ಕಷ್ಟದಲ್ಲೂ ಇಷ್ಟದಂತೆಯೇ ನಡೆದು ಬಂದ ಪತ್ರಿಕೆ
ಒಟ್ಟಾರೆಯಾಗಿ ಮಾಧ್ಯಮಗಳು ಕಷ್ಟ ಕಾಲದಲ್ಲಿವೆ ಎಂಬುದು ಒಂದು ಸಾರ್ವತ್ರಿಕ ಮಾತಿನಂತಿದೆ. ಸಾಮಾಜಿಕ ಮಾಧ್ಯಮಗಳು ಹೆಚ್ಚಳಗೊಂಡಿರುವುದೊಂದನ್ನೇ ಇದಕ್ಕೆ ಕಾರಣವನ್ನಾಗಿ ಸೂಚಿಸುವವರು ಹೆಚ್ಚಾಗಿದ್ದಾರೆ. ಇದೊಂದೇ ಕಾರಣವಿರಲಾರದೇನೋ. ಸುದ್ದಿ ಮಾಧ್ಯಮಗಳ ಸ್ವಭಾವದಲ್ಲಿ ಬಂದಿರುವ ಬದಲಾವಣೆ ಬಹುಶಃ ಅವುಗಳ ವಿಶ್ವಾಸಾರ್ಹತೆಯ ಬಗ್ಗೆ ಜನರಲ್ಲಿ ನಿರಾಸಕ್ತಿಯನ್ನು ಹುಟ್ಟುಹಾಕಿರಬಹುದೇ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ, ಕರ್ನಾಟಕ ಏಕೀಕರಣ ಹೋರಾಟದ ಕಾಲದಲ್ಲಿ, ದಲಿತ-ರೈತ ಚಳವಳಿಗಳ ಭರಾಟೆಯ ಕಾಲದಲ್ಲಿ ದೇವರಾಜ ಅರಸರ ಭೂ ಸುಧಾರಣೆ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಿದ ಕಾಲದಲ್ಲಿ ಸುದ್ದಿ ಮಾಧ್ಯಮಗಳ ನಿಲುವುಗಳಲ್ಲಿ ಪರ ವಿರೋಧ ಸಂಘರ್ಷ ಇರಲಿಲ್ಲ ಎಂದಲ್ಲ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಕೂಡ ಇಂತಹದೊಂದು ತಿಕ್ಕಾಟ ಹುಟ್ಟಿಕೊಂಡಿತ್ತು. ಆಗಲೂ ಸುದ್ದಿ ಮಾಧ್ಯಮಗಳ ಬಗ್ಗೆ ಜನರಲ್ಲಿ ನಿರಾಸಕ್ತಿ ಹುಟ್ಟಿರಲಿಲ್ಲ. ಬದಲಾಗಿ ಪರ ವಿರೋಧದ ನಿಲುವುಗಳ ಬಗ್ಗೆ ಜನ ಅತ್ಯಾಸಕ್ತಿಯಿಂದ ಚರ್ಚಿಸುತ್ತಿದ್ದರು, ವಿಮರ್ಶಿಸುತ್ತಿದ್ದರು, ತಮ್ಮ ತಮ್ಮ ಹಿತಾಸಕ್ತಿಗಳನುಸಾರ ಬೆಂಬಲ ವ್ಯಕ್ತಪಡಿಸುತ್ತಿದ್ದರು.
ಪ್ರಜಾಪ್ರಭುತ್ವದ ಸನ್ನಿವೇಶದಲ್ಲಿ ಇದೊಂದು ಸಹಜ ಪ್ರಕ್ರಿಯೆ ಮಾತ್ರವಲ್ಲ ಅಗತ್ಯವಾದ ಪ್ರಕ್ರಿಯೆ. ಭಿನ್ನ ಮತಗಳಿರುವುದೇ ಪ್ರಜಾಪ್ರಭುತ್ವದ ಸೊಗಸು. ಆ ಭಿನ್ನ ಮತಗಳಿಗೆ ವೇದಿಕೆಯನ್ನೊದಗಿಸಿ, ಆರೋಗ್ಯಕರ ಚರ್ಚೆ ಹುಟ್ಟು ಹಾಕುವುದೇ ಸುದ್ದಿ ಮಾಧ್ಯಮಗಳ ಮಹತ್ತರ ಜವಾಬ್ದಾರಿ. ಇದೆಲ್ಲಾ 20ನೇ ಶತಮಾನದ ಮಾತು.
21ನೇ ಶತಮಾನದ ಈ ಎರಡು ದಶಕಗಳಲ್ಲಿ ಸುದ್ದಿ ಮಾಧ್ಯಮಗಳ ಒಡೆತನದಲ್ಲಿ ಕಾರ್ಪೊರೇಟ್ ಹೌಸ್‌ಗಳ ಪಾಲುದಾರಿಕೆ ವಿಪರೀತಗೊಂಡಿತು.ಹಣಕಾಸು ಹೂಡುವುದಕ್ಕೆ ಸೀಮಿತಗೊಂಡಿದ್ದ, ಈ ಮೊದಲು ತಮಗಿದ್ದ ರಾಜಕೀಯ -ಸಾಮಾಜಿಕ ನಿಲುವುಗಳನ್ನು ತಕ್ಕ ಮಟ್ಟಿಗೆ ಒಳಗಿರಿಸಿಕೊಂಡು ವ್ಯವಹರಿಸುತ್ತಿದ್ದ ಮಾಲಕತ್ವ ಈ ಎರಡು ದಶಕಗಳಲ್ಲಿ ಬಹಿರಂಗವಾಗಿ ಪ್ರದಿಪಾದಿಸುವ ಹಂತಕ್ಕೆ ಬಂದಿತು. ಸುದ್ದಿ ಮಾಧ್ಯಮಗಳ ಮುಖ್ಯಸ್ಥರು ಹಾಗೂ ಸುದ್ದಿ ಸಂಪಾದಕರು, ವರದಿಗಾರರು ಮಾಲಕತ್ವದ ಈ ನಿಲುವುಗಳನ್ನು ಚಾಚು ತಪ್ಪದೆ ಪ್ರತಿಬಿಂಬಿಸಬೇಕಾದ ಒತ್ತಡಕ್ಕೊಳಗಾದರು. ಪ್ರತ್ರಕರ್ತರ ಸ್ವತಂತ್ರ ಮನಸ್ಥಿತಿ, ವಿಮರ್ಶಾತ್ಮಕ ದೃಷ್ಟಿಕೋನ, ವಸ್ತು ನಿಷ್ಠತೆ ಮುಂತಾದ ಗುಣಗಳೆಲ್ಲಾ ಅನಿವಾರ್ಯವಾಗಿ ಪರಿಷ್ಕರಣೆಗೊಂಡವು.
ಸುದ್ದಿ ಎನ್ನುವುದು ಏಕಪಕ್ಷೀಯ ವದಂತಿ ಎಂಬಂತಾಗಿದೆ. ವಿಶ್ಲೇಷಣೆ ಎನ್ನುವುದು ತಮ್ಮ ಮೂಗಿನ ನೇರಕ್ಕೆ ಮಂಡಿಸುವ ವಾದಸರಣಿ ಎಂಬಂತಾಗಿದೆ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಇರಬೇಕಾದ ಗೌರವ, ಸಭ್ಯತೆಗಳ ಕೊರತೆ ಸುದ್ದಿ ಪ್ರಕಟಣೆಯಲ್ಲಿ ಅಪರೂಪವಾಗುತ್ತದೆ. ಕಾರಣಗಳನ್ನು ಹುಡುಕುತ್ತಾ ಹೋಗಬೇಕಾಗಿಲ್ಲ. ಬಲಪಂಥೀಯ ರಾಜಕಾರಣ, ಸಾಮಾಜಿಕ, ಸಾಂಸ್ಕೃತಿಕ ಧೋರಣೆಗಳು ಸುದ್ದಿ ಮಾಧ್ಯಮಗಳನ್ನು ಹೆಬ್ಬಾವಿನಂತೆ ಸುತ್ತುವರಿದಿದೆ. ಸುಳುಗಳನ್ನು ಪ್ರಕಟಿಸುವುದಕ್ಕೆ ಇದ್ದ ಹಿಂಜರಿಕೆ ಕಣ್ಮರೆಯಾಗಿದೆಯೇನೋ ಅನಿಸುವಂತಿದೆ. ತಮಗೆ ಬೇಕಾದ ಪಕ್ಷವನ್ನು ಅಧಿಕಾರಕ್ಕೆ ತರಲು, ಅದಕ್ಕೆ ಪೂರಕವಾದ ನಿಲುವುಗಳನ್ನು ಪ್ರಚಾರ ಮಾಡಲು ಸುದ್ದಿ ಮಾಧ್ಯಮಗಳು ಟೊಂಕಕಟ್ಟಿ ನಿಂತಿರುವುದು ಇಂದಿನ ವಿದ್ಯಮಾನ. ಇಂತಹದೊಂದು ವಾತಾವರಣ ಮಾಧ್ಯಮಗಳಲ್ಲಿ ಬಂದ ಆರಂಭದಲ್ಲಿ ಓದುಗರು, ವೀಕ್ಷಕರು ಸ್ವಲ್ಪ ಮಟ್ಟಿಗೆ ಪ್ರಭಾವಿತರಾದರು. ಆದರೆ ಸತ್ಯಕ್ಕಿರುವ ಶಾಶ್ವತ ಶಕ್ತಿ ಸುಳ್ಳುಗಳಿಗಿರುವುದಿಲ್ಲ. ವಸ್ತು ನಿಷ್ಠತೆಗೆ ಇರುವ ಗೌರವ ಪಕ್ಷಪಾತಕ್ಕೆ ಸದಾ ಸಲ್ಲುವುದಿಲ್ಲ. ವಿದ್ಯುನ್ಮಾನ ಮಾಧ್ಯಮಗಳ ಚರ್ಚಾ ಗೋಷ್ಠಿಗೆ ಹೋಗಲು ಮೊದಲಲ್ಲಿ ಕೆಲವರು ಹಿಂಜರಿದರು. ಬರಬರುತ್ತಾ ಸೂಕ್ಷ್ಮ ಸಂವೇದನೆಯುಳ್ಳ ಬರಹಗಾರರು, ರಾಜಕೀಯ ವಿಶ್ಲೇಷಕರು, ಸಂಸ್ಕೃತಿ ಚಿಂತಕರು ದೊಡ್ಡ ಸಂಖ್ಯೆಯಲ್ಲಿ ಹಿಂಜರಿಯತೊಡಗಿದರು. ಬಲಪಂಥ ಅಥವಾ ಎಡಪಂಥ ಯಾವುದೇ ಇರಲಿ, ವಸ್ತುನಿಷ್ಠತೆ ಮತ್ತು ಸತ್ಯದ ವಿವಿಧ ಆಯಾಮಗಳ ಬಗೆಗಿನ ವಿಚಾರ ಮಂಥನ ಎನ್ನುವುದನ್ನು ನಾಗರಿಕ ಹೊಣೆಗಾರಿಕೆಯ ಮನಸ್ಥಿತಿಯುಳ್ಳ ಎಲ್ಲರೂ ಗೌರವಿಸಬೇಕು. ಅದಿಲ್ಲದಿದ್ದರೆ ಸಾರ್ವಜನಿಕವಾಗಿ ನಮ್ಮ ಮನಸ್ಸಿನ ವಿಚಾರಗಳನ್ನು, ವಿಕೃತ ಗ್ರಹಿಕೆಗಳನ್ನು ಕಾರಿಕೊಳ್ಳಲು ಹಿಂಜರಿಯುವಷ್ಟಾದರೂ ನಾಗರಿಕ ಪ್ರಜ್ಞೆ ಇರೆಬೇಕು. ಈ ನಾಗರಿಕ ಪ್ರಜ್ಞೆಗೂ ಅವಕಾಶವಿರದಷ್ಟು ಏಕಪಕ್ಷೀಯತೆಯನ್ನು ಬಹುಪಾಲು ಸುದ್ದಿ ಮಾಧ್ಯಮಗಳು ಅಳವಡಿಸಿಕೊಂಡವು. ಇದು ಕ್ರಮೇಣ ಓದುಗರ, ವೀಕ್ಷಕರ ನಿರಾಸಕ್ತಿಗೆ ಕಾರಣವಾಯಿತು.
ನ್ಯಾಯ ಪ್ರಜ್ಞೆಯೆನ್ನುವುದು ಈ ಕಾಲಘಟ್ಟದಲ್ಲಿ ದುಬಾರಿ ವಸ್ತು. ಅದನ್ನು ಕೆಲವಾದರೂ ಸುದ್ದಿ ಮಾಧ್ಯಮಗಳು ಕಷ್ಟಪಟ್ಟು ಕಾಪಾಡಿಕೊಳ್ಳುತ್ತಿವೆ ಎನ್ನುವುದು ಪ್ರಜಾಪ್ರಭುತ್ವಕ್ಕಿರುವ ಆಶಾಕಿರಣ. ‘ವಾರ್ತಾಭಾರತಿ’ ಅಂತಹ ಸುದ್ದಿ ಮಾಧ್ಯಮವಾಗಿರುವುದರಿಂದಲೇ ಅದು ನನ್ನ ಮೆಚ್ಚಿನ ಪತ್ರಿಕೆಗಳಲ್ಲಿ ಒಂದಾಗಿದೆ. ಕಳೆದ ಇಪ್ಪತ್ತೊಂದು ವರ್ಷಗಳಲ್ಲಿ ಅದು ಪಟ್ಟಿರುವ ಕಷ್ಟದ ಬಗ್ಗೆ ನನಗೆ ವೈಯಕ್ತಿಕವಾಗಿ ಅಲ್ಪ ಸ್ವಲ್ಪ ಗೊತ್ತಿದೆ. ಹಿಂದಿನ ಸಲದ ಬಿಜೆಪಿ ಸರಕಾರ ‘ವಾರ್ತಾಭಾರತಿ’ಗೆ ಜಾಹೀರಾತು ಕೊಡುವುದನ್ನು ವಿಶೇಷವಾಗಿ ತಡೆಹಿಡಿದಿತ್ತು. ಇದಕ್ಕೆ ನಿಯಮಾವಳಿಯ ಆಧಾರವೇನೂ ಇರಲಿಲ್ಲ. ರಾಜ್ಯಮಟ್ಟದ ಪತ್ರಿಕೆಗಳ ಪಟ್ಟಿಯಲ್ಲಿ ‘ವಾರ್ತಾಭಾರತಿ’ಯೂ ಸೇರಿತ್ತು. ರಾಜ್ಯಮಟ್ಟದ ಪತ್ರಿಕೆಗಳಿಗೆ ಸಿಗಬೇಕಾದ ಜಾಹೀರಾತು ಬೇರೆ ಪತ್ರಿಕೆಗಳಿಗೆ ಸಿಗುವ ಹಾಗೆ ‘ವಾರ್ತಾಭಾರತಿ’ಗೆ ಸಿಗದಿರುವಂತೆ ಅಗೋಚರ ನಿರ್ಬಂಧ ಚಾಲ್ತಿಯಲ್ಲಿತ್ತು. ಅದಕ್ಕೆ ಯಾರು ಕಾರಣರು ಎನ್ನುವುದನ್ನು ವ್ಯಕ್ತಿಗತವಾಗಿ ಮಾತ್ರ ಹುಡುಕಿದರೆ ಸಾಲುವುದಿಲ್ಲ. ಒಂದು ಸರಕಾರ, ಆ ಸರಕಾರದ ಕಾರ್ಯನಿರ್ವಹಣೆಯನ್ನು ನಿರ್ದೇಶಿಸಲು ಸೈದ್ಧಾಂತಿಕ ಕೇಂದ್ರಗಳು ಹಾಗೂ ಅಧಿಕಾರದಲ್ಲಿರುವವರ ಮರ್ಜಿಗಳು ಇವೆಲ್ಲವೂ ಕೂಡ ‘ವಾರ್ತಾಭಾರತಿ’ಯನ್ನು ವಿಂಗಡಿಸಲು ನೋಡಿದವು.
‘ವಾರ್ತಾಭಾರತಿ’ ತನ್ನ ಕಷ್ಟದ ಕಾಲದಲ್ಲಿ ನ್ಯಾಯ ಪ್ರಜ್ಞೆಯನ್ನು ಕಾಪಾಡಿಕೊಂಡಿತು. ಜನಪರ ಧೋರಣೆಯನ್ನು ಮುಂದುವರಿಸಿತು. ಈಗ ಎಲ್ಲ ಸುದ್ದಿ ಮಾಧ್ಯಮಗಳಿಗಿರುವ ಸಾಮಾನ್ಯ ಕಷ್ಟಗಳೇನೋ ‘ವಾರ್ತಾಭಾರತಿ’ಯನ್ನು ಬಿಟ್ಟಿಲ್ಲ. ಹಾಗಿದ್ದರೂ ಒಂದು ಪತ್ರಿಕೆಯನ್ನು ಜನರ ಮಾಧ್ಯಮವನ್ನಾಗಿ ಕಾಪಾಡಿಕೊಂಡು ಮುನ್ನಡೆಸಲು ಹಗಲಿರಳೂ ಶ್ರಮಿಸುತ್ತಿರುವ ‘ವಾರ್ತಾಭಾರತಿ’ ತಂಡಕ್ಕೆ, ಸಂಪಾದಕ ಮಂಡಳಿಗೆ, ಆಡಳಿತ ಮಂಡಳಿಗೆ ನನ್ನ ಶುಭ ಹಾರೈಕೆಗಳು ಸಲ್ಲುತ್ತವೆ.
ಹಿರಿಯ-ಕಿರಿಯ ಸಾಹಿತಿಗಳು, ಚಿಂತಕರು, ಕಾರ್ಯಕರ್ತರು, ಪರ್ತಕರ್ತರು ತಮ್ಮ ಅಭಿಪ್ರಾಯ ಹೇಳಲು ‘ವಾರ್ತಾಭಾರತಿ’ಯಲ್ಲಿ ಅಂಕಣ ಬರೆಯುತ್ತಿದ್ದಾರೆ. ‘ವಾರ್ತಾಭಾರತಿ’ ಕೂಡಾ ಅದಕ್ಕೆ ವೇದಿಕೆ ಒದಗಿಸಿ ಪ್ರಗತಿಪರ ನಿಲುವುಗಳಿಗೆ ಅದನ್ನು ಸದಾ ಮುಕ್ತವಾಗಿರಿಸಿಕೊಂಡಿದೆ. ಈಗಿರುವ ಕೆಲವೇ ಪತ್ರಿಕೆಗಳಲ್ಲಿ ಮಾತ್ರ ಕಾಣಬಹುದಾಗಿರುವ ಒಂದು ಆರೋಗ್ಯಪೂರ್ಣ ಮಾಧ್ಯಮ ಧೋರಣೆ ಹೊಂದಿರುವ ‘ವಾರ್ತಾಭಾರತಿ’ಗೆ ನನ್ನ ಅಭಿನಂದನೆಗಳನ್ನು ಹೇಳಬಯಸುತ್ತೇನೆ.