ಬಿಜೆಪಿ ಬಿಕ್ಕಟ್ಟನ್ನು ಬಯಲಿಗೆ ತಂದ ಹರ್ಯಾಣ ವಿದ್ಯಮಾನ
ಬಿಜೆಪಿಯಲ್ಲೀಗ ತಳಮಳದ ಕಾಲ. ಎನ್‌ಡಿಎ ಮೈತ್ರಿಕೂಟ ದೊಳಗೆ ಅದು ತನ್ನ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾತುಕತೆಗಳಲ್ಲಿ ಒಂದರ ಬೆನ್ನಿಗಿನ್ನೊಂದರಂತೆ ಅಡೆತಡೆಗಳನ್ನು ಎದುರಿಸುತ್ತಿದೆ. ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದಲ್ಲಿ ನಾಯಕರು ಎದುರಿಸುತ್ತಿರುವಂಥದೇ ಸವಾಲುಗಳು ಬಿಜೆಪಿಗೂ ಈಗ ಎದುರಾಗಿವೆ. ಇದಕ್ಕೆ ಹರ್ಯಾಣದಲ್ಲಿನ ಬೆಳವಣಿಗೆ ಒಂದು ತಾಜಾ ಸಾಕ್ಷಿ.
ಹರ್ಯಾಣದಲ್ಲಿ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿ ಜೊತೆಗಿನ ಸೀಟು ಹಂಚಿಕೆ ಮಾತುಕತೆಗಳು ವಿಫಲವಾದ ಬೆನ್ನಲ್ಲೇ ಮಂಗಳವಾರ ಬೆಳಗ್ಗೆ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಹರ್ಯಾಣ ಸರಕಾರ ತನ್ನ ಇಡೀ ಸಂಪುಟದೊಂದಿಗೆ ರಾಜೀನಾಮೆ ನೀಡಿತು. ಮಿತ್ರಪಕ್ಷಗಳೊಂದಿಗೆ ಬಿಜೆಪಿ ಗುದ್ಧಾಟದ ಇತ್ತೀಚಿನ ಪರಿಣಾಮ ಇದಾಗಿದೆ. ಲೋಕಸಭೆ ಯಲ್ಲಿ ಪ್ರತಿಷ್ಠಿತ ರೋಹ್ಟಕ್ ಸೇರಿದಂತೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಜೆಜೆಪಿ ಪಟ್ಟು ಹಿಡಿದಾಗ ಬಿಜೆಪಿ ಸಮ್ಮತಿಸಲಿಲ್ಲ. ಕಡೆಗೆ ಮೈತ್ರಿ ಮುರಿದುಕೊಳ್ಳುವುದಕ್ಕೇ ಮುಂದಾಯಿತು. ಸ್ವತಂತ್ರ ಅಭ್ಯರ್ಥಿಗಳ ನೆರವಿನಿಂದ ಸರಕಾರ ರಚಿಸುವ ತಂತ್ರ ರೂಪಿಸಿತು. ನೂತನ ಮುಖ್ಯಮಂತ್ರಿಯಾಗಿ, ಹರ್ಯಾಣ ಬಿಜೆಪಿ ಅಧ್ಯಕ್ಷ ನಯಾಬ್ ಸಿಂಗ್ ಸೈನಿ ಆಯ್ಕೆಯಾಗಿದ್ದಾರೆ.
ಜನಪ್ರಿಯವಲ್ಲದ ಮುಖ್ಯಮಂತ್ರಿ ಖಟ್ಟರ್ ರಾಜೀನಾಮೆ ನೀಡುವುದರೊಂದಿಗೆ, 2022ರಲ್ಲಿ ಗುಜರಾತ್‌ನಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮೊದಲು ವಿಜಯ್ ರೂಪಾನಿ ಅವರನ್ನು ಕೆಳಗಿಳಿಸಿ ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ್ದ ಪ್ರಯೋಗದ ಪುನರಾವರ್ತನೆ ಆದಂತಾಗಿದೆ. ಆದರೆ, ಪ್ರತೀ ಬಾರಿಯೂ ಬಿಜೆಪಿ ಇಂತಹ ಬಿಕ್ಕಟ್ಟು ಎದುರಿಸಿದಾಗ, ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣಗಳಲ್ಲಿ ಆಗಾಗ ಉಲ್ಲೇಖಿಸುವ ಮೈತ್ರಿ ಧರ್ಮದ ತತ್ವಗಳನ್ನು ಮರೆತು ತನ್ನದೇ ಆದ ಮಿತ್ರಪಕ್ಷಗಳ ವಿರುದ್ಧ ನಿಲ್ಲುವುದಕ್ಕೆ ಅಂಥ ಸಂದರ್ಭಗಳನ್ನು ಅವಕಾಶವಾಗಿ ಬಳಸಿಕೊಳ್ಳುವುದನ್ನು ಕಾಣಬಹುದು.
ಅಂದರೆ, ಬಿಜೆಪಿ ಹೊರಗೆ ಹೇಳಿಕೊಳ್ಳುವುದೇ ಬೇರೆ, ಸತ್ಯವೇ ಬೇರೆ ಎಂಬುದಕ್ಕೆ ಅಂಥ ಸಂದರ್ಭಗಳೆಲ್ಲ ನಿದರ್ಶನಗಳಾಗಿವೆ.
ಬಿಜೆಪಿ ತನ್ನ ಬಿಕ್ಕಟ್ಟಿನಿಂದ ಏನೇ ಲಾಭ ಪಡೆಯಲು ನೋಡಿದರೂ, ಏನೇ ಕಥೆಗಳನ್ನು ಹೇಳಿದರೂ, ಭಾರತದ ಸಮ್ಮಿಶ್ರ ರಾಜಕೀಯದ ಸ್ವರೂಪವು ಯಾವಾಗಲೂ ಪ್ರಬಲ ಶಕ್ತಿಯಾಗುವ ಯತ್ನದಿಂದ ಅದನ್ನು ಹಿಂದಕ್ಕೆ ಎಳೆದಿದೆ ಎಂಬುದನ್ನು ಗಮನಿಸ ಬಹುದು. ಚುನಾವಣಾ ಕಣಕ್ಕೆ ಇಳಿಯುವ ಮೊದಲು ಬಿಜೆಪಿಯು ಇತರ ಎಲ್ಲ ರಾಜಕೀಯ ಪಕ್ಷಗಳಂತೆ, ವಿರೋಧ ಪಕ್ಷಗಳಂತೆಯೇ ಜಟಿಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಹರ್ಯಾಣದ ವಿದ್ಯಮಾನ ಮತ್ತೊಮ್ಮೆ ಸಾಬೀತುಪಡಿಸಿದೆ. ಸೀಟು ಹಂಚಿಕೆ ವಿಚಾರದಲ್ಲಿ ‘ಇಂಡಿಯಾ’ ಮೈತ್ರಿಕೂಟದಲ್ಲಿನ ಏರಿಳಿತಗಳು, ತೊಡಕುಗಳು ಅದರ ಸೋಲಿನ ಒಪ್ಪಿಕೊಳ್ಳುವಿಕೆ ಅಥವಾ ವಿರೋಧ ಪಕ್ಷದ ಮೈತ್ರಿ ಎಷ್ಟು ತತ್ವಹೀನ ಎಂಬುದನ್ನು ತೋರಿಸುತ್ತದೆ ಎಂಬ ಬಿಜೆಪಿ ವಾದ ಕೂಡ ಒಂದು ಬಗೆಯ ಪ್ರಚಾರವೇ ಹೊರತು ಬೇರೇನೂ ಅಲ್ಲ.
ಲೋಕಸಭೆ ಚುನಾವಣೆಯಲ್ಲಿ ತನ್ನ ಮಿಷನ್ 370 ಗುರಿಯನ್ನು ಖಚಿತಪಡಿಸಿಕೊಳ್ಳಲು ನಿಜವಾಗಿಯೂ ಬಿಜೆಪಿಯಲ್ಲಿ ಆತ್ಮವಿಶ್ವಾಸ ಇದ್ದದ್ದೇ ಹೌದಾಗಿದ್ದಲ್ಲಿ, ಅದು ಒಡಿಶಾದ ಬಿಜು ಜನತಾ ದಳ ಮತ್ತು ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷದಂತಹ ಪ್ರತಿಸ್ಪರ್ಧಿಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾಗಿರಲಿಲ್ಲ. ಈಗ ವರ್ಷಗಳಿಂದ, ಒಡಿಶಾದಲ್ಲಿ ನವೀನ್ ಪಟ್ನಾಯಕ್ ಸರಕಾರವನ್ನು ಬಿಜೆಪಿ ಟೀಕಿಸಿತ್ತು ಮತ್ತು ವಿರೋಧಿಸಿತ್ತು. ವಾಸ್ತವವಾಗಿ ಅಲ್ಲಿನ ಬೆಳವಣಿಗೆ ಬಿಜೆಪಿಯ ಲೆಕ್ಕದಲ್ಲಿ ಒಂದು ವಿರೋಧಾಭಾಸ. ಅಲ್ಲಿ ರಾಜ್ಯ ನಾಯಕರ ಎಲ್ಲಾ ಚುನಾವಣಾ ಆಕಾಂಕ್ಷೆಗಳನ್ನು ಸಮಾಧಿ ಮಾಡಿ, ಮೋದಿ-ಶಾ ಜೋಡಿ ಪಕ್ಷದ ಸಾಂಪ್ರದಾಯಿಕ ಎದುರಾಳಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿಗೆ ಮುಂದಾಗಿದೆ.
ಬಿಜೆಪಿಯ ನಡೆ ಹೇಗೆಲ್ಲ ಬದಲಾಗುತ್ತ ಇರುತ್ತದೆಂದರೆ, ಅದು ಒಮ್ಮೆ ಕೆಲವರನ್ನು ಮಿತ್ರರು ಎನ್ನುತ್ತದೆ, ಮತ್ತೆ ಅವರನ್ನೇ ವೈರಿಗಳು ಎನ್ನುತ್ತದೆ, ಮತ್ತೆ ಅವರ ಜೊತೆಗೇ ಹೋಗುವ ಆಟವನ್ನಾಡುತ್ತದೆ.
2018ರಲ್ಲಿ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಎನ್‌ಡಿಎಯಿಂದ ಹೊರಬಿದ್ದಿದ್ದರು. ಆಗಿನಿಂದ ಬಿಜೆಪಿ ನಾಯಕರು ಆಂಧ್ರದ ಆ ನಾಯಕನ ವಿರುದ್ಧ ವಾಗ್ದಾಳಿ ನಡೆಸಲು ಯಾವುದೇ ಅವಕಾಶ ಸಿಕ್ಕರೂ ಬಿಟ್ಟಿದ್ದೇ ಇಲ್ಲ. ಅವರನ್ನು ಭ್ರಷ್ಟ, ಅನೈತಿಕ, ಅವಕಾಶವಾದಿ ಎಂದೆಲ್ಲ ಜರೆದರು ಮತ್ತು ಒಂದು ಹಂತದಲ್ಲಿ ಮೋದಿ ನೇತೃತ್ವದ ಕೇಂದ್ರ ಸರಕಾರ ಭ್ರಷ್ಟಾಚಾರದ ಆರೋಪದ ಮೇಲೆ ನಾಯ್ಡು ಅವರನ್ನು ಬಂಧಿಸಲು ರಾಜ್ಯದ ವೈ.ಎಸ್.ಆರ್. ಜಗನ್ ಮೋಹನ್ ರೆಡ್ಡಿ ಸರಕಾರಕ್ಕೆ ನೆರವಾಗಿತ್ತು. ಅಷ್ಟರವರೆಗೂ ಹೋಗಿದ್ದ ಬಿಜೆಪಿ ಈಗ ರೆಡ್ಡಿಯನ್ನು ಬಿಟ್ಟು ನಾಯ್ಡು ಅವರನ್ನು ಮಿತ್ರರನ್ನಾಗಿ ಆಯ್ಕೆ ಮಾಡಿಕೊಂಡಿದೆ ಮತ್ತು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಎರಡನ್ನೂ ಒಟ್ಟಾಗಿ ಎದುರಿಸಲು ಸಿದ್ಧವಾಗಿದೆ.
ಅದೇ ರೀತಿ, ಕಳೆದ ಎರಡು ವರ್ಷಗಳಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ವಿಷಕಾರಿ ಪ್ರಚಾರವನ್ನು ನಡೆಸಿತ್ತು. ಅಲ್ಲಿ ಕೂಡ ನಿತೀಶ್ ಅವರನ್ನು ಜರೆಯುವ ಯಾವುದೇ ಅವಕಾಶವನ್ನು ಬಳಸಿಕೊಳ್ಳಲು ಬಿಜೆಪಿ ಒಮ್ಮೆಯೂ ಹಿಂಜರಿಯಲಿಲ್ಲ. ‘ಇಂಡಿಯಾ’ ಬಣವನ್ನು ರಚಿಸುವಲ್ಲಿ ನಿತೀಶ್ ಕುಮಾರ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ನಿತೀಶ್ ಅವರ ಜೆಡಿಯುವನ್ನು ಒಡೆಯಲು ಮತ್ತು ಅವರ ಸರಕಾರವನ್ನು ಉರುಳಿಸಲು ಅನೇಕ ಸಂದರ್ಭಗಳನ್ನು ಸೃಷ್ಟಿಸಲು ಪ್ರಯತ್ನಿಸಿತ್ತು. ಅವರ ಸರಕಾರವನ್ನು ಜಂಗಲ್ ರಾಜ್ ಎಂದು ಟೀಕಿಸಿತ್ತು. ಆದರೆ ನಿತೀಶ್ ಕುಮಾರ್ ಜೊತೆ ಮತ್ತೆ ಒಂದಾಗುವ ವಿಷಯ ಬಂದಾಗ ಬಿಜೆಪಿ ಕೊಂಚವೂ ಹಿಂಜರಿಯಲಿಲ್ಲ, ಹಿಂದೆ ಮುಂದೆ ನೋಡಲಿಲ್ಲ.
ಹೆಚ್ಚಿನ ವಿರೋಧ ಪಕ್ಷಗಳಿಗಿಂತಲೂ ಉತ್ತಮವಾಗಿ ಹೊಸ ಮೈತ್ರಿ ಸಾಧ್ಯತೆಯನ್ನು ರೂಪಿಸಿದ ಕೀರ್ತಿ ಬಿಜೆಪಿಗೇ ಸಲ್ಲಬೇಕು. ಆದರೆ ತನ್ನ ಮಿತ್ರರನ್ನು ಗೌರವಿಸುವ ವಿಷಯಕ್ಕೆ ಬಂದಾಗ ಅದು ಎಲ್ಲ ತತ್ವಗಳನ್ನೂ ಮರೆತದ್ದೇ ಹೆಚ್ಚು. 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಜಯ ದಾಖಲಿಸಿದ ಕೂಡಲೇ ಅದು ತನ್ನ ಸಣ್ಣ ಒಬಿಸಿ ಮಿತ್ರರಾದ ಓಂ ಪ್ರಕಾಶ್ ರಾಜ್‌ಭರ್ ಅಥವಾ ಸ್ವಾಮಿ ಪ್ರಸಾದ್ ಮೌರ್ಯರನ್ನು ಹೇಗೆ ನಡೆಸಿಕೊಂಡಿತು ಎಂಬುದನ್ನು ನೆನಪಿಸಿಕೊಳ್ಳಬಹುದು. ಇದೀಗ ಮತ್ತೊಂದು ಸುತ್ತಿನ ಚುನಾವಣೆ ಎದುರಾಗಿದ್ದು, ಬಿಜೆಪಿ ಈಗಾಗಲೇ ರಾಜ್‌ಭರ್ ಅವರನ್ನು ಕಣಕ್ಕಿಳಿಸಿದ್ದು, ಮೌರ್ಯ ಅವರೊಂದಿಗೆ ಕೂಡ ಮೈತ್ರಿಗೆ ಮುಂದಾಗಿದೆ.
ಇದೇ ರೀತಿಯ ತನ್ನ ಧೋರಣೆಯ ಪರಿಣಾಮವಾಗಿ ಅದು ದೊಡ್ಡ ಪಾಲುದಾರ ಪಕ್ಷಗಳಾಗಿದ್ದ ಶಿವಸೇನೆ, ಶಿರೋಮಣಿ ಅಕಾಲಿದಳ (ಬಾದಲ್) ಎಲ್ಲವನ್ನೂ ಕಳೆದುಕೊಂಡಿದೆ. ಒಂದು ಹಂತದಲ್ಲಿ ಜೆಡಿಯುವನ್ನು ಕೂಡ ಅದು ಕಳೆದುಕೊಂಡಿತ್ತು. ಆದರೂ, ಬಿಜೆಪಿ ಮೊಂಡು ಬಲವನ್ನು ಬಳಸಿ, ನಾಯಕರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ, ಪಕ್ಷಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಮತ್ತು ತನ್ನ ಅಪ್ರತಿಮ ಹಣ ಮತ್ತು ಸ್ನಾಯು ಬಲದ ಮೂಲಕವೇ ತನ್ನ ಎಲ್ಲಾ ರಾಜಕೀಯ ಬಿಕ್ಕಟ್ಟುಗಳನ್ನು ನಿವಾರಿಸಬಲ್ಲೆ ಎಂಬ ಅಹಂ ಅನ್ನು ಅದು ತೋರಿಸುತ್ತಲೇ ಬಂದಿದೆ.
ಸಣ್ಣ ಪಕ್ಷಗಳು ಬಿಜೆಪಿಯ ಪಾಲುದಾರರೇ ಹೊರತು ಮಿತ್ರ ಪಕ್ಷಗಳಲ್ಲವೇ ಎಂಬ ಮತ್ತೊಂದು ಪ್ರಶ್ನೆಯೂ ಕಾಡುತ್ತದೆ.
ಮೋದಿ ನೇತೃತ್ವದ ಬಿಜೆಪಿಯ ನಡೆಗಳಲ್ಲಿ ಸೈದ್ಧಾಂತಿಕತೆಯಾಗಲೀ ತಾತ್ವಿಕತೆಯಾಗಲೀ ಇಲ್ಲವೇ ಇಲ್ಲ. ಜೆಜೆಪಿ ಮತ್ತು ಬಿಜೆಪಿಯ ವಿಭಜನೆ ಪ್ರಮುಖ ರಾಜ್ಯಗಳಲ್ಲಿ ಸಣ್ಣ, ಆದರೆ ಅತ್ಯಂತ ಪ್ರಮುಖ ಪಕ್ಷಗಳೊಂದಿಗಿನ ಬಿಜೆಪಿ ನಡವಳಿಕೆ ಹೇಗಿರುತ್ತದೆ ಎಂಬುದಕ್ಕೆ ಬಹಳ ಸ್ಪಷ್ಟವಾದ ಉದಾಹರಣೆ. ಮಹಾರಾಷ್ಟ್ರದಲ್ಲಿ ಕೂಡ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ನಡುವಿನ ಸೀಟು ಹಂಚಿಕೆ ಮಾತುಕತೆಗಳು ಜಟಿಲಗೊಂಡಿರುವ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ. ಅದರ ಮಹಾರಾಷ್ಟ್ರದ ಮಿತ್ರಪಕ್ಷಗಳಾದ ಶಿವಸೇನೆಯ ಏಕನಾಥ್ ಶಿಂದೆ ಬಣ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಬಣ ಮೋದಿ-ಶಾ ಜೋಡಿಯ ಧೂರ್ತ ಆಟದ ಉದಾಹರಣೆಗಳಂತೆ ಕಾಣಿಸುತ್ತವೆ. ಬಿಜೆಪಿ 30-32 ಸ್ಥಾನಗಳ ಸಿಂಹಪಾಲು ಪಡೆದರೆ, ಶಿಂದೆಗೆ 11-12 ಸ್ಥಾನಗಳನ್ನು ಮತ್ತು ಅಜಿತ್ ಪವಾರ್‌ಗೆ 4-5 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಆದರೆ, ಆರು ಸ್ಥಾನಗಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿರುವುದು ಮೂರೂ ಪಕ್ಷಗಳ ನಡುವೆ ಅಸಮಾಧಾನ ಭುಗಿಲೇಳುವುದಕ್ಕೆ ಕಾರಣವಾಗಿದೆ.
ಬಿಜೆಪಿಯು ಪಾಲುದಾರ ಪಕ್ಷಗಳನ್ನು ಸೆಳೆಯುವಲ್ಲಿ ಪಳಗಿರಬಹುದು. ಬಹುಶಃ ಅದರ ಬೃಹತ್ ಸಂಪನ್ಮೂಲಗಳ ಕಾರಣದಿಂದಾಗಿ ಬಿಜೆಪಿಗೆ ಅದು ಸಾಧ್ಯ. ಆದರೆ ಅದೇ ಪಕ್ಷಗಳ ಸ್ವತಂತ್ರ ಬೇಡಿಕೆಗಳ ವಿಚಾರದಲ್ಲಿ ಬಿಜೆಪಿ ನಡೆ ಕಟುವಾಗಿರುತ್ತದೆ. ಅದು ಅಂತಿಮವಾಗಿ ಹೀಗೆ ಮೈತ್ರಿ ಮುರಿದುಕೊಳ್ಳಲು ಕಾರಣವಾಗುತ್ತದೆ. ಆಗಾಗ ಬಿಜೆಪಿ ತನ್ನದೇ ಮಿತ್ರಪಕ್ಷವನ್ನು ಹಾಳುಮಾಡಲು ಪ್ರಯತ್ನಿಸಿದ ಉದಾಹರಣೆಗಳೂ ಇವೆ. ಈಗಲೂ ಕಾಣಿಸುತ್ತಿರುವುದು ಅದರ ಅಂಥದೇ ಒಂದು ನಡೆ.
ಇದೆಲ್ಲದರ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಗಮನಕ್ಕೆ ಬರುವ ಒಂದು ಸತ್ಯವೇನೆಂದರೆ, ಬಿಜೆಪಿ ಖಂಡಿತವಾಗಿಯೂ ನೈಜ ರಾಜಕೀಯದ ಎಳೆತಗಳು ಮತ್ತು ಒತ್ತಡಗಳಿಂದ ಮುಕ್ತವಾಗಿಲ್ಲ ಎಂಬುದು. ಅದು ಇತರ ಪಕ್ಷಗಳಿಂದ ಭಿನ್ನವಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳಲು ಬಯಸುತ್ತದೆ. ಲೋಕಸಭಾ ಚುನಾವಣೆಯ ಹೊತ್ತಿನಲ್ಲಿಯೂ ಬಿಜೆಪಿ ಪಾಳಯದಲ್ಲಿ ಇರುವ ಅವ್ಯವಸ್ಥೆಯ ಸ್ವರೂಪವನ್ನು ಈಗಿನ ಬೆಳವಣಿಗೆ ಮತ್ತೊಮ್ಮೆ ತೋರಿಸಿದೆ. ಇದು ಕೆಲವೊಮ್ಮೆ ಭಾರತೀಯ ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಇಲ್ಲದೇ ಹೋದರೆ ರಾಜಕೀಯದಲ್ಲಿ ವೈವಿಧ್ಯತೆಯೇ ಸಾಧ್ಯವಿಲ್ಲ. ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ತನ್ನ ಜೊತೆಗಿನ ಪಕ್ಷಗಳನ್ನು ಒಟ್ಟುಗೂಡಿಸಲು ಹೆಣಗಾಡುತ್ತಿರುವಂತೆ ತೋರುತ್ತಿದ್ದರೆ, ಬಿಜೆಪಿ ಕೂಡ ಎನ್‌ಡಿಎಯನ್ನು ಯಾವುದೇ ಮುಜುಗರದಿಂದ ಪಾರು ಮಾಡುವ ಒದ್ದಾಟದಲ್ಲಿದೆ ಎಂಬುದು ಸುಳ್ಳಲ್ಲ. ವಿಶೇಷವಾಗಿ ಚುನಾವಣಾ ಬಾಂಡ್‌ಗಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಅತಿ ಕಠಿಣ ನಿಲುವು ವ್ಯಕ್ತವಾದ ಬಳಿಕವಂತೂ ಬಿಜೆಪಿ ಒದ್ದಾಟ ಹೆಚ್ಚಿದಂತಿದೆ. ಮುಂದಿನ ಚುನಾವಣೆಯಂತೂ ಬಹಳ ಕುತೂಹಲಕಾರಿ ಪೈಪೋಟಿಯನ್ನು ನಿಶ್ಚಯಿಸಲಿದೆ ಎಂಬ ಎಲ್ಲ ಸುಳಿವುಗಳೂ ಸ್ಪಷ್ಟವಾಗುತ್ತಿವೆ.
(ಕೃಪೆ: thewire.in)