ಯುವ ಭಾರತದ ಕಣ್ಣಲ್ಲಿ ಜಾತಿ ವಿನಾಶ-ಜಾತಿ ಅಸ್ಮಿತೆ
ಇಂದು ಅಂಬೇಡ್ಕರ್ ಜಯಂತಿ
► ನಾನು ಎಸ್ಸಿ. ಬಾಬಾಸಾಹೇಬರ ಜಾತಿಯಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆಯಿದೆ. ಈಗ ಎಲ್ಲ ಜಾತಿಯೋರಿಗೂ ಯಾವ ಸ್ಥಳದಲ್ಲಾದರೂ ಕೆಲಸ ಮಾಡೋ ಅವಕಾಶವಿದೆ. ಇದುವರೆಗೆ ನಾನೇನೂ ದಲಿತಳು ಅಂತ ತೊಂದರೆ ಅನುಭವಿಸಿಲ್ಲ. ಆದರೂ ಕೆಲವೆಡೆ ಇದೆ ಅಂತ ಕೇಳಿದ್ದೇನೆ. ಜಾತಿ ಭೇದಭಾವ ಹೋಗಬೇಕು. ಯಾವುದಾದರೂ ಒಂದು ಸಾಧನೆ ಮಾಡಿ ದಲಿತ ಮಕ್ಕಳಿಗಷ್ಟೇ ಅಲ್ಲ, ಎಲ್ಲಾ ಮಕ್ಕಳಿಗೂ ಶಿಕ್ಷಣ ಕೊಡಿಸ್ತೀನಿ. ಜಾತಿಪದ್ಧತಿ ಹೋಗಲಾಡಿಸ್ತೀನಿ.
► ಕೆಲವು ಕೀಳುಜಾತಿಯವರ ಅನುಭವ ಕೇಳಿ ‘ಯಪ್ಪಾ ಆ ಜಾತಿಯಲ್ಲಿ ಹುಟ್ಟಬಾರದು’ ಅನಿಸ್ತಿತ್ತು. ಸದ್ಯ, ನಾವು ನಾಮದೇವ ಸಿಂಪಿಗೇರರು. ನಮ್ಜಾತಿ ಅಂದ್ರೆ ನಂಗಿಷ್ಟ. ನಮ್ಮ ದೇವರು ಪಾಂಡುರಂಗ ವಿಠಲ. ನಂಗೆ ಈ ಜಾತಿ ಬಿಟ್ಟು ಮತ್ಯಾವ ಜಾತಿಯಲ್ಲೂ ಹುಟ್ಟಕ್ಕೆ ಇಷ್ಟವಿಲ್ಲ.
► ನನ್ನ ಜಾತಿಯಲ್ಲಿ ಹುಟ್ಟಿದ್ದಕ್ಕೆ ಬೇಸರ ಇದೆ. ಎಲ್ಲರೂ ಇವರಿಗೆ ದೌರ್ಜನ್ಯ ಮಾಡಿದ್ದಾರೆ. ಮುಂದಿನ ಜನ್ಮ ಅಂತಿದ್ರೆ ಮನುಷ್ಯರಾಗಿ ಹುಟ್ಟಬಾರದು ಅನ್ನಿಸಿದೆ.
► ನಾನು ಹಿಂದೂ ಹಟಗಾರ. ನೇಕಾರಿಕೆ ಮಾಡ್ತೀವಿ. ಅಟ್ಟಿಮಟ್ಟಿ ಮಗ್ಗ, ಪಾರ್ಲಾ ಮಗ್ಗ ನಮ್ಮನೇಲಿದಾವೆ. ನಂಗೆ ನನ್ ಜಾತಿ ಮೇಲೆ ತುಂಬಾನೇ ಅಭಿಮಾನ, ತುಂಬಾನೆ ವಿಶ್ವಾಸ. ನನ್ ಪ್ರಕಾರ ನಮ್ಜಾತಿ ತುಂಬಾನೆ ಒಳ್ಳೆಯದು. ಈ ಜಾತಿಯಲ್ಲಿ ಹುಟ್ಟಿರೋದಕ್ಕೆ ಹೆಮ್ಮೆಯಿದೆ.
► ನನ್ನದು ‘ಮೇಲುಜಾತಿ’ ಅಂತ ಕರೆಸಿಕೊಂಡಿದೆ. ಅದಕ್ಕಾಗಿಯೇ ಇಡೀ ಜಿಲ್ಲೆಗೆ ಮೂರನೆಯ ರ್ಯಾಂಕ್ ಬಂದ್ರೂ ಮೊರಾರ್ಜಿ ವಸತಿ ಶಾಲೆಯಲ್ಲಿ ರಾಜ್ಯದ ಎಲ್ಲೂ ಸೀಟು ಸಿಗಲಿಲ್ಲ. ಕಾಲೇಜಿಗೆ ಹೋಗಕ್ಕೆ ಬಸ್ ಪಾಸ್ ಮಾಡಿಸುವಾಗಲೂ 1,500 ರೂಪಾಯಿ ಕೊಡಬೇಕಿತ್ತು. ಕಷ್ಟದಿಂದ ಶುಂಠಿ ತಿಕ್ಕಿ ಹಣ ಹೊಂದಿಸಿದ್ವಿ. ನನ್ನ ಕ್ಲಾಸ್ಮೇಟ್ ಎಸ್ಸಿ. ಅವಳಪ್ಪ ನೌಕರಿಯಲ್ಲಿದ್ದರೂ ಅವರಿಗೆ 150 ರೂಪಾಯಿ. ಈ ತಾರತಮ್ಯ ಜಾತಿ ಆಧಾರಿತ ಮೀಸಲಾತಿಯ ಬಗೆಗೆ ವಿರೋಧ ಹುಟ್ಟಿಸಿತು. ಆದರೆ ಆಮೇಲೆ ಓದು, ಆತ್ಮಾವಲೋಕನದಿಂದ ಅಭಿಪ್ರಾಯ ಬದಲಾಗಿದೆ. ನನಗೆ ಸಿಗದ ಸೀಟಿನಲ್ಲಿ ಒಬ್ಬ ಹಿಂದುಳಿದ ಹುಡುಗಿ ಓದಿದ್ದಾಳೆ ಅಂತ ಸಮಾಧಾನ ಮಾಡ್ಕೊಂಡಿದೀನಿ.
► ನಂದು ಹಿಂದೂ ಮರಾಠಾ ಜಾತಿ. ಶಿವಾಜಿ ಮಹಾರಾಜ ಅಂದ್ರೆ ತುಂಬಾನೇ ಇಷ್ಟ. ಅವರವರ ಜಾತಿ ಅವರವರಿಗೆ ಶ್ರೇಷ್ಠ. ನನಗೆ ನಮ್ಮ ಜಾತಿ ಶ್ರೇಷ್ಠ. ನಾನು ಹಿಂದೂ ಅಂತ ನಂಗೆ ಹೆಮ್ಮೆಯಿದೆ.
► ಲಿಂಗಾಯತಳಾಗಿ ಹುಟ್ಟಿದ್ದು ಒಂದುಕಡೆ ಹೆಮ್ಮೆ, ಇನ್ನೊಂದು ಕಡೆ ಅಸಮಾಧಾನ. ಮೂರ್ತಿಪೂಜೆ, ಹೋಮಹವನ, ಯಜ್ಞಯಾಗ ಮಾಡ್ತಿದಾರೆ ಮತ್ತು ಅದನ್ನು ಬಸವಣ್ಣ ವಿರೋಧಿಸಿದ್ದಾರೆೆ. ಇರುವುದು ಮಾನವ ಜಾತಿ ಒಂದೇ. ಉಳ್ಳವರು ಇಲ್ಲದವರನ್ನು ಶೋಷಣೆ ಮಾಡಲು ಜಾತಿವ್ಯವಸ್ಥೆ ಮಾಡಿಕೊಂಡರು. ನಾನು ಬಸವಣ್ಣನವರು, ಗೌತಮ ಬುದ್ಧ, ಅಂಬೇಡ್ಕರರನ್ನು ಅನುಸರಿಸಿ ಬದುಕಲು ಇಷ್ಟಪಡುತ್ತೇನೆ.
► ಗೌಡರ ಜಾತಿಯಲ್ಲಿ ಹುಟ್ಟಿದೆ. ಮನೆಯೋರು ಮಾಡೋ ಜಾತಿ ತಾರತಮ್ಯ ನೋಡಿಕೊಂಡೇ ಬಂದಿದೀನಿ. ಅವರು ಬೇರೆ ಜಾತಿಯೋರು ನಮ್ಮನೆಗೆ ಬಂದರೆ ದೇವರು ಕೋಪ ಮಾಡ್ಕೋತದೆ ಅಂದ್ಕೋತಾರೆ. ಅಮ್ಮ ಬೈತಾಳಂತ ಮೊದಮೊದಲು ಬೇರೆ ಜಾತಿ ಫ್ರೆಂಡ್ಸನ್ನು ಮನೆಗೆ ಕರೀತಿರಲಿಲ್ಲ. ಈಗ ಕರೆದು ಬಿಡ್ತೀನಿ, ಹೋದ್ಮೇಲೆ ಯಾವ ಜಾತೀಂತ ಹೇಳ್ತೀನಿ. ಅವರು ಬಂದುಹೋಗಿದ್ದಕ್ಕೆ ಮನೆ ಏನ್ ಬಿದ್ದೋಯ್ತಾಂತ ವಾದ ಮಾಡ್ತೀನಿ. ನಮ್ಮಮ್ಮ ಈಗೀಗ ಜಾತಿಗೀತಿ ನಂಬೋದು ಕಮ್ಮಿ ಮಾಡಿದ್ದಾರೆ. ನನ್ನ ಫ್ರೆಂಡ್ಸ್ನ ಚೆನ್ನಾಗಿ ಸತ್ಕಾರ ಮಾಡ್ತಾರೆ. ಅದು ಖುಷಿ ವಿಷಯ. ಆದ್ರೆ ಹಿಂದೂ-ಮುಸ್ಲಿಮ್ ಶತ್ರುಗಳು ಅನ್ನೋ ತರ ಮಾತಾಡ್ತಾರೆ. ಹಾಗಲ್ಲ ಅಂತ ನಂಗೊತ್ತು. ಆದರೆ ಅವರತ್ರ ದನಿ ಎತ್ತಕ್ಕೆ ಆಗಿಲ್ಲ.
► ನಾನು ಇಸ್ಲಾಂ ಧರ್ಮದಲ್ಲಿ ಹುಟ್ಟಿದ್ದೇನೆ. ಇದರಲ್ಲಿ ಪರ್ದಾ ಪದ್ಧತಿ ಬಹಳಾ ವಿಶೇಷ ಪದ್ಧತಿಯಾಗಿದೆ. ನನಗದು ಸೇಫ್ಟಿ ಫೀಲ್ ಆಗುತ್ತೆ. ನಮಾಝ್, ಕುರ್ಆನ್, ರಮಝಾನ್ ಎಲ್ಲ ನಂಗಿಷ್ಟ. ನಮ್ಮ ಜಾತಿಯಲ್ಲಿ ಎಲ್ಲ ಸಮಾನರು ಅಂತಾ ಭಾವಿಸುತ್ತಾರೆ.
► ಜಾತಿ ಎಂಬ ಪದದ ಬಗೆಗೇ ನಂಗೆ ಸಿಟ್ಟು. ನಾನು ಹುಟ್ಟಿದ ಜಾತಿಯವರು ಭೇದಭಾವ ಅನುಭವಿಸೋದನ್ನು ಕಣ್ಣಾರೆ ಕಂಡಿದೀನಿ. ನಾವು ಅವರ ಬಿಂದಿಗೇನ ಮುಟ್ಟಿದ್ವಿ ಅಂತ ಬೈದು ಗೋವಿನ ಸೆಗಣಿ ತಂದು ತೊಳೆದು ನೀರು ತಗಂಡು ಹೋಗಿದ್ರು. ಮತ್ತೊಬ್ರು ನಮ್ ಸಂಬಂಧಿಕರು ಜಮೀನಲ್ಲಿ ಕೆಲಸ ಮಾಡಿ ಮಾಲಕರ ಮನೆಗೆ ಊಟಕ್ಕೆ ಹೋದರೆ ಸಾವುಕಾರ್ರು ತಮ್ಮನೇಲಿ ಊಟಕ್ಕಿಕ್ಕದೆ ನಮ್ಮೋರ ಮನೆಗೆ ಕಳಿಸ್ತಿದ್ರು. ನಾನು ‘ನೀವ್ಯಾಕೆ ಅವರ ಮನೆಗೆ ಕೆಲಸಕ್ ಹೋಗ್ತೀರಿ, ಬಿಡಿ’ ಅಂದೆ. ‘ಹಂಗಂದ್ರ ಆದತೇ? ಜೀವ್ನ ನಡೆಸಕ್ಕೆ ಕಾಸು ಬೇಕಲ್ಲ, ನಂಗೇನು ಬೇಜಾರಿಲ್ಲ’ ಅಂದ್ರು. ನಂಗೆ ಕಣ್ಣೀರು ಬಂತು. ನಾನು ಓದಿ ಏನು ಪ್ರಯೋಜನ ಅನಿಸ್ತು. ಮುಂದಿನ ಪೀಳಿಗೆಗೆ ಈ ರೀತಿ ಆಗದಂಗೆ ಏನಾದ್ರೂ ಮಾಡಬೇಕು.
► ಇಲ್ಲಿಯವರೆಗೂ ಹಲವು ತಿರುವುಗಳಲ್ಲಿ ಜಾತಿ ಪ್ರಶ್ನೆ ಬಂದಿದೆ. ಆದರೆ ಇದ್ಯಾವುದನ್ನೂ ನನ್ನೊಳಗಿಳಿಯಲು ಬಿಟ್ಟಿಲ್ಲ. ನನಗೆ ಜಾತಿ ಬಗ್ಗೆ ನಂಬಿಕೆನೇ ಇಲ್ಲ. ಒಂದೊಳ್ಳೆ ಸಮಾಜ ಸೃಷ್ಟಿಗೆ ಜಾತಿಗಳ ಅವಶ್ಯಕತೆಯಿಲ್ಲ. ಬೀಯಿಂಗ್ ಜೆನ್ ನೆಕ್ಸ್ಟ್, ಜಾತಿ ಹೊರತುಪಡಿಸಿ ನಾವು ಗಮನ ಹರಿಸಬೇಕಾದ ವಿಚಾರಗಳು ಸಾಕಷ್ಟಿವೆ. ನಾನು ನೋಡಿರೋ ಪ್ರಕಾರ ಯೂತ್ಸ್ ಜಾತಿಧರ್ಮನ ಅಷ್ಟು ಕೇರ್ ಮಾಡಲ್ಲ.
► ನನಗೆ ಅಲ್ಲಾಹನ ಮೇಲೆ, ನಮಾಝ್ ಮೇಲೆ ಬಹಳ ನಂಬಿಕೆಯಿದೆ. ನಮ್ಮ ಕುರ್ಆನ್ ತಿಳಿಸುವ ಒಂದೊಂದು ಶಬ್ದವೂ ನಿಜವಾಗಿದೆ. ನಿಜವಾದ ಮನಸ್ಸಿಂದ ಬೇಡಿರುವುದೆಲ್ಲಾ ಸಿಕ್ಕಿದೆ. ನಂಗೆ ಯಾವುದೇ ಕೆಟ್ಟ ಅನುಭವ ಆಗಿಲ್ಲ.
► ನಮ್ಮನೆಯಲ್ಲಿ ನಮಗಿಂತ ಕೆಳಜಾತಿಯೋರ ಫ್ರೆಂಡ್ ಮಾಡಿಕೋಬೇಡ ಅಂತಿದ್ದರು. ಇದು ನಂಗೆ ತುಂಬಾ ಕೋಪ ತರಿಸುತ್ತಿತ್ತು. ಕೆಳಜಾತಿಯವರು ಅನುಭವಿಸುವುದನ್ನು ಕಣ್ಣಾರೆ ಕಂಡಿದ್ದೇನೆ. ಅವರಿಗೆ ಮೀಸಲಾತಿ ಕೊಟ್ಟು ಬೆಳೆಯಲು ಅವಕಾಶ ಮಾಡಿರೋದು ಒಳ್ಳೆಯದು. ಆದರೆ ಜಾತಿ ಬೇಡ ಅನ್ನುವ ನಾವೇ ಅದನ್ನು ಕಟ್ಟಿ ಬೆಳೆಸುತ್ತಿದ್ದೇವೆ. ಪ್ರತೀ ಅರ್ಜಿ ಫಾರಂನಲ್ಲೂ ಜಾತಿ ಕಾಲಂ ಇಟ್ಟಿದ್ದಾರೆ. ಇಂತಹ ಚಿಕ್ಕಚಿಕ್ಕ ತಪ್ಪುಗಳಿಂದಲೇ ಜಾತಿಯ ಬೆಳವಣಿಗೆ ಹೆಚ್ಚಿದೆ.
► ನಾನು ಒಕ್ಕಲಿಗ ಜಾತಿಯಲ್ಲಿ ಹುಟ್ಟಿರೋದು. ಜಾತಿಯಲ್ಲಿ ಒಕ್ಕಲಿಗ ಜಾತಿಯೇ ಮೇಲಂತ ‘ಸನಾದಿ ಅಪ್ಪಣ್ಣ’ ಸಿನೆಮಾದಲ್ಲಿ ಒಂದ್ಕಡೆ ಹೇಳಿದ್ದಾರೆ. ಆದರೆ ಸಮಾಜ ಜಾತಿಗಿಂತ ಬಡವ ಶ್ರೀಮಂತ ಅಂತ ನೋಡುತ್ತದೆ. ನಾನೊಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಚಿನ್ನಾಭರಣ ಹಾಕ್ಕೊಂಡವರನ್ನು ಚೆನ್ನಾಗಿ ಮಾತನಾಡಿಸಿ ಫೋಟೊಗೆ ಕರೀತಿದ್ರು. ಬಡವರನ್ನು ಕೀಳಾಗಿ ಕಂಡರು. ಒಂದು ಮದುವೆಯಿತ್ತು. ಒಂದಿನ ಹಿಂದೆನೆ ನಾವು ಹೋಗಿದ್ವು. ಅವರು ನಮಗೆ ನಕಲಿ ಓಲೆ ಕೊಟ್ಟು ತಾವು ಚಿನ್ನದೋಲೆ ಹಾಕ್ಕಂಡರು. ನಮ್ಮೂರಲ್ಲಿ ಒಂದು ಗೃಹಪ್ರವೇಶ ಇತ್ತು. ನಮ್ಮ ಹತ್ತಿರ ಯಾವುದೇ ಚೆನ್ನಾಗಿರೋ ವಸ್ತು ಇಲ್ಲಂತ ಕರೀಲೇ ಇಲ್ಲ. ನಮ್ಮ ಅಕ್ಕಪಕ್ಕದೋರೂ ನಮ್ಮನೆ ಚೆನ್ನಾಗಿಲ್ಲ ಅಂತ ಮಾತನಾಡಲ್ಲ. ಹೀಗೆ ಒಳಗಿನವರೇ ಬಡವರಿಗೆ ತಾರತಮ್ಯ ಮಾಡ್ತಾರೆ. ಈ ಜಾತೀಲ್ ಹುಟ್ಟಿದ್ದು ನಂ ತಪ್ಪಾ? ಅದಕ್ಕೇ ಜಾತಿಯಲ್ಲ, ಬಡತನದ ಆಧಾರದ ಮೇಲೆ ಮೀಸಲಾತಿ ಕೊಡ್ಬೇಕು.
► ನಾನು ಎಸ್ಸಿ ಮಾದಿಗ. ಈ ಜಾತಿಯಲ್ಲಿ ಇರೋಕೆ ಇಷ್ಟ ಇದ್ದಿಲ್ಲ. ಮುಂಚೆಯಿಂದನೂ, ಮುಂದೆನೂ. ಯಾಕಂದ್ರೆ ನಂಗೆ ಮಾನಸಿಕವಾಗಿ, ದೈಹಿಕವಾಗಿ ತುಂಬಾ ನೋವು, ಹಿಂಸೆ, ಅವಮಾನ ಆಗಿದೆ. ಮನೆ ಜವಾಬ್ದಾರಿ ನನ್ನ ಮೇಲೇ ಇರೋ ಕಾರಣಕ್ಕೆ ಕೆಲ್ಸ ಕೇಳ್ಕಂಡು ಹೋಗ್ತಿದ್ದೆ. ಜಾತಿ ಕೇಳಿ ಬೇಡ ಅಂದಿದ್ದು, ಮಾದಿಗಿತ್ತಿ ಅಂತ ಬೈದಿದ್ದು, ನಿನ್ ಜಾತಿಯೋರು ಸೂಳೆ ಕೆಲಸಕ್ಕೆ ಬೀದೀಲಿ ನಿಲ್ತಾರೆ ಅಂತ ಮೈಕೈ ಮುಟ್ಟಿದ್ದು, ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಂಡು ಮನೆ ಸೇರಿದ್ದು ನೋವು ಕೊಟ್ಟಿದೆ. ಮನೆ ಪರಿಸ್ಥಿತಿ ನೆನೆಸಿಕೊಂಡು ಎಲ್ಲ ನುಂಗಿದೆ. ಬರಬರ್ತ ನನ್ನ ಮೇಲೇ ನಂಗೆ ಹೇಸಿಗೆಯಾಗೋಯ್ತು. ಈಗ ಎಲ್ಲಾದರಿಂದ ಹೊರಬರತಾ ಇದ್ದೀನಿ. ನನ್ನ ನಾನು ಇಷ್ಟಪಡೋದಕ್ಕೆ ಶುರು ಮಾಡಿದ್ದೀನಿ.
►ನನ್ನ ಜಾತಿ ಇಟ್ಕೊಂಡು ಅವಮಾನ ಮಾಡಿದ್ದಾರೆ. ಆದರೆ ನಾನದನ್ನು ತಲೇಲಿ ಇಕ್ಕಂಡಿಲ್ಲ. ಈ ಜಾತಿನ ಮಾದರಿ ಮಾಡಿಕೊಟ್ಟಿರೋರು ಬಾಬಾಸಾಹೇಬ್ ಅಂಬೇಡ್ಕರ್ ಅವರು. ಯಾರೇ ಅವಮಾನ ಮಾಡಿದ್ರೂ ನಾವು ಕುಗ್ಗೋದಿಲ್ಲ, ಅದನ್ನೇ ಶಕ್ತಿ ಮಾಡ್ಕೋತೀವಿ. ಯಾರು ಏನೇ ಹೇಳ್ಲಿ ನಮ್ಜಾತಿಗೆ, ನಾನದನ್ನ ಕೇರ್ ಮಾಡಲ್ಲ. ಈಗೇನೂ ಮೊದಲಿನಂಗೆ ತಾರತಮ್ಯ ಆಗೋದಿಲ್ಲ. ಎಲ್ಲರೂ ಮನೆ ಒಳಗೆ ಕರೆದು ಮಾತಾಡಿಸ್ತಾರೆ. ಚೆನ್ನಾಗೇ ಮಾತಾಡಿಸ್ತಾರೆ. ಆದರೂ ನಾನು ಯಾರ ಮನೆಗೆ ಹೋಗಲ್ಲ. ಅವಮಾನ ಮಾಡ್ತಾರೇನೋ ಅನಿಸುತ್ತೆ. ನನಗೆ ನನ್ ಜಾತಿ ಮೇಲೆ ಭಾಳ ಹೆಮ್ಮೆಯಿದೆ.
***
ಇದೇ ಯುವಜನರು ಅನಾಮಿಕರಾಗಿ ಬರೆದ ಉತ್ತರಗಳಲ್ಲಿ ಶೇ. 50 ಜನ ಒಂದಲ್ಲ ಒಂದು ಜಾತಿ ತಾರತಮ್ಯ ಅನುಭವಿಸಿದ್ದರು. ಶೇ. 85 ಮೀಸಲಾತಿ ಜಾತಿ ಆಧಾರದಲ್ಲಿ ಇರಬಾರದು ಎಂದು ಹೇಳಿದ್ದರು. ಆಯ್ಕೆ ಅವಕಾಶವಿದ್ದರೆ ಶೇ. 60 ಯುವಜನರು ಖಚಿತವಾಗಿ ಒಂದು ಜಾತಿ/ಧರ್ಮದಲ್ಲಿ ಹುಟ್ಟಲು ಬಯಸಿದ್ದರು. ಅರ್ಧದಷ್ಟು ಜನ ಸಂಗಾತಿ ಆಯ್ಕೆಯಲ್ಲಿ ತಮ್ಮ ಜಾತಿಯೇ ಬೇಕೆಂದರು. ಆದರೆ ಶೇ. 100 ಯುವಜನರು ಜಾತಿವಿನಾಶವಾಗಬೇಕೆಂದು ಬಯಸಿದ್ದರು!
ಯುವಭಾರತ ಹೀಗೆ ಸಾಗುತ್ತಿದೆ. ಒಂದೇ ದೇಶ, ಒಂದೇ ಸಮಾಜ, ಒಂದೇ ಕಾಲಮಾನದಲ್ಲಿ ಬದುಕುತ್ತಿರುವ ಯುವಜನರ ಅಭಿವ್ಯಕ್ತಿ, ಅನುಭವದಲ್ಲಿ ಮೇಲ್ಕಾಣಿಸಿದಂತೆ ಅಪಾರ ವ್ಯತ್ಯಾಸ, ಗೊಂದಲಗಳಿವೆ. ಹಲವರಿಗೆ ತಮ್ಮ ಜಾತಿ, ಧರ್ಮದ ಮೇಲೆ ಅಪಾರ ಅಭಿಮಾನವಿದೆ. ‘ಕೀಳುಜಾತಿ’ ಎಂಬ ಪದಬಳಕೆ ಸಾಮಾನ್ಯವಾಗಿದೆ! ‘ಅನ್ಯಜಾತಿ’ಗಳ ಬಗೆಗೆ ಮನೆಗಳಲ್ಲಿ ನಡೆಯುವ ಚರ್ಚೆಗಳು ಯುವಜನರಲ್ಲಿ ತಪ್ಪು ಅಭಿಪ್ರಾಯಗಳನ್ನೂ, ಹುಸಿ ಜಾತಿ ಶ್ರೇಷ್ಠತೆಯನ್ನೂ, ಅಲ್ಲಿಲ್ಲಿ ಜಾತಿಮತಗಳ ಗಡಿ ಮೀರುವ ಪ್ರಯತ್ನಗಳನ್ನೂ ಹುಟ್ಟುಹಾಕಿವೆ. ಮೀಸಲಾತಿಯನ್ನು ಬಡತನ ನಿರ್ಮೂಲನೆಯ ಕಾರ್ಯಕ್ರಮವೆಂದು ಭಾವಿಸಿದಂತಿದೆ. ಸಾಮಾಜಿಕ ನ್ಯಾಯ ಪರಿಕಲ್ಪನೆ ಕುಟುಂಬದಲ್ಲಿ, ಸಮಾಜದಲ್ಲಿ ಇಲ್ಲದ್ದರಿಂದಲೇ ಮೀಸಲಾತಿಗೆ ಅಪಾರ್ಥ ತುಂಬಿಕೊಂಡಿದೆ.
ಇವೆಲ್ಲ ವಿಷಯಗಳನ್ನು ಯುವಜನರ ಬಳಿ ಅಂಕಿಅಂಶಗಳೊಂದಿಗೆ, ಸಂವಿಧಾನದ ಆಶಯಗಳೊಂದಿಗೆ ವಿವರವಾಗಿ ಚರ್ಚಿಸುವ ಅಗತ್ಯವಿದೆ. ಸಮಾನತೆ ಯಾವುದು? ಅದನ್ನು ತರುವುದು ಹೇಗೆಂದು ಅರಿವಾಗಬೇಕಾದರೆ ನಮ್ಮೊಳಗಿನ ನ್ಯಾಯದ ಕಣ್ಣುಗಳನ್ನು ತೆರೆದುಕೊಳ್ಳಬೇಕಿದೆ. ಅದಕ್ಕಾಗಿಯೇ ಸಂವಿಧಾನದ ಪೀಠಿಕಾ ಭಾಗದಲ್ಲಿ ಮೊದಲು ‘ನ್ಯಾಯ ಬರುತ್ತದೆ; ನಂತರ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಬರುತ್ತವೆ’ ಎಂದು ಯುವಜನರಿಗೆ ಎತ್ತಿ ತೋರಿಸಬೇಕಿದೆ.
ಹಾಗಂತ ನಿರಾಶರಾಗಬೇಕಿಲ್ಲ. ಕಾರ್ಮೋಡದಂಚಿಗೆ ಬೆಳ್ಳಿಮಿಂಚೂ ಇದೆ. ಈ ಸಲದ ಶಿಬಿರಾರ್ಥಿಗಳ ಉತ್ತರವನ್ನು ಹೀಗೂ ವಿಶ್ಲೇಷಿಸಬಹುದು: ಶಿಬಿರಾರ್ಥಿಗಳಲ್ಲಿ ಆಯ್ಕೆಯ ಅವಕಾಶವಿದ್ದರೆ ಜಾತಿಯೊಲ್ಲದೆ ಮನುಷ್ಯಜಾತಿ/ಪ್ರಾಣಿಪಕ್ಷಿಯಾಗಿ ಹುಟ್ಟಲು ಶೇ. 40 ಯುವಜನರು ಬಯಸಿದ್ದರು! ಶೇ. 85 ಜಾತಿತಾರತಮ್ಯವನ್ನು ತಾವು ಮಾಡಿಲ್ಲ ಎಂದಿದ್ದರು. ಸಂಗಾತಿ ಆಯ್ಕೆಯಲ್ಲಿ ಯಾವ ಜಾತಿಯಾದರೂ ಅಡ್ಡಿಯಿಲ್ಲ ಎಂದು ಶೇ. 50 ಯುವಜನರು ಹೇಳಿದ್ದರು. ಎಲ್ಲರೂ ಜಾತಿವಿನಾಶವಾಗಲೇಬೇಕೆಂದು ಹೇಳಿದ್ದರು!
ನಿಜ. ಭರವಸೆಯಿಡೋಣ. ನಮ್ಮೆಲ್ಲರ ನ್ಯಾಯದ ಕಣ್ಣುಗಳನ್ನು ಮಬ್ಬುಗೊಳಿಸಿರುವ ಜಾತಿ, ಮತ, ದೇಶ, ಭಾಷೆ, ಲಿಂಗತ್ವಗಳೆಂಬ ಮೋಹದ ಧೂಳನ್ನು ಝಾಡಿಸಿಕೊಳ್ಳೋಣ. ಈ ಕಾಲದ ಅಗತ್ಯಗಳಿಗೆ ತಕ್ಕಂತೆ ಬಾಬಾಸಾಹೇಬರ, ಅಷ್ಟೇ ಅಲ್ಲ ಬುದ್ಧ, ಬಸವ, ಅಕ್ಕ, ಅಲ್ಲಮ, ಕಬೀರ, ನಾರಾಯಣಗುರು, ಮಾರ್ಕ್ಸ್, ಫುಲೆ, ಗಾಂಧಿ, ಪೆರಿಯಾರರ ವಿಚಾರಧಾರೆಗಳನ್ನು ಅರಿತು, ಮುರಿದು, ಒಟ್ಟು ಸೇರಿಸಿ, ಹೊಸದಾಗಿ ಕಟ್ಟೋಣ.