರಣಕ್ಕೆ ಈ ಖಾಸಗಿ ಮಾಫಿಯಾ ಸಂಚಿಗೆ ಬಲಿಯಾಗುತ್ತಿದ್ದಾರೆ. ಪ್ರಭುತ್ವದ ಈ ಕರಾಳ ನೀತಿಗಳು ವಂಚಿತ ಸಮುದಾಯದ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮರಣಶಾಸನವಾಗುತ್ತಿದೆ.