ಲಂಕಾ ದ್ವೀಪದಲ್ಲಿ ಹೊಸ ಬೆಳಕು?
ಐತಿಹಾಸಿಕ ಘಟನೆಗಳ ತಿರುವೊಂದರಲ್ಲಿ, ಸೆಪ್ಟಂಬರ್ 22, 2024ರಂದು ನಡೆದ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಅನುರ ಕುಮಾರ ದಿಸ್ಸನಾಯಕೆ ನಿರ್ಣಾಯಕವಾದ ಗೆಲುವನ್ನು ಕಂಡಿದ್ದಾರೆ. ಒಟ್ಟು ಶೇ. 55.89(5.74 ಮಿಲಿಯನ್)ಮತಗಳನ್ನು ಗಳಿಸಿ, ದಿಸ್ಸನಾಯಕೆ ಅವರು ತಮ್ಮ ಪ್ರಮುಖ ಪ್ರತಿಸ್ಪರ್ಧಿ ಸಜಿತ್ ಪ್ರೇಮದಾಸ ಅವರನ್ನು ಸೋಲಿಸಿದ್ದಾರೆ. ಪ್ರಸಕ್ತ ಶ್ರೀಲಂಕಾದ ಸಂಸತ್ತಿನ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ, 44.11 (4.53 ಮಿಲಿಯನ್) ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ದಿಸ್ಸನಾಯಕೆ ದ್ವೀಪ ರಾಷ್ಟ್ರದ 9ನೇ ಅಧ್ಯಕ್ಷರಾಗಿ ಅಧಿಕಾರದ ಗದ್ದುಗೆ ಏರಿದ್ದಾರೆ.
ಚುನಾವಣೆಯಲ್ಲಿ ಎಡಪಂಥೀಯ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಎನ್‌ಪಿ) ಅಭ್ಯರ್ಥಿ ದಿಸ್ಸನಾಯಕೆ, ಮಾಜಿ ಅಧ್ಯಕ್ಷ ರಣಸಿಂಗೆ ಪ್ರೇಮದಾಸ ಅವರ ಪುತ್ರ ಸಜಿತ್ ಪ್ರೇಮದಾಸ, ಮಹಿಂದ ರಾಜಪಕ್ಸೆ ಅವರ ಪುತ್ರ ನಮಲ್ ರಾಜಪಕ್ಸೆ ಮತ್ತು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಹಾಲಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಸೇರಿದಂತೆ ಬರೋಬ್ಬರಿ 38 ಅಭ್ಯರ್ಥಿಗಳು ಅಖಾಡದಲ್ಲಿದ್ದರು. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ದಿಸ್ಸನಾಯಕೆ ಅವರು ಶೇ. 42.31 ಮತಗಳೊಂದಿಗೆ ಮುನ್ನಡೆ ಸಾಧಿಸಿದರೆ, ಪ್ರೇಮದಾಸ ಶೇ. 32.76 ಗಳಿಸಿದರು ಮತ್ತು ವಿಕ್ರಮಸಿಂಘೆ ಶೇ. 17.27 (23 ಲಕ್ಷ ಮತಗಳು) ಗಳಿಸಿ ಮೂರನೇ ಸ್ಥಾನ ಪಡೆದರು. ಯಾವುದೇ ಅಭ್ಯರ್ಥಿಗೆ ಶೇ. 50ರಷ್ಟು ಬಹುಮತ ಸಿಗದಿದುದರಿಂದ, ಪ್ರಾಶಸ್ತ್ಯದ ಮತದಾನ ಮೂಲಕ ಮೊದಲ ಎರಡು ಸ್ಥಾನ ಪಡೆದ ಅಭ್ಯರ್ಥಿಗಳ ನಡುವೆ ಎರಡನೇ ಸುತ್ತನ್ನು ನಡೆಸಲಾಯಿತು, ಶ್ರೀಲಂಕಾದ 2.2 ಕೋಟಿ ಜನರಲ್ಲಿ ಸುಮಾರು 1.7 ಕೋಟಿ ಜನರು ಚುನಾವಣೆಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿದ್ದು, ಇದರಲ್ಲಿ ಸುಮಾರು ಶೇ. 70ರಷ್ಟು ಮತದಾನವಾಗಿದೆ. ಈ ಫಲಿತಾಂಶವು ದೀರ್ಘಕಾಲದ ಕುಟುಂಬ ರಾಜಕೀಯ ಪ್ರಾಬಲ್ಯವನ್ನು ಅಂತ್ಯ ಮಾಡುವುದರೊಂದಿಗೆ, ದಿಸ್ಸನಾಯಕೆ ಅವರ ನೇತೃತ್ವದಲ್ಲಿ ಎಡಪಂಥೀಯ ಅಲೆಯ ನಾಂದಿ ಹಾಡಿದೆ.
ಪ್ರಚಾರದ ಭರಾಟೆ:
ಸಾಂಪ್ರದಾಯಿಕ ನಿರೂಪಣೆಗಳಾದ ಭದ್ರತೆ, ರಾಷ್ಟ್ರೀಯತೆ ಮತ್ತು ಜನಾಂಗೀಯ ವಿಭಜನೆಗಳಿಂದ ನಡೆಸಲ್ಪಟ್ಟಿದ ಹಿಂದಿನ ಚುನಾವಣಾ ಪ್ರಚಾರತಂತ್ರವನ್ನು ಸಂಪೂರ್ಣವಾಗಿ ತೆಗೆದು ಹಾಕಿ ಆರ್ಥಿಕತೆಯನ್ನೇ ಕೇಂದ್ರಬಿಂದುವನ್ನಾಗಿಸಿ ಮತ ಬೆೇಟೆ ಮಾಡಲಾಗಿತ್ತು. 2022ರ ಆರ್ಥಿಕ ಬಿಕ್ಕಟ್ಟು ಮತ್ತು ಅರಗಲಯ ದಂಗೆಯ ಹಿನ್ನೆಲೆಯಲ್ಲಿ ಈ ಚುನಾವಣೆ ನಡೆದಿದ್ದು, ಸಾರ್ವಜನಿಕರ ಬೇಡಿಕೆಯಂತೆ ಸಮಗ್ರ ಆರ್ಥಿಕ ಚೇತರಿಕೆಗೆ ರಾಜಕಾರಣಿಗಳು ಆದ್ಯತೆ ನೀಡಿದರು. ರನಿಲ್ ವಿಕ್ರಮಸಿಂಘೆ ಅವರ ಪ್ರಚಾರವು ಅವರ ನೀತಿಗಳ ಮೂಲಕ ಆರ್ಥಿಕ ಚೇತರಿಕೆಗೆ ಒತ್ತು ನೀಡಿತ್ತು. ವಿಶೇಷವಾಗಿ ತೆರಿಗೆ ಹೆಚ್ಚಳ, ಸರಕಾರಿ ವೆಚ್ಚಗಳನ್ನು ನಿಯಂತ್ರಿಸುವುದು, ಖಾಸಗೀಕರಣಗಳಂತಹ ಕ್ರಮಗಳ ಮೂಲಕ ಐಎಂಎಫ್ ಒಪ್ಪಂದವನ್ನು ಬಲಗೊಳಿಸುವ ಉದ್ದೇಶವನ್ನು ಒಳಗೊಂಡಿತ್ತು. ಅವರು ತೆರಿಗೆ ಸ್ಲ್ಯಾಬ್‌ಗಳನ್ನು ಪರಿಷ್ಕರಿಸಲು ಪ್ರತಿಜ್ಞೆ ಮಾಡಿದರು, ಇದು ಪ್ರತಿಭಟನೆಗೆ ಕಾರಣವಾಯಿತು.
ವಿಕ್ರಮಸಿಂಘೆಯ ಯೋಜನೆಗಳಿಗೆ ತದ್ವಿರುದ್ಧವಾಗಿ ಅನುರ ಕುಮಾರ ದಿಸ್ಸನಾಯಕೆ ಮತ್ತು ಜೆವಿಪಿ ಪಕ್ಷವು ತಮ್ಮದೇ ಆದ ವಿಶಿಷ್ಟ ಪರಿಹಾರವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಚಾರ ಪಡಿಸಿದರು. ಖಾಸಗೀಕರಣ ನೀತಿಯನ್ನು ಹಿಂಪಡೆದು ಪ್ರಮುಖ ಕೈಗಾರಿಕೆಗಳಲ್ಲಿ ಸರಕಾರಿ ಒಡೆತನವನ್ನು ಪ್ರಬಲಗೊಳಿಸುವುದು, ವಿಕ್ರಮಸಿಂಘೆಯ ರಫ್ತು ಕೇಂದ್ರಿತ ಅಭಿವೃದ್ಧಿಯ ಬದಲಾಗಿ ಆಮದು ನಿಯಂತ್ರಣದ ಮೂಲಕ ಸ್ವದೇಶಿ ಉದ್ಯಮಗಳನ್ನು ಬಲಗೊಳಿಸುವುದು, ಈ ಮೂಲಕ ವಿದೇಶಿ ಉತ್ಪನ್ನಗಳ ಮೇಲೆ ಸಾರ್ವಜನಿಕ ನಿಯಂತ್ರಣವನ್ನು ಕಾಯ್ದು ಕೊಳ್ಳುವುದು ಇತ್ಯಾದಿ.
ಅವರ ಆರ್ಥಿಕ ಸುಧಾರಣೆಯ ಕಾರ್ಯತಂತ್ರಗಳು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಅಸಮಾನತೆಯನ್ನು ಕಡಿಮೆ ಮಾಡುವುದು, ಶ್ರೀಮಂತರ ಮೇಲಿನ ತೆರಿಗೆಗಳನ್ನು ಹೆಚ್ಚಿಸುವುದು ಮತ್ತು ಕಡಿಮೆ-ಆದಾಯದ ಕುಟುಂಬದ ಮೇಲಿರುವ ಕಠಿಣ ಆರ್ಥಿಕ ಕ್ರಮಗಳನ್ನು ಸಡಿಲಗೊಳಿಸುವ ಬಗ್ಗೆ ಗಮನಹರಿಸಿತು. ಬಡವರನ್ನು ರಕ್ಷಿಸಲು, ಸಮರ್ಥ ತೆರಿಗೆ ಮತ್ತು ವೆಚ್ಚದ ಪ್ರಸ್ತಾವಗಳನ್ನು ಅನ್ವೇಷಿಸಲು, ಸಾಲದ ಲೆಕ್ಕಪರಿಶೋಧನೆಗಳನ್ನು ನಡೆಸಲು ಮತ್ತು ಪರ್ಯಾಯ ಸಾಲದ ಸಮರ್ಥನೀಯ ವಿಶ್ಲೇಷಣೆಯನ್ನು ರಚಿಸಲು ಐಎಂಎಫ್ ಕಾರ್ಯಕ್ರಮವನ್ನು ಮರುಸಂಧಾನ ಮಾಡುವುದಾಗಿ ಅವರು ಭರವಸೆ ನೀಡಿದರು. ಖಾಸಗೀಕರಣದ ಪ್ರಯತ್ನಗಳಿಗಾಗಿ ವಿಕ್ರಮಸಿಂಘೆಯವರ ಅಭಿಯಾನವನ್ನು ಅವರು ಟೀಕಿಸಿದರು ಮತ್ತು ಈ ನೀತಿಗಳು ಉದ್ಯೋಗ ನಷ್ಟ ಮತ್ತು ಹೆಚ್ಚಿನ ನಿರುದ್ಯೋಗಕ್ಕೆ ಕಾರಣವಾಗುತ್ತವೆ ಎಂದು ವಾದಿಸಿದರು.
ಸಜಿತ್ ಪ್ರೇಮದಾಸ, ಸಮಾಗಿ ಜನ ಬಾಲವೇಗಯಾ (ಎಸ್‌ಜೆಬಿ) ಪಕ್ಷದ ನಾಯಕನ ಪ್ರಚಾರವು ಉದ್ಯೋಗ ಸೃಷ್ಟಿ, ಕೈಗಾರಿಕಾ ಅಭಿವೃದ್ಧಿ ಮತ್ತು ಸಾಮಾಜಿಕ ಸಮಾನತೆಯ ಮೇಲೆ ಕೇಂದ್ರೀಕರಿಸಿತು. ಐಎಂಎಫ್ ಒಪ್ಪಂದವು ಸುಸ್ಥಿರ ಬೆಳವಣಿಗೆಗಿಂತ ಅಲ್ಪಾವಧಿಯ ಸ್ಥಿರತೆಯನ್ನು ಬೆಂಬಲಿಸುತ್ತದೆ ಎಂದು ಅವರು ಟೀಕಿಸಿದರು.
ಪ್ರೇಮದಾಸರ ಸೋಷಿಯಲ್ ಡೆಮಾಕ್ರಟಿಕ್ ಮಾರ್ಕೆಟ್ ಇಕಾನಮಿಯು ತೆರಿಗೆ ಸುಧಾರಣೆಗಳೊಂದಿಗೆ ಮಾರುಕಟ್ಟೆ-ಚಾಲಿತ ಅಭಿವೃದ್ಧಿಯನ್ನು ಸಮತೋಲನಗೊಳಿಸುವ ಉದ್ದೇಶವನ್ನು ಹೊಂದಿತ್ತು. ನಿಯಂತ್ರಣವನ್ನು ಉಳಿಸಿಕೊಳ್ಳಲು ಮತ್ತು ದಕ್ಷತೆಯನ್ನು ಉತ್ತೇಜಿಸಲು ಅವರು ಸಾರ್ವಜನಿಕ-ಖಾಸಗಿ ಪಾಲುದಾರಿಕೆಗೆ ಒಲವು ತೋರಿದರು. ಮಧ್ಯಮ ಮತ್ತು ಕೆಳ-ಆದಾಯದ ಕುಟುಂಬಗಳನ್ನು ಮತ್ತು ತಮಿಳು ಬಣವನ್ನು ಅವರು ಬೆಂಬಲಿಸಿದರು. ಅಸಮಾನತೆಗಳನ್ನು ಕಡಿಮೆ ಮಾಡುವ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಉತ್ತೇಜಿಸುವ ಕ್ರಮಗಳನ್ನು ಹಾಕಿಕೊಂಡಿದ್ದರು.
ಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷದ ನಾಯಕ ನಮಲ್ ರಾಜಪಕ್ಸೆ, ತಮ್ಮ ಕುಟುಂಬದ ರಾಜಕೀಯ ಪರಂಪರೆಯನ್ನು ಗಮನದಲ್ಲಿರಿಸಿ ಆರ್ಥಿಕ ರಾಷ್ಟ್ರೀಯತೆ ಮತ್ತು ಸರಕಾರಿ ಸ್ವಾಮ್ಯದ ಉದ್ಯಮಗಳ ರಕ್ಷಣೆಗೆ ಒತ್ತು ನೀಡಿದರು. ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಕಾಪಾಡಲು ಐಎಂಎಫ್ ಒಪ್ಪಂದವನ್ನು ಮರುಸಂಧಾನ ಮಾಡುವಂತೆ ಅವರು ಕರೆ ನೀಡಿದರು.
ಅಧ್ಯಕ್ಷರ ಹಿನ್ನೆಲೆ:
ಅನುರ ಕುಮಾರ ದಿಸ್ಸನಾಯಕೆಯವರು ಎನ್‌ಪಿಪಿ ಒಕ್ಕೂಟದ ನೇತೃತ್ವದ ಅಧ್ಯಕ್ಷರು, ಜನತಾ ವಿಮುಕ್ತಿ ಪೆರಮುನ (ಜೆವಿಪಿ) ಅಥವಾ ಪೀಪಲ್ಸ್ ಲಿಬರೇಶನ್ ಫ್ರಂಟ್‌ನ ನಾಯಕರೂ ಆಗಿದ್ದಾರೆ. ಮಾರ್ಕ್ಸ್‌ವಾದಿ ಪಕ್ಷವಾದ ಜೆವಿಪಿ 1971 ಮತ್ತು 1987-89ರಲ್ಲಿ ಸಮಾಜವಾದಿ ಕ್ರಾಂತಿಕಾರಿಗಳ ಸಶಸ್ತ್ರ ದಂಗೆಗಳ ಮೂಲಕ ಅಧಿಕಾರವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿತು, ಇವೆರಡನ್ನೂ ಹಿಂಸಾತ್ಮಕವಾಗಿ ನಿಗ್ರಹಿಸಲಾಯಿತು. ಈ ವಿಫಲ ಪ್ರಯತ್ನಗಳ ನಂತರ, ಜೆವಿಪಿ 1994ರಲ್ಲಿ ಪ್ರಜಾಸತ್ತಾತ್ಮಕ ರಾಜಕೀಯಕ್ಕೆ ಪರಿವರ್ತನೆಯಾಯಿತು. ಅದೇನೇ ಇದ್ದರೂ, ಜೆವಿಪಿ ಸಾಂದರ್ಭಿಕವಾಗಿ ವಿವಿಧ ಅಧ್ಯಕ್ಷರನ್ನು ಬೆಂಬಲಿಸಿದೆ ಮತ್ತು ಸರಕಾರಗಳಲ್ಲಿ ಸಂಕ್ಷಿಪ್ತವಾಗಿ ಭಾಗವಹಿಸಿದೆ.
ದಿಸ್ಸನಾಯಕೆ ಅವರು ತಮ್ಮ ಶಾಲಾ ವರ್ಷಗಳಲ್ಲಿ ಜೆವಿಪಿಯೊಂದಿಗೆ ಸಂಬಂಧ ಹೊಂದಿದ್ದರು ಮತ್ತು 1987-1989ರ ಬಂಡಾಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅವರು ಶೀಘ್ರವಾಗಿ ಪಕ್ಷದೊಳಗೆ ಮುನ್ನಡೆದರು, ಮಹತ್ವದ ನಾಯಕರಾದರು. 1995ರಲ್ಲಿ, ಅವರನ್ನು ಸಮಾಜವಾದಿ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ಸಂಘಟಕ ಎಂದು ಹೆಸರಿಸಲಾಯಿತು ಮತ್ತು ಜೆವಿಪಿಯ ಕೇಂದ್ರ ಕಾರ್ಯಕಾರಿ ಸಮಿತಿಗೆ ಸೇರಿದರು. 1998ರ ಹೊತ್ತಿಗೆ, ಅವರು ಜೆವಿಪಿ ಪಾಲಿಟ್‌ಬ್ಯೂರೋ ಸದಸ್ಯರಾಗಿದ್ದರು. 2000 ದಲ್ಲಿ ಸಂಸತ್ತಿಗೆ ಚುನಾಯಿತರಾದ ದಿಸ್ಸನಾಯಕೆ ಅವರು 2004ರಲ್ಲಿ ಅಧ್ಯಕ್ಷ ಕುಮಾರತುಂಗಾ ಅವರ ಅಡಿಯಲ್ಲಿ ಕೃಷಿ, ಜಾನುವಾರು, ಭೂಮಿ ಮತ್ತು ನೀರಾವರಿಗಾಗಿ ಕ್ಯಾಬಿನೆಟ್ ಮಂತ್ರಿಯಾಗಿ ನೇಮಕಗೊಂಡರು. ಅವರು 2014ರಲ್ಲಿ ಸೋಮವಂಶ ಅಮರಸಿಂಗ್ ಅವರ ನಂತರ ಜೆವಿಪಿ ನಾಯಕರಾಗಿ ಆಯ್ಕೆಯಾದರು ಮತ್ತು 2019ರಲ್ಲಿ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರು, ಶೇ.3 ರಷ್ಟು ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು.
ದಿಸ್ಸನಾಯಕೆಯವರ ಗೆಲುವಿಗೆ ಕಾರಣ:
1. ಅನುರ ಅವರ ಜನಪ್ರಿಯತೆ, ಪಟ್ಟಭದ್ರ ಹಿತಾಸಕ್ತಿಗಳ- ವಿರೋಧಿ ಮತ್ತು ಭ್ರಷ್ಟಾಚಾರ-ವಿರೋಧಿ ಅಭಿಯಾನವು ಭ್ರಷ್ಟ ಗಣ್ಯರು ಮತ್ತು ಮುಖ್ಯವಾಹಿನಿಯ ಸಾಂಪ್ರದಾಯಿಕ ಪಕ್ಷಗಳಿಗೆ ಸವಾಲು ಹಾಕುವ ವ್ಯಕ್ತಿಯಾಗಿ ಗುರುತಿಸಿಕೊಳ್ಳುವಂತಾಯಿತು. ಭ್ರಷ್ಟಾಚಾರ, ರಾಜಕಾರಣಿಯ ಹೊಣೆಗಾರಿಕೆ, ಖಾಸಗೀಕರಣವನ್ನು ಹಿಮ್ಮೆಟ್ಟಿಸುವುದು, ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು, ಸಂಪತ್ತಿನ ಮರುಹಂಚಿಕೆ ಮತ್ತು ಸಾಮಾಜಿಕ ಕಲ್ಯಾಣವನ್ನು ವಿಸ್ತರಿಸುವುದು ಇತ್ಯಾದಿ ಮತದಾರರು ಅವನ್ನು ಗಮನಿಸುವಂತಾಯಿತು. ವಿಶೇಷವಾಗಿ ರಾಜಕೀಯ ಪ್ರಕ್ಷುಬ್ಧತೆ ಮತ್ತು ಪಕ್ಷ ಬದಲಾವಣೆಗಳ ಪರಿಣಾಮವಾಗಿ ಅನುರ ಅವರ ಜೆವಿಪಿ, ಕೇವಲ ಮೂರು ಸಂಸದರನ್ನು ಹೊಂದಿದ್ದರೂ, ಹಿಂದೆ ಕಡಿಮೆ ಪ್ರಭಾವವನ್ನು ಹೊಂದಿದ ಪ್ರದೇಶಗಳಲ್ಲಿಯೂ ತಮ್ಮ ಬೆಂಬಲವನ್ನು ಹೆಚ್ಚಿಸಿದರು.
2. ವಿಶೇಷವಾಗಿ ಜೆವಿಪಿಯ ಹಿಂದಿನ ಬಂಡಾಯಗಳ ಬಗ್ಗೆ ಪರಿಚಯವಿಲ್ಲದ ಯುವಕರಲ್ಲಿ ಅವರ ಮತದಾರರ ಸಂಖ್ಯೆಯು ಗಮನಾರ್ಹವಾಗಿ ಬೆಳೆಯಿತು, 1 ಮಿಲಿಯನ್ ಹೊಸ ಮತದಾರರ ಸೇರ್ಪಡೆಯು ಅವರಿಗೆ ವರವಾಯಿತು. ಎಸ್‌ಎಲ್‌ಪಿಪಿಯೊಂದಿಗಿನ ವ್ಯಾಪಕ ಭ್ರಮನಿರಸನ ಮತ್ತು ಆರ್ಥಿಕ ಬಿಕ್ಕಟ್ಟು ಸಿಂಹಳೀಯ ಮತದಾರರಲ್ಲಿ ಜೆವಿಪಿಯ ಆಕರ್ಷಣೆಯನ್ನು ಹೆಚ್ಚಿಸಿತು. ಯುಎನ್‌ಪಿಯಲ್ಲಿನ ವಿಭಜನೆಯಿಂದಾಗಿ ತಮಿಳು ಮತ್ತು ಮುಸ್ಲಿಮ್ ಮತಗಳೊಳಗಿನ ವಿಭಜನೆಗಳು ಮತ್ತು ಅಲ್ಪಸಂಖ್ಯಾತ ಪಕ್ಷಗಳ ವಿವಿಧ ಅಭ್ಯರ್ಥಿಗಳಿಗೆ ದೊರೆತ ಬೆಂಬಲವು ಚುನಾವಣೆಯಲ್ಲಿ ಅನುರ ಅವರ ಸ್ಥಾನಕ್ಕೆ ಮತ್ತಷ್ಟು ಬಲ ಕೊಟ್ಟಿತು.
ನೂತನ ಅಧ್ಯಕ್ಷರ ಸವಾಲುಗಳು:
ಶ್ರೀಲಂಕಾದಲ್ಲಿ ಹಣದುಬ್ಬರವು ಕಳೆದ ತಿಂಗಳು 0.5 ಪ್ರತಿಶತಕ್ಕೆ ಇಳಿದಿದೆ ಮತ್ತು ದೇಶದ ಜಿಡಿಪಿ ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಬೆಳೆಯುವ ನಿರೀಕ್ಷೆಯಿದೆ. ಲಕ್ಷಾಂತರ ಶ್ರೀಲಂಕಾ ನಾಗರಿಕರು ಬಡತನ ಮತ್ತು ಸಾಲದ ಹೊರೆಯಿಂದ ಬಳಲುತ್ತಿದ್ದಾರೆ. ಅನೇಕರು ತಮ್ಮ ಉಜ್ವಲ ಭವಿಷ್ಯಕ್ಕಾಗಿ ನಾಯಕರಾದ ಅನುರ ಕುಮಾರ ದಿಸ್ಸನಾಯಕೆ ಅವರ ಮೇಲೆ ಭರವಸೆಯನ್ನು ಇಟ್ಟಿದ್ದಾರೆ. ಶ್ರೀಲಂಕಾದ ಆರ್ಥಿಕತೆಯನ್ನು ಸುಸ್ಥಿರ ಮತ್ತು ಅಂತರ್ಗತ ಬೆಳವಣಿಗೆಯತ್ತ ಮುನ್ನಡೆಸುವ ಸವಾಲನ್ನು ದಿಸ್ಸನಾಯಕೆ ಎದುರಿಸಬೇಕಾಗಿದೆ. ಸ್ಥಳೀಯ ಮತ್ತು ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳೆರಡರ ವಿಶ್ವಾಸವನ್ನು ಗಳಿಸುವುದು, ಹೂಡಿಕೆದಾರರನ್ನು ಆಕರ್ಷಿಸುವುದು ಮತ್ತು 22 ಮಿಲಿಯನ್ ಜನಸಂಖ್ಯೆಯ ಕಾಲು ಭಾಗದಷ್ಟು ಜನರು ಬಡತನದಿಂದ ಪಾರಾಗುವಂತೆ ಮಾಡಬೇಕಾದ ಗುರುತರ ಜವಾಬ್ದಾರಿ ಅವರ ಮೇಲಿದೆ.
ಇದನ್ನು ಸಾಧಿಸಲು, 2025ರ ವೇಳೆಗೆ ಜಿಡಿಪಿಯ 2.3 ಪ್ರತಿಶತದ ಪ್ರಾಥಮಿಕ ಸಮತೋಲನ ಗುರಿಯನ್ನು ತಲುಪುವ ಗುರಿಯನ್ನು ಹೊಂದಿದೆ. ಸಾಲ ಪುನರ್ ರಚನಾ ಯೋಜನೆಯ ಮೂಲಕ ಶ್ರೀಲಂಕಾದ ಒಟ್ಟಾರೆ ಸಾಲವನ್ನು 16.9 ಶತಕೋಟಿಗಳಷ್ಟು ಕಡಿಮೆ ಮಾಡಲು ದಿಸ್ಸನಾಯಕೆ ಕೆಲಸ ಮಾಡಬೇಕು. ಅವರು ಉತ್ಪಾದನೆ, ಸೇವೆಗಳಲ್ಲಿನ ಸುಧಾರಣೆ, ತೆರಿಗೆ ಕಡಿತ ಮತ್ತು ಉದ್ಯೋಗಗಳ ಸೃಷ್ಟಿ ಗಳಂತಹ ನಿರೀಕ್ಷೆಗಳನ್ನು ಸಹ ಪೂರೈಸಬೇಕಾಗಿದೆ. ಈ ನಿರೀಕ್ಷೆಗಳನ್ನು ಈಡೇರಿಸದಿದ್ದರೆ, ಚುನಾವಣೋತ್ತರ ಅಶಾಂತಿಯ ಅಪಾಯವು ಹೆಚ್ಚಾಗಬಹುದು.
ಆರ್ಥಿಕ ಚೇತರಿಕೆಯ ಮೇಲೆ ಬಲವಾದ ಗಮನವನ್ನು ಹೊಂದಿದ್ದರೂ, ಶ್ರೀಲಂಕಾದ ರಾಜಕೀಯ ನಾಯಕರು ಹಲವಾರು ಬಾರಿ ತಮ್ಮ ಭರವಸೆಗಳನ್ನು ಈಡೇರಿಸಲು ವಿಫಲವಾದ ಇತಿಹಾಸವನ್ನು ಹೊಂದಿದ್ದಾರೆ. ದಿಸ್ಸನಾಯಕೆ ಅವರು ವಿಭಿನ್ನ ಪರಿಹಾರಗಳನ್ನು ಪ್ರಸ್ತಾವಿಸಿದ್ದಾರೆ, ಆದರೆ ಈ ಸುಧಾರಣೆಗಳನ್ನು ಕೈಗೊಳ್ಳುವುದು ಸವಾಲಿನದಾಗಿರುತ್ತದೆ, ವಿಶೇಷವಾಗಿ ಐಎಂಎಫ್‌ನಿಂದ ಕಠಿಣ ಷರತ್ತುಗಳನ್ನು ನೀಡಲಾಗಿದೆ, ಇದು ಕಠಿಣ ಕಡಿತ ನೀತಿ ಮತ್ತು ಹಣಕಾಸಿನ ಶಿಸ್ತಿಗೆ ಒತ್ತು ನೀಡುತ್ತದೆ. ಹೆಚ್ಚುವರಿಯಾಗಿ, ಪ್ರಮುಖ ಸಾಲದಾತರು ಮತ್ತು ಹೂಡಿಕೆದಾರರೊಂದಿಗೆ ಶ್ರೀಲಂಕಾದ ಸಂಬಂಧಗಳು, ವಿಶೇಷವಾಗಿ ನೆರೆಯ ಭಾರತ ಮತ್ತು ಚೀನಾ, ಅದರ ಆರ್ಥಿಕ ಚೇತರಿಕೆಯಲ್ಲಿ ನಿರ್ಣಾಯಕ ಅಂಶವಾಗಿದೆ. ಆಡಳಿತದ ಅನುಭವದ ಕೊರತೆ ಮತ್ತು ದುಬಾರಿ ಆಶ್ವಾಸನೆಗಳನ್ನು ಕಾರ್ಯರೂಪಕ್ಕೆ ತರಲು ದಿಸ್ಸ ನಾಯಕೆ ಸಾಕಷ್ಟು ಸಾಹಸವನ್ನೇ ಮಾಡಬೇಕಾಗಿ ಬರಬಹುದು.
ಭಾರತದ ಮುಂದಿರುವ ಸವಾಲುಗಳು:
ಈ ಚುನಾವಣೆಯ ಪ್ರಚಾರದಲ್ಲಿ ಯಾವೊಂದು ಪಕ್ಷವು ಭಾರತ ವಿರೋಧಿ ಘೋಷಣೆಯಾಗಲಿ, ಟೀಕೆಗಳನ್ನಾಗಲಿ ಮಾಡಲಿಲ್ಲ. ಭಾರತವು 1971ರಲ್ಲಿ ಜೆವಿಪಿ ದಂಗೆಯನ್ನು ನಿಗ್ರಹಿಸುವಲ್ಲಿ ಶ್ರೀಲಂಕಾ ಸರಕಾರಕ್ಕೆ ಗಣನೀಯವಾಗಿ ಬೆಂಬಲ ನೀಡಿತ್ತು. 1987ರ ಭಾರತ-ಶ್ರೀಲಂಕಾ ಒಪ್ಪಂದವನ್ನು ಕಟುವಾಗಿ ವಿರೋಧಿಸಿದ ಅನುರ ಕುಮಾರ ದಿಸ್ಸನಾಯಕೆ ಅವರ ಜೆವಿಪಿ ಪಕ್ಷ ಇಂದಿಗೂ ಶ್ರೀಲಂಕಾದ ವ್ಯವಹಾರಗಳಲ್ಲಿ ಭಾರತದ ಪಾತ್ರವನ್ನು ಟೀಕಿಸುತ್ತ ಬಂದಿದೆ. ಭಾರತಕ್ಕೆ ಇತ್ತೀಚಿನ ಭೇಟಿಯ ಹೊರತಾಗಿಯೂ, ವಿದೇಶಿ ಕಂಪೆನಿಗಳಿಗೆ, ವಿಶೇಷವಾಗಿ ಭಾರತದ ಅದಾನಿ ಗ್ರೂಪ್‌ಗೆ ರಾಷ್ಟ್ರೀಯ ಸ್ವತ್ತುಗಳನ್ನು ಮಾರಾಟ ಮಾಡುವುದನ್ನು ಎನ್‌ಪಿಪಿ ವಿರೋಧಿಸುತ್ತದೆ ಮತ್ತು ಈಗಾಗಲೇ ಅದಾನಿಯೊಂದಿಗಿನ ಇಂಧನ ಒಪ್ಪಂದವನ್ನು ರದ್ದುಗೊಳಿಸುವುದಾಗಿ ದಿಸ್ಸನಾಯಕೆ ಬೆದರಿಕೆ ಹಾಕಿದ್ದಾರೆ. ಶ್ರೀಲಂಕಾದ ಸಮುದ್ರದ ಸರಹದ್ದಿನಲ್ಲಿ ಭಾರತೀಯ ಮೀನುಗಾರರು ನಡೆಸುವ ಅಕ್ರಮ ಮೀನುಗಾರಿಕೆಯನ್ನು ಸಂಪೂರ್ಣವಾಗಿ ತಡೆಯುವ ಘೋಷಣೆ ಮಾಡಿದ್ದಾರೆ.
ವಿಶ್ಲೇಷಕರ ಪ್ರಕಾರ ದಿಸ್ಸನಾಯಕೆಯ ಗೆಲುವು ಶ್ರೀಲಂಕಾದಲ್ಲಿ ಚೀನಾದ ಪ್ರಬಲ ಅಸ್ತಿತ್ವಕ್ಕೆ ಕಾರಣವಾಗಬಹುದು. ಏಕೆಂದರೆ ಅವರ ಪಕ್ಷವು ಭಾರತೀಯ ಯೋಜನೆಗಳಿಗೆ ಹೋಲಿಸಿದರೆ ಚೀನಾದ ಹೂಡಿಕೆಗಳನ್ನು ಹೆಚ್ಚು ಸ್ವಾಗತಿಸುತ್ತದೆ. ಕೆಲವು ಮೂಲಗಳ ಪ್ರಕಾರ, ಭಾರತವು ಈ ಚುನಾವಣೆಯಲ್ಲಿ ಸಜಿತ್ ಪ್ರೇಮದಾಸ ಅವರನ್ನು ಬೆಂಬಲಿಸಿತು ಮತ್ತು ಐಟಿಎಕೆನಂತಹ ಪ್ರಮುಖ ಶ್ರೀಲಂಕಾದ ತಮಿಳು ಪಕ್ಷಗಳನ್ನು ಬೆಂಬಲಿಸಲು ಪ್ರೋತ್ಸಾಹಿಸಿತು, ಏಕೆಂದರೆ ಅವರು ಸಂವಿಧಾನದ 13ನೇ ತಿದ್ದುಪಡಿಯನ್ನು ಸಂಪೂರ್ಣವಾಗಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ. ಇದು ದೀರ್ಘಕಾಲದ ಭಾರತೀಯ ಬೇಡಿಕೆಯಾಗಿದೆ.
ಶ್ರೀಲಂಕಾದ ತಮಿಳರು ಸಿಂಹಳೀಯ ಅಭ್ಯರ್ಥಿಯನ್ನು ಬೆಂಬಲಿಸಬೇಕೇ ಅಥವಾ ಅರಿಯನೇತ್ರನ್‌ಗೆ ಮತ ಹಾಕುವ ಮೂಲಕ ತಮ್ಮ ಅಸ್ಮಿತೆಯನ್ನು ಪ್ರತಿಪಾದಿಸಬೇಕೇ ಎಂಬ ಬಗ್ಗೆ ಸಂಘರ್ಷಕ್ಕಿಳಿದಿದ್ದರು. ಅಂತಿಮವಾಗಿ, ಅತಿ ಹೆಚ್ಚು ಶ್ರೀಲಂಕಾ ತಮಿಳಿಯನರು ತಮಿಳು ಅಭ್ಯರ್ಥಿ ಅರಿಯ ನೇತ್ರನ್ ವಿರುದ್ಧವಾಗಿ ಸಜಿತ್ ಪ್ರೇಮದಾಸ ಅವರಿಗೆ ಮತ ಹಾಕಿದರು. ಅನೇಕ ತಮಿಳರು ಫಲಿತಾಂಶಗಳಿಂದ ಅತೃಪ್ತರಾಗಿದ್ದಾರೆ. ಜೆವಿಪಿ ಪಕ್ಷದ ಹಿನ್ನೆಲೆ ಮತ್ತು ಅವರಿಗೆ ಶ್ರೀಲಂಕಾ ತಮಿಳರ ಮೇಲಿರುವ ಧೋರಣೆ ಬಗ್ಗೆ ಸಂಶಯ ಮತ್ತು ಭಯವನ್ನು ಹೊಂದಿರುವ ತಮಿಳರು ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಅನುಭವಿಸುತ್ತಾರೆ. ಈ ಎಲ್ಲಾ ಸಂಗತಿಗಳು ಭವಿಷ್ಯದಲ್ಲಿ ದಿಸ್ಸನಾಯಕೆ ಅವರನ್ನು ಪ್ರಚೋದಿಸಬಹುದು ಮತ್ತು ಭಾರತ-ಶ್ರೀಲಂಕಾ ಸಂಬಂಧಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಬಹುದು. ಆದರೂ, ಎನ್‌ಪಿಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಪ್ರೊಫೆಸರ್ ಅನಿಲ್ ಜಯಂತ ಅವರು ಸಂದರ್ಶನದಲ್ಲಿ ಶ್ರೀಲಂಕಾದ ಆರ್ಥಿಕತೆಯನ್ನು ಸ್ಥಿರಗೊಳಿಸಲು ತಮ್ಮ ನಾಯಕ ಎಲ್ಲಾ ಪ್ರಮುಖ ಶಕ್ತಿಗಳೊಂದಿಗೆ ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದ್ದಾರೆ.