ಗಣತಿಯಲ್ಲಿ ಕಾಡಿಗಿಂತ ನಾಡಿನಲ್ಲೇ ಹೆಚ್ಚು ಕಾಡಾನೆಗಳು!
ಅರಣ್ಯದ ಮೂರು ಪಟ್ಟು ಗಜಗಳು ತೋಟದಲ್ಲಿ ಪತ್ತೆ
ಮಡಿಕೇರಿ : ಕೊಡಗಿನಲ್ಲಿ ಕಾಡಾನೆ-ಮಾನವ ಸಂಘರ್ಷ ಮಿತಿ ಮೀರುತ್ತಿರುವ ಹೊತ್ತಲ್ಲಿ ಆತಂಕಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಇತ್ತೀಚೆಗೆ ನಡೆದ ಕಾಡಾನೆ ಗಣತಿಯಲ್ಲಿ ನೇರವಾಗಿ ಕಾಡಾನೆಗಳನ್ನು ಎಣಿಸುವ ಸಂದರ್ಭ ಕಾಡಿಗಿಂತಲೂ ನಾಡಿನಲ್ಲಿಯೇ ಹೆಚ್ಚು ಕಾಡಾನೆಗಳು ಗೋಚರಿಸಿರುವುದು ಆತಂಕ ಮೂಡಿಸಿದೆ.
ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕಾಡಾನೆ-ಮಾನವ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಕಳೆದ ಒಂದು ವಾರದ ಅವಧಿಯಲ್ಲಿ ಕೊಡಗಿನ ವಿವಿಧ ಭಾಗಗಳಲ್ಲಿ ಮೂರು ಕಾಡಾನೆಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ವಿದ್ಯುತ್ ಸ್ಪರ್ಶ ಸೇರಿ ಬೇರೆ ಬೇರೆ ಕಾರಣಗಳಿಂದ ಕಾಡಾನೆಗಳು ಕಾಫಿ ತೋಟಗಳಲ್ಲಿ ಸಾವನ್ನಪ್ಪಿವೆ. ಇದರ ನಡುವೆ ಇತ್ತೀಚೆಗೆ ನಡೆದ ಕಾಡಾನೆ ಗಣತಿಯಿಂದ ಜಿಲ್ಲೆಯ ಕಾಡುಗಳಿಗಿಂತ ಹೆಚ್ಚು ಕಾಡಾನೆಗಳು ಕಾಫಿ ತೋಟಗಳಲ್ಲಿಯೇ ನೆಲೆಸಿರುವುದು ಕಂಡುಬಂದಿದೆ.
ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಅರಣ್ಯ ಇಲಾಖೆಗಳು ಅಂತರ್‌ರಾಜ್ಯ ಸಮನ್ವಯ ಸಮಿತಿ ರಚಿಸಿಕೊಂಡು ಸೂಕ್ತ ಯೋಜನೆ ರೂಪಿಸಲು ಹಾಗೂ ವೈಜ್ಞಾನಿಕ ಪರಿಹಾರೋಪಾಯಗಳನ್ನು ಕಂಡು ಕೊಳ್ಳಲು ಮುಂದಾಗಿವೆ. ಹಾಗಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಜೊತೆಗೆ ಆಂಧ್ರಪ್ರದೇಶ ಗಡಿ ಭಾಗಗಳಲ್ಲಿನ ಆನೆಗಳ ಸಂಖ್ಯೆ ಸೇರಿದಂತೆ ಇನ್ನಿತರ ಅಂಶಗಳನ್ನು ಪತ್ತೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ರಾಜ್ಯದ ಬಂಡೀಪುರ, ನಾಗರಹೊಳೆ, ಕಾವೇರಿ ವನ್ಯಧಾಮ, ಮಲೆಮಹದೇಶ್ವರ ವನ್ಯಧಾಮ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಮಡಿಕೇರಿ ಪ್ರಾದೇಶಿಕ ಮತ್ತು ವನ್ಯಜೀವಿಧಾಮ ಹಾಗೂ ವೀರಾಜಪೇಟೆ ವಿಭಾಗ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಆನೆ ಗಣತಿ ಕಾರ್ಯ ನಡೆಸಲಾಯಿತು.
ಮೂರು ದಿನಗಳ ಕಾಲ ನಡೆದ ಈ ಗಣತಿಯಲ್ಲಿ ಮೊದಲ ದಿನ ಕಾಡಾನೆಗಳನ್ನು ನೇರವಾಗಿ ವೀಕ್ಷಿಸಿ ದಾಖಲಿಸುವುದಾಗಿತ್ತು. ಅದರಂತೆ ಜಿಲ್ಲೆಯಲ್ಲಿ ನೇರ ವೀಕ್ಷಣೆಯಲ್ಲಿ ಪತ್ತೆಯಾದ ಕಾಡಾನೆಗಳ ಸಂಖ್ಯೆ 177 ಆಗಿದ್ದು ಈ ಪೈಕಿ ಮುಕ್ಕಾಲು ಭಾಗ ಜಿಲ್ಲೆಯ ಕಾಫಿ ತೋಟಗಳಲ್ಲಿಯೇ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಅರಣ್ಯ ಇಲಾಖೆಯ ಮೂಲಗಳ ಪ್ರಕಾರ ಮಡಿಕೇರಿ ವ್ಯಾಪ್ತಿಯಲ್ಲಿ 43 ಕಾಡಾನೆಗಳು ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾದರೆ 25 ಕಾಡಾನೆಗಳು ಕಾಫಿ ತೋಟಗಳಲ್ಲಿ ವೀಕ್ಷಣೆಗೆ ಸಿಕ್ಕಿವೆ.
ವೀರಾಜಪೇಟೆ ವಲಯ ವ್ಯಾಪ್ತಿಯಲ್ಲಿ ಒಟ್ಟು 109 ಕಾಡಾನೆಗಳು ನೇರ ವೀಕ್ಷಣೆಗೆ ಸಿಕ್ಕಿದ್ದು, ಈ ಪೈಕಿ 105 ಕಾಡಾನೆಗಳು ತೋಟಗಳಲ್ಲಿ ಪತ್ತೆಯಾದರೆ, ಕೇವಲ 4 ಕಾಡಾನೆಗಳು ಮಾತ್ರ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾಗಿವೆ.
ಇದರಿಂದ ಜಿಲ್ಲೆಯಲ್ಲಿ ಪತ್ತೆಯಾಗಿರುವ ಒಟ್ಟು 177 ಕಾಡಾನೆಗಳ ಪೈಕಿ 130 ಕಾಡಾನೆಗಳು ತೋಟದಲ್ಲಿಯೇ ಇರುವುದಾಗಿದ್ದು, ಮುಂದಿನ ದಿನಗಳಲ್ಲಿ ಕಾಡಾನೆಗಳ ಸಂಖ್ಯೆ ಇನ್ನಷ್ಟು ಹೆಚ್ಚಾದರೆ ದೊಡ್ಡ ಮಟ್ಟದ ಸಮಸ್ಯೆಯಾಗುವ ಸಾಧ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿದೆ.
ಗಣತಿ ವರದಿ ಇಲಾಖೆಗೆ ಸಲ್ಲಿಕೆ
ಮೂರು ದಿನಗಳ ಕಾಲ ನಡೆದ ಮೂರು ಮಾದರಿಯ ಸರ್ವೇ ಕಾರ್ಯಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದು, ಮೊದಲ ದಿನ ಬ್ಲಾಕ್ ಸಾಂಪ್ಲಿಂಗ್, ಎರಡನೇ ದಿನ ಲೈನ್ ಟ್ರಾನ್ಸೆಕ್ಟ್, ಮೂರನೇ ದಿನ ನೀರಿನ ಮೂಲಗಳಲ್ಲಿ ಕಾಡಾನೆಗಳ ಚಲನವಲನ ಪತ್ತೆ ಹಚ್ಚಿ ಗಣತಿ ಮಾಡಲಾಗಿದೆ. ಈ ಪೈಕಿ ಮೊದಲ ದಿನ ನಡೆದ ಬ್ಲಾಕ್ ಸಾಂಪ್ಲಿಂಗ್ (ನೇರ ವೀಕ್ಷಣೆ) ಮೂಲಕ ಪತ್ತೆಯಾಗಿರುವ ಕಾಡಾನೆಗಳ ಸಂಖ್ಯೆ 177 ಆಗಿದೆ. ಇದರಲ್ಲಿ 130 ಕಾಡಾನೆಗಳು ಅರಣ್ಯ ವ್ಯಾಪ್ತಿಯಿಂದ ಹೊರಗೆ(ಕಾಫಿ ತೋಟಗಳಲ್ಲಿ)ಪತ್ತೆಯಾಗಿವೆ.
ಕೊಡಗಿನಲ್ಲಿ ಕಾಫಿ ತೋಟಗಳಲ್ಲಿರುವ ಕಾಡಾನೆಗಳು ಸುಮಾರು 160 ಇರಬಹುದೆಂದು ಮೊದಲೇ ಅಂದಾಜಿಸಲಾಗಿದೆ. ಹೀಗಾಗಿ ಗಣತಿ ವೇಳೆ ಅರಣ್ಯಕ್ಕಿಂತಲೂ ತೋಟಗಳಲ್ಲಿ ಹೆಚ್ಚು ಕಾಡಾನೆಗಳು ಕಂಡು ಬಂದಿವೆ. ಇವುಗಳಲ್ಲಿ ಕೆಲವು ತೋಟಗಳಲ್ಲಿಯೇ ನೆಲೆಸಿದ್ದರೆ, ಕೆಲವು ಬಂದು ಮತ್ತೆ ಕಾಡಿಗೆ ಹಿಂದಿರುಗಿರುವ ಆನೆಗಳಿರುವ ಸಾಧ್ಯತೆಯಿದೆ.
-ಮನೋಜ್ ತ್ರಿಪಾಠಿ, ಅರಣ್ಯ ಸಂರಕ್ಷಣಾಧಿಕಾರಿ