‘ಬೀಫ್’ ಶಾಸ್ತ್ರದ ಮರ್ಮ ಸೂಕ್ಷ್ಮಗಳು ಮತ್ತು ‘ಗೋ’ಗೊಂದಲಕ್ಕಿರುವ ಪರಿಹಾರಗಳು

ನಿಜವಾಗಿ ‘ಗೋರಕ್ಷಕ’ ಎಂಬ ಮುಖವಾಡ ತೊಟ್ಟು ಬಹಳಷ್ಟು ರಾಜಕೀಯ ಮತ್ತು ಹಿಂಸಾಚಾರ ಮಾಡಿರುವ ಮತ್ತು ಆ ಮೂಲಕವೇ ಕೇಂದ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೂ ಬಂದಿರುವ ಮಂದಿಗೆ, ಗೋವುಗಳ ಬಗ್ಗೆ ಕಿಂಚಿತ್ತಾದರೂ ಅನುಕಂಪ ಇದ್ದಿದ್ದರೆ, ಅಲೆಮಾರಿ ಗೋವುಗಳ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲು ಖಂಡಿತ ಸಾಧ್ಯವಿತ್ತು. ಅವುಗಳಿಗೆ ಸೂಕ್ತ ಆಶ್ರಯ ನೀಡಲು ಬೇಕಾದ ಸಂಪನ್ಮೂಲ ನಮ್ಮ ದೇಶದಲ್ಲಿ ಖಂಡಿತ ಇದೆ. ಆದರೆ ಈತನಕ ಅವರು ವಿವಿಧ ಪಶು ಕಲ್ಯಾಣ ಯೋಜನೆಗಳ ಹೆಸರಲ್ಲಿ ಕೆಲವು ಅಗ್ಗದ ಜನಮರುಳು ನಾಟಕಗಳನ್ನು ಮಾಡಿದ್ದಾರೆಯೇ ಹೊರತು ಆ ನಿಟ್ಟಿನಲ್ಲಿ ಯಾವುದೇ ಗಂಭೀರ, ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ.
ಬೇರೆ ಅನೇಕ ಕ್ಷೇತ್ರಗಳಲ್ಲಿ ಭಾರತದ ಸಾಧನೆ ಕಳಪೆ ಎಂದು ಟೀಕಿಸುವವರು ‘ಬೀಫ್ ರಫ್ತು’ ಎಂಬ ಒಂದು ಕ್ಷೇತ್ರದಲ್ಲಿ ಭಾರತ ಮಾಡಿರುವ ಅದ್ಭುತ ಸಾಧನೆಯನ್ನು ಕಡೆಗಣಿಸುತ್ತಾರೆ. 2024ರಲ್ಲಿ ಭಾರತವು ವಿವಿಧ ದೇಶಗಳಿಗೆ 15.7 ಲಕ್ಷ ಟನ್ ‘ಹಲಾಲ್ ಬೀಫ್’ ರಫ್ತು ಮಾಡಿ ಹೊಸ ದಾಖಲೆ ನಿರ್ಮಿಸಿದೆ. ಗಮ್ಮತ್ತೇನೆಂದರೆ, ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಬೀಫ್ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ವಿಯೆಟ್ನಾಮ್ ಬಿಟ್ಟರೆ ಮಲೇಶಿಯಾ, ಈಜಿಪ್ಟ್, ಇಂಡೋನೇಶ್ಯ ಮತ್ತು ಯುಎಇ ಎಂಬ ಮುಸ್ಲಿಮ್ ಬಾಹುಳ್ಯದ ದೇಶಗಳೇ ಮುಂಚೂಣಿಯಲ್ಲಿವೆ. ಜಗತ್ತಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬೀಫ್ ರಫ್ತು ಮಾಡುವ ದೇಶಗಳ ಸಾಲಲ್ಲಿ ಈಗಾಗಲೇ ಬ್ರೆಝಿಲ್ ಬಿಟ್ಟರೆ ಭಾರತ ಮೊದಲೇ ಸ್ಥಾನದಲ್ಲಿದೆ. ಮೋದಿಯವರ ಸರಕಾರ ಬಂದಾಗಿನಿಂದ ದೇಶವು ಈ ರಂಗದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಅಷ್ಟೆಲ್ಲಾ ಬೀಫ್ ರಫ್ತು ಮಾಡಿ ದೇಶವು ನೂರಾರು ಕೋಟಿ ಡಾಲರ್ ವಿದೇಶಿ ವಿನಿಮಯವನ್ನೂ ಸಂಪಾದಿಸಿದೆ.
2014ರ ಮಹಾ ಚುನಾವಣೆ ನಡೆಯುತ್ತಿದ್ದಾಗ ಬಿಜೆಪಿಯ ‘ಸ್ಟಾರ್ ಸ್ಪೀಕರ್’ ಆಗಿದ್ದ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಬೀಫ್ ರಫ್ತು ಮಾಡುವ ಅಂದಿನ ಸರಕಾರದ ನೀತಿಯನ್ನು ಬಹಳ ಕಟುವಾಗಿ ಟೀಕಿಸಿದ್ದರು. ಅವರ ಹಲವು ಭಾಷಣಗಳಲ್ಲಿ ಅದುವೇ ಮುಖ್ಯವಿಷಯವಾಗಿತ್ತು. ಕಾಂಗ್ರೆಸ್ ಸರಕಾರವು ಗೋಮಾತೆಯನ್ನು ಮಾರುತ್ತಿದೆ ಎಂದೆಲ್ಲಾ ಅವರು ಅಂದಿನ ಸರಕಾರವನ್ನು ಟೀಕಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿಯವರು ಪ್ರಧಾನಿಯಾದೊಡನೆ, ಇನ್ನೇನು ಭಾರತದಲ್ಲಿ ಬೀಫ್ ರಫ್ತು ಮಾಡುವ ಉದ್ದಿಮೆಯೇ ಸಂಪೂರ್ಣ ಮುಚ್ಚಿಹೋಗುತ್ತದೆ ಎಂದು ಹಲವರು ನಂಬಿದ್ದರು. ಆದರೆ ಮೋದಿಯವರು ಪ್ರಧಾನಿಯಾದ ಬಳಿಕ, ದೇಶದೊಳಗೆ ಗೋಹತ್ಯೆ ಮತ್ತು ಬೀಫ್ ಬಳಕೆಯನ್ನು ಸಂಪೂರ್ಣ ನಿಲ್ಲಿಸಬೇಕೆಂದು ಆಗ್ರಹಿಸುವ ಭಾವುಕ ಭಾಷಣಗಳನ್ನು ಮಾಡಿದರೇ ಹೊರತು, ವಿದೇಶಗಳಿಗೆ ಬೀಫ್ ರಫ್ತು ಮಾಡುವ ದಂಧೆಯ ವಿರುದ್ಧ ಮಾತನಾಡಲೇ ಇಲ್ಲ. ಇನ್ನಷ್ಟು ಸೋಜಿಗದ ವಿಷಯವೇನೆಂದರೆ ಮೋದಿಯವರು ಪ್ರಧಾನಿಯಾದ ಹಿಂದಿನ ಆರ್ಥಿಕ ವರ್ಷ (2013-14)ದಲ್ಲಿ 13.66 ಲಕ್ಷ ಟನ್ ಬೀಫ್ ರಫ್ತಾಗಿದ್ದರೆ, ಅವರು ಪ್ರಧಾನಿಯಾದ ಮುಂದಿನ ಆರ್ಥಿಕ ವರ್ಷ (2014-15)ದಲ್ಲಿ ಬೀಫ್ ರಫ್ತಿನ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿ 14.76 ಲಕ್ಷ ಟನ್ ಬೀಫ್ ರಫ್ತಾಯಿತು! ನಿಜವಾಗಿ ಆ ವರ್ಷ ರಫ್ತಾದ ಬೀಫ್ ಪ್ರಮಾಣವು ಹಿಂದಿನ ಹತ್ತು ವರ್ಷಗಳಿಗೆ ಹೋಲಿಸಿದರೆ ಒಂದು ದಾಖಲೆಯಾಗಿತ್ತು. ಸುಮಾರು 30 ಸಾವಿರ ಕೋಟಿ ರೂಪಾಯಿಯಷ್ಟು ಆದಾಯವೂ ಬಂತು. ಕಳೆದ ವರ್ಷ ರಾಜ್ಯ ಸಭಾ ಸದಸ್ಯ ಪಿ.ಪಿ. ಸುನೀರ್ (ಸಿಪಿಐ) ಅವರು ಸಂಸತ್ತಿನಲ್ಲಿ, ಬೀಫ್ ರಫ್ತಿನ ಕುರಿತು ಸರಕಾರದಿಂದ 5 ನಿರ್ದಿಷ್ಟ ಮಾಹಿತಿಗಳನ್ನು ಕೇಳಿದ್ದರು. ಇದಕ್ಕೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು 2024 ಡಿಸೆಂಬರ್ 6ರಂದು ನೀಡಿದ ಲಿಖಿತ ಉತ್ತರದಲ್ಲಿ, ಭಾರತವು 2023-24ರ ಸಾಲಲ್ಲಿ 3,740.53 ಮಿಲಿಯನ್ ಡಾಲರ್ ಮೌಲ್ಯದ 12.96 ಲಕ್ಷ ಟನ್ ‘ಬಫೆಲ್ಲೋ ಮೀಟ್’ ಅನ್ನು ರಫ್ತು ಮಾಡಿತ್ತೆಂಬ ಮಹತ್ವದ ಮಾಹಿತಿ ಇತ್ತು.
ಕಳೆದ ವರ್ಷ ಮಾರ್ಚ್‌ನಲ್ಲಿ ಜನಪ್ರಿಯ ಯೂಟ್ಯೂಬರ್ ಧ್ರುವ್ ರಾಠೀ ತನ್ನ ಒಂದು ವೀಡಿಯೊದಲ್ಲಿ ನೀಡಿದ ಮಾಹಿತಿ ಹೀಗಿತ್ತು: ಇಲೆಕ್ಟೊರಲ್ ಬಾಂಡ್ ಕುರಿತಾದ ದಾಖಲೆ ಪತ್ರಗಳಿಂದ ತಿಳಿಯುವ ಪ್ರಕಾರ ಭಾರತದಿಂದ ಬೀಫ್ ರಫ್ತು ಮಾಡುವ ‘ಅಲ್ಲಾನಾ’ ಕಂಪೆನಿಯು 2020ರಲ್ಲಿ ಗೋರಕ್ಷಕ ಶಿವ ಸೇನೆ ಪಕ್ಷಕ್ಕೆ ರೂ. 5 ಕೋಟಿ ಮತ್ತು ಗೋರಕ್ಷಕ ಬಿಜೆಪಿಗೆ ರೂ. 2 ಕೋಟಿಯನ್ನು ದಾನವಾಗಿ ನೀಡಿತ್ತು. ಅಲ್ಲಾನಾ ಕಂಪೆನಿಯು ತನ್ನ ವೆಬ್‌ಸೈಟ್‌ನಲ್ಲಿ, ತನ್ನದು ‘ಹಲಾಲ್ ಬೀಫ್’ ರಫ್ತು ಮಾಡುವ, ಜಗತ್ತಿನ ಅತಿದೊಡ್ಡ ಕಂಪೆನಿ ಎಂದು ತನ್ನನ್ನು ಪರಿಚಯಿಸಿಕೊಂಡಿದೆ.
ಯಾರಿಂದಲೂ ಮುಚ್ಚಿಡಲಾಗದಷ್ಟು ಬೃಹತ್ತಾಗಿದ್ದ ಈ ವಿರೋಧಾಭಾಸವನ್ನು ಸ್ವಾಭಾವಿಕವಾಗಿಯೇ ಹಲವರು ಗಮನಿಸಿದರು ಮತ್ತು ಅನೇಕ ವಲಯಗಳಿಂದ ಈ ಕುರಿತು ತೀಕ್ಷ್ಣ ಪ್ರಶ್ನೆಗಳು ಮೂಡಿ ಬರತೊಡಗಿದವು. ವಿಮರ್ಶಾತ್ಮಕ ಪ್ರಶ್ನೆಗಳಿಗೆ ಗೊಂದಲಮಯ ಉತ್ತರಗಳನ್ನು ನೀಡುವುದರಲ್ಲಿ ಪ್ರವೀಣರಾದ ಸಂಘ ಸರಕಾರದವರು ಅವುಗಳನ್ನೆಲ್ಲಾ ಚೆನ್ನಾಗಿಯೇ ನಿಭಾಯಿಸಿದರು. ಆಝಮ್ ಖಾನ್‌ರಂತಹ ಸಮಾಜವಾದಿ ಪಕ್ಷದ ನಾಯಕರು ಮೋದಿಯವರನ್ನು ಅಣಕಿಸುತ್ತಾ ಸರಕಾರ ಬೀಫ್ ರಫ್ತಿನ ಮೇಲೆ ನಿಷೇಧ ಹೇರಬೇಕೆಂದು ಆಗ್ರಹಿಸಿದರು. ಬಿಜೆಪಿಯೊಳಗಿನ ನಾಯಕರು ಕೂಡಾ ಹಿಂದುಳಿಯಲಿಲ್ಲ. 2015 ಸೆಪ್ಟಂಬರ್‌ನಲ್ಲಿ ಸುಬ್ರಮಣಿಯನ್ ಸ್ವಾಮಿಯವರು ಪ್ರಧಾನಮಂತ್ರಿಯವರಿಗೆ ಒಂದು ಪತ್ರ ಬರೆದು, ‘‘ಸರಕಾರವು ತನ್ನ ಅಉಈಅ ವಿಭಾಗದ ಮೂಲಕ ವಿವಿಧ ಆಹಾರೋತ್ಪನ್ನಗಳ ರಫ್ತುದಾರರಿಗೆ ಒದಗಿಸುತ್ತಿರುವ 13 ಬಗೆಯ ಸಬ್ಸಿಡಿಗಳು, ಗೋಮಾಂಸ ರಫ್ತು ಮಾರುವವರಿಗೆ ಬಲ ಒದಗಿಸುತ್ತಿವೆ. ಅದನ್ನು ಕೂಡಲೇ ರದ್ದು ಪಡಿಸಬೇಕು....... ನೀವು 2014ರ ನಿಮ್ಮ ಚುನಾವಣಾ ಭಾಷಣಗಳಲ್ಲಿ, ಹಿಂದಿನ ಸರಕಾರದ ಬೀಫ್ ರಫ್ತು ಮಾಡುವ ನೀತಿಯನ್ನು ‘ಪಿಂಕ್ ರೆವೊಲ್ಯೂಷನ್’ ಎಂದು ಖಂಡಿಸುತ್ತಾ ಅದನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದಿರಿ’’ ಎಂದು ನೆನಪಿಸಿದ್ದರು.
2016ರಲ್ಲಿ ಈ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದ ವಾಣಿಜ್ಯ ನೀತಿಯನುಸಾರ, ದನ, ಕರು ಮತ್ತು ಹೋರಿಯ ಮಾಂಸವನ್ನು ರಫ್ತು ಮಾಡುವುದು ನಿಷಿದ್ಧವಾಗಿದೆ ಮತ್ತು ಸರಕಾರವು ಬೀಫ್ ರಫ್ತು ಮಾಡುವವರಿಗೆ ಯಾವುದೇ ಸಬ್ಸಿಡಿ ನೀಡುತ್ತಿಲ್ಲ ಎಂದು ತಿಳಿಸಿದರು. ಹಾಗಾದರೆ ಭಾರತ ಪ್ರತಿವರ್ಷ ಅಷ್ಟು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತಿರುವುದು ಏನನ್ನು? ಎಂಬ ಸಹಜ ಪ್ರಶ್ನೆ ತಲೆ ಎತ್ತಿತು. ಇದಕ್ಕುತ್ತರವಾಗಿ ಮತ್ತೆ ದ್ವಂದ್ವಗಳ ಸರಮಾಲೆಯೊಂದು ಪ್ರತ್ಯಕ್ಷವಾಯಿತು. ಭಾರತ ರಫ್ತು ಮಾಡುತ್ತಿರುವ ಬೀಫ್‌ಗೆ ಬಫೆಲ್ಲೋ ಮೀಟ್, ಬೊವೈನ್ ಮೀಟ್, ಕ್ಯಾರಾಬೀಫ್ ಇತ್ಯಾದಿ ಅಪರಿಚಿತ, ಸೃಜನಶೀಲ ಹೆಸರುಗಳನ್ನು ನೀಡಿ, ರಫ್ತಾಗುತ್ತಿರುವುದು ಈ ಬಗೆಯ ಮಾಂಸಗಳೇ ಹೊರತು ಗೋಮಾಂಸ ಅಲ್ಲ ಎಂಬ ಸಮಜಾಯಿಷಿ ನೀಡಲಾಯಿತು. ಆ ಪ್ರಕ್ರಿಯೆ ಈಗಲೂ ಚಲಾವಣೆಯಲ್ಲಿದೆ. ಹಲವಾರು ವರ್ಷಗಳಿಂದ ಭಾರತವು ರಫ್ತು ಮಾಡುತ್ತಾ ಬಂದಿರುವ ಬೀಫ್ ಗೋಮಾಂಸ ಅಲ್ಲವೆಂದಾದರೆ 2014ರ ಚುನಾವಣೆಗೆ ಮುನ್ನ ಮೋದಿ ಮತ್ತವರ ಉಗ್ರ ಭಾಷಣಗಾರರ ಪಟಾಲಮ್ ಪ್ರತಿಭಟಿಸುತ್ತಿದ್ದುದು ಯಾವ ಬೀಫ್ ರಫ್ತಿನ ವಿರುದ್ಧ? ಈ ಪ್ರಶ್ನೆಗೆ ಯಾರೂ ಉತ್ತರ ನೀಡಿಲ್ಲ.
ಸುಬ್ರಮಣಿಯನ್ ಸ್ವಾಮಿಯವರು ತಮ್ಮ ಗೋವ್ಯಾಮೋಹ ಮತ್ತು ಮೋದಿ ದ್ವೇಷವನ್ನು ಆಗಾಗ ಪ್ರದರ್ಶಿಸುತ್ತಾ ಇರುತ್ತಾರೆ. 2017ರಲ್ಲಿ ಅವರು ಗೋವುಗಳ ಸಂಖ್ಯೆಯನ್ನು ಕಾಪಾಡುವ ಹಾಗೂ ಗೋಹತ್ಯಾ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಿ ಒಂದು ಖಾಸಗಿ ವಿಧೇಯಕವನ್ನು ಮಂಡಿಸಿದ್ದರು. ಮುಂದಿನ ವರ್ಷ ಆ ಕುರಿತು ಸಂಸತ್ತಿನಲ್ಲಿ ಬಿಸಿಬಿಸಿ ಚರ್ಚೆ ನಡೆದಿತ್ತು. ‘‘ಸರಕಾರವು ಈ ಕೂಡಲೇ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಮತ್ತು ಅದರ ರಕ್ಷಣೆ ಮತ್ತು ಪೋಷಣೆಯ ಹೊಣೆಯನ್ನೂ ಸರಕಾರವೇ ಹೊತ್ತುಕೊಳ್ಳಬೇಕು. ಮಾಂಸ (ಞಛಿಠಿ) ವ್ಯಾಪಾರ ಮಾಡುವ ಜಗತ್ತಿನ ಎಲ್ಲ ದೇಶಗಳೊಂದಿಗೆ ಭಾರತವು ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳಬೇಕು’’ ಎಂದು ಈ ವೇಳೆ ಸಮಾಜವಾದಿ ಪಕ್ಷದ ಸದಸ್ಯ ಜಾವೇದ್ ಅಲಿ ಖಾನ್ ಆಗ್ರಹಿಸಿದ್ದರು. ಹಾಗೆಯೇ ಕಾಂಗ್ರೆಸ್ ಸದಸ್ಯ ರಾಜೀವ್ ಶುಕ್ಲಾ ಬಿಜೆಪಿಯವರು ಗೋಹತ್ಯೆಯ ವಿಷಯದಲ್ಲಿ, (ಅವರದೇ ಪಕ್ಷದ) ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರೊಡನೆ ಯಾಕೆ ಚರ್ಚಿಸುತ್ತಿಲ್ಲ? ಎಂದು ಸ್ವಾಮಿಯವರನ್ನು ಪ್ರಶ್ನಿಸಿದ್ದರು. ಪ್ರಸ್ತುತ ಚರ್ಚೆಗಿಂತ ಕೆಲವೇ ದಿನ ಹಿಂದೆ ಪಾರಿಕ್ಕರ್, ಗೋವಾದಲ್ಲಿ ಗೋರಕ್ಷಕ ಪಡೆಗಳ ಪುಂಡಾಟಗಳನ್ನು ಖಂಡಿಸಿ, ತಾನು ಮಾಂಸ ವ್ಯಾಪಾರಿಗಳಿಗೆ ರಕ್ಷಣೆ ಮತ್ತು ಬೆಂಬಲ ನೀಡುವುದಾಗಿ ಹೇಳಿದ್ದರು. ಕೊನೆಗೆ ಸುಬ್ರಮಣಿಯನ್ ಸ್ವಾಮಿ ತನ್ನ ವಿಧೇಯಕವನ್ನು ಹಿಂದೆಗೆದು ಕೊಂಡಿದ್ದರು.
ಅದೇ ವರ್ಷ (2018) ‘ಟೈಮ್ಸ್ ನೌ’ ಟಿವಿ ಚಾನೆಲ್ ನಲ್ಲಿ ಪ್ರಸಿದ್ಧ ಸಿನೆಮಾ ಕಲಾವಿದ ಪ್ರಕಾಶ್ ರಾಜ್ ಮತ್ತು ಸುಬ್ರಮಣಿಯನ್ ಸ್ವಾಮಿಯ ನಡುವೆ ಒಂದು ಸಂವಾದ ನಡೆದಿತ್ತು. ಚರ್ಚೆಯಲ್ಲಿ ಸ್ವಾಮಿಯವರು ಗೋವಿನ ಮಹಿಮೆ, ಬಹುಸಂಖ್ಯಾತರ ಭಾವನೆಗಳು, ಗೋಹತ್ಯಾ ನಿಷೇಧ ಕಾನೂನು ಇತ್ಯಾದಿಗಳ ಬಗ್ಗೆ ಧಾರಾಳ ಮಾತನಾಡಿದರು. ಈ ಮಧ್ಯೆ ಪ್ರಕಾಶ್ ರಾಜ್, ‘‘ಇದೆಲ್ಲಾ ಕೇವಲ ನಿಮ್ಮ ರಾಜಕೀಯ ಮಾತ್ರ. ಮೇಘಾಲಯದಲ್ಲಿ ಬೀಫ್ ವ್ಯಾಪಾರ ನಡೆಯುವ ಬಗ್ಗೆ ನಿಮಗೇನೂ ಸಮಸ್ಯೆ ಇಲ್ಲ....’’ ಎಂದು ಕುಟುಕಿದರು. ಅವರು ತಮ್ಮ ಮಾತು ಮುಗಿಸುವ ಮುನ್ನವೇ ಸ್ವಾಮಿಯವರು ಅನುಕೂಲ ಶಾಸ್ತ್ರದ ಮೊರೆಹೋಗಿ ‘‘ನೋಡಿ, ನಿಮಗೆ ಒಂದು ವಿಷಯ ತಿಳಿದಿರಲೇ ಬೇಕು. ಗೋವುಗಳಲ್ಲಿ ಎರಡು ವಿಧಗಳಿವೆ. ಒಂದು ಬಾಸ್ ಇಂಡಿಕಸ್ (ಆಟ ಜ್ಞಿಜ್ಚ್ಠಿ). ಅದು ನಮ್ಮ ಭಾರತೀಯರ ಗೋವು. ಮೇಘಾಲಯದಲ್ಲಿ ಇರುವುದು ಬಾಸ್ ಇಂಡಿಕಸ್ ಅಲ್ಲ. ಅದು ಬಾಸ್ ಟೌರಸ್ (ಆಟ ಚ್ಠ್ಟ್ಠ). ಅದನ್ನು ನೀವು ಎಷ್ಟು ಬೇಕಾದರೂ ತಿನ್ನಬಹುದು’’ ಎಂದರು.
ಮೋದಿ, ಯೋಗಿ, ಸ್ವಾಮಿ ಇತ್ಯಾದಿಗಳು ಸಾಮಾನ್ಯವಾಗಿ ವಿಮಾನಗಳಲ್ಲೇ ಹಾರಾಡುವವರಾದ್ದರಿಂದ ಮತ್ತು ಅವರ ಗಮನಕ್ಕೆ ಬಾರದ ಒಂದು ಸಮಸ್ಯೆ ಇದೆ. ಭಾರತದಲ್ಲಿ ಹೆಚ್ಚಿನ ಕಡೆ ದೊಡ್ಡ ಸಂಖ್ಯೆಯಲ್ಲಿ ಬೀದಿಗಳಲ್ಲಿ ಅಡ್ಡಾಡುತ್ತಿರುವ ಅನಾಥ, ಪರಿತ್ಯಕ್ತ ಪ್ರಾಣಿಗಳು ಅನೇಕ ಬಗೆಯ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಹೊಲ, ತೋಟಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿ ಮಾಡುವುದು, ರಸ್ತೆಯಲ್ಲಿ ನಡೆಯುವವರ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ಆಕ್ರಮಣ, ಸಾಕುಪ್ರಾಣಿಗಳ ಮೇಲೆ ಆಕ್ರಮಣ, ರಸ್ತೆ ಬದಿಯ ಅಂಗಡಿಗಳಿಗೆ ನುಗ್ಗಿ ನಷ್ಟ ಉಂಟು ಮಾಡುವುದು, ಹೀಗೆ ಈ ಅಲೆಮಾರಿ ಜಾನುವಾರುಗಳಿಂದಾಗಿ ಸಮಾಜಕ್ಕೆ ಹಲವು ಬಗೆಯ ಕಿರುಕುಳಗಳಾಗುತ್ತಿವೆ. ಪರಿಸರ ಮಾಲಿನ್ಯ, ವಿಶೇಷವಾಗಿ ಜಲಮೂಲಗಳ ಮಾಲಿನ್ಯ ಮತ್ತು ವಿವಿಧ ಬಗೆಯ ರೋಗ ರುಜಿನಗಳ ಪ್ರಸಾರಕ್ಕೂ ಅವು ಕಾರಣವಾಗುತ್ತಿವೆ. ದೇಶದೆಲ್ಲೆಡೆ ಪ್ರತಿವರ್ಷ ಸಂಭವಿಸುವ ಸಾವಿರಾರು ರಸ್ತೆ ಅಪಘಾತ, ದುರಂತಗಳಿಗೂ ಅಲೆಮಾರಿ ಪ್ರಾಣಿಗಳು ಕಾರಣವಾಗಿವೆ. ವಿಮಾ ಕಂಪೆನಿಯೊಂದು ಇತ್ತೀಚೆಗೆ ಪ್ರಕಟಿಸಿದ 2024ರ ‘ಆಕ್ಸಿಡೆಂಟ್ ಇಂಡೆಕ್ಸ್’ ಪ್ರಕಾರ, ದೇಶದ ಮಹಾ ನಗರಗಳಲ್ಲಿ ಹೆಚ್ಚಿನ ರಸ್ತೆ ಅಪಘಾತಗಳು ಅಲೆಮಾರಿ ಪ್ರಾಣಿಗಳಿಂದಾಗಿ ಸಂಭವಿಸಿದ್ದು, ಆಪೈಕಿ ಶೇ. 62 ಅಪಘಾತಗಳಿಗೆ ಬೀದಿನಾಯಿಗಳು ಕಾರಣವಾದರೆ, ಶೇ. 33 ಅಪಘಾತಗಳಿಗೆ ಅಲೆಮಾರಿ ದನಗಳು ಮತ್ತು ಎಮ್ಮೆ, ಎತ್ತುಗಳು ಕಾರಣವಾಗಿವೆ. ಹಲವೊಮ್ಮೆ ಸ್ವತಃ ಈ ಜಾನುವಾರುಗಳು ಅನೇಕ ಬಗೆಯ ಹಿಂಸೆ, ಕ್ರೌಯಗಳನ್ನು ಎದುರಿಸುತ್ತಿರಬೇಕಾಗುತ್ತದೆ.
ಸರಕಾರವು 2019ರಲ್ಲಿ ನಡೆಸಿದ ಪಂಚವಾರ್ಷಿಕ ಸಮೀಕ್ಷೆಯಿಂದ ತಿಳಿದು ಬಂದ ಪ್ರಕಾರ ದೇಶದಲ್ಲಿ ಪರಿತ್ಯಕ್ತ ಅಲೆಮಾರಿ ಪ್ರಾಣಿಗಳ ಸಂಖ್ಯೆ 2 ಕೋಟಿಗಿಂತ ಅಧಿಕವಿದೆ. ಆ ಪೈಕಿ ಹೆಚ್ಚಿನವು ನಾಯಿಗಳಾದರೆ, 50 ಲಕ್ಷಕ್ಕೂ ಹೆಚ್ಚು ದನ, ಎಮ್ಮೆ ಇತ್ಯಾದಿ ಪ್ರಜಾತಿಗೆ ಸೇರಿದ ಜಾನುವಾರುಗಳಾಗಿವೆ. ನಮ್ಮ ಸಮಾಜದಲ್ಲಿ ನಾಯಿಗಳಿಗೆ ಯಾವುದೇ ಪಾವಿತ್ರ್ಯವನ್ನು ಆರೋಪಿಸಲಾಗಿಲ್ಲವಾದ್ದರಿಂದ ಅವುಗಳು ನಿರ್ಗತಿಕವಾಗಿ ರಸ್ತೆಗಳಲ್ಲಿ ಅಲೆದಾಡುತ್ತಿರುವುದು ಅಚ್ಚರಿಯ ವಿಷಯವೇನಲ್ಲ. ಆದರೆ ಅಷ್ಟು ದೊಡ್ಡ ಸಂಖ್ಯೆಯಲ್ಲಿ ದನ, ಹೋರಿ ಇತ್ಯಾದಿಗಳು ಅನಾಥವಾಗಿ ಅಲೆದಾಡುವ ಸ್ಥಿತಿಗೆ ತಳ್ಳಲ್ಪಟ್ಟಿರುವುದು ಖಂಡಿತ ಅಚ್ಚರಿಯ ವಿಷಯ. ಅವೆಲ್ಲಾ ಚೀನಾ ಅಥವಾ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದ ಜಾನುವಾರುಗಳಂತೂ ಖಂಡಿತ ಅಲ್ಲ. ಇಷ್ಟು ಬೃಹತ್ ಪ್ರಮಾಣದಲ್ಲಿ ರಸ್ತೆಗಳಲ್ಲಿ ಅವುಗಳ ಉಪಸ್ಥಿತಿಗೆ ಯಾವುದಾದರೂ ಅಂತರ್‌ರಾಷ್ಟ್ರೀಯ ಸಂಚು ಕಾರಣವೆಂದು ರಾಷ್ಟ್ರೀಯ ವಿಪರೀತವಾದಿಗಳು ಯಾರೂ ಈ ತನಕ ದೂರಿದ್ದಿಲ್ಲ. ಹಾಗಾದರೆ ಅವು ನಮ್ಮ ಬೀದಿಗಳಿಗೆ ಬರುವುದೆಲ್ಲಿಂದ? ಅವುಗಳನ್ನು ಬೀದಿಗೆ ಕಳಿಸುವವರು ಯಾರು? ಪಶುಪಾಲಕರು, ವರ್ಷಗಟ್ಟಲೆ ತಮಗೆ ಹಾಲೊದಗಿಸಿದ ಮತ್ತು ತಮ್ಮ ಹೊಲಗಳಲ್ಲಿ ಉಳುಮೆ ಮಾಡಿದ ಜಾನುವಾರುಗಳನ್ನು ಈರೀತಿ ಕ್ರೂರವಾಗಿ ಬೀದಿಗೆಸೆಯುವುದಕ್ಕೆ ಕಾರಣವೇನು? ಹಾಲು ಉತ್ಪಾದಿಸುವ ಸಾಮರ್ಥ್ಯ ಕಳೆದುಕೊಂಡ ಬಳಿಕವೂ, ಆಸಕ್ತರು ಬಳಸಬಹುದಾದ ಮೂತ್ರ, ಸೆಗಣಿ ಇತ್ಯಾದಿಗಳನ್ನು ನಿತ್ಯವೂ ಉತ್ಪಾದಿಸುತ್ತಲೇ ಇರುವ, ದನ ಮತ್ತಿತರ ಪ್ರಾಣಿಗಳನ್ನು ಜನರು ಈ ರೀತಿ ಹಸಿದು ಸಾಯುವುದಕ್ಕೆ ಬೀದಿಗಳಲ್ಲಿ ಬಿಟ್ಟು ಬರುವುದೇಕೆ? ಎಂಬ ಪ್ರಶ್ನೆಗಳು ಉದ್ಭವಿಸುವುದು ಸಹಜ.
ನಿಜವಾಗಿ, ಪಶುಪಾಲಕರು ತಮಗೆ ಉಪಯುಕ್ತವಲ್ಲದ ಪಶುಗಳನ್ನು ಬೀದಿಗೆಸೆಯುವುದಕ್ಕೆ ಅವರ ಅಸಹಾಯಕತೆ ಮತ್ತು ಅವರ ಮೇಲೆ ವಿಧಿಸಲಾದ ಕ್ರೂರ ನಿರ್ಬಂಧಗಳು ಕಾರಣವೇ ಹೊರತು ಅವರ ಕ್ರೌರ್ಯವಂತೂ ಅದಕ್ಕೆ ಖಂಡಿತ ಕಾರಣವಲ್ಲ. ನಮ್ಮ ರೈತರು, ನಮ್ಮಲ್ಲಿನ ಕಾರ್ಪೊರೇಟ್ ಪ್ರಭುಗಳಂತೆ, ಕೇವಲ ಲಾಭ ನಷ್ಟಗಳನ್ನು ಮಾತ್ರ ಲೆಕ್ಕಹಾಕಿ ಅಮಾನುಷ ನಿರ್ಧಾರಗಳನ್ನು ಕೈಗೊಳ್ಳುವ ಹೃದಯಹೀನ ರಾಕ್ಷಸರೇನಲ್ಲ. ನಮ್ಮ ರೈತರು ಮತ್ತು ಪಶುಪಾಲಕರಲ್ಲಿ ಹೆಚ್ಚಿನವರು ಕಡುಬಡವರು. ಸ್ವತಃ ತಮ್ಮ ಹೊಟ್ಟೆ ತುಂಬಲು ನಿತ್ಯ ಪಾಡುಪಡುವ ಈ ಮಂದಿಯ ಬಳಿ, ತಾವು ತುಂಬಾ ಪ್ರೀತಿಸುವ, ಆದರೂ ತಮಗೆ ನಿರುಪಯುಕ್ತವಾಗಿರುವ ಜಾನುವಾರುಗಳನ್ನು ಪೋಷಿಸುವ ಸಾಮರ್ಥ್ಯವಾಗಲೀ ಸವಲತ್ತುಗಳಾಗಲೀ ಇರುವುದಿಲ್ಲ. ಕೆಲವೇ ದಶಕಗಳ ಹಿಂದೆ ಇಂಥವರಿಗೆ ತಮಗೆ ಬೇಡದ ದನ, ಹೋರಿ ಇತ್ಯಾದಿಗಳನ್ನು ಮಾರಿ ಒಂದು ಸಣ್ಣ ಆದಾಯ ಪಡೆಯುವ ಅವಕಾಶವಿತ್ತು. ಆ ಸಣ್ಣ ಆದಾಯಕ್ಕೆ ಅವರ ದೃಷ್ಟಿಯಲ್ಲಿ ತುಂಬಾ ಬೆಲೆ ಇತ್ತು. ಹೆಚ್ಚಾಗಿ ಮಾಂಸ ವ್ಯಾಪಾರಿಗಳು ಆ ಜಾನುವಾರುಗಳನ್ನು ಖರೀದಿಸುತ್ತಿದ್ದರು. ಆದರೆ ಕ್ರಮೇಣ ಗೋರಕ್ಷರ ಹೆಸರಲ್ಲಿ ದೇಶದೆಲ್ಲೆಡೆ ಅಲೆಯುತ್ತಿರುವ ಪಡೆಗಳು, ಬೀದಿಗಳಲ್ಲಿ ನಿಂತು ಜಾನುವಾರುಗಳ ಮಾರಾಟ, ಸಾಗಾಟ ಇತ್ಯಾದಿಗಳನ್ನು ನಿರ್ಬಂಧಿಸಿ ಬಿಟ್ಟಾಗಿನಿಂದ, ಗೋಪಾಲಕರು ತಮಗೆ ಬೇಡದ ಜಾನುವಾರುಗಳನ್ನು ಮಾರುವ ಹಕ್ಕು ಮತ್ತು ಅವಕಾಶದಿಂದ ವಂಚಿತರಾಗಿ ಬಿಟ್ಟರು. ಆ ಜಾನುವಾರುಗಳನ್ನು ನೋಡಿಕೊಳ್ಳುವುದಕ್ಕೆ ಸರಕಾರ ಅಥವಾ ಸಮಾಜವು ಸೂಕ್ತ ಆಶ್ರಯಧಾಮಗಳನ್ನು ಒದಗಿಸಿದ್ದರೆ ಅವರು ಖಂಡಿತ ಆ ಜಾನುವಾರುಗಳನ್ನು ಅಂತಹ ಆಶ್ರಯಧಾಮಗಳಲ್ಲಿ ಬಿಟ್ಟು ಬರುತ್ತಿದ್ದರು. ಆದರೆ ನಮ್ಮ ದೇಶದಲ್ಲಿ ಅಂತಹ ಗೋಶಾಲೆ ಅಥವಾ ಪಶು ಆಶ್ರಯಧಾಮಗಳು ಎಷ್ಟಿವೆ? ಬಿಜೆಡಿ ರಾಜ್ಯಸಭಾ ಸದಸ್ಯೆ ಸುಲತಾ ದೇವ್ ಅವರು 2023ರಲ್ಲಿ ಸಂಸತ್ತಿನಲ್ಲಿ ಇದೇ ಪ್ರಶ್ನೆಯನ್ನು ಎತ್ತಿದ್ದರು. ಇದಕ್ಕುತ್ತರವಾಗಿ, ಅಂದಿನ ಪಶು ಸಂಗೋಪನಾ ಸಚಿವ ಪುರುಷೋತ್ತಮ ರುಪಾಲಾ ಅವರು, ದೇಶದಲ್ಲಿ 7,676 ಗೋಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದ್ದರು. ಅದೇ ವರ್ಷ ನೀತಿ ಆಯೋಗವು ಪ್ರಕಟಿಸಿದ ವರದಿಯಲ್ಲಿ ಪಿಂಜ್ರಾಪೋಲ್, ಕಂಜಿ ಹೌಸ್, ಗೌ ವಾಟಿಕಾ ಮುಂತಾದ ವಿವಿಧ ಹೆಸರುಗಳಲ್ಲಿ ದೇಶದಲ್ಲಿ 5,000ಕ್ಕೂ ಹೆಚ್ಚು ಗೋಶಾಲೆಗಳಿವೆ ಎಂದು ತಿಳಿಸಿತ್ತು. ಜೊತೆಗೆ, ಈ ಪೈಕಿ 1,837 ಸಂಸ್ಥೆಗಳು ಮಾತ್ರ ಭಾರತದ ಪಶುಕಲ್ಯಾಣ ನಿಗಮದಿಂದ ಮನ್ನಣೆ ಪಡೆದಿವೆ ಎಂದು ಪ್ರಕಟಿಸಿತ್ತು. ಅಲೆಮಾರಿ ಪ್ರಾಣಿಗಳ ಬೃಹತ್ ಸಂಖ್ಯೆಗೆ ಹೋಲಿಸಿದರೆ ಗೋಶಾಲೆಗಳ ಈ ಸಂಖ್ಯೆ ತೀರಾ ಸಣ್ಣದು. ಅಲ್ಲದೆ ವಿವಿಧ ಅಧ್ಯಯನಗಳಿಂದ ವ್ಯಕ್ತವಾಗಿರುವಂತೆ, ಗೋಶಾಲೆ ಎಂಬ ಬೋರ್ಡ್ ಹಾಕಿಕೊಂಡು, ಸರಕಾರದಿಂದ, ವಿವಿಧ ಖಾಸಗಿ ಕಂಪೆನಿಗಳಿಂದ ಮತ್ತು ಸಾರ್ವಜನಿಕರಿಂದ ದೇಣಿಗೆ ಪಡೆದು ನಡೆಸಲಾಗುವ ಅನೇಕ ಗೋಶಾಲೆಗಳ ಕಾರ್ಯನಿರ್ವಹಣೆಯ ಗುಣಮಟ್ಟವು ತೀರಾ ಕಳಪೆಯಾಗಿದೆ.
ನಿಜವಾಗಿ ‘ಗೋರಕ್ಷಕ’ ಎಂಬ ಮುಖವಾಡ ತೊಟ್ಟು ಬಹಳಷ್ಟು ರಾಜಕೀಯ ಮತ್ತು ಹಿಂಸಾಚಾರ ಮಾಡಿರುವ ಮತ್ತು ಆ ಮೂಲಕವೇ ಕೇಂದ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೂ ಬಂದಿರುವ ಮಂದಿಗೆ, ಗೋವುಗಳ ಬಗ್ಗೆ ಕಿಂಚಿತ್ತಾದರೂ ಅನುಕಂಪ ಇದ್ದಿದ್ದರೆ, ಅಲೆಮಾರಿ ಗೋವುಗಳ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲು ಖಂಡಿತ ಸಾಧ್ಯವಿತ್ತು. ಅವುಗಳಿಗೆ ಸೂಕ್ತ ಆಶ್ರಯ ನೀಡಲು ಬೇಕಾದ ಸಂಪನ್ಮೂಲ ನಮ್ಮ ದೇಶದಲ್ಲಿ ಖಂಡಿತ ಇದೆ. ಆದರೆ ಈತನಕ ಅವರು ವಿವಿಧ ಪಶು ಕಲ್ಯಾಣ ಯೋಜನೆಗಳ ಹೆಸರಲ್ಲಿ ಕೆಲವು ಅಗ್ಗದ ಜನಮರುಳು ನಾಟಕಗಳನ್ನು ಮಾಡಿದ್ದಾರೆಯೇ ಹೊರತು ಆ ನಿಟ್ಟಿನಲ್ಲಿ ಯಾವುದೇ ಗಂಭೀರ, ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ.
ಇಲ್ಲಿ ಹೇಳಿದ ಎಲ್ಲ ಕಹಿ ವಾಸ್ತವಗಳ ಹಿನ್ನೆಲೆಯಲ್ಲಿ ಸಮಾಜದ, ರೈತರ, ಪಶುಪಾಲಕರ ಮತ್ತು ಪ್ರಾಣಿಗಳ ಬಗ್ಗೆ ಸಂವೇದನಾಶೀಲರಾಗಿರುವವರು ಕೆಲವು ಸಾಧ್ಯತೆಗಳನ್ನು ಪರಿಗಣಿಸಬಹುದು
1. ಗೋವು ಅಂದರೆ ಏನು? ಯಾವುದು? ಯಾವ ನಿರ್ದಿಷ್ಟ ತಳಿ ಅಥವಾ ಪ್ರಜಾತಿಯ ಗೋವು ಧರ್ಮದ ದೃಷ್ಟಿಯಿಂದ ಪವಿತ್ರ? ‘ಪವಿತ್ರ’ ಎಂಬ ಪದವಿಗೆ ಅರ್ಹವಲ್ಲದ ಪ್ರಾಣಿಗಳು ಯಾವುವು? ಎಂಬಿತ್ಯಾದಿ ವಿಷಯಗಳ ಬಗ್ಗೆ ಅಧಿಕೃತವಾಗಿ, ಒಮ್ಮತದ ಒಂದು ಸ್ಪಷ್ಟ ನಿಲುವನ್ನು ತಾಳಬೇಕು ಮತ್ತು ಆ ನಿಲುವನ್ನು ಸಂಪೂರ್ಣ ಸಮಾಜಕ್ಕೆ ತಿಳಿಸಬೇಕು. ಈ ಮೂಲಕ ಜಾನುವಾರುಗಳ ಒಂದು ದೊಡ್ಡ ಸಮೂಹವನ್ನು ‘ಪಾವಿತ್ರ್ಯ’ದ ಹೊರೆಯಿಂದ ಮುಕ್ತಗೊಳಿಸಬೇಕು ಮತ್ತು ಸಮಾಜದಲ್ಲಿರುವ ಒಂದು ದೊಡ್ಡ ಅನಗತ್ಯ ಗೊಂದಲವನ್ನು ನಿವಾರಿಸಬೇಕು.
2. ತಮಗೆ ಅಗತ್ಯ ಬಿದ್ದಾಗ ಮಾತ್ರ, ಗೋವುಗಳಲ್ಲಿ ಬಾಸ್ ಇಂಡಿಕಸ್ ಮಾತ್ರ ನಮಗೆ ಪವಿತ್ರ, ಬಾಸ್ ಟೌರಸ್ ಗೋವನ್ನು ಯಾರು ಎಷ್ಟು ಬೇಕಾದರೂ ತಿನ್ನಬಹುದು ಎನ್ನುವವರು ಇದನ್ನೇ ಅಧಿಕೃತ ಸರಕಾರಿ ನೀತಿಯಾಗಿಸಿ ಸಮಾಜದಲ್ಲಿ ಆ ನೀತಿಯನ್ನು ಪರಿಚಯಿಸಬೇಕು. ಬಾಸ್ ಇಂಡಿಕಸ್ ಎಂಬ ಪವಿತ್ರ ಪ್ರಜಾತಿಯ ಗೋವನ್ನು ರಕ್ಷಿಸಲು ಕಠಿಣಾತಿಕಠಿಣ ಕಾನೂನುಗಳನ್ನು ರಚಿಸಿ, ಅದನ್ನು ಕಟ್ಟು ನಿಟ್ಟಾಗಿ ಅನುಷ್ಠಾನಿಸಬೇಕು. ಬಾಸ್ ಇಂಡಿಕಸ್ ಗೋವುಗಳು ಪಾಲಕರ ಪಾಲಿಗೆ ನಿರುಪಯುಕ್ತವಾದಾಗ ಸರಕಾರವೇ ಸೂಕ್ತ ಬೆಲೆ ಪಾವತಿಸಿ ಅವುಗಳನ್ನು ಪಾಲಕರಿಂದ ಖರೀದಿಸಿ ಅವು ಗಳಿಗೆ ಸೂಕ್ತ ಆಶ್ರಯ ಒದಗಿಸಬೇಕು. ಅದೇ ವೇಳೆ, ಪವಿತ್ರವಲ್ಲ ಎಂದು ಗೋರಕ್ಷಕರ ನಾಯಕರೇ ಪದೇ ಪದೇ ಹೇಳಿರುವ ‘ಬಾಸ್ ಟೌರಸ್’ ಪ್ರಜಾತಿಯ ಗೋವನ್ನು ಮತ್ತು ಎಮ್ಮೆ, ಕೋಣ ಇತ್ಯಾದಿ ಜಾನುವಾರುಗಳನ್ನು ಸಾಕಲು, ಮಾರಲು, ಅವುಗಳ ಮಾಂಸವನ್ನು ಮಾರುಕಟ್ಟೆಯಲ್ಲಿ ಲಭ್ಯಗೊಳಿಸಲು ಮುಕ್ತ ಅವಕಾಶ ಒದಗಿಸಬೇಕು.
3. ಇಂದು ಧಾರಾಳವಾಗಿ ಭಾರತದಿಂದ ವಿದೇಶಗಳಿಗೆ ರಫ್ತು ಮಾಡಲಾಗುತ್ತಿರುವ ‘ಬೀಫ್’ ಅನ್ನು, ಅಷ್ಟೇ ಧಾರಾಳವಾಗಿ ದೇಶದೊಳಗಿನ ಮಾರುಕಟ್ಟೆಗಳಲ್ಲಿ ಲಭ್ಯಗೊಳಿಸಬೇಕು. ಪ್ರಸ್ತುತ ‘ಬೀಫ್’ ಮಾರುಕಟ್ಟೆಯ ಅಭಿವೃದ್ಧಿ ಮತ್ತು ವಿಸ್ತರಣೆಗೆ ಸರಕಾರ ತನ್ನ ಕಡೆಯಿಂದ ಎಲ್ಲ ಬಗೆಯ ಸಹಾಯ, ಪ್ರೋತ್ಸಾಹವನ್ನು ಒದಗಿಸಬೇಕು.
4. ಇಂದು ಮಾರುಕಟ್ಟೆಯಲ್ಲಿ ಮಟನ್ ಮಾಂಸದ ಬೆಲೆ ಕಿಲೋಗೆ ರೂ. 700 ಇದ್ದರೆ, ಬೀಫ್ ಬೆಲೆ ಕೇವಲ ರೂ. 300ರಷ್ಟಿದೆ. ಅಗ್ಗ ಎಂಬ ಒಂದೇ ಕಾರಣಕ್ಕಾಗಿ ಬಡವರು ಸಹಜವಾಗಿಯೇ ಬೀಫ್‌ಗೆ ಪ್ರಾಶಸ್ತ್ಯ ನೀಡುತ್ತಾರೆ. ಸೂಕ್ತ ಬೆಳೆಗೆ ಲಭ್ಯವಾದರೆ ಮಟನ್ ಮಾಂಸವೇ ಅವರ ಮೊದಲ ಪ್ರಾಶಸ್ತ್ಯವಾಗಿರುತ್ತದೆ. ಸರಕಾರ ನಿಜಕ್ಕೂ ಬೀಫ್ ಬಳಕೆಯನ್ನು ನಿರುತ್ತೇಜಿಸಲು ಬಯಸಿದ್ದರೆ, ಮಟನ್ ಮಾಂಸಕ್ಕೆ ಸಬ್ಸಿಡಿ ನೀಡಿ, ಕುರಿ ಮತ್ತು ಆಡು ಸಾಕಣೆಯನ್ನು ಹೆಚ್ಚೆಚ್ಚು ಪ್ರೋತ್ಸಾಹಿಸಿ ಅದು ಜನರಿಗೆ ಕಡಿಮೆ ಬೆಲೆಗೆ ಸಿಗುವಂತೆ ಮಾಡಿದರೆ ಮತ್ತೆ ಯಾರಿಗೂ ಬೀಫ್ ಅನ್ನು ಹುಡುಕಿ ಹೋಗುವ ಅಗತ್ಯವೇ ಉಳಿಯಲಾರದು.
5. ಜನರು ಆಹಾರವಾಗಿ ಬಳಸಿದ ಮಾತ್ರಕ್ಕೆ ಯಾವುದೇ ಜೀವಿಯ ಸಂಖ್ಯೆ ಕಡಿಮೆ ಆಗುವುದಿಲ್ಲ. ಇಂದು ಜಗತ್ತಿನೆಲ್ಲೆಡೆ, ಮಟನ್ ಅಥವಾ ಬೀಫ್‌ಗಳಿಗೆ ಹೋಲಿಸಿದರೆ ನೂರಾರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಚಿಕನ್ ಮಾರಾಟವಾಗುತ್ತದೆ. ಆ ಕಾರಣದಿಂದ ಕೋಳಿಯು ಜಗತ್ತಿನಿಂದ ಕಣ್ಮರೆಯಾಗಿಲ್ಲ. ನಿಜವಾಗಿ ಅವುಗಳ ಸಂಖ್ಯೆ ಹೆಚ್ಚುತ್ತಲೇ ಹೋಗಿದೆ. ಒಂದು ವಸ್ತುವಿನ ಬಳಕೆ ಹೆಚ್ಚಿದಂತೆ ಅದರ ಲಭ್ಯತೆಯನ್ನು ಹೆಚ್ಚಿಸುವ ಏರ್ಪಾಡನ್ನೂ ಮಾಡಲಾಗುತ್ತದೆ. ಆದ್ದರಿಂದ ‘ಬಾಸ್ ಟೌರಸ್’ ಪ್ರಜಾತಿಯ ಗೋವನ್ನು ಮತ್ತು ಎಮ್ಮೆ, ಕೋಣ ಇತ್ಯಾದಿ ಜಾನುವಾರುಗಳನ್ನು ಆಹಾರವಾಗಿ ಬಳಸಲು ಬಿಟ್ಟರೆ ಅವುಗಳ ತಳಿ ನಾಶವಾಗುವ ಬದಲು ಹೆಚ್ಚೆಚ್ಚು ಅಭಿವೃದ್ಧಿಯಾಗುತ್ತಾ ಹೋಗುತ್ತದೆ.