ಅರ್ಧ ಸತ್ಯದ ಮಾತುಗಳು
ಮಾನ್ಯರೇ,
ಕರ್ನಾಟಕವನ್ನು ಕಾಂಗ್ರೆಸ್ ಲೂಟಿಯಿಂದ ದೂರವಿಡಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸುವ ಹಾಗೂ ಕಾಂಗ್ರೆಸ್ ಖಾತೆ ತೆರೆಯಲು ಅವಕಾಶ ಕೊಡುವುದಿಲ್ಲ ಎಂಬ ಗ್ಯಾರಂಟಿ ನನಗೆ ನೀಡಿ ಎಂದು ಮುಂತಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಲಬುರಗಿಯ ಎನ್.ವಿ. ಆಟದ ಮೈದಾನದಲ್ಲಿ ಕರ್ನಾಟಕದ ಜನತೆಗೆ ಮನವಿ ಮಾಡಿರುವುದು (ವಾ.ಭಾ., ಮಾ.17) ಚುನಾವಣಾ ಪ್ರಚಾರದ ಶೈಲಿಯ ಚಮತ್ಕಾರದ ಹಾಗೂ ಅರ್ಧ ಸತ್ಯದ ಮಾತುಗಳಾಗಿವೆಯೇ ಹೊರತು ಇಂದಿನ ಭಾರತದ ಪರಿಸ್ಥಿತಿಯ ಕರಾಳ ವಾಸ್ತವವನ್ನು ಮತ್ತು ಭವಿಷ್ಯದಲ್ಲಿ ಆ ದುರಂತವನ್ನು ಹೇಗೆ ತಾವು ಸರಿಪಡಿಸುವ ಯೋಜನೆಗಳನ್ನು ಪಡೆದಿದ್ದೇವೆ ಎಂದು ಜನತೆಗೆ ಮನಗಾಣಿಸುವಂತಹ ದೂರದೃಷ್ಟಿಯ ಕೊರತೆಯಿಂದ ಕೂಡಿವೆ ಎಂದು ಹೇಳಲು ಖೇದವಾಗುತ್ತಿದೆ.
ಚುನಾವಣಾ ಸಂದರ್ಭಗಳಲ್ಲಿ ನಿರ್ದಿಷ್ಟ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಹೋಗಿ, ‘ಅವರು ಏನೂ ಮಾಡಿಲ್ಲ, ನಾವು ಏನೆಲ್ಲ ಮಾಡಿದೀವಿ’ ಎಂದು ತುಲನಾತ್ಮಕ ರೀತಿಯಲ್ಲಿ ಸತ್ಯದೂರವಾದ ಮಾತುಗಳನ್ನು ಆಡುತ್ತಾ ಜನರನ್ನು ತಮ್ಮತ್ತ ಸೆಳೆದುಕೊಳ್ಳುವ ತಂತ್ರಗಾರಿಕೆಯನ್ನು ಹೋಲುವ ಭಾಷಣವು, ಪ್ರಸಕ್ತ ಭಾರತದ ಸಮಗ್ರ ದರ್ಶನದ ಅಭಾವದಿಂದಾಗಿ ಸಂವಿಧಾನದ ಪೀಠಿಕೆಯಲ್ಲಿ ಸಾರಾಂಶದ ರೂಪದಲ್ಲಿ ಒಕ್ಕಣಿಸಲ್ಪಟ್ಟಿರುವ - ಸಮಾನತೆ, ಸ್ವಾತಂತ್ರ್ಯ, ಸಹೋದರತೆ, ಒಕ್ಕೂಟ ವ್ಯವಸ್ಥೆ, ಧರ್ಮನಿರಪೇಕ್ಷತೆ, ಸಮಾಜವಾದಿ ಮೌಲ್ಯಗಳು ಹಾಗೂ ಭಾರತದ ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ದೊರೆಯುವಂತೆ ಮಾಡುವ, ವ್ಯಕ್ತಿ ಗೌರವವನ್ನು ಖಾತ್ರಿ ಮಾಡುವಂತಹ ಘನ ಆದರ್ಶಗಳ ಅಧಃಪತನವಾಗಿರುವುದನ್ನು ಜಾಣತನದಿಂದ ಮರೆಮಾಡುತ್ತಿರುವಂತೆ ಭಾಸವಾಗುತ್ತದೆ.
ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ, ಜನಾಂಗೀಯ ಹಲ್ಲೆ, ಕೊಲೆ, ಸುಲಿಗೆಗಳ ನಿರಂತರತೆ, ಅಮಾಯಕ ಗರ್ಭಿಣಿ ಬಿಲ್ಕಿಸ್ ಬಾನು ಹಗರಣದ ಕ್ರೂರ ಅತ್ಯಾಚಾರ, ಕೊಲೆಗಳು, ದೇಶಕ್ಕೆ ಅಂತರ್ರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಂತಹ ಸಾಕ್ಷಿ ಮಲಿಕ್ ಮುಂತಾದ ಮಹಿಳಾಮಣಿಗಳ ಮೇಲಿನ ಮೇಲಧಿಕಾರಿಗಳ ಲೈಂಗಿಕ ದೌರ್ಜನ್ಯದ ಜೊತೆಗೆ ಅವರ ಪ್ರತಿಭಟನಾ ಸ್ವಾತಂತ್ರ್ಯದ ಮೇಲೆ ಸರಕಾರಿ ಅಧಿಕಾರಿಗಳ ದಮನ, ದೇಶದ ಎಲ್ಲೆಡೆ ಎಗ್ಗಿಲ್ಲದೆ ನಡೆಯುತ್ತಿರುವ ಅತ್ಯಾಚಾರ, ಕೊಲೆಗಳ ಹೆಚ್ಚಳ, ಮರ್ಯಾದೆಗೇಡು ಹತ್ಯೆಗಳು, (ಅ)ನೈತಿಕ ಪೊಲೀಸ್ಗಿರಿ, ಬಡವರ ಮುರುಕು ಮನೆಗಳ ಮೇಲೆ ಬುಲ್ಡೋಜರ್ ಪ್ರಯೋಗ, ಭಾರತಕ್ಕೆ ಬರುವ ವಿದೇಶಿ ಅತಿಥಿಗಳ ಕಣ್ಣಿಗೆ ಬಡವರು ಬೀಳಬಾರದೆಂದು ಮಾಡುವ ಹೇಯ ವ್ಯವಸ್ಥೆಗಳು, ದಲಿತರ ಮೇಲಿನ ಹಲ್ಲೆ ಮತ್ತು ಕೊಲೆಗಳು, ತಾಂಡವವಾಡುತ್ತಿರುವ ಜಾತೀಯತೆ ಮತ್ತು ಮತ, ಧರ್ಮಗಳ ಹೆಸರಲ್ಲಿ ಆಚರಿಸಲಾಗುತ್ತಿರುವ ಮೌಢ್ಯಗಳು, ದೇವರನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಕ್ಷುಲ್ಲಕ ಪರಿ, ಕೃಷಿ ಕ್ಷೇತ್ರದ ಕಾರ್ಪೊರೇಟೀಕರಣ, ಅಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟಿಸುವ ರೈತರ ಮೇಲಿನ ನಿರ್ದಯ ದಾಳಿ, ಬೆಲೆಯೇರಿಕೆ, ಖಾಸಗೀಕರಣ, ನಿರುದ್ಯೋಗದ ದಾಖಲೆ, ಬಡವರು-ಶ್ರೀಮಂತರ ನಡುವಿನ ನ್ಯಾಯಬದ್ಧವಲ್ಲದ ಅಪಾರ ಅಂತರ, ಬ್ಯಾಂಕುಗಳ ನಷ್ಟ, ವಾಪಸಾಗದ ಸಾಲಗಳ ಹೊರೆ ಮತ್ತು ಅವುಗಳ ‘ರಿಟನ್ ಆಫ್’ ಪ್ರಕ್ರಿಯೆ, ದೇಶದ ಸಾಲದ ಮಿತಿ ಮೀರಿದ ಹೆಚ್ಚಳ, ಅಪ್ರಜಾಸತ್ತಾತ್ಮಕ ರಾಜಕೀಯ ಚಟುವಟಿಕೆಗಳು, ಭ್ರಷ್ಟಾಚಾರವನ್ನೇ ಕಾನೂನುಬದ್ಧಗೊಳಿಸಿದ ಚುನಾವಣಾ ಬಾಂಡುಗಳು, ನ್ಯಾಯಾಂಗದ ನಡುವೆ ಶಾಸಕಾಂಗದ ಅಸಾಂವಿಧಾನಿಕ ಹಸ್ತಕ್ಷೇಪ, ಮಾಧ್ಯಮ ಕ್ಷೇತ್ರದ ವಶೀಕರಣ ಇತ್ಯಾದಿ ದೇಶದ ವರ್ತಮಾನ ಹಾಗೂ ಭವಿಷ್ಯತ್ತಿಗೆ ಮಾರಕವಾಗುವಂತಹ ನಾನಾ ಗಂಭೀರ ಸಮಸ್ಯೆಗಳ ಬಗೆಗೆ ದಿವ್ಯ ನಿರ್ಲಕ್ಷ್ಯವನ್ನು ತಳೆದಿರುವುದು ವಿಷಾದದ ಸಂಗತಿಯಾಗಿದೆ, ಪ್ರಜಾಪ್ರಭುತ್ವ ತತ್ವದ ಅಣಕವಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ದೇಶವನ್ನು ತಮ್ಮ ಅಪ್ರತಿಮವಾದ ದೇಶಭಕ್ತಿ, ತ್ಯಾಗ, ಬಲಿದಾನ ಹಾಗೂ ಜಗತ್ತೇ ವಿಸ್ಮಯ ಪಡುವಂತಹ ಆದರ್ಶಗಳಿಂದ ಕಟ್ಟಿದ ಗಾಂಧಿ, ಅಂಬೇಡ್ಕರ್, ನೆಹರೂ, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಭಗತ್ ಸಿಂಗ್, ರವೀಂದ್ರನಾಥ ಟಾಗೋರ್, ವಿವೇಕಾನಂದ ಮುಂತಾದ ನೂರಾರು ದಾರ್ಶನಿಕರ ಹಾಗೂ ಅವರ ಮಾರ್ಗದರ್ಶನದಲ್ಲಿ ನಡೆದ ಕೋಟ್ಯಂತರ ಮಂದಿಯ ಚರಿತ್ರಾರ್ಹವಾದ ಪವಾಡವನ್ನು ಸಂಪೂರ್ಣವಾಗಿ ವಿಸ್ಮತಿಗೆ ತಳ್ಳಿದಂತಾಗಿದೆ.
-ಪು.ಸೂ. ಲಕ್ಷ್ಮೀನಾರಾಯಣ ರಾವ್,
ಬೆಂಗಳೂರು