ಧರ್ಮದ ಆಧಾರದಲ್ಲಿ ಒಡೆಯುವ ಈ ರಾಜಕೀಯ ಎಲ್ಲಿಯವರೆಗೆ?
ಮೊನ್ನೆ ಉತ್ತರ ಪ್ರದೇಶದ ಮುಝಪ್ಫರ್ ನಗರ ಪೊಲೀಸರು ಒಂದು ಆದೇಶ ಹೊರಡಿಸಿದ್ದಾರೆ. ಮರುದಿನ ಅಲ್ಲಿನ ಮುಖ್ಯಮಂತ್ರಿಯೇ ಈ ಆದೇಶ ಕಡ್ಡಾಯವೆಂದಿದ್ದಾರೆ.
ಕನ್ವರ್ ಯಾತ್ರೆ ಮಾರ್ಗದಲ್ಲಿನ ತಿನಿಸಿನ ಅಂಗಡಿಗಳ ಮೇಲೆ ಮಾಲಕರು ತಮ್ಮ ಹೆಸರು ಬರೆಯಬೇಕೆಂದು ಈ ಆದೇಶದಲ್ಲಿ ಹೇಳಲಾಗಿದೆ. ಇದೊಂದು ಬಗೆಯಲ್ಲಿ, ಖರೀದಿಸುವ ಮೊದಲು ಹೆಸರು ನೋಡಿಕೊಳ್ಳಲು ಜನರಿಗೆ ಸಂದೇಶ ಹೋಗುವಂತೆಯೂ ಇದೆ.
ಹೆಸರು ನೋಡಿದ ಮೇಲೆ ಯಾರ ಬಳಿ ಖರೀದಿಸಬೇಕು, ಯಾರ ಬಳಿ ಬೇಡ ಎಂಬುದನ್ನು ನಿರ್ಧರಿಸಲಿ ಎಂಬ ಚಿತಾವಣೆಯೇ ಇಂತಹ ಆದೇಶದ ಹಿಂದೆ ಇದೆಯೆಂಬುದು ಸ್ಪಷ್ಟ.
ಬಡವರು ಹೇಗೋ ಒದ್ದಾಡುತ್ತ ಬದುಕು ಕಟ್ಟಿಕೊಳ್ಳುವಲ್ಲಿ ಇದು ಒಳ್ಳೆಯ ಕ್ರಮವಂತೂ ಅಲ್ಲ ಮತ್ತು ಈ ಆದೇಶವನ್ನು ಜಾರಿಯಲ್ಲಿ ತರುವ ರೀತಿಯೂ ಖಂಡಿತವಾಗಿ ಉತ್ತಮ ರೀತಿಯದ್ದಾಗಿರುವುದಿಲ್ಲ. ಇದರ ಹಿಂದೆ ರಾಜಕೀಯ ಇಲ್ಲ ಎಂದು ಹೇಳಲು ಹೇಗೆ ಸಾಧ್ಯ?
ಮತ್ತೆ ಮತ್ತೆ ಮುಸ್ಲಿಮ್ ಅಂಗಡಿಕಾರರನ್ನು ಟಾರ್ಗೆಟ್ ಮಾಡಲಾಗುತ್ತದೆ, ಬಹಿಷ್ಕರಿಸಲಾಗುತ್ತದೆ. ಅವರ ಬದುಕಿನ ದಾರಿಗೆ ಕಲ್ಲು ಹಾಕಲಾಗುತ್ತದೆ.
ಇದೇ ಮುಝಪ್ಫರ್ ನಗರ ಜಿಲ್ಲೆಗೆ ಸಂಬಂಧಿಸಿದಂತೆ ಒಂದು ಹಳೆಯ ವಿಚಾರವನ್ನು ನೆನಪಿಸಿಕೊಳ್ಳೋಣ.
ಅದು 1950ರ ಹೊತ್ತಿನ ಸಂಗತಿ. ಮುಝಪ್ಫರ್ ನಗರದ ಜಲಾಲಾಬಾದ್‌ನಲ್ಲಿ ಮುಹಮ್ಮದ್ ಯಾಸೀನ್ ಎಂಬವರು ತರಕಾರಿ ಮಾರುತ್ತಿದ್ದರು. 1950ರಲ್ಲಿ ಅವರು ಈ ವ್ಯಾಪಾರ ಮಾಡುವ ಹಕ್ಕು ಪಡೆಯಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು ಮತ್ತು ಅವರು ಆ ಪ್ರಕರಣವನ್ನು ಗೆದ್ದರು. ಬಹುಶಃ ಅದು ಸ್ವತಂತ್ರ ಭಾರತದ ಮೊದಲ ಗೆಲುವಿನ ಪ್ರಕರಣವಾಗಿತ್ತು.
ಅವರು ಆ ವಿಚಾರಕ್ಕಾಗಿ ಹೋರಾಡಿದ್ದು ತನಗೋಸ್ಕರ ಮಾತ್ರವಾಗಿರಲಿಲ್ಲ, ಬದಲು ಎಲ್ಲರಿಗಾಗಿ ಹೋರಾಡಿದ್ದರು.
2024ರ ಮುಝಪ್ಫರ್ ನಗರದ ಬಗ್ಗೆ ಮಾತಾಡಲು ಹೊರಡುವಾಗ 1950ರ ಮುಝಪ್ಫರ್ ನಗರದ ಈ ಕಥೆ ಮುಖ್ಯವಾಗುತ್ತದೆ.
‘ಎ ಪೀಪಲ್ಸ್ ಕಾನ್ಸ್ಟಿಟ್ಯೂಷನ್’ ಎಂಬ ರೋಹಿತ್ ಡೇ ಅವರ ಪುಸ್ತಕದಲ್ಲಿ ಉಲ್ಲೇಖವಾಗಿರುವ ಪ್ರಕಾರ ಬದುಕುವ ಹಕ್ಕಿನ ಕುರಿತ ಪ್ರಕರಣದ ಮೊದಲ ತೀರ್ಪು ಅದಾಗಿತ್ತು.
ಮುಹಮ್ಮದ್ ಯಾಸಿನ್ ಓದಿದವರಾಗಿರಲಿಲ್ಲ. ತರಕಾರಿ ಮಾರಿಯೇ ಅವರು 8 ಜನರಿರುವ ತಮ್ಮ ಕುಟುಂಬವನ್ನು ನೋಡಿಕೊಳ್ಳಬೇಕಿತ್ತು.
ಒಬ್ಬರಿಗೆ ಮಾತ್ರ ತರಕಾರಿ ಮಾರುವ ಲೈಸೆನ್ಸ್ ಅನ್ನು ನಗರಪಾಲಿಕೆ ಕೊಟ್ಟಿತ್ತು. ಹೀಗಾಗಿ ಅವರು ಕೋರ್ಟ್ ಮೊರೆಹೋಗಲು ನಿರ್ಧರಿಸಿದರು.
ಆಗಷ್ಟೇ ಸಂವಿಧಾನ ಬಂದಿತ್ತು. ಅದು ಕೊಟ್ಟಿರುವ ಹಕ್ಕುಗಳನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್ ಮುಂದೆ ತಮ್ಮ ಹಕ್ಕುಗಳಿಗಾಗಿ ಕೇಳಿದ್ದರು.
ಒಬ್ಬನಿಗೆ ಮಾತ್ರ ಲೈಸೆನ್ಸ್ ಕೊಟ್ಟು ಉಳಿದವರು ವ್ಯಾಪಾರ ಅಥವಾ ಮತ್ತೇನನ್ನೂ ಮಾಡದಂತೆ ತಡೆಯುವುದು ಸಂವಿಧಾನದ 32ನೇ ವಿಧಿ ಪ್ರಕಾರ ಅವರ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ ಎಂಬುದು ಅವರ ವಾದವಾಗಿತ್ತು.
ಅವತ್ತು ಮುಹಮ್ಮದ್ ಯಾಸೀನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೊಟ್ಟಿದ್ದ ತೀರ್ಪನ್ನು ಈಗ ಮುಝಪ್ಫರ್ ನಗರದಲ್ಲಿ ಅಂಗಡಿಗಳ ಮೇಲೆ ಹೆಸರು ಬರೆಯಲು ಆದೇಶ ಹೊರಡಿಸಿರುವ ಪೊಲೀಸರು ಓದಬೇಕಾಗಿದೆ. ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ಕೂಡ ಅದನ್ನು ಓದಬೇಕಾಗಿದೆ.
ಮುಹಮ್ಮದ್ ಯಾಸೀನ್ ಸಂವಿಧಾನದ 32ನೇ ವಿಧಿ ನೀಡಿರುವ ಹಕ್ಕನ್ನು ಬಳಸಿ ನ್ಯಾಯ ಪಡೆದುಕೊಂಡಿದ್ದರು. ಅದು ಯಾರೇ ಆಗಲಿ, ತಮ್ಮ ಹಕ್ಕನ್ನು ಸಂರಕ್ಷಿಸಿಕೊಳ್ಳಲು ಸೀದಾ ಸುಪ್ರೀಂ ಕೋರ್ಟ್ ಮೊರೆಹೋಗುವ ಅಧಿಕಾರವನ್ನು ಸಂವಿಧಾನ ನೀಡುತ್ತದೆ. ತನ್ನ ಹಕ್ಕಿನ ಉಲ್ಲಂಘನೆಯಾಗುತ್ತಿದೆ, ತನ್ನ ಮೇಲೆ ದಾಳಿಯಾಗುತ್ತಿದೆ ಎನ್ನುವಾಗ ಯಾರೇ ಆದರೂ ಅದರ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಬಹುದಾಗಿದೆ.
1952ರ ಫೆಬ್ರವರಿ 27ರಂದು ಸುಪ್ರೀಂ ಕೋರ್ಟ್‌ನ ನ್ಯಾ.ಎಂ. ಪತಂಜಲಿ ಶಾಸ್ತ್ರಿ, ನ್ಯಾ. ಮೆಹರ್‌ಚಂದ್ ಮಹಾಜನ್, ನ್ಯಾ.ಬಿ.ಕೆ. ಮುಖರ್ಜಿ ಹಾಗೂ ನ್ಯಾ.ಎನ್. ಚಂದ್ರಶೇಖರ್ ಅಯ್ಯರ್ ಅವರಿದ್ದ ಪೀಠ ಆ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿತ್ತು.
ಯಾವುದೇ ವ್ಯಾಪಾರ ಮಾಡಲು ಲೈಸೆನ್ಸ್‌ಗಾಗಿ ಶುಲ್ಕ ತೆಗೆದುಕೊಳ್ಳುವಂತಿಲ್ಲ. ಲೈಸೆನ್ಸ್ ಶುಲ್ಕ ಕೇಳುವುದು ವ್ಯಾಪಾರ ಮಾಡುವವರ ಹಕ್ಕನ್ನು ಕಸಿದುಕೊಳ್ಳುತ್ತದೆ. ಈ ಹಕ್ಕನ್ನು ಸಂವಿಧಾನದ ವಿಧಿ 19(1)(ಜಿ) ಪ್ರತಿಯೊಬ್ಬ ನಾಗರಿಕನಿಗೂ ನೀಡುತ್ತದೆ. ಲೈಸೆನ್ಸ್‌ಗೆ ಶುಲ್ಕ ವಿಧಿಸುವುದು ಆ ವಿಧಿಯ ಉಲ್ಲಂಘನೆಯಾಗುತ್ತದೆ.
ವ್ಯಾಪಾರ ಮಾಡಬಯಸುವ ಯಾರಿಗೇ ಆದರೂ ಲೈಸೆನ್ಸ್ ನೀಡಲು ಶುಲ್ಕ ವಿಧಿಸುವ ಅಧಿಕಾರ ನಗರಪಾಲಿಕೆಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿತ್ತು.
ಮುಹಮ್ಮದ್ ಯಾಸೀನ್ ಈ ಮೊಕದ್ದಮೆಯನ್ನು ಪ್ರತಿಯೊಬ್ಬ ವ್ಯಾಪಾರಿಗಾಗಿ, ಪ್ರತಿಯೊಬ್ಬ ಅಂಗಡಿಕಾರನಿಗಾಗಿ ಗೆದ್ದಿದ್ದರು.
ಹಾಗೆ, ಈ ದೇಶದಲ್ಲಿ ಜನಸಾಮಾನ್ಯನೊಬ್ಬ ಸಂವಿಧಾನ ಕೊಟ್ಟಿರುವ ಹಕ್ಕಿನ ಅನುಸಾರ ಸ್ವತಂತ್ರವಾಗಿ ವ್ಯಾಪಾರ ಮಾಡುವ ಹಕ್ಕಿಗಾಗಿ ಹೋರಾಡಿ ಗೆದ್ದಿದ್ದರು.
ಓದಲು ಬರೆಯಲು ಬಾರದ ಯಾಸೀನ್, ಇಂಗ್ಲಿಷ್‌ನಲ್ಲಿ ನಡೆಯುವ ವಕಾಲತ್ತಿಗಾಗಿ ವಕೀಲರೊಬ್ಬರನ್ನು ಹಿಡಿದು ನ್ಯಾಯದ ಆ ಹೋರಾಟಕ್ಕೆ ಮುಂದಾಗಿದ್ದರು. ನ್ಯಾಯದ ಬಗೆಗಿನ, ದೇಶದ ಸಂವಿಧಾನದ ಬಗೆಗಿನ ಅವರ ವಿಶ್ವಾಸ ಎಷ್ಟು ದೊಡ್ಡದಾಗಿತ್ತು ಎಂಬುದನ್ನು ಇದರಿಂದ ಗ್ರಹಿಸಬಹುದು.
ಆದರೆ ಅದೇ ಮುಝಪ್ಫರ್ ನಗರದಲ್ಲಿ ಇಂದು 62 ವರ್ಷಗಳ ಬಳಿಕ ಪ್ರತಿಯೊಬ್ಬ ಮುಸ್ಲಿಮ್ ವ್ಯಾಪಾರಿಯೂ ತಳ್ಳುಗಾಡಿಯ ಮೇಲಿನ ತನ್ನ ಸಣ್ಣ ಅಂಗಡಿಗೂ ತನ್ನ ಹೆಸರು ಬರೆಯಬೇಕಾಗಿದೆ. ಪೊಲೀಸರು ಹಾಗೆ ಆದೇಶ ಹೊರಡಿಸಿದ್ದಾರೆ. ಸಂತೆಯಲ್ಲಿಯೂ ಧರ್ಮದ ಆಧಾರದಲ್ಲಿ ಒಡೆಯುವ ಈ ರಾಜಕೀಯ ಎಂಥ ವಿಶ್ವಾಸಘಾತುಕ ನಡೆಯಲ್ಲವೆ? ಈ ಕ್ರಮ ಸ್ವತಂತ್ರವಾಗಿ ವ್ಯಾಪಾರ ಮಾಡಬಯಸುವವರೆಲ್ಲರ ಹಕ್ಕಿನ ವಿರುದ್ಧವಾದುದಾಗಿದೆ.
ಎಲ್ಲರೂ ಈಗ ಅಂಗಡಿಯ ಮೇಲೆ ತಮ್ಮ ಹೆಸರು ಬರೆಯಬೇಕಾಗಿದೆ. ಯಾಸೀನ್ ಅವರು ಸುಪ್ರೀಂ ಕೋರ್ಟ್‌ಗೆ ಹೋದಂತೆ ಹೋಗಲು ಈಗ ಸಾಧ್ಯವಿಲ್ಲವಾಗಿದೆ. ಅಂಥ ಎಲ್ಲ ದಾರಿಗಳನ್ನೂ ಮುಚ್ಚಲಾಗಿದೆ. ಮುಝಪ್ಫರ್ ನಗರ ಪೊಲೀಸರ ಆದೇಶವನ್ನು ವಿರೋಧಿಸುವ ಸಾಹಸವನ್ನು ಯಾರೂ ಮಾಡಲಾರರು.
1950ರ ಹೊತ್ತಿನಲ್ಲಿ ಯಾರ ಮನೆಯ ಮೇಲೂ ಬುಲ್ಡೋಜರ್ ಹರಿಸಿ ನೆಲಸಮ ಮಾಡಲಾಗುತ್ತಿರಲಿಲ್ಲ. ಅವತ್ತಿನ ದಿನಗಳು, ಯಾಸೀನ್ ಎಂಬ, ಓದು ಬರಹ ಬಾರದ ಸಾಮಾನ್ಯ ತರಕಾರಿ ವ್ಯಾಪಾರಿ ಸುಪ್ರೀಂ ಕೋರ್ಟ್ ವರೆಗೂ ಹೋಗಿ ಕೇಸು ಗೆದ್ದು ಬರುವುದು ಸಾಧ್ಯವಾಗುವ ಮಟ್ಟಿಗೆ ಸುಂದರವಾಗಿದ್ದವು. ರಸ್ತೆಬದಿಯ ಅಂಗಡಿಕಾರರಿಂದ ಲೈಸೆನ್ಸ್‌ಗಾಗಿ ಶುಲ್ಕ ವಸೂಲಿ ಮಾಡುವ ಅಧಿಕಾರ ಯಾರಿಗೂ ಇರಲಿಲ್ಲ.
ರೋಹಿತ್ ಡೇ ಆ ಪ್ರಕರಣದ ಬಗ್ಗೆ ತಮ್ಮ ಪುಸ್ತಕದಲ್ಲಿ ವಿವರವಾಗಿಯೇ ಉಲ್ಲೇಖಿಸಿದ್ದಾರೆ.
ಆ ಪ್ರಕರಣ ಗೆದ್ದ ಬಳಿಕ ಯಾಸೀನ್ ಡೋಲು ಬಾರಿಸುವ ತನ್ನ ದಲಿತ ಗೆಳೆಯನ ಮೂಲಕ ಆ ವಿಚಾರವನ್ನು ಎಲ್ಲರಿಗೂ ಮುಟ್ಟಿಸಿದ್ದರು.
ಜನರು ಮತ್ತು ನಗರ ಪಾಲಿಕೆ ನಡುವೆ ನಡೆದ ಮೊಕದ್ದಮೆಯಲ್ಲಿ ಜನತೆ ಗೆದ್ದಿದೆ, ನಗರಪಾಲಿಕೆ ಸೋತಿದೆ ಎಂಬ ವಿಚಾರ ಹಾಗೆ ಹಬ್ಬಿತ್ತು.
ಆದರೆ ಅಂತಹ ಮುಝಪ್ಫರ್ ನಗರದಲ್ಲಿ ಇಂದು ಯಾಸೀನ್‌ರಂತಹವರು ಏಕಾಂಗಿಯಾಗಿದ್ದಾರೆ ಮತ್ತು ಅವರಂತಹರೆಲ್ಲರ ಹಕ್ಕುಗಳನ್ನು ಕಸಿಯಲಾಗಿದೆ. ವ್ಯಾಪಾರಸ್ಥರ ಮೇಲೆ, ಅಂಗಡಿಕಾರರ ಮೇಲೆ ದಾಳಿಗಳು ನಡೆದಿವೆ. ಅಕ್ಬರ್ ನಗರದಲ್ಲಿ ನಡೆದ ಕಾರ್ಯಾಚರಣೆ, ಮರುದಿನ ಪಂತ್ ನಗರದಲ್ಲೂ ನಡೆಯುತ್ತದೆ.
ಹಾಗೇ, ಇಂತಹ ದಾಳಿ ಯಾಸೀನ್ ಮೇಲೆ ನಡೆದರೆ, ನಾಳೆ ಅದು ಗೋಪಾಲ್ ಮೇಲೆಯೂ ಸುರೇಶ್ ಮೇಲೆಯೂ ನಡೆಯುವುದಿಲ್ಲವೆ?
ಮುಝಪ್ಫರ್ ನಗರ ಪೊಲೀಸರು ಯಾವುದೇ ಗೊಂದಲ ತಪ್ಪಿಸಲು ಈ ಕ್ರಮ ಎಂದಿದ್ದಾರೆ. ಆದರೆ ಇದು ಮುಸ್ಲಿಮ್ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡಿರುವ ಕ್ರಮವೆಂದು ವಿಪಕ್ಷಗಳು ಟೀಕಿಸಿವೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಇದನ್ನು ಖಂಡಿಸಿದ್ದಾರೆ.
ಕನ್ವರ್ ಯಾತ್ರಾ ಮಾರ್ಗದಲ್ಲಿರುವ ತಿನಿಸಿನ ಅಂಗಡಿಗಳ ಮಾಲಕರು ತಮ್ಮ ಹೆಸರನ್ನು ಬರೆಸಬೇಕೆಂಬ ಮುಝಪ್ಫರ್ ನಗರ ಪೊಲೀಸರ ಆದೇಶ ಸಾಮಾಜಿಕ ಅಪರಾಧ ಎಂದು ಅಖಿಲೇಶ್ ಹೇಳಿದ್ದಾರೆ.
ಈ ವಿಷಯವನ್ನು ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು.
ಮತ್ತು ಸರಕಾರದ ಉದ್ದೇಶಗಳನ್ನು ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅಖಿಲೇಶ್, ಮಾಲಕರ ಹೆಸರು ಗುಡ್ಡು, ಮುನ್ನಾ, ಛೋಟು ಅಥವಾ ಫಟ್ಟೆ ಆಗಿದ್ದರೆ ಏನು? ಈ ಹೆಸರುಗಳಿಂದ ನೀವು ಏನು ಕಂಡುಹಿಡಿಯಬಹುದು? ಎಂದು ಪ್ರಶ್ನಿಸಿದ್ದಾರೆ.
ಶಾಂತಿಯುತ ವಾತಾವರಣ ಮತ್ತು ಸೌಹಾರ್ದವನ್ನು ಹಾಳು ಮಾಡುವ ಉದ್ದೇಶದಿಂದ ಹೊರಡಿಸಲಾದ ಇಂತಹ ಆದೇಶ ಸಾಮಾಜಿಕ ಅಪರಾಧವಾಗಿದೆ ಎಂದು ಅಖಿಲೇಶ್ ಹೇಳಿದ್ದಾರೆ.
ಎಲ್ಲರಿಗೂ ಅವರವರದೇ ಹೆಸರು ಇಡುವ ಸ್ವಾತಂತ್ರ್ಯ ಇರುತ್ತದೆ. ಆ ಹೆಸರಿನಿಂದ ಯಾವುದಕ್ಕೂ ಧಕ್ಕೆಯಾಗುವುದಿಲ್ಲ. ಆದರೆ ಮಾಲಕರ ಹೆಸರು ಬರೆಯಲು ಹೇಳುವುದರ ಹಿಂದಿನ ಉದ್ದೇಶವೇನು?
ವಿಪ್ರೋ ಕಂಪೆನಿಗೆ ಆ ಹೆಸರು ತೆಗೆದು ಮಾಲಕರ ಹೆಸರು ಇಡುವಂತೆ ಹೇಳಲು ಸಾಧ್ಯವೇ?
ಯಾಕೆ ಪೊಲೀಸರು ಕಾನೂನು ಸುವ್ಯವಸ್ಥೆ ಹೆಸರಿನಲ್ಲಿ ವಾತಾವರಣವನ್ನೇ ಹದಗೆಡಿಸುವ ಇಂತಹ ಕ್ರಮಕ್ಕೆ ಮುಂದಾಗುತ್ತಾರೆ?
ಧರ್ಮದ ಹೆಸರಿನಲ್ಲಿ ಇಂದು ಆಡುತ್ತಿರುವ ಆಟವನ್ನೇ ನಾಳೆ ಜಾತಿಯ ಹೆಸರಿನಲ್ಲೂ ಆಡುತ್ತಾರೆ. ಭೇದವನ್ನು, ದ್ವೇಷವನ್ನು ಹರಡುವ ಕೆಲಸವೊಂದು ನಡೆದೇ ಇರುತ್ತದೆ.
ರಾಜಕೀಯ ಆಡುವುದಕ್ಕೆ ಸುತ್ತುಬಳಸಿ ಮತ್ತೆ ಧರ್ಮದ ವಿಚಾರಕ್ಕೇ ಬರುವುದು ಚಾಳಿಯೇ ಆಗಿಬಿಟ್ಟಿದೆ.
ಮುಝಪ್ಫರ್ ನಗರ ಪೊಲೀಸ್ ಮುಖ್ಯಸ್ಥ ಅಭಿಷೇಕ್ ಸಿಂಗ್, ಜಿಲ್ಲೆಯಲ್ಲಿ ಸುಮಾರು 240 ಕಿ.ಮೀ. ಕನ್ವರ್ ಯಾತ್ರೆ ಮಾರ್ಗ ಬರುತ್ತದೆ. ಹೋಟೆಲ್‌ಗಳು, ಢಾಬಾಗಳು ಮತ್ತು ತಳ್ಳುಗಾಡಿಗಳು ಸೇರಿದಂತೆ ಎಲ್ಲಾ ತಿನಿಸಿನ ಅಂಗಡಿಕಾರರು ಅವುಗಳ ಮಾಲಕರು ಅಥವಾ ಕೆಲಸ ಮಾಡುವವರ ಹೆಸರನ್ನು ಪ್ರದರ್ಶಿಸಲು ಹೇಳಲಾಗಿದೆ. ಯಾವುದೇ ಗೊಂದಲವಾಗದಂತೆ ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ತಿನಿಸುಗಳನ್ನು ಯಾವುದೇ ಸಮುದಾಯದವರು ತಯಾರಿಸುತ್ತಾರೆ ಮತ್ತು ಮಾರುತ್ತಾರೆ. ಅದರಲ್ಲಿ ಗೊಂದಲವಾಗುವುದೇನಿದೆ?
ಜನರಲ್ಲಿಯೇ ಇರದ ಗೊಂದಲವನ್ನು ಈಗ ಪೊಲೀಸರ ಮೂಲಕ ಅವರಲ್ಲಿ ತುಂಬುವ, ಭೇದವೆಣಿಸುವ ಹಾಗೆ ಮಾಡುವ ಈ ರಾಜಕೀಯ ಎಷ್ಟು ನಿಕೃಷ್ಟವಾದುದು?
ಹಿಂದೂ ಮುಸ್ಲಿಮರಿಬ್ಬರೂ ಕೋಲ್ಕತಾದಲ್ಲಿ ಪೂಜಾ ತಯಾರಿಯಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿಯೇ ಎಲ್ಲವನ್ನೂ ನಿರ್ವಹಿಸುತ್ತಾರೆ.
ಅಲ್ಲಿ ಅವರೆಂದೂ ಭೇದ ಎಣಿಸುವುದಿಲ್ಲ. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಕೆಲಸ ಮಾಡಲಾರರು. ಪೂಜೆಯ ಪವಿತ್ರತೆಗೆ ಭಂಗ ಎಂಬ ಮಾತೆಲ್ಲ ಅಲ್ಲಿ ಬರುವುದೇ ಇಲ್ಲ.
ಮಾವಿನ ಹಣ್ಣಿನ ವ್ಯಾಪಾರಿಯೊಬ್ಬನನ್ನು ನೀನು ಹಿಂದುವೋ ಮುಸಲ್ಮಾನನೋ ಎಂದು ಕೇಳುವ ಮಟ್ಟಕ್ಕೆ ಇಳಿಯುತ್ತೀರೆಂದರೆ ಅದರ ಅರ್ಥವೇನು? ಉದ್ದೇಶವೇನು? ಆ ಮಾವಿನ ಹಣ್ಣಿನ ಗಿಡ ನೆಟ್ಟವನು ಯಾರು, ಕಾವಲುಗಾರ ಯಾರು, ಆ ಹಣ್ಣು ಬೆಳೆದ ಜಮೀನಿನ ಮಾಲಕ ಯಾರು, ಹಣ್ಣನ್ನು ಗಿಡದಿಂದ ತೆಗೆದವನು ಯಾರು, ಹಣ್ಣನ್ನು ಮುಝಪ್ಫರ್ ನಗರಕ್ಕೆ ಸಾಗಿಸಿದವನು ಯಾರು, ಆ ಲಾರಿಯ ಮಾಲಕ ಯಾರು ಹಿಂದುವೋ ಮುಸಲ್ಮಾನನೋ ಎಂದು ಪ್ರಶ್ನಿಸಲಾಗುತ್ತದೆಯೆ? ದ್ವೇಷ ಸಾಧಿಸುವುದಕ್ಕೆ ಏನೇನೆಲ್ಲ ಬೇಕು ಇಂತಹವರಿಗೆ.
ಕೋವಿಡ್ ಸಮಯದಲ್ಲಿಯೂ ಮುಸ್ಲಿಮ್ ವ್ಯಾಪಾರಿಗಳಿಂದ ಏನನ್ನೂ ಖರೀದಿಸಬಾರದು ಎಂಬ ಗದ್ದಲವೊಂದು ಶುರುವಾಗಿತ್ತು. ಅಂದರೆ ಒಂದಿಡೀ ಸಮುದಾಯವನ್ನು ಅದೆಂಥ ಅಸುರಕ್ಷತೆಗೆ ತಳ್ಳಬಲ್ಲರಲ್ಲವೆ ಇವರು?
ಯಾವುದೋ ಹಬ್ಬ ಬಂತೆಂದರೆ ಅಲ್ಲಿ ಮಾಂಸದಂಗಡಿ ಬಂದ್ ಮಾಡಬೇಕು, ಅದೂ ಒಂದೆರಡು ದಿನಗಳ ಪ್ರಶ್ನೆಯಲ್ಲ. ಒಂದಿಡೀ ತಿಂಗಳು. ಬದುಕುವ ಹಕ್ಕನ್ನೇ ಹೇಗೆಲ್ಲ ಕಸಿದುಕೊಳ್ಳಲಾಗುತ್ತದೆಯಲ್ಲವೆ?
ಇದು ಸ್ಪಷ್ಟವಾಗಿ ಆರ್ಥಿಕ ಬಹಿಷ್ಕಾರವೇ ಆಗಿದೆ. ಆಹಾರದ ಹೆಸರಿನಲ್ಲಿ ಒಂದು ಸಮುದಾಯದ ಬಗ್ಗೆಯೇ ತಾರತಮ್ಯ ತೋರುವ ನಡೆ ಇದು. ಬಡ ಅಂಗಡಿಕಾರರ ಸಣ್ಣ ಆದಾಯಕ್ಕೂ ಕಲ್ಲು ಹಾಕುವ ಕ್ರೌರ್ಯ ಇದು. ಬದುಕುವ ಹಕ್ಕನ್ನು ಧರ್ಮದ ಆಧಾರದಲ್ಲಿ ಕಸಿಯುವ ನೀಚತನ ಇದು. ಮತ್ತಿದನ್ನು ಸರಕಾರ ಆದೇಶದ ಮೂಲಕ ಅಧಿಕೃತವಾಗಿಯೇ, ರಾಜಾರೋಷವಾಗಿಯೇ ಮಾಡಲಾಗುತ್ತಿದೆ.
ಕಾಂಗ್ರೆಸ್ ವಕ್ತಾರ ಪವನ್ ಖೇಡಾ ಹೇಳುತ್ತಿರುವಂತೆ, ಮುಸ್ಲಿಮರ ವಿರುದ್ಧದ ಆರ್ಥಿಕ ಬಹಿಷ್ಕಾರವನ್ನು ಸಾಮಾನ್ಯವೆಂಬಂತೆ ಮಾಡುವ ನಡೆ ಇದಾಗಿದೆ.
ದೊಡ್ಡ ದೊಡ್ಡ ಮಾಂಸ ರಫ್ತುದಾರರಿದ್ದಾರೆ. ಅಲ್ ಕಬೀರ್-ಇದರ ಮಾಲಕ ಸಬರ್ವಾಲ್. ಅರೇಬಿಯನ್ ಎಕ್ಸ್‌ಪೋರ್ಟ್ಸ್‌ನ ಮಾಲಕ ಕಪೂರ್. ಎಂ.ಕೆ.ಆರ್. ಫ್ರೋಝನ್‌ನ ಮಾಲಕ ಮದನ ಯೆಬತ್ ಎಂಬುದರ ಬಗ್ಗೆಯೂ ಖೇಡಾ ಗಮನ ಸೆಳೆಯುತ್ತಾರೆ.
ದುರ್ಗಾ ಪೂಜೆ, ಜಗನ್ನಾಥ ರಥಯಾತ್ರೆ ಎಲ್ಲದರಲ್ಲೂ ಎರಡೂ ಸಮುದಾಯದವರು ಜೊತೆ ಸೇರಿಯೇ ಕೆಲಸ ಮಾಡುತ್ತಾರೆ. ಹೀಗಿರುವಾಗ ಇದು ಯಾರ ಅಂಗಡಿ, ಯಾರಿಂದ ಖರೀದಿಸಬೇಕು ಇಂಥವೆಲ್ಲವನ್ನೂ ಹುಟ್ಟುಹಾಕುವುದೇಕೆ ಎಂಬುದು ಅವರ ಪ್ರಶ್ನೆ.
ಆದರೆ ಇಷ್ಟೆಲ್ಲ ವಿರೋಧ ಬಂದರೂ ಲೆಕ್ಕಿಸದ ಮುಖ್ಯಮಂತ್ರಿ ಆದೇಶ ಪಾಲಿಸಲೇಬೇಕು ಎಂದಿದ್ದಾರೆ.
ಈ ಹೊಸ ಭಾರತದಲ್ಲಿ ಆಳುವವರಿಗೆ, ರಸ್ತೆಬದಿಯ ಅಂಗಡಿಯ ಮಾಲಕ ಮುಸ್ಲಿಮನೊ ಹಿಂದೂವೋ ಎಂಬುದು ಮುಖ್ಯವಾಗುತ್ತಿದೆ ಎಂದರೆ, ಇವರು ಬೇರೇನನ್ನೂ ಮಾಡಲು ತಯಾರಿಲ್ಲ, ಇದರಲ್ಲಿಯೇ ಇನ್ನಷ್ಟು ಕಾಲ ಕಳೆದುಬಿಡಲಿದ್ದಾರೆ ಎಂಬುದಂತೂ ಸ್ಪಷ್ಟ.