ದ.ಕ. ಜಿಲ್ಲೆಯಲ್ಲಿ ಆಟಕ್ಕುಂಟು, ಲೆಕ್ಕಕ್ಕಿಲ್ಲದಂತಾದ ಆರ್ಟಿಇ ಕಾಯ್ದೆ
ಮಂಗಳೂರು, ಜು.೭: ದ.ಕ. ಜಿಲ್ಲೆಯಲ್ಲಿ ಶಿಕ್ಷಣ ಹಕ್ಕು (ಆರ್ಟಿಇ) ಕಾಯ್ದೆಯು ವಿದ್ಯಾರ್ಥಿಗಳ ಪಾಲಿಗೆ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದರೆ ಖಾಸಗಿ ಶಾಲೆಗಳ ‘ಹೆಚ್ಚುವರಿ ವೆಚ್ಚ’ ಭರಿಸಲು ಸಾಧ್ಯವಾಗದೆ ಹೆತ್ತವರು ಸೇರ್ಪಡೆಗೆ ಹಿಂದೇಟು ಹಾಕಿದ ಕಾರಣ ‘ಆರ್ಟಿಇ’ ಕಾಯ್ದೆಯು ಇದ್ದೂ ಇಲ್ಲದಂತಾಗಿದೆ.
೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ೭೫ ಅನುದಾನಿತ ಹಾಗೂ ೧೩ ಖಾಸಗಿ ಶಾಲೆಗಳ ಸಹಿತ ೮೮ ಶಾಲೆಗಳಲ್ಲಿ ೪೫೮ ಆರ್ಟಿಇ ಸೀಟ್ಗಳು ಲಭ್ಯವಿದ್ದವು. ಮೊದಲ ಸುತ್ತಿನಲ್ಲಿ ಲಾಟರಿ ಮೂಲಕ ೬೧ ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿತ್ತು. ಆದರೆ ಬಹುತೇಕ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಳ್ಳದ ಕಾರಣ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡಿದೆ.
ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯು ೨೦೦೯ರಲ್ಲಿ ಅನುಷ್ಠಾನಕ್ಕೆ ಬಂದಿತ್ತು. ಅಂದರೆ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಉಚಿತ ಪ್ರವೇಶ ಪಡೆಯಲು ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್ಟಿಇ) ಸರಕಾರ ಅವಕಾಶ ಕಲ್ಪಿಸುತ್ತಿದೆ. ಆರಂಭದ ದಿನಗಳಲ್ಲಿ ಪ್ರವೇಶ ಪಡೆಯಲು ತೀವ್ರ ಪೈಪೋಟಿ ಇತ್ತು. ೨೦೧೮ರವರೆಗೂ ಈ ಪೈಪೋಟಿ ಮುಂದುವರಿದಿತ್ತು.
೨೦೧೯ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. ಆ ಪ್ರಕಾರ ವಿದ್ಯಾರ್ಥಿ ವಾಸವಾಗಿರುವ ಪ್ರದೇಶದ ಒಂದು ಕಿ.ಮೀ. ಅಂತರದಲ್ಲಿ ಯಾವುದೇ ಸರಕಾರಿ ಹಾಗೂ ಅನುದಾನಿತ ಶಾಲೆ ಇದ್ದರೆ ಅಲ್ಲಿನ ಖಾಸಗಿ ಶಾಲೆಯಲ್ಲಿ ಆರ್ಟಿಇ ಕಾಯ್ದೆಯಡಿ ಪ್ರವೇಶಾತಿ ಇಲ್ಲ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ದಿಷ್ಟ ವಾರ್ಡ್ನಲ್ಲಿ ಸರಕಾರಿ ಹಾಗೂ ಅನುದಾನಿತ ಶಾಲೆ ಇಲ್ಲದಿದ್ದರೆ ಅಲ್ಲಿರುವ ಖಾಸಗಿ ಶಾಲೆಗೆ ಆರ್ಟಿಇ ಕಾಯ್ದೆಯಡಿ ವಿದ್ಯಾರ್ಥಿಯು ಪ್ರವೇಶ ಪಡೆಯಲು ಅವಕಾಶ ಇದೆ.
ಇಂಗ್ಲಿಷ್ ಮಾಧ್ಯಮ ಶಿಕ್ಷಣವು ಉಚಿತವಾಗಿ ದೊರೆಯುವ ಕಾರಣ ವಿದ್ಯಾರ್ಥಿಗಳ ಹೆತ್ತವರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಉತ್ಸಾಹ ತೋರುತ್ತಿದ್ದರು. ಈ ಕಾಯ್ದೆಯಡಿ ಖಾಸಗಿ ಶಾಲೆಗೆ ಸೇರುವ ಮಗುವಿಗೆ ಸರಕಾರ ಗರಿಷ್ಠ ೧೬ ಸಾವಿರ ರೂ. ಶುಲ್ಕ ಪಾವತಿಸುತ್ತದೆ. ಖಾಸಗಿ ಶಾಲೆಗಳಲ್ಲಿ ಬೋಧನಾ ಶುಲ್ಕವಲ್ಲದೆ ಇತರ ಶುಲ್ಕಗಳು ಕೂಡ ಇರುತ್ತವೆ. ಇದನ್ನು ಹೆತ್ತವರೇ ಭರಿಸಬೇಕು. ಆರ್ಥಿಕವಾಗಿ ಹಿಂದುಳಿದಿರುವ ಹೆತ್ತವರಿಗೆ ಇದು ಹೊರೆಯಾಗುವ ಕಾರಣ ಆರ್ಟಿಇ ಸೀಟು ಪಡೆಯಲು ಹಿಂದೇಟು ಹಾಕುವುದು ಕಂಡುಬಂದಿದೆ.
ಒಟ್ಟಿನಲ್ಲಿ ಆರ್ಟಿಇ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಮತ್ತು ಹೆತ್ತವರು ಅದರತ್ತ ಆಸಕ್ತಿ ವಹಿಸುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.