ಸಾಂಸ್ಕೃತಿಕ ವಲಯವೂ, ಆಡಳಿತ ಸೂಕ್ಷ್ಮತೆಯೂ
ಸಾಂಸ್ಕೃತಿಕ ವಲಯದ ಸಾಂಸ್ಥಿಕ ನೇಮಕಾತಿಗಳಲ್ಲಿ ಅಗತ್ಯವಾದ ಸೂಕ್ಷ್ಮತೆ ಕಾಣಲಾಗುತ್ತಿಲ್ಲ
ಕಳೆದ ಮೂರು ದಶಕಗಳಲ್ಲಿ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ವಹಣೆಯಲ್ಲಿ ಸಮಾಜದ ಬೌದ್ಧಿಕ-ಸಾಂಸ್ಕೃತಿಕ ವಲಯಗಳನ್ನು ಆವರಿಸಿಕೊಳ್ಳುವುದು ಹೇಗೆ ಎಂದು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ತನ್ನ ಸಾಂಸ್ಕೃತಿಕ ರಾಜಕಾರಣದ ಮುಖಾಂತರ ಬಿಜೆಪಿ-ಆರೆಸ್ಸೆಸ್ ತಳಮೂಲದ ಸಾಂಸ್ಕೃತಿಕ ನೆಲೆಗಳಲ್ಲೂ ತನ್ನ ಅಸ್ತಿತ್ವವನ್ನು ಕಂಡುಕೊಂಡಿದ್ದು ತಳಸಮುದಾಯದ ಒಂದು ಬೃಹತ್‌ವರ್ಗವನ್ನು ತನ್ನ ಸೈದ್ಧಾಂತಿಕ ಭದ್ರಕೋಟೆಯ ರಕ್ಷಾ ಕವಚವಾಗಿ ರೂಪಿಸಿಕೊಂಡಿದೆ. ಈ ಸಾಂಸ್ಕೃತಿಕ ರಾಜಕಾರಣದ ಒಳಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳದೆ ಹೋದರೆ, ವರ್ತಮಾನ ಭಾರತದಲ್ಲಿ ಯಾವ ರಾಜಕೀಯ ಪಕ್ಷವೂ ತಳಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಪರಿಣಾಮಕಾರಿಯಾಗಿ ತಲುಪಲಾಗುವುದಿಲ್ಲ. ಅಧಿಕಾರ ರಾಜಕಾರಣವನ್ನು ನಿರ್ದೇಶಿಸುವ ಅಸ್ಮಿತೆ-ಅಸ್ತಿತ್ವಗಳ ಚೌಕಟ್ಟುಗಳನ್ನು ದಾಟಿ ಸಾಮಾನ್ಯ ಜನರ ನಡುವೆ ಸದಾ ಜೀವಂತವಾಗಿರುವ ಸಾಂಸ್ಕೃತಿಕ ಭೂಮಿಕೆಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ನಿರ್ದೇಶಿಸುವ ಜವಾಬ್ದಾರಿ ಸರಕಾರದ ಮೇಲಿರುತ್ತದೆ. ಬಿಜೆಪಿ ಅನುಸರಿಸುವ ಏಕಮುಖಿ ಸಂಸ್ಕೃತಿಗಿಂತಲೂ ಭಿನ್ನವಾಗಿ, ಸೆಕ್ಯುಲರ್ ಎಂದು ಕರೆದುಕೊಳ್ಳುವ ಕಾಂಗ್ರೆಸ್ ಮತ್ತಿತರ ಪಕ್ಷಗಳು ಈ ಜವಾಬ್ದಾರಿಯನ್ನು ನಿಭಾಯಿಸುವುದು ಸಾಂವಿಧಾನಿಕ-ನೈತಿಕ ಕರ್ತವ್ಯ.
ಈ ದೃಷ್ಟಿಯಿಂದ ನೋಡಿದಾಗ ಕಾಂಗ್ರೆಸ್ ಸರಕಾರ ಆಡಳಿತ ಸೂಕ್ಷ್ಮತೆಯ ಕೊರತೆಯಿಂದ ಬಳಲುತ್ತಿರುವುದು ಸ್ಪಷ್ಟ. ಅಭೂತಪೂರ್ವ ಗೆಲುವು ಸಾಧಿಸಿ, ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬಂದ ನಂತರವೂ ಸಾಂಸ್ಕೃತಿಕ ವಲಯದ ಬಗ್ಗೆ ಗಮನ ನೀಡದಿರುವುದು ಪಕ್ಷದ ತಾತ್ವಿಕ ನಿಷ್ಕ್ರಿಯತೆಯನ್ನೂ ಎತ್ತಿತೋರಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗಳು, ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಮೈಸೂರಿನ ರಂಗಾಯಣದಲ್ಲಿ ನಡೆದಂತಹ ಕೆಲವು ಪ್ರಸಂಗಗಳು ಕಾಂಗ್ರೆಸ್ ಸರಕಾರವನ್ನು ಎಚ್ಚರಿಸಬೇಕಿತ್ತಲ್ಲವೇ? ಸಂಸ್ಕೃತಿ ಎಂಬ ವಿಶಾಲಾರ್ಥದ ಪರಿಕಲ್ಪನೆಯನ್ನೇ ಸಂಕುಚಿತಗೊಳಿಸಿ ತನ್ನ ಹಿಂದುತ್ವ ರಾಜಕಾರಣದ ಒಂದು ಭಾಗವಾಗಿ ಸಾಂಸ್ಕೃತಿಕ ವಲಯವನ್ನು ಆಕ್ರಮಿಸಿದ್ದ ಬಿಜೆಪಿ ಸರಕಾರದ ಆಡಳಿತ ವೈಖರಿ ಕಾಂಗ್ರೆಸ್ ಸರಕಾರಕ್ಕೆ ಮುನ್ನೆಚ್ಚರಿಕೆಯಾಗಿ ಪರಿಣಮಿಸಬೇಕಿತ್ತು. ಹಾಗಾದಂತೆ ಕಾಣುತ್ತಿಲ್ಲ. ಹಾಗಾಗಿಯೇ ಈ ವಿಳಂಬ ನೀತಿ.
ಸಾಂಸ್ಥಿಕ ನೇಮಕಾತಿಯ ಪ್ರಹಸನಗಳು
ಆದರೂ ರಾಜ್ಯ ಸರಕಾರ, ಅಳೆದೂ ಸುರಿದೂ ಹತ್ತು ತಿಂಗಳ ನಂತರವಾದರೂ ಸಾಂಸ್ಕೃತಿಕ ಲೋಕದತ್ತ ಗಮನ ಹರಿಸಿ, ಅಕಾಡಮಿ ಮತ್ತು ಪ್ರಾಧಿಕಾರಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರೈಸಿದೆ. ಸಚಿವ ಸಂಪುಟ ರಚನೆ, ನಿಗಮ ಮಂಡಲಿಗಳ ನೇಮಕಾತಿ ಹಾಗೂ ಸಾಂಸ್ಕೃತಿಕ ವಲಯದ ಭರ್ತಿ ಈ ಮೂರೂ ಪ್ರಕ್ರಿಯೆಗಳು ಸಮಾನವಾಗಿ ಆಡಳಿತಾರೂಢ ಪಕ್ಷಗಳಿಗೆ ಸವಾಲುಗಳನ್ನೊಡ್ಡುತ್ತವೆ. ಪಕ್ಷ ಅನುಸರಿಸುವ ತಾತ್ವಿಕ ನೆಲೆಗಳು ಮತ್ತು ಸಿದ್ಧಾಂತಗಳಿಗಿಂತಲೂ ಹೆಚ್ಚಾಗಿ, ಅಧಿಕಾರ ವಲಯದಲ್ಲಿ ಎಲ್ಲ ದಿಕ್ಕುಗಳಿಂದಲೂ ಉದ್ಭವಿಸುವ ಒತ್ತಡಗಳು ಈ ಪ್ರಕ್ರಿಯೆಗಳನ್ನು ನಿರ್ದೇಶಿಸುತ್ತವೆ. ಜಾತಿ, ಸಮುದಾಯ, ಪ್ರದೇಶ ಹಾಗೂ ಪ್ರಮುಖ ನಾಯಕರ ಆಪ್ತ ವಲಯದಿಂದ ಉದ್ಭವಿಸುವ ಒತ್ತಡಗಳು ಆಳ್ವಿಕೆಯಲ್ಲಿ ಇರಬೇಕಾದ ನೈತಿಕತೆ ಮತ್ತು ಜವಾಬ್ದಾರಿಯನ್ನೂ ಹಿಂದಕ್ಕೆ ತಳ್ಳಿಬಿಡುತ್ತವೆ. ಹಾಗಾಗಿ ಸಮತೋಲವನ್ನು ಕಾಪಾಡುವುದೇ ಸರಕಾರಕ್ಕೆ ಪ್ರಮುಖ ಸವಾಲಾಗಿ ಪರಿಣಮಿಸುತ್ತದೆ.
ಆಯಕಟ್ಟಿನ ಸ್ಥಳಗಳಿಗಾಗಿ ಸಹಜವಾಗಿಯೇ ನಡೆಯುವ ಲಾಬಿ, ಅಧಿಕಾರ ಕೇಂದ್ರಕ್ಕೆ ನಿಕಟವಾಗಿರುವ/ನಿಷ್ಠರಾಗಿರುವ ಆಪ್ತೇಷ್ಟರ ರಾಜಕೀಯ ಒತ್ತಡ ಹಾಗೂ ವೈಯಕ್ತಿಕ ಶಿಫಾರಸುಗಳ ಅಡೆತಡೆಗಳನ್ನು ದಾಟಿಕೊಂಡು, ವಿವಿಧ ಅಕಾಡಮಿ-ಪ್ರಾಧಿಕಾರಗಳಿಗೆ ನೇಮಕ ಮಾಡುವುದು ಒಂದು ದುಸ್ಸಾಹಸ ಎನ್ನುವುದು ಪಕ್ಷಗಳ ಒಳ ರಾಜಕೀಯ ಬಲ್ಲವರಿಗೆ ತಿಳಿದೇ ಇರುತ್ತದೆ. ಆದರೂ ಕಳೆದ ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಕಾಂಗ್ರೆಸ್ ಸರಕಾರಕ್ಕೆ ಈ ಪ್ರಕ್ರಿಯೆ ಪೂರೈಸಲು ಹತ್ತು ತಿಂಗಳ ಕಾಲಾವಧಿ ಅಗತ್ಯವಿರಲಿಲ್ಲ. ಹಿಂದಿನ ಸರಕಾರದ ಸಾಂಸ್ಕೃತಿಕ ರಾಜಕಾರಣದ ಹಿನ್ನೆಲೆಯಲ್ಲಿ ನೋಡಿದಾಗ, ರಂಗಾಯಣದಂತಹ ಸ್ವಾಯತ್ತ ಸಂಸ್ಥೆಯನ್ನೇ ಬಿಜೆಪಿ ಸರಕಾರ ತನ್ನ ಕಾರ್ಯಸೂಚಿಗೆ ಬಳಸಿಕೊಂಡ ನಿದರ್ಶನ ನಮ್ಮ ಮುಂದಿದೆ. ಆಡಳಿತಾರೂಢ ಪಕ್ಷವು ತನ್ನ ಸಾಂವಿಧಾನಿಕ ಬದ್ಧತೆಯನ್ನು ತಳಮಟ್ಟದ ಸಮಾಜದವರೆಗೂ ಪರಿಣಾಮಕಾರಿಯಾಗಿ ಕೊಂಡೊಯ್ಯುವ ಸೇತುವೆಗಳಾಗಿ ಈ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಈ ದೃಷ್ಟಿಯಿಂದಾದರೂ ಕಾಂಗ್ರೆಸ್ ಸರಕಾರ ಕ್ಷಿಪ್ರಗತಿಯಲ್ಲಿ ಸಾಂಸ್ಕೃತಿಕ ವಲಯದ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಬೇಕಿತ್ತು. ಈಗಲಾದರೂ ಪ್ರಕ್ರಿಯೆ ಪೂರ್ಣಗೊಂಡಿರುವುದು ಸ್ವಾಗತಾರ್ಹ.
ಆದರೆ ಈ ಮಹತ್ತರ ನಿರ್ಧಾರದಲ್ಲಿ ರಾಜ್ಯ ಸರಕಾರ ಮತ್ತೊಮ್ಮೆ ತನ್ನ ಅಸೂಕ್ಷ್ಮತೆಯನ್ನು, ಕೊಂಚ ಮಟ್ಟಿಗೆ ಅಪ್ರಬುದ್ಧತೆಯನ್ನೂ ಹೊರಗೆಡಹಿದೆ. ಪ್ರಸಕ್ತ ರಾಜಕೀಯ-ಸಾಂಸ್ಕೃತಿಕ ಪರಿಸರದಲ್ಲಿ ಅತಿ ಹೆಚ್ಚು ಪ್ರಭಾವಶಾಲಿಯಾಗಿ ಕಾಣುವ ಮಾಧ್ಯಮ ವಲಯವನ್ನು ಪ್ರತಿನಿಧಿಸುವ ‘ಮಾಧ್ಯಮ ಅಕಾಡಮಿ’ಯ ಬಗ್ಗೆ ಸರಕಾರ ಗಮನ ನೀಡದಿರುವುದು ಅಚ್ಚರಿ ಮೂಡಿಸುತ್ತದೆ. ಮತ್ತೊಂದು ಎದ್ದುಕಾಣುವ ಕೊರತೆ ಎಂದರೆ ಪ್ರಾತಿನಿಧ್ಯದ ಬಗ್ಗೆ. ಸಾಂಸ್ಕೃತಿಕ ವಲಯದಲ್ಲಿ ಸದಾ ಕಾಲವೂ ನಿರ್ಲಕ್ಷಿತವಾಗಿಯೇ ಬಂದಿರುವ ಮಹಿಳಾ ಸಂಕುಲ, ಬಿಜೆಪಿ ಆಳ್ವಿಕೆಯಲ್ಲಿ ಅಂಚಿಗೆ ತಳ್ಳಲ್ಪಟ್ಟ ಅಲ್ಪಸಂಖ್ಯಾತ-ಮುಸ್ಲಿಮ್ ಸಮುದಾಯ ಈ ಬಾರಿಯೂ ಅದೇ ನಿರಾಶಾದಾಯಕ ಸನ್ನಿವೇಶವನ್ನು ಎದುರಿಸಬೇಕಾಗಿದೆ. ಜಾತಿ ಮತ್ತು ಪ್ರಾದೇಶಿಕ ಅಸ್ಮಿತೆಗಳಿಗೆ-ಪ್ರಾತಿನಿಧ್ಯಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುವ ಸರಕಾರಗಳಿಗೆ ಮಹಿಳಾ ಸಮುದಾಯಕ್ಕೂ ಒಂದು ಸ್ವಾಯತ್ತ ಅಸ್ಮಿತೆ ಮತ್ತು ಪ್ರಾತಿನಿಧಿತ್ವದ ಹಕ್ಕು ಇದೆ ಎನ್ನುವ ವಾಸ್ತವ ಏಕೆ ಅರ್ಥವಾಗುವುದಿಲ್ಲ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಆಳ್ವಿಕೆಯ ಕೇಂದ್ರಗಳನ್ನು ನಿರ್ದೇಶಿಸುವ ಪಿತೃಪ್ರಧಾನ ಧೋರಣೆ ಇಲ್ಲಿ ಢಾಳಾಗಿ ಕಾಣುತ್ತದೆ.
ಪ್ರಾತಿನಿಧ್ಯದ ಕೊರತೆಯ ನಡುವೆ ಈ ಬಾರಿಯ ನೇಮಕಾತಿಯಲ್ಲಿ 14 ಅಕಾಡಮಿ, 4 ಪ್ರಾಧಿಕಾರಗಳು ಹಾಗೂ ರಂಗ ಸಮಾಜ ಪ್ರಮುಖವಾಗಿ ಕಾಣುತ್ತದೆ. ರಂಗ ಸಮಾಜದ ಏಳು ಸದಸ್ಯರ ಪೈಕಿ ಏಕೈಕ ಮಹಿಳೆ ಇರುವುದು ರಂಗಾಸಕ್ತರನ್ನು ಅಚ್ಚರಿಗೆ ದೂಡುತ್ತದೆ. ರಂಗಭೂಮಿಯನ್ನು ಸಮುದಾಯದ ನಡುವೆ ಕೊಂಡೊಯ್ಯುವ ಸಾಂಸ್ಕೃತಿಕ ಜವಾಬ್ದಾರಿ ಹೊತ್ತಿರುವ ರಂಗ ಸಮಾಜ ಕೇವಲ ಸಲಹಾ ಸಮಿತಿ ಅಲ್ಲ. ಅದು ತನ್ನದೇ ಆದ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ರಂಗಾಯಣಗಳ ನಿರ್ದೇಶಕರ ನೇಮಕವನ್ನೂ ಒಳಗೊಂಡಂತೆ, ರಂಗಭೂಮಿಯ ತಾತ್ವಿಕ ನೆಲೆಗಳನ್ನು ವಿಸ್ತರಿಸುವುದೂ ರಂಗಸಮಾಜದ ಕಾರ್ಯಸೂಚಿಗಳಲ್ಲಿ ಒಂದಾಗಿರುತ್ತದೆ. ಎಡ-ಬಲ ಜಂಜಾಟಗಳಿಂದ ಹೊರತಾದುದಾದರೂ ಇಂತಹ ಸಂಸ್ಥೆಗಳ ನೇಮಕಾತಿಯಲ್ಲಿ ಸರಕಾರ ಅಪೇಕ್ಷಿಸುವ ಸೈದ್ಧಾಂತಿಕ ಭೂಮಿಕೆಯನ್ನು ಮತ್ತಷ್ಟು ಬಲಪಡಿಸುವ ರೀತಿಯಲ್ಲಿ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಅತ್ಯವಶ್ಯ. ಹಾಗೆಯೇ ಪ್ರಾತಿನಿಧ್ಯದ ನೆಲೆಯಲ್ಲಿ ಮಹಿಳೆಯರಿಗೂ ಸೂಕ್ತ ಪ್ರಾತಿನಿಧ್ಯ ಇರಬೇಕಾದುದು ನೈತಿಕತೆಯ ಪ್ರಶ್ನೆ.
ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಅವಕಾಶ ನೀಡುವುದರ ಬಗ್ಗೆ ಅತಿಯಾಗಿ ಬದ್ಧತೆ ತೋರುವ ಸರಕಾರಗಳಿಗೆ, ಸಾಂಸ್ಕೃತಿಕ ವಲಯದಲ್ಲೂ ಇದೇ ಪ್ರಾತಿನಿಧ್ಯವನ್ನು ಒದಗಿಸಬೇಕು ಎಂಬ ಅರಿವು ಇರಬೇಕಲ್ಲವೇ? ಒಟ್ಟು 18 ಅಧ್ಯಕ್ಷ ಹುದ್ದೆಗಳ ಪೈಕಿ ಕೇವಲ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ಮಾತ್ರ ಮಹಿಳಾ ಅಧ್ಯಕ್ಷರನ್ನು ನೇಮಿಸಲಾಗಿದೆ. ಏಕೆ ಉಳಿದ 17 ಸಂಸ್ಥೆಗಳಿಗೆ ಸಮರ್ಥರಾದ ಮಹಿಳಾ ಅಭ್ಯರ್ಥಿಗಳೇ ಸರಕಾರದ ಕಣ್ಣಿಗೆ ಬೀಳಲಿಲ್ಲವೇ? ಸಾಹಿತ್ಯ, ಶಿಲ್ಪಕಲೆ, ಪುಸ್ತಕ ಪ್ರಾಧಿಕಾರ, ಜಾನಪದ ಈ ಕ್ಷೇತ್ರಗಳಲ್ಲಿ ಗುರುತಿಸಬಹುದಾದ ಹೆಣ್ಣು ಮುಖಗಳು ಕಾಣದೆ ಹೋದವೇ? ಸಾಂಸ್ಕೃತಿಕ ಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಯನ್ನು ಒಂದು ನಿರ್ದಿಷ್ಟ ಸಮಿತಿಯೇ ನಿರ್ವಹಿಸಿದರೂ, ಈ ಸಮಿತಿಯ ಕಾರ್ಯಾಚರಣೆಯಲ್ಲಿ ಒಳಗೊಳ್ಳುವಿಕೆ ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಭಾರತದ ಬಹುತ್ವ ಸಂಸ್ಕೃತಿಯೇ ಅಪಾಯದಲ್ಲಿರುವಾಗ ಪ್ರತಿಯೊಂದು ನೇಮಕಾತಿಯೂ ಮುಖ್ಯವಾಗುತ್ತದೆ. ಪ್ರಾದೇಶಿಕವಾಗಿ ಸಕ್ರಿಯವಾಗಿರುವ ಸಾಂಸ್ಕೃತಿಕ ಪರಿಚಾರಕರನ್ನು ಒಳಗೊಂಡು ಸಮಾಲೋಚನೆಗಳ ಮೂಲಕ, ಅಭಿಪ್ರಾಯ ಸಂಗ್ರಹದ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅಪೇಕ್ಷಣೀಯವಾಗಿತ್ತು.
ಆದರೆ ಈ ಒಳಗೊಳ್ಳುವಿಕೆ ಇಲ್ಲದಿರುವುದರಿಂದಲೇ ಆಳ್ವಿಕೆಯಲ್ಲಿ ಮುಖ್ಯ ಪಾತ್ರ ವಹಿಸುವ ಪಿತೃಪ್ರಧಾನತೆ ಇಲ್ಲಿಯೂ ಸಕ್ರಿಯವಾಗಿದೆ. ಪಿತೃಪ್ರಧಾನತೆಯ ಲಕ್ಷಣ ಎಂದರೆ ಯಾವುದೇ ರೀತಿಯ ಪ್ರಾತಿನಿಧ್ಯವನ್ನು ಕೇವಲ ‘ಕೊಡುವುದು’ ಅಥವಾ ‘ಕಲ್ಪಿಸುವುದು’ ಅಥವಾ ‘ಒದಗಿಸುವುದು’ ಎಂದಾಗುತ್ತದೆ. ಜಾತಿ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯದ ಹಿಂದೆ ಇರುವಂತಹ ಸಾಮುದಾಯಿಕ ಒತ್ತಡ, ಒತ್ತಾಸೆಗಳನ್ನು ಮಹಿಳಾ ಸಂಕುಲದ ನಡುವೆ ಗುರುತಿಸಲಾಗುವುದಿಲ್ಲ. ಏಕೆಂದರೆ ಆಳ್ವಿಕೆಯ ದೃಷ್ಟಿಯಲ್ಲಿ ಮಹಿಳಾ ಸಂಕುಲ ರಾಜಕೀಯವಾಗಿ ಉಪಯೋಗಕ್ಕೆ ಬರುವ ಒಂದು ‘ಬ್ಲಾಕ್’ ರೂಪದಲ್ಲಿ ಕಾಣುವುದಿಲ್ಲ. ಹಾಗಾಗಿಯೇ ಇಂತಹ ಸಾಂಸ್ಥಿಕ ನೇಮಕಾತಿಗಳ ಪ್ರಶ್ನೆ ಎದುರಾದಾಗ ಅಧ್ಯಕ್ಷ ಹುದ್ದೆಯನ್ನು ಹೊರತುಪಡಿಸಿ, ಸದಸ್ಯರ ನಡುವೆ ಅಲ್ಲಲ್ಲಿ ಕಾಣುವ ಮಹಿಳೆಯರನ್ನೇ ಎತ್ತಿ ತೋರಿಸಲಾಗುತ್ತದೆ. ‘‘ನೋಡಿ, ಇಲ್ಲಿ ಪ್ರಾತಿನಿಧ್ಯ ನೀಡಿದ್ದೇವಲ್ಲವೇ?’’ ಎಂಬ ಪ್ರಶ್ನೆಯೊಡನೆ ಮತ್ತೊಮ್ಮೆ ಪ್ರಾತಿನಿಧಿತ್ವವನ್ನು ‘ನೀಡುವ’ ಅಥವಾ ‘ನೀಡಲೇಬೇಕಾದ’ ಪ್ರಕ್ರಿಯೆಯಾಗಿ ಬಿಂಬಿಸಲಾಗುತ್ತದೆ.
ಯಾವುದೇ ಕೋನದಿಂದ ನೋಡಿದರೂ ಢಾಳಾಗಿ ಕಾಣುವ ಅಂಶ ಎಂದರೆ ಪ್ರಾತಿನಿಧ್ಯದ ಕೊರತೆ. ಪ್ರಸಕ್ತ 19 ಸಂಸ್ಥೆಗಳ ನೇಮಕಾತಿಯಲ್ಲಿ 30+ ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ಶೇಕಡಾವಾರು ಪ್ರಾತಿನಿಧ್ಯದ ಗೊಡವೆಗೆ ಹೋಗದೆ ನೋಡಿದರೂ, ಕೆಲವು ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ನಗಣ್ಯ ಎನ್ನುವಂತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ ಹಾಗೂ ಜಾನಪದ ಅಕಾಡಮಿಗಳಲ್ಲಿ, ರಂಗ ಸಮಾಜದಲ್ಲಿ ಒಬ್ಬೊಬ್ಬ ಮಹಿಳೆ ಮಾತ್ರ ಕಂಡುಬರುತ್ತಾರೆ. ಏಕೆ, ಈ ವಲಯಗಳಲ್ಲಿ ಕ್ಷಮತೆ, ಬದ್ಧತೆ, ಸೈದ್ಧಾಂತಿಕ ಸ್ಪಷ್ಟತೆ ಇರುವ ಮಹಿಳೆಯರ ಕೊರತೆ ಇದೆಯೇ? ಖಂಡಿತವಾಗಿಯೂ ಇರಲಾರದು. ಕೊರತೆ ಇರುವುದು ಆಯ್ಕೆ ಸಮಿತಿಗಳ, ಅಂದರೆ ಸರಕಾರದ ಲಿಂಗ ಸೂಕ್ಷ್ಮತೆಯಲ್ಲಿ. ಯಕ್ಷಗಾನ ಅಕಾಡಮಿಯಲ್ಲಿ ಉತ್ತರ ಕನ್ನಡದ ಪ್ರಾತಿನಿಧ್ಯವೇ ಇಲ್ಲದಿರುವುದು, ಗಡಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ದಕ್ಷಿಣದ ಗಡಿಜಿಲ್ಲೆಗಳಾದ ಕೋಲಾರ-ಚಿಕ್ಕಬಳ್ಳಾಪುರಕ್ಕೆ ಅವಕಾಶ ಇಲ್ಲದಿರುವುದು ಸರಕಾರದ ನಿರ್ಲಕ್ಷ್ಯದ ಸಂಕೇತವಾಗಿಯೇ ಕಾಣುತ್ತದೆ.
ಸಾಂವಿಧಾನಿಕ ಜವಾಬ್ದಾರಿ
ಸಾಂಸ್ಕೃತಿಕ ವಲಯದ ಸಾಂಸ್ಥಿಕ ಹುದ್ದೆಗಳು ಅಧಿಕಾರ ಕೇಂದ್ರಗಳಾಗಬಾರದು. ಬದಲಾಗಿ ಸಮಾಜದ ತಳಮಟ್ಟದ ವ್ಯಕ್ತಿಯನ್ನೂ ತಲುಪುವಂತಹ ಸೂಕ್ಷ್ಮ ಸಂವೇದನೆಯ ಸೇತುವೆಗಳಾಗಬೇಕು. ಇಲ್ಲಿ ಗೂಟದ ಕಾರುಗಳಿಗಿಂತಲೂ ಕಾಲ್ನಡಿಗೆಗೆ ಹೆಚ್ಚು ಪ್ರಾಮುಖ್ಯತೆ ಇರಬೇಕು. ಸಮುದಾಯಗಳ ನಡುವೆ ಹೋಗಿ, ಅಲ್ಲಿರಬಹುದಾದ ತಲ್ಲಣಗಳನ್ನು ಅರಿತು, ತಳಸಮುದಾಯಗಳು ಎದುರಿಸುತ್ತಿರುವ ಸಾಂಸ್ಕೃತಿಕ ಅಪಾಯಗಳ ಬಗ್ಗೆ ಅರಿವು ಮೂಡಿಸುವ ಒಂದು ದೊಡ್ಡ ಜವಾಬ್ದಾರಿ ಸಾಂಸ್ಕೃತಿಕ ಸಂಸ್ಥೆಗಳ ಮೇಲಿರುತ್ತದೆ. ವರ್ತಮಾನ ಭಾರತದಲ್ಲಿ ಇದು ಅತ್ಯವಶ್ಯವಾಗಿ ಆಗಲೇಬೇಕಾದ ಕೆಲಸ. ಹಾಗಾಗಿಯೇ ಇಲ್ಲಿ ಯಾವುದೇ ರೀತಿಯ ಲಾಬಿ ರಾಜಕಾರಣ ಇಲ್ಲದಂತೆ ನಿರ್ವಹಿಸಬೇಕಾಗುತ್ತದೆ. ಹಾಗಾದಲ್ಲಿ ಮಾತ್ರ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳಾ ಸಂಕುಲಕ್ಕೂ ಅಲ್ಲಿ ಮುಕ್ತ ಅವಕಾಶ, ಸ್ವಾಯತ್ತತೆ ಮತ್ತು ಪ್ರಾತಿನಿಧ್ಯವನ್ನು ಕಲ್ಪಿಸಲು ಸಾಧ್ಯ. ಮತ್ತೆ ಮತ್ತೆ ಸರಕಾರಗಳಿಗೆ ಮನದಟ್ಟು ಮಾಡಬೇಕಾದ ವಾಸ್ತವ ಎಂದರೆ, ಮಹಿಳಾ ಪ್ರಾತಿನಿಧ್ಯ ಎಂದರೆ ಯಾರೂ ಕೊಡುವುದಲ್ಲ, ಅದು ಮಹಿಳಾ ಸಮುದಾಯದ ಹಕ್ಕು. ಈ ಸೂಕ್ಷ್ಮತೆಯನ್ನು ಅರಿತೇ ಸಂಸ್ಕೃತಿ ಸಚಿವಾಲಯ ಮತ್ತು ಇಲಾಖೆಗಳು ಕಾರ್ಯನಿರ್ವಹಿಸಬೇಕು. ಆಗಲೇ ಬಹುಸಾಂಸ್ಕೃತಿಕ ನೆಲೆಗಳು ಎದುರಿಸುತ್ತಿರುವ ಅಪಾಯಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ. ಇನ್ನಾದರೂ ಕಾಂಗ್ರೆಸ್ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ.