ನೀರಿನ ಮೂಲಗಳ ಸ್ವಚ್ಛತೆಗೆ ಆದ್ಯತೆ ನೀಡಿ
ಮಾನ್ಯರೇ,
ಬೇಸಿಗೆ ಬಂತೆಂದರೆ ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗುವುದು ಈಗ ಸಹಜ ಪ್ರಕ್ರಿಯೆಯಾಗಿದೆ. ಮಳೆಯ ಪ್ರಮಾಣದಲ್ಲಿ ಕುಸಿತ ಕೂಡ ನೀರಿನ ಸಮಸ್ಯೆಯನ್ನು ಹೆಚ್ಚು ಮಾಡಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವಾರು ಭಾಗಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ.
ನೀರಿನ ಸಮಸ್ಯೆಯಿಂದ ಪಾರಾಗಬೇಕಾದರೆ ನೀರಿನ ಮೂಲಗಳಾದ ನದಿ, ಕೆರೆ, ಬಾವಿ ಇನ್ನೂ ಮುಂತಾದ ನೀರಿನ ಮೂಲಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ನಗರಗಳ ಹೆಚ್ಚಿನ ನಾಗರಿಕರು ತಮ್ಮ ಮನೆಯ ಕಸ, ಪ್ಲಾಸ್ಟಿಕ್ ವಸ್ತುಗಳು, ಗಾಜಿನ ವಸ್ತುಗಳು, ಬಟ್ಟೆಗಳು ಹೀಗೆ ಯಾವುದೇ ರೀತಿಯ ತ್ಯಾಜ್ಯವನ್ನೂ ನದಿಗಳಲ್ಲಿ ಎಸೆಯುವುದು ಅಭ್ಯಾಸವಾಗಿದೆ.
ಇದರಿಂದಾಗಿ ಆ ತ್ಯಾಜ್ಯ ವಸ್ತುಗಳು ನದಿಯ ತಳಸೇರುವ ಮೂಲಕ ಹೂಳಾಗಿ ಪರಿವರ್ತನೆಯಾಗಿ ನೀರಿನ ಮಟ್ಟ ಕುಸಿಯುವಂತಾಗುತ್ತದೆ, ಇದರ ಜೊತೆಗೆ ಕುಡಿಯುವ ನೀರಿನಲ್ಲಿ ವಿಷಕಾರಿ ಪದಾರ್ಥಗಳು ಸೇರುವ ಮೂಲಕ ನೀರಿನ ಗುಣಮಟ್ಟ ಕುಸಿದು ಕುಡಿಯಲು ಯೋಗ್ಯವಲ್ಲದಾಗಿ ಪರಿಣಮಿಸುತ್ತದೆ.
ಇತ್ತೀಚೆಗೆ ಬೆಂಗಳೂರಿನಿಂದ ಕಾವೇರಿ ನದಿಯ ವೀಕ್ಷಣೆಗೆ ತೆರಳಿದ್ದ ಒಂದು ಕುಟುಂಬ ತ್ಯಾಜ್ಯಗಳನ್ನು ನದಿಯಲ್ಲಿ ಎಸೆದಿದ್ದಾಗ ಅಲ್ಲಿನ ಅಧಿಕಾರಿಗಳು ಎಸೆದವರನ್ನು ಕರೆದು ಅವರಿಂದಲೇ ತ್ಯಾಜ್ಯವನ್ನು ತೆಗೆಸುವ ಮೂಲಕ ಉತ್ತಮ ಕೆಲಸಕ್ಕೆ ನಾಂದಿ ಹಾಡಿದ್ದಾರೆ.
ನೀರುಣಿಸುವ ನಾಡಿನ ಕೆರೆಗಳು ಎಲ್ಲರಿಗೂ ಸೇರಿದ್ದು. ಅದನ್ನು ಕಲುಷಿತಗೊಳಿಸಿದರೆ ಕುಡಿಯುವ ನೀರಿಗೆ ಸಮಸ್ಯೆಯಾಗದಿದ್ದೀತೇ?
ಆದ್ದರಿಂದ ಸರಕಾರ ನದಿಗಳ ಸ್ವಚ್ಛತೆಗೆ ಸಂಬಂಧಿಸಿದಂತೆ ಕಠಿಣ ಕಾನೂನು ಜಾರಿಗೊಳಿಸಬೇಕು ಮತ್ತು ಯಾರೇ ಕಾನೂನು ಉಲ್ಲಂಘನೆ ಮಾಡಿದರೂ ಕಠಿಣ ಶಿಕ್ಷೆ ವಿಧಿಸುವ ಮೂಲಕ ಅವರಿಗೆ ಪಾಠ ಕಲಿಸಿದರೆ ನದಿ ನೀರಿನ ಬಗ್ಗೆ ಅರಿವು ಮೂಡುತ್ತದೆ.
-ರಾಸುಮ ಭಟ್,
ಕುವೆಂಪು ವಿಶ್ವವಿದ್ಯಾಲಯ,
ಚಿಕ್ಕಮಗಳೂರು