ಗ್ರಾಮೀಣ ಭಾಗದ ಜೀವನಾಡಿ ‘ಗ್ರಾಮ್ ಸಡಕ್' ಯೋಜನೆಯ ನಿರ್ಲಕ್ಷ್ಯ
ಭಾರತದಲ್ಲಿ ಬೆಳೆಯುತ್ತಿರುವ ಬಡವ-ಶ್ರೀಮಂತರ ನಡುವಿನ ಅಂತರವು ಇತ್ತೀಚಿನ ದಿನಗಳಲ್ಲಿ ಚರ್ಚೆಯ ವಿಷಯವಾಗಿ ಬದಲಾಗಿದೆ. ಈ ಕುರಿತು ಸಮೀಕ್ಷೆ ನಡೆಸಿದ್ದ ಅಧ್ಯಯನ ತಂಡವೊಂದು, ಭಾರತದಲ್ಲಿನ ಬಡವ-ಶ್ರೀಮಂತರ ನಡುವಿನ ಅಂತರವು ಸ್ವಾತಂತ್ರ್ಯ ಪೂರ್ವ ಕಾಲಘಟ್ಟಕ್ಕೆ ಕುಸಿದಿದೆ ಎಂಬ ಸಂಗತಿಯನ್ನು ಬಹಿರಂಗ ಪಡಿಸಿತ್ತು. ಆದರೆ, ಕೇವಲ ಬಡವ-ಶ್ರೀಮಂತರ ನಡುವಿನ ಅಂತರ ಮಾತ್ರ ಹಿರಿದಾಗಿಲ್ಲ; ಬದಲಿಗೆ, ಗ್ರಾಮೀಣ ಭಾಗ ಮತ್ತು ನಗರ ಪ್ರದೇಶದಲ್ಲಿನ ಮೂಲಭೂತ ಸೌಕರ್ಯ ವೃದ್ಧಿಯಲ್ಲೂ ಅಸಮತೋಲನದ ಬೆಳವಣಿಗೆಯಾಗುತ್ತಿದೆ ಎಂಬುದಕ್ಕೆ ಗ್ರಾಮೀಣ ಭಾಗಗಳಿಗೆ ಸರ್ವಋತು ರಸ್ತೆಗಳನ್ನು ನಿರ್ಮಿಸುವ ಉದ್ದೇಶದೊಂದಿಗೆ ಡಿಸೆಂಬರ್, 2001ರಲ್ಲಿ ಪ್ರಾರಂಭಗೊಂಡ ‘ಗ್ರಾಮ್ ಸಡಕ್’ ಯೋಜನೆಯೇ ಜ್ವಲಂತ ನಿದರ್ಶನ.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಗ್ರಾಮೀಣ ಭಾಗಗಳಲ್ಲಿ ಸರ್ವಋತು ರಸ್ತೆಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯೊಂದಿಗೆ ‘ಗ್ರಾಮ್ ಸಡಕ್’ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಗ್ರಾಮೀಣ ಭಾಗವು ಕೃಷಿ ಪ್ರಧಾನವಾಗಿರುವುದರಿಂದ ಆಹಾರ ಧಾನ್ಯಗಳ ಸಾಗಣೆ ಸುಗಮವಾಗಿ ನಡೆಯುವಂತಾಗಬೇಕು ಎಂಬುದು ಈ ಯೋಜನೆ ಹಿಂದಿನ ಸದಾಶಯವಾಗಿತ್ತು. ಈ ಯೋಜನೆಯ ಅನುಷ್ಠಾನಕ್ಕಾಗಿ 2001-02ನೇ ಸಾಲಿನಲ್ಲಿ ರೂ. 406.85 ಕೋಟಿ ಮೊತ್ತವನ್ನು ಮೀಸಲಿಡಲಾಗಿತ್ತು. ಈ ಮೊತ್ತವು ಯುಪಿಎ ಸರಕಾರ ನಿರ್ಗಮನದ ವರ್ಷವಾದ 2013-14ನೇ ಆರ್ಥಿಕ ಸಾಲಿನಲ್ಲಿ ರೂ. 3,415 ಕೋಟಿವರೆಗೆ ತಲುಪಿತ್ತು. ಅರ್ಥಾತ್, ಸುಮಾರು ಎಂಟು ಪಟ್ಟು ಏರಿಕೆಯಾಗಿತ್ತು.
ಈ ಯೋಜನೆಯಡಿ ಕಣಿವೆ ಪ್ರದೇಶಗಳನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳಿಗೆ ಕೇಂದ್ರ ಸರಕಾರವು ಶೇ. 90ರಷ್ಟು ಅನುದಾನ ಒದಗಿಸುತ್ತಿದ್ದರೆ, ಉಳಿದ ಶೇ. 10ರಷ್ಟು ಅನುದಾನವನ್ನು ಸಂಬಂಧಿಸಿದ ರಾಜ್ಯ ಸರಕಾರಗಳು ಭರಿಸುತ್ತಿವೆ. ಬಯಲು ಪ್ರದೇಶಗಳನ್ನು ಹೊಂದಿರುವ ಇನ್ನಿತರ ರಾಜ್ಯಗಳಿಗೆ ಕೇಂದ್ರ ಸರಕಾರ ಶೇ. 60ರಷ್ಟು ಅನುದಾನವನ್ನು ಭರಿಸುತ್ತಿದ್ದರೆ, ರಾಜ್ಯ ಸರಕಾರಗಳ ಪಾಲು ಶೇ. 40ರಷ್ಟಿದೆ. ಈ ಯೋಜನೆಯಡಿ ಡಿಸೆಂಬರ್, 2021ರವರೆಗೆ 6,80,040 ಕಿ.ಮೀ. ರಸ್ತೆಯನ್ನು ನಿರ್ಮಿಸಲಾಗಿದೆ ಎಂದು ಸರಕಾರದ ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ. ಈ ಪೈಕಿ 2014-2024ರವರೆಗೆ ಒಟ್ಟು 3.74 ಲಕ್ಷ ಕಿ.ಮೀ. ರಸ್ತೆಯನ್ನು ನಿರ್ಮಿಸಲಾಗಿದೆ.
ಇದೇ ವೇಳೆ, 2004-2014ರ ನಡುವೆ ಎಕ್ಸ್‌ಪ್ರೆಸ್ ಹೆದ್ದಾರಿಗಳ ನಿರ್ಮಾಣಕ್ಕೆ ರೂ. 31,130 ಕೋಟಿ ಅನುದಾನವನ್ನು ಮೀಸಲಿಡಲಾಗಿತ್ತು. ಈ ಅವಧಿಯಲ್ಲಿ ಅಂದಾಜು 5,579 ಕಿ.ಮೀ. ಎಕ್ಸ್‌ಪ್ರೆಸ್ ಹೆದ್ದಾರಿಗಳ ನಿರ್ಮಾಣವಾಗಿತ್ತು. 2014-24ರ ಅವಧಿಯಲ್ಲಿ ಎಕ್ಸ್ ಪ್ರೆಸ್ ಹೆದ್ದಾರಿಗಳ ನಿರ್ಮಾಣಕ್ಕೆ ರೂ. 2.7 ಲಕ್ಷ ಕೋಟಿ ಅನುದಾನ ಮೀಸಲಾಗಿದ್ದರೆ, ಈ ಅವಧಿಯಲ್ಲಿ ಅಂದಾಜು 34,800 ಕಿ.ಮೀ. ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣವಾಗಿದೆ.
2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಗ್ರಾಮ್ ಸಡಕ್ ಯೋಜನೆಗಾಗಿ ರೂ. 17,000 ಕೋಟಿ ಮೊತ್ತವನ್ನು ಮೀಸಲಿಡಲಾಗಿತ್ತು. ಆದರೆ, 2024-25ನೇ ಸಾಲಿನ ಬಜೆಟ್‌ನಲ್ಲಿ ಈ ಮೊತ್ತವನ್ನು ರೂ. 12,000ಕ್ಕೆ ಇಳಿಸಲಾಗಿದೆ. ಅಂದರೆ, ಏಕಾಏಕಿ ರೂ. 5,000 ಕಡಿತವನ್ನು ಮಾಡಲಾಗಿದೆ.
2001-2002ನೇ ಸಾಲಿನಲ್ಲಿ ರೂ. 406.85 ಕೋಟಿ ಮೊತ್ತದ ಅನುದಾನದೊಂದಿಗೆ ಪ್ರಾರಂಭವಾಗಿದ್ದ ಗ್ರಾಮ್ ಸಡಕ್ ಯೋಜನೆಯು, ಯುಪಿಎ ಸರಕಾರದ ಅಂತಿಮ ವರ್ಷವಾದ 2013-14ನೇ ಸಾಲಿನಲ್ಲಿ ರೂ. 3,415 ಕೋಟಿಗೆ ತಲುಪಿತ್ತು. ಅದೇ ಎನ್‌ಡಿಎ ಸರಕಾರದ ಅಂತಿಮ ವರ್ಷದ ಅವಧಿಯಾದ 2023-24ರಲ್ಲಿ ಒದಗಿಸಲಾಗಿರುವ ಅನುದಾನದ ಮೊತ್ತವು ರೂ. 12,000 ಕೋಟಿಗೆ ಏರಿಕೆಯಾಗಿದೆ. ಅರ್ಥಾತ್, ಈ ಯೋಜನೆಯ ಅನುದಾನದ ಮೊತ್ತವು ಕೇವಲ ಮೂರೂವರೆ ಪಟ್ಟು ಮಾತ್ರ ಏರಿಕೆಯಾಗಿದೆ.
ಈ ಅಂಕಿ-ಅಂಶಗಳಿಗೆ ವ್ಯತಿರಿಕ್ತವಾಗಿ, 2013-14ನೇ ಸಾಲಿನ ಬಜೆಟ್‌ನಲ್ಲಿ ಎಕ್ಸ್‌ಪ್ರೆಸ್ ಹೆದ್ದಾರಿಗಳ ನಿರ್ಮಾಣಕ್ಕೆ ರೂ. 31,130 ಕೋಟಿ ಮೊತ್ತದ ಅನುದಾನವನ್ನು ಮೀಸಲಿಡಲಾಗಿತ್ತು. 2004-14ರವರೆಗೆ ಕೇವಲ 5,579 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣವಾಗಿತ್ತು. ಆದರೆ, 2023-24ನೇ ಸಾಲಿನ ಬಜೆಟ್‌ನಲ್ಲಿ ಈ ಮೊತ್ತವು ರೂ. 2.70 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅರ್ಥಾತ್, ಎಕ್ಸ್‌ಪ್ರೆಸ್ ಹೆದ್ದಾರಿ ಯೋಜನೆಗೆ ಮೀಸಲಿಟ್ಟಿರುವ ಅನುದಾನದ ಮೊತ್ತವು ಸುಮಾರು ಎಂಟೂವರೆ ಪಟ್ಟು ಅಧಿಕವಾಗಿದೆ.
ಈ ಅಂಕಿ-ಅಂಶಗಳೇ ಗ್ರಾಮೀಣ ಭಾಗದಲ್ಲಿನ ಮೂಲಭೂತ ಸೌಕರ್ಯ ನಿರ್ಮಾಣವು ಎಷ್ಟು ನಿರ್ಲಕ್ಷ್ಯಕ್ಕೊಳಗಾಗಿದೆ ಎಂಬುದನ್ನು ಸೂಚಿಸುತ್ತಿವೆ. ಕೃಷಿ ಪ್ರಧಾನವಾದ ಗ್ರಾಮೀಣ ಭಾಗಗಳಲ್ಲಿ ಗ್ರಾಮ್ ಸಡಕ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ರಸ್ತೆಗಳು ಸಾರಿಗೆ ಸಂಪರ್ಕದ ಪಾಲಿಗೆ ಬಹುಮುಖ್ಯ ಜೀವನಾಡಿ ರಸ್ತೆಗಳು. ಆದರೆ, ಇಂತಹ ಮಹತ್ತರ ಯೋಜನೆಗೆ ಹಂತಹಂತವಾಗಿ ಯೋಜನಾ ವೆಚ್ಚವನ್ನು ಏರಿಸುವ ಬದಲು ಕಡಿತಗೊಳಿಸುತ್ತಾ ಬರಲಾಗಿದೆ. ಇದರಿಂದ ಗ್ರಾಮ್ ಸಡಕ್ ಯೋಜನೆಯಡಿ ನಿರ್ಮಾಣವಾಗಿರುವ ರಸ್ತೆಗಳು ಸೂಕ್ತ ನಿರ್ವಹಣೆ ಇಲ್ಲದೆ ಹಳ್ಳ-ಕೊಳ್ಳಗಳಾಗಿ ರೂಪಾಂತರಗೊಂಡಿರುವುದು ಸಾಮಾನ್ಯ ಸಂಗತಿಯಾಗಿದೆ. ಇದರ ನೇರ ಪರಿಣಾಮ ಕೃಷಿ ಉತ್ಪನ್ನಗಳ ಸಾಗಣೆ ವೆಚ್ಚದ ಮೇಲಾಗಿರುವುದರಿಂದ ರೈತರು ತಮ್ಮ ಕೃಷಿ ಉತ್ಪನ್ನಗಳ ಸಾಗಣೆಗೆ ಹೆಚ್ಚುವರಿ ವೆಚ್ಚ ಮಾಡಬೇಕಾದ ಅನಿವಾರ್ಯತೆಗೆ ತುತ್ತಾಗಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರ ವೆಚ್ಚ ಸಾಮರ್ಥ್ಯವೂ ಕುಗ್ಗಿರುವುದರಿಂದ, ಆ ಭಾಗದ ಆರ್ಥಿಕ ಚಟುವಟಿಕೆಗಳೂ ನಿರಂತರವಾಗಿ ಹಿನ್ನಡೆ ಸಾಧಿಸುತ್ತಿವೆ.
ಯಾವುದೇ ದೇಶ ಸಮತೋಲಿತ ಪ್ರಗತಿ ಸಾಧಿಸಬೇಕಾದರೆ, ಗ್ರಾಮೀಣ ಭಾಗದ ಸಾಮಾಜಿಕ, ಆರ್ಥಿಕ, ಮೂಲಭೂತ ಸೌಕರ್ಯಗಳು ಆರೋಗ್ಯಕರ ಸ್ಥಿತಿಯಲ್ಲಿರಬೇಕಾದುದು ಅನಿವಾರ್ಯ. ಅದರಲ್ಲೂ ಮೂಲಸೌಕರ್ಯಗಳ ಲಭ್ಯತೆಯಲ್ಲಿ ಅತ್ಯಂತ ಹಿಂದುಳಿದಿರುವ ಗ್ರಾಮೀಣ ಭಾರತಕ್ಕೆ ಗ್ರಾಮ್ ಸಡಕ್‌ನಂತಹ ಯೋಜನೆಗಳು ಸಂಜೀವಿನಿಯಾಗಿರುವುದರಿಂದ, ಇಂತಹ ಯೋಜನೆಗಳ ಪರಿಣಾಮಕಾರಿ ಜಾರಿ ಅತ್ಯವಶ್ಯಕ.
ಆದರೆ, ವಿಶ್ವಗುರುವಿನ ಭ್ರಮೆಗೆ ಬಿದ್ದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು, ಗ್ರಾಮೀಣ ಭಾಗದ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ನಗರ ಪ್ರದೇಶಗಳಲ್ಲಿನ ಶ್ರೀಮಂತರಿಗೆ, ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ ಅನುಕೂಲಕರವಾಗುವಂತಹ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣಕ್ಕೆ ಇನ್ನಿಲ್ಲದ ಆದ್ಯತೆ ನೀಡಿದೆ. ಹೀಗಾಗಿ ಶೇ. 60ರಷ್ಟು ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ಗ್ರಾಮೀಣ ಭಾರತದ ಪರಿಚಯವೇ ಇರದ ನಗರವಾಸಿಗಳು ಈ ಅಸಮತೋಲನದ ಪ್ರಗತಿಯನ್ನೇ ಅಭಿವೃದ್ಧಿಯ ನಾಗಾಲೋಟ ಎಂದು ಕೇಕೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಇಂಥವರ ಸಾಲಿಗೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇತ್ತೀಚಿನ ಸೇರ್ಪಡೆ.
ನಿಜ, ಭಾರತವು ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣದಲ್ಲಿ ದಾಖಲೆಯ ಪ್ರಗತಿ ಸಾಧಿಸಿದೆ. ಇದರಿಂದ ಸರಕು ಸಾಗಣೆಗೆ ದೊಡ್ಡ ಮಟ್ಟದ ಪ್ರಯೋಜನವೂ ಆಗಿದೆ. ಆದರೆ, ಇಂತಹ ಅನುಕೂಲದ ಪ್ರತ್ಯಕ್ಷ ಫಲಾನುಭವಿಗಳಾಗಿರುವುದು ನಟಿ ರಶ್ಮಿಕಾ ಮಂದಣ್ಣರಂಥ ಶ್ರೀಮಂತರೇ ಹೊರತು ಗ್ರಾಮೀಣ ಭಾಗದ ಬಡವರು, ರೈತರಲ್ಲ. ಯಾಕೆಂದರೆ, ಅವರು ಇಂತಹ ರಸ್ತೆಗಳಲ್ಲಿ ಓಡಾಡಲು ಸಾಧ್ಯವಿಲ್ಲ. ಅವರ ಆರ್ಥಿಕ ಚೈತನ್ಯ ಅಷ್ಟು ದುರ್ಬಲವಾಗಿದೆ.
ದೇಶವೊಂದನ್ನು ಸಮತೋಲಿತವಾಗಿ ಅಭಿವೃದ್ಧಿಪಡಿಸುವ ನೀಲನಕ್ಷೆ ಹೊಂದಿರುವ ಆಡಳಿತಗಾರ ಮಾತ್ರ ದಾರ್ಶನಿಕ ಆಡಳಿತಗಾರನಾಗಿರುತ್ತಾನೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿನ ಮೂಲಸೌಕರ್ಯಗಳಿಗೆ ಒತ್ತು ನೀಡುವ ಆಡಳಿತಗಾರನಂತೂ ಅದ್ಭುತ ಆರ್ಥಿಕ ತಜ್ಞನಾಗಿರುತ್ತಾನೆ. ಆದರೆ, ತನ್ನ ಕೆಲವೇ ಶ್ರೀಮಂತ ಉದ್ಯಮಿಗಳ ಪ್ರಗತಿಯನ್ನೇ ಆದ್ಯತೆಯನ್ನಾಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು, ಎಕ್ಸ್‌ಪ್ರೆಸ್ ಹೆದ್ದಾರಿಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿದೆಯೇ ಹೊರತು, ಗ್ರಾಮೀಣ ಆರ್ಥಿಕತೆಗೆ ಜೀವ ತರುವ ಶಕ್ತಿ ಹೊಂದಿರುವ ಗ್ರಾಮ್ ಸಡಕ್ ಯೋಜನೆಗಲ್ಲ. ಹೀಗಾಗಿಯೇ, ಕಳೆದ ಬಾರಿ ಡೊನಾಲ್ಡ್ ಟ್ರಂಪ್ ಗುಜರಾತ್ ಅಹಮದಾಬಾದ್‌ಗೆ ಭೇಟಿ ನೀಡಿದ್ದಾಗ, ಅಲ್ಲಿನ ಕೊಳೆಗೇರಿಗಳಿಗೆ ಪರದೆ ಕಟ್ಟಿ ಮರೆ ಮಾಚುವಂಥ ದೈನ್ಯ ಸ್ಥಿತಿ ನಿರ್ಮಾಣವಾಗಿದ್ದು.
ಖಂಡಿತ ಭಾರತ ಪ್ರಗತಿಯತ್ತ ಸಾಗುತ್ತಿದೆ. ಆದರದು ಸಮಗ್ರ ಮತ್ತು ಸಮತೋಲಿತ ಪ್ರಗತಿಯಲ್ಲ. ಶ್ರೀಮಂತರ ಪಕ್ಷಪಾತಿ ಪ್ರಗತಿ. ಹೀಗಾಗಿಯೇ ಗ್ರಾಮೀಣ ಭಾರತವಿಂದು ಈ ಪ್ರಗತಿಯ ನಿಜ ಸಂತ್ರಸ್ತನಾಗಿ ಹೊರ ಹೊಮ್ಮಿದೆ. ಇದೇ ಸಂತ್ರಸ್ತ ಭಾರತವು ಆಡಳಿತಾರೂಢ ಬಿಜೆಪಿಗೆ ಹಾಲಿ ಸಾರ್ವತ್ರಿಕ ಚುನಾವಣೆಯಲ್ಲಿ ಪಾಠ ಕಲಿಸಲಿದೆ ಎಂಬ ಮಾತುಗಳು ಚುನಾವಣಾ ಪಂಡಿತರಿಂದ ಕೇಳಿ ಬರುತ್ತಿದೆ.