ಬಿಸಿಲ ಬೇಗೆ ತಣಿಸಲು ಮಾರುಕಟ್ಟೆಗೆ ಲಗ್ಗೆಯಿಟ್ಟ ಕಲ್ಲಂಗಡಿ
Photo:freepik
ಹೊಸಕೋಟೆ: ರಣಬಿಸಿಲಿಗೆ ಕಂಗಾಲಾದ ಜನರ ದಾಹ ತಣಿಸಲು ಮಾರು ಕಟ್ಟೆಗೆ ಕಲ್ಲಂಗಡಿ ಹಣ್ಣು ಲಗ್ಗೆಯಿಟ್ಟಿದ್ದು, ತಾಜಾ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ.
ಬೇಸಿಗೆ ಪ್ರಾರಂಭದಲ್ಲೇ ಕಲ್ಲಂಗಡಿ, ತಂಪು ಪಾನೀಯ ಮತ್ತು ಎಳನೀರು ಜನರ ಬಾಯಾರಿಕೆಯನ್ನು ತಣಿಸಲು ಸಹಕಾರಿಯಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಬಿಸಿಲು ನೆತ್ತಿ ಸುಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಕೆರೆಗಳು ನೀರಿಲ್ಲದೆ ಬರಿದಾಗುತ್ತಿದ್ದು ಸಂಕಷ್ಟ ಪರಿಸ್ಥಿತಿ ಎದುರಾಗಿದೆ.
ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ಮನೆಯಿಂದಾಚೆ ಓಡಾಡುವುದು ಕಡಿಮೆಮಾಡಿದ್ದಾರೆ.
ಬೇಸಿಗೆಯಲ್ಲಿ ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳು, ಹೆಚ್ಚು ಜನಸಂದಣಿ ಇರುವ ಸ್ಥಳಗಳು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ಕಲ್ಲಂಗಡಿ ಹಣ್ಣು ಸಾಮಾನ್ಯವಾಗಿ ಕಂಡುಬರುತ್ತಿದೆ. ಮೊದಲೆಲ್ಲಾ ನೀರು ಹೆಚ್ಚಾಗಿದ್ದಾಗ ಈ ಹಣ್ಣನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದ್ದು, ಬೀಜ ಬಿತ್ತನೆ ಮಾಡಿದಾಗಿನಿಂದ ಕಟಾವು ಆಗುವ ತನಕ ತೋಟಗಳನ್ನು ಪೋಷಣೆ ಮಾಡಿ ಬೆಳೆ ಬೆಳೆಯಲಾಗುತ್ತಿತ್ತು ಎನ್ನುತ್ತಾರೆ ರೈತರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 54ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ಬೆಳೆಯಲಾಗಿದೆ. ಅದರಲ್ಲಿ ನೆಲಮಂಗಲ ತಾಲೂಕಿನಲ್ಲಿ 52ಹೆಕ್ಟೇರ್ ಪ್ರದೇಶ ಹಾಗೂ ಹೊಸಕೋಟೆ ತಾಲೂಕಿನಲ್ಲಿ ಎರಡು ಹೆಕ್ಟೇರ್ನಲ್ಲಿ ಮಾತ್ರ ಬೆಳೆಯಲಾಗಿದೆ. ಇನ್ನುಳಿದ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಲ್ಲಂಗಡಿ ಬೆಳೆಯುತ್ತಿಲ್ಲ.
ಒಂದು ಪೀಸ್ಗೆ 20 ರೂ. : ಕಲ್ಲಂಗಡಿ ಸಹಜವಾಗಿ ಬೇಸಿಗೆಯಲ್ಲಿ ಹೆಚ್ಚು ಮಾರಾಟವಾಗುವ ಹಣ್ಣು. ಆದರೆ ಅದರ ಬೆಲೆ ಮಾತ್ರ ಗ್ರಾಹಕರ ಕೈಕಚ್ಚುತ್ತಿದೆ. ಒಂದು ಕಲ್ಲಂಗಡಿ ಹಣ್ಣು ಖರೀದಿಸಬೇಕಾದರೆ ಕೆ.ಜಿಗೆ 30 ರೂ.ನಂತೆ ಸುಮಾರು 6 ಕೆ.ಜಿ ತೂಗುವ ಹಣ್ಣಿಗೆ 180 ರೂ. ಕೊಟ್ಟು ಖರೀದಿಸಬೇಕಾಗುತ್ತದೆ. ಆದರೆ ಕೆಲವರು ಅಂಗಡಿಗಳ ಬಳಿಯೇ ಕಲ್ಲಂಗಡಿ ಹಣ್ಣನ್ನು ಸೇವಿಸಿ ಬೇಸಿಗೆಯಲ್ಲಿ ತಮ್ಮ ದಣಿವಾರಿಸಿಕೊಳ್ಳುತ್ತಾರೆ. ಕಳೆದ ವರ್ಷ ಕಲ್ಲಂ ಗಡಿಗೆ ಪ್ರತೀ ಕೆ.ಜಿಗೆ 20ರಿಂದ 30 ರೂ. ಬೆಲೆ ಇತ್ತು. ಒಂದೊಂದು ಕಲ್ಲಂಗಡಿ ಹಣ್ಣು ಕನಿಷ್ಠ 4 ಕೆ.ಜಿಯಿಂದ 10 ಕೆ.ಜಿಯವರೆಗೆ ತೂಕವಿದೆ. ಕಲ್ಲಂಗಡಿ ವ್ಯಾಪಾರ ಜೂನ್ ತಿಂಗಳವರೆಗೂ ಇರಲಿದ್ದು, ಬೆಲೆ ಸ್ಥಿರತೆ ಕಾಯ್ದುಕೊಳ್ಳಲಿದೆ ಎಂದು ಕಲ್ಲಂಗಡಿ ಹಣ್ಣಿನ ವ್ಯಾಪಾರಸ್ಥರು ಹೇಳುತ್ತಾರೆ.