ನೆತನ್ಯಾಹು v/s ಹಮಾಸ್: ದುರ್ಬಲರಾಗಿದ್ದು ಯಾರು?

ಗಾಝಾ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ಹಮಾಸ್ ಮೂವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಇಸ್ರೇಲ್ 90 ಕೈದಿಗಳನ್ನು ಬಿಡುಗಡೆ ಮಾಡಿದೆ.
ಹಮಾಸ್ ಅನ್ನು ನಾಶ ಮಾಡಲು ಬಯಸಿದ್ದ ನೆತನ್ಯಾಹು, ಕಡೆಗೆ ಅದರ ಜೊತೆ ರಾಜಿ ಮಾಡಿಕೊಳ್ಳಬೇಕಾಯಿತು.
ಟ್ರಂಪ್ ಕದನ ವಿರಾಮವನ್ನು ತಂದ ರೀತಿಯನ್ನು ನೋಡಿದ ಬಳಿಕವಂತೂ ನೆತನ್ಯಾಹು ಸ್ಥಿತಿ ಈಗ ಚರ್ಚೆಗೆ ಕಾರಣವಾಗಿದೆ. ಟ್ರಂಪ್ ಆದೇಶದ ಮೇರೆಗೆ ಹಮಾಸ್ ಜೊತೆ ರಾಜಿ ಮಾಡಿಕೊಂಡ ನೆತನ್ಯಾಹು ಕಥೆ ಅವರದೇ ದೇಶದಲ್ಲಿ ಇನ್ನು ಏನಾಗಲಿದೆ ಎಂಬ ಪ್ರಶ್ನೆಯೂ ಎದ್ದಿದೆ.
ಗಾಝಾದಲ್ಲಿ ಬಾಂಬ್ ದಾಳಿಯಿಲ್ಲದ ಒಂದು ರಾತ್ರಿಯ ನಂತರ ಶಾಂತಿಯ ಸೂಚನೆಗಳು ಸ್ಪಷ್ಟವಾಗುತ್ತಿವೆ.
ಗಾಝಾದಲ್ಲಿ ಶಾಂತಿ ಮರಳಲಿದೆಯೇ?
ಈ ಪ್ರಶ್ನೆಯ ಜೊತೆಗೇ ನೆತನ್ಯಾಹುಗೆ ಮುಂದೇನು ಕಾದಿದೆ ಎಂಬ ಪ್ರಶ್ನೆಯೂ ಏಳುತ್ತದೆ
ಒಂದು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಆ ವೀಡಿಯೊದಲ್ಲಿ, ಹಮಾಸ್‌ನಿಂದ ಮುಕ್ತರಾದ ಮೂವರು ಇಸ್ರೇಲಿ ಮಹಿಳೆಯರು ಇಸ್ರೇಲ್ ಗಡಿಗೆ ಬರುತ್ತಿರುವುದನ್ನು ಕಾಣಬಹುದು. ಅದರ ಹಿನ್ನೆಲೆಯಲ್ಲಿ, ಇಸ್ರೇಲ್ ಸೈನ್ಯ ನಾವು ಇದಕ್ಕಾಗಿಯೇ ಹೋರಾಡುತ್ತಿದ್ದೆವು ಎಂದು ಹೇಳುತ್ತಿದೆ.
ಆದರೆ ಹಮಾಸ್ ನಾಶವಾಗುವವರೆಗೂ ಯುದ್ಧ ಕೊನೆಗೊಳ್ಳುವುದಿಲ್ಲ ಎಂದು ನೆತನ್ಯಾಹು ಹೇಳಿದ್ದನ್ನು ಅವರ ಸೈನ್ಯ ಮರೆತಿದೆಯೇ?
ಅಂತರ್‌ರಾಷ್ಟ್ರೀಯ ನ್ಯಾಯಾಲಯ ಕೂಡ ಇಸ್ರೇಲ್‌ನ ದಾಳಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ನೆತನ್ಯಾಹು ಜಂಭ ಕೊಚ್ಚಿಕೊಳ್ಳುತ್ತಿದ್ದರು. ಕಡೆಗೆ ಆದದ್ದೇನು?
ಒಂದು ವರ್ಷದವರೆಗೆ, ಇಸ್ರೇಲ್ ಸೈನ್ಯ ಹಮಾಸ್ ಮತ್ತು ಒತ್ತೆಯಾಳುಗಳನ್ನು ಸಣ್ಣ ಪ್ರದೇಶದಲ್ಲಿ ಸುತ್ತುವರಿದು, ತಪ್ಪಿಸಿಕೊಳ್ಳುವ ಮಾರ್ಗವನ್ನು ನಿರ್ಬಂಧಿಸಿದ ನಂತರವೂ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ, ಒತ್ತೆಯಾಳುಗಳ ಕುಟುಂಬ ಸದಸ್ಯರು ಹಮಾಸ್ ಜೊತೆ ಒಪ್ಪಂದ ಮಾಡಿಕೊಳ್ಳುವುದಾಗಿ ಹೇಳುತ್ತಲೇ ಇದ್ದರು. ಆದರೆ ಒಪ್ಪಂದ ನಡೆಯಲು ಇಸ್ರೇಲ್ ಬಿಟ್ಟಿರಲಿಲ್ಲ. ಇದೇ ನಿಜವಾಗಿಯೂ ಅವರ ಒಂದು ವರ್ಷದ ಸಾಧನೆಯೇ?
ಹಮಾಸ್ ಅನ್ನು ಅಳಿಸಿಹಾಕುವ ಇಸ್ರೇಲ್ ಹಠಕ್ಕೆ ಕದನ ವಿರಾಮ ಒಪ್ಪಂದ ವ್ಯತಿರಿಕ್ತವಾಗಿದೆ. ಹಮಾಸ್ ನಾಶವಾಗಿದ್ದರೆ ಮತ್ತು ಅಷ್ಟು ದುರ್ಬಲವಾಗಿದ್ದರೆ, ಅದು ಇಸ್ರೇಲ್‌ಗೆ ಶರಣಾಗುತ್ತಿರಲಿಲ್ಲವೇ? ಹಮಾಸ್ ಜೊತೆ ಒತ್ತೆಯಾಳುಗಳ ವಿನಿಮಯದ ಷರತ್ತನ್ನು ಇಸ್ರೇಲ್ ಏಕೆ ಒಪ್ಪಿಕೊಳ್ಳಬೇಕಾಗಿತ್ತು?
ಇಸ್ರೇಲ್ ಮತ್ತು ಹಮಾಸ್ ಸಾಮಾಜಿಕ ಮಾಧ್ಯಮಗಳ ಪುಟಗಳು ಎರಡೂ ಕಡೆಯ ಒತ್ತೆಯಾಳುಗಳ ಬಿಡುಗಡೆಯ ಸುದ್ದಿ ಮತ್ತು ಚಿತ್ರಗಳಿಂದ ತುಂಬಿವೆ.
ಇದೆಲ್ಲದರ ನಡುವೆ, ಕಳೆದ 57 ವರ್ಷಗಳಲ್ಲಿ ಇಸ್ರೇಲ್ ಸುಮಾರು 10 ಲಕ್ಷ ಫೆಲೆಸ್ತೀನಿಯರನ್ನು ಜೈಲಿಗೆ ತಳ್ಳಿದ್ದು, ಈಗಲೂ 10 ಸಾವಿರ ಫೆಲೆಸ್ತೀನಿಯರು ಇಸ್ರೇಲ್ ಜೈಲಿನಲ್ಲಿದ್ದಾರೆ ಎಂಬ ವಿಷಯ ಚರ್ಚೆಯೇ ಆಗಿಲ್ಲ.
ಮಾಧ್ಯಮಗಳ ಸಂಪೂರ್ಣ ಗಮನ ಹಮಾಸ್ ಬಿಡುಗಡೆ ಮಾಡಿದ ಆ ಮೂವರು ಮಹಿಳೆಯರ ಮೇಲೆ ಇತ್ತು. ಅವರ ಚಿತ್ರಗಳು ಪ್ರಪಂಚದಾದ್ಯಂತ ಪತ್ರಿಕೆಗಳನ್ನು ತುಂಬಿವೆ. ಮೂವರು ಹೊರಬಂದ ರೀತಿ ಹಾಗೂ ಅವರ ಆರೋಗ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ. 471 ದಿನಗಳ ಕಾಲ ಸೆರೆಯಲ್ಲಿದ್ದ ನಂತರವೂ ಮೂವರೂ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹಮಾಸ್ ಅವರನ್ನು ಹೇಗೆ ನೋಡಿಕೊಂಡಿತು, ಅವರಿಗೆ ಆಹಾರ ಹೇಗೆ ತಲುಪಿಸಲಾಗುತ್ತಿತ್ತು, ಚಿಕಿತ್ಸೆಗೆ ಹೇಗೆ ವ್ಯವಸ್ಥೆ ಮಾಡಲಾಗಿತ್ತು? ಎಲ್ಲದರ ಬಗ್ಗೆ ತಿಳಿಯಬೇಕಿದೆ.
ಅವರು ಹಮಾಸ್ ಜಗತ್ತನ್ನು ಹೇಗೆ ನೋಡಿದರು, ಗಾಝಾದ ಮೇಲೆ ಬಾಂಬ್‌ಗಳು ಬೀಳುತ್ತಿದ್ದಾಗ, ಅವರು ಅದನ್ನು ನೋಡಿದ್ದಾರೆಯೇ? ಬದುಕುವುದು ಕಷ್ಟ ಎಂಬಂತೆ ಆ ಒತ್ತೆಯಾಳುಗಳಿಗೆ ಕಂಡಿತ್ತೇ ಅದೆಲ್ಲವೂ ತಿಳಿಯಬೇಕಿದೆ.
ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಸ್ಥಳಗಳನ್ನು ಇಸ್ರೇಲಿ ಸೈನಿಕರು ತಲುಪುತ್ತಾರೆ ಎಂದು ಅವರಿಗೆ ನಂಬಿಕೆ ಇತ್ತೆ? ಎಂಬುದು ಕೂಡಾ ತಿಳಿಯಬೇಕಿದೆ.
ಮೊದಲ ಹಂತದಲ್ಲಿ ಒಟ್ಟು 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿದುಬಂದಿದೆ.
ಈ ಚಿತ್ರಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.
ಇಷ್ಟೊಂದು ಬಾಂಬ್ ದಾಳಿ, ವಿನಾಶ ಹಾಗೂ ಆಹಾರದ ಕೊರತೆಯ ನಂತರವೂ, ಒತ್ತೆಯಾಳುಗಳಿಗೆ ಯಾವುದೇ ಹಾನಿಯಾಗಲಿಲ್ಲ. ಇದು ಹೇಗೆ ಸಾಧ್ಯವಾಯಿತು? ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಒಂದು ವರ್ಷದಿಂದ ಗಾಝಾದ ಮೇಲೆ ಹಗಲು ರಾತ್ರಿ ಬಾಂಬ್‌ಗಳು ಬೀಳುತ್ತಲೇ ಇದ್ದವು. ಕುಡಿಯುವ ನೀರು, ಆಹಾರ, ಔಷಧಿ ಇರಲಿಲ್ಲ. ಮಕ್ಕಳು ಸಾಯುತ್ತಿದ್ದರು, ಹಾಗಿರುವಾಗಲೂ ಹಮಾಸ್ ಒತ್ತೆಯಾಳುಗಳಿಗೆ ಹಾನಿ ಮಾಡಲಿಲ್ಲ.
ಹಮಾಸ್‌ನ ಅತಿ ದೊಡ್ಡ ನಾಯಕ ಯಹ್ಯಾ ಸಿನ್ವರ್ ಕೊಲ್ಲಲ್ಪಟ್ಟರು. ಇಸ್ರೇಲ್ ಇದನ್ನು ದೊಡ್ಡ ಯಶಸ್ಸು ಎಂದು ಕರೆದಿತ್ತು. ಆದರೆ ಅದರ ನಂತರವೂ ಹಮಾಸ್ ಈ ಒತ್ತೆಯಾಳುಗಳಿಗೆ ಹಾನಿ ಮಾಡಲಿಲ್ಲ.
ಕೆಲವು ಒತ್ತೆಯಾಳುಗಳ ಸಾವಿನ ವರದಿಗಳಿವೆ. ಆದರೆ ಅವರನ್ನು ಹಮಾಸ್ ಕೊಂದಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಅವರು ಇತರ ಕಾರಣಗಳಿಂದಲೂ ಮೃತಪಟ್ಟಿರಬಹುದು.
ಈ ಒತ್ತೆಯಾಳುಗಳ ಕಾರಣದಿಂದಾಗಿ ಹಮಾಸ್ ಇಸ್ರೇಲ್‌ನೊಂದಿಗೆ ಮಾತುಕತೆ ನಡೆಸಲು ಸಾಧ್ಯವಾಯಿತು.
ಹಮಾಸ್ ಒತ್ತೆಯಾಳುಗಳನ್ನು ಕೊಲ್ಲುವುದೇ ಆಗಿದ್ದಲ್ಲಿ ಅದು ಅವರನ್ನು ಏಕೆ ಕರೆತರುತ್ತಿತ್ತು? ಅವರನ್ನು ಕರೆತಂದ ನಂತರ ಏಕೆ ಅವರನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರುವಂತೆ ಇಡುತ್ತಿತ್ತು?
ನೆತನ್ಯಾಹು ಸೈನ್ಯ ಗಾಝಾ ಮೇಲೆ ದಾಳಿ ಮಾಡಿ ಬಾಂಬ್‌ಗಳನ್ನು ಹಾಕುತ್ತಲೇ ಇದ್ದರೂ ಹಮಾಸ್ ಮಾತ್ರ ಈ ಒತ್ತೆಯಾಳುಗಳನ್ನು ಚೆನ್ನಾಗಿಯೇ ನೋಡಿಕೊಂಡಿತು ಮತ್ತು ಅವರಿಗೆ ತೊಂದರೆ ಮಾಡಲಿಲ್ಲ ಎಂಬುದು ಕಾಣಿಸುತ್ತಿದೆ.
ಗಾಝಾ ಸಂಪೂರ್ಣವಾಗಿ ನಾಶವಾಗುವ ಹಂತದಲ್ಲಿದೆ.
ಆಸ್ಪತ್ರೆಗಳಿಂದ ಹಿಡಿದು ಯಾವುದೇ ಸ್ಥಳವೂ ಸುರಕ್ಷಿತವಾಗಿಲ್ಲ. ಆದರೆ ಈ ಒತ್ತೆಯಾಳುಗಳು ಹಮಾಸ್ ವಶದಲ್ಲಿ ಇಷ್ಟು ಕಾಲ ಇದ್ದೂ ಈಗ ಸುರಕ್ಷಿತವಾಗಿ ಹೊರಬರುತ್ತಿದ್ದಾರೆ.
ಜಗತ್ತಿಗೆ ಹೇಳಲಾಗುತ್ತಿರುವುದು ಸತ್ಯವೇ ಅಥವಾ ನಮಗೆ ಎಂದಿಗೂ ತಿಳಿಯದ ಬೇರೆ ಏನಾದರೂ ಇದೆಯೇ?
ಇಸ್ರೇಲಿ ಸೈನ್ಯ ಭೂಮಾರ್ಗದ ಮೂಲಕ ಗಾಝಾವನ್ನು ಪ್ರವೇಶಿಸಿತ್ತು. ಆದರೆ ಈವರೆಗೂ ಒತ್ತೆಯಾಳುಗಳನ್ನು ತಲುಪಲು ಅದಕ್ಕೆ ಸಾಧ್ಯವಾಗಿರಲಿಲ್ಲ.
ಗಾಝಾದ ಬಹುಪಾಲು ಪ್ರದೇಶವನ್ನು ನೆಲಸಮ ಮಾಡಲಾಯಿತು, ಗಾಝಾವನ್ನು ಪ್ರವೇಶಿಸಿದ ನಂತರವೂ ಹಮಾಸ್ ಅನ್ನು ತಲುಪಲು ಅದಕ್ಕೆ ಏಕೆ ಸಾಧ್ಯವಾಗಲಿಲ್ಲ? ಅದು ತನ್ನ ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಯಾಕೆ ಸಾಧ್ಯವಾಗಲಿಲ್ಲ?
ಗಾಝಾದಲ್ಲಿ ಈಗ ಕಾಣಿಸುತ್ತಿರುವುದು ಮನೆಗಳ ಅವಶೇಷಗಳು ಮಾತ್ರವಲ್ಲ, ಇಸ್ರೇಲಿ ಸೈನ್ಯದ ಪ್ರತಿಷ್ಠೆ ಕೂಡ ಅದೇ ಅವಶೇಷಗಳ ಭಾಗವಾಗಿ ಬಿದ್ದಿರುವ ಹಾಗೆ ಕಾಣಿಸುತ್ತಿದೆ. ಕದನ ವಿರಾಮ ಒಪ್ಪಂದದ ನಂತರ, ನೆತನ್ಯಾಹು ಸಂಭ್ರಮಾಚರಣೆ ಇಲ್ಲವಾಗಿದೆ. ಅಮೆರಿಕ ಬೆಂಬಲಿಸಿದರೆ ಮತ್ತೆ ಯುದ್ಧಕ್ಕೆ ಹೋಗುವ ಮಾತನ್ನೂ ಅವರು ಆಡುತ್ತಿದ್ಧಾರೆ.
ಈ ಸಮಯದಲ್ಲಿ ನೆತನ್ಯಾಹು ಒತ್ತೆಯಾಳುಗಳ ಬಗ್ಗೆ ಯೋಚಿಸಿದ್ದಾರೆ. ಆದರೆ ಬೈಡನ್ ಸರಕಾರ ಅಧಿಕಾರದಲ್ಲಿ ಇರುವವರೆಗೂ ಅವರು ಅದರ ಬಗ್ಗೆ ಯೋಚಿಸಿಯೇ ಇರಲಿಲ್ಲ. ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ನೆಪದಲ್ಲಿ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳುತ್ತಿದ್ದರು. ಹಮಾಸ್ ಅನ್ನು ಅಳಿಸಿಹಾಕುವ ಮಾತಾಡುತ್ತಿದ್ದರು. ಹಾಗಾದರೆ ಈ ಒಪ್ಪಂದ ಈಗ ಹೇಗೆ ಸಾಧ್ಯವಾಯಿತು?
ನೆತನ್ಯಾಹು ಕದನ ವಿರಾಮ ಒಪ್ಪಂದಕ್ಕೆ ಒಪ್ಪದಿದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗಿ ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಇಸ್ರೇಲ್ ಒತ್ತೆಯಾಳುಗಳ ಕುಟುಂಬಗಳು ಬೆದರಿಕೆ ಹಾಕಿದ್ದರೆಂಬ ಸುದ್ದಿ ಡಿಸೆಂಬರ್‌ನಿಂದಲೂ ಇತ್ತು.
ಈಗ, ಇನ್ನೊಂದು ಪ್ರಶ್ನೆ- ನೆತನ್ಯಾಹುಗೆ ಏನಾಗಲಿದೆ ಎಂಬುದು.
ನೆತನ್ಯಾಹು ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಸಿ) ನರಮೇಧ ಮತ್ತು ಯುದ್ಧಾಪರಾಧಗಳಿಗಾಗಿ ವಿಚಾರಣೆಯನ್ನು ಎದುರಿಸುತ್ತಿದ್ದು, ಅವರ ವಿರುದ್ಧ 2024ರ ನವೆಂಬರ್‌ನಲ್ಲಿ ಬಂಧನ ವಾರಂಟ್ ಹೊರಡಿಸಲಾಗಿದೆ. ಈ ಕಾರಣದಿಂದಾಗಿ, ನೆತನ್ಯಾಹು ಬೇರೆ ದೇಶಗಳಿಗೆ ಹೋಗುವುದೂ ಸುಲಭವಲ್ಲ ಎನ್ನಲಾಗಿದೆ.
ದಾಳಿಯ ಸಮಯದಲ್ಲಿ ನೆತನ್ಯಾಹು ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ ಮತ್ತು ಗಾಝಾದ ಸಾಮಾನ್ಯ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಕೊಂದಿದ್ದಾರೆ ಎಂದು ಐಸಿಸಿ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಅಕ್ಟೋಬರ್ 7ರ ದಾಳಿಗೂ ಮೊದಲು ನೆತನ್ಯಾಹು ಇಸ್ರೇಲ್‌ನಲ್ಲಿ ತೀವ್ರ ಸಾರ್ವಜನಿಕ ಆಕ್ರೋಶ ಎದುರಿಸುತ್ತಿದ್ದರು. 2020ರಿಂದ ಆತ ವಂಚನೆ, ಭ್ರಷ್ಟಾಚಾರ ಮತ್ತು ನಂಬಿಕೆ ಉಲ್ಲಂಘನೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ. 2019ರಲ್ಲಿ ದಾಖಲಾದ ಈ ಪ್ರಕರಣಗಳ ವಿಚಾರಣೆ 2020ರಿಂದ ನಡೆಯುತ್ತಿದೆ. 2024ರ ಡಿಸೆಂಬರ್ ನಲ್ಲಿ ಅವರು ನ್ಯಾಯಾಲಯದ ಮುಂದೆ ಹಾಜರಾದರು.
ಹಿಂದಿನ ವರ್ಷಗಳಲ್ಲಿ ಅವರ ತಂಡ ಅವರು ಕೋರ್ಟ್ ಎದುರು ಹಾಜರಾಗುವುದನ್ನು ಮುಂದೂಡಲು ಪದೇ ಪದೇ ಯತ್ನಿಸಿತ್ತು ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.
ಹಮಾಸ್ ದಾಳಿಗೂ ಮೊದಲಿನ ಆಕ್ರೋಶ ಕೂಡ ಅವರ ಕುರ್ಚಿ ಅಪಾಯದಲ್ಲಿದೆ ಎಂಬುದನ್ನು ತೋರಿಸಿತ್ತು.
ಸರಕಾರದ ನಿರ್ಧಾರವನ್ನು ರದ್ದುಗೊಳಿಸಬಹುದಾದ ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ನೆತನ್ಯಾಹು ರದ್ದುಗೊಳಿಸಿರುವ ಆರೋಪವೂ ಇದೆ. ಗಾಝಾ ಮೇಲಿನ ದಾಳಿಯಿಂದಾಗಿ ಈ ಎಲ್ಲಾ ಪ್ರಕರಣಗಳು ಮುಕ್ತಾಯಗೊಂಡಿಲ್ಲ, ಆದರೆ ಆ ಚರ್ಚೆ ಹಿಂದೆ ಸರಿಯಿತು ಅಷ್ಟೆ.
ಗಾಝಾ ಬಗ್ಗೆ ಇಸ್ರೇಲ್ ಮತ್ತು ಅಮೆರಿಕದ ನೀತಿಯಲ್ಲಿ ಮೂಲಭೂತ ಬದಲಾವಣೆಯಾಗುತ್ತದೆಯೇ?
ಅಮೆರಿಕ ಯಾವಾಗಲೂ ಇಸ್ರೇಲ್ ಜೊತೆಗಿದೆ ಮತ್ತು ಯಾವಾಗಲೂ ಅದರೊಂದಿಗಿರುತ್ತದೆ. ಇಸ್ರೇಲ್ ನರಮೇಧ ಮಾಡಿದೆ ಎಂದು ಟ್ರಂಪ್ ಹೇಳಿಲ್ಲ. ಇಸ್ರೇಲ್‌ನ ಯುದ್ಧಾಪರಾಧಗಳ ಬಗ್ಗೆಯೂ ಅವರು ಏನನ್ನೂ ಹೇಳಿಲ್ಲ. ನೆತನ್ಯಾಹು ಬಗ್ಗೆ ಟ್ರಂಪ್ ಏನನ್ನೂ ಹೇಳಲಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಆದರೆ ಅವರ ಮಾತಿನ ಮೇರೆಗೆ ಕದನ ವಿರಾಮ ಘೋಷಣೆಯಾಗಿದೆ. ಇಸ್ರೇಲ್ ಕೈಯಲ್ಲಿ ಏನೂ ಇಲ್ಲ, ಅದರ ಬಾಸ್ ಅಮೆರಿಕ ಎಂಬಂತಾಗಿದೆ.
ನೆತನ್ಯಾಹು ಕೊನೆಯಲ್ಲಿ ಏನು ಸಾಧಿಸಿದರು?
ಅವರ ಸೈನ್ಯ ಒತ್ತೆಯಾಳುಗಳನ್ನು ತಲುಪಲು ಕೂಡ ಸಾಧ್ಯವಾಗಲಿಲ್ಲ ಮತ್ತು ಇಡೀ ಪ್ರಪಂಚದ ಮುಂದೆ ಇನ್ನೊಂದು ದೇಶ ಅವರನ್ನು ಬೆದರಿಸುತ್ತಿದೆ.
ಈಗ ಟ್ರಂಪ್ ಯುದ್ಧವನ್ನು ನಿಲ್ಲಿಸುವ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಆದರೆ ಎರಡು ರಾಷ್ಟ್ರಗಳ ಮಾನ್ಯತೆಯ ಬಗ್ಗೆ ಮಾತನಾಡುತ್ತಿಲ್ಲ. ಅವರು ಜನರ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿಲ್ಲ, ಕನಿಷ್ಠ ಇಲ್ಲಿಯವರೆಗಂತೂ ಅವರು ಅಂಥ ಯಾವ ಮಾತನ್ನೂ ಹೇಳಿಲ್ಲ.
ಕಳೆದ ವರ್ಷ ಮೇ ತಿಂಗಳಲ್ಲಿ ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ, ಹಮಾಸ್ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೂ ಯುದ್ಧ ನಿಲ್ಲುವುದಿಲ್ಲ ಎಂದು ಹೇಳಿದ್ದರು.
ಅವರೆಲ್ಲರೂ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಹೇಳುವ ಮೂಲಕ ಅವರೆಲ್ಲರನ್ನೂ ಬಾಯಿ ಮುಚ್ಚಿಸಿದ್ದಾರೆಯೇ ಅಥವಾ ಏನಾದರೂ ತೋರಿಕೆಯ ತಂತ್ರವಿದೆಯೇ?
ಅಮೆರಿಕದ ಅಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸಿದಾಗಲೆಲ್ಲಾ ಇಸ್ರೇಲ್ ಗಾಝಾದ ಮೇಲೆ ಕದನ ವಿರಾಮ ಘೋಷಿಸುತ್ತದೆ. ದಾಳಿಯನ್ನು ನಿಲ್ಲಿಸಲಾಗುತ್ತದೆ ಎಂಬ ಮಾತುಗಳೂ ಕೇಳಿಬಂದಿವೆ.
ಇದೆಲ್ಲದರ ನಡುವೆ, ಅಮೆರಿಕದ ಭದ್ರತಾ ವಕ್ತಾರ ಜಾನ್ ಕಿರ್ಬಿ ಹಮಾಸ್ ದುರ್ಬಲಗೊಂಡ ಕಾರಣ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿರುವುದು ತುಂಬಾ ದೊಡ್ಡ ಸುಳ್ಳು ಎಂದು ಕಾಣಿಸುತ್ತದೆ.
ಹಾಗಾದರೆ, ಹಿಂದೆ ಹಮಾಸ್ ದುರ್ಬಲವಾಗಿರಲಿಲ್ಲ. ಇಸ್ರೇಲ್ ಮತ್ತು ಅಮೆರಿಕದ ಮುಂದೆ ಹಮಾಸ್ ಒಂದು ಕಾಲದಲ್ಲಿ ಬಹಳ ಬಲಿಷ್ಠವಾಗಿತ್ತು ಎಂದು ಅರ್ಥವೆ?
ಜುಲೈನಲ್ಲಿ ಇಸ್ಮಾಯೀಲ್ ಹಾನಿಯೆಹ್ ಕೊಲ್ಲಲ್ಪಟ್ಟರು.
ಅಕ್ಟೋಬರ್‌ನಲ್ಲಿ ಹಮಾಸ್‌ನ ಬಲಿಷ್ಠ ನಾಯಕ ಯಹ್ಯಾ ಸಿನ್ವರ್ ಹತ್ಯೆಯಾಯಿತು.
ಹಮಾಸ್ ದುರ್ಬಲಗೊಂಡ ಕಾರಣ ಈ ಒಪ್ಪಂದ ನಡೆದಿದೆ ಎಂಬುದು ಅಮೆರಿಕದ ನಿಲುವಾಗಿದ್ದರೆ, ನಿಜವಾಗಿಯೂ ಯಾರು ದುರ್ಬಲರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಎಲ್ಲಾ ಫೆಲೆಸ್ತೀನಿಯನ್ ಕೈದಿಗಳನ್ನು ಒಂದೇ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತದೆ.
ಒಂದೇ ರಾತ್ರಿಯಲ್ಲಿ ಒಪ್ಪಂದಕ್ಕೆ ಬರಲಾಗಿದೆ ಮತ್ತು ಎರಡೂ ಕಡೆಯ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಲಾಗಿದೆ.
ನೆತನ್ಯಾಹು ತನ್ನ ದೇಶದ ಇಮೇಜ್ ಅನ್ನು ಪಣಕ್ಕಿಟ್ಟಿದ್ದಾರೆ.
ಆದರೆ, ಹಿಂಸಾಚಾರದ ಮೂಲಕ ಯಾವುದೇ ಪರಿಹಾರ ಸಾಧ್ಯವಾಗದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.