ಐಐಟಿ ಮತ್ತು ಐಐಎಂಗಳಲ್ಲಿ ಸಾಮಾಜಿಕ ನ್ಯಾಯದ ನಿರ್ಲಕ್ಷ್ಯ
ಭಾರತದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಸಂಸ್ಥೆಗಳು ಜಾಗತಿಕವಾಗಿ ಹೆಸರುವಾಸಿಯಾಗಿವೆ. ಪ್ರಸಕ್ತ ದೇಶದಲ್ಲಿ ಒಟ್ಟು 23 ಐಐಟಿಗಳು ಮತ್ತು 21 ಐಐಎಂ ಸಂಸ್ಥೆಗಳಿದ್ದು ಈ ಕೇಂದ್ರೀಯ ಅನುದಾನಿತ ಸಂಸ್ಥೆಗಳಿಂದ ಹೊರಬರುವ ಪದವೀಧರರು ಭಾರತ ಮತ್ತು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೇಂದ್ರ ಸರಕಾರದ ನೀತಿಯಡಿಯಲ್ಲಿ ಎಲ್ಲಾ ಕೇಂದ್ರೀಯ ಶೀಕ್ಷಣ ಸಂಸ್ಥೆಗಳಂತೆ ಐಐಟಿ ಮತ್ತು ಐಐಎಂ ಎರಡೂ ಸಂಸ್ಥೆಗಳಲ್ಲಿಯೂ ಕೂಡ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ. 27, ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಶೇ. 15 ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಶೇ.7.5ರಷ್ಟು ಮೀಸಲಾತಿಯನ್ನು ಅಧ್ಯಾಪಕ ಹುದ್ದೆಗಳಲ್ಲಿ ಕೇಂದ್ರ ಸರಕಾರವು ಕಡ್ಡಾಯಗೊಳಿಸಿದೆ. ಆದರೆ ಮಾಹಿತಿ ಹಕ್ಕಿನ ಅಡಿಯಲ್ಲಿ ದೊರೆತಿರುವ ಮಾಹಿತಿ ಮತ್ತು ಇತರ ದತ್ತಾಂಶಗಳಿಂದ ಹೊರಬಿದ್ದಿರುವ ಅಂಕಿ ಅಂಶಗಳ ಪ್ರಕಾರ 13 ಐಐಎಂಗಳಲ್ಲಿ ಶೇ. 82.8ರಷ್ಟು ಅಧ್ಯಾಪಕರು ಸಾಮಾನ್ಯ ವರ್ಗ, ಶೇ. 5ರಷ್ಟು ಪರಿಶಿಷ್ಟ ಜಾತಿಗಳ ವರ್ಗ, ಶೇ. 1ರಷ್ಟು ಪರಿಶಿಷ್ಟ ವರ್ಗಗಳ ಮತ್ತು ಶೇ. 9.6ರಷ್ಟು ಇತರ ಹಿಂದುಳಿದ ವರ್ಗಗಳಿಗೆ ಸೇರಿದ್ದಾರೆ. ಹಾಗೆಯೇ ಅಂಕಿ ಅಂಶಗಳನ್ನು ಹಂಚಿಕೊಂಡಿರುವ 21 ಐಐಟಿಗಳಲ್ಲಿ ಶೇ. 80ರಷ್ಟು ಅಧ್ಯಾಪಕರು ಸಾಮಾನ್ಯ ವರ್ಗಕ್ಕೆ, ಶೇ. 6ರಷ್ಟು ಪರಿಶಿಷ್ಟ ಜಾತಿಗಳ ವರ್ಗಕ್ಕೆ ಶೇ. 1.6 ಪರಿಶಿಷ್ಟ ವರ್ಗಕ್ಕೆ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಶೇ. 11.2ರಷ್ಟು ಅಧ್ಯಾಪಕ ವರ್ಗದವರು ಇರುವುದು ತಿಳಿದು ಬಂದಿದೆ. ಅಂದರೆ ಮೀಸಲು ವರ್ಗದಡಿಯಲ್ಲಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರ ಸಂಖ್ಯೆ ಸರಕಾರ ಕಡ್ಡಾಯಗೊಳಿಸಿರುವ ಮೀಸಲಿಗಿಂತ ತೀರಾ ಕಡಿಮೆಯಿದ್ದು ಸಾಮಾನ್ಯ ವರ್ಗದವರ ಸಂಖ್ಯೆ ಶೇ. 80ಕ್ಕಿಂತ ಹೆಚ್ಚಿರುವುದು ಕಂಡುಬಂದಿದೆ.
ಇವುಗಳ ಪೈಕಿ ಎರಡು ಐಐಟಿ ಮತ್ತು ಮೂರು ಐಐಎಂಗಳಲ್ಲಿ, ಸಾಮಾನ್ಯ ವರ್ಗಕ್ಕೆ ಸೇರಿದ ಅಧ್ಯಾಪಕರ ಪಾಲು ಶೇ. 90ನ್ನು ಮೀರಿದ್ದರೆ ಆರು ಇತರ ಐಐಟಿಗಳು ಮತ್ತು ನಾಲ್ಕು ಇತರ ಐಐಎಂಗಳಲ್ಲಿ ಸಾಮಾನ್ಯವರ್ಗಕ್ಕೆ ಸೇರಿದ ಅಧ್ಯಾಪಕರ ಪಾಲು ಶೇ. 80ರಿಂದ 90ರಷ್ಟಿರುವ ಅಂಶ ವಿವಿಧ ದಿನಗಳಲ್ಲಿ ಪಡೆದ ಮಾಹಿತಿ ಹಕ್ಕು ಮಾಹಿತಿಯಿಂದ ಹೊರಬಿದ್ದಿದೆ. ಒಟ್ಟಾರೆ ಅಂಕಿ-ಅಂಶಗಳು ವಿವಿಧ ವರ್ಗಗಳಿಗೆ ಕಡ್ಡಾಯವಾಗಿ ಮೀಸಲಿರಿಸುವ ಪ್ರಮಾಣಕ್ಕಿಂತ ಅತ್ಯಂತ ಕಡಿಮೆ ಪಾಲನ್ನು ತೋರಿಸುತ್ತವೆಯಾದರೂ ಈ ಪ್ರಮಾಣ ಎಲ್ಲಾ ಐಐಟಿಗಳು ಮತ್ತು ಐಐಎಂಗಳಲ್ಲಿ ಒಂದೇ ರೀತಿ ಆಗಿರುವುದಿಲ್ಲ.
ಉದಾಹರಣೆಗೆ, ಜಮ್ಮು ಐಐಎಂನ ಅಂಕಿ-ಅಂಶಗಳ ಪ್ರಕಾರ, ಸಾಮಾನ್ಯ ವರ್ಗದ ಅಧ್ಯಾಪಕರ ಸಂಖ್ಯೆ ಶೇ. 51ರಷ್ಟಿದ್ದರೆ, ಪರಿಶಿಷ್ಟ ಜಾತಿ ಶೇ.9, ಪರಿಶಿಷ್ಟ ಪಂಗಡ ಶೇ. 5 ಮತ್ತು ಶೇ. 23 ಅಧ್ಯಾಪಕರು ಇತರ ಹಿಂದುಳಿದ ವರ್ಗಗಳಿಗೆ ಸೇರಿದ್ದಾರೆ. ಪಾಟ್ನಾ ಐಐಟಿಯ ಉದಾಹರಣೆ ತೆಗೆದುಕೊಂಡರೆ, ಶೇ. 38ರಷ್ಟು ಅಧ್ಯಾಪಕರು ಇತರ ಹಿಂದುಳಿದ ವರ್ಗಕ್ಕೆ ಸೇರಿದ್ದು ಮೊದಲ ಸ್ಥಾನದಲ್ಲಿದ್ದಾರೆ. ಶೇ. 22ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 13ರಷ್ಟು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ಕೇವಲ ಶೇ. 12ರಷ್ಟು ಅಧ್ಯಾಪಕರು ಮಾತ್ರ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ. ಸೆಪ್ಟಂಬರ್ 20ರಂದು ಆರ್‌ಟಿಐ ಕಾರ್ಯಕರ್ತರೊಬ್ಬರು ಪಡೆದಿರುವ ಉತ್ತರದ ಪ್ರಕಾರ ಐಐಎಂ ಇಂದೋರ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲು ವರ್ಗಗಳಿಗೆ ಸೇರಿದ ಯಾವುದೇ ಅಧ್ಯಾಪಕರು ಇಲ್ಲದೇ ಇರುವ ವಿಚಿತ್ರ ಅಂಶ ಹೊರಬಿದ್ದಿದೆ.
ಕೆಲವು ಐಐಟಿ ಮತ್ತು ಐಐಎಂಗಳು ಖಾಲಿ ಇರುವ ಹುದ್ದೆಗಳ ಅಂಕಿ ಅಂಶಗಳ ಮಾಹಿತಿಯನ್ನು ನೀಡಿವೆ. ಇದರ ಪ್ರಕಾರ ಏಳು ಐಐಎಂಗಳಲ್ಲಿ ಒಟ್ಟು 256 ಖಾಲಿ ಹುದ್ದೆಗಳನ್ನು ಪಟ್ಟಿ ಮಾಡಲಾಗಿದ್ದು ಈ ಪೈಕಿ ಇತರ ಹಿಂದುಳಿದ ವರ್ಗದ 88, ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ 54, ಪರಿಶಿಷ್ಟ ವರ್ಗಕ್ಕೆ ಸೇರಿದ 30 ಹುದ್ದೆಗಳು ಭರ್ತಿಯಾಗದೆ ಖಾಲಿ ಇವೆ. ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಹಂಚಿಕೊಂಡಿರುವ 11 ಐಐಟಿಗಳ ಅಂಕಿ-ಅಂಶಗಳ ಪ್ರಕಾರ ಒಟ್ಟು 1,557 ಹುದ್ದೆಗಳು ಖಾಲಿ ಇದ್ದು ಇವುಗಳಲ್ಲಿ ಹಿಂದುಳಿದ ವರ್ಗದ 415, ಪರಿಶಿಷ್ಟ ಜಾತಿ ವರ್ಗದ 234 ಹಾಗೂ ಪರಿಶಿಷ್ಟ ವರ್ಗಕ್ಕೆ ಮೀಸಲಾದ 129 ಹುದ್ದೆಗಳು ಭರ್ತಿಯಾಗದೆ ಖಾಲಿ ಇವೆ.
ಸಂವಿಧಾನದ ಪ್ರಕಾರ ಶಿಕ್ಷಣ ಸಂಸ್ಥೆಗಳು ತಮ್ಮ ಒಟ್ಟು ಅಧ್ಯಾಪಕರಲ್ಲಿ ಪರಿಶಿಷ್ಟ ಜಾತಿಗೆ ಶೇ.15, ಪರಿಶಿಷ್ಟ ವರ್ಗಕ್ಕೆ ಶೇ.7.5 ಮತ್ತು ಇತರ ಹಿಂದುಳಿದ ವರ್ಗಕ್ಕೆ ಶೇ.27ರಷ್ಟು ಮೀಸಲಾತಿಯನ್ನು ಖಚಿತಪಡಿಸಿಕೊಳ್ಳಬೇಕು. ಸಂಸ್ಥೆಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಮೂರು ವರ್ಗಗಳ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿಲ್ಲ ಎಂಬ ದೂರುಗಳು ಕಳೆದ ದಶಕದಿಂದ ಕೇಳಿಬರುತ್ತಿವೆ.
ಅಖಿಲ ಭಾರತ ಒಬಿಸಿ ವಿದ್ಯಾರ್ಥಿಗಳ ಸಂಘದ (ಎಐಒಬಿಸಿಎಸ್‌ಎ) ಅಧ್ಯಕ್ಷ ಕಿರಣ್ ಕುಮಾರ್ ಗೌಡ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧ್ಯಾಪಕರ ಸಂಖ್ಯೆಯನ್ನು ಕೋರಿ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿಯಲ್ಲಿ ಶಿಕ್ಷಣ ಸಚಿವಾಲಯಕ್ಕೆ ವಿವಿಧ ದಿನಾಂಕಗಳಲ್ಲಿ ಸಲ್ಲಿಸಿದ ಅರ್ಜಿಗಳಲ್ಲಿ ಈ ಕೆಳಕೆಂಡ ಮಾಹಿತಿಗಳನ್ನು ಕೇಳಿದ್ದರು.
1. ಸಾಮಾನ್ಯ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇಡಬ್ಲ್ಯುಎಸ್ ವರ್ಗಗಳ ಒಟ್ಟು ಅಧ್ಯಾಪಕರ ಸಂಖ್ಯೆ.
2. ಪ್ರತೀ ವರ್ಗದಲ್ಲಿ ಭರ್ತಿಯಾಗಿರುವ ಸ್ಥಾನಗಳ ಒಟ್ಟು ಸಂಖ್ಯೆ.
3. ಪ್ರತೀ ವರ್ಗಕ್ಕೆ ಖಾಲಿ ಇರುವ ಹುದ್ದೆಗಳ ಒಟ್ಟು ಸಂಖ್ಯೆ.
ಶಿಕ್ಷಣ ಸಚಿವಾಲಯವು ನೀಡಿದ ಮಾಹಿತಿಯಲ್ಲಿ ಹೊರಬಿದ್ದಿರುವ ಈ ಅಂಶಗಳು ಐಐಟಿ ಮತ್ತು ಐಐಎಂಗಳಲ್ಲಿ ವೈವಿಧ್ಯತೆಯ ಕೊರತೆಯನ್ನು ಬಿಂಬಿಸುತ್ತವೆ. ಐಐಟಿ ಮತ್ತು ಐಐಎಂಗಳ ಸುಮಾರು 300 ಹಳೆಯ ವಿದ್ಯಾರ್ಥಿಗಳನ್ನೊಳಗೊಂಡ ಗ್ಲೋಬಲ್ ಅಲುಮ್ನಿ ನೆಟ್‌ವರ್ಕ್ ನ ಸದಸ್ಯರು ಈ ಗಣ್ಯ ಸಂಸ್ಥೆಗಳ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹಲವು ದಿನಗಳಿಂದ ಹೋರಾಡುತ್ತಿದ್ದಾರೆ. ಅಧ್ಯಾಪಕರ ಪ್ರಾತಿನಿಧ್ಯದಲ್ಲಿ ವಿವಿಧ ವರ್ಗಗಳ ನಡುವಿನ ಕಂದರವನ್ನು ಕಡಿಮೆ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಬೆಂಬಲಿಸಬೇಕಾಗಿರುವುದು ಸಹಜ ನ್ಯಾಯವಾಗಿದೆ.