ರೈತರ ಮೇಲೆ ಪ್ರಭುತ್ವದ ದಮನ ತೆರೆದಿಡುವ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ
ರೈತ ಸಮೂಹ ಒಗ್ಗಟ್ಟಿನಿಂದ ಕೋವಿಡ್ ಆತಂಕದ ನಡುವೆಯೂ ಹದಿಮೂರು ತಿಂಗಳುಗಳ ಕಾಲ ರಾಜಿರಹಿತವಾಗಿ ನಿರಂತರ ಹೋರಾಟವನ್ನು ಮಾಡಿ ಯಶಸ್ವಿಯಾಗಿದ್ದು ಭಾರತದ ರೈತ ಹೋರಾಟಗಳ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ. ಕಾರ್ಪೊರೇಟ್ ಹಿತಾಸಕ್ತಿಗೆ ಪೂರಕವಾಗಿದ್ದ ಹಾಗೂ ರೈತರ ವಿರೋಧಿಯಾಗಿದ್ದ ಕೇಂದ್ರ ಸರಕಾರದ ಮೂರು ವಿವಾದಾತ್ಮಕ ಕರಾಳ ಕಾನೂನುಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ನೇತೃತ್ವದಲ್ಲಿ ಈ ದೇಶದ ಬಹುತೇಕ ರೈತ ಸಂಘಟನೆಗಳು ಒಂದಾಗಿ ನವೆಂಬರ್ 2020ರಂದು ದಿಲ್ಲಿ ಚಲೋ ಹೋರಾಟಕ್ಕೆ ಕರೆ ಕೊಟ್ಟಿದ್ದವು. ಪಂಜಾಬ್, ಹರ್ಯಾಣ ಹಾಗೂ ಉತ್ತರಪ್ರದೇಶ ರಾಜ್ಯಗಳ ಕೃಷಿಕರೇ ಅಧಿಕ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆದರೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕನಿಷ್ಠ ಪ್ರಯತ್ನವನ್ನೂ ಮಾಡದ ಕೇಂದ್ರ ಸರಕಾರವು ಕೃಷಿಕರ ಮೇಲೆ ದಮನವನ್ನು ಆರಂಭಿಸಿ ದಿಲ್ಲಿಯನ್ನು ಪ್ರವೇಶಿಸಲು ಬಿಡದೇ ಗಡಿಯಲ್ಲೇ ರೈತರನ್ನು ತಡೆಗಟ್ಟಿದರು. ರೈತರು ಗಡಿಯಲ್ಲೇ ದೀರ್ಘಕಾಲೀನ ಆಂದೋಲನವನ್ನು ಆರಂಭಿಸಿದರು. ಪಂಜಾಬ್ ರೈತರು ಸಿಂಘು ಗಡಿಯಲ್ಲಿ, ಹರ್ಯಾಣದ ಕೃಷಿಕರು ಟಿಕ್ರಿ ಗಡಿಯಲ್ಲಿ, ರಾಜಸ್ಥಾನದ ಕಡೆಯಿಂದ ಬಂದ ಅನ್ನದಾತರು ಟಿಕ್ರಿ ಗಡಿಯಲ್ಲಿ, ಉತ್ತರಪ್ರದೇಶ ಮಧ್ಯಪ್ರದೇಶ ಕರ್ನಾಟಕ ಹಾಗೂ ತಮಿಳುನಾಡಿನಿಂದ ಬಂದ ಕೃಷಿಕರು ಗಾಝಿಪುರ ಗಡಿಯಲ್ಲಿ ಕೂತು ಪ್ರತಿಭಟನೆ ಮುಂದುವರಿಸಿದರು.
ಈ ರೈತ ಸತ್ಯಾಗ್ರಹದಲ್ಲಿ ಭಾಗಿಯಾಗಿ ಹಲವಾರು ತಿಂಗಳುಗಳ ಕಾಲ ಪ್ರಭುತ್ವ ತಂದೊಡ್ಡಿದ ಅಡೆತಡೆಗಳನ್ನು ಎದುರಿಸಿ, ವ್ಯತಿರಿಕ್ತ ಹವಾಮಾನದಲ್ಲಿ ರೈತ ಹೋರಾಟದ ಹಲವು ಮಗ್ಗುಲುಗಳನ್ನು ಚಿತ್ರೀಕರಿಸಿಕೊಂಡು ಬಂದ ಕೇಸರಿ ಹರವೂರವರು ‘ಕಿಸಾನ್ ಸತ್ಯಾಗ್ರಹ’ ಎನ್ನುವ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿದರು. ಇತ್ತೀಚೆಗೆ ನಡೆದ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕೇಂದ್ರ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆದೇಶದ ಮೇರೆಗೆ ತಡೆಹಿಡಿಯಲಾಯಿತು. ಈ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನದ ವಿರುದ್ಧ ಸಿಡಿದೆದ್ದ ಕೆಲವಾರು ಸಂಘಟನೆಗಳು ಸೇರಿ 2024 ಮಾರ್ಚ್ 16ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಈ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಿದ್ದರು.
ಸಾಕ್ಷ್ಯಚಿತ್ರದಾದ್ಯಂತ ಅನ್ನದಾತರ ಆಕ್ರೋಶ ಹಾಗೂ ಪ್ರಭುತ್ವದ ದೌರ್ಜನ್ಯಗಳು ಅನಾವರಣಗೊಂಡಿವೆ. ರೈತರ ಹೋರಾಟವನ್ನು ದಮನಿಸಿ ಹಿಮ್ಮೆಟ್ಟಿಸಲು ಕೇಂದ್ರ ಸರಕಾರವು ನಾಲ್ಕು ರೀತಿಯಲ್ಲಿ ಪ್ರಯತ್ನಿಸಿತು. ಒಂದು ಕಡೆ ಪೊಲೀಸ್ ಪಡೆಗಳು ಪ್ರತಿಭಟನೆಕಾರರ ಮೇಲೆ ಹಲ್ಲೆ, ಬಂಧನಗಳನ್ನು ಆರಂಭಿಸಿದವು, ಕಂಡಕಂಡಲ್ಲಿ ಲಾಠಿ ಬೀಸಿ ಜಲಫಿರಂಗಿ ಸಿಡಿಸಿದರು, ಇನ್ನೊಂದು ಕಡೆ ಬಾಡಿಗೆ ಗೂಂಡಾಗಳು ಸ್ಥಳೀಯರ ವೇಷದಲ್ಲಿ ಬಂದು ಕಲ್ಲುತೂರಾಟ ಮಾಡಿ ರೈತರನ್ನು ಗಡಿಯಿಂದ ಓಡಿಸಲು ನೋಡಿದರು. ಗೋದಿ ಮಾಧ್ಯಮಗಳು ರೈತರನ್ನು ಖಾಲಿಸ್ತಾನಿಗಳು, ಪಾಕಿಸ್ತಾನಿ ಏಜೆಂಟರುಗಳು, ಆತಂಕವಾದಿಗಳು ಎಂದೆಲ್ಲಾ ಅಪಪ್ರಚಾರ ಮಾಡಿ ಹೋರಾಟ ನಿರತ ರೈತರ ವಿರುದ್ಧ ದೇಶವಾಸಿಗಳನ್ನು ಎತ್ತಿಕಟ್ಟಲು ವ್ಯವಸ್ಥಿತವಾಗಿ ಪ್ರಯತ್ನಿಸಿದವು. ಬಿಜೆಪಿಯ ನಾಯಕರೆಲ್ಲರೂ ರೈತ ಚಳವಳಿಯ ವಿರುದ್ಧ ಹೇಳಿಕೆಗಳನ್ನು ಕೊಡತೊಡಗಿದರು. ಸ್ವತಃ ಪ್ರಧಾನ ಮಂತ್ರಿಗಳೇ ಸಂಸತ್ತಿನಲ್ಲಿ ರೈತ ಹೋರಾಟಗಾರರು ಹಾಗೂ ಚಳವಳಿಯ ಸಮರ್ಥಕರನ್ನು ಆಂದೋಲನ ಜೀವಿಗಳೆಂದು ಲೇವಡಿ ಮಾಡಿದರು.
ಹೋರಾಟಗಾರರಿಗೆ ದಿಲ್ಲಿ ಗಡಿಭಾಗಗಳಲ್ಲಿ ಕೇಂದ್ರ ಸರಕಾರ ದಿಗ್ಬಂಧನ ಹೇರಿತು, ಮೊಬೈಲ್ ಸಿಗ್ನಲ್‌ಗಳನ್ನು ನಿಷ್ಕ್ರಿಯಗೊಳಿಸಲಾಯಿತು, ನೀರು, ಕರೆಂಟು ಸರಬರಾಜಿನ ಮೂಲಗಳನ್ನು ನಿಲ್ಲಿಸಲಾಯಿತು. ರಸ್ತೆಗಳಿಗೆ ಮೊಳೆಗಳನ್ನು ಹೊಡೆಸಲಾಯಿತು. ಹೈವೇಗಳಲ್ಲಿ ಕಾಂಕ್ರಿಟ್ ತಡೆಗೋಡೆ ಹಾಗೂ ಕಂಟೇನರ್‌ಗಳನ್ನು ತಂದು ನಿಲ್ಲಿಸಲಾಯಿತು. ಇಷ್ಟೆಲ್ಲಾ ಮಾಡಿದರೂ ರೈತ ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು. ಏನೇ ದಮನ ಮಾಡಿದರೂ ರೈತರ ಹೋರಾಟ ನಿಲ್ಲಲಿಲ್ಲ.
2021 ಜನವರಿ 26ರಂದು ಗಣರಾಜ್ಯೋತ್ಸವದಂದು ಒಂದು ಲಕ್ಷದಷ್ಟು ಟ್ರ್ಯಾಕ್ಟರ್‌ಗಳಲ್ಲಿ ರೈತರು ದಿಲ್ಲಿಗೆ ಮುತ್ತಿಗೆ ಹಾಕಿದರು. ಪ್ರಭುತ್ವದ ಬೆಂಬಲದಿಂದ ದೀಪ್ ಸಿಧು ಎನ್ನುವ ಚಿತ್ರನಟನ ನೇತೃತ್ವದಲ್ಲಿ ರೈತರ ಒಂದು ಚಿಕ್ಕ ಗುಂಪು ಕೆಂಪುಕೋಟೆಗೆ ನುಗ್ಗಿ ಧಾರ್ಮಿಕ ಧ್ವಜವನ್ನು ಹಾರಿಸಿತು. ಇದನ್ನೇ ನೆಪವಾಗಿಟ್ಟುಕೊಂಡ ಮೋದಿ ಸರಕಾರ ರೈತರನ್ನು ಗಡಿಗಳಿಂದ ಎತ್ತಂಗಡಿ ಮಾಡಲು ಮುಂದಾಗಿ ಪೊಲೀಸ್ ಬಲ ಬಳಸಿ ದೌರ್ಜನ್ಯ ಆರಂಭಿಸಿತು. ಹೋರಾಟ ನಿರತ ರೈತರನ್ನು ಆತಂಕವಾದಿಗಳು, ದೇಶವಿರೋಧಿಗಳು ಎಂದು ಘೋಷಿಸಿ ಆಂದೋಲನವನ್ನು ದಮನ ಮಾಡಲು ಅತೀ ದೊಡ್ಡ ಷಡ್ಯಂತ್ರವನ್ನು ರೂಪಿಸಲಾಗಿತ್ತು. ಪೊಲೀಸ್ ಬಲವನ್ನು ವ್ಯಾಪಕವಾಗಿ ಬಳಸಲಾಯಿತು. ರೈತರ ಬಂಧನಗಳು ಅವ್ಯಾಹತವಾಗಿ ನಡೆದವು. ದೇಶದ ಭದ್ರತೆಯೇ ಆತಂಕದಲ್ಲಿದೆ ಎಂದು ಮಾಧ್ಯಮಗಳ ಮೂಲಕ ಸುಳ್ಳು ಪ್ರಚಾರ ಮಾಡಲಾಯಿತು. ಇದರ ಜೊತೆಗೆ ಕೊರೋನ ಮಹಾಮಾರಿ ಕೂಡಾ ಆತಂಕವನ್ನು ಸೃಷ್ಟಿ ಮಾಡಿತ್ತು.
ಈ ಎಲ್ಲಾ ಅನಿರೀಕ್ಷಿತ ಘಟನೆಗಳಿಂದ ರೈತ ಸಂಘಟನೆಗಳಲ್ಲಿ ತಲ್ಲಣ ಸೃಷ್ಟಿಯಾಯಿತು. ಇನ್ನೇನು ಸರಕಾರ ರೈತರ ಮೇಲೆ ಹಿಂಸಾತ್ಮಕ ದಬ್ಬಾಳಿಕೆ ಶುರು ಮಾಡುತ್ತದೆ ಎನ್ನುವ ಸಂದೇಹ ರೈತರಲ್ಲಿ ಮೂಡಿತು. ಅನೇಕ ಹೋರಾಟಗಾರರು ಹತಾಶೆಯಿಂದ ಗಡಿಗಳನ್ನು ತೊರೆದು ತಮ್ಮ ಊರಿಗೆ ಮರಳತೊಡಗಿದರು. ಆದರೆ.. ರೈತ ನಾಯಕ ರಾಕೇಶ್ ಟಿಕಾಯತ್‌ರವರು ಕಣ್ಣೀರು ಹಾಕಿ ಊರಿಗೆ ಹೋಗುತ್ತಿದ್ದ ರೈತರಿಗೆ ಮರಳಿ ಬರುವಂತೆ ಮನವಿ ಮಾಡಿದರು. ಇಲ್ಲಿಂದ ರೈತ ಹೋರಾಟ ಮತ್ತೊಂದು ಹಂತಕ್ಕೇರಿತು. ಗಡಿಗಳಲ್ಲಿ ಚಳಿ, ಮಳೆ ಹಾಗೂ ಪೊಲೀಸ್ ದೌರ್ಜನ್ಯದಿಂದಾಗಿ 700ಕ್ಕೂ ಹೆಚ್ಚು ರೈತ ಹೋರಾಟಗಾರರು ಪ್ರಾಣ ಕಳೆದುಕೊಂಡರು. ‘‘ನಾವು ಸಾಯುತ್ತೇವೆ ಆದರೆ ಸೋಲುವುದಿಲ್ಲ’’ ಎಂದು ರೈತರು ಘೋಷಿಸಿದರು.
ಈ ಹೋರಾಟದಿಂದಾಗಿ ಜಾಗತಿಕವಾಗಿ ಮೋದಿ ಸರಕಾರ ಮುಜುಗರವನ್ನು ಅನುಭವಿಸಿತು. ರೈತರ ಮೇಲೆ ಸರಕಾರದ ದಮನ ಹೆಚ್ಚಿದಂತೆಲ್ಲಾ ಪ್ರತಿರೋಧ ಮಾರ್ದನಿಸತೊಡಗಿತ್ತು. ರೈತ ಕಿಸಾನ್ ಮಹಾಪಂಚಾಯತ್‌ಗಳಿಗೆ ಲಕ್ಷಾಂತರ ಜನ ಸೇರತೊಡಗಿದರು. ಕೊನೆಗೂ ರೈತರ ಒಗ್ಗಟ್ಟಿನ ಶಕ್ತಿಯ ಮುಂದೆ ಕೇಂದ್ರ ಸರಕಾರ ಮಣಿಯಲೇ ಬೇಕಾಯಿತು. 2021 ನವೆಂಬರ್ 19ರಂದು ಕೃಷಿ ಕಾಯ್ದೆ ಹಿಂದೆಗೆದುಕೊಳ್ಳುವುದಾಗಿ ಪ್ರಧಾನಿ ಮೋದಿ ಟಿವಿ ಪ್ರಸಾರದಲ್ಲಿ ಘೋಷಿಸಿದರೂ ರೈತರು ಹೋರಾಟ ಕೈಬಿಡಲಿಲ್ಲ. ಕೊನೆಗೂ 2021 ನವೆಂಬರ್ 29ರಂದು ಲೋಕಸಭೆಯಲ್ಲಿ ಚರ್ಚೆಗೆ ಆಸ್ಪದ ಕೊಡದೆ ವಿವಾದಿತ ಕೃಷಿ ಕಾಯ್ದೆಗಳ ರದ್ದತಿ ಮಸೂದೆ ಅಂಗೀಕಾರ ಮಾಡಲಾಯಿತು. ಕನಿಷ್ಠ ಬೆಂಬಲ ಬೆಲೆ, ಹೋರಾಟದಲ್ಲಿ ಮೃತರಾದ ರೈತರಿಗೆ ಪರಿಹಾರ, ರೈತರ ವಿರುದ್ಧ ದಾಖಲಾದ ಪ್ರಕರಣಗಳ ವಾಪಸ್, 2013ರ ಭೂಸ್ವಾಧೀನ ಕಾಯ್ದೆ ಮರುಸ್ಥಾಪನೆಯಂತಹ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ರೂಪದಲ್ಲಿ ಕೇಂದ್ರ ಸರಕಾರ ಬರೆದು ಕೊಟ್ಟಮೇಲೆಯೇ ರೈತರು ತಮ್ಮ ಹೋರಾಟ ಕೊನೆಗೊಳಿಸಿ ಊರುಗಳಿಗೆ ತೆರಳಿದರು.
ಬಲಾಢ್ಯವಾದ ಸರಕಾರವನ್ನು ರೈತರು ಹಿಮ್ಮೆಟ್ಟಿಸಿ ಗೆಲ್ಲಲು ಕಾರಣವಾಗಿದ್ದು ರೈತರ ಅಹಿಂಸಾತ್ಮಕ ಚಳವಳಿ ಹಾಗೂ ತಾಳ್ಮೆ. ಯಾವುದೇ ಹಿಂಸಾತ್ಮಕ ಪ್ರಚೋದನೆಗಳಿಗೆ ಒಳಗಾಗದೆ ಶಾಂತಿಯನ್ನು ಕಾಪಾಡಿಕೊಂಡು ಬಂದಿದ್ದರಿಂದಲೇ ದೈತ್ಯಶಕ್ತಿಯನ್ನು ಮಣಿಸಲು ಸಾಧ್ಯವಾಯಿತು. ಪ್ರತಿಹಿಂಸೆಗೆ ಇಳಿದಿದ್ದೇ ಆಗಿದ್ದರೆ ಕೇಂದ್ರ ಸರಕಾರ ದೇಶವಿರೋಧಿ ಆರೋಪ ಹೊರಿಸಿ ತನ್ನ ಮಿಲಿಟರಿ ಶಕ್ತಿಯನ್ನು ಬಳಸಿ ಇಡೀ ರೈತ ಚಳವಳಿಯನ್ನು ಹೊಸಕಿ ಹಾಕುತ್ತಿತ್ತು. ಆದರೆ ಹಾಗೆ ಮಾಡಲು ಅವಕಾಶ ಕೊಡದೆ ಗಾಂಧಿಗಿರಿಯ ಮೂಲಕ ನಡೆದ ಅಹಿಂಸಾತ್ಮಕ ರೈತ ಆಂದೋಲನ ಯಶಸ್ವಿಯಾಯಿತು. ಮೋದಿ ಸರಕಾರಕ್ಕೆ ತೀವ್ರ ಮುಖಭಂಗವಾಯಿತು. ಕಾರ್ಪೊರೇಟ್ ಶಕ್ತಿಗಳಿಗೆ ಹಿನ್ನಡೆಯಾಯಿತು.
ಇಷ್ಟೆಲ್ಲಾ ಘಟನೆಗಳನ್ನು ದೃಶ್ಯಮಾಧ್ಯಮದಲ್ಲಿ ಸೆರೆಹಿಡಿಯುವುದು ಸುಲಭದ ಮಾತಲ್ಲ. ರೈತ ಹೋರಾಟ ನಾಲ್ಕು ಗಡಿಗಳಲ್ಲಿ ವಿಸ್ತರಿಸಿದ್ದು ಎಲ್ಲವನ್ನೂ ಚಿತ್ರೀಕರಿಸುವುದು ಕಷ್ಟಸಾಧ್ಯ. ಎಲ್ಲೇ ಹೋದರೂ ಪೊಲೀಸರ ಕಣ್ಗಾವಲು ಹಾಗೂ ಯಾವಾಗ ಎಲ್ಲಿ ಹಿಂಸೆ ಉಲ್ಬಣಿಸುವುದೋ ಎನ್ನುವ ಆತಂಕ. ಜೊತೆಗೆ ಕೊರೋನ ಎನ್ನುವ ಮಾರಣಾಂತಿಕ ರೋಗದ ಭಯ. ಇಷ್ಟೆಲ್ಲದರ ನಡುವೆಯೂ ಕೇಸರಿ ಹರವೂರವರು ಛಾಯಾಗ್ರಾಹಕ ಪ್ರವೀಣ್ ಕುಮಾರ್‌ರವರ ಜೊತೆಗೆ ಸೇರಿ ಇಡೀ ಕಿಸಾನ್ ಹೋರಾಟದ ಕುರಿತು ಚಿತ್ರೀಕರಣ ಮಾಡಿಕೊಂಡು ಬಂದು ಎಡಿಟ್ ಮಾಡಿಸಿ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದು ರೈತ ಹೋರಾಟದಷ್ಟೇ ರೋಚಕವಾದದ್ದು. ಹರವೂರವರ ರೈತಪರ ಕಾಳಜಿ ಹಾಗೂ ದೇಶದ ಬಗ್ಗೆ ಇರುವ ಕಳಕಳಿಗಳೇ ಈ ರೀತಿಯ ಸಾಹಸಕ್ಕೆ ಪ್ರೇರೇಪಣೆ ಕೊಟ್ಟಿವೆ. ಇಂತಹ ಸಾಕ್ಷ್ಯಚಿತ್ರವು ಭವಿಷ್ಯದಲ್ಲಿ ಜನಾಂದೋಲನಗಳಿಗೆ ಸ್ಫೂರ್ತಿಯಾಗುವಂತಹುದು. ಮುಂದಿನ ತಲೆಮಾರಿಗೆ ರೈತ ಹೋರಾಟದ ತ್ಯಾಗ, ಬಲಿದಾನ ಹಾಗೂ ಬದ್ಧತೆಯನ್ನು ತಿಳಿಸುವಂತಹುದು. ಇಂತಹ ಡಾಕ್ಯುಮೆಂಟರಿಯನ್ನು ಕರ್ನಾಟಕದಾದ್ಯಂತ ಜನತೆಗೆ ತಲುಪಿಸುವ ಕೆಲಸವನ್ನು ರೈತ, ದಲಿತ, ಕಾರ್ಮಿಕ ಮತ್ತು ಮಹಿಳಾ ಸಂಘಟನೆಗಳು ಮಾಡಬೇಕಿದೆ. ಅನ್ನದಾತರು ಒಗ್ಗಟ್ಟಾದರೆ ಫ್ಯಾಶಿಸ್ಟ್ ಪ್ರಭುತ್ವವನ್ನೂ ಮಣಿಸಬಹುದು ಎಂದು ರೈತರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.