‘ಎಂಪಿರಿಕಲ್ ದತ್ತಾಂಶ’ ಇಲ್ಲದೆ ಒಳಮೀಸಲಾತಿ ಇಲ್ಲ

ಸುಮಾರು ಮೂರು ದಶಕಗಳ ‘ಒಳಮೀಸಲಾತಿ’ ಹೋರಾಟಕ್ಕೆ ಕಳೆದ ಆಗಸ್ಟ್ 1, 2024ರಂದು ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿತು. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಮಾಡುವ ಅಧಿಕಾರ ಸಾಂವಿಧಾನಿಕವಾಗಿ ಆಯಾ ರಾಜ್ಯ ಸರಕಾರಗಳಿಗೆ ಸೇರಿದ್ದು ಎಂದು ತೀರ್ಪು ನೀಡಿತು. ಈ ತೀರ್ಪಿನ ಬೆನ್ನಲ್ಲೇ ಹರ್ಯಾಣ, ತೆಲಂಗಾಣ ಹಾಗೂ ಕರ್ನಾಟಕ ಸರಕಾರಗಳು ಕ್ರಮಕೈಗೊಳ್ಳಲು ಮುಂದಾಗಿವೆ.
ಒಳಮೀಸಲಾತಿಯನ್ನು ಜಾರಿಗೊಳಿಸಲು ಎಂಪಿರಿಕಲ್ ದತ್ತಾಂಶವನ್ನೇ ಆಧಾರವಾಗಿಸಿಕೊಳ್ಳಲು ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದರಿಂದ ಈ ಪ್ರಾಯೋಗಿಕ ದತ್ತಾಂಶದ ಕುರಿತು ಒಳಮೀಸಲಾತಿ ಜಾರಿ ಸಮಿತಿಗಳು ಹೆಚ್ಚು ತಲೆ ಕೆಡಿಸಿಕೊಂಡಿವೆ. ಹರ್ಯಾಣದಲ್ಲಿ ಈ ಹಿಂದೆ 2011ರ ಜನಗಣತಿ ಆಧಾರದಲ್ಲಿ ತಯಾರಿಸಿದ್ದ ವರದಿಯ ಮೂಲಕ ಪರಿಶಿಷ್ಟ ಜಾತಿಗಳನ್ನು ಎರಡು ಭಾಗ ಮಾಡಿ ಸಮಾನ ಮೀಸಲಾತಿ ನೀಡಲಾಗಿದೆ. ಹಾಗಿದ್ದರೂ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದು, ರಾಜ್ಯ ಒದಗಿಸಿರುವ ಮಾಹಿತಿಯು ‘ಎಂಪಿರಿಕಲ್ ದತ್ತಾಂಶ’ದ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಹಾಗಾಗಿ ಆದೇಶ ರದ್ದಾಗುವ ಸಾಧ್ಯತೆಗಳೇ ಹೆಚ್ಚಿವೆ. ತೆಲಂಗಾಣದಲ್ಲಿ ಹೊಸದಾಗಿಯೇ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿರುವ ತೆಲಂಗಾಣ ಸರಕಾರ ಹೊಸ ಜಾತಿಗಣತಿಯನ್ನೇ ಮಾಡಿದೆ. ಜೊತೆಗೆ ಜಸ್ಟಿಸ್ ಶಮೀಮ್ ಅಖ್ತರ್ ಸಮಿತಿ ರಚಿಸಿ ವರದಿ ನೀಡಿದ್ದು, ತೆಲಂಗಾಣದ 59 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.9, ಮಾಲ ಸಂಬಂಧಿತ ಜಾತಿಗಳಿಗೆ ಶೇ.5 ಹಾಗೂ ಅಲೆಮಾರಿಗಳಿಗೆ ಶೇ.1 ರಷ್ಟು ಒಳಮೀಸಲಾತಿಯನ್ನು ಶಿಫಾರಸು ಮಾಡಿದೆ. ಈ ನಡುವೆ ತೆಲಂಗಾಣದ ವಿರೋಧ ಪಕ್ಷಗಳು ಈ ಜಾತಿಗಣತಿಯನ್ನು ವೈಜ್ಞಾನಿಕವಾಗಿ ನಡೆಸಿಲ್ಲವೆಂದು ತಕರಾರು ಎತ್ತಿದ್ದು, 2011ರ ಜನಗಣತಿಯಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ 54.08 ಲಕ್ಷವಿತ್ತು, 2014ರ ಸಮಗ್ರ ಕುಟುಂಬ ಸಮೀಕ್ಷೆಯಲ್ಲಿ 64.45 ಲಕ್ಷವಿತ್ತು. ಆದರೆ ಇತ್ತೀಚಿನ ಸರಕಾರದ ಸಮೀಕ್ಷೆಯಲ್ಲಿ 61.84 ಲಕ್ಷ ಜನಸಂಖ್ಯೆ ತೋರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ತಗಾದೆ ಎತ್ತಿವೆ. ಅಷ್ಟೇ ಅಲ್ಲದೆ, ಒಳಮೀಸಲಾತಿ ಹೋರಾಟಗಾರ ಮಂದಕೃಷ್ಟರವರು ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.11ರಷ್ಟು ಮೀಸಲಾತಿ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಗಳ ಸಂಖ್ಯೆ ಶೇ.17.43ರಷ್ಟಾಗಿದ್ದು, ಇಂದಿಗೂ ಶೇ.15ರಷ್ಟು ಮೀಸಲಾತಿ ನೀಡುತ್ತಿರುವುದು ಸಹ ಅಸಮಾಧಾನವನ್ನು ಹೆಚ್ಚುಗೊಳಿಸಿದೆ. ಹೀಗಾಗಿ ತೆಲಂಗಾಣದಲ್ಲಿ ಒಳಮೀಸಲಾತಿ ಜಾರಿಗೊಳಿಸುವುದು ಅಷ್ಟು ಸುಲಭದ ದಾರಿಯಾಗಿಲ್ಲ.
ಈ ಎರಡು ರಾಜ್ಯಗಳ ಬೆಳವಣಿಗೆಗಳ ಬೆಳಕಿನಲ್ಲಿ ಕರ್ನಾಟಕ ರಾಜ್ಯದ ಒಳಮೀಸಲಾತಿ ಜಾರಿಗಿರುವ ತೊಡಕುಗಳನ್ನು ನಿವಾರಿಸಿಕೊಂಡು ದಾರಿಗಳನ್ನು ಸುಗಮಗೊಳಿಸಿಕೊಳ್ಳಬೇಕಿದೆ. ಕರ್ನಾಟಕದ 101 ಪರಿಶಿಷ್ಟ ಜಾತಿಗಳ ಗಣತಿಯನ್ನು ಈ ಹಿಂದೆ ರಾಜ್ಯ ಪರಿಶಿಷ್ಟ ಆಯೋಗವು ಪ್ರತೀ ಹತ್ತು ವರ್ಷಗಳಿಗೆ ಒಮ್ಮೆ ನಡೆಸಿದೆಯೋ ಇಲ್ಲವೋ ಸರಿಯಾದ ಮಾಹಿತಿ ಇಲ್ಲ. ಬಹುಶಃ ಆ ಗಣತಿ ಆಗಿದ್ದರೂ ಒಳಜಾತಿಗಳ ಹೆಸರನ್ನು ನಮೂದಿಸಲಾಗಿದೆಯೇ ತಿಳಿದಿಲ್ಲ. ಜಸ್ಟಿಸ್ ಸದಾಶಿವ ಆಯೋಗದ ವರದಿಯನ್ನು ಕಳೆದ ಸರಕಾರ ತಿರಸ್ಕರಿಸಿರುವುದರಿಂದ ಅದರ ಮಾಹಿತಿಯು ಸಾರ್ವಜನಿಕ ಚರ್ಚೆಗೆ ಬಹಿರಂಗಪಡಿಸದೆ ಇರುವುದರಿಂದ ಅದರಲ್ಲಿನ ಅಂಕಿಅಂಶಗಳನ್ನು ‘ಎಂಪಿರಿಕಲ್ ದತ್ತಾಂಶ’ ಎಂದು ಪರಿಗಣಿಸಲು ಅದೆಷ್ಟು ಸಾಧ್ಯವಾಗುತ್ತದೆ ಎಂಬುದನ್ನು ಸ್ವತಃ ನ್ಯಾಯಾಲಯವೇ ಸ್ಪಷ್ಟನೆ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಆದಿಕರ್ನಾಟಕ ಮತ್ತು ಆದಿದ್ರಾವಿಡ ಎಂದು ನಮೂದಿಸಿರುವ ಹೊಲೆಮಾದಿಗರನ್ನು ಯಾವ ಗುಂಪಿನಲ್ಲಿ ಸೇರಿಸಬೇಕೆಂಬ ಗೊಂದಲ ಮುಂದುವರಿದಿದೆ. ಇದಕ್ಕೆ ಕಾಂತರಾಜು ಆಯೋಗದ ಜಾತಿಗಣತಿ ಸಮೀಕ್ಷೆಯು ಅದೆಷ್ಟರ ಮಟ್ಟಿಗೆ ಪರಿಹಾರ ನೀಡಬಲ್ಲದು ಎಂಬುದನ್ನು ತಿಳಿಯಬೇಕೆಂದುಕೊಂಡರೂ ಅದರ ವರದಿಯೂ ಬಹಿರಂಗಗೊಂಡಿಲ್ಲ. ಹೀಗೆ ಎತ್ತ ನೋಡಿದರೂ ಮತ್ತೆ 2011ರ ಜನಗಣತಿಯನ್ನೇ ಆಧರಿಸಿ ಒಳಮೀಸಲಾತಿ ಜಾರಿಗಾಗಿ ರಚಿಸಿರುವ ಜಸ್ಟಿಸ್ ನಾಗಮೋಹನ್ ದಾಸ್ ಸಮಿತಿಯು ತನ್ನ ಶಿಫಾರಸುಗಳನ್ನು ಮಾಡಲು ಹೊರಡುವ ಸಾಧ್ಯತೆಗಳೇ ಹೆಚ್ಚಿದೆ. ಹಾಗೇನಾದರೂ ಮಾಡಿದರೆ ಖಂಡಿತವಾಗಿಯೂ ಸುಪ್ರೀಂ ಕೋರ್ಟ್ ಹೇಳಿದಂತೆ ‘ಎಂಪಿರಿಕಲ್ ದತ್ತಾಂಶ’ ಒದಗಿಸಿದಂತಾಗದು. ಹಾಗಾಗಿ ಅದೇನೇ ಶಿಫಾರಸು ಮಾಡಿ ಸರಕಾರ ಆದೇಶ ಹೊರಡಿಸಿದರೂ ನ್ಯಾಯಾಲಯದಲ್ಲಿ ಒಳಮೀಸಲಾತಿ ಆದೇಶವನ್ನು ಪ್ರಶ್ನಿಸಲಾಗುತ್ತದೆ ಹಾಗೂ ಎಂಪಿರಿಕಲ್ ದತ್ತಾಂಶ ಕೊರತೆಯಿಂದಾಗಿ ಆದೇಶ ರದ್ದಾಗುತ್ತದೆ.
ಎಂಪಿರಿಕಲ್ ದತ್ತಾಂಶ ಎಂದರೇನು?
ಸುಪ್ರೀಂ ಕೋರ್ಟ್ ತನ್ನ ಆಗಸ್ಟ್ 1ರ ತೀರ್ಪಿನಲ್ಲಿ ‘ಎಂಪಿರಿಕಲ್ ದತ್ತಾಂಶ’ವನ್ನು ವ್ಯಾಖ್ಯಾನ ಮಾಡಿದೆ. ಪ್ಯಾರಾ 177 ಮತ್ತು 205 (ಎಫ್)(ಐ)ರಲ್ಲಿ ಸೂಚಿಸಿರುವ ಪ್ರಕಾರ ರಾಜ್ಯವು ‘ಒಟ್ಟು ಪರಿಶಿಷ್ಟ ಜಾತಿಗಳ ಗುಂಪಿನಿಂದ ಪ್ರತ್ಯೇಕಿಸಲ್ಪಟ್ಟ ಗುಂಪು/ಜಾತಿಯು ಹೆಚ್ಚು ಅನನುಕೂಲ ಮತ್ತು ಅಸಮರ್ಪಕವಾಗಿ ಪ್ರತಿನಿಧಿಸಲ್ಪಟ್ಟಿದೆ’ ಎಂಬುದನ್ನು ಹಾಗೂ ಮುಂದುವರಿದು, ‘ಆ ಜಾತಿಯ ಸಾಮಾಜಿಕ ಹಿಂದುಳಿದಿರುವಿಕೆಯಿಂದಾಗಿ ಪ್ರಾತಿನಿಧ್ಯವು ಅಸಮರ್ಪಕವಾಗಿದೆ ಎಂಬುದನ್ನು ಸಾಬೀತುಪಡಿಸಬೇಕು’ ಇದನ್ನು ಆಗುಮಾಡುವುದು ಹೇಗೆ ಎಂಬುದಕ್ಕೆ ಪ್ಯಾರಾ 205 (ಎಫ್)(ಐ)ರಲ್ಲಿ ರಾಜ್ಯವು ‘ರಾಜ್ಯದ ಸೇವೆಗಳಲ್ಲಿ’ ಅಸಮರ್ಪಕ ಪ್ರಾತಿನಿಧ್ಯ ಕೊರತೆಗೆ ಸಂಬಂಧಿಸಿದ ದತ್ತಾಂಶವನ್ನು ಸಂಗ್ರಹಿಸಬೇಕೆಂದು, ಪ್ಯಾರಾ 204ರಲ್ಲಿ ‘ರಾಜ್ಯದ ಸೇವೆಗಳಲ್ಲಿನ ಉಪ-ವರ್ಗಗಳ ಪ್ರಾತಿನಿಧ್ಯದ ಅಸಮರ್ಪಕತೆಗೆ ಸಂಬಂಧಿಸಿದಂತೆ ಪ್ರಮಾಣೀಕರಿಸಬಹುದಾದ ದತ್ತಾಂಶವನ್ನು ಸಂಗ್ರಹಿಸಬೇಕು’ ಹಾಗೂ ‘ಆ ವರ್ಗವನ್ನು ಸಮರ್ಪಕವಾಗಿ ಪ್ರತಿನಿಧಿಸಲಾಗಿದೆಯೇ ಎಂದು ನಿರ್ಧರಿಸುವಾಗ ರಾಜ್ಯವು ಪರಿಣಾಮಕಾರಿ ಮತ್ತು ಪರಿಮಣಾತ್ಮಕ ಪ್ರಾತಿನಿಧ್ಯದ ಆಧಾರದ ಮೇಲೆ ಸಮಗ್ರತೆಯನ್ನು ಲೆಕ್ಕ ಹಾಕಬೇಕು’ ಎಂದು ತಿಳಿಸಿದೆ. ಇಂದ್ರಾ ಸಹಾನಿ ಪ್ರಕರಣದ ತೀರ್ಪಿನಲ್ಲಿ ‘ಸಾಮಾಜಿಕ ಹಿಂದುಳಿದಿರುವಿಕೆ’ಯ ಮಾನದಂಡಗಳನ್ನು ಪತ್ತೆಹಚ್ಚಲು ಸಾಕ್ಷರತಾ ಪ್ರಮಾಣ, ಶೈಕ್ಷಣಿಕ ಸಾಧನೆ, ಆದಾಯ ಮಟ್ಟ, ಸಾಮಾಜಿಕ ಸ್ಥಾನ, ಕಸುಬು ಮತ್ತು ಭೌಗೋಳಿಕ ಸಾಂದ್ರತೆಯನ್ನು ಪರಿಗಣಿಸಲು ತಿಳಿಸಿತ್ತು ಎಂಬುದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.
ಮುಂದೇನು?
ಹಾಗಾಗಿ, ಜಸ್ಟಿಸ್ ನಾಗಮೋಹನ್ ದಾಸ್ ಮತ್ತು ರಾಜ್ಯ ಸರಕಾರದ ಮುಂದಿರುವ ಅತಿ ದೊಡ್ಡ ಸವಾಲು ಸುಪ್ರೀಂಕೋರ್ಟ್ ವಿಧಿಸಿರುವ ಎಂಪಿರಿಕಲ್ ದತ್ತಾಂಶವನ್ನು ಎಷ್ಟರ ಮಟ್ಟಿಗೆ ಸಂಗ್ರಹಿಸಿ ಒದಗಿಸಲಾಗುತ್ತದೆ ಎಂಬುದಾಗಿದೆ. ಸಮಿತಿ ತನ್ನ ವರದಿ ಏನೇ ನೀಡಿದರೂ ಖಂಡಿತವಾಗಿ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಾಗುತ್ತದೆ. ಅಲ್ಲಿ ದತ್ತಾಂಶ ವೈಜ್ಞಾನಿಕವಾಗಿದ್ದರೆ ಒಳಮೀಸಲಾತಿಯ ದಾರಿ ಸುಗಮವಾಗಲಿದೆ. ಆದ್ದರಿಂದ ಸಮಿತಿಯ ಮುಂದಿರುವುದು ಎರಡು ಆಯ್ಕೆಗಳು ಮಾತ್ರ. 1. ಸ್ಯಾಂಪಲ್ ಸರ್ವೇ ಮತ್ತು 2. ಸಮಗ್ರ ಸರ್ವೇ. ಯಾವುದೇ ಒಂದು ಜಾತಿಯು ಹಿಂದುಳಿದಿದೆ ಎಂಬುದನ್ನು ಪತ್ತೆ ಹಚ್ಚಲು ವೈಜ್ಞಾನಿಕವಾಗಿ ಸ್ಯಾಂಪಲ್ ಸರ್ವೇ ಮಾಡಬಹುದಾಗಿದೆ. ಇಲ್ಲವೇ ಪರಿಶಿಷ್ಟ ಜಾತಿಗಳ ಜನಗಣತಿ ನಡೆಸಬಹುದಾಗಿದೆ. ಈ ಎರಡೂ ಆಯ್ಕೆಗಳನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡುವುದರಿಂದ ಒಳಮೀಸಲಾತಿ ಜಾರಿಗೊಳಿಸುವ ದಾರಿ ಸುಗಮಗೊಳ್ಳುತ್ತದೆ. ಸಮಗ್ರ ಸರ್ವೇ ಮಾಡಿದರೆ ಅತ್ಯಂತ ಸೂಕ್ತವಾದ ನಿರ್ಧಾರವಾಗುತ್ತದೆ.
ಇದಲ್ಲದೆ, ಸರಕಾರಿ ದಾಖಲೆಗಳ ಆಧಾರದಲ್ಲಿ ಮಾಡುವ ಯಾವುದೇ ಅಂಕಿಅಂಶವು ಹಲವು ಅನುಮಾನಗಳಿಗೆ ಎಡೆಮಾಡಿಕೊಡಲಿದ್ದು, ಈಗಾಗಲೇ ದಲಿತ ಸಮುದಾಯದೊಳಗೆ ಮೂಡಿರುವ ಬಿರುಕನ್ನು
ಮತ್ತಷ್ಟು ಹೆಚ್ಚು ಮಾಡಬಲ್ಲದು ಎಂಬ ಆತಂಕ ಎದುರಾಗುತ್ತದೆ. ಹಾಗಾಗಿ ಕರ್ನಾಟಕ ರಾಜ್ಯ ಮತ್ತು ಸಮಿತಿಯು ಹಲವು ದಶಕಗಳ ಒಳಮೀಸಲಾತಿ ಬೇಡಿಕೆಯನ್ನು ಮತ್ತಷ್ಟು ಕಗ್ಗಂಟಾಗಿಸದೆ ಗಟ್ಟಿಯಾದ ತೀರ್ಮಾನ ತೆಗೆದುಕೊಳ್ಳಬೇಕಿದೆ.