ಸೀನ್ ನದಿಯ ತಟದಲ್ಲಿ ಹೊಸ ನಿರೀಕ್ಷೆ ಹೊತ್ತ ಭಾರತೀಯರು
ನೂರು ವರ್ಷಗಳ ಬಳಿಕ ಪ್ಯಾರಿಸ್ ನಗರದಲ್ಲಿ ಮತ್ತೊಮ್ಮೆ ಒಲಿಂಪಿಕ್ಸ್ ಸಡಗರ. ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಪ್ಯಾರಿಸ್‌ನ ಸೀನ್ ನದಿ ಸಾಕ್ಷಿಯಾಗಿದೆ. ಸಾವಿರಾರು ವರ್ಷಗಳಿಂದ ಹರಿಯುತ್ತಿರುವ ನದಿಯನ್ನು ಈಗ ವಿಶ್ವಕ್ಕೇ ತೋರಿಸಲು ಪ್ಯಾರಿಸ್ ಶುಚಿಗೊಳಿಸಿದೆ. ಅದಕ್ಕಾಗಿ ಸೀನ್ ನದಿಯನ್ನು ಸ್ವಚ್ಛಗೊಳಿಸಲಾಗಿದೆ.
ಭಾರತದಲ್ಲಿ ಗಂಗಾ ಮತ್ತು ಯಮುನಾ ನದಿಯನ್ನು ಕಳೆದೊಂದು ದಶಕದಲ್ಲಿ ಸ್ವಚ್ಛಗೊಳಿಸಲು ಆಗದವರಿಗೆ, ಪ್ಯಾರಿಸ್ ನಗರಿ ಸೀನ್ ನದಿಯನ್ನು ಸ್ವಚ್ಛಗೊಳಿಸಿರುವ ರೀತಿ ಒಂದು ಪಾಠವಾಗಬಹುದು. 206 ದೇಶಗಳ 10,000 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ವಿಶೇಷವೆಂದರೆ ಅವರಲ್ಲಿ 8 ಕ್ರೀಡಾಪಟುಗಳು ಯುದ್ಧಪೀಡಿತ ಫೆಲೆಸ್ತೀನಿಯರಾಗಿದ್ಧಾರೆ.
ಒಲಿಂಪಿಕ್ಸ್‌ನ ಘೋಷವಾಕ್ಯ ಲ್ಯಾಟಿನ್ ಪದಗಳಲ್ಲಿ ‘ಸಿಟಿಯಸ್-ಆಲ್ಟಿಯಸ್-ಫೋರ್ಟಿಯಸ್’. ಸರ್ವಶ್ರೇಷ್ಠ ಎಂದು ಇವನ್ನು ಒಟ್ಟಾರೆಯಾಗಿ ಅರ್ಥೈಸಲಾಗುತ್ತದೆ. ಈ ಬಾರಿ, ಗಾಝಾದಲ್ಲಿ ನರಹತ್ಯೆಯಾಗುತ್ತಿರುವುದರ, ರಶ್ಯ-ಉಕ್ರೇನ್ ಯುದ್ಧ ಮುಂದುವರಿದಿರುವುದರ ನಡುವೆಯೇ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ಸಂಭ್ರಮವೂ ತೆರೆದುಕೊಂಡಿದೆ.
ಫ್ರಾನ್ಸ್ ಚುನಾವಣೆಯಲ್ಲಿ ಈ ಬಾರಿ ಅತಿ ದೊಡ್ಡ ಪಕ್ಷವಾಗಿ ಹೊಮ್ಮಿದ ನ್ಯೂ ಪಾಪ್ಯುಲರ್ ಫ್ರಂಟ್, ಗಾಝಾ ಮೇಲಿನ ದಾಳಿಯನ್ನು ವಿರೋಧಿಸುವ ಪಕ್ಷವಾಗಿದೆ. ಇಸ್ರೇಲ್ ಆಟಗಾರರ ವಿರುದ್ಧ ಪ್ರದರ್ಶನ ನಡೆಸಲಾಗುವುದು ಎಂದೂ ಎಡಪಕ್ಷಗಳ ನಾಯಕರು ಹೇಳಿದ್ದಾರೆ. ಫೆಲೆಸ್ತೀನ್‌ನ ಪ್ರಸಕ್ತ ಸನ್ನಿವೇಶದಲ್ಲಂತೂ ಫೆಲೆಸ್ತೀನ್ ಆಟಗಾರರು ಒಲಿಂಪಿಕ್ಸ್ ಭಾಗವಾಗುತ್ತಿರುವುದೇ ಅವರ ಬಹುದೊಡ್ಡ ಗೆಲುವಾಗಿದೆ. ಬಾಕ್ಸಿಂಗ್, ಜೂಡೋ, ಟೈಕ್ವೊಂಡೊ, ಶೂಟಿಂಗ್ ಮತ್ತು ಈಜಿನಲ್ಲಿ ಫೆಲೆಸ್ತೀನ್ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಪದಕ ಸಿಗುತ್ತದೋ ಇಲ್ಲವೋ, ಆದರೆ ತಾವು ಗೆದ್ದಾಗಿದೆ ಎಂಬುದು ಆ ಕ್ರೀಡಾಪಟುಗಳ ಸಡಗರ.
ಸಾವಿರಾರು ಮಕ್ಕಳು ಬಲಿಯಾಗಿರುವ, ಕುಟುಂಬಕ್ಕೆ ಕುಟುಂಬಗಳೇ ಇಲ್ಲವಾಗಿರುವ, ಕುಡಿಯಲು ನೀರೂ ಇಲ್ಲದ ಸ್ಥಿತಿಯಿರುವ, ಹಸಿವು ಕೊಲ್ಲುತ್ತಿರುವ, ಔಷಧಗಳೂ ಸಿಗದಂತಾಗಿರುವ ದೇಶದ 8 ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಅವರಿಗೆ ಇದಕ್ಕಿಂತ ದೊಡ್ಡದು ಬೇರೇನೂ ಇರಲಾರದು. ಆ ಕ್ರೀಡಾಪಟುಗಳ ಕಣ್ಣೆದುರು ಪದಕಗಳಿಗಿಂತಲೂ ಅವರ ಮಕ್ಕಳ ತಸ್ವೀರುಗಳೇ ಕಾಣುವಂಥ ಮನಕಲಕುವ ಸಂದರ್ಭವೂ ಇದಾಗಿದೆ.
ಇಸ್ರೇಲ್ ದಾಳಿಯ ನಂತರ 400ಕ್ಕೂ ಹೆಚ್ಚು ಆಟಗಾರರು ಮತ್ತು ಕ್ರೀಡಾ ಕ್ಷೇತ್ರದಲ್ಲಿರುವ ಕೆಲಸಗಾರರು ಕಾಣೆಯಾಗಿದ್ದಾರೆ ಅಥವಾ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್ ಒಲಿಂಪಿಕ್ಸ್ ಸಮಿತಿ ಹೇಳಿದೆ.
ಪ್ಯಾರಿಸ್ ಒಲಿಂಪಿಕ್ಸ್‌ಗೆ ರಾಜಕೀಯ ಕೂಡ ಅಂಟಿಕೊಳ್ಳುತ್ತಿದೆ. ಅಂತರ್‌ರಾಷ್ಟ್ರೀಯ ಕ್ರೂರ ವಾಸ್ತವದ ರೀತಿಯಲ್ಲಿಯೂ ಈ ಸಲದ ಒಲಿಂಪಿಕ್ಸ್ ಕಾಣಿಸುತ್ತಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ರಶ್ಯ ಆಟಗಾರರು ಇರುವುದಿಲ್ಲ. ಅವರನ್ನು ಬಹಿಷ್ಕರಿಸಲಾಗಿದೆ. ಯಾಕೆಂದರೆ ರಶ್ಯ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ.ಆದರೆ ಇಸ್ರೇಲ್ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. 2020ರ ವಿಂಬಲ್ಡನ್‌ನಲ್ಲಿ ರಶ್ಯ ಆಟಗಾರರಿಗೆ ಪ್ರತಿಬಂಧವಿತ್ತು.
ಆದರೆ 2023ರ ವಿಂಬಲ್ಡನ್‌ನಲ್ಲಿ ಆಡಲು ಅವಕಾಶ ಕೊಡಲಾಯಿತು. ಆಗಲೂ ರಶ್ಯ-ಉಕ್ರೇನ್ ಯುದ್ಧ ನಡೆದೇ ಇತ್ತು. ಆದರೆ ವಿಂಬಲ್ಡನ್ ನಿಷೇಧವನ್ನು ತೆಗೆದುಹಾಕುವಂಥದ್ದು ಏನಾಯಿತು? ಯುರೋಪಿಯನ್ ದೇಶಗಳು ಆತ್ಮಾವಲೋಕನ ಮಾಡಿಕೊಳ್ಳಲೇಬೇಕಿದೆ.
ಈ ಒಲಿಂಪಿಕ್ಸ್‌ನಲ್ಲಿ ಕುದುರೆ ಸವಾರಿಯಲ್ಲಿ ಸ್ಪರ್ಧಿಸಲು ಅತ್ಯಂತ ಹಿರಿಯ ಆಟಗಾರ್ತಿಯೊಬ್ಬರಿದ್ದಾರೆ. ಅವರಿಗೆ ಇದು ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಸ್ಪರ್ಧೆ. ಆಕೆ 61 ವರ್ಷದ ಕೆನಡಾದ ಜಿಲ್ ಇರ್ವಿಂಗ್. ಈ ಒಲಿಂಪಿಕ್ಸ್‌ನಲ್ಲಿ ಆಡುತ್ತಿರುವ ಅತಿ ಕಿರಿಯ ವಯಸ್ಸಿನ ಕ್ರೀಡಾಪಟು ಚೀನಾದ 11 ವರ್ಷದ ಝೆಂಗ್ ಹಾವ್ಹಾವ್ ಎಂಬ ಬಾಲಕಿ.
ಇನ್ನು ಸೀನ್ ನದಿಯ ವಿಚಾರಕ್ಕೆ ಬರುವುದಾದರೆ, ನದಿಗೆ ಚರಂಡಿ ನೀರು ಸೇರಿಕೊಳ್ಳುತ್ತ ನದಿ ಹಾನಿಕಾರಕವಾಗಿ ಪರಿಣಮಿಸಿತ್ತು. ನದಿಯನ್ನು ಸ್ವಚ್ಛಗೊಳಿಸಲು ಕಳೆದ ಕೆಲವು ವರ್ಷಗಳಲ್ಲಿ ಫ್ರಾನ್ಸ್ 1.4 ಬಿಲಿಯನ್ ಯೂರೊ ವೆಚ್ಚ ಮಾಡಿದೆ. ರೂಪಾಯಿಗಳ ಲೆಕ್ಕದಲ್ಲಿ ಅದು ರೂ. 12,500 ಕೋಟಿಗಿಂತಲೂ ಹೆಚ್ಚು. ನಗರದ ನಡುವೆ ಟ್ಯಾಂಕ್, ದೊಡ್ಡ ದೊಡ್ಡ ಪಂಪಿಂಗ್ ವ್ಯವಸ್ಥೆ ಇವೆಲ್ಲದರ ಮೂಲಕ, ನದಿಯ ನೀರು ಮಲಿನವಾಗದಂತೆ ಮಾಡಲಾಗಿದೆ. ನಾಲ್ಕೂ ದಿಕ್ಕಿನ ಚರಂಡಿ ನೀರು ಶುದ್ಧಗೊಳಿಸಲು ಸಂಸ್ಕರಣಾ ವ್ಯವಸ್ಥೆ ಅಳವಡಿಸಲಾಗಿದೆ. ಸುತ್ತಲ ಮನೆಗಳ ನಲ್ಲಿ ನೀರು ಕೂಡ ನದಿ ಸೇರದಂತೆ ವ್ಯವಸ್ಥೆ ರೂಪಿಸಲಾಗಿದೆ. ಯಾವ ಭರವಸೆಯನ್ನು ನೀಡಲಾಗಿತ್ತೋ ಅದನ್ನು ಪೂರೈಸಲಾಗಿದೆ. ಸೀನ್ ನದಿ ಶುಚಿಗೊಂಡಿದೆ.
ಜನರಿಗೂ ಅದನ್ನು ತೋರಿಸಲೆಂದೇ ಕಳೆದ ವಾರ ಮೇಯರ್ ಖುದ್ದು ನದಿಗಿಳಿದು ಈಜಾಡಿ, ವೀಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘‘ಅನೇಕರು ಈ ನದಿಯಲ್ಲಿ ಈಜುವ ಕನಸು ಕಂಡಿದ್ದರು. ಆದರೆ ಕೆಲವರು ಅದು ಆಗಿಹೋಗದ ಮಾತು ಎಂದಿದ್ದರು. ನಾವದನ್ನು ಸಾಧ್ಯಗೊಳಿಸಿದ್ದೇವೆ’’ ಎಂದು ಮೇಯರ್ ಇನ್‌ಸ್ಟಾ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಜನಸಾಮಾನ್ಯರಿಗೂ ಇದು ಮುಕ್ತವಾಗಲಿದೆ ಎಂದು ಅವರು ಹೇಳಿದ್ದಾರೆ.
ಮೋದಿ ಕಿ ಗ್ಯಾರಂಟಿಗಳ ದೇಶದಲ್ಲಿ ಗ್ಯಾರಂಟಿಗಳೆಲ್ಲವೂ ಮಾತಿನಲ್ಲಿಯೇ ಉಳಿಯುತ್ತವೆ, ಜಾರಿಗೆ ಬರುವುದೇ ಇಲ್ಲ. ಆದರೆ ಪ್ಯಾರಿಸ್ ಮೇಯರ್ ನದಿ ಶುಚಿಗೊಳಿಸುವ ಗ್ಯಾರಂಟಿ ಕೊಟ್ಟಿದ್ದರು, ಮತ್ತದನ್ನು ಪೂರ್ಣಗೊಳಿಸಿದ್ದಾರೆ.ಅಂದಹಾಗೆ ಗಮನಿಸಬೇಕು.ನದಿ ಶುಚಿಗೊಳಿಸುವ ಗ್ಯಾರಂಟಿಯನ್ನು ಮೇಯರ್ ನೀಡಿದ್ದರೇ ಹೊರತು ಫ್ರಾನ್ಸ್ ಅಧ್ಯಕ್ಷರಲ್ಲ. ಇಲ್ಲಿಯೂ ನಮ್ಮವರು ಕಲಿಯುವುದಕ್ಕೆ ಪಾಠವಿದೆ.
ಇಲ್ಲಿ ಪ್ರತಿಯೊಂದನ್ನೂ ಮೋದಿ ಕಿ ಗ್ಯಾರಂಟಿಗಾಗಿ ರಿಸರ್ವ್ ಮಾಡಲಾಗುತ್ತದೆ. ಎಷ್ಟೊ ಜನರಿಗೆ ತಮ್ಮದೇ ನಗರದ ಮೇಯರ್ ಹೆಸರು ಕೂಡ ಗೊತ್ತಿರದ ಸನ್ನಿವೇಶವಿದೆ.
ಫ್ರಾನ್ಸ್ ಈಗ ಒಲಿಂಪಿಕ್ಸ್ ಆತಿಥ್ಯ ವಹಿಸುವುದರ ಜೊತೆಗೇ ಸೀನ್ ನದಿಯನ್ನು ಶುಚಿಗೊಳಿಸಿ ಜಗತ್ತಿನೆದುರು ಕಾಣಿಸುತ್ತಿದೆ. ನೂರು ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ನದಿಯ ಮೇಲೆ ಇಂಥದೊಂದು ಕ್ರೀಡಾ ಸಂಭ್ರಮ ತೆರೆದುಕೊಂಡಿದೆ. ಕೊಳಕಾಗಿ ಹೋಗಿದ್ದ ನದಿಯನ್ನು ಹೀಗೆ ಹೊಳೆಹೊಳೆಯುವಂತೆ ಮಾಡಿರುವುದು ಸಣ್ಣ ಸಂಗತಿಯಲ್ಲ. ಈ ನದಿ ಪ್ಯಾರಿಸ್‌ನ ಚೆಲುವಿನ ಭಾಗವೇ ಆಗಿದೆ. ಯುನೆಸ್ಕೊ ಗುರುತಿಸಿರುವಂತೆ, 6 ಸಾವಿರ ವರ್ಷಗಳಿಂದ ಸೀನ್ ನದಿ ಇಲ್ಲಿನ ಜೀವಾಳವೇ ಆಗಿದೆ. ನಗರ ಮತ್ತು ನದಿಯ ನಡುವಿನ ಬಾಂಧವ್ಯ 16ರಿಂದ 20ನೇ ಶತಮಾನದ ನಡುವೆ ವ್ಯವಸ್ಥಿತ ಮತ್ತು ವಿಕಸಿತವಾಯಿತು.
ಇದರ ಕಿನಾರೆಯಲ್ಲಿಯೇ ಲ್ಯೂಬ್ರಿ ಮ್ಯೂಸಿಯಂ ಇದೆ, ಐಫೆಲ್ ಟವರ್ ಇದೆ. ಆಧುನಿಕ ಕಟ್ಟಡಗಳೂ ಇವೆ. ಮಧ್ಯಕಾಲೀನ ಇಮಾರತುಗಳೂ ಇವೆ. ಅವತ್ತಿನ ಅನೇಕ ಇಮಾರತುಗಳನ್ನು ಈಗಲೂ ಸಂರಕ್ಷಿಸಿ ಉಳಿಸಿಕೊಳ್ಳಲಾಗಿದೆ. ಆದರೆ ನಾವೇನು ಮಾಡಿದ್ದೇವೆ ಪ್ರಗತಿ ಮೈದಾನದಲ್ಲಿ? ಪ್ಯಾರಿಸ್ ಒಲಿಂಪಿಕ್ಸ್ ಒಂದು ನದಿಯ ಪುನರುತ್ಥಾನಕ್ಕೆ ಸಾಕ್ಷಿಯಾಗುತ್ತಿರುವ ಕಾರಣದಿಂದಲೂ ನೆನಪಾಗಿ ಉಳಿಯಲಿದೆ.ಇದಕ್ಕಾಗಿ ಸೀನ್ ನದಿಯನ್ನು ಶುಚಿಗೊಳಿಸುವ ಮೂಲಕ ಒಂದು ಹಳೆಯ ಕನಸನ್ನು ಜೀವಂತಗೊಳಿಸಿದಂತಾಗಿದೆ. ಇಂಥ ಕನಸುಗಾರಿಕೆಯೇ ಆ ನಗರವನ್ನು ಜಗತ್ತಿನ ಕಲಾ ರಾಜಧಾನಿಯನ್ನಾಗಿಸಿರುವುದು. ಮೊಹಬ್ಬತ್ತಿನ ಸೊಗಸು ಕಾಣಿಸುತ್ತ ಬಂದಿರುವ ಪ್ಯಾರಿಸ್, ಈಗ ನದಿ ಶುಚಿಗೊಳಿಸಿ ಜನರನ್ನು ಕರೆಯುವ ಮೂಲಕ ಮತ್ತದೇ ಕನಸನ್ನು ಇಮ್ಮಡಿಗೊಳಿಸಲಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೆಲೆಸ್ತೀನ್‌ನ 8 ಕ್ರೀಡಾಪಟುಗಳು ಭಾಗಿಯಾಗುತ್ತಿರುವಂತೆಯೇ, ವರ್ಷದಿಂದಲೂ ಹೊತ್ತಿ ಉರಿಯುತ್ತಿರುವ ಮಣಿಪುರದ ಒಬ್ಬರು ಕೂಡ ಪಾಲ್ಗೊಳ್ಳುತ್ತಿದ್ದಾರೆ.
ಮಣಿಪುರದ ವೇಯ್ಟ್ ಲಿಫ್ಟರ್ ಮೀರಾಬಾಯಿ ಚಾನು ಈ ಬಾರಿ ಭಾರತೀಯರಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದಾರೆ.
ಆದರೆ ನಮ್ಮ ಪ್ರಧಾನಿ ಮಾತ್ರ ಅವರ ನಿರೀಕ್ಷೆಯನ್ನು ಹುಸಿಗೊಳಿಸಿಬಿಟ್ಟರು. ಮಣಿಪುರವನ್ನು ಈ ಹಿಂಸೆಯಿಂದ ಕಾಪಾಡಿ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಮೋದಿಯನ್ನು ಕೈಜೋಡಿಸಿ ಬೇಡಿಕೊಂಡಿದ್ದರು. ಆದರೆ ಮೋದಿ ಅಲ್ಲಿಗೆ ಹೋಗಲೇ ಇಲ್ಲ.
ಅಂಥದೇ ಮತ್ತೊಂದು ಬಗೆಯ ನೋವಿನಿಂದ ದೇಶದೆದುರು ಕಣ್ಣೀರು ಹಾಕಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ಧಾರೆ.
2016ರ ರಿಯೊ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಪದಕ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಮೊಣಕಾಲು ಗಾಯಕ್ಕೆ ತುತ್ತಾದ ವಿನೇಶ್ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿದ್ದರು. ಆ ಗಾಯದಿಂದ ಚೇತರಿಸಿಕೊಳ್ಳಲು ಅವರಿಗೆ ಬಹಳ ಸಮಯ ಹಿಡಿಯಿತು. ಆನಂತರ 2018ರಲ್ಲಿ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಭರವಸೆ ಮೂಡಿಸಿದರು. ಅದೇ ವರ್ಷ ನಡೆದ ಏಶ್ಯನ್ ಗೇಮ್ಸ್‌ನಲ್ಲೂ ಚಿನ್ನ ಗೆಲ್ಲುವ ಮೂಲಕ ಏಶ್ಯಾಡ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕಳೆದೊಂದು ವರ್ಷದಿಂದ ಭಾರತೀಯ ಕುಸ್ತಿಯಲ್ಲಿ ಹಲವು ವಿವಾದಗಳಾದವು. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೇಶದ ಅಗ್ರ ಕುಸ್ತಿಪಟುಗಳು ಧರಣಿ ಕುಳಿತಿದ್ದರು.
ಆಯ್ಕೆ ಪರೀಕ್ಷೆಗೆ ಸಂಬಂಧಿಸಿದಂತೆ ಹಲವು ವಿವಾದಗಳೂ ಇದ್ದವು. ಇಷ್ಟೆಲ್ಲದರ ಹೊರತಾಗಿಯೂ ಭಾರತ ಆರು ಕೋಟಾಗಳಲ್ಲಿ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಇವರಲ್ಲಿ 50 ಕೆಜಿ ತೂಕ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ವಿನೇಶ್ ಫೋಗಟ್ ಕೂಡ ಸೇರಿದ್ದಾರೆ. ಆದರೆ ಈ ದೇಶದ ಪ್ರಭುತ್ವ ಅದೇ ಕ್ರೀಡಾಪಟು ಗಳನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಂಡಿತು ಎಂಬುದನ್ನು ನೆನಪಿಸಿಕೊಂಡರೆ ಸಂಕಟವಾಗುತ್ತದೆ. ಮಹಿಳಾ ಕುಸ್ತಿಪಟುಗಳು ಕಂಡ ಆ ಸಂಕಟದ ಬಗ್ಗೆ ಲೋಕಸಭೆಯಲ್ಲಿ ಸಂಸದ ದೀಪೇಂದ್ರ ಸಿಂಗ್ ಹೂಡಾ ನೆನಪಿಸಿದ್ದಾರೆ.
ಶೂಟಿಂಗ್ ಕ್ಷೇತ್ರದ ಅಭಿನವ್ ಬಿಂದ್ರಾ ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಒಲಿಂಪಿಕ್ ಆರ್ಡರ್ ಗೌರವಕ್ಕೆ ಪಾತ್ರರಾಗಿದ್ದಾರೆ. ಬಿಂದ್ರಾ ಈ ಪ್ರಶಸ್ತಿ ಸ್ವೀಕರಿಸುತ್ತಿರುವ ಮೊದಲ ಭಾರತೀಯ.
ನರೇಂದ್ರ ಮೊದಿ ಬಿಂದ್ರಾಗೆ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷ ಮಹಿಳಾ ಕುಸ್ತಿಪಟುಗಳಿಗಾದ ಅನ್ಯಾಯದ ವಿರುದ್ಧ ಬಿಂದ್ರಾ ಕೂಡ ದನಿಯೆತ್ತಿದ್ದರು. 2020ರ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ 4 ಕಂಚು ಸೇರಿ 7 ಪದಕಗಳನ್ನು ಭಾರತ ಗೆದ್ದಿತ್ತು.
ಈ ಬಾರಿಯೂ ಶೂಟಿಂಗ್, ಬ್ಯಾಡ್ಮಿಂಟನ್, ಕುಸ್ತಿ, ವೇಯ್ಟ್ ಲಿಫ್ಟಿಂಗ್ ಮತ್ತು ಹಾಕಿಯಲ್ಲಿ ಭಾರತದ ಕ್ರೀಡಾಪಟುಗಳು ಪದಕ ನಿರೀಕ್ಷೆಯಲ್ಲಿದ್ದಾರೆ. ಎಲ್ಲರಿಗೂ ಶುಭವಾಗಲಿ. ಗೆದ್ದು ಬರಲಿ ಎಂದು ಹಾರೈಸೋಣ.