‘ಬಟರ್ ಫ್ರೂಟ್’ನತ್ತ ಕೊಡಗಿನ ಬೆಳೆಗಾರರ ಚಿತ್ತ
ಮಡಿಕೇರಿ: ಕೊಡಗು ಜಿಲ್ಲೆಯನ್ನು ‘ಬಟರ್ ಫ್ರೂಟ್’ (ಬೆಣ್ಣೆ ಹಣ್ಣು) ಲ್ಯಾಂಡ್ ಎಂದು ಬಣ್ಣಿಸಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಕಿತ್ತಳೆ ಹಣ್ಣು ಬೆಳೆಯುವವರ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಬೆಳೆಗಾರರು ಬಟರ್ ಫ್ರೂಟ್ ಬೆಳೆಯತ್ತ ಮುಖ ಮಾಡಿದ್ದಾರೆ.
ಕಸಿ ಮಾಡಿರುವ ‘ಆವಕಾಡೊ’ ಗಿಡವನ್ನು ನೆಟ್ಟು ಬೆಳೆಸಿದರೆ ಕೇವಲ ಎರಡ್ಮೂರು ವರ್ಷಗಳಲ್ಲಿ ಬಟರ್ ಫ್ರೂಟ್ ಫಸಲು ಬರುತ್ತಿದ್ದು, ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯಗಳಿಸಬಹುದಾಗಿದೆ. ಇದೀಗ ಜಿಲ್ಲೆಯಲ್ಲಿ ಬಟರ್ ಫ್ರೂಟ್ ಅವಧಿ ಆರಂಭಗೊಂಡಿದ್ದು, ಬಹುತೇಕ ಕಡೆಗಳಲ್ಲಿ ಬೆಳೆಗಾರರು ಕೊಯ್ಲು ಮಾಡುತ್ತಿದ್ದಾರೆ.
2005ರಲ್ಲಿ ಕೊಡಗು ಜಿಲ್ಲೆಯಲ್ಲಿ ಬಟರ್ ಫ್ರೂಟ್ ಬೆಳೆಯುವ ಪ್ರದೇಶಗಳು ಬೆರಳೆಣಿಕೆಯಷ್ಟು ಮಾತ್ರ ಇತ್ತು. ಇದೀಗ ಜಿಲ್ಲೆಯಲ್ಲಿ 700ರಿಂದ 1,000 ಎಕರೆವರೆಗೆ ಬಟರ್ ಫ್ರೂಟ್ ಬೆಳೆಯುವ ಪ್ರದೇಶಗಳು ಹೆಚ್ಚಳವಾಗಿವೆ.
‘ಆವಕಾಡೊ’ಗೆ ಭಾರೀ ಬೇಡಿಕೆ:
‘ಬಟರ್ ಫ್ರೂಟ್’, ‘ಆವಕಾಡೊ’ ಎಂಬಿತ್ಯಾದಿ ಹೆಸರುಗಳಿಂದ ಕರೆಯುವ ಬಟರ್ ಫ್ರೂಟ್‌ಗೆ ಭಾರೀ ಬೇಡಿಕೆ ಇದೆ. ಇದೀಗ ಫಸಲು ಕೊಯ್ಲಿಗೆ ಬಂದಿದ್ದು, ಬೇಸಿಗೆಯಾಗಿರುವುದರಿಂದ ಬಟರ್ ಫ್ರೂಟ್‌ಗೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಫೆಬ್ರವರಿಯಿಂದ ಮೇ ವರೆಗೆ ಕೊಡಗು ಜಿಲ್ಲೆಯಲ್ಲಿ ಮಾತ್ರ ಅತೀ ಹೆಚ್ಚಾಗಿ ಬಟರ್ ಫ್ರೂಟ್ ಫಸಲು ಸಿಗುವುದರಿಂದ ಬೇಸಿಗೆ ಸಮಯದಲ್ಲಿ ‘ಕೊಡಗಿನ ಆವಕಾಡೊ’ಗೆ ಉತ್ತಮ ಬೇಡಿಕೆ ಇದ್ದು, ಪ್ರತೀ ಕೆಜಿಗೆ 150 ರಿಂದ 200 ರೂ.ವರೆಗೆ ಮಾರಾಟವಾಗುತ್ತಿವೆ.
ಬೆಣ್ಣೆ ಹಣ್ಣು ವಾರ್ಷಿಕವಾಗಿ ಎರಡು ಬಾರಿ ಫಸಲು ಬರುತ್ತದೆ. ಜೂನ್‌ನಿಂದ ಸೆಪ್ಟೆಂಬರ್ ತಿಂಗಳಲ್ಲಿ ಫಸಲು ಬರುವ ಹಣ್ಣಿಗೆ ಬೇಡಿಕೆ ಕಡಿಮೆಯಿದೆ. ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಟರ್ ಫ್ರೂಟ್ ಲಭ್ಯವಿರುತ್ತದೆ. ಅದಲ್ಲದೆ ಮಳೆಗಾಲ ಆಗಿರುವುದರಿಂದ ಕೇವಲ ಕೆಜಿಗೆ 30 ರಿಂದ 40 ರೂ. ಮಾತ್ರ ಬೆಲೆ ಸಿಗುವುದು.ಈ ಅವಧಿಯಲ್ಲಿ ತಮಿಳುನಾಡಿನ ಕೊಡಯ್ಯಿಕಿನಾಲ್ ಬಟರ್ ಫ್ರೂಟ್ ಕೂಡ ಮಾರುಕಟ್ಟೆಗೆ ಲಗ್ಗೆಯಿಡುವುದರಿಂದ ಬೆಲೆ ಕುಸಿತವಾಗಿರುತ್ತದೆ. ಆದರೆ ಫೆಬ್ರವರಿ ತಿಂಗಳಿನಿಂದ ಮೇ ತಿಂಗಳವರೆಗೆ ಬಟರ್ ಫ್ರೂಟ್ ಹಣ್ಣು ಬೆಳೆದವರಿಗೆ ಬಂಪರ್ ಆಗಿದ್ದು ಲಕ್ಷಾಂತರ ರೂ. ಆದಾಯಗಳಿಸಬಹುದಾಗಿದೆ.
ಬೆಳೆಗಾರರ ಕೈ ಹಿಡಿದ ಫಸಲು!
ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಬಟರ್ ಫ್ರೂಟ್ ಪ್ಲಾಂಟೇಷನ್ ಇರಲಿಲ್ಲ. ಆದರೆ ಇದೀಗ ಕೊಡಗು ಜಿಲ್ಲೆಯ ಎಲ್ಲ ತೋಟಗಳಲ್ಲಿ ಬೆಳೆಯುತ್ತಿದ್ದಾರೆ. ಬಹುತೇಕರು ಕಾಫಿ ಗಿಡಕ್ಕಿಂತ ಹೆಚ್ಚಾಗಿ ಬಟರ್ ಫ್ರೂಟ್ ಗಿಡವನ್ನು ಆರೈಕೆ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಜಿಲ್ಲೆಯಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಅವಕಾಡೊ ಫಸಲು ಕೊಯ್ಲಿಗೆ ಬರುತ್ತಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಬಟರ್ ಫ್ರೂಟ್ ಬೇಗ ಫಸಲಿಗೆ ಬಂದಿದ್ದು ಜಿಲ್ಲೆಯಲ್ಲಿ ಬೆಳೆಗಾರರ ಕೈ ಹಿಡಿದಿದೆ. ಬೇಸಿಗೆ ಅವಧಿಯಲ್ಲಿ ಉತ್ತರ ಭಾರತ ಮತ್ತು ಈಶಾನ್ಯ ಭಾರತದ ಭಾಗಗಳಲ್ಲಿ ಬಟರ್ ಫ್ರೂಟ್ ಫಸಲು ಇರುವುದಿಲ್ಲ. ಸಾಮಾನ್ಯವಾಗಿ ಮಣಿಪುರದಿಂದ ಹೆಚ್ಚಾಗಿ ಬಟರ್ ಫ್ರೂಟ್ ಮಾರುಕಟ್ಟೆಗೆ ಲಗ್ಗೆಯಿಡುತ್ತದೆ. ಇತರ ಭಾಗದ ಅವಕಾಡೊ ಕೊಯ್ಲು ಮಾಡಿದರೆ ಹಣ್ಣಾಗಲು ಕನಿಷ್ಠ ಹತ್ತು ದಿನ ಬೇಕು ಆದರೆ ಕೊಡಗು ಜಿಲ್ಲೆಯ ಅವಕಾಡೊ ಕೇವಲ ಮೂರು ದಿನಗಳಲ್ಲಿ ಹಣ್ಣಾಗುತ್ತದೆ.
ವ್ಯಾಪಾರಿಗಳ ನಡುವೆ ಪೈಪೋಟಿ!
ಕೊಡಗು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬೆಳೆಗಾರರು ತಮ್ಮ ತೋಟದಲ್ಲಿ ಬೆಳೆದ ಬೆಣ್ಣೆ ಹಣ್ಣನ್ನು ವ್ಯಾಪಾರಿಗಳು ತಾವೇ ಕೊಯ್ಲು ಮಾಡಿ ಅಲ್ಲಿಯೇ ತೂಕ ಮಾಡಿ ಬೆಳೆಗಾರರಿಗೆ ಹಣ ನೀಡುತ್ತಾರೆ. ಈ ಬಾರಿ ಬಟರ್ ಫ್ರೂಟ್ ಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದ್ದಂತೆ ವ್ಯಾಪಾರಿಗಳ ನಡುವೆ ಬೆಳೆಗಾರರಿಂದ ಬಟರ್ ಫ್ರೂಟ್ ಖರೀದಿಸಲು ಪೈಪೋಟಿ ನಡೆಯುತ್ತಿವೆ. ಕೆಲವೊಂದು ವ್ಯಾಪಾರಿಗಳು ಬಟರ್ ಫ್ರೂಟ್ ಕೊಯ್ಲಿಗೆ ಬರುವುದಕ್ಕಿಂತ ಮುನ್ನ ಮುಂಗಡ ಹಣವನ್ನು ನೀಡಿ ತೋಟವನ್ನೇ ಬುಕ್ ಮಾಡಿಕೊಂಡು, ಫಸಲು ಬರುವಾಗ ಹಣ್ಣನ್ನು ಕೊಯ್ಲು ಮಾಡುತ್ತಿದ್ದಾರೆ. ವ್ಯಾಪಾರಿಗಳ ನಡುವಿನ ಪೈಪೋಟಿಯಿಂದ ಬಟರ್ ಫ್ರೂಟ್ ಬೆಳೆದ ಬೆಳೆಗಾರರಿಗೆ ಪ್ರತೀ ಕೆಜಿಗೆ 150ರೂ.ವರೆಗೂ ಸಿಗುತ್ತಿರುವುದರಿಂದ ಉತ್ತಮ ಲಾಭ ಗಳಿಸುತ್ತಿದ್ದಾರೆ. ಕೊಡಗು ಜಿಲ್ಲೆಯಿಂದ ಕೊಯ್ಲು ಮಾಡಿದ ಬಟರ್ ಫ್ರೂಟ್ ಅನ್ನು ಹೈದರಾಬಾದ್, ಬೆಂಗಳೂರು,ಕೇರಳ, ತಮಿಳುನಾಡು, ಮುಂಬೈ ನಗರಗಳಿಗೆ ರಫ್ತು ಮಾಡುತ್ತಿದ್ದಾರೆ.
ಕಸಿ ಮಾಡಿರುವ ಗಿಡಕ್ಕೂ ಇದೆ ಬೇಡಿಕೆ!
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಟರ್ ಫ್ರೂಟ್ ಕಸಿ ಮಾಡಿರುವ ಗಿಡಕ್ಕೂ ಹೆಚ್ಚು ಬೇಡಿಕೆಯಿದೆ. ನೆಲ್ಲಿಹುದಿಕೇರಿ, ಸಿದ್ದಾಪುರ, ಚೆಟ್ಟಳ್ಳಿ, ಪೊನ್ನತ್ಮೊಟ್ಟೆ, ಕಂಡಕರೆ, ಭೂತನಕಾಡು, ಸುಂಟಿಕೊಪ್ಪ, 7ನೇ ಹೊಸಕೋಟೆ ಈ ಭಾಗಗಳಲ್ಲಿ ಬಹುತೇಕ ಬೆಳೆಗಾರರು ಬಟರ್ ಫ್ರೂಟ್ ಗಿಡಗಳ ನರ್ಸರಿಯನ್ನು ಹೊಂದಿದ್ದಾರೆ. ವಾರ್ಷಿಕವಾಗಿ ಲಕ್ಷಾಂತರ ಬಟರ್ ಫ್ರೂಟ್ ಕಸಿ ಮಾಡಿರುವ ಗಿಡಗಳನ್ನು ಮಂಡ್ಯ,ಮೈಸೂರು, ಬೆಂಗಳೂರು, ಮುಂಬೈ, ತಮಿಳುನಾಡು, ಕೇರಳ ಸೇರಿ ಇತರ ಭಾಗಗಳ ಬೆಳೆಗಾರರಿಗೆ ಗಿಡವೊಂದಕ್ಕೆ 100ರೂ.ವರೆಗೂ ಮಾರಾಟ ಮಾಡುತ್ತಿದ್ದಾರೆ. ಅದಲ್ಲದೇ ಬಟರ್ ಫ್ರೂಟ್ ಗಿಡಗಳಲ್ಲಿ ಬರುವ ವಿವಿಧ ತಳಿಗಳಿಗೂ ಹೆಚ್ಚಿನ ಬೇಡಿಕೆ ಇದೆ. ಕಸಿ ಮಾಡಿರುವ ಆಯಸ್ ಬಟರ್ ಫ್ರೂಟ್ ಗಿಡವೊಂದಕ್ಕೆ 1,500 ರಿಂದ 2,000ರೂ.ವರೆಗೂ ಮಾರಾಟವಾಗುತ್ತಿದೆ. ಬಟರ್ ಫ್ರೂಟ್ ಬೀಜವೊಂದಕ್ಕೆ 5ರೂ. ನೀಡಿ ನರ್ಸರಿ ಮಾಲಕರು ಖರೀದಿಸುತ್ತಿದ್ದಾರೆ.
‘ಅವಕಾಡೊ’ ಬಂದಿದ್ದು ಹೀಗೆ!
ಅವಕಾಡೊ ಮೂಲ ಅಮೆರಿಕ ಖಂಡದ ಮೆಕ್ಸಿಕೋ, ಗ್ವಾಟೆಮಾಲಾ ಹಾಗೂ ವೆಸ್ಟ್ ಇಂಡೀಸ್ ದ್ವೀಪಗಳು. 19-20ನೇ ಶತಮಾನದಲ್ಲಿ ಬಟರ್‌ಫ್ರೂಟ್ ಹಣ್ಣು ಬ್ರಿಟಿಷರ ಮೂಲಕ ಭಾರತಕ್ಕೆ ಪರಿಚಯವಾಯಿತು. ಆ ದೇಶಗಳಲ್ಲಿ ಈ ಹಣ್ಣಿನ ಬಗ್ಗೆ ಸಂಶೋಧನೆಗಳು ನಡೆದು ವಿವಿಧ ತಳಿಗಳ ಅಭಿವೃದ್ಧಿಯಾಯಿತು. 2005ರ ಸುಮಾರಿಗೆ ಬಟರ್ ಫ್ರೂಟ್ ಹಣ್ಣಿನ ಬಗ್ಗೆ ಭಾರತದಲ್ಲೂ ಸಂಶೋಧನೆಗಳು ಆರಂಭವಾದವು. ಅಲ್ಲಿಯವರೆಗೆ ಬೆಣ್ಣೆ ಹಣ್ಣಿನ ಬಗ್ಗೆ ಕೆಲವರಿಗಷ್ಟೇ ಗೊತ್ತಿತ್ತು. ಕೆಲವೇ ಮಂದಿ ಇದನ್ನು ಬಳಸುತ್ತಿದ್ದರು. ಹಾಸ್ ತಳಿಯ ಪರಿಚಯದ ನಂತರ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ, ನರ್ಸರಿಗಳಲ್ಲಿ ಭಾರಿ ಪ್ರಮಾಣದ ಸಸ್ಯೋತ್ಪಾದನೆ ಆರಂಭವಾಯಿತು. ಬಟರ್ ಫ್ರೂಟ್ ಅನ್ನು ಹೆಚ್ಚಾಗಿ ಅವಕಾಡೊ ಮಿಲ್ಕ್ ಶೇಕ್ ಮತ್ತು ಇತರ ಸೌಂದರ್ಯವರ್ಧಕಗಳಿಗೂ ಬಳಸುತ್ತಾರೆ. ಕೊಡಗು ಜಿಲ್ಲೆಯ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಬಟರ್ ಫ್ರೂಟ್ ವಿವಿಧ ತಳಿಗಳಿದ್ದು, ಬೆಳೆಗಾರರಿಗೆ ಅರಿವು ಮೂಡಿಸಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಇದೀಗ ಬಟರ್ ಫ್ರೂಟ್ ಫಸಲು ಕೊಯ್ಲಿಗೆ ಬಂದಿದ್ದು, ಈ ಅವಧಿಯಲ್ಲಿ ಬೇಡಿಕೆ ಇದೆ. ವ್ಯಾಪಾರಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ನಾವೇ ಬೆಳೆಗಾರರಿಂದ ಹಣ್ಣನ್ನು ಖರೀದಿಸಿ ಕೊಯ್ಲು ಮಾಡುತ್ತಿದ್ದೇವೆ. ತೋಟದಲ್ಲಿ ಬೆಳೆಗಾರರಿಗೆ 150ರೂ.ವರೆಗೂ ಪ್ರತೀ ಕೆಜಿಗೆ ಹಣ ನೀಡುತ್ತಿದ್ದೇವೆ. ಒಂದೆರಡು ತಿಂಗಳವರೆಗೆ ಕೊಡಗಿನ ಬಟರ್ ಫ್ರೂಟ್‌ಗೆ ಉತ್ತಮ ಬೇಡಿಕೆ ಇರಲಿದೆ.
-ಅಸ್ಕರ್ ಕೊಂಡಂಗೇರಿ,ಬಟರ್ ಫ್ರೂಟ್ ವ್ಯಾಪಾರಿ ಕೊಡಗು.